ಹೇಳಲೇ ಬೇಕಿದ್ದ ಮಾತುಗಳು.., ಅಗ್ರಹಾರ ಕೃಷ್ಣಮೂರ್ತಿಯವರ ಸಂತಸ  ಮತ್ತು ಆಂಬ್ರೋಸ್‌ರ ಮೌನ ಪ್ರತಿಭಟನೆ

ಹೇಳಲೇ ಬೇಕಿದ್ದ ಮಾತುಗಳು.., ಅಗ್ರಹಾರ ಕೃಷ್ಣಮೂರ್ತಿಯವರ ಸಂತಸ  ಮತ್ತು ಆಂಬ್ರೋಸ್‌ರ ಮೌನ ಪ್ರತಿಭಟನೆ

ಹೇಳಲೇ ಬೇಕಿದ್ದ ಮಾತುಗಳು.., ಅಗ್ರಹಾರ ಕೃಷ್ಣಮೂರ್ತಿಯವರ ಸಂತಸ  ಮತ್ತು ಆಂಬ್ರೋಸ್‌ರ ಮೌನ ಪ್ರತಿಭಟನೆ

ಹೇಳಲೇ ಬೇಕಿದ್ದ ಮಾತುಗಳು..,
ಅಗ್ರಹಾರ ಕೃಷ್ಣಮೂರ್ತಿಯವರ ಸಂತಸ 
ಮತ್ತು ಆಂಬ್ರೋಸ್‌ರ ಮೌನ ಪ್ರತಿಭಟನೆ


ನಮ್ಮ ‘ ಬೆವರ ಹನಿ’ ಪ್ರಕಾಶನದಿಂದ ನಾನು ಮತ್ತು ಎಂ.ಹೆಚ್.ನಾಗರಾಜು ಸೇರಿ ಪ್ರಕಟಿಸಿರುವ ಶಿವಾಜಿ ಗಣೇಶನ್ ಅವರ ‘ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕವನ್ನು ಜನವರಿ ಎರಡರಂದು ಭಾನುವಾರ ನಗರದ ಕನ್ನಡ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಕುರಿತು ನಮ್ಮ ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದವರೇ ಆದ ಅಗ್ರಹಾರ ಕೃಷ್ಣಮೂರ್ತಿ ಆಗಮಿಸಿ ಮಾತನಾಡಿದರು. ಸಮಾರಂಭದ ನಂತರ ಒಂದೂವರೆ ಗಂಟೆಯ ಆಪ್ತ ಮಾತುಕತೆಯಲ್ಲಿ ಕೃಷ್ಣಮೂರ್ತಿಯವರು ತಮ್ಮೊಳಗೆ ಲಾವಾರಸದಂತೆ ಕುದಿದು ಆವಿಯಾಗುತ್ತಿರುವ ನೋವಿನ ಸಂಗತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. 


