ಲೇಖಕಿ ಪಿ. ಉಮಾದೇವಿ ಅವರ ಮೂರು ಕೃತಿಗಳೊಂದಿಗೆ -ಎಂ.ಎಚ್. ನಾಗರಾಜು

ಲೇಖಕಿ ಪಿ. ಉಮಾದೇವಿ ಅವರ ಮೂರು ಕೃತಿಗಳೊಂದಿಗೆ -ಎಂ.ಎಚ್. ನಾಗರಾಜು

ಲೇಖಕಿ ಪಿ. ಉಮಾದೇವಿ ಅವರ ಮೂರು ಕೃತಿಗಳೊಂದಿಗೆ -ಎಂ.ಎಚ್. ನಾಗರಾಜು

ಲೇಖಕಿ ಪಿ. ಉಮಾದೇವಿ ಅವರ ಮೂರು ಕೃತಿಗಳೊಂದಿಗೆ
-ಎಂ.ಎಚ್. ನಾಗರಾಜು


 ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಕಾರಣದಿಂದ ಸ್ಥಗಿತಗೊಂಡಿದ್ದ ನನ್ನ ಪುಸ್ತಕದೊಡಗಿನ ಒಡನಾಟವನ್ನು ಮತ್ತೆ ಆರಂಭಿಸುತ್ತಿದ್ದೇನೆ. ಹೀಗೆ ತೀರ್ಮಾನಿಸಿ ಅಸ್ತವ್ಯಸ್ತವಾಗಿ ಹರಡಿದ್ದ ಪುಸ್ತಕಗಳ ರಾಶಿಯತ್ತ ಕಣ್ಣಾಡಿಸಿದಾಗ ಕೂಡಲೇ ಕಂಡುಬAದಿದ್ದು ಲೇಖಕಿ ಪಿ. ಉಮಾದೇವಿ ಅವರ ಐದಾರು ಕೃತಿಗಳ ಗೊಂಚಲು.


 ‘ನಗೆ ಗುಂಡ’, ‘ನಗೆ ಗುಂಡಿ’ ಶೀರ್ಷಿಕೆಯ ಹಾಸ್ಯಭರಿತ ನಗೆಬರಹಗಳ ಸಂಕಲನಗಳನ್ನು ರಚಿಸಿ ಸುಮಶ್ರೀಹರ್ಷ ಹೆಸರಿನಲ್ಲಿ ಪ್ರಕಟಿಸಿರುವ ಅವರು ಇನ್ನುಳಿದ ವಚನ ಸೊಬಗು, ವಚನಸಿರಿ, ಸೀಮಾಂತರAಗ, ಮಾಯಾ ಮೊದಲಾದ ಕೃತಿಗಳನ್ನು ಪಿ.ಉಮಾದೇವಿ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ನಾನೂ ಒಬ್ಬ ಲೇಖಕಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅಕ್ಷರ ಜೋಡಣೆ(ಡಿಟಿಪಿ)ಯ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಅವರು ಜಿಲ್ಲೆಯ ನಾಡಿನ ನೂರಾರು ಲೇಖಕರ ಕತೆ, ಕವನ, ಕಾದಂಬರಿ, ನಾಟಕ, ವಿಚಾರ, ವಿಮರ್ಶೆ, ಸಂಶೋಧನೆ ಇತ್ಯಾದಿ ಕುರಿತ ಸಾವಿರಾರು ಪುಸ್ತಕಗಳ ಪುಟ ವಿನ್ಯಾಸ ಮಾಡುವುದರ ಜೊತೆ ಜೊತೆಗೆ ಲೇಖಕಿಯಾಗಿ ಹೊರಹೊಮ್ಮಿದ್ದು, ಅಭಿರುಚಿ ಬೆಳಸಿಕೊಂಡಿದ್ದು, ಒಂದು ಅಚ್ಚರಿಯ ಸಂಗತಿಯೇ ಆಗಿದೆ. ಅವರು ಮೊದಲಿಗೆ ಬರೆದಿದ್ದ ‘ನಗೆ ಗುಂಡ’ ಹಾಸ್ಯಕೃತಿಯನ್ನು ಮಾತ್ರವೇ ನೋಡಿದ್ದ ನಾನು ಇತ್ತೀಚೆಗೆ ಅವರು ನೀಡಿದ ಹಲವು ಕೃತಿಗಳನ್ನು ಗಮನಿಸಿದಾಗ ಅವರು ಡಿಟಿಪಿ ಆಪರೇಟರ್ ಮಾತ್ರವಲ್ಲ, ಲೇಖಕಿಯೂ ಹೌದು ಎನ್ನುವುದು ಮನದಟ್ಟಾಯಿತು.


