ಒಂದು ‘ಸೌಹಾರ್ದ’ ಮಾತುಕತೆ 

ಒಂದು ‘ಸೌಹಾರ್ದ’ ಮಾತುಕತೆ 

ಒಂದು ‘ಸೌಹಾರ್ದ’ ಮಾತುಕತೆ 


ವರ್ತಮಾನ -ಮಲ್ಲಿಕಾರ್ಜುನ ಹೊಸಪಾಳ್ಯ

ಚಂದ್ರಕಾಂತ ವಡ್ಡು ಅವರು ಸಂಪಾದನೆ ಮಾಡಿರುವ ‘ಸೌಹಾರ್ದ ಕರ್ನಾಟಕ’ ಪುಸ್ತಕವು ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಪ್ರತಿಕ್ರಿಯೆ ರೂಪದಲ್ಲಿ ಬಂದಿರುವAತಹುದು. ವಡ್ಡು ಅವರು ಇದನ್ನು ದೊಡ್ಡ ಸಮಾರಂಭ ಮಾಡಿ ಬಿಡುಗಡೆ ಮಾಡಲಿಲ್ಲ. ಬದಲಿಗೆ ನಾಡಿನಾದ್ಯಂತ ಹತ್ತಾರು ಸಲ ಬಿಡುಗಡೆಗೊಂಡ ಹೆಗ್ಗಳಿಕೆ ಇದರದು. ಆಸಕ್ತರು, ಪುಸ್ತಕ ಪ್ರೇಮಿಗಳು, ‘ಸೌಹಾರ್ದ ತತ್ವದಲ್ಲಿ ಬದ್ಧತೆಯುಳ್ಳ ಮಠಗಳು, ಶಾಲಾ-ಕಾಲೇಜುಗಳು, ಸಂಸ್ಥೆಗಳು, ಗುಂಪುಗಳು, ಲೇಖಕರು ಅವರ ಇರುವ ನೆಲೆಯಲ್ಲಿಯೇ ಈ ಪುಸ್ತಕವನ್ನು ಬಿಡುಗಡೆ ಮಾಡಿ, ಇದರೊಳಗಿನ ಹೂರಣವನ್ನು ಚರ್ಚಿಸಿ ಹೆಚ್ಚಿನ ಜನರನ್ನು ತಲುಪುವಲ್ಲಿ ಕೈಜೋಡಿಸಿರುವುದು ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಇಂಥಾ ಗೌರವ ದಕ್ಕಿಸಿಕೊಂಡ ಪುಸ್ತಕ ಬೇರೊಂದಿಲ್ಲ. 

ಅಂತುಹುದೊಂದು ಸ್ಥಳೀಯ ಬಿಡುಗಡೆ ಮತ್ತು ಚರ್ಚೆ ಇತ್ತೀಚೆಗೆ ತುಮಕೂರಿನಲ್ಲಿಯೂ ನಡೆಯಿತು. ಕಥೆಗಾರರು ಮತ್ತು ಈ ಪುಸ್ತಕಕ್ಕೆ ಲೇಖನ ಬರೆದಿರುವ ಡಾ. ಮಿರ್ಜಾ ಬಶೀರ್, ಅವರ ಮನೆಯ ತಾರಸಿಯಲ್ಲಿಯೇ ಇದನ್ನು ಆಗುಮಾಡಿದರು. ನೆರೆದ ಬಳಗ ಪುಟ್ಟದಾದರೂ ನಡೆದ ಚರ್ಚೆ ಗಂಭೀರವಾಗಿತ್ತು. ಡಾ. ಬಶೀರ್ ಅವರ ಮನೆಯವರೆಲ್ಲಾ ಈ ಚರ್ಚೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದೇ ಅಲ್ಲದೆ ಒಪ್ಪವಾಗಿ ಆಯೋಜಿಸಿದ್ದು ವಿಶೇಷ. ತುಮಕೂರಿನಲ್ಲಿ ಈ ರೀತಿ ಮನೆ-ಮನೆಗಳಲ್ಲಿ ಚರ್ಚೆ-ಸಂವಾದಗಳು ನಡೆದು ಎಷ್ಟೋ ವರ್ಷಗಳಾಗಿದ್ದವು. ಕನ್ನಡ ಭವನ ಅಥವಾ ಇನ್ನಾವುದೇ ದೊಡ್ಡ ಸಭಾಂಗಣಗಳಲ್ಲಿ ನಡೆದ ಕಾರ್ಯಕ್ರಮಗಳಿಗೂ ಬರುವವರ ಸಂಖ್ಯೆ ಕೆಲವೊಮ್ಮೆ 30 ದಾಟುವುದಿಲ್ಲ. ಅಂತಹುದರಲ್ಲಿ ಈ ಕಾರ್ಯಕ್ರಮಕ್ಕೆ 25ಕ್ಕೂ ಅಧಿಕ ತುಮಕೂರಿನ ಮನಸುಗಳು ಬಂದಿದ್ದವು.

ಮಿರ್ಜಾ ಬಶೀರ್ ಅವರು ಒಂದು ಕತೆ ಹೇಳುವ ಮೂಲಕ ಸಂವಾದಕ್ಕೆ ಚಾಲನೆ ನೀಡಿದರು. ಕತೆ ಏನೆಂದರೆ; ಒಂದಾನೊಂದು ಕಾಲದಲ್ಲಿ ಸುಳ್ಳು ಮತ್ತು ಸತ್ಯ ಎಂಬ ಇಬ್ಬರು ಇದ್ದರಂತೆ. ಇಬ್ಬರಿಗೂ ನಾನಾ ವಿಷಯಗಳಲ್ಲಿ ಪರಸ್ಪರ ಸ್ಪರ್ಧೆ, ವಾಗ್ವಾದ ನಡೆಯುತ್ತಿದ್ದವಂತೆ. ಸುಳ್ಳು ತುಂಬಾ ಆರ್ಭಟದ ಮಾತುಗಳನ್ನಾಡಿದರೆ ಸತ್ಯ ಮೆಲುದನಿಯಲ್ಲಿ ತನ್ನ ನಿಲುವು ವ್ಯಕ್ತಪಡಿಸುತ್ತಿತಂತೆ. ಒಮ್ಮೆ ನದಿಯೊಂದರಲ್ಲಿ ಮೈತೊಳೆದುಕೊಳ್ಳಲು ಸತ್ಯ ತನ್ನ ಬಟ್ಟೆಗಳನ್ನು ದಡದಲ್ಲಿ ಕಳಚಿಟ್ಟು  ಹೋಗಿದ್ದಾಗ ಸುಳ್ಳು ಆ ಬಟ್ಟೆಗಳನ್ನು ಹಾಕಿಕೊಂಡು ಓಡಿಹೋಯಿತಂತೆ. ಇಂದಿಗೂ ಆ ಸುಳ್ಳು ಸತ್ಯದ ಬಟ್ಟೆಯನ್ನೇ ಹಾಕಿಕೊಂಡು ತಿರುಗುತ್ತಿದೆ. ಎಲ್ಲರೂ ಸುಳ್ಳನ್ನೆ ಸತ್ಯ ಎಂದುಕೊಂಡುಬಿಟ್ಟಿದ್ದಾರೆ. 

ತುಂಬಾ ಮಾರ್ಮಿಕವಾದ ಕತೆ ಇದು. ಸಾಮಾಜಿಕ ಮಾಧ್ಯಮಗಳು ಜಗತ್ತನ್ನು ಬುಗುರಿಯಂತೆ ತಿರುಗಿಸುತ್ತಿರುವ ಸಧ್ಯದ ಪರಿಸ್ಥಿತಿಯಲ್ಲಿ ಸುಳ್ಳು ಎಂಬುದು ಸತ್ಯದ ಬಟ್ಟೆಗಳನ್ನಷ್ಟೇ ಅಲ್ಲ, ಅದರ ನಡೆ-ನುಡಿ, ವೇಷ-ಭೂಷಣ, ಒಡವೆ-ವಸ್ತç ಎಲ್ಲವನ್ನೂ ತೊಟ್ಟು ವಿಜೃಂಬಿಸುತ್ತಿದೆ. ಸತ್ಯ ಎಲ್ಲಾದರೂ ಕಾಣಿಸಿಕೊಂಡರೆ ಗುಂಡು ಹೊಡೆದು ಸಾಯಿಸುವ, ಇಲ್ಲವೇ ಪಾಕಿಸ್ತಾನಕ್ಕೆ ತಿಕೀಟು ಕೊಡಿಸುವ, ಇಲ್ಲವೇ ಜೈಲಿಗೆ ಅಟ್ಟುವ, ಇಲ್ಲವೇ ಟ್ರೋಲಿಸುವ ಕೆಲಸ ನಡೆಯುತ್ತಿದೆ.

‘ಮಾತುಗಳು ಸೋತಿರುವ ಸಂದರ್ಭವಿದು’ ಎನ್ನುತ್ತಲೇ ಮಾತು ಆರಂಭಿಸಿದವರು ಡಾ. ನಟರಾಜ ಬೂದಾಳು. ಅವರ ಮಾತುಗಳಲ್ಲಿ ಉಣ್ಣುವ ಕಡೆ ಹೊಲಸು ಮಾಡುವವರು, ಕಪ್ಪು ಹುಡುಗ ಮತ್ತು ಬಿಳಿಯ ಹುಡುಗಿಯ ಆತ್ಮೀಯತೆ, ಹೊಲಸನ್ನು ಗುಡಿಸಿ ಎಸೆಯುವ ಅನಿವಾರ್ಯತೆ ಮುಂತಾದ ಹಲವು ರೂಪಕಗಳು ಬಂದುಹೋದವು. ಸೌಹಾರ್ದ ಎಂಬುದು ನಮ್ಮಲ್ಲಿ ಸಹಜವಾಗಿ ಇತ್ತು. ಈಗ ಅದನ್ನು ಇಲ್ಲವಾಗಿಸಿದ್ದಾರೆ, ಹೀಗೆ ಇಲ್ಲವಾಗಿಸುವವರು ಯಾರು, ಯಾಕೆ ಇಲ್ಲವಾಗಿಸುತ್ತಾರೆ, ಸಾಮರಸ್ಯವನ್ನ ಕದಡುವಂತಹ ಮಾತುಗಳು ಮತ್