ಬ್ಯಾಂಕಿನಲ್ಲಿರುವ ನಿಮ್ಮ ಠೇವಣಿ ಎಷ್ಟು ಸುರಕ್ಷಿತ? 

ಬ್ಯಾಂಕಿನಲ್ಲಿರುವ ನಿಮ್ಮ ಠೇವಣಿ ಎಷ್ಟು ಸುರಕ್ಷಿತ? 

 

ಎಂ ನಾಗರಾಜ ಶೆಟ್ಟಿ

 

    ಬ್ಯಾಂಕುಗಳು ವಿಫಲಗೊಳ್ಳುತ್ತಿರುವುದನ್ನು ನಾವು ಆಗಾಗ್ಗೆ ಗಮನಿಸುತ್ತಿರುತ್ತೇವೆ. ಅಮೆರಿಕಾದ ಮೂರು ದೊಡ್ಡ ಬ್ಯಾಂಕುಗಳಾದ ಸಿಗ್ನೇಚರ್‌ಬ್ಯಾಂಕ್‌, ಸಿಲಿಕಾನ್‌ ಬ್ಯಾಂಕ್‌ ಮತ್ತು ಫರ್ಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ವ್ಯವಹಾರ ಸ್ಥಗಿತಗೊಳಿಸಿದ್ದು ಕೆಲವು ತಿಗಳ ಹಿಂದೆ ಸುದ್ದಿಯಾಗಿತ್ತು. ಇತ್ತೀಚೆಗೆ ತುಮಕೂರಿನ ಶ್ರೀ ಶಾರದಾ ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್‌ ಮತ್ತು ಸತಾರದ ಹರಿಹರೇಶ್ವರ ಸಹಕಾರ ಬ್ಯಾಂಕ್‌ ಜುಲೈ 11, 2023 ರಿಂದ ವ್ಯವಹಾರ ಸ್ಥಗಿತಗೊಳಿಬೇಕೆಂದು ರಿಸರ್ವ್ ಬ್ಯಾಂಕ್‌ ನಿರ್ದೇಶನ ನೀಡಿದೆ.

 

    ಬ್ಯಾಂಕುಗಳು ಮುಳುಗಡೆಯಾಗುವುದು ಒಳ್ಳೆಯ ಸುದ್ದಿಯೇನಲ್ಲ.‌ ಇದರಿಂದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಮಾತ್ರವಲ್ಲ  ಗ್ರಾಹಕರು ತಮ್ಮ ಶ್ರಮದ ದುಡ್ಡನ್ನು ಕಳೆದುಕೊಳ್ಳುವ ಭೀತಿಗೊಳಗಾಗುತ್ತಾರೆ.

 

ಬ್ಯಾಂಕುಗಳಲ್ಲಿ ಸಾರ್ವಜನಿಕರ ಹಣ

 

    ಪ್ರತಿ ವ್ಯಕ್ತಿಯೂ ಬ್ಯಾಂಕ್‌ ಖಾತೆ ಹೊಂದಿರಬೇಕೆಂಬ ಉದ್ದೇಶ ಬಹಳ ಹಿಂದಿನಿಂದಲೇ ಇತ್ತು. ಬ್ಯಾಂಕ್‌ ರಾಷ್ಟ್ರೀಕರಣ ಈ ನಿಟ್ಟಿನಲ್ಲಿ ತುಂಬಾ ದೊಡ್ಡ ಪ್ರಯತ್ನ. ಇತ್ತೀಚೆಗೆ ಸಾಮಾನ್ಯ ಜನರೂ ಒಂದಿಲ್ಲೊಂದು ರೀತಿಯಲ್ಲಿ ಬ್ಯಾಂಕ್‌ ವ್ಯವಹಾರ ಮಾಡುತ್ತಿದ್ದಾರೆನ್ನುವುದು ಮೆಚ್ಚಬೇಕಾದ ವಿಷಯ. ದಿನನಿತ್ಯದ  ವ್ಯವಹಾರಗಳಿಗೆ ಬ್ಯಾಂಕುಗಳನ್ನು ಆಶ್ರಯಿಸುತ್ತಿದ್ದಾರೆ ಮಾತ್ರವಲ್ಲ ಜನರಲ್ಲಿ ಉಳಿತಾಯ ಮಾಡುವ ಪ್ರವೃತ್ತಿಯೂ ಹೆಚ್ಚಿದೆ.

 

   ಬ್ಯಾಂಕುಗಳು ನಂಬಿಕೆಗೆ ಅರ್ಹವಾಗಿವೆ, ಬೇಕೆಂದಾಗ ಹಣ ಪಡೆದುಕೊಳ್ಳಬಹುದು, ಭದ್ರತೆ ಇದೆ ಎನ್ನುವುದರೊಂದಿಗೆ ಬ್ಯಾಂಕುಗಳು ನೀಡುವ ಬಡ್ಡಿಯೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳನ್ನು ಆಯ್ಕೆ ಮಾಡುವ ಪ್ರವೃತ್ತಿಯೂ ಕೆಲವರಲ್ಲಿದೆ. ಬಡ್ಡಿಯ ಹಣದಲ್ಲಿ ಬದುಕು ಸಾಗಿಸಬೇಕಾದ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿ ದರಕ್ಕೆ ಆಕರ್ಷಿತರಾಗುವುದಿದೆ.

 

   ಸಾರ್ವಜನಿಕರಿಗೆ ವಾಣಿಜ್ಯ ಬ್ಯಾಂಕುಗಳ ಅವಲಂಬನೆ ಎಷ್ಟಿದೆ ಎನ್ನುವುದು ಬ್ಯಾಂಕುಗಳ ಠೇವಣಿಯನ್ನು ಗಮನಿಸಿದರೆ ತಿಳಿಯುತ್ತದೆ. 2023ರ ಮಾರ್ಚ್‌ ವರ್ಷಾಂತ್ಯದಲ್ಲಿ ಶೆಡ್ಯೂಲ್ಡ್‌ ಬ್ಯಾಂಕುಗಳ ಠೇವಣಿ ಮೊತ್ತ 190.35 ಲಕ್ಷ ಕೋಟಿ, ಅಂದರೆ ನಮ್ಮ ಜಿಡಿಪಿಯ ಅಂದಾಜು 72 ಶೇಕಡಾದಷ್ಟಿತ್ತು. ವಿಶೇಷವೇನೆಂದರೆ ಭಾರತೀಯ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಠೇವಣಿಗಾರರಿಗಿಂತ ಸಣ್ಣ ಉಳಿತಾಯ ಹೊಂದಿರುವವರೇ ಹೆಚ್ಚು. ಕೆಲವರು ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಬ್ಯಾಂಕುಗಳಲ್ಲಿಟ್ಟಿರುತ್ತಾರೆ.

 

ಬ್ಯಾಂಕ್‌ ಠೇವಣಿಗೆ ವಿಮೆ

 

   ಬ್ಯಾಂಕುಗಳು ಸ್ಥಗಿತವಾದಾಗ ಮೊದಲ ಹೊಡೆತ ಬೀಳುವುದು ಠೇವಣಿದಾರರಿಗೆ.  ಇದನ್ನು ಮನಗಂಡು, ಬ್ಯಾಂಕುಗಳಲ್ಲಿ ತೊಡಗಿಸಿದ ಹಣಕ್ಕೆ ಭದ್ರತೆ ನೀಡಬೇಕೆಂಬ ಬೇಡಿಕೆ 1950 ರಿಂದಲೇ ಪ್ರಾರಂಭವಾಗಿತ್ತು. ಆದರೆ ಅದು ಕಾರ್ಯಗತವಾಗಿತ್ತು 1962 ರಲ್ಲಿ. ಡೆಪೊಸಿಟ್‌ ಇನ್ಸೂರೆನ್ಸ್‌ ಕಾರ್ಪೋರೇಷನ್‌ (DIC) ಸ್ಥಾಪಿಸುವುದರ ಮೂಲಕ ಮೊದಲ ಬಾರಿಗೆ ವಾಣಿಜ್ಯ ಬ್ಯಾಂಕುಗಳ ಠೇವಣಿಗಳಿಗೆ ಭದ್ರತೆ ನೀಡಲಾಯಿತು. 1968 ರಿಂದ ಸಹಕಾರಿ ಬ್ಯಾಂಕುಗಳೂ ಇದರ ವ್ಯಾಪ್ತಿಗೆ ಬಂದವು.

 

    ರಿಸರ್ವ್‌ ಬ್ಯಾಂಕ್‌ ಆದ್ಯತಾ ವಲಯ ಮತ್ತು ನಿರ್ಲಕ್ಷಿತ ವಲಯಗಳಿಗೆ ನೀಡುವ ಸಾಲದ ಭದ್ರತೆಗಾಗಿ 1971 ರಲ್ಲಿ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌ ಸಂಸ್ಥೆ (CGC) ಯನ್ನು ಆರಂಭಿಸಿತು. ಇದನ್ನು ಡೆಪೋಸಿಟ್‌ ಇನ್ಸೂರೆನ್ಸ್‌ಕಾರ್ಪೋರೇಷನ್‌ (DIC) ಜೊತೆಯಲ್ಲಿ ವಿಲೀನಗೊಳಿಸಿ ಡೆಪೋಸಿಟ್‌ಇನ್ಸೂರೆನ್ಸ್‌ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌(DICGC) ಎಂದು ಕರೆಯಲಾಯಿತು.

 

    ಕ್ರಮೇಣ ಬ್ಯಾಂಕುಗಳು ಸಾಲ ವಿಮೆಯಲ್ಲಿ ಆಸಕ್ತಿ ಕಳೆದುಕೊಂಡವು. ಒಂದೊಂದೇ ಬ್ಯಾಂಕು ಸಾಲ ವಿಮೆಯಿಂದ ಹೊರಬಂತು. ಪರಿಣಾಮವಾಗಿ 2003 ರಿಂದ DICGC ಕೇವಲ ಠೇವಣಿಗೆ ವಿಮಾ ಭದ್ರತೆ ನೀಡುವುದಕ್ಕಷ್ಟೇ ಸೀಮಿತಗೊಂಡಿತು.

 

   ಆರಂಭದಲ್ಲಿ ಠೇವಣಿದಾರರಿಗೆ ಠೇವಣಿ ವಿಮೆ ದೊರಕುತ್ತಿದ್ದುದು ಕೇವಲ ರೂ 1500. ಕ್ರಮೇಣ 1 ಲಕ್ಷದ ವರೆಗೆ ವಿಸ್ತರಿಸಿತು. ಹಣದುಬ್ಬರವನ್ನು ಗಮನಿಸಿದರೆ ಇದು ಕೂಡಾ ಕಡಿಮೆ, ಇನ್ನಷ್ಟು ಜಾಸ್ತಿ ಮಾಡಬೇಕು ಎನ್ನುವ ಬೇಡಿಕೆಗಳು ಬಂದವು. ಈ ಬೇಡಿಕೆಗಳನ್ನು ಪರಿಗಣಿಸಿ, 2020 ರಿಂದ ಠೇವಣಿಗಳ ಮೇಲಿನ ವಿಮಾ ಭದ್ರತೆಯನ್ನು 5 ಲಕ್ಷಕ್ಕೆ ಏರಿಸಲಾಯಿತು. ಈಗ ಅದೂ ಸಾಕೆನ್ನಿಸುತ್ತಿಲ್ಲ!

  ಠೇವಣಿ ವಿಮೆಗೆ ಒಳಪಡುವ ಬ್ಯಾಂಕುಗಳು

    ಬ್ಯಾಂಕುಗಳು ಸಾಲ ವಿಮೆಯಿಂದ ಹೊರ ಬಂದಂತೆ ಠೇವಣಿ ವಿಮೆಯಿಂದ ಹೊರ ಬರುವ ಸ್ವಾತಂತ್ರ್ಯವಿಲ್ಲ. ಅಂಥ ಪ್ರಯತ್ನ ಮಾಡಿದರೆ ಪರವಾನಿಗೆ ರದ್ದಾಗುತ್ತದೆ; ಮತ್ತವು ಕಾರ್ಯ ನಿರ್ವಹಿಸುವಂತಿಲ್ಲ.  

 

   ಬ್ಯಾಂಕುಗಳು ವಿಮಾ ಶುಲ್ಕವಾಗಿ ಪ್ರತಿ ವರ್ಷ DICGC ಗೆ 0.12% ಕಟ್ಟಬೇಕು. ಇದನ್ನು ಗ್ರಾಹಕರ ಮೇಲೆ ಹೇರದೆ ಬ್ಯಾಂಕುಗಳೇ ಭರಿಸುತ್ತವೆ.

 

    ಈ ವರೆಗೆ ಒಟ್ಟು 2025 ಬ್ಯಾಂಕುಗಳು DICGCಯ ಠೇವಣಿ ವಿಮಾ ಭದ್ರತೆಯನ್ನು ಹೊಂದಿವೆ. ಅವುಗಳ ವಿವರ ಇಂತಿದೆ: ಸಾರ್ವಜನಿಕ ಬ್ಯಾಂಕ್ಸ್ 12, ಖಾಸಗಿ‌ಬ್ಯಾಂಕ್ಸ್ 21, ವಿದೇಶಿ ಬ್ಯಾಂಕ್ಸ್ 44, ಸ್ಮಾಲ್‌ ಫೈನಾಸ್ಸ್‌ ಬ್ಯಾಂಕ್ಸ್‌, ಪೇಮೆಂಟ್‌ಬ್ಯಾಂಕ್ಸ್‌ 6, ರೀಜನಲ್‌ ರೂರಲ್‌ ಬ್ಯಾಂಕ್ಸ್ 43, ಲೋಕಲ್‌ ಏರಿಯಾ ಬ್ಯಾಂಕ್ಸ್ 2, ಸ್ಟೇಟ್‌ ಕೋಪರೇಟಿವ್‌ ಬ್ಯಾಂಕ್ಸ್ 33, ಡಿಸ್ಟ್ರಿಕ್ಟ್‌ ಕೋಪರೇಟಿವ್‌ ಬ್ಯಾಂಕ್ಸ್‌ 352 ಮತ್ತು ಅರ್ಬನ್‌ ಕೋಪರೇಟಿವ್‌ ಬ್ಯಾಂಕ್ಸ್‌ 1500.

 

    ಗಮನಿಸಬೇಕಾದ ವಿಷಯವೆಂದರೆ ಪ್ರೈಮರಿ ಕೋಪರೇಟಿವ್‌ ಸೊಸೈಟಿಗಳು DICGC ಯ ವಿಮೆಗೊಳಪಟ್ಟಿಲ್ಲ. ಇಂತಹ ಸೊಸೈಟಿಗಳಲ್ಲಿ ಬಡ್ಡಿ ಆಸೆಯಿಂದ ಠೇವಣಿ ಇಡುವ ಗ್ರಾಹಕರು ಎಚ್ಚರ ವಹಿಸಬೇಕು.

 

 ವಿಮಾ ಭದ್ರತೆಯ ವಿವರಗಳು

 

ಠೇವಣಿ ಮೇಲಿನ ವಿಮಾ ಭದ್ರತೆಯ ಕುರಿತು ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ. ಒಂದು ಬ್ಯಾಂಕು ವಿಫಲಗೊಂಡಲ್ಲಿ ಒಬ್ಬ ಗ್ರಾಹಕನಿಗೆ ಗರಿಷ್ಟ 5 ಲಕ್ಷ ಭದ್ರತೆ ದೊರಕುತ್ತದೆ. ಇದು ಹೇಗೆನ್ನುವುದನ್ನು ವಿವರವಾಗಿ ತಿಳಿಯೋಣ:

 

  1. ಒಬ್ಬ ಗ್ರಾಹಕ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಠೇವಣಿ ಇಟ್ಟಿದ್ದರೂ ಅವನಿಗೆ ಸಿಗುವುದು 5 ಲಕ್ಷ ಮಾತ್ರ.

ಉದಾ: 4 ಲಕ್ಷ ಠೇವಣಿ ಹೊಂದಿರುವವನಿಗೆ 4 ಲಕ್ಷ ಸಿಗುತ್ತದೆ. 5 ಲಕ್ಷದವನಿಗೆ 5 ಲಕ್ಷ, 50 ಲಕ್ಷದವನಿಗೂ  ಸಿಗುವುದು 5 ಲಕ್ಷವೇ.

  1. ಒಂದಕ್ಕಿಂದ ಹೆಚ್ಚು ಠೇವಣಿ ಇದ್ದರೂ ದೊರಕುವ ಗರಿಷ್ಟ ಮೊತ್ತ 5 ಲಕ್ಷ.
  2. ಅಸಲು ಮತ್ತು ಬಡ್ಡಿಯನ್ನು ಸೇರಿಸಿ ವಿಮಾ ಭದ್ರತೆ ನೀಡಲಾಗುತ್ತದೆ.

   ಉದಾ: 495000 ಠೇವಣಿಗೆ 5000 ಬಡ್ಡಿ ಬಂದರೆ 5 ಲಕ್ಷ ಸಿಗುತ್ತದೆ. ಆದರೆ 495000 ಠೇವಣಿಗೆ 6000 ಬಡ್ಡಿ    ಬಂದರೆ ಸಿಗುವುದು 5 ಲಕ್ಷ ಮಾತ್ರ.

  1. ಒಂದು ಬ್ಯಾಂಕಿನ ಶಾಖೆಗಳೆಲ್ಲವನ್ನೂ ಒಂದೇ ಘಟಕವಾಗಿ ತೆಗೆದುಕೊಳ್ಳಲಾಗುತ್ತದೆ. ವಿಫಲವಾದ ಬ್ಯಾಂಕಿನ ಯಾವುದೇ ಶಾಖೆಯಲ್ಲಿ, ಎಷ್ಟೇ ಠೇವಣಿ ಇದ್ದರೂ ಸಿಗುವುದು 5 ಲಕ್ಷ ಮಾತ್ರ.
  2. ಉಳಿತಾಯ ಖಾತೆ (SB̧) ಕಾಲಾವಧಿ ಠೇವಣಿ (FD), ಆವರ್ತನ ಠೇವಣಿ (RD), ಚಾಲ್ತಿ ಖಾತೆ (Current Account) ಇವೆಲ್ಲವೂ ಠೇವಣಿ ವಿಮೆಗೆ ಒಳಪಡುತ್ತವೆ.
  3. ಗಂಡ-ಹೆಂಡತಿ ಅಥವಾ ಜಂಟಿ ಖಾತೆಗಳಲ್ಲಿ ಠೇವಣಿ ಇಟ್ಟಿದ್ದರೆ ಮೊದಲ ಹೆಸರಿನವರಿಗೆ ವಿಮೆ ಸಿಗುತ್ತದೆ.

ಉದಾ: ಒಬ್ಬರ ವೈಯಕ್ತಿಕ ಠೇವಣಿ 5 ಲಕ್ಷ ಇದ್ದು, ಹೆಂಡತಿ ಜೊತೆಗಿನ ಜಂಟಿ ಖಾತೆಯ 5 ಲಕ್ಷ ಠೇವಣಿಯಲ್ಲಿ ಮೊದಲ ಹೆಸರು ಅವರದಾಗಿದ್ದರೆ ಕೇವಲ 5 ಲಕ್ಷ ಸಿಗುತ್ತದೆ. ಆದರೆ ಜಂಟಿ ಖಾತೆಯಲ್ಲಿ ಹೆಂಡತಿಯ ಹೆಸರು ಮೊದಲಿದ್ದರೆ ಹೆಂಡತಿಗೆ 5 ಲಕ್ಷ ಸಿಗುತ್ತದೆ.

  1. ಸ್ವಂತ ವ್ಯವಹಾರ (Proprietorship) ಅಥವಾ ಪಾಲುದಾರಿಕೆ ( Partnership) ಗಳಲ್ಲಿ ಮೊದಲ ಹೆಸರು ಯಾರದಿದೆಯೋ ಆತ ಗರಿಷ್ಟ ಮೊತ್ತ 5 ಲಕ್ಷಕ್ಕೆ ಅರ್ಹನಾಗುತ್ತಾನೆ.
  2. ಬ್ಯಾಂಕ್‌ ಸಾಲ, ಕ್ರೆಡಿಟ್‌ ಕಾರ್ಡ್‌ಬಾಕಿ, ಬ್ಯಾಂಕಿಗೆ ಪಾವತಿಯಾಗದ ಹಣವನ್ನು ವಸೂಲು ಮಾಡಿ ಉಳಿದ ಠೇವಣಿ ಮೊತ್ತಕ್ಕೆ ವಿಮೆ ಅನ್ವಯಿಸಲಾಗುತ್ತದೆ.
  3. ಬೇರೆ ಬೇರೆ ಬ್ಯಾಂಕುಗಳಲ್ಲಿ ಇರುವ ಠೇವಣಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಪ್ರತಿ ಬ್ಯಾಂಕಿನಲ್ಲಿಟ್ಟ ಠೇವಣಿಯೂ 5 ಲಕ್ಷ ವಿಮೆಗೆ ಅರ್ಹವಾಗುತ್ತದೆ.

 

ವಿಮೆ ಪಡೆಯುವ ವಿಧಾನ

 

ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡ ಕೂಡಲೇ ಐದು ಲಕ್ಷದ ವರೆಗೆ ಠೇವಣಿ ವಿಮೆಗೆ ಠೇವಣಿದಾರರು ಅರ್ಹರಾಗುತ್ತಾರೆ.

ಇದನ್ನು ಠೇವಣಿದಾರರಿಗೆ ಹೇಗೆ ವಿತರಿಸಲಾಗುತ್ತಿದೆ ಎನ್ನುವುದನ್ನು ಗ್ರಾಹಕರು ಅವಶ್ಯವಾಗಿ ತಿಳಿದಿರಬೇಕು.

 

ವಿಫಲವಾದ ಬ್ಯಾಂಕಿನ ಆಸ್ತಿ ಮತ್ತು ಬಾಧ್ಯತೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬರಕಾಸ್ತುದಾರರ (Liquidator) ನೇಮಕವಾಗುತ್ತದೆ. ಬ್ಯಾಂಕು ವ್ಯವಹಾರಗಳು ಸ್ಥಗಿತಗೊಳಿಸಿದ ಮೂರು ತಿಂಗಳೊಳಗೆ ನೇಮಕ ನಡೆಯುತ್ತದೆ. ಲಿಕ್ವಿಡೇಟರ್‌ ನೇಮಕಗೊಂಡ ಎರಡು ತಿಂಗಳೊಳಗೆ ಅರ್ಹ ಗ್ರಾಹಕರನ್ನು ಗುರುತಿಸಿ, ವಿಮೆ ಮೊತ್ತದ ವಿಲೇವಾರಿಯನ್ನು ಮಾಡಬೇಕು. ಬ್ಯಾಂಕಿಗೆ ಗ್ರಾಹಕರಿಂದ  ಬರಬೇಕಾದ ಬಾಕಿ ಇದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಂಡು ಕೊಡಬೇಕಾದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಬಗ್ಗೆ ಗ್ರಾಹಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ.

 

ವಹಿಸಬೇಕಾದ ಎಚ್ಚರಿಕೆ

 

     ಬ್ಯಾಂಕ್‌ ವಿಫಲವಾದಾಗ ಸಹಜವಾಗಿಯೇ ಗ್ರಾಹಕರು ಆತಂಕಕ್ಕೆ ಒಳಗಾಗುತ್ತಾರೆ. ಸ್ವಲ್ಪ ಮಟ್ಟಿಗೆ ಠೇವಣಿ ವಿಮೆ ಆತಂಕವನ್ನು ಕಡಿಮೆ ಮಾಡುತ್ತದಾದರೂ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ಆದ್ದರಿಂದ  ಗ್ರಾಹಕರು ಠೇವಣಿ ಇಡುವಾಗಲೇ ಹೆಚ್ಚು ಶಾಖೆ, ವ್ಯವಹಾರಗಳನ್ನು ಹೊಂದಿರುವ ದೊಡ್ಡ ಬ್ಯಾಂಕನ್ನು ಆಯ್ಕೆ ಮಾಡುವುದು ಉತ್ತಮ. ಸಾಧ್ಯವಾದರೆ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಬ್ಯಾಂಕಿನ ಲಾಭ ನಷ್ಟದ ಮಾಹಿತಿಗಳನ್ನು ಗಮನಿಸಬಹುದು. ಮುಖ್ಯವಾಗಿ ಹೆಚ್ಚು ಬಡ್ಡಿ ಸಿಗುತ್ತದೆ ಎಂದು ಆಸೆ ಪಡುವುದಕ್ಕಿಂತ ಬ್ಯಾಂಕಿನ ವ್ಯವಹಾರದ ಬಗ್ಗೆ ತಿಳಿವಳಿಕೆ ಹೊಂದುವುದು ಅಗತ್ಯ.

 

   ಕೆಲವೊಮ್ಮೆ ಬ್ಯಾಂಕುಗಳ ಬಗ್ಗೆ ವದಂತಿಗಳು ಹರಡುತ್ತವೆ. ಇದರಿಂದ ಗ್ರಾಹಕರು ಗೊಂದಲಕ್ಕೊಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಆತಂಕ ಪಡದೆ ನುರಿತ  ವ್ಯಕ್ತಿಗಳ ಅಭಿಪ್ರಾಯ ಪಡೆಯುವುದು ಸೂಕ್ತ.

 

   RBI ಬ್ಯಾಂಕುಗಳ ವ್ಯವಹಾರಗಳ ಬಗ್ಗೆ ಸಾಕಷ್ಟು ನಿಗಾ ವಹಿಸುತ್ತದೆ. ಇದರ ಹೊರತಾಗಿಯೂ ಬ್ಯಾಂಕುಗಳು ವಿಫಲಗೊಂಡ ಉದಾಹರಣೆಗಳಿವೆ. ಹಾಗೆಂದು ಬ್ಯಾಂಕ್‌ವ್ಯವಹಾರದಿಂದ ವಿಮುಖಗೊಳ್ಳಲು ಸಾಧ್ಯವಿಲ್ಲ. ಹಣಕಾಸಿನ ವಿಷಯದಲ್ಲಿ ಅತ್ಯಂತ ನಂಬಿಕಸ್ತ ಸಂಸ್ಥೆ ಬ್ಯಾಂಕುಗಳೇ ಆದ ಕಾರಣ ಠೇವಣಿ ಇಡುವ ಸಂದರ್ಭದಲ್ಲಿ ಸರಿಯಾದ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

(ಲೇಖಕರು-ನಿವೃತ್ತ ಬ್ಯಾಂಕ್‌ ಮ್ಯಾನೇಜರ್)