ಅಗ್ರಹಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಹತ್ತಾರು ವರ್ಷ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿ ವರ್ಷಗಳೇ ಕಳೆದರೂ ಅವರಿಗೆ ನಿವೃತ್ತಿ ಸೌಲಭ್ಯಗಳು ದಕ್ಕಿಲ್ಲ. ಜೊತೆಗೆ ಅವರು ಕರ್ತವ್ಯದ ಮೇಲಿದ್ದಾಗಲೇ ಅವರ ವಿರುದ್ದ ಸುಳ್ಳು ಆಪಾದನೆಗಳ ಮೇಲೆ ಸಿಬಿಐ ದಾಳಿ, ತನಿಖೆ ಇತ್ಯಾದಿ ಮಾಡಿ ಅನಿರ್ವಚನೀಯ ಮುಜುಗರ ಮತ್ತು ಹಿಂಸೆ ಕೊಟ್ಟಿದ್ದೂ ಅಲ್ಲದೇ ವಿಶ್ರಾಂತ ಜೀವನವನ್ನೂ ನೆಮ್ಮದಿಯಾಗಿ ಕಳೆಯಲು ಬಿಟ್ಟಿರಲಿಲ್ಲ. ಅಕ್ರಮ, ಅವ್ಯವಹಾರ, ಲಂಚಕೋರತನದ ಆಪಾದನೆಗಳನ್ನು ಅಗ್ರಹಾರ ಅವರ ವಿರುದ್ಧ ಸಾಬೀತು ಮಾಡಲು ಆಗುವುದಿಲ್ಲ ಅಂತ ಅರ್ಥವಾದ ಮೇಲೆ ಜಾತಿ ನಿಂದನೆಯAಥ ಗಂಭೀರ ಆಪಾದನೆ ಮಾಡಿ ಕೇಸು ದಾಖಲಿಸಲಾಯಿತು. ತಮಾಶೆ ಎಂದರೆ, ವರ್ಷಗಟ್ಟಲೆ ತನಿಖೆ, ವಿಚಾರಣೆ ಎಲ್ಲ ಆದ ಮೇಲೆ ಬೆಳಕಿಗೆ ಬಂದ ಸಂಗತಿ ಏನೆಂದರೆ ಅಗ್ರಹಾರ ಕೃಷ್ಣಮೂರ್ತಿ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದ ಅವರ ಸಹೊದ್ಯೋಗಿ ಮಹಿಳೆ ಅಸ್ಪೃಶ್ಯ ಜಾತಿಗೆ ಸೇರಿದವರೇ ಆಗಿರಲಿಲ್ಲ, ಬದಲಿಗೆ ಅಗ್ರಹಾರ ಅವರ ವಿರುದ್ಧ ಬದುಕಿರುವಷ್ಟು ದಿನವೂ ಕತ್ತಿ ಮಸೆದ ಜ್ಞಾನಿಯ ಬ್ರಾಹ್ಮಣ ಜಾತಿಗೆ ಸೇರಿದವರೇ ಆಗಿದ್ದರು ಎನ್ನುವುದು. ಎಂಥಾ ವಿಚಿತ್ರ ಅಲ್ವಾ. ಈತ ಇಲ್ಲಿಂದ ನಿರ್ಗಮಿಸಿದ ಮೇಲೂ ಅಗ್ರಹಾರರವರ ಸಮಸ್ಯೆ ಇತ್ಯರ್ಥವಾಗಲಿಲ್ಲ, ಕಡೆಗೆ ಹೈಕೋರ್ಟ್ ಇವರ ಪರವಾಗಿ ತೀರ್ಪು ನೀಡಿದರೂ, ಆ ತೀರ್ಪಿನ ವಿರುದ್ಧ ಅಕಾಡೆಮಿಯ ಆ ಸ್ಥಾನಕ್ಕೆ ಬಂದ ಮತ್ತೊಬ್ಬ ಜ್ಞಾನಿ ಮೇಲ್ಮನವಿ ಸಲ್ಲಿಸುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ, “ ಇಲ್ರೀ, ನಿಮ್ಮ ಇಂಥ ನೋವನ್ನೆಲ್ಲ ಒಳಗೇ ನುಂಗಿಕೊAಡು ಇರಬೇಡಿ, ಬರೆದು ಬಿಸಾಕಿ ಬಿಡಿ” ಎಂದು ಹಿರಿಯರಾದ ಹನಗವಾಡಿ ರುದ್ರಪ್ಪನವರು ಸಲಹೆ ಮಾಡುತ್ತಿದ್ದರು. ಆದರೆ ಎರಡೇ ವಾರದಲ್ಲಿ ಅಗ್ರಹಾರ ಕೃಷ್ಣಮೂರ್ತಿಯವರ ಎಲ್ಲ ಕಷ್ಟಗಳಿಗೂ ಪೂರ್ಣ ವಿರಾಮ ಇಡುವಂತಾಗಿದೆ. ಘನ ನ್ಯಾಯಾಲಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಮೇಲ್ಮನವಿಯನ್ನು ತಿರಸ್ಕರಿಸಿದೆ. ಗೆಳೆಯ ಕಾಳೇನಹಳ್ಳಿ ನಾಗೇಶ್ ಮೂರು ದಿನದ ಹಿಂದೆ ಕರೆಮಾಡಿ, ಬಹಳ ಖುಷಿಯಿಂದ ಈ ಸಂಗತಿ ತಿಳಿಸಿದ. ಎಲ್ಲರೂ ಖುಷಿ ಪಡುವ ಹಾಗೂ ಅಗ್ರಹಾರ ಕೃಷ್ಣಮೂರ್ತಿ ಖುಷಿ ಪಡುವ ಸಂಗತಿ ಇದು.