 ಅವರ ಬರಹಗಳ ಗುಚ್ಚದಲ್ಲಿ ಹಾಸ್ಯಕೃತಿಗಳಿವೆ, ಕವನ ಸಂಕಲನ ಇದೆ, ಕಾದಂಬರಿ ಇದೆ, ವಿಚಾರ-ವಿಮರ್ಶೆಯ ಗದ್ಯಕೃತಿಗಳಿವೆ. ಅವುಗಳಲ್ಲಿ ಮೂರು ಪುಸ್ತಕಗಳಾದ ‘ಮಾಯಾ’, ‘ವಚನ ಸೊಬಗು’, ‘ವಚನ ಸಿರಿ’ಗಳನ್ನು ಆಯ್ದುಕೊಂಡು ಓದಿ ಅನಿಸಿದ್ದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
 ಮಾಯಾ, ಲೇಖಕಿಯೇ ಹೇಳುವಂತೆ ಚಿನಕುರುಳಿ ಕವನ ಸಂಕಲನ. ಹಾಗಂತ ಹಾಯಕುಗಳು ಅಥವಾ ಚುಟುಕು ಕವಿತೆಗಳು ಎಂದು ಭಾವಿಸಬಾರದು. ಸಾಕಷ್ಟು ದೊಡ್ಡದಾದ ಕವಿತೆಗಳೂ ಅದರಲ್ಲಿವೆ. ರೂ. 70/- ಮುಖಬೆಲೆಯ 84 ಪುಟಗಳ ಮಾಯಾ ಕವನ ಸಂಕಲನದಲ್ಲಿ 44 ಕವಿತೆಗಳಿವೆ. 2017ರಲ್ಲಿ ಪ್ರಕಟವಾಗಿದ್ದು ಸುಂದರವಾಗಿ ಮುದ್ರಣಗೊಂಡಿದೆ. ತುಮಕೂರು ಸುರಭಿ ಪ್ರಕಾಶನ ಪ್ರಕಟಿಸಿದೆ. ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ-ಸಾಹಿತಿ-ವಿದ್ವಾನ್ ಹರಳೂರು ಶಿವಕುಮಾರ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕವಯಿತ್ರಿ ಸಿ.ಆರ್. ರಮ್ಯ ಆಶಯ ನುಡಿಯನ್ನು ನೀಡಿದ್ದಾರೆ. ಅದೇ ರೀತಿ ಹಿರಿಯ ಲೇಖಕಿ ಬಾ.ಹ. ರಮಾಕುಮಾರಿ ಅದರ ಬೆನ್ನುಡಿಯ ಬೆನ್ನುತಟ್ಟುವ ಮಾತುಗಳಿವೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ ಕೂಡಾ ಈ ಕೃತಿಗೆ ಲಭಿಸಿದೆ. ಹಾಗೇ ಕೃತಿ ರಚನೆಯ ಹಿಂದಿನ ಒತ್ತಾಸೆಗಳನ್ನು ಆಶಯಗಳನ್ನು ಲೇಖಕಿಯಾಗಿ ಉಮಾದೇವಿ ಅವರು ತಮ್ಮ ಮಾತುಗಳಲ್ಲಿ ದಾಖಲಿಸಿದ್ದಾರೆ.


 ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗುತ್ತದೆ ಎಂಬ ಮಾತೊಂದಿದೆ. ಇಲ್ಲಿ ಲೇಖಕಿ ಒಬ್ಬ ವ್ಯಕ್ತಿಯಾಗಿ ಅನುಭವಿಸಿದ ಸಂಕಟಗಳು, ನೋವುಗಳು, ತಲ್ಲಣಗಳು, ನಿರಾಸೆಗಳು, ಆಸೆಗಳು, ಆಶಯಗಳು, ಕನಸುಗಳು ಎಲ್ಲವೂ ಅವರಿಗೇ ಅರಿವಿಲ್ಲದಂತೆ ಕವಿತೆಯಾಗಿ ಅರಳಿವೆ. ಇಲ್ಲಿನ ನಲವತ್ನಾಲ್ಕು ಕವಿತೆಗಳ ಶೀರ್ಷಿಕೆಗಳನ್ನು ಮಾತ್ರವೇ ಗಮನಿಸಿದಾಗ ಕವಯತ್ರಿಯ ಅಂತರAಗದ ಅಭೀಪ್ಸೆಗಳ ಅನಾವರಣವಾಗುತ್ತದೆ. ಕವಿತೆ ಹುಟ್ಟುವ ಸಂದರ್ಭ ಆ ಸಂದರ್ಭದಲ್ಲಿನ ಆಶಯ, ತೊಳಲಾಟ ಎಲ್ಲವೂ ದೃಗ್ಗೋಚರವಾಗುತ್ತವೆ.


  ಸಂಬಂಧದ ಹಂಗು
  ತೊರೆದು ಬದುಕಲಿಕ್ಕೆ
  ಬರಬಾರದೇಕೆ
  ಬೇಕು ಎಲ್ಲಕೂ
  ಹಂಗೆಂಬ
  ಒಂದು ಕೊಂಡಿ.

  ಕೊಂಡಿ ಸಿಕ್ಕಿಹಾಕಿದರೆ
  ಮುಗಿಯಿತು
  ಕೊಂಡಿ ಕೊಕ್ಕೆಯಾಗಿ
  ಬಿಡದೀ ಹಂಗು
  ಹಂಗಿನಂಗಿಯನು


 ಹೀಗೆಂದು `ಹಂಗು’ ಕವಿತೆಯಲ್ಲಿ ಬರೆಯುತ್ತಾರೆ, ತಮ್ಮ ಅಂತರAಗದ ಕದವನ್ನು ತೆರೆದು ಒಳಗಿನ ತುಮುಲಗಳನ್ನು ಬಿಚ್ಚಿಡುತ್ತಾರೆ. ಮನುಷ್ಯ ಒಂಟಿಯಾಗಿ ಈ ಭುವಿಗೆ ಬಂದರೂ, ಒಂಟಿಯಾಗಿ ಬಾಳಲಾರ. ಸಹಜವಾಗಿಯೇ ಅವನು ಸಂಘ ಜೀವಿಯಾಗುತ್ತಾನೆ, ಸಮಾಜಜೀವಿಯಾಗುತ್ತಾನೆ. ಬಾಂಧವ್ಯದ ಬಲೆ ಬೆಳೆಯುತ್ತದೆ. ಆದರೆ ಆ ಬಾಂಧವ್ಯವೇ ಬಂಧನವಾಗಬಾರದು, ಕಾಡುವ ಬೇಡಿಯಾಗಬಾರದು ಎಂಬುದನ್ನು ತನ್ನಾಶಯವನ್ನು ಈ ಕವಿತೆ ಸೂಚಿಸುತ್ತದೆ.
  ಸದ್ಯ, ಒಂದು ಸಾರಿಯಾದರೂ


  ತಿರುಗಿ ನೋಡು,
  ನೀ ಕಳೆದುಕೊಂಡಿದ್ದಾದರೂ
  ಸಿಕ್ಕಿದರೂ ಸಿಗಬಹುದು

  ದಾರಿ ನೂರಿವೆ ಅದರಲ್ಲಿ
  ಯಾವುದಾದರೊಂದನು
  ಅರಸಿ ಮುಂದೆ ಮುಂದೆ
  ಸಾಗು ನಿನ್ನ ದಾರಿ ಸುಗಮವಾಗುತ್ತದೆ.


