ನೋಡಿ, ಇವರೇ ಪರಕಾಲ ಪ್ರಭಾಕರ್ 

ಅವರ ಮದುವೆಗೆ ಸ್ವಲ್ಪ ಕಾಲ ಇದ್ದಾಗ ಪರಕಾಲ ಪ್ರಭಾಕರ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಆಗಿನ ಕಾಲದಲ್ಲಿ ಅಂತಹ ವಿದ್ಯಾರ್ಥಿ ವೇತನವನ್ನು ಪಡೆಯಲು ತುಂಬಾ ಸಾಮರ್ಥ್ಯ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕ ಹೊಂದಿರಬೇಕಿತ್ತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅವರು ಪ್ರವೇಶ ಪಡೆಯಲು ಆಯ್ಕೆಯಾಗಿದ್ದರು.

ನೋಡಿ, ಇವರೇ ಪರಕಾಲ ಪ್ರಭಾಕರ್ 

ವ್ಯಕ್ತಿ-ವ್ಯಕ್ತಿತ್ವ

ಸಿ.ರುದ್ರಪ್ಪ

 

     ಇವರು ಪರಕಾಲ ಪ್ರಭಾಕರ ( ಜನನ 02, ಜನವರಿ 1959) ರಾಜಕೀಯ ಅರ್ಥ ಶಾಸ್ತ್ರಜ್ಞರು ಮತ್ತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಪತಿ. ಪರಕಾಲ ಪ್ರಭಾಕರ ಅವರು ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳೆದ ವಾರ ರಾಜ್ಯದ ವಿವಿಧೆಡೆ ಮಾಡಿದ ವಿಶಿಷ್ಟ ದೃಷ್ಟಿಕೋನದ ಮತ್ತು ಬೌದ್ಧಿಕ ಪ್ರಖರತೆಯ ಭಾಷಣಗಳು ಮತ್ತು ಪತ್ರಿಕೆಗಳಿಗೆ ಅವರು ನೀಡಿರುವ ಸಂದರ್ಶನಗಳು ಕೆಲವು ಆಸಕ್ತ ವಲಯಗಳ ಗಮನವನ್ನು ಸೆಳೆದಿವೆ.ಕೆಲವರಿಗೆ,ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ.


   ಪರಕಾಲ ಅವರು ಆಂಧ್ರದ ನರಸಾಪುರ ಪಟ್ಟಣದಲ್ಲಿ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದ ಬ್ರಾಹ್ಮಣ ಕುಟುಂಬದವರು. ಅವರ ತಂದೆ ಪರಕಾಲ ಶೇಷಾವತಾರಂ ಎರಡು ದಶಕಗಳ ಕಾಲ ಕಾಂಗ್ರೆಸ್ ಶಾಸಕರಾಗಿದ್ದರು ಮತ್ತು 1973 ರಿಂದ 1981ರವರೆಗೆ ವಿವಿಧ ಸಂಪುಟಗಳಲ್ಲಿ ಸಚಿವರಾಗಿದ್ದರು. ಅವರ ನಿಧನದ ನಂತರ ಪರಕಾಲ ಅವರ ತಾಯಿ ಶ್ರೀಮತಿ ಕಾಳಿಕಾಂಬಾ ಕೂಡಾ ಅದೇ ನರಸಾಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತರು.ಪರಕಾಲ ಅವರ ತಾಯಿಯ ತಂದೆ ಕೂಡಾ ಸುಮಾರು ಮೂರು ದಶಕಗಳ ಕಾಲ ಟೌನ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿದ್ದರು.ಪರಕಾಲ 1978 ರಲ್ಲಿ ಸೋಷಿಯಾಲಜಿಯಲ್ಲಿ ಮಾಸ್ಟರ್ಸ್ ಪದವಿ ಮತ್ತು ಇಂಟರ್‌ನ್ಯಾಶನಲ್ ಸ್ಟಡೀಸ್‌ನಲ್ಲಿ ಎಂಫಿಲ್ ವ್ಯಾಸಂಗಕ್ಕೆ ದೆಹಲಿಯ ಜೆಎನ್‌ಯುಗೆ (ಜವಾಹರಲಾಲ್ ಯೂನಿವರ್ಸಿಟಿ ) ಬಂದಾಗ ಪಿ ವಿ ನರಸಿಂಹರಾವ್ ಪರಕಾಲ ಪ್ರಭಾಕರ್ ಅವರ ಲೋಕಲ್ ಗಾರ್ಡಿಯನ್ ಆಗಿದ್ದರು. ನರಸಿಂಹ ರಾವ್, ನಂತರ ,1980 ರಲ್ಲಿ ವಿದೇಶಾಂಗ ಸಚಿವರಾದರು ಮತ್ತು 1991 ರಲ್ಲಿ ಪ್ರಧಾನಿಯೂ ಆದರು, ಜೆಎನ್‌ಯುನಲ್ಲಿ ಪರಕಾಲ,ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಅದರ ಅಧ್ಯಕ್ಷರಾದರು. 1982 ರಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಿ ಅವರು ಸೋತರು. 


    1983 ರಲ್ಲಿ ಉಪ ಕುಲಪತಿ ನಿವಾಸದ ಘೇರಾವ್ ನಲ್ಲಿ ಭಾಗವಹಿಸಿ ಎರಡು ವಾರ ತಿಹಾರ್ ಜೈಲಿನಲ್ಲಿದ್ದರು. ಜೈಲುವಾಸದಿಂದಾಗಿ ಪರಕಾಲರವರ ವ್ಯಕ್ತಿತ್ವಕ್ಕೆ ಹೊಸ ಬಲ ಬಂದಿತು. ನಂತರ ಅವರು ಎನ್‌ಎಸ್‌ಯುಐ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದರು. ಇದೇ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಮಾತನಾಡಿಸಲು ಪರಕಾಲ ಜೆಎನ್‌ಯು ಲೈಬ್ರರಿಗೆ ಆಗಾಗ ಬರುತ್ತಿದ್ದರು.ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಅವರ ಸ್ನೇಹಿತರಿಗೆ ಗೊತ್ತಾಗಿದ್ದು 1986 ರಲ್ಲಿ ಇವರಿಬ್ಬರ ಮದುವೆ ಇನ್ವಿಟೇಶನ್ ನೋಡಿದಾಗಲೇ.


   ಅವರ ಮದುವೆಗೆ ಸ್ವಲ್ಪ ಕಾಲ ಇದ್ದಾಗ ಪರಕಾಲ ಪ್ರಭಾಕರ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಆಗಿನ ಕಾಲದಲ್ಲಿ ಅಂತಹ ವಿದ್ಯಾರ್ಥಿ ವೇತನವನ್ನು ಪಡೆಯಲು ತುಂಬಾ ಸಾಮರ್ಥ್ಯ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕ ಹೊಂದಿರಬೇಕಿತ್ತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅವರು ಪ್ರವೇಶ ಪಡೆಯಲು ಆಯ್ಕೆಯಾಗಿದ್ದರು.


  ಪರಕಾಲರವರಿಗೆ ಅವರ ತಂದೆ ತಾಯಿಯವರಂತೆ ರಾಜಕೀಯ ಕ್ಷೇತ್ರದಲ್ಲಿಯೇ ಮುಂದುವರಿಯಲು ಇಷ್ಟವಿದ್ದರೂ ಅವರು ವಿದೇಶದಲ್ಲಿ ವ್ಯಾಸಂಗ ಮಾಡುವಂತೆ ಪ್ರೇರೇಪಿಸಿದ್ದು ದೇಶದ ಒಬ್ಬ ದೊಡ್ಡ ವ್ಯಕ್ತಿ. ಅವರೇ ರಾಜೀವ ಗಾಂಧಿ..! ಒಂದು ದಿನ ಪರಕಾಲ ಕುಟುಂಬದ ಆಪ್ತರಾಗಿದ್ದ ಮತ್ತು ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀಮತಿ ನಜ್ಮಾ ಹೆಫ್ತುಲ್ಲಾ ಅವರು ಎಐಸಿಸಿ ಕಾರ್ಯಾಲಯದಲ್ಲಿ ಪರಕಾಲ ಅವರ ಕೈ ಹಿಡಿದು ಎಳೆದುಕೊಂಡು ಹೋಗಿ ರಾಜೀವ ಗಾಂಧಿಯವರ ಮುಂದೆ ನಿಲ್ಲಿಸಿ, "ನೋಡಿ ಸಾರ್ ,ಈ ಯುವಕ ಸುಮ್ಮನೆ ಟೈಮ್ ವೇಸ್ಟ್ ಮಾಡ್ತಾ ಇದ್ದಾರೆ"

ಎಂದು ದೂರಿದರು. ಆಗಷ್ಟೇ ಪ್ರಧಾನಿಯಾಗಿದ್ದ ರಾಜೀವ ಗಾಂಧಿಯವರು 1983 ರ ಉಪಚುನಾವಣೆಯಲ್ಲಿ ಪರಕಾಲ ಅವರ ತಾಯಿಯವರ ಪರವಾಗಿ ಪ್ರಚಾರ ಮಾಡಿದ್ದರು. ಅವರು ಮುಗುಳ್ನಗೆಯೊಂದಿಗೆ "ಪ್ರಭಾಕರ್,ಮೊದಲು ನಿಮ್ಮ ಓದು ಮುಗಿಸಿ. ನಂತರ ನನ್ನ ಬಳಿ ಬನ್ನಿ" ಎಂದು ಕಿವಿ ಮಾತು ಹೇಳಿದರು .ಆಗ ಪರಕಾಲ ಪ್ರಭಾಕರ ವಿದ್ಯಾರ್ಥಿ ವೇತನವನ್ನು ಒಪ್ಪಿಕೊಳ್ಳುವ ನಿರ್ಧಾರ ಮಾಡಿದರು. ನಿರ್ಮಲಾ ಸೀತಾರಾಮನ್ ಅವರು ಕೂಡಾ ಜೆಎನ್‌ಯುನಲ್ಲಿ ಭಾರತ ಮತ್ತು ಯೂರೋಪ್ ನಡುವಿನ ಜವಳಿ ವ್ಯಾಪಾರ ಕುರಿತ ತಮ್ಮ ಸಂಶೋಧನೆಯನ್ನು ಮೊಟಕುಗೊಳಿಸಿ ಲಂಡನ್ನಿಗೆ ಪರಕಾಲ ಅವರೊಂದಿಗೆ ಹೊರಟರು. ಪರಕಾಲ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾಗ ನಿರ್ಮಲಾ ಸೀತಾರಾಮನ್ ಅವರು -ಹ್ಯಾಬಿಟ್ಯಾಟ್ ಹೋಂ, ಡೆಕೋರ್ ಸ್ಟೋರ್ ನಲ್ಲಿ ಸೇಲ್ಸ್ ಅಸಿಸ್ಟೆಂಟ್, ಬಿಬಿಸಿ ವರ್ಲ್ಡ್ ಸರ್ವೀಸ್‌ನಲ್ಲಿ ತಮಿಳು ಅನುವಾದಕಿಯಾಗಿ, ಪ್ರೆಸ್ ವಾಟರ್‌ಹೌಸ್‌ನಲ್ಲಿ ಮ್ಯಾನೇಜರ್ -ಹೀಗೆ ವಿವಿಧ ಕೆಲಸಗಳನ್ನು ಮಾಡಿದರು. 1991ರಲ್ಲಿ ದಂಪತಿ ಭಾರತಕ್ಕೆ ಮರಳಿದರು..


    ನಂತರ ಕೆಲವು ವರ್ಷಗಳ ನಂತರ ಪರಕಾಲ ತಮ್ಮ ಈ ಹಿಂದಿನ ಲೋಕಲ್ ಗಾರ್ಡಿಯನ್ ಪಿ.ವಿ.ನರಸಿಂಹ ರಾವ್ ಬೆಂಬಲದೊಂದಿಗೆ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಕೊಂಡರು. 1994 ರಲ್ಲಿ ತಮ್ಮ ತಂದೆಯ ಕ್ಷೇತ್ರ ನರಸಾಪುರದಲ್ಲಿ ಚುನಾವಣೆಗೆ ನಿಂತು ಸೋತರು. ಮತ್ತೆ ಎರಡು ವರ್ಷಗಳ ನಂತರ ಪುನಃ ಉಪಚುನಾವಣೆಯಲ್ಲಿಯೂ ಸೋತರು.1996 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಸೋತಿತು. ಆಗ ಕಾಂಗ್ರೆಸ್ ಪಕ್ಷದಲ್ಲಿ ನರಸಿಂಹ ರಾವ್ ಅವರನ್ನು ಮೂಲೆಗುಂಪು ಮಾಡಲಾಯಿತು.ಅವರ ಬೆಂಬಲಿಗರಿಗೆ ಕಿರುಕುಳವೂ ಆರಂಭವಾಯಿತು.13 ದಿನಗಳ ವಾಜಪೇಯಿ ಸರ್ಕಾರದ ಸಂದರ್ಭದಲ್ಲಿ ಪರಕಾಲ ಬಿಜೆಪಿ ಗೆ ಸೇರಿದರು.1998 ರಲ್ಲಿ ನರಸಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರು. ಮತ್ತೆ ಸೋತರು. ಆ ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.ತೆಲುಗು ದೇಶಂ ಮತ್ತು ಬಿಜೆಪಿ ನಡುವೆ ಮೈತ್ರಿಯನ್ನು ಏರ್ಪಡಿಸುವಲ್ಲಿ ಪರಕಾಲ ಮಹತ್ವದ ಪಾತ್ರವನ್ನು ವಹಿಸಿದರು. ನಂತರ ಆಂಧ್ರ ಪ್ರದೇಶದ ಬಿಜೆಪಿ ವಕ್ತಾರರಾಗಿದ್ದರು.ಆ ನಂತರ ನ್ಯಾಶನಲ್ ಎಕನಾಮಿಕ್ ಸೆಲ್ ಸದಸ್ಯರಾಗಿ ಹತ್ತನೇ ಪಂಚ ವಾರ್ಷಿಕ ಯೋಜನೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ನಿರ್ಮಲಾ ಸೀತಾರಾಮನ್ ಮಾತ್ರ ಇನ್ನೂ ಬಿಜೆಪಿ ಸೇರಿರಲಿಲ್ಲ. ಆದರೆ ಅವರು ಲಂಡನ್ನಿನಿಂದ ವಾಪಾಸ್ ಬಂದಾಗಲೇ ಆರ್‌ಎಸ್‌ಎಸ್ ಬುದ್ಧಿಜೀವಿಗಳ ವಿಭಾಗವಾಗಿದ್ದ ಭಾಗವಾಗಿದ್ದ ಚಿಂತಕರ ಚಾವಡಿ ಭಾರತೀಯ ಪ್ರಜ್ಞಾ ಸಂಸ್ಥೆಯಲ್ಲಿ ತೊಡಗಿಕೊಂಡಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡಾ ಆ ಸಂಸ್ಥೆಯಲ್ಲಿದ್ದರು . ಪರಕಾಲ ಅವರು 2000 ನೇ ಇಸವಿಯ ಆರಂಭದಲ್ಲಿ ತಮ್ಮ ಪತ್ನಿಯವರಿದ್ದ ಭಾರತೀಯ ಪ್ರಜ್ಞಾ ಸಂಸ್ಥೆಗೆ ಸೇರ್ಪಡೆಯಾಗಿ ಕೆಲವು ಕಾಲ ಅದರ ಪ್ರಕಾಶನದ ಸಂಪಾದಕೀಯ ಮಂಡಳಿಯಲ್ಲಿದ್ದರು ಮತ್ತು ಆ ಸಂಸ್ಥೆಯ ಮ್ಯಾಗಝಿನ್ ಮ್ಯಾನೇಜಿಂಗ್ ಎಡಿಟರ್ ಹುದ್ದೆಯ ಹೊಣೆಯನ್ನು ವಹಿಸಿಕೊಂಡರು.ಅದರಲ್ಲಿ ಲೇಖನವೊಂದನ್ನು ಬರೆದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ,ದೇಶಕ್ಕೆ ಈಗ ಸ್ಪಷ್ಟವಾಗಿ ರಾಷ್ಟ್ರೀಯ ವಿಚಾರಧಾರೆಯ ದೇಶವ್ಯಾಪಿ ಪ್ರಭಾವವಿರುವ ಪಕ್ಷವೊಂದರ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಆರ್‌ಎಸ್‌ಎಸ್ ಅನ್ನು ಸಮರ್ಥಿಸಿಕೊಂಡು ಇನ್ನೂ ಒಂದು ಲೇಖನವನ್ನು ಬರೆದರು. ಆದರೆ 2006 ರಲ್ಲಿ ಪರಕಾಲ ಪ್ರಭಾಕರ್ ಬಿಜೆಪಿಯಿಂದ ನಿರ್ಗಮಿಸಿದರು.


    ಆಂಧ್ರ ಪ್ರದೇಶ ವಿಧಾನ ಪರಿಷತ್ ಪುನಃ ಅಸ್ತಿತ್ವಕ್ಕೆ ಬಂದಾಗ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೊಮ್ಮೆ ಸೋತರು.2008 ರಲ್ಲಿ ಅವರು ತೆಲಗು ನಟ ಚಿರಂಜೀವಿಯವರ ಪ್ರಜಾ ರಾಜ್ಯಮ್ ಪಕ್ಷದ ವಕ್ತಾರರಾದರು. 2014 ರಲ್ಲಿ ತೆಲಗು ದೇಶಂ ಸರ್ಕಾರ ರಚನೆಯಾದಾಗ ಆ ಸರ್ಕಾರದ ಮೀಡಿಯಾ ಅಡ್ವೈಸರ್ ಹುದ್ದೆಯನ್ನು ವಹಿಸಿಕೊಂಡರು.ಆದರೆ ನಾಲ್ಕು ವರ್ಷಗಳ ನಂತರ ತೆಲಗು ದೇಶಂ ಮೋದಿ ಸರ್ಕಾರಕ್ಕೆ ಬೆಂಬಲವನ್ನು ವಾಪಸ್ ಪಡೆದಾಗ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.ಆಗ ನಿರ್ಮಲಾ ಸೀತಾರಾಮನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು.


   ಇತ್ತೀಚಿನ ವರ್ಷಗಳಲ್ಲಿ ಅವರು ಮೋದಿ ಸರ್ಕಾರದ ಮತ್ತು ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ನೀತಿಯನ್ನು ಟೀಕಿಸುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ತಮ್ಮ ಪತ್ನಿಯ ನಿಲುವುಗಳನ್ನು ವಿರೋಧಿಸುತ್ತಿರುದರಿಂದ ಕೆಲವರಿಗೆ ಸಂತೋಷವಾಗಿರುವುದನ್ನು ಗಮನಿಸಿರುವ ಪರಕಾಲ ಪ್ರಭಾಕರ ಅವರು ಒಮ್ಮೆ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದರು- ನಿರ್ದಿಷ್ಟ ವಿಚಾರವೊಂದರಲ್ಲಿ ಅಸಮ್ಮತಿ ಇದ್ದಾಗಲೂ ಇಬ್ಬರು ಪರಸ್ಪರ ಗೌರವದ ಸಂಬಂಧ ಹೊಂದಿರುವ ಬಗ್ಗೆ ಜನರಿಗೆ ತಿಳಿದಿಲ್ಲ”