99% ಲೋಕಲ್

ಕುಚ್ಚಂಗಿ ಪ್ರಸನ್ನ
ತುಮಕೂರು ಯೂನಿವರ್ಸಿಟಿಯ ಕನ್ನಡ ವಿಭಾಗದ ಇಬ್ಬರು ಸಹ ಪ್ರಾಧ್ಯಾಪಕರು ಮುಂಬಡ್ತಿಗಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬ ಸುದ್ದಿ ತಿರುತಿರುಗಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಈ ವರದಿ ಮೊದಲಿಗೆ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ನಂತರ ಅತ್ಯಂತ ವಿಶ್ವಸಾರ್ಹ ಎಂಬ ಟ್ಯಾಗ್ ಲೈನ್ ಹೊಂದಿರುವ ರಾಜ್ಯ ಪತ್ರಿಕೆಯಲ್ಲಿ ನಂತರ ಮತ್ತೊಂದು ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಸುದ್ದಿ ಆಧರಿಸಿ ಮೊದಲು ಇದೇ ವಿವಿಯಲ್ಲಿ ಐದು ವರ್ಷ ಉಪನ್ಯಾಸಕನಾಗಿದ್ದು ಇದೀಗ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಗೆಳೆಯರೊಬ್ಬರು ಫೇಸ್ ಬುಕ್ ನಲ್ಲಿ ತಮ್ಮ ನೋವನ್ನು ತುಸು ಉದ್ದಕ್ಕೇ ತೋಡಿಕೊಂಡಿದ್ದಾರೆ.
ಇಡೀ ಇಂಡಿಯಾದ ರಾಜಕಾರಣವನ್ನೇ ಹೊರಳು ದಿಕ್ಕಿಗೆ ತಂದು ನಿಲ್ಲಿಸಿದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ಕಡೆ ಹೆಚ್ಚು ಗಮನ ಕೊಟ್ಟಿದ್ದ ಹಾಗೂ ಆ ಕುರಿತು ಏನನ್ನಾದರೂ ಬರೆಯಬೇಕೆಂದುಕೊಂಡಿದ್ದ ನನಗೆ ಚುನಾವಣೆಗಳ ಕಡೆಗೇ ಎಲ್ಲರ ಆದ್ಯತೆ ಇರುವಾಗ ನಮ್ಮೂರಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಂಗತಿಗಳ ಕುರಿತು ಬರೆಯುವುದೇ ಸರಿ ಅಂತ ಅನ್ನಿಸಿತು.
ತುಮಕೂರು ವಿಶ್ವವಿದ್ಯಾನಿಲಯ 2004ರಲ್ಲಿ ಸ್ಥಾಪನೆಯಾಗಿದ್ದು, 2010ರಲ್ಲಿ ಬಿಹೆಚ್ ರಸ್ತೆಯ ಕ್ಯಾಂಪಸ್‌ನಲ್ಲಿದ್ದ ಸರ್ಕಾರಿ ವಿಜ್ಞಾನ ಹಾಗೂ ಕಲಾ ಕಾಲೇಜುಗಳನ್ನು ತನ್ನ ವ್ಯಾಪ್ತಿಗೆ ತಂದುಕೊಂಡು, ಅಲ್ಲಿಂದ ಹೊರಹೋಗದೇ ಉಳಿದ 17 ಉಪನ್ಯಾಸಕರನ್ನೂ ಸೇರಿಸಿ, ಹೊಸ ನೇಮಕಾತಿಗಳನ್ನು ಮಾಡಿಕೊಂಡಿದೆ. ಸ್ವಾಯತ್ತ ಸಂಸ್ಥೆಯೂ ಆಗಿರುವ ತುಮಕೂರು ವಿವಿಯು ಒಟ್ಟಾರೆ ವಿವಿಗಳ ಮೌಲ್ಯಾಂಕನ ಪಟ್ಟಿಯಲ್ಲಿ ತ್ರೀ ಸ್ಟಾರ್ ಶ್ರೇಣಿಯನ್ನು ಪಡೆದಿದೆ ಮತ್ತು ನ್ಯಾಕ್ ಈ ವಿವಿಗೆ ಬಿ+ ಶ್ರೇಣಿಯನ್ನೂ ನೀಡಿದೆ, ಯುಜಿಸಿ ಕೂಡಾ ಉತ್ತಮ ವಿವಿ ಅಂತ ಗುರುತಿಸಿದೆ ಅಂತಲೂ ಎಂದು ವಿವಿ ತನ್ನ ವೆಬ್ ಸೈಟ್‌ನಲ್ಲಿ ಹೇಳಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯಗಳಲ್ಲಿನ ಹದಿನೇಳು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗಗಳು ಹಾಗೂ ವಿವಿ ಜೊತೆ ಸಂಯೋಜನೆ ಪಡೆದ ಎಂಬತ್ತಾರಕ್ಕೂ ಹೆಚ್ಚಿನ ಕಾಲೇಜುಗಳು ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿವೆ.
ಇಂತಾ ತುಮಕೂರು ವಿವಿಯಲ್ಲಿ ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಎಂಬ ಕನ್ನಡ ವಿಭಾಗವಿದೆ. ಈ ವಿಭಾಗದಲ್ಲಿ ಪಾಠ ಪ್ರವಚನ ಮಾಡಲೆಂದು ಐವರು ಪ್ರಾಧ್ಯಾಪಕರಿದ್ದಾರೆ, ಇವರಲ್ಲಿ ಮೂವರು ಮಾತ್ರವೇ ಇಲ್ಲಿ ಪೂರ್ಣಾವಧಿ, ಇನ್ನಿಬ್ಬರು ಇಲ್ಲಿ ಮತ್ತು ಅಲ್ಲಿ ಅಂದರೆ ವಿವಿ ಪದವಿ ಕಾಲೇಜು ಘಟಕಗಳಲ್ಲೂ ಪಾಠ ಮಾಡಬೇಕು. ಪೂರ್ಣಾವಧಿ ಅಧ್ಯಾಪಕರಲ್ಲಿ ಪ್ರೊ. ಅಣ್ಣಮ್ಮ ಹಾಲಿ ವಿಭಾಗ ಮುಖ್ಯಸ್ಥರಾಗಿದ್ದಾರೆ. ಹೆಡ್ ಆಫ್ ದಿ ಡಿಪಾರ್ಟ್ಮೆಂಟ್ ಎಂದು ಕರೆಯಲಾಗುವ ಈ ಹುದ್ದೆಗೆ ಸರದಿ ಮೇಲೆ ಬದಲಾಗುತ್ತಾರೆ. ಅಣ್ಣಮ್ಮ ಅವರ ಜೊತೆಗೆ ಡಾ.ನಿತ್ಯಾನಂದ ಶೆಟ್ಟಿ ಎಂಬ ಪ್ರೊಫೆಸರ್ , ಪಿ.ಎಂ.ಗಂಗಾಧರಯ್ಯ ಎಂಬ ಅಸೋಸಿಯೇಟ್ ಪ್ರೊಫೆಸರ್ ಇದ್ದಾರೆ.
ಪ್ರೊಫೆಸರ್ ಅಣ್ಣಮ್ಮ ಮತ್ತು ಅಸೋಸಿಯೇಟ್ ಪ್ರೊಫೆಸರ್ ಗಂಗಾಧರಯ್ಯನವರು ಕ್ರಮವಾಗಿ ಸೀನಿಯರ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗೆ ಮುಂಬಡ್ತಿ ಮುಂಬಡ್ತಿ ಪಡೆಯಲು ವಿವಿಧ ವೆಬ್ ಮತ್ತು ಮುದ್ರಿತ ಜರ್ನಲ್ ಗಳಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದ್ದಾರೆ. ಇವರ ಮನವಿಯಲ್ಲಿ 2024ರ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ಕೇಂದ್ರ ಸಾಹಿತ್ಯ ಅಕಾಡೆಮಿಯ ದ್ವೈಮಾಸಿಕ ಸಾಹಿತ್ಯ ಮ್ಯಾಗಜೀನ್ ಕೂಡಾ ಸೇರಿರುತ್ತದೆ. ಮುಂಬಡ್ತಿ ಪಡೆಯಲು ಕನಿಷ್ಟ 10 ಸಂಶೋಧನಾ ಪ್ರಬಂಧಗಳು ಪ್ರಕಟವಾಗಿರುವುದು ಕಡ್ಡಾಯ, ಆದರೆ ಇವರಿಬ್ಬರೂ ತಲಾ 20 ಪ್ರಕಟಿತ ಪ್ರಬಂಧಗಳನ್ನು ಸಲ್ಲಿಸಿರುತ್ತಾರೆ.
ಇಂಥ ಸಂಶೋಧನಾ ಲೇಖನಗಳನ್ನು ಒಳಗೊಂಡ ದ್ವೈಮಾಸಿಕ ನಿಯತಕಾಲಿಕೆ ಒಂದನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ನಿಯಮಿತವಾಗಿ ಪ್ರಕಟಿಸುತ್ತ ಬಂದಿದೆ. ಈ ಇಬ್ಬರು ಸಲ್ಲಿಸಿರುವ ಪ್ರಬಂಧಗಳು ನಿಮ್ಮ ನಿಯತಕಾಲಿಕೆಯ ಈ ಸಂಚಿಕೆಯಲ್ಲಿ ಪ್ರಕಟವಾಗಿರುವುದು ನಿಜವೇ ಎಂದು ಮುಂಬಡ್ತಿ ಅರ್ಜಿಗಳನ್ನು ಪರಿಶೀಲಿಸುವ ಗುಣಮಟ್ಟ ಪರಿಶೀಲನಾ ಸಮಿತಿಯಲ್ಲಿದ್ದ ಅದೇ ಕನ್ನಡ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಪ್ರೊಫೆಸರ್ ಪ್ರಕಾಶಕರನ್ನು ಲಿಖಿತವಾಗಿ ಕೋರುತ್ತಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರುತ್ತರದಲ್ಲಿ , “ ಈ ಪ್ರಬಂಧಗಳನ್ನು ಉಲ್ಲೇಖಿತ ಸಂಚಿಕೆಯಲ್ಲಿ ನಾವು ಪ್ರಕಟಿಸಿಲ್ಲ” ಅಂತ ಸ್ಪಷ್ಟ ಪಡಿಸುತ್ತದೆ. ಈ ಅಂಶವನ್ನು ಆಧರಿಸಿ 15.11.2025ರಂದು ವಿವಿ ಪಿ.ಎಂ.ಗಂಗಾಧರಯ್ಯ ಹಾಗೂ ಅಣ್ಣಮ್ಮ ಅವರಿಗೆ ನೋಟೀಸ್ ನೀಡುತ್ತದೆ. ಇವರ ಮುಂಬಡ್ತಿ ಅರ್ಜಿಯನ್ನು ಪರಿಶೀಲಿಸಲೆಂದು ಬಂದಿದ್ದ ಕುಪ್ಪಂ ವಿವಿಯ ಪ್ರಾಧ್ಯಾಪಕರೊಬ್ಬರು, ನೈಜ ಪ್ರಬಂಧಗಳನ್ನು ಮಾತ್ರ ಮಂಡಿಸಿ ಎಂದು ಸೂಚನೆ ನೀಡಿದ ಬಳಿಕ ಗಂಗಾಧರಯ್ಯ ಹಾಗೂ ಅಣ್ಣಮ್ಮನವರು ತಾವು ಸಲ್ಲಿಸಿದ್ದ ಮುಂಬಡ್ತಿ ಅರ್ಜಿ ವಾಪಸ್ ಪಡೆದು, 10 ಅರ್ಹ ಪ್ರಕಟಿತ ಪ್ರಬಂಧಗಳನ್ನು ಲಗತ್ತಿಸಿ ಹೊಸದಾಗಿ ಅರ್ಜಿ ಸಲ್ಲಿಸುತ್ತಾರೆ. ಸದರಿ ಅರ್ಜಿಯನ್ನು ಮಾನ್ಯ ಮಾಡಿದ ವಿವಿ ಅದರಂತೆ ವೈವಾ ನಡೆಸಲು ಮುಂದಾಗುತ್ತದೆ.

ಇಲ್ಲಿಯವರೆಗೂ ವಿವಿ ಆಂತರಿಕ ಆಡಳಿತ ವಿಚಾರವಾಗೇ ಉಳಿದಿದ್ದ ಈ ವಿವಾದವು ವೈವಾ ದಿನಾಂಕ ನಿಗದಿಯಾಗಿಬಿಟ್ಟರೆ ಎಲ್ಲಿ ಅಣ್ಣಮ್ಮ ಸೀನಿಯರ್ ಪ್ರೊಫೆಸರ್ ಹಾಗೂ ಗಂಗಾಧರಯ್ಯ ಪ್ರೊಫೆಸರ್ ಹುದ್ದೆಗೆ ಮುಂಬಡ್ತಿ ಹೊಂದಿ ಬಿಡುತ್ತಾರೋ ಎಂಬ ಆತಂಕ ಸೃಷ್ಟಿಯಾಗಿಬಿಡುತ್ತದೆ ಕನ್ನಡ ವಿಭಾಗದಲ್ಲಿ. ಪರಿಣಾಮ ಏಪ್ರಿಲ್ 21ರಂದು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ "“ತುಮಕೂರ್ ವಾರ್ಸಿಟಿ ಪ್ರೊಫ್ಸ್ʼ ಶಾರ್ಟ್ ಕಟ್ ಟು ಪ್ರಮೋಶನ್ ಎಕ್ಸ್ಪೋಸ್ಡ್ “ ಎಂಬ ಹೆಡ್ಡಿಂಗ್‌ನಡಿ ಪ್ರಕಟವಾಗುವ ಮೂಲಕ ಜಗಜ್ಜಾಹೀರಾಗುತ್ತದೆ. ಈ ವರದಿ ಪ್ರಕಟವಾದ ನಂತರ ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಯೊಂದರಲ್ಲೂ ಇದೇ ಎಳೆಯಡಿ ವರದಿ ಪ್ರಕಟವಾಗುತ್ತದೆ. ನಂತರ ಮೇ 4ರಂದು ಮತ್ತೊಂದು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯಲ್ಲಿ “ ಟು ತುಮಕೂರ್ ಯೂನಿವರ್ಸಿಟಿ ಫ್ಯಾಕಲ್ಟಿ ಮೆಂಬರ್ಸ್ ಕಾಟ್ ಸಬ್‌ಮಿಟ್ಟಿಂಗ್ ಫೇಕ್ ಡಾಕ್ಯುಮೆಂಟ್ಸ್ ಫಾರ್ ಪ್ರಮೋಶನ್ “ ಎಂಬ ಹೆಡ್ಡಿಂಗ್‌ನಡಿ ಹೆಚ್ಚೂ ಕಮ್ಮಿ ಅದೇ ವಿಚಾರ ಪ್ರಕಟವಾಗಿದೆ.
ಈ ಸಂಗತಿ ಪದೇ ಪದೇ ಪತ್ರಿಕೆಗಳಲ್ಲಿ ತನಿಖಾ ವರದಿಗಳ ರೀತಿಯಲ್ಲಿ ಪ್ರಕಟವಾಗುತ್ತಿರುವುದು ತಮ್ಮನ್ನು ಟಾರ್ಗೆಟ್ ಮಾಡಿ, ಸಾರ್ವತ್ರಿಕವಾಗಿ ತಮ್ಮ ಮರ್ಯಾದೆ ಕಳೆಯುವ ಸಲುವಾಗಿಯೇ ಎಂದು ಅಣ್ಣಮ್ಮ ಹಾಗೂ ಗಂಗಾಧರಯ್ಯನವರು ಭಾವಿಸಿ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಮೊರೆ ಹೋಗಿದ್ದಾರೆ , ಅಲ್ಲದೇ ಹೈ ಕೋರ್ಟಿನಲ್ಲೂ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ತಾವು ಮಾತ್ರವಲ್ಲ ತಮ್ಮಂತೆ ಇತರ ವಿಭಾಗಗಳಲ್ಲೂ 51 ಅಧ್ಯಾಪಕರು ಮುಂಬಡ್ತಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿಗಳನ್ನೂ ಪರಿಶೀಲಿಸಿಲ್ಲವೇಕೆ , ತಮ್ಮನ್ನು ಮಾತ್ರವೇ ಗುರಿ ಮಾಡಿ ಮುಜುಗರವನ್ನುಂಟು ಮಾಡಲಾಗುತ್ತಿದೆಯೇಕೆ ಎಂಬುದು ಇವರ ವಾದವಾಗಿದೆ.
ವಿಸಿ ಪ್ರೊ. ವೆಂಕಟೇಶ್ವರಲು ಅವರು ಮೇಲ್ಕಂಡ ಪತ್ರಿಕೆಗಳ ವರದಿಗಾರರಿಗೆ ಈ ವಿಚಾರವಾಗಿ ಪ್ರತಿಕ್ರಿಯಿಸಿ, “ ಪ್ರೊ. ಅಣ್ಣಮ್ಮ ಹಾಗೂ ಪಿ.ಎಂ.ಗಂಗಾಧರಯ್ಯ ಅವರು ತಪ್ಪು ಮಾಡಿರುವುದು ಸಾಬೀತಾಗಿದೆ, ಇವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ “ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಮಧ್ಯೆ ಮೇ 5ರ ಮಂಗಳವಾರ ವಿವಿಯ ಸಿಂಡಿಕೇಟ್ ಸದಸ್ಯರ ಸಭೆ ನಡೆದು, ಆ ಸಭೆಯಲ್ಲಿ ಪ್ರೊ. ಅಣ್ಣಮ್ಮ ಹಾಗೂ ಅ. ಪ್ರೊ. ಗಂಗಾಧರಯ್ಯ ಅವರ ವಿರುದ್ದ ಕ್ರಮ ಜರುಗಿಸಲು ಮೂವರು ಸದಸ್ಯರ ಕಮಿಟಿಯೊಂದನ್ನು ರಚಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಹಾಗೂ ಕಮಿಟಿಯೂ ರಚನೆಯಾಗಿದೆ. ಇಡೀ ಪ್ರಕರಣ ವಿವಿಯ ಆಂತರಿಕ ವಿಚಾರವಾಗಿದ್ದು ತಪ್ಪಿತಸ್ಥರ ವಿರುದ್ದ ನಿಯಮಾನುಸಾರ ಕ್ರಮ ಜರುಗಿಸುವ ಅಧಿಕಾರ ವಿವಿಗೆ ಇದ್ದಲ್ಲಿ ಅದು ಅಂಥ ವಿಧಾನ ಅನುಸರಿಸಿ ದಂಡನೆ ವಿಧಿಸಲು ಅಡ್ಡಿಯೇನಿಲ್ಲ. ಮಾಡಿಕೊಳ್ಳಲಿ.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯೇನೆಂದರೆ, ಅಣ್ಣಮ್ಮ ಮತ್ತು ಗಂಗಾಧರಯ್ಯನವರು ಮುಂಬಡ್ತಿ ಅರ್ಜಿಯೊಂದಿಗೆ ಸಲ್ಲಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ರ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ದ್ವೈಮಾಸಿಕ ಸಾಹಿತ್ಯ ನಿಯತಕಾಲಿಕವು ಇಡಿಯಾಗಿ ನಕಲಿ ಎಂಬುದು.
ಅಣ್ಣಮ್ಮ ಹಾಗೂ ಗಂಗಾಧರಯ್ಯ ಅವರು ಸಹಲೇಖಕರಾಗಿ ಅವರ ಸಂಶೋಧನಾ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ಹೆಸರಲ್ಲಿ ಪ್ರಕಟವಾಗಿರುವ ಪ್ರಬಂಧಗಳನ್ನು ಒಳಗೊಂಡ ಮುದ್ರಿತ ನಿಯತಕಾಲಿಕೆಯೇ ನಕಲಿ ಎಂಬ ಸಂಗತಿಯನ್ನು ನಾವಿಲ್ಲಿ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅದು ಹೇಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಂಥ ಸಾಂವಿಧಾನಿಕ ಸಂಸ್ಥೆಯೊಂದರ ಅಧಿಕೃತ ನಿಯತಕಾಲಿಕೆಯೊಂದನ್ನು ಒಂದನ್ನು ಯಾರೋ ಅದರ ರಕ್ಷಾ ಪುಟದ ಸಹಿತ ಫೋರ್ಜರಿ ಮಾಡಿ ನಕಲಿ ಲೇಖನಗಳನ್ನು ಮುದ್ರಿಸಿ ವಿವಿಗಳ ಪ್ರೊಫೆಸರ್‌ಗಳಿಗೆ ಒದಗಿಸುತ್ತಿದ್ದಾರೆ , ವಿವಿಗಳು ಇಂಥಾ ನಕಲಿ ಜರ್ನಲ್ ಗಳನ್ನು ಒಪ್ಪಿ ಡಾಕ್ಟರೇಟ್ ಗಳನ್ನೂ ನೀಡುತ್ತಿವೆ. ಇಂಥದ್ದೊಂದು ದೊಡ್ಡ ಜಾಲವೇ ತುಮಕೂರು ವಿವಿಯೂ ಸೇರಿ ರಾಜ್ಯದ ಮತ್ತು ದೇಶದ ಎಲ್ಲ ವಿವಿಗಳ ನಡುವೆ ಚಾಲ್ತಿಯಲ್ಲಿದೆ ಎನ್ನುವುದು ನಿಜಕ್ಕೂ ಆತಂಕಕಾರಿ ಸಂಗತಿ.
ಅಣ್ಣಮ್ಮ ಮತ್ತು ಗಂಗಾಧರಯ್ಯ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬ ಮಟ್ಟಿಗೆ ಮಾತ್ರವೇ ತನಿಖಾ ವರದಿಯನ್ನು ಪ್ರಕಟಿಸಿರುವ ರಾಷ್ಟ್ರೀಯ ಇಂಗ್ಲಿಷ್ ದೈನಿಕದ ವರದಿಗಾರರಿಗೆ ಈ ನಕಲಿ ಅಥವಾ ಪೋರ್ಜರಿ ನಿಯತಕಾಲಿಕೆ ಮುದ್ರಿಸುವ ಜಾಲದ ಕಡೆ ಗಮನ ಹರಿಯದೇ ಇರುವುದು ವಿಷಾದ. ತುಮಕೂರು ವಿವಿಯ ಕನ್ನಡ ವಿಭಾಗದಲ್ಲಿರುವ ಕುಖ್ಯಾತ ಪಟ್ಟಭದ್ರನ ನಚ್ಚನೆ ʼಕಿವಿ ಮಾತುʼಗಳನ್ನು ಮಾತ್ರವೇ ಆಲಿಸಿ, ಅದನ್ನು ತನಿಖಾ ವರದಿಯ ರೀತಿ ಬರೆಯಬೇಕಾಗಿ ಬಂದಿದ್ದರಿಂದ ಹೀಗಾಗಿದೆ ಎನ್ನಬಹುದೇ ಗೊತ್ತಿಲ್ಲ. ಪತ್ರಿಕೆಗಳಿಗೆ ಈ ಪ್ರಕರಣದಲ್ಲಿ ಶಿಸ್ತಾಗಿ ಪ್ರತಿಕ್ರಿಯೆ ನೀಡುತ್ತಿರುವ ಇನ್ನು 70 ದಿನಗಳಲ್ಲಿ 3 ವರ್ಷಗಳ ಅವಧಿ ಪೂರೈಸಿ ಗಂಟು ಮೂಟೆ ಕಟ್ಟಬೇಕಿರುವ ವಿಸಿಯಾದರೂ ಗಮನಿಸಬೇಕಿತ್ತಲ್ವಾ, ಏಡು ಕೊಂಡಲವಾಡಾ ನೀನಿದ್ದರೆ, ನೀನೇ ಕಾಪಾಡಪ್ಪಾ ತುಮಕೂರು ವಿವಿಯನ್ನು.
*****************************
ನಕಲಿ ಮ್ಯಾಗಜೀನ್ ಜಾಲದ ಲಿಂಕ್
ಪ್ರಬಂಧಕ್ಕೆ ರೂ.4000ದಿಂದ 6000
*******************************
ತಮ್ಮ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ 2024ರ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ದ್ವೈಮಾಸಿಕ ಸಾಹಿತ್ಯ ನಿಯತಕಾಲಿಕವು ನಕಲಿ ಎಂದು ಅರಿವಾದ ಕೂಡಲೇ ಗಂಗಾಧರಯ್ಯನವರ ಸಂಶೋಧನಾ ವಿದ್ಯಾರ್ಥಿ ಪೊಲೀಸರಿಗೆ ದೂರು ಸಲ್ಲಿಸಿದ್ದು ತನಿಖೆ ಫಲಕೊಟ್ಟಿಲ್ಲ. ಇವರ ಬರಹಗಳನ್ನು ಪ್ರಕಟಿಸಿಕೊಡುವುದಾಗಿ ತಿಪಟೂರಿನ ಕಾಲೇಜೊಂದರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಮೈಸೂರು ಮೂಲದ ಶ್ರೀನಿವಾಸ್ ಇವರಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಪ್ರಬಂಧವೊಂದಕ್ಕೆ ವಿಷಯ ಆಧರಿಸಿ ಕನಿಷ್ಟ 4000ದಿಂದ 6000 ಸಾವಿರದವರೆಗೆ ಈತ ಹಣ ಪಡೆದಿರುವುದು ಖಚಿತವಾಗಿದೆ. ವಾರಾಂತ್ಯದಲ್ಲಿ ತಿಪಟೂರಿನಿಂದ ಮೈಸೂರಿಗೆ ಪ್ರಯಣಿಸುತ್ತಿದ್ದ ಶ್ರೀನಿವಾಸ್ ಅವರನ್ನು ʼಬೆವರ ಹನಿʼ ಪ್ರಾದೇಶಿಕ ದಿನಪತ್ರಿಕೆಯ ಪರವಾಗಿ ಮಾತನಾಡಿಸಿದಾಗ, ಅವರಿಗೆ ಒಂದೂವರೆ ಎರಡು ವರ್ಷದ ಹಿಂದೆ ಮೈಸೂರಿನಲ್ಲಿ ವೆಬ್ ಲಿಂಕ್ ಮುಖಾಂತರ ಪರಿಚಯವಾಗಿರುವ ತಮಿಳುನಾಡು ಮೂಲದ ವೆಳ್ಳಂಗಿರಿ ಎಂಬ ಅಧ್ಯಾಪಕರೊಬ್ಬರು ಹೀಗೆ ಎಲ್ಲ ಬಗೆಯ ಸಂಶೋಧನಾ ಪ್ರಬಂಧಗಳನ್ನು ವೆಬ್ ಹಾಗೂ ಪ್ರಿಂಟ್ ಮ್ಯಾಗಜೀನ್‌ಗಳಲ್ಲಿ ಪ್ರಕಟಿಸಿಕೊಡುವುದಾಗಿ ತಿಳಿದು ಬಂದಿದ್ದು, ಶ್ರೀನಿವಾಸ್ ಅವರ ಪ್ರಬಂಧಗಳನ್ನು ಈ ವೆಳ್ಳಂಗಿರಿ ಮೊದಲಿಗೆ ಪ್ರಿಂಟ್ ಹಾಕಿಸಿಕೊಟ್ಟಿದ್ದರಂತೆ, ಅವರು ಪ್ರಕಟಿಸಿಕೊಟ್ಟ ಶ್ರೀನಿವಾಸ್ ಅವರ ಎಲ್ಲ ಪ್ರಬಂಧಗಳು ಮೈಸೂರು ವಿವಿಯಲ್ಲಿ ಅಂಗೀಕೃತಗೊಂಡಿವೆಯಂತೆ. ಶ್ರೀನಿವಾಸ್ ಮೂಲಕ ಈ ಲಿಂಕ್ ತುಮಕೂರು ವಿವಿಗೂ ಹರಡಿ, ಅಣ್ಣಮ್ಮ ಹಾಗೂ ಗಂಗಾಧರಯ್ಯ ಅವರು ಸಹಲೇಖಕರಾಗಿರುವ ಸಂಶೋಧನಾ ಪ್ರಬಂಧಗಳೂ ಪ್ರಕಟಗೊಂಡಿರುವುದಂತೆ. ಶ್ರೀನಿವಾಸ್ ಒದಗಿಸಿದ ಈ ವೆಳ್ಳಂಗಿರಿ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಲಾಯಿತಾದರೂ ಆ ಕಡೆಯಿಂದ ಯಾರೂ ಕರೆಯನ್ನು ಸ್ವೀಕರಿಸಲಿಲ್ಲ. ಹೀಗಾಗಿ, ಜರ್ನಲ್‌ಗಳನ್ನು ಪ್ರಕಟಿಸಿಕೊಡುವ ದೊಡ್ಡದೊಂದು ಜಾಲವೇ ಇರುವುದಾಗಿ ಈ ಪ್ರಕರಣದಿಂದ ತಿಳಿದು ಬರುತ್ತಿದ್ದು ಸಂಬಂಧಿಸಿದ ಇಲಾಖೆ ಕೂಡಲೇ ತನಿಖೆ ಮಾಡಿ ಸತ್ಯಾಂಶವನ್ನು ಹೊರತರಬೇಕಿದೆ.