 `ಹಿಂದಿರುಗಿ ನೋಡು’ ಕವಿತೆಯಲ್ಲಿ ಬರುವ ಸಾಲುಗಳು ಯಾವ ಯಾವುದೋ ಕಾರಣಕ್ಕೆ ಒಂದಾಗಿದ್ದೇವೆ. ಬಾಳು ಆರಂಭಿಸಿದ್ದೇವೆ. ಅಹಮ್ಮೋ, ಆಚಾರ ಬೇಧವೋ, ವಿಚಾರ ಬೇಧವೋ ಬೇರೆಯಾಗಿದ್ದೇವೆ. ಬಹುದೂರ ಸಾಗಿ ಬಂದಿದ್ದೇವೆ. ಈಗಲಾದರೂ ಒಮ್ಮೆ ನಿಂತು, ಹಿಂತಿರುಗಿ ನೋಡಿ ಆತ್ಮಾವಲೋಕನ ಮಾಡಿಕೊಂಡು, ತಪ್ಪು ಒಪ್ಪಿಕೊಂಡು, ಒಪ್ಪಿದ ಸಮ್ಮತ ದಾರಿಯಲ್ಲಿ ಸಾಗೋಣ ಎನ್ನುವುದನ್ನು ಕವಿತೆ ಧ್ವನಿಸುತ್ತದೆ. ಆದರೆ ಈ ಆಸೆ, ಆಶಯ ಈಡೇರದು ಎಂದಾದಾಗ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಅನ್ನುವ ಗಟ್ಟಿ ನಿರ್ಧಾರದ ಹಂತಕ್ಕೆ ತಲುಪುತ್ತದೆ.


 ಸಂಕಲನದಲ್ಲಿ ತುಂಬ ವೈವಿಧ್ಯಮಯವಾದ ಕವಿತೆಗಳಿವೆ. ಅಮ್ಮ, ಅಪ್ಪನನ್ನು ಕುರಿತು, ಗುರು, ನೇಗಿಲಯೋಗಿ, ಕನ್ನಡವನ್ನು ಕೇಂದ್ರೀಕರಿಸಿದAತೆ ಕವಿತೆಗಳಿವೆ. ಬಂದಿದೆ ಸಂಕ್ರಾAತಿ ಇರಲಿ ಕ್ರಾಂತಿ ಎಂಬ ಕವಿತೆಯೊಂದರ ಶೀರ್ಷಿಕೆಯೇ ಮಹತ್ವದ ಸಂದೇಶವನ್ನು ಸಾರುತ್ತದೆ. ಮಹಿಳೆ ಕವಿತೆಯಲ್ಲಿ `ಮುನಿಯಬೇಡ ಅಂಜಬೇಡ, ಮುಂದೆ ಮುಂದೆ ಸಾಗು, ಹೆದರಬೇಡ ಭಯಬೇಡ, ಇದೆ ಮುಂದೆ ದಾರಿ, ಗುರಿಯನೊಂದು ಮಾಡಿ, ಸಾಗು ನೀ ಮುಂದೆ ಮುಂದೆ’ ಎಂದು ನೊಂದ ಹೆಣ್ಣಿಗೆ ಧೈರ್ಯ ತುಂಬುವ ಮಾತು ಹೇಳಿದ್ದಾರೆ.


 ಹಾಗೇ ಕಾಮ್ರೇಡ್ ಟಿ.ಆರ್. ರೇವಣ್ಣನವರ ಜೀವನ ಸಾಧನೆಯೇ `ಚಿರಂತನ ಹೋರಾಟ’ ಎನ್ನುವ ಕವಿತೆಯಾಗಿದೆ. ಜಗದ್ವಿಖ್ಯಾತ ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ ಅವರ ಬದುಕು-ಬವಣೆ-ಸಾಧನೆ ಎಲ್ಲಾ ಕಲಾತಪಸ್ವಿ ಕವಿತೆಯಾಗಿ ಅರಳಿದೆ. ಜೊತೆಗೆ ವೈಯಕ್ತಿಕ, ತುಂಬ ಖಾಸಗಿ ಅನ್ನುವಂತಹ ಅನಿಸಿಕೆ-ಅಭಿಪ್ರಾಯ- ಆಶಯಗಳೆಲ್ಲವೂ ಕವಿತೆಯಾಗಿ ಮೂಡಿಬಂದಿವೆ. ಇಲ್ಲಿನ ಎಲ್ಲ ಕವಿತೆಗಳು ಪಿ.ಉಮಾದೇವಿ ಅವರನ್ನು ಸಮರ್ಥ ಕವಯತ್ರಿಯಾಗಿ ಪ್ರತಿಷ್ಟಾಪಿಸಿವೆ ಎನುವುದನ್ನು ಯಾವುದೇ ಅಳುಕಿಲ್ಲದೆ ಹೇಳಬಹುದು.


 ಇನ್ನು ಅವರ ಗದ್ಯಬರಹ `ವಚನ ಸೊಬಗು’ ಕೃತಿಗೆ ಬರೋಣ. ಇದು 2018 ರಲ್ಲಿ ಮೊದಲ ಮುದ್ರಣವಾಗಿ ಬೆಳಕು ಕಂಡ 80 ಪುಟಗಳ ಪುಸ್ತಕ. ಮುಖಬೆಲೆ ರೂ. 100/-. ಇದಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರದೇ ಕೆಲವು ಸಾಲುಗಳು ಬೆನ್ನುಡಿಯಲ್ಲೂ ಪ್ರಕಟವಾಗಿವೆ.


 ಹೆಸರೇ ಸೂಚಿಸುವಂತೆ `ವಚನ ಸೊಬಗು’ ಹನ್ನೆರಡನೇ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಚಳವಳಿಗೆ, ಚಳವಳಿಯ ಮೂಲಕ ಪರಿವರ್ತನೆಗೆ ನಾಂದಿ ಹಾಡಿದ ಶರಣ ವಚನಕಾರರು, ಅವರ ಬದುಕು, ಅವರ ಅಂತರAಗದ ಅಭೀಪ್ಸೆ, ಅವರು ರಚಿಸಿದ ವಚನಗಳನ್ನು ಕೇಂದ್ರವಾಗಿಟ್ಟುಕೊAಡು ರಚಿಸಿದ ಕೃತಿಯಾಗಿದೆ.


 ವಚನ ಚಳವಳಿಯ ಅದ್ವರ್ಯ ಗುರು ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮೇಶ್ವರ, ಚನ್ನಬಸವಣ್ಣ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಅಜಗಣ್ಣ, ನುಲಿಯಚಂದಯ್ಯ, ಜೇಡರ ದಾಸಿಮಯ್ಯ, ಶರಣೆ ಲಿಂಗಮ್ಮ, ಮುಕ್ತಾಯಕ್ಕ, ಬೋಂತಾದೇವಿ ಮೊದಲಾದ ಶರಣ-ಶರಣೆಯರ ಜೀವನ ಮತ್ತು ಅವರ ರಚನೆಗಳನ್ನು ವಚನಗಳನ್ನು ನೆಪವಾಗಿ ಇಟ್ಟುಕೊಂಡು ಅಧ್ಯಯನ-ಅನುಸಂಧಾನ ನಡೆಸಿ ಈ ಕೃತಿಯನ್ನು ರಚಿಸಲಾಗಿದೆ. 


 ಜೊತೆಗೆ ಕನ್ನಡಿ ಕಾಯಕದ ರೇವಮ್ಮ, ಕಾಟಕೂಟಯ್ಯಗಳ ಪುಣ್ಯಸ್ತಿçà ರೇಚವ್ವೆ, ಕಾಲಕಣ್ಣಿಯ ಕಾಮಮ್ಮ, ಕೊಂಡೆ ಮಂಚಣ್ಣಗಳ ಪುಣ್ಯಸ್ತಿçà ಲಕ್ಷö್ಮಮ್ಮ, ಕೊಟ್ಟಣದ ಸೋಮಮ್ಮ ಎಂಬ ಐವರು ಅಲಕ್ಷಿತ ವಚನಕಾರ್ತಿಯರ ಬದುಕಿನತ್ತ ದೃಷ್ಟಿ ಇಟ್ಟು ಲೇಖನಗಳನ್ನು ಬರೆದಿರುವುದು ಶ್ಲಾö್ಯಘನೀಯವಾಗಿದೆ.


 ವಚನ ಸೊಬಗು ಪ್ರಕಟವಾಗಿ ಒಂದು ವರ್ಷದ ನಂತರ 2019 ರಲ್ಲಿ ಅವರ `ವಚನಸಿರಿ’ ಪ್ರಕಟವಾಗಿದೆ. 96 ಪುಟಗಳ ರೂ. 100/- ಬೆಲೆಯನ್ನು ಹೊಂದಿರುವ ಈ ಕೃತಿಗೆ ಲೇಖಕರಾದ ಚಿಕ್ಕತೊಟ್ಲುಕೆರೆಯ ಶಂಕರಗೌಡ ಮ. ಬಿರಾದಾರ ಅವರು ದೀರ್ಘ ವಿಮರ್ಶಾತ್ಮಕ ಮುನ್ನುಡಿ ಬರೆದಿದ್ದಾರೆ. ವಿದ್ವಾನ್ ಹರಳೂರು ಶಿವಕುಮಾರ ಬೆನ್ನುಡಿ ಬರೆದಿದ್ದಾರೆ.


 ವಚನಸಿರಿ ಕೃತಿಯಲ್ಲಿ ಒಟ್ಟು ಇಪ್ಪತ್ತು ಲೇಖನಗಳಿವೆ. ಈ ಲೇಖನಗಳಲ್ಲಿ ಒಂದು ವಿಶೇಷತೆ ಇದೆ. ಏನೆಂದರೆ ಕೊನೆಯ ಮಹಾಶಿವರಾತ್ರಿ ಸರ್ವ ಶರಣರ ದಿನಾಚರಣೆ, ಬಸವಯುಗದ ಸಾಮಾಜಿಕ ಚಿಂತನೆ, ಜಾನಪದ ಸಾಹಿತ್ಯ-ವಚನ ಸಾಹಿತ್ಯ ಎಂಬ ಮೂರು ಲೇಖನಗಳನ್ನು ಹೊರತುಪಡಿಸಿದರೆ ಉಳಿದ ಹದಿನೇಳು ಲೇಖನಗಳು ಶರಣ ವಚನಕಾರರ ವಚನಾಂಕಿತಗಳನ್ನು ಶೀರ್ಷಿಕೆಯಾಗಿ ಇಟ್ಟುಕೊಂಡು ರಚಿಸಿದ ಲೇಖನಗಳಾಗಿವೆ. ಉದಾಹರಣೆಗೆ ಕಪಿಲಸಿದ್ಧ ಮಲ್ಲಿಕಾರ್ಜುನ (ಸಿದ್ಧರಾಮೇಶ್ವರ), ಬಸವಪ್ರಿಯ ಕೂಡಲ ಚೆನ್ನಬಸವಣ್ಣ (ಹಡಪದ ಅಪ್ಪಣ್ಣ), ಕಾಲಾಂತಕ ಭೀಮೇಶ್ವರಲಿಂಗ (ಡಕ್ಕೆಯ ಬೊಮ್ಮಣ್ಣ), ಆತುರವೈರಿ ಮಾರೇಶ್ವರಾ (ನಗೆಯ ಮಾರಿತಂದೆ), ಅಮುಗೇಶ್ವರಾ (ಅಮುಗಿರಾಮಯ್ಯ)


 ಇನ್ನೊಂದು ವಿಶೇಷ ಎಂದರೆ ಇಲ್ಲಿನ ಎರಡೂ ಕೃತಿಗಳ ಎಲ್ಲ ಲೇಖನಗಳು `ನೊಳಂಬವಾಣಿ’ ತ್ರೆöÊಮಾಸಿಕದಲ್ಲಿ ಪ್ರಕಟವಾಗಿವೆ. ಬಹುಶಃ ಅದರ ಸಂಪಾದಕರಾದ ಪ್ರೊ|| ವೈ.ಆರ್. ಚನ್ನಬಸವಯ್ಯನವರ ಒತ್ತಾಸೆಯೂ ಇಲ್ಲಿ ಕೆಲಸ ಮಾಡಿದೆ. ಈ ನೆಪದಲ್ಲಾದರೂ ಲೇಖಕಿ ಪಿ. ಉಮಾದೇವಿ ಅವರು ವಚನಗಳೊಡನಾಡಿದ್ದಾರೆ. ವಚನಕಾರರೊಂದಿಗೆ ಅನುಸಂಧಾನ ಮಾಡಿದ್ದಾರೆ. ಪರಿಣಾಮವಾಗಿ ಅವರಿಗೆ ಒಂದಷ್ಟು ಸಿದ್ಧಿ ಸಿದ್ಧಿಸಿದೆ. ಆ ಸಿದ್ಧಿಯ ಬೆಳಕಿನಲ್ಲಿ ಈ ಎಲ್ಲ ಲೇಖನಗಳು ಮೂಡಿಬಂದಿವೆ.


 ವಚನ ಸೊಬಗು ಮತ್ತು ವಚನ ಸಿರಿ ಹೆಸರಿನ ಎರಡೂ ಕೃತಿಗಳನ್ನು ಒಂದು ಸಾರಿ ಓದಿದರೆ 850 ವರ್ಷಗಳ ಹಿಂದಿನ, ಕಲ್ಯಾಣ ಕ್ರಾಂತಿಯ ಸಂದರ್ಭದ ಸಾಧಕರು, ಅವರ ಸಾಧನೆಗಳು, ಅವರ ಅಂತರAಗದ ಆಶಯಗಳು-ಆಲೋಚನೆಗಳು, ಅಂದಿನ ಕಾಲದ ಸಾಮಾಜಿಕ ಪರಿಸರ ಎಲ್ಲವನ್ನೂ ಮತ್ತೊಮ್ಮೆ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದಂತಾಗುತ್ತದೆ. ಈ ಮೂಲಕ ಓದುಗರನ್ನು ಮರು ಓದಿಗೆ, ಮರುಚಿಂತನೆಗೆ ಒಳಪಡಿಸಿದ್ದಾರೆ. ಅವರಲ್ಲೂ ಸಾಹಿತ್ಯದ ಪ್ರಥಮ ಓದುಗರಿಗೆ ಕೃತಿ ತುಂಬ ಸುಲಭವಾಗಿ ದಕ್ಕುತ್ತದೆ. ವಿಚಾರಗಳು ಮನನವಾಗುತ್ತವೆ.


 ಹೀಗೆ ನನ್ನ ಓದಿಗೆ, ಒಂದಷ್ಟು ಬರಹಕ್ಕೆ ದಾರಿಮಾಡಿಕೊಟ್ಟ ಲೇಖಕಿ ಪಿ. ಉಮಾದೇವಿ ಅವರು ಯಾವತ್ತೂ ಆದರಣೀಯರು. ಅವರ ಬರಹದ ಬೇಸಾಯ ಹೀಗೆ ಸಾಗಲಿ. ಇದು ನನ್ನ ಮನದಾಳದ ಆಶಯ.