ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್‌ ಪಾತ್ರ

1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ  ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ. 1980ರ ದಶಕದ ತನಕ ಮ್ಯೆಸೂರಿನ ಕೇಂದ್ರ ಆಹಾರ ಸಂಶೋಧನಾ ಕೇಂದ್ರವು 'ಆಹಾರ ವಿಜ್ಞಾನ ' ಎಂಬ ಕನ್ನಡದ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿತ್ತು.     ಆರೋಗ್ಯ, ಆಹಾರ, ದ್ಯೆಹಿಕ ಸ್ಥಿತಿಗತಿ, ಪೌಸ್ಟಿಕಾಂಶಗಳ ವಿಚಾರಗಳೆಲ್ಲ ಸರಳ ಅಚ್ಚ ಕನ್ನಡದಲ್ಲಿ ಅದೆಷ್ಟು ಸೊಗಸಾಗಿ ಬರೆಯಲ್ಪಟ್ಟಿವೆ ಗೊತ್ತೆ !

ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಟಾನದಲ್ಲಿ ಸಾಹಿತ್ಯ ಪರಿಷತ್‌ ಪಾತ್ರ

ವಿಚಾರ

ಪಾರ್ವತೀಶ ಬಿಳಿದಾಳೆ

 

 

    ಕನ್ನಡ ಕಲಿಯದಿದ್ದರೂ ವಿದ್ಯಾವಂತರೆನಿಸಿಕೊಳ್ಳುವ ಪರಿಸ್ಥಿತಿಗೆ ಕರ್ನಾಟಕ ತಲುಪಿದೆ. ಆಷ್ಟೆ ಸಹಜವೆನ್ನುವಂತ ಕನ್ನಡ ಬೇಕಿರದೆಯೂ ಉದ್ಯೋಗಾವಕಾಶಗಳನ್ನು ಪಡೆಯುವ, ಕನ್ನಡ ಭಾಷೆ ಬಳಸದೆಯೂ ಆಡಳಿತ, ಉದ್ಯಮ, ಸಂಪರ್ಕ, ಮಾಹಿತಿ ವಿನಿಮಯ, ವ್ಯಾಪಾರ ವಹಿವಾಟುಗಳನ್ನು ನಡೆಸಬಹುದಾದ ಕಳವಳಕಾರಿ ವಾತಾವರಣವು ಕರ್ನಾಟಕದಲ್ಲೀಗ    ನಿರ್ಮಾಣಗೊಂಡಿದೆ.

    ಕನ್ನಡ ಭಾಷೆಯನ್ನು ಕರ್ನಾಟಕದಿಂದ, ಕನ್ನಡಿಗರ ನಿತ್ಯ ಬದುಕಿನಿಂದ ಉಚ್ಛಾಟಿಸುವ ಈ ಅಪಾಯಕಾರಿ ವಿದ್ಯಮಾನಗಳು ಘಟಿಸುತ್ತಿರುವುದನ್ನು ಲಕ್ಷಾಂತರ ಕನ್ನಡಿಗರು ಪ್ರತಿವರ್ಷ ಪಾಲ್ಗೊಳ್ಳುವ ಸಾಹಿತ್ಯ ಸಮ್ಮೇಳನಗಳು ಗಂಭೀರವಾಗಿ ನೋಡಬೇಕಿದೆ. 

    ನಿರ್ದಿಷ್ಟವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಜಾರಿ ಮಾಡುತ್ತಿರುವ ಕಾನೂನು, ನೀತಿ-ನಿಯಮಗಳು ಕನ್ನಡ ಭಾಷೆಗೆ ಯಾವ ಸ್ಥಿತಿ ತರಲಿವೆ ಎನ್ನುವುದನ್ನು ಪರಿಶೀಲಿಸಬೇಕಿದೆ.

    ನಾಲ್ಕೂವರೆ ಲಕ್ಷ ಸದಸ್ಯರನ್ನು ಹೊಂದಿರುವ, ಕರ್ನಾಟಕದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಘಟಕಗಳನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಈ ಕುರಿತು ಮುಂದೊಡಗುವುದು ಈ ಸಂಕೀರ್ಣ ಸಮಯದ ಅಗತ್ಯವೂ ಹೌದು.

ರಾಜ್ಯ ಸರ್ಕಾರದ ಥೋರಟ್ ಆಯೋಗ ಮತ್ತು

ಒಕ್ಕೂಟ ಸರ್ಕಾರದ ವಿಕಸಿತ್ ಭಾರತ್ ಶಿಕ್ಷಣ್ ಅಧಿಷ್ಟಾನ

      ಕರ್ನಾಟಕದ ಏಕೀಕರಣವಾದ ನಂತರ ಜಾರಿಯಾಗಿರುವ ಬಹುತೇಕ ಶಿಕ್ಷಣ ನೀತಿಗಳನ್ನು ಇಂಡಿಯಾದ ಒಕ್ಕೂಟ ಸರ್ಕಾರವೇ ಏಕಪಕ್ಷೀಯವಾಗಿ ಹೇರಿದವುಗಳಾಗಿವೆ.  1956 ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಭೌಗೋಳಿಕವಾಗಿ ಏಕೀಕರಣಗೊಂಡು ಒಂದೇ ಘಟಕವಾಗಿ ಮರುಹುಟ್ಟು ಪಡೆದ ನಂತರ ಬಹುಕಾಲದವರೆಗೂ ನಮ್ಮ ರಾಜ್ಯಕ್ಕೊಂದು ತನ್ನದೇ ಆದ ಶಿಕ್ಷಣ ನೀತಿ ಬೇಕಿತ್ತೆಂಬುದನ್ನು ಅಂದಿನ ನಾಯಕರು ಮನಗಂಡಿರಲಿಲ್ಲ. ಮತ್ತೊಂದೆಡೆ ಒಕ್ಕೂಟ ಸರ್ಕಾರವು 1968, 1986,1992 ರಲ್ಲಿ ಇಡೀ ಇಂಡಿಯಾ ಒಕ್ಕೂಟಕ್ಕೆ ಅನ್ವಯಿಸುವಂತಹ ಹಲವು ನೀತಿಗಳನ್ನು ಜಾರಿ ಮಾಡಿತು, ಕರ್ನಾಟಕವು ಅವನ್ನು ಚರ್ಚಿಸದೆಯೇ ಸಮ್ಮತಿಸಿತ್ತು. ಆದರೆ ಇಂಡಿಯಾದ ಆಡಳಿತವು ಆರ್ ಎಸ್ ಎಸ್ ಸಿದ್ದಾಂತದ ಬಿಜೆಪಿಯ ವಶವಾದ ನಂತರ ಜಾರಿಯಾದ 2022ರ ನೂತನ ಶಿಕ್ಷಣ ನೀತಿಗೆ ( NEW EDUCATION POLICY-NEP )ಒಕ್ಕೂಟದ ಹಲವು ಸದಸ್ಯ ರಾಜ್ಯಗಳಿಂದ ವಿರೋಧ ಬಂದಿತು. ತಮಿಳುನಾಡು ಶಾಸನಸಭೆಯು ಎನ್ ಇ ಪಿ ಒಪ್ಪದೆ ತನ್ನದೇ ಪ್ರತ್ಯೇಕ ಶಿಕ್ಷಣ ನೀತಿಯ ಕಾಯ್ದೆ ರೂಪಿಸಿಕೊಂಡಿದೆ. ಎನ್ ಇ ಪಿ ಜಾರಿಯಾಗುವಾಗ ಕರ್ನಾಟಕದಲ್ಲಿ ಬ್ರಾಹ್ಮಣಶಾಹಿ ಬಿಜೆಪಿ ಪಕ್ಷದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದು ಎನ್. ಇ. ಪಿ. ಯ  ಪ್ರಾಯೋಗಿಕ ಯಜ್ಞ ಕ್ಕೆ ಕರ್ನಾಟಕವನ್ನು ಬಲಿಕೊಟ್ಟರು.

 

     ಆದರೆ 2023ರಲ್ಲಿ ಕಾಂಗ್ರೆಸ್ ಪಕ್ಷವು ಜನಾದೇಶ ಪಡೆದು ಅಧಿಕಾರ ಪಡೆದ ನಂತರ ಶಿಕ್ಷಣ ಹಾಗೂ ಭಾಷಿ ನೀತಿ ಕುರಿತು ಪರಿಶೀಲಿಸಿ ವರದಿ ನೀಡಲು ಥೋರಟ್ ಆಯೋಗ ರಚಿಸಿತು. ಈ ಆಯೋಗದಲ್ಲಿ ಹಲವು ಶಿಕ್ಷಣ ತಜ್ಞರೊಂದಿಗೆ ಕನ್ನಡ ನಾಡಿನ ಪ್ರಸಿದ್ಧ ಚಿಂತಕರಾದ ಡಾ. ನಟರಾಜ ಬೂದಾಳು, ಡಾ. ರಹಮತ್ ತರಿಕೆರೆ, ಡಾ. ಸಬಿಹಾ ಭೂಮಿಗೌಡ, ಡಾ. ವಿನಯ ಒಕ್ಕುಂದ, ಡಾ. ನಿರಂಜನಾರಾಧ್ಯ, ಪ್ರೊ. ತಳವಾರ ಇನ್ನೂ ಮುಂತಾದವರಿದ್ದಾರೆ. ಥೋರಟ್ ಆಯೋಗವು ಎರಡು ಬಾರಿ ಮಧ್ಯಂತರ ವರದಿ ನೀಡಿ ಈಗ ಅಂತಿಮ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.

     ಕರ್ನಾಟಕದ ಅನನ್ಯತೆಯು ಸೆರೆವಾಸದಲ್ಲಿರುವುದನ್ನು ಬಲ್ಲವರು, ಕರ್ನಾಟಕದಲ್ಲೇ ಕನ್ನಡವು ಶಿಕಾರಿಗೊಳಗಾದ ದುಃಸ್ಥಿತಿ ಕಂಡಿರುವ ವಿವೇಕಿಗಳೂ, ವಿವೇಚನೆಯಿರುವವರು, ಬಹಳ. ಮುಖ್ಯವಾಗಿ ನಾವು ನಂಬಬಹುದಾದ ಪ್ರಾಜ್ಞರು ಈ ಅಯೋಗದಲ್ಲಿದ್ದಾರೆ. ಹಾಗಾಗಿ ಥೋರಟ್ ಆಯೋಗದ ಶಿಫಾರಸುಗಳು, ಕನಿಷ್ಟಪಕ್ಷ ಕನ್ನಡವನ್ನು ಅದೀಗ ಬಂಧಿಯಾಗಿರುವ ಹಿಂದಿ ಭಾಷಿಕ ಸೆರೆಮನೆಯಿಂದ ಬಿಡಿಸಲಿದೆ ಎಂದು ನಿರೀಕ್ಷಿಸಬಹುದು.

     ಈ ನಡುವೆ 2022ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮುಂದುವರೆದ ಭಾಗವಾಗಿ ಒಕ್ಕೂಟ ಸರ್ಕಾರದ ಸಂಸತ್ ನಲ್ಲಿ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ 'ವಿಕಸಿತ್ ಭಾರತ್ ಶಿಕ್ಷಣ್ ಅಧಿಷ್ಟಾನ್ ' ಎಂಬ ಮಸೂದೆಯನ್ನು ಮಂಡಿಸಿದ್ದಾರೆ.

    ಇಂಡಿಯಾ ಒಕ್ಕೂಟದ ಎಲ್ಲ ರೀತಿಯ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ವ್ಯೆದ್ಯಕೀಯ, ವಿಶ್ವವಿದ್ಯಾಲಯಗಳ ಆಡಳಿತ, ನೀತಿ ನಿರೂಪಣೆ, ಸೀಟು ಹಂಚಿಕೆ, ಅನುದಾನ ಬಿಡುಗಡೆ ಇವೇ ಮುಂತಾದವುಗಳನ್ನು ಪೂರ್ತಿಯಾಗಿ ಕೇಂದ್ರೀಕರಣಗೊಳಿಸಿ ತನ್ನ ಆಧೀನಕ್ಕೆ ತಂದುಕೊಳ್ಳುವ ದುರುದ್ದೇಶವು ಈ ಮಸೂದೆಯಲ್ಲಡಗಿದೆ.

     ಇದುವರೆವಿಗೂ ಉನ್ನತ ಶಿಕ್ಷಣದ ಬೇರೆ ಬೇರೆ ವಿಭಾಗಗಳು  ಸ್ವಾಯತ್ತವಾಗಿ, ಅವುಗಳದ್ದೇ ನಿಯಮಗಳನ್ನು ರೂಪಿಸಿ, ಹಲವು ಸ್ತರಗಳಲ್ಲಿ ಕಾರ್ಯಶೀಲವಾಗಿದ್ದವು. ಈಗವನ್ನು ಒಂದೇ ಏಟಿಗೆ ಬಡಿದು ಮೂಲೆಗೆಸೆಯಲಾಗಿದೆ.

       ಬಹಳ ಮುಖ್ಯ ಸಂಗತಿ ಏನೆಂದರೆ ಈ ಹೊಸ ಕಾಯ್ದೆಯು ಇಂಡಿಯಾ ಒಕ್ಕೂಟದ ಸದಸ್ಯ ರಾಜ್ಯಗಳ ನಿಲುವುಗಳನ್ನು ಕೇಳುವುದೂ ಇಲ್ಲ, ಲೆಕ್ಕಿಸದು ಸಹ.

    ಕನ್ನಡವೂ ಸೇರಿದಂತೆ ಒಕ್ಕೂಟದ ಇತರ ಭಾಷೆಗಳ ಕತ್ತು ಪೂರ್ಣ ಹಿಸುಕುವ ಕೆಲಸವನ್ನು ಈ ಕಾಯ್ದೆ ಮಾಡಲಿದೆ. ಬರೆ ಎಳೆವಂತೆ ಹಿಂದಿಯನ್ನು ಸಿಂಹಾಸನವೇರಿಸುವ ಕಳಪೆ ಉದ್ದೇಶವೂ ಇದರಲ್ಲಿದೆ.

    ಹೀಗೆ ಮಾಡುವ ಮೂಲಕ, ಇಂಡಿಯಾದ ಯುವಜನರನ್ನು ಹೊಸ ಜಾಗತಿಕ ಸವಾಲುಗಳಿಗೆ ಶ್ಯೆಕ್ಷಣಿಕವಾಗಿ ಸನ್ನದ್ದುಗೊಳಿಸಲು ತಾನೀ ಕಾಯ್ದೆಯನ್ನು ತರಲಿರುವುದಾಗಿ ಒಕ್ಕೂಟ ಸರ್ಕಾರವು ಹೇಳಿಕೊಳ್ಳುತ್ತಿದೆ. ಕಾಯ್ದೆಯ ಪರಿಶೀಲನೆಯೀಗ ಜಂಟಿ ಸಂಸದೀಯ ಸಮಿತಿಗೆ ಹೋಗಿದೆ.