ಅದೇ ದಿನ ಸಭಾಂಗಣದ ಒಳಗೆ ಪುಸ್ತಕ ಬಿಡುಗಡೆ ನಡೆಯುತ್ತಿದ್ದರೆ, ಹೊರಗೆ ಆವರಣದಲ್ಲಿ ಪೆರಿಯಾರರಂಥ ಉದ್ದನೆ ಬಿಳಿ ಗಡ್ಡದ ,ಕೆಂಪು ಜುಬ್ಬಾ ಧರಿಸಿದ ಕುಳ್ಳನೆ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹರವಿ ಮಾರಾಟದಲ್ಲಿ ತೊಡಗಿದ್ದರು. ಪುಸ್ತಕದ ಬೆಲೆ ಎಷ್ಟು ಎಂದು ಯಾರಾದರೂ ಕೇಳಿದರೆ, ಕಾಗದದ ತುಂಡಿನ ಮೇಲೆ ಬರಿ ಬೆರಳಿನಿಂದ ಬರೆದು ತೋರುತ್ತಿದ್ದರು ಮತ್ತು ಇನ್ನೂ ಅರ್ಥವಾಗಲಿಲ್ಲವೆಂದರೆ ಕ್ಯಾಲುಕಲೇಟರ್‌ನಲ್ಲಿ ಒತ್ತಿ ತಿಳಿಸುತ್ತಿದ್ದ ಈ ಕುತೂಹಲದ ವ್ಯಕ್ತಿಯ ಹೆಸರು ಆಂಬ್ರೋಸ್ ಡಿ’ ಮೆಲ್ಲೋ.


ಇವರು ಹುಟ್ಟು ಮೂಕನಲ್ಲ, ಮಾತು ಬಾರದ ವ್ಯಕ್ತಿಯಲ್ಲ, ಕುಡಿಯುವ ನೀರು ಮಾರಾಟದ ಸರಕಾಗಬಾರದು ಎನ್ನುವ ಘನ ಬೇಡಿಕೆ  ಮುಂದಿಟ್ಟು ಅಲ್ಲಿವರೆಗೂ ಮಾತಿನ ಗೊಡವೆ ಬೇಡವೆಂದು ಇಚ್ಚಾ ಪೂರ್ವಕವಾಗಿ ಮಾತನಾಡುವುದನ್ನು ನಿಲ್ಲಿಸಿ 17 ವರ್ಷಗಳಾಗಿವೆ. ಅಷ್ಟೇ ಅಲ್ಲ ನರೇಂದ್ರ ಮೋದಿ ಆದಿಯಾಗಿ ಸೆಲೆಬ್ರಿಟಿ ರಾಜಕಾರಣಿಗಳ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರವನ್ನೂ ಸಲ್ಲಿಸುವುದು ಇವರ ಪ್ರತಿಭಟನೆಯ ಮತ್ತೊಂದು ವಿಧಾನ. ಆಂಬ್ರೋಸ್ ಡಿ’ ಮೆಲ್ಲೋ ಕುರಿತ ಎಷ್ಟೊಂದು ವರದಿಗಳು ಯೂಟ್ಯೂಬ್‌ನಲ್ಲಿ ದೊರಕುತ್ತವೆ, ಆಸಕ್ತರು ನೋಡಬಹುದು. ಅಲ್ಲಿ ಕನ್ನಡ ಭವನದಲ್ಲಿ ಬೆಳಗಿನಿಂದ ಆದ ವ್ಯಾಪಾರದ ಅಷ್ಟೂ ದುಡ್ಡನ್ನು ಎಣಿಸಿ ‘ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕದ ನೂರು ಪ್ರತಿಗಳನ್ನು ಖರೀದಿಸಿ, ತಂದಿದ್ದ ದೊಡ್ಡ ಬ್ಯಾಗಿನೊಳಗೆ ಜೋಡಿಸಿಕೊಂಡು ಬೆಂಗಳೂರಿನ ಬಸ್ಸು ಹತ್ತಿದರು ಈ ಡಿ’ಮೆಲ್ಲೋ.
-ಕೆಪಿ