ಅಪ್ಪನ ಗೆಣೆಕಾರರು 

ಅಪ್ಪನ ಗೆಣೆಕಾರರು 

ಅಪ್ಪನ ಗೆಣೆಕಾರರು 

ಕಳೆದ ಭಾನುವಾರದ ‘ಕಿನ್ನರಿ’ಯಲ್ಲಿ ಅಪ್ಪಂದಿರ ದಿನವೇ ನೆಪವಾಗಿ ಅಪ್ಪನನ್ನು ಕಡಲಿಗೆ ಹೋಲಿಸಿ ಅಕ್ಷತಾ .ಕೆ.ಬರೆದ ಆಪ್ತ ಬರಹವನ್ನು ಓದಿದ್ದೀರಿ. ಹಾಗೇ ಗಂಡು ಮಕ್ಕಳು ಅವರ ಅಪ್ಪಂದಿರನ್ನು ಕಾಣುವ ಬಗೆಯೇ ಬೇರೆಯ ರೀತಿ ಇರಬಹುದು ಎಂಬುದಕ್ಕೆ ನಮ್ಮ ನಡುವಣ ‘ನಡಿಗೆ ಧ್ಯಾನಿ’ ರಹಮತ್ ತರೀಕೆರೆ ಅವರ ಅಪ್ಪನನ್ನು ಕಂಡುಂಡ ಬಗೆ ಇಲ್ಲಿದೆ , ದಯಮಾಡಿ ಓದಿ ಆನಂದಿಸಿ, ಅನುಭಾವಿಸಿ- ಸಂಪಾದಕ 


ಅಪ್ಪನ ಗೆಣೆಕಾರರು 


ಅಪ್ಪ ಕಮ್ಮಾರ ಮಾತ್ರವಲ್ಲ, ಮಾವಿನಚೇಣಿ ಹುಣಸೆಚೇಣಿ ದನಗಳಸಾಟಿ ಇತ್ಯಾದಿ ಸೀಜನಲ್ ಕೆಲಸಗಳನ್ನು ಕೂಡ ಮಾಡುತ್ತಿದ್ದ ವ್ಯವಹಾರಸ್ಥನಾಗಿದ್ದನು. ಇದರಿಂದ ಅವನಿಗೆ ಸುತ್ತ ಇಪ್ಪತ್ತು ಹಳ್ಳಿಯ ಜನರ ಜತೆಗೆ ನಂಟು. ಅವನು ಮನುಷ್ಯರನ್ನು ಗಳಿಸಿದ್ದನು. ಅವನು ಗಳಿಸಿದ ಮನುಷ್ಯರಲ್ಲಿ ಎಲ್ಲ ಜಾತಿ ರ‍್ಮದ ಜನರೂ ಇದ್ದರು. ಇವರಲ್ಲಿ ಕೆಲವರು ಕುಲುಮೆಗೆ ಲಗತ್ತಾಗಿದ್ದ ಬಡಗಿಯೇ ಮೊದಲಾದ ಉಪಕಸುಬುದಾರರು. ಅಪ್ಪನ ಗೆಳೆಯರ ಗುಂಪನ್ನು ಬಂಧಿಸಿದ್ದ ಹವ್ಯಾಸಗಳೆಂದರೆ, ಶಿಕಾರಿಗೆ ಹೋಗುವುದು, ಕಾಕಂಬಿಯಿಂದ ಭಟ್ಟಿಯಿಳಿಸುವುದು, ಮೀನಿರುವ ಕೆರೆಯ ಕಾಂಟ್ರಾಕ್ಟ್ ಹಿಡಿಯುವುದು, ಮರಿ ಕೊಯ್ದು ರ‍್ಪಾಲು ಹಂಚಿಕೊಳ್ಳುವುದು, ಬಾಬಾಬುಡನಗಿರಿಗೆ ಹೋಗುವುದು, ಪರಸ್ಪರ ಸಾಲ ಕೊಟ್ಟು ಪಡೆಯುವುದು, ಮದುವೆಗಳಿಗೆ ಹೋಗಿಬರುವುದು, ಹುರಿದ ಶೇಂಗಾದ ರಾಶಿಯನ್ನು ಕರಗಿಸುವುದು, ಹೋಟೆಲಿಗೆ ಗುಂಪಾಗಿ ಹೋಗಿ ಮಸಾಲೆದೋಸೆ ತಿನ್ನುವುದು, ಟೀಕುಡಿಯುತ್ತ-ಬೀಡಿಸೇದುತ್ತ ಹರಟೆ ಹೊಡೆಯುವುದು, ಖುಶಿಯಲ್ಲಿದ್ದಾಗ ಯಾರಾದರು ಬೀಡಿ ಕೇಳಿದರೆ ಕಟ್ಟನ್ನೇ ಎಸೆದು, `ನೀನೇ ಇಟ್ಕೊಳೊ’ ಎಂದು ಉದಾರತೆ ತೋರುವುದು, ತಾವು ಮಾಡಿದ ಕಿಲಾಡಿತನದ ಪ್ರಸಂಗಗಳನ್ನು ನೆನೆದು ಗಹಗಹಿಸುವುದು-ಇತ್ಯಾದಿ. 


ಅಪ್ಪನೂ ಅವನ ಸ್ನೇಹಿತರೂ ನೆನೆಯುತ್ತಿದ್ದ ರಸಪ್ರಸಂಗಗಳಲ್ಲಿ ಸೊಕ್ಕು ತೋರಿಸುತ್ತಿದ್ದ ಪಟೇಲನೊಬ್ಬನಿಗೆ ಮೋಸ ಮಾಡಿದ್ದೂ ಒಂದು. ಒಮ್ಮೆ ಗುಡ್ಡದಮನೆಯ ಪಟೇಲನು ಕುಲುಮೆಗೆ ಕಬ್ಬಿಣದ ನೇಗಿಲನ್ನು ಹಣಿಸಲು ತಂದನು. ಅದನ್ನು ಕುಲುಮೆಯ ಮುಂದೆ ಬಂಡಿಯಿಂದ ಕೆಳಕ್ಕೆ ಎತ್ತಿ ಬಿಸಾಡಿ, `ಎ ಸಾಬಣ್ಣ, ಪ್ಯಾಟೀಗೆ ಹೋಗಿ ಬರೋದರೊಳಗೆ ಕೆಲಸ ಆಗಬೇಕು’ ಎಂದು ಹುಕುಂ ಮಾಡಿ, ಭತ್ತಮಿಲ್ ಮಾಡಿಸಲು ಬಜಾರಿನೊಳಗೆ ಹೋದನು. 


ಆತ ಸಾಮಗ್ರಿಗಳನ್ನು ಎಸೆದುಹೋಗುವುದು, ಏಕವಚನದಲ್ಲಿ ಉಚಾಯಿಸಿ ಮಾತಾಡುವುದು ಅಪ್ಪನಿಗೆ ಇಷ್ಟವಾಗುತ್ತಿರಲಿಲ್ಲ. ಪಟೇಲನು ತಕ್ಕ ಮಜೂರಿ ಕೊಡುವುದಕ್ಕೂ ಚೌಕಾಸಿ ಮಾಡುತ್ತಿದ್ದನು. ಅವನಿಗೆ ಬುದ್ಧಿಕಲಿಸಲು ಅಪ್ಪ ಕಾಯುತ್ತಿದ್ದನು. ಪಟೇಲನು ಬಿಸುಟಿ ಹೋದ ನೇಗಿಲನ್ನು ಮರದ ಈಚಿನಿಂದ ಬಿಚ್ಚಲು, ಸ್ನೇಹಿತನಾದ ಬಡಗಿ ಮುನಿಯಪ್ಪನಿಗೆ ಹೇಳಿದನು. ಮುನಿಯಪ್ಪ, ಸ್ಪ್ಯಾನರ್ ಹಿಡಿದು ಮಣ್ಣಿನಿಂದ ತುಕ್ಕುಗಟ್ಟಿದ್ದ ನಟ್ಟುಬೋಲ್ಟುಗಳನ್ನು ಸಡಿಲಗೊಳಿಸಿ, ಈಚಿನಿಂದ ಕಬ್ಬಿಣದ ನೇಗಿಲನ್ನು ತೆಗೆಯುವಾಗ, ಈಚಿನ ಸಣ್ಣಚಕ್ಕೆ ಹಾರಿ ಘಮ್ಮನೆ ಸುಗಂಧ ಹೊಮ್ಮಿತು. ಈಚು ಶ್ರೀಗಂಧದ್ದಾಗಿತ್ತು. 


ಕೂಡಲೇ ಅಪ್ಪನೂ ಮುನಿಯಪ್ಪನೂ ಏನೊ ಮಾತಾಡಿಕೊಂಡರು. ಮುನಿಯಪ್ಪ ಮನೆಗೆ ಹೋದವನೇ ಶಿಕಾರಿಗೆ ಹೋಗುವಾಗ ಉಡುತ್ತಿದ್ದ ಖಾಕಿ ರ‍್ಟು-ಪ್ಯಾಂಟನ್ನು ಧರಿಸಿ, ಕೆಂಪುಬೆಲ್ಟು ಕಪ್ಪುಶೂ ಹ್ಯಾಟುಗಳಿಂದ ಅಲಂಕೃತನಾಗಿ ಸೈಕಲ್ಲೇರಿಕೊಂಡು ಬಂದನು. ಮೈಲಿಕಲೆಯ ಮುಖದಿಂದ ಗಜಲ್ ಗಾಯಕ ಗುಲಾಮಲಿ ತರಹ ಇದ್ದ ಮುನಿಯಪ್ಪನೇ ಇವನು ಎಂದು ನಂಬಲು ನಮಗೇ ಕಷ್ಟವಾಯಿತು. ಕಬ್ಬಿಣದ ನೇಗಿಲು ಹಣಿದು ಸಿದ್ಧವಾಯಿತು. ಪಟೇಲನ ಎದುರಿಗೆ ಅದನ್ನು ಮತ್ತೆ ಈಚಿಗೆ ಕೂರಿಸಲು ಯತ್ನಿಸುವಾಗ, ಮುನಿಯಪ್ಪ ಹಾಜರಾಗಿ ಮಾಲನ್ನು ಸೀಜ್ ಮಾಡಿದನು. ಪಟೇಲನು ಕಕ್ಕಾಬಿಕ್ಕಿಯಾಗಿ `ಸ್ವಾಮಿ, ತ್ವಾಟದ ಬೇಲಿಯೊಳಗಿತ್ತು ಗಿಡ. ಗೊತ್ತಿಲ್ಲದೆ ಹುಡುಗರು ಕಡಿದು ಹಾಕಿಬಿಟ್ಟಿದ್ದಾರೆ, ಇಂದೊಂದ್ಸಲ ಬಿಟ್ಟುಬಿಡಿ’ ಎಂದು ವಿನಂತಿಸಿದನು. `ಇಲ್ಲಿಲ್ಲ, ಇದು ಸ್ಮಗ್ಲಿಂಗ್ ಕೇಸಾಗುತ್ತದೆ. ಏನು ಹೇಳಬೇಕೊ ಅದನ್ನೆಲ್ಲ ಕರ‍್ಟಲ್ಲಿ ಹೇಳಿ’ ಎಂದು ಮುನಿಯಪ್ಪ ಕಣ್ಣುಕೆಂಪಗೆ ಮಾಡಿಕೊಂಡು ಜಬರದಸ್ತಿ ಮಾತಾಡಿದನು. ಪಟೇಲನ ಮುಖ ಬತ್ತಿಹೋಯಿತು. ಅಪ್ಪ ಪಟೇಲನನ್ನು ಕಣ್ಸನ್ನೆಯಲ್ಲಿ ಕರೆದು ಕುಲುಮೆಯ ಹಿಂದಕ್ಕೆ ಕರೆದೊಯ್ದು ಮಾತುಕತೆಯಾಡಿದನು. ಐವತ್ತು ರೂಪಾಯಿ ದಂಡ ತೆತ್ತು ಪಟೇಲನು ಈಚನ್ನು ಬಿಟ್ಟು ಕಬ್ಬಿಣದ ನೇಗಿಲನ್ನು ತೆಗೆದುಕೊಂಡು ಹೋದನು. ಅಪ್ಪನೂ ಮುನಿಯಪ್ಪನೂ ರ‍್ಧರ‍್ದ ಹಂಚಿಕೊಂಡರು. ಈಚನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಲಾಯಿತು. ಹಬ್ಬದ ದಿನ ಅದನ್ನು ಕಪ್ಪುಹೆಂಚಿನ ಒರಟು ಬೆನ್ನಮೇಲೆ ತೇಯುತ್ತಿದ್ದರೆ, ಮನೆತುಂಬ ಪರಿಮಳ. ಇದು ಸೂಫಿಸಂತರ ಪುಣ್ಯತಿಥಿಗಳಂದು ಮಾಡುವ ಉತ್ಸವಗಳಲ್ಲಿ ಬಳಕೆಯಾಗುತ್ತಿತ್ತು. ಹಸಿರುಬಾವುಟಕ್ಕೆ ತೇದಗಂಧವನ್ನು ಹಸ್ತಕ್ಕೆ ಹಚ್ಚಿಕೊಂಡು ಎರಡೂ ಬದಿಯಿಂದ ಮುದ್ರೆ ಮಾಡಿ, ಬೇವಿನ ಮರಕ್ಕೆ ನಾವು ಏರಿಸುತ್ತಿದ್ದೆವು.
ಮುನಿಯಪ್ಪನ ತಂಗಿ ಪಟ್ಟಮ್ಮಾಳ್ ಅಮ್ಮನ ಗೆಳತಿಯರಲ್ಲಿ ಒಬ್ಬಳು. ಇಬ್ಬರೂ ತಮಿಳು ಸಿನಿಮಾ ನೋಡುತ್ತಿದ್ದರು. ಹಗಲುಹೊತ್ತು ಚೌಕಾಬಾರ ಆಡುತ್ತಿದ್ದರು. ಎಲೆಯಡಿಕೆ ಜಗಿಯುತ್ತಿದ್ದರು. ಕಾಡಿಗೆ ಸೀಗೆಸೊಪ್ಪು ಕೊಯ್ಯಲು ಧೋಟಿ ಹಿಡಿದು ಹೋಗುತ್ತಿದ್ದರು. ಅಮ್ಮ ಪಟ್ಟಮ್ಮಾಳಿಗೆ `ಪಟ್ಟಾ, ವಾಡಿಯಿಂಗೇ, ಯುಂಗಳಕು ರೊಂಬು ತಿಮಿರು’ ಎಂದರೆ `ಏ ಜುಲೇಖಾ ಏಕ್ ಖೇಲ್ ಖೇಲೀಂಗೆ ಆಗೆ’ ಎಂದು ಪಟ್ಟಮ್ಮಾಳ್ ಹೇಳುತ್ತಿದ್ದಳು. ನಾವು ಪಟ್ಟಮ್ಮಾಳ್ ಮನೆಯಲ್ಲಿ ತಮಿಳರಿಗೆ ವಿಶಿಷ್ಟವಾದ ಆಂಬೊಡೆ, ಮೊಸರನ್ನ ಮೆಲ್ಲುತ್ತಿದ್ದೆವು. ಮುಪ್ಪು ಹಿಡಿದಿದ್ದ ಮುನಿಯಪ್ಪನನ್ನು ಅವನ ಕೊನೆಯ ದಿನಗಳಲ್ಲಿ ನೋಡಲು ಹೋದೆ. ಮುನಿಯಪ್ಪ ಅಪ್ಪನನ್ನು ನೆನೆದು `ತೇರ ಬಾವಾ ಬಡಾ ದಿಲದಾರ್ ಆದ್ಮಿ ಥ. ಅಚ್ಚೆ ಆದ್ಮಿಯಾನ್ ಸಬ್ ಚಲೇಗಯೆ’ ಎಂದು ಉಸಿರುಗರೆದನು. 


ರೈಲ್ವೆಪೋಲಿಸ್ ಆಗಿ ನಿವೃತ್ತರಾಗಿದ್ದ ರಾಮಯ್ಯ, ಆರಡಿ ಎತ್ತರದ ಕಪ್ಪನೆಯ ಬೀಟೆವಿಗ್ರಹ. ಗಡಸುದನಿ. ನಿವೃತ್ತಿ ಬಳಿಕ, ಕಾಡಿನಲ್ಲಿ ರ‍್ಕಾರ ಮಂಜೂರು ಮಾಡಿದ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದನು. ಹೊಲದಲ್ಲೇ ಮನೆ. ಮನೆಯ ಆಸುಪಾಸು ಕಾಡುಪ್ರಾಣಿಗಳು ಓಡಾಡುತ್ತಿದ್ದವು. ಅಪ್ಪ ಅಲ್ಲಿಗೆ ಶಿಕಾರಿಗೆಂದು ಹೋಗುತ್ತಿದ್ದನು. ಅಪ್ಪ ರಾಮಯ್ಯ ಸೇರಿ ರಾತ್ರಿಶಿಕಾರಿ ಮಾಡಿದರೆ, ಹಗಲೆಲ್ಲ ಬೇಟೆಯಾಡಿದ ಮಾಂಸದಿಂದ ಸಾರು, ಹುರಿಬಾಡಿನ ಔತಣ. ಅಪ್ಪ ಮನೆಗೆ ಮಾಂಸ, ಅಣಬೆ, ಕಾಡುಗೆಣಸು, ಕಳಲೆ, ಕಟ್ಟಿಗೆ, ರಾಗಿಯನ್ನು ಬಂಡಿಯಲ್ಲಿ ಹೇರಿಕೊಂಡು ಮರಳುತ್ತಿದ್ದನು. 


ಕುಂಬಾರ ದೇವೀರಣ್ಣನು ಅಪ್ಪನಿಗೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೇ ಆಪ್ತನು. ಅವನ ಹೆಂಡತಿ ಪರ‍್ವತಮ್ಮ ಅಮ್ಮನ ಸ್ನೇಹಿತೆ. ದೇವಿರಣ್ಣನ ಮಗ ತಿಪ್ಪೇಶಿ ನಮ್ಮ ಹೊಲಕ್ಕೆ ಬಿತ್ತನೆದಿನ ಎತ್ತುಗಳ ಸಮೇತ ಬಂದು ಕೆಲಸ ಮುಗಿಸಿಕೊಟ್ಟು ಹೋಗುತ್ತಿದ್ದನು. ಸುಗ್ಗಿಗೆ ಬಂದರೆ, ತುಳುಮೆ ಮುಗಿಸಿ ಕಣದಿಂದ ದವಸ ಪಣತಕ್ಕೆ ತುಂಬುವ ತನಕ ಇರುತ್ತಿದ್ದನು. ಅಪ್ಪ ಅಮ್ಮನ ಈ ಸ್ನೇಹವನ್ನು ಭದ್ರಗೊಳಿಸಲು ನಾನೂ ಒಂದು ತಂತುವಾದೆ. ಅಮ್ಮ ನನಗೆ ಹಾಲುಬಿಡಿಸಿದಾಗ, ಪರ‍್ವತಕ್ಕನ ಮಡಿಲಿಗೆ ಹಾಕಿದಳು. ನನಗೆ ತಾಯ್ತನವೆಂದರೆ ಅಮ್ಮನಿಗಿಂತ ಮೊದಲು ನೆನಪಾಗುವುದು ಪರ‍್ವತಕ್ಕನ ವಾತ್ಸಲ್ಯ ತುಂಬಿದ ಮುಖ. ಆಕೆ ನನ್ನನ್ನು ತನ್ನ ನೆಂಟರ ಮದುವೆಗೆ ಕರೆದುಕೊಂಡು ಹೋಗುತ್ತಿದ್ದಳು. ಮಠದ ಸ್ವಾಮಿಗಳಿಗೆ ಊರಲ್ಲಿ ಅಡ್ಡಪಲ್ಲಕ್ಕಿ ಅಥವಾ ಕುಂಭಾಭಿಷೇಕ ನಡೆದಾಗೆಲ್ಲ, ನಮ್ಮ ಕುಟುಂಬವನ್ನು ಆಹ್ವಾನಿಸುತ್ತಿದ್ದಳು. ಆಕೆಯ ಆಹ್ವಾನವೆಂದರೆ, ದೊಡ್ಡ ಬಾಳೆಲೆಯ ಮೇಲೆ, ಹೋಳಿಗೆ-ಕಾಯಿಹಾಲು, ಕಡಲೆಬೇಳೆ ಕೋಸಂಬರಿ, ಅಕ್ಕಿಪಾಯಸ, ಚಿತ್ನಾನ್ನ, ಸುಟ್ಟ ಹುರುಳಿಹಪ್ಪಳ, ಎಳ್ಳಿಕಾಯಿ ಉಪ್ಪಿನಕಾಯಿಯ ರ‍್ಜರಿ ಊಟ. ಪರ‍್ವತಕ್ಕ ಆಗಾಗ್ಗೆ ದೇವೀರಣ್ಣನ್ನು ಬಿಟ್ಟು ತನ್ನೊಬ್ಬ ಪ್ರಿಯಕರನ ಜತೆ ಕಣ್ಮರೆಯಾಗುತ್ತಿದ್ದಳು. ದೇವೀರಣ್ಣ ಹತಾಶನಾಗಿ ನಮ್ಮ ಮನೆಗೆ ಬಂದು ವಾರಗಟ್ಟಲೆ ಶೋಕಾಚರಣೆ ಮಾಡುತ್ತಿದ್ದನು. ನನ್ನ ತಮ್ಮನೊಬ್ಬ ತೀರಿಕೊಂಡಾಗ, ದೇವಿರಣ್ಣ ಪರ‍್ವತಕ್ಕ ದುಃಖ ಪ್ರಕಟಿಸುವುದನ್ನು ಕಂಡು ಮಣ್ಣಿಗೆ ನೆರೆದ ನಮ್ಮ ರಕ್ತಸಂಬಂಧಿಗಳು ಬೆರಗಾಗಿ ನೋಡಿದರು.


ಅಪ್ಪನ ಗೆಳೆಯರಾದ ಫಾರೆಸ್ಟಗರ‍್ಡ್ ಸಿದನಾಯಕ, ಕರ‍್ಪೆಂಟರ್ ಮುನಿಯಪ್ಪ, ಪೋಲಿಸ್ ರಾಮಯ್ಯ, ಕುರುಬರ ತಿಮ್ಮಣ್ಣ, ಬೆಟ್ಟದಾವರಕೆರೆ ದೇವೀರಣ್ಣ, ಗೊಲ್ಲರ ಹಾಲಪ್ಪ, ಗಾಳಿಹಳ್ಳಿಯ ಮೈಲಾರಣ್ಣ, ಕಂಟ್ರಾಕ್ಟರ್ ಪಿಲಿಪ್ಸ್, ನಾಟಾ ಕೆಲಸದ ಫಕ್ರುದ್ದೀನ್ ಸಾಬ್ ಮೊದಲಾದವರೆಲ್ಲ ತೀರಿಹೋಗಿ, ಈಗ ಉಳಿದಿರುವವರು ಇಬ್ಬರು. ಒಬ್ಬ ಬಸವನಹಳ್ಳಿ ನಿಂಗಣ್ಣ, ಮತ್ತೊಬ್ಬ ಸುಡುಗಾಡು ಸಿದ್ಧರ ಬಸಣ್ಣ. ನಮ್ಮೂರಿನ ಬಡಾವಣೆಯೇ ಆಗಿರುವ ಉಪ್ಪಾರ ಬಸವನಹಳ್ಳಿಯ ನಿಂಗಣ್ಣ, ತನ್ನ ತೋಟದ ಬಾಳೆಕಾಯಿ, ವೀಳ್ಯದೆಲೆಗಳನ್ನು ಸಂತೆಗೆ ಹಾಕುತ್ತಿದ್ದವನು. ಪೇಟೆಗೆ ಬಂದಾಗಲೆಲ್ಲ ಮಸಾಲೆದೋಸೆ ತಿನ್ನುವ ಅಭ್ಯಾಸವಿದ್ದರಿಂದ, ಅಪ್ಪ ಇವನಿಗೆ ಮಸಾಲಿ ಎಂದು ನಾಮಕರಣ ಮಾಡಿದ್ದನು. ಈಚೆಗೆ ಊರಿಗೆ ಹೋದಾಗ ನಿಂಗಣ್ಣನ ಭೇಟಿಗೆಂದು ಮಸಾಲೆದೋಸೆ ಪರ‍್ಸೆಲ್ ಮಾಡಿಕೊಂಡು ಹೋದೆ. 90 ರ‍್ಷ. ಗಟ್ಟಿಮುಟ್ಟಾಗಿದ್ದನು. ಗಡ್ಡಬಿಟ್ಟು ಸಂತನಂತಾಗಿದ್ದನು. ಆದರೆ ಕಿವಿ ಕೇಳಿಸುತ್ತಿರಲಿಲ್ಲ. ಅವನ ಕಿವಿಯ ಬಳಿ ಬಾಯಿಟ್ಟು'ನಾನು ಕುಲುಮೆ ದಸ್ತಣ್ಣನ ಮಗ' ಎಂದು ಕೂಗಿ ಹೇಳಿದೆ. ಅಪ್ಪನ `ಮಹಮದ್ ದಸ್ತಗಿರ್ ಸಾಹೇಬ್’ ಎಂಬ ಅರಬಿ ಫಾರಸಿ ಶಬ್ದಗಳಿಂದ ಕೂಡಿದ ಬಗ್ದಾದಿನ ಸೂಫಿಸಂತನ ಹೆಸರು, ಜನರ ಬಾಯಲ್ಲಿ ದಸ್ತಣ್ಣನಾಗಿ ಸ್ಥಳೀಕರಣಗೊಂಡು ಚುಟುಕಾಗಿತ್ತು. ನಿಂಗಣ್ಣ ನನ್ನ ಗುರುತು ಹಿಡಿಯಲಿಲ್ಲ. ತೆಗೆದುಕೊಂಡು ಹೋಗಿದ್ದ ತಿನಿಸನ್ನೂ ಸ್ವೀಕರಿಸಲಿಲ್ಲ. ದಯವಿಟ್ಟು ಹೋಗು ಕಾಡಿಸಬೇಡ ಎಂಬಂತೆ ಮತ್ತೆಮತ್ತೆ ಕೈಮುಗಿಯತೊಡಗಿದನು. ಆಗ ಪಕ್ಕದ ಮನೆಯವರು ಬಂದು, ಅವನಿಗೆ ನೆನಪಿನ ಶಕ್ತಿಯಿಲ್ಲವೆಂದರು; ಬಸವನಹಳ್ಳಿಯು, ತರೀಕೆರೆ ಪಟ್ಟಣದ ಭಾಗವಾದ ಬಳಿಕ, ಅವನ ತೋಟಕ್ಕೆ ಕೋಟ್ಯಂತರ ಬೆಲೆ ಬಂದಿತ್ತು. ಮಕ್ಕಳು ಪಾಲು ಮಾಡಿಕೊಂಡು, ಅಪ್ಪನನ್ನು ಹೊರಹಾಕಿದ್ದಾರೆಂದೂ ಹೇಳಿದರು. ಮಾತುಕತೆ ಸಾಧ್ಯವಾಗದ ನಿರಾಶೆಯಿಂದ ಕೈಮುಗಿದೆ. ಮರೆವು ಮುಪ್ಪು ಕಾಯಿಲೆಗಳಿಂದ ಕುಟುಂಬದ ಅನಾದರಕ್ಕೆ ಪಾತ್ರವಾದ ಜೀವಗಳಿಗೆ ಸಾವೇ ಬಿಡುಗಡೆ ಒದಗಿಸಬೇಕೊ ಏನೊ? 


ಅಪ್ಪ ನನ್ನನ್ನು ಓದಲು ಮೈಸೂರಿಗೆ ಕಳಿಸಿದ್ದು, ಬ್ಯಾರಿಸ್ಟರ್ ಪದವಿ ಕಲಿಯಲು ಮಕ್ಕಳನ್ನು ಇಂಗ್ಲೆಂಡಿಗೆ ಕಳಿಸಿದ್ದುದಕ್ಕೆ ಸಮನಾಗಿತ್ತು. ಒಮ್ಮೆ ಮೈಸೂರಿನಿಂದ ರಜೆಗೆ ಬಂದವನು, ತೆಂಗಿನತೋಟದಲ್ಲಿ, ಮನೆಯ ಮುಂದಿದ್ದ ಮಾವಿನ ಮರದಡಿ ನೆಲದ ಮೇಲೆ, ಕಾಡುಗಲ್ಲನ್ನು ದಿಂಬು ಮಾಡಿಕೊಂಡು ಮಧ್ಯಾಹ್ನದ ನಿದ್ದೆ ತೆಗೆಯುತ್ತಿದ್ದೆ. ಎಲ್ಲೊ ಕಿವಿಯಲ್ಲಿ `ರಾಮತಣ್ಣ ಬಂದೀತಂತೆ. ಎಲ್ಲೈತಿ’ ಎಂದಂತೆಯೂ, ಅಪ್ಪ `ಒ ಅಲ್ಲಿ ಮರದ ಕೆಳಗೆ ಮಲಗಿದಾನೆ ನೋಡು’ ಎಂದಂತೆಯೂ ಸುಷುಪ್ತಿಯಲ್ಲಿ ಕೇಳಿತು. `ಏಳಪ್ಪೊ, ನಾನು ಬಸಣ್ಣ ಬಂದಿದೀನಿ’ ಎಂಬ ಕೂಗು ಕಿವಿ ಪರದೆಯನ್ನು ತಾಡಿಸಿತು. ಎದ್ದು ಕೂತೆ. ಚಂದದ ನಗುವಿನ, ಎದೆಗೆ ಪ್ರಸನ್ನತೆ ಹಾಯಿಸುವ ಸುಡುಗಾಡ ಸಿದ್ಧರ ಬಸಣ್ಣನ ಮುಖ.


``ನೆಲದ ಮ್ಯಾಲೇನೇ ಉಲ್ಡುಕೊಂಡಿದೀಯಲ್ಲಪ್ಪ. ಚಾಪೆ ಹಾಸದಲ್ಲವೇ? ಚನಗದೀಯಾ?’’ 
``ಹಿಂಗದೀನಿ ನೋಡಣ್ಣ’’ 
``ಇನ್ನೂ ಎಷ್ಟು ರ‍್ಷ ಓದು?’’
``ಇನ್ನೊಂದು ರ‍್ಷ’’ 
``ಆಮೇಲೆ?’’
`ಲಚ್ಚರ್ ಕೆಲಸ ಸಿಗಬಹುದು’’
``ಆಗಲೇಳು, ಓದು, ಎಲ್ಲೀತಂಕ ಓದ್ತೀಯೊ ಓದು. ದುಡ್ಡಿಗೆ ಚಿಂತೆ ಮಾಡಬ್ಯಾಡ. ನಾವದೀವಿ. ನಮ್ಮ ಹುಡುಗರು ಲೌಡಿಗಂಡರು ಓದಲಿಲ್ಲ ಕಣಪ್ಪ’’ 


ನನ್ನನ್ನು ಓದಿಸುವುದು ಸಾಮೂಹಿಕ ಹೊಣೆಗಾರಿಕೆ ಎಂದು ಅಪ್ಪನ ದೋಸ್ತರು ಭಾವಿಸಿದ್ದರು. ಅವರು ನಮ್ಮ ಕುಟುಂಬದ ಕಷ್ಟಸುಖಗಳಿಗೆ ಮಿಡಿವ ಕೇವಲ ಬಂಧುಗಳಾಗಿರಲಿಲ್ಲ, ನಮ್ಮ ವ್ಯಕ್ತಿತ್ವ ಕಟೆವ ಶಿಲ್ಪಿಗಳೂ ಆಗಿದ್ದರೆಂದು ಈಗನಿಸುತ್ತಿದೆ. ಖುದ್ದು ಲೇಖಕ ರಹಮತ್ ತರೀಕೆರೆಯವರು, ರ‍್ಮನಿಯ ಡಕಾವ್: ನಾಜಿಗಳು ಯಹೂದಿಗಳ ಮಾರಣಹೋಮ ನಡೆಸಿದ ಸ್ಥಳದಲ್ಲಿ ರ‍್ಮಿಸಿರುವ ಹುತಾತ್ಮ ಸ್ಮಾರಕದ ಮುಂದೆ, (ಈ  ಗೋಡೆಯ ಮೇಲೆ NEVER AGAIN ಎಂದು ಬರೆದಿದೆ.)