     ಸದ್ಯದ ಪರಿಸ್ಥಿತಿ ಗಮನಿಸಿದರೆ ಕರ್ನಾಟಕದ 28 ಲೋಕಸಭಾ ಸದಸ್ಯರು 12 ರಾಜ್ಯಸಭೆ ಸದಸ್ಯರು ಇದರ ಬಗ್ಗೆ ಯೋಚಿಸಿ ಮಾತನಾಡುತ್ತಾರೆಂಬ ಭರವಸೆ ಮೂಡುತ್ತಿಲ್ಲ. ಅದಕ್ಕೆ ಕಾರಣವಿಷ್ಟೆ. ಇವರಲ್ಲಿ ಬಹುತೇಕರು ದಡ್ಡಶಿಖಾಮಣಿಗಳು.

 

ಕಸಾಪ ಮತ್ತು ರಾಜ್ಯ ಶಿಕ್ಷಣ ನೀತಿ

 

      ಕಳೆದ ಒಂದೂಕಾಲು ಶತಮಾನದ ಕನ್ನಡ ಸಾಹಿತ್ಯ ಪರಿಷತ್ ನ ಇತಿಹಾಸದಲ್ಲಿ ರಾಜ್ಯ ಶಿಕ್ಷಣ ನೀತಿಯೆಂದು ಕಸಾಪ ನೇರವಾಗಿ ಕಾಣಿಸಿಕೊಂಡಿರುವ ಪ್ರಸಂಗವು ಹೆಚ್ಚಿಲ್ಲ. ಇತ್ತೀಚೆಗೆ ಥೋರಟ್ ಆಯೋಗಕ್ಕೆ ಮನವಿ ಪತ್ರವೊಂದನ್ನು ನೀಡಿದೆಯೆಂದು ಹೇಳಲಾಗುತ್ತಿದೆಯಾದರು ಆದರ ನಿಲುವೇನೆಂಬುದು ಸಾರ್ವಜನಿಕರಿಗೆ ತಿಳಿಯದಾಗಿದೆ.

    ಕಸಾಹ ಜನ್ಮ ತಾಳುವ ಮುನ್ನವೇ ಅಂದರೆ 19ನೇ ಶತಮಾನದ ಕೊನೆಯ ದಶಕದಲ್ಲಿ ಅಂದರೆ 1886 ದಲ್ಲೇ ' ಕರ್ನಾಟಕ ಭಾಷೋಜ್ಜೀವಿನಿ ಸಭಾ ' ಎಂಬ ಬಳಗವು ಆಧುನಿಕ ಕನ್ನಡ ಸಮಾಜಕ್ಕೆ ಬೇಕಾದ ಎಲ್ಲರ ಬಳಕೆಯ ಕನ್ನಡವನ್ನು ರೂಪಿಸುವ ಅಗತ್ಯವನ್ನು ಕಂಡಿತ್ತು. ಅದಕ್ಕಿದ್ದ ಮುನ್ನೋಟವೇ ಮುಂದೆ ಸಾಹಿತ್ಯ ಪರಿಷತ್ ಜನನಕ್ಕೂ ಪ್ರೇರಣೆ ನೀಡಿತು. ಕಸಾಪವು ತನ್ನ ಅಂಬೆಗಾಲಿನ ದಿನಗಳಲ್ಲಿ ಕನ್ನಡಕ್ಕಿಂತಾ ಸಂಸ್ಕ್ರತವನ್ನೇ  ಮಿಗಿಲೆಂತಲೂ, ರಾಷ್ಟ್ರಭಾಷೆಯಾಗಿ ' ನವಹಿಂದಿ ' ಯನ್ನು ಬೆಳೆಸಿ, ಎಲ್ಲರೂ ಬಲಪಡಿಸಿ ಒಪ್ಪಿಕೊಳ್ಳುವುದೆಂತಲೂ ಅಭಿಪ್ರಾಯ ತಾಳಿದ್ದುಂಟು.

    ಈ ಶ್ಯೆಶವಾವಸ್ಥೆಯ ತಿಳಿವಳಿಕೆಯ ಹಂತ ದಾಟಿದ ನಂತರ ಕಸಾಪ ತನ್ನ ಗತಿ ಲಹರಿ ಕಂಡುಕೊಂಡಿತು.

     1933ರಲ್ಲಿ ' ಪಠ್ಯ ಸುಧಾರಣಾ ಸಮಿತಿ 'ಯೊಂದನ್ನು ನೇಮಿಸಿತ್ತು. ಆದರ ಬಗ್ಗೆ ಹೆಚ್ಚು ವಿವರ ಈಗ ಸಿಗದು. ಡಾ. ಮಂಜುನಾಥ್ ( ಮಂಜು ಬಶೀರ್ )ರವರ ' ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು-ಒಂದು ಅಧ್ಯಯನ ' ಎಂಬ ಪಿ ಹೆಚ್. ಡಿ ಸಂಶೋಧನಾ ಕೃತಿಯಲ್ಲಿ ಈ ಕೆಲವು ವಿಚಾರಗಳನ್ನು ಚರ್ಚಿಸಿದ್ದಾರೆ.

    ಆದರೆ ಶಿಕ್ಷಣ ವಿಚಾರದಲ್ಲಿ ಕಸಾಪದ ಎರಡು ಹಂತದ, ಎರಡು ವಲಯದ ಕೊಡುಗೆಯನ್ನು ನಾವಿಲ್ಲಿ ಗಮನಿಸಬೇಕು.

 

 ಕಸಾಪದ ಏಕೀಕರಣಕ್ಕೂ ಮುನ್ನಿನ

ಮತ್ತು ನಂತರದ ಕೊಡುಗೆ ಏನಿದೆ?

    ಕರ್ನಾಟಕವು 1956ರಲ್ಲಿ ಭೌಗೋಳಿಕವಾಗಿ ಏಕೀಕರಣಗೊಳ್ಳುವ ಮುನ್ನವೇ ಭಾವನಾತ್ಮಕವಾಗಿ ಕನ್ನಡಿಗರನ್ನು ಬೆಸೆಯುವ ಅಂದರೆ ಕನ್ನಡ ಭಾಷೆಯ ಏಕೀಕರಣದ ಕಾರ್ಯವು ರಭಸ ಪಡೆದಿತ್ತು. ಕಸಾಪ ಸಮ್ಮೆಳನಗಳು ಪ್ರತಿ ವರ್ಷ ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಾ ಜನರನ್ನು ಬೆಸೆಯತೊಡಗಿತ್ತು. ಏಕೀಕೃತ, ಗ್ರಂಥಸ್ಥ, ಪ್ರಮಾಣಬದ್ದ, ಆಧುನಿಕ ಬಳಕೆಯೋಗ್ಯ ಲಿಪಿ-ನುಡಿ ಕನ್ನಡ ಭಾಷೆಯೊಂದರ ನೇಯ್ಗೆ ಮಾಡುವ ಪ್ರಕ್ರಿಯೆಯು ಅರಂಭವಾಗಿತ್ತು.

     ಕಸಾಪ ಇದರಲ್ಲಿ ಭಾಗಿಯಾಯಿತು. ಹೊಸ ಕನ್ನಡ ನಿಘಂಟು, ಹೊಸ ಜ್ಞಾನ ಶಿಸ್ತುಗಳನ್ನು ರೂಪಿಸುವ ಸವಾಲು, ಹೊಸ ಪಠ್ಯಗಳನ್ನು ಬರೆದು ಪ್ರಕಟಿಸುವುದು, ವ್ಯಾಕರಣ ಪುಸ್ತಕಗಳು, ಚರಿತ್ರೆ, ಶಬ್ಧಕೋಶಕ್ಕೆ ಇತರ ಭಾಷೆಗಳಿಂದ ಪದಗಳನ್ನು ಹೆಕ್ಕಿ ತಂದು ಬೆಸೆಯುವ ಭಾಷಾ ಕಮ್ಮಾರಿಕೆಯ ಕೆಲಸ ಇವೇ ಮುಂತಾದವುಗಳಲ್ಲಿ ಕಸಾಪವು ಭಾಗಿಯಾಗಿದೆ. ಆಗೆಲ್ಲ ಅನ್ಯಭಾಷೆಯ ಎವರಲು ಪದಗಳ ವಿಚಾರ ಬಂದಾಗ ಇಂಗ್ಲೀಷೋ ಇಲ್ಲ ಸಂಸ್ಕ್ರತವೊ ಎಂದಾಗ ಕಸಾಪವು ಸಂಸ್ಕ್ರತದ ಪರ ಒಲವು ತೋರಿರುವುದುಂಟು.

    ಒಂದು ಸಂಸ್ಥೆಯಾಗಿ ಕಸಾಪದ ಕೊಡುಗೆಗೆ ಮಿತಿ ಕಂಡರೂ ಸಹ ಕಸಾಪ ಸಮ್ಮೇಳನಗಳಲ್ಲಿ ಕರ್ನಾಟಕದ ಶಿಕ್ಷಣ ನೀತಿ, ಭಾಷಾ ನೀತಿಗಳ ಬಗ್ಗೆ ಬಹಳ ಚರ್ಚೆಗಳಾಗಿವೆ.

    1947 ರ ಸಮ್ಮೇಳನದಲ್ಲಿ ತಿ. ತಾ ಶರ್ಮರು 'ಕನ್ನಡಿಗರು ಇಂಗ್ಲೀಷ್ ಮೀಡಿಯಂ ' ಗೆ ಒಲವು ತೋರುತ್ತಿರುವ ಬಗ್ಗೆ ಬೇಸರ ತೋರಿದ್ದಾರೆ.  ಮಾಸ್ತಿಯವರೊಮ್ಮೆ 'ಸಂಪರ್ಕ ಭಾಷೆಯಾಗಿ ಹಿಂದಿ ಇರಲಿ, ಆದರದು ನಮಗೆ ಹೊಸ ಜಗತ್ತು ತೋರದು ' ಎಂದು ಹೇಳಿದ್ದರು.

 ಕನ್ನಡ ಭಾಷೆಯೆದಿರು ಹಿಂದಿಯೇ! ಅದು ಅಜಗಜರಂತೆ.

ಇಲ್ಲಿ ಕನ್ನಡವೇ ಆನೆ.

ಇಂಗ್ಲೀಷ್ ಆಗ ಏಕಕಾಲದಲ್ಲಿ ಬಂಧನವೂ ಹೌದು, ಬಿಡುಗಡೆಯೂ ಹೌದೆಂಬತ್ತಿತ್ತು.

    ಶಿಕ್ಷಣದಲ್ಲಿ ಇಂಗ್ಲೀಷಿನ ದರ್ಬಾರೇ ನಡೆಯುತ್ತಿತ್ತು. ಅದರ ನಡುವೆಯೂ ಶಿಕ್ಷಣದಲ್ಲಿ ಕನ್ನಡ ಮೆರೆಸುವ ಪ್ರಯತ್ನಗಳು ಕಸಾಪ ಪರಿಧಿಯಿಂದ ಆಚೆಗೂ ನಡೆದವು. ಶಿವರಾಮ ಕಾರಂತರೊಮ್ಮೆ ಬೆಂಗಳೂರಿನ ನ್ಯಾಷನಲ್ ಹ್ಯೆಸ್ಕೂಲಿಗೆ ವಿಜ್ಞಾನ ಪಠ್ಯಗಳನ್ನು ಕನ್ನಡ ಭಾಷೆಯಲ್ಲಿ ಸಿದ್ದಪಡಿಸಿ ನೀಡಿದ್ದರು. ಉನ್ನತ ಶಿಕ್ಷಣದಲ್ಲೂ ಕನ್ನಡ  ಅತ್ಮವಿಶ್ವಾಸದಿಂದ ಮುನ್ನಡಿಯಿಡುತ್ತಿತ್ತು. 1960 ರ ದಶಕದ ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗದ  ಪಠ್ಯಗಳ ಪಟ್ಟಿಯಲ್ಲಿ ಡಜನ್ ಗಟ್ಟಲೆ ವಿಜ್ಞಾನ, ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಪಟ್ಟಿ ಕಾಣಸಿಗುತ್ತವೆ. 1980ರ ದಶಕದ ತನಕ ಮ್ಯೆಸೂರಿನ ಕೇಂದ್ರ ಆಹಾರ ಸಂಶೋಧನಾ ಕೇಂದ್ರವು 'ಆಹಾರ ವಿಜ್ಞಾನ ' ಎಂಬ ಕನ್ನಡದ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿತ್ತು.     ಆರೋಗ್ಯ, ಆಹಾರ, ದ್ಯೆಹಿಕ ಸ್ಥಿತಿಗತಿ, ಪೌಸ್ಟಿಕಾಂಶಗಳ ವಿಚಾರಗಳೆಲ್ಲ ಸರಳ ಅಚ್ಚ ಕನ್ನಡದಲ್ಲಿ ಅದೆಷ್ಟು ಸೊಗಸಾಗಿ ಬರೆಯಲ್ಪಟ್ಟಿವೆ ಗೊತ್ತೆ !

    ಕರ್ನಾಟಕದ ಬಹುತೇಕ ಋಲ್ಲ ವಿಶ್ವವಿದ್ಯಾಲಯಗಳ ಪ್ರಸಾರಾಂಗದ ಪ್ರಕಟಿತ ಕೃತಿಗಳ ಪಟ್ಟಿಯನ್ನೊಮ್ಮೆ ನೋಡಿದರೆ ಸಾಕು, ಎಷ್ಟೆಲ್ಲಾ ಜ್ಞಾನ ಶಿಸ್ತುಗಳನ್ನು ತನ್ನದಾಗಿಸಿಕೊಳ್ಳಬಲ್ಲ ಅಂತಃಶಕ್ತಿಯನ್ನು ನಮ್ಮ ಕನ್ನಡವು ಪಡೆದಿದೆ ಅನಿಸದಿರದು. ಆದರೀಗ ಅದೇ ವಿವಿಗಳಲ್ಲಿ ಕನ್ನಡವನ್ನು ಕಾಣೆಯಾಗಿಸಲಾಗಿದೆ.

    ಗೋಕಾಕ್ ವರದಿಯ ಚಳವಳಿಯು ಆದ ನಂತರ ಒಮ್ಮೆ ಪತ್ರಕರ್ತ ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್ ಮುಂತಾದವರು ಸೇರಿ ಚರ್ಚಿಸುವಾಗ ' ಸರ್ಕಾರವನ್ನು ಕೇಳಿದರೆ ಈಗ ಮತ್ತೊಂದು ಸಮಿತಿ ರಚಿಸಲಿಕ್ಕಿಲ್ಲ, ಆದ್ದರಿಂದ ಕನ್ನಡದ ಗಣ್ಯರು, ನ್ಯಾಯಾಧೀಶರು, ಸಾಹಿತಿಗಳು, ಕಲಾವಿದರು ಸಾರ್ವಜನಿಕರೇ ಸೇರಿ ಒಂದು ತಜ್ಞರ ಸಮಿತಿ ರಚಿಸಿ ರಾಜ್ಯ ಭಾಷೆ, ಮಾಧ್ಯಮದ ಬಗ್ಗೆ ವರದಿ ಸಲ್ಲಿಸಲು ಹೇಳಿದರೆ ಹೇಗಿರುತ್ತದೆ ' ಎಂದು ಶಿಕ್ಷಣ ನೀತಿಯ ಕುರಿತು ಶಿಫಾರಸು ಮಾಡುವ ಬಗ್ಗೆ ಚರ್ಚಿಸಿರುತ್ತಾರೆ ( ಪುಟ 7-9,ಕೃತಿ- ಕನ್ನಡದ ತೇಜಸ್ಸು, ಸಂಪಾದಕರು ನರಸಿಂಹಮೂರ್ತಿ ಹಳೇಹಟ್ಟಿ ಮತ್ತು ಕಿಶೋರ್ ಚಿಂತಾಮಣೆ).

ಕರ್ನಾಟಕದ ಹಲವೆಡೆ ಇಂತಹ ಇನ್ನೂ ಹಲವು ಪ್ರಯತ್ನಗಳು ಸಹಜವಾಗಿಯೇ ನಡೆದಿರುತ್ತವೆ.

ಕನ್ನಡವು ತನ್ನಿಂತಾನೆ ದುರ್ಬಲ ಭಾಷೆಯಲ್ಲ. ಆದರೆ ಅದರ ಕತ್ತು ಹಿಸುಕಿ ನಿತ್ರಾಣಗೊಳಿಸಲಾಗುತ್ತಿದೆ.

    ಇಂಗ್ಲೀಷ್ ಗೆ ಕರ್ನಾಟಕದ ಶಿಕ್ಷಣ ನೀತಿಯ ಚಾಲನಾಚಕ್ರ ಹಿಡಿಯುವ ಸ್ಥಾನವೀಗಲೂ ಅಭಾದಿತ. ಉನ್ನತ ಶಿಕ್ಷಣವೆಲ್ಲವೂ ಇಂಗ್ಲೀಷ್ ನಲ್ಲೇ ಇರುವ ಕಾರಣ ಪ್ರಾಥಮಿತ ಹಂತದಲ್ಲೂ  ಸಹಜವಾಗಿ ಇಂಗ್ಲೀಷೇ ಜನರ ಆದ್ಯತೆಯಾಗುತ್ತಿದೆ. ಅಷ್ಟಲ್ಲದೆ ಸಿಬಿಎಸ್ ಸಿ, ಐಸಿಎಸ್ ಸಿ, ಸ್ಟೇಟ್ ಸಿಲಬಸ್ ಇವೇ ಮುಂತಾದ ಗೋಜಲುಗಳು ಕರ್ನಾಟಕದ ಶಿಕ್ಷಣ ನೀತಿಗೆ ಖಚಿತ ಫೋಕಸ್ ಇರದಂತೆ ಮಾಡಿವೆ.

   ಇಂಡಿಯಾ ಒಕ್ಕೂಟದ ಕೇಂದ್ರ ಸರ್ಕಾರವೀಗ ಹಿಂದಿಯನ್ನು ರಾಜಭಾಷೆಯಾಗಿಸುವ ಕೋಮುವಾದಿ ಅಜೆಂಡಾವನ್ನೂ ಕನ್ನಡಿಗರ ಮೇಲೆ ಹೇರಿದೆ. ಇಂತಲ್ಲಿ,  ಕನ್ನಡ ಸಾಹಿತ್ಯ ಸಮ್ಮೇಳನಗಳು ಕರ್ನಾಟಕದ ಜನರಿಗೆ ಬೇಕಾದ ಶಿಕ್ಷಣ ನೀತಿ ಮತ್ತು ಭಾಷಾ ನೀತಿಗಳ ಬಗ್ಗೆ ಚರ್ಚಿಸಬೇಕು. ಆ ಬಗ್ಗೆ ನಿರ್ಣಯಗಳಾಗಬೇಕು.

   ಸರ್ಕಾರದ ತೀರ್ಮಾನಗಳು ಜನರ ನಡುವಿನಿಂದ ಹೊರಡಬೇಕಿದೆ. ಕನ್ನಡವನ್ನು ಕೇವಲ ಶಿಕ್ಷಣದ ಭಾಷೆಯಾಗಿ ಮಾತ್ರವಲ್ಲದೆ, ಬದುಕು ಕಟ್ಟಿಕೊಳ್ಳುವ ಭಾಷೆಯಾಗಿಯೂ ಕರ್ನಾಟಕದಲ್ಲಿ ಮರುಸ್ಥಾಪನೆ ಮಾಡಬೇಕಿದೆ.

   ನಾವೀಗ ಯಾವ ವಿಷಯವನ್ನೇ ಆಗಲಿ ಒಂದರಿಂದ ಇನ್ನೊಂದನ್ನು ಬೇರೆಯಾಗಿಸಿ ನೋಡಲಾಗದ ಸನ್ನಿವೇಶದೆದಿರು ಇದ್ದೇವೆ.  ಕೇಂದ್ರ-ರಾಜ್ಯ ಸಂಬಂಧಗಳನ್ನು ಸಮಾನ ಅವಕಾಶ,  ಗೌರವದ ಬದಲಾಗಿ ಧಣಿ-ಜೀತದಾಳಿನ ಲೆವೆಲ್ ಗೆ ಇಳಿಸಲಾಗಿದೆ.

   ಜಿ ಎಸ್ ಟಿ ತೆರಿಗೆ ಪಾಲಿನ ಹಂಚಿಕೆ, ಕೃಷಿ ನೀತಿ, ಸಹಕಾರ ಇಲಾಖೆ, ಪರಿಸರ, ಖನಿಜ ಸಂಪತ್ತಿನ ಮೇಲಿನ ಹಕ್ಕು, ಭಾಷಾ ನೀತಿ, ಬ್ಯಾಂಕಿಂಗ್ ಹೀಗೆ ಯಾವ ವಿಭಾಗದಲ್ಲೂ ಕರ್ನಾಟಕಕ್ಕೀಗ ತನ್ನದೇ ನಾಡಲ್ಲಿ ಸ್ವತಂತ್ರವಿಲ್ಲವಾಗಿದೆ. ಇದು ಬ್ರಿಟೀಷರ ವಸಾಹತುಶಾಹಿ ದಬ್ಬಾಳಿಕೆಯ ಮುಂದುವರೆದ ದೆಹಲಿ ದಬ್ಬಾಳಿಕೆಯಾಗಿ ರೂಪಾಂತರಗೊಳ್ಳುತ್ತಿದೆ.

    ನಾವೀಗ ಕೇವಲ ಶಿಕ್ಷಣ ಭಾಷಾ ಮಾಧ್ಯಮದ ವಿಚಾರ ಮಾತ್ರವಲ್ಲದೆ ಇತರ ವಿದ್ಯಮಾನಗಳನ್ನೂ ಒಂದೆಡೆಯಿರಿಸಿ ಪರಿಹಾರ ಹುಡುಕಬೇಕಾದ ಕಾಲಗಟ್ಟವಿದು.

   ಕರ್ನಾಟಕದ ಸ್ವಾಯತ್ತತೆಗಾಗಿ, ಫೆಡರಲಿಸಂನ ನಿಜ ಸ್ವರೂಪವನ್ನು ಉಳಿಸಲು ಒಗ್ಗೂಡಬೇಕಾದ ಸಮಯವಿದು. ನಮ್ಮ ಆರೆಂಟು ದಶಕಗಳ ಡೆಮಾಕ್ರಸಿಯ ಬದುಕಿನ ತಿಳಿವಳಿಕೆಯನ್ನು ಸಂಯೋಜಿಸಿಕೊಂಡು ಎನನ್ನು ಮಾತನಾಡುತ್ತೇವೆಯೋ ಅದು ಮುಂದಿನ ಹಲವು ದಶಕಗಳ ಕಾಲದ ನಮ್ಮ ಸ್ವಾತಂತ್ರ ಇಲ್ಲವೆ ದಾಸ್ಯದ ದಾರಿ ನಿರ್ಧರಿಸಲಿದೆ.

   ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವ ಲಕ್ಷಾಂತರ ಜನರು ಆ ಸಂದರ್ಭದಲ್ಲಿ ತೋರಿಸುವ ಕನ್ನಡಾಭಿಮಾನವನ್ನು ಹೊರಗಿನ ನಿತ್ಯ ಲೌಕಿಕ ಬದುಕಿನಲ್ಲೂ ಕನ್ನಡದ ಬಳಕೆಯ ಮೂಲಕ, ಬಳಕೆಗಾಗಿ ಅಗ್ರಹಿಸುವ ಮೂಲಕ ತೋರಬೇಕು.

    ಕನ್ನಡವೊಂದು ಜೀವನದಿಯಾಗಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಹರಿಯುತ್ತಿರಬೇಕು. ಸರ್ಕಾರದ ಶಿಕ್ಷಣ ನೀತಿಯು ಕನ್ನಡ ಭಾಷೆಯ ನಿಜ ಸಾಮರ್ಥ್ಯವನ್ನು ಪರಿಗಣಿಸಬೇಕು. ಕನ್ನಡಕ್ಕಿರುವ ಅಡೆತಡೆಗಳು, ಹಿಂದಿಯ ಗುಲಾಮಗಿರಿ, ಸಂಸ್ಕ್ರತದ ಸೆರೆವಾಸವನ್ನು ನಿವಾರಿಸಬೇಕು.

    ಕಸಾಪ ಸಮ್ಮೇಳನಗಳು ಇದನ್ನು ಚೋರುದನಿಯಲ್ಲೇ ಹೇಳಬೇಕು. ಇಲ್ಲದಿದ್ದಲ್ಲಿ ಈ ಬಿಕ್ಕಟ್ಟಿನ ಸಮಯದ ಎಲ್ಲ ಯಶಸ್ವಿ ಸಾಹಿತ್ಯ ಸಮ್ಮೇಳನಗಳು ಆತ್ಮವಂಚನೆಯ ಗುಂಪುಗೂಡುವಿಕೆಯಾಗಷ್ಟೇ ಭಾಸವಾಗುತ್ತವೆ.

   (ದಿನಾಂಕ 23-12-2025 ರಂದು ಮಧುಗಿರಿಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ವಿಚಾರ )