ಬೆಟ್ಟಿಂಗ್ ದಂಧೆಯಲ್ಲಿ ಬೇಯುತ್ತಿರುವ ದೇಶ; ಅಮೃತಕಾಲ-ವಿಶ್ವಗುರು ಜಪಿಸುತ್ತಿರುವ ಬಿಜೆಪಿ

betting

   ಬೆಟ್ಟಿಂಗ್ ದಂಧೆಯಲ್ಲಿ ಬೇಯುತ್ತಿರುವ ದೇಶ;  ಅಮೃತಕಾಲ-ವಿಶ್ವಗುರು ಜಪಿಸುತ್ತಿರುವ ಬಿಜೆಪಿ

ಇದು ಒಬ್ಬ ಹುಡುಗನ, ಒಂದು ಬಡ ಸಂಸಾರದ ಕತೆಯಲ್ಲ; ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ಮನೆ-ಮಠವನ್ನು ಕಳೆದುಕೊಂಡವರ ವ್ಯಥೆ. ಕೋರ್ಟು ಕಚೇರಿ ಅಲೆಯುತ್ತಿರುವವರದು ಅಂದಾಜಿಗೂ ಸಿಗದ ಸ್ಥಿತಿ. ಬೆಟ್ಟಿಂಗ್ ದಂಧೆಯಲ್ಲಿ ಬಡವರಷ್ಟೇ ಅಲ್ಲ, ಮಧ್ಯಮವರ್ಗ, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರೂ ಇದ್ದಾರೆ. ಇವರೊಂದಿಗೆ ಆನ್‌ಲೈನ್ ಬುಕ್ಕಿಗಳು, ಮ್ಯಾಚ್ ಫಿಕ್ಸರ್‍‌ಗಳು, ಮಾಫಿಯಾ ಡಾನ್‌ಗಳೂ ಇದ್ದಾರೆ. ಇವರೆಲ್ಲರಿಗೂ ಐಪಿಎಲ್ ಹಬ್ಬದಂತೆ ಕಾಣುತ್ತದೆ.

 

ವರ್ತಮಾನ

ಬಸವರಾಜು ಮೇಗಲಕೇರಿ

 

ಪೊಲೀಸ್ ಠಾಣೆ ಮುಂದೆ ವಯಸ್ಸಾದ ದಂಪತಿಗಳು ಭಯ, ಆತಂಕದ ಮಡುವಿನಲ್ಲಿ ಕೂತಿದ್ದರು. 18 ವರ್ಷದ ಮಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ಬಡವರು, ಅನಕ್ಷರಸ್ಥರಾದ್ದರಿಂದ ಇವರಿಗೆ ಕಾಯ್ದೆ ಕಾನೂನುಗಳು ಗೊತ್ತಿಲ್ಲ. ಪೊಲೀಸರು ಕೂಡ ಹೇಳುವುದಿಲ್ಲ. ಒಳಗೆ ಹೋಗಲು ಧೈರ್ಯವಿಲ್ಲ. ಠಾಣೆಯ ಕಾಂಪೌಂಡ್ ಪಕ್ಕ ಕೂತು ಅಳುತ್ತಿದ್ದಾರೆ. ಕೊನೆಗೆ ಪೇದೆ ಬಂದು, `20 ಸಾವ್ರಕ್ಕೆ ಸಾಹೇಬ್ರಿಗೊಪ್ಸಿದೀನಿ, ರೆಡಿ ಮಾಡ್ಕಂಡ್ ಬನ್ನಿ’ ಎಂದಿದ್ದಾರೆ.

20 ಸಾವಿರ ಎಂದಾಕ್ಷಣ, ಬಡದಂಪತಿಗಳ ಕಿವಿಗೆ ಕಾದ ಸೀಸ ಬಿದ್ದಂತಾಗಿದೆ. ಆ ಮೊತ್ತ ಅವರಿರುವ ಸ್ಥಿತಿಗೆ, ಎರಡು ತಿಂಗಳು ದುಡಿದರೂ ದಕ್ಕುವುದಿಲ್ಲ. ಕೊನೆಗೆ ಅವರಿವರಿಂದ ಕಾಡಿಬೇಡಿ ಸಾಲ ಮಾಡಿ 8 ಸಾವಿರ ತಂದು ಕೊಟ್ಟು ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಎಸ್ಸೆಸ್ಸೆಲ್ಸಿ ಫೇಲಾಗಿ, ಮುಂದಕ್ಕೆ ಓದದೆ, ಯಾವುದೋ ಬ್ಯಾಟರಿ ರೀಚಾರ್‍ಜ್ ಅಂಗಡಿಯಲ್ಲಿ ಕೆಲಸಕ್ಕಿರುವ ಹುಡುಗನಿಗೆ 12 ಸಾವಿರ ಸಂಬಳ ಸಿಗುತ್ತದೆ. ಅಲ್ಲಿನ ವಾತಾವರಣವೋ, ವಯಸ್ಸಿನ ಸಹಜ ವಾಂಛಲ್ಯವೋ ಬೆಟ್ಟಿಂಗ್ ಚಟ ಅಂಟಿಕೊಂಡಿದೆ. ಬೆಳಗ್ಗಿನಿಂದ ಮೈ ಮುರಿದು ದುಡಿದು, ಸಂಜೆ ಐಪಿಎಲ್ ಕ್ರಿಕೆಟ್ ಪಂದ್ಯ ಶುರುವಾಗುತ್ತಿದ್ದಂತೆ ಹುಡುಗ ಬೆಟ್ಟಿಂಗ್ ಕಟ್ಟಲು ಕೂರುತ್ತಾನೆ. ಪ್ರತಿ ಬಾಲಿಗೆ, ಓವರ್‍‌ಗೆ, ಪಂದ್ಯಕ್ಕೆ ಹಣ ಕಟ್ಟುತ್ತಾರೆ. ಬೌಂಡರಿ ಬಾರಿಸಿದರೆ 10ಕ್ಕೆ 20. ಸಿಕ್ಸರ್ ಬಾರಿಸಿದರೆ 10ಕ್ಕೆ 40. ಒಬ್ಬೊಬ್ಬರದು ಒಂದೊಂದು ರೇಂಜ್. ಅದು ತನ್ನ ದುಡಿಮೆಯನ್ನು ತಿನ್ನುತ್ತದೆ, ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸುತ್ತದೆ, ಪೋಷಕರು ತಲೆ ಎತ್ತಿ ತಿರುಗದಂತೆ ಮಾಡುತ್ತದೆ, ಬದುಕು ಅಸ್ತವ್ಯಸ್ತವಾಗುತ್ತದೆ, ಸಂಸಾರ ಧೂಳೀಪಟವಾಗುತ್ತದೆ ಎಂಬುದು ಈ ಎಳೆ ವಯಸ್ಸಿನ ಹುಡುಗರಿಗೆ ಅರ್ಥವಾಗುವುದು ಹೇಗೆ?

ಇದು ಒಬ್ಬ ಹುಡುಗನ, ಒಂದು ಬಡ ಸಂಸಾರದ ಕತೆಯಲ್ಲ; ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ಮನೆ-ಮಠವನ್ನು ಕಳೆದುಕೊಂಡವರ ವ್ಯಥೆ. ಕೋರ್ಟು ಕಚೇರಿ ಅಲೆಯುತ್ತಿರುವವರದು ಅಂದಾಜಿಗೂ ಸಿಗದ ಸ್ಥಿತಿ. ಬೆಟ್ಟಿಂಗ್ ದಂಧೆಯಲ್ಲಿ ಬಡವರಷ್ಟೇ ಅಲ್ಲ, ಮಧ್ಯಮವರ್ಗ, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರೂ ಇದ್ದಾರೆ. ಇವರೊಂದಿಗೆ ಆನ್‌ಲೈನ್ ಬುಕ್ಕಿಗಳು, ಮ್ಯಾಚ್ ಫಿಕ್ಸರ್‍‌ಗಳು, ಮಾಫಿಯಾ ಡಾನ್‌ಗಳೂ ಇದ್ದಾರೆ. ಇವರೆಲ್ಲರಿಗೂ ಐಪಿಎಲ್ ಹಬ್ಬದಂತೆ ಕಾಣುತ್ತದೆ.

ಈ ಬಾರಿಯ ಚುಟುಕು ಕ್ರಿಕೆಟ್ ಪಂದ್ಯಗಳತ್ತ ನೋಡುವುದಾದರೆ, ಒಂದು ತಿಂಗಳ ಕಾಲ ನಡೆಯುವ ಈ ಐಪಿಎಲ್‌ನಲ್ಲಿ 10 ಟೀಮ್‌ಗಳು, 200 ಆಟಗಾರರು ಭಾಗವಹಿಸುತ್ತಿದ್ದು, ದೇಶದಾದ್ಯಂತ 74 ಮ್ಯಾಚ್‌ಗಳು ನಡೆಯಲಿವೆ. ಎರಡು ಟೀಮ್‌ಗಳ ನಡುವೆ ನಡೆಯುವ ಒಂದು ಪಂದ್ಯದ ಸುತ್ತ 3,500 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆಂದು ಅಂದಾಜಿಸಲಾಗಿದೆ. ಒಂದು ಪಂದ್ಯಕ್ಕೆ 3,500 ಕೋಟಿಯಾದರೆ, 74 ಪಂದ್ಯಗಳ ಒಟ್ಟು ಮೊತ್ತ- 25,90,000 ಕೋಟಿ ರೂಪಾಯಿಗಳು. ಇದು ಬಿಸಿಸಿಐ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ನಮೂದಿಸಿರುವ ಅಂಕಿ-ಅಂಶ.

ರನ್ ಹೊಳೆ ಹರಿಸುವ, ವಿಕೆಟ್ ಬೇಟೆಯಾಡುವ, ಕ್ಷಣಕ್ಷಣಕ್ಕೂ ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್, ಅಭಿಮಾನಿಗಳಿಗೆ ಥ್ರಿಲ್ ಕೊಡುವ ಆಟ. ಮನರಂಜನೆ ನೀಡುವ ಆಟ. ಹಾಗೆಯೇ ಕ್ರಿಕೆಟ್ ಆಟಗಾರರಿಗೆ, ಸಿನಿಮಾ ನಟ-ನಟಿಯರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಸುದ್ದಿ ಮಾಧ್ಯಮಗಳಿಗೆ, ಉದ್ಯಮಿಗಳಿಗೆ, ಸ್ಟೇಡಿಯಂ ಮಾಲೀಕರಿಗೆ ಹಣ ತರುವ ಆಟ. ಇನ್ನು ಈ ಐಪಿಎಲ್ ಕ್ರಿಕೆಟ್ ನಡೆಸುವ ಬಿಸಿಸಿಐ (Board of Control for Cricket in India) ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ.

ಒಂದು ಕಾಲಕ್ಕೆ ಇಂಗ್ಲಿಷರ ಜಂಟಲ್‌ಮನ್ಸ್ ಪ್ಲೇ ಎನಿಸಿಕೊಂಡಿದ್ದ ಕ್ರಿಕೆಟ್, ಲಲಿತ್ ಮೋದಿ ಕಾಲಕ್ಕೆ ಕಳಂಕ ಮೆತ್ತಿಕೊಂಡಿತ್ತು. ವ್ಯವಹಾರಸ್ಥನ ಕೈಗೆ ಸಿಕ್ಕು ಉದ್ಯಮವಾಗಿತ್ತು. ಅದರಲ್ಲೂ ಲಲಿತ್ ಮೋದಿ ಹುಟ್ಟುಹಾಕಿದ ಟ್ವೆಂಟಿ-20 ಎಂಬ ಹೊಸಬಗೆಯ ಹೊಡಿ-ಬಡಿ ಕ್ರಿಕೆಟ್- ಕ್ರಿಕೆಟ್ ಎಂಬ ಕಲೆಗೆ ಕೊಳೆ ಮೆತ್ತಿಸಿತು. ಚುಟುಕು ಕ್ರಿಕೆಟ್ ಮುಂದೆ ಐದು ದಿನದ ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಪಂದ್ಯಗಳೇ ಕಳೆಗುಂದತೊಡಗಿದವು. ತಾಳ್ಮೆ-ಸಹನೆಯ ಆಟಕ್ಕೆ ವೇಗ ಮತ್ತು ಉತ್ಕರ್ಷ ಒದಗಿ, ಆಟಗಾರರು ರನ್ ಹೊಳೆ ಹರಿಸುವ ಯಂತ್ರಗಳಾದರು. ಹರಾಜು ಮೂಲಕ ಆಟಗಾರರು ಕೋಟಿಗಳ ಲೆಕ್ಕದಲ್ಲಿ ಬಿಕರಿಯಾದರು. ಬಡ ಭಾರತ ದೇಶದ ಪೋಷಕರ ಕಣ್ಣಿಗೆ ಮನೆಯ ಮಗ ಸಚಿನ್-ಧೋನಿ-ಪಾಂಡ್ಯನಂತೆ ಕಾಣತೊಡಗಿದರು. ಕ್ರಿಕೆಟ್ ತರಬೇತಿ ಕ್ಲಬ್‌ಗಳು, ಕ್ರಿಕೆಟ್ ಸಂಬಂಧಿ ವಸ್ತುಗಳ ಉತ್ಪಾದನೆ, ಅದರ ಸುತ್ತಲಿನ ಜಾಹೀರಾತು, ಮಾರುಕಟ್ಟೆ ವೃದ್ಧಿಸತೊಡಗಿತು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಹೋದ ಐಪಿಎಲ್, ಇಂದು ಬೃಹತ್ ಉದ್ಯಮವಾಗಿ ಇಡೀ ವಿಶ್ವವೇ ಭಾರತದತ್ತ ನೋಡುವಂತಾಗಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಪ್ಪಟ ಮನರಂಜನೆ ನೀಡುವ ಆಟ; ಅದೇ ಆಟದ ಮೇಲೆ ಹಣ ಕಟ್ಟುವವರಿಗೆ ಜೂಜಾಟ. ಸಣ್ಣದಾಗಿ ಶುರುವಾದ ಜೂಜಾಟ ಈಗ ಕೋಟ್ಯಂತರ ರೂಪಾಯಿಗಳ ಕೈ ಬದಲಾಗುವ ದಂಧೆಯಾಗಿ ಮಾರ್ಪಾಡಾಗಿದೆ. ಗಲ್ಲಿಯ ರೌಡಿಗಳಿಂದ ಹಿಡಿದು ಮಾಫಿಯಾ ಡಾನ್‌ಗಳವರೆಗೆ; ಪೇದೆಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ; ದಿನಗೂಲಿ ಕಾರ್ಮಿಕನಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ; ಪುಢಾರಿಯಿಂದ ರಾಜಕೀಯ ನಾಯಕರವರೆಗೆ ವಿಸ್ತರಣೆಯಾಗಿದೆ. ಏಕೆಂದರೆ ಇದರಲ್ಲಿ ಅಪಾರ ಹಣದ ಹರಿವಿದೆ.

ಇದಲ್ಲದೆ, ಬುಕ್ಕಿಗಳು ನಡೆಸುವ ಮ್ಯಾಚ್ ಫಿಕ್ಸಿಂಗ್, ಪ್ರತಿ ಪಂದ್ಯಕ್ಕೆ, ಪ್ರತಿ ಬಾಲಿಗೆ ವಿಶ್ವದಾದ್ಯಂತ ನಡೆಯುವ ಬೆಟ್ಟಿಂಗ್ ದಂಧೆಯ ಅಂದಾಜು ಹಣ ನಮ್ಮ ಊಹೆಗೂ ನಿಲುಕದ್ದು. ದುರದೃಷ್ಟಕರ ಸಂಗತಿ ಎಂದರೆ, ಈ ಕೋಟ್ಯಂತರ ರೂಪಾಯಿಗಳ ಜೂಜಾಟದ ಜಾಲದಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು, ದಿನಗೂಲಿ ಕಾರ್ಮಿಕರು, ನಗರಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಜೂಜಾಟ ಮೊದಲು ನಗರ, ಪಟ್ಟಣಗಳಲ್ಲಿ ಮಾತ್ರವಿತ್ತು. ಈಗ ಪ್ರತಿಯೊಬ್ಬನ ಕೈಯಲ್ಲಿ ಮೊಬೈಲ್ ಇದ್ದು, ಹಳ್ಳಿಗಳಿಗೂ ಹಬ್ಬಿದೆ. ಪ್ರತಿ ಬಾರಿಯ ಐಪಿಎಲ್‌ನಲ್ಲೂ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ಅವ್ಯಾಹತವಾಗಿ ನಡೆಯುತ್ತದೆ. ಹಾಗೆಯೇ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತವೆ.

ಇನ್ನು ಬುಕ್ಕಿಗಳು, ದೂರದ ದೇಶಗಳಲ್ಲಿ ಕುಳಿತು ಆನ್‌ಲೈನ್ ಮೂಲಕವೇ ದಂಧೆ ನಡೆಸುವವರ ಕತೆ ಇನ್ನೊಂದು ಬಗೆಯದು. ಕಳೆದ ವರ್ಷ ಮುಂಬೈ ಪೊಲೀಸರ ಆಂಟಿ ಎಕ್ಸ್‌ಟಾರ್ಶನ್ ಸೆಲ್ (AEC) ಅಂತಾರಾಜ್ಯ ಇಂಟರ್ನೆಟ್ ಬೆಟ್ಟಿಂಗ್ ಜಾಲವನ್ನು ಭೇದಿಸಿತ್ತು. ಆಗ ಐವರು ಬುಕ್ಕಿಗಳ ಬಂಧನ ಹಾಗೂ 18 ಆನ್‌ಲೈನ್ ಬೆಟ್ಟಿಂಗ್ ಆ್ಯಪ್ಗಳ ಮಾಹಿತಿ ಸಿಕ್ಕಿತ್ತು. ಆ ಮಾಹಿತಿಯ ಪ್ರಕಾರ, ಬೆಟ್ಟಿಂಗ್ ದರಗಳನ್ನು ಪಾಕಿಸ್ತಾನದಿಂದ ದುಬೈಗೆ, ನಂತರ ಭಾರತಕ್ಕೆ ಮತ್ತು ಇತರ ಮಾರುಕಟ್ಟೆಗಳಿಗೆ ರವಾನೆ ಮಾಡಲಾಗುತ್ತದೆ. ಕ್ರಿಕೆಟ್ ಬೆಟ್ಟಿಂಗ್ ಸಿಂಡಿಕೇಟಿನ ಸದಸ್ಯರ ಸೂಚನೆ ಮೇರೆಗೆ ಈ ಎಲ್ಲವೂ ನಡೆಯುತ್ತದೆ ಎಂಬುದು ಸುದ್ದಿಯಾಗಿತ್ತು. ಬೆಟ್ ಭಾಯ್ ಬುಕ್, ಬೆಟ್ ಎಕ್ಸ್ಚೇಂಜ್, ಮ್ಯಾಟ್ರಿಕ್ಸ್, ಡೈಮಂಡ್ ಮತ್ತು ಬೆಟ್ 999, ಡೆಫಾ ಬೆಟ್ ಸೇರಿದಂತೆ ಕೆಲವು ಪ್ರಸಿದ್ಧ ಮೊಬೈಲ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಬೆಟ್ಟಿಂಗ್ ದಂಧೆ ಸರಾಗವಾಗಿ ನಡೆಯುತ್ತಿದ್ದು, ಹಲವು ವೆಬ್‌ಸೈಟ್‌ಗಳಲ್ಲೂ ಇದು ಚಾಲ್ತಿಯಲ್ಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿತ್ತು.

ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲಿಯೂ ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿದ್ದ ಕೆಲವರನ್ನು ಬಂಧಿಸಿದ್ದರು. ಅದರಲ್ಲಿ ಉನ್ನತ ಅಧಿಕಾರಿಗಳ ಮಕ್ಕಳು, ರಾಜಕೀಯ ನಾಯಕರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವೇ ದಿನಗಳಲ್ಲಿ ಆ ಕೇಸನ್ನು ಮುಚ್ಚಿಹಾಕಲಾಯಿತು. ಸಿಸಿಬಿ ಡಿಸಿಪಿಯನ್ನು ವರ್ಗಾವಣೆಯ ಶಿಕ್ಷೆಗೊಳಪಡಿಸಿ, ದೂರದ ಊರಿಗೆ ವರ್ಗಾಯಿಸಲಾಯಿತು. ಆ ಹಿರಿಯ ಅಧಿಕಾರಿ ಈಗಲೂ ಬೆಂಗಳೂರಿನತ್ತ ಸುಳಿಯಲಾಗಿಲ್ಲ. ಇನ್ನು 2019ರಲ್ಲಿ, ಬುಕ್ಕಿಗಳಾದ ನಟರಾಜ, ಷಫಿಗಳನ್ನು ಬಂಧಿಸಿದಾಗ, ಅವರು ಉನ್ನತ ಪೊಲೀಸ್ ಅಧಿಕಾರಿಯ ಹೆಸರು ಹೇಳಿದ್ದರು. ಅವರ ಬಾಸ್‌ನಂತಿದ್ದ ಬುಕ್ಕಿ ಉದಯ್ ಗೌಡ ತಲೆಮರೆಸಿಕೊಂಡು ಶ್ರೀಲಂಕಾಕ್ಕೆ ಓಡಿಹೋಗಿದ್ದನ್ನು ಸ್ವತಃ ಕುಮಾರಸ್ವಾಮಿಯವರೇ ಬಹಿರಂಗಪಡಿಸಿದ್ದರು. ಈಗ ಈ ಉದಯ್ ಗೌಡ ಕಾಂಗ್ರೆಸ್ ಸೇರಿ, ಮದ್ದೂರಿನ ಅಭ್ಯರ್ಥಿಯಾಗಲಿದ್ದಾರೆ.

ಬೆಟ್ಟಿಂಗ್ ದಂಧೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರೂ, ದೇಶದ ಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೂ, ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಅಮೃತಕಾಲ ಮತ್ತು ವಿಶ್ವಗುರುವಿನ ಜಪ ಮಾಡುತ್ತಿದೆ. ಹಾಗಾಗಿ ಬಡ ಹುಡುಗರ ಜೇಬು ಖಾಲಿಯಾಗಿ, ಅವರ ಪೋಷಕರು ಪೊಲೀಸ್ ಠಾಣೆಗಳ ಮುಂದೆ ಕೂತು ಅಳುವುದು ಮಾತ್ರ ಇಲ್ಲಿ ನಿತ್ಯ ನಿರಂತರ.

(ಕೃಪೆ: ಈದಿನ.ಕಾಮ್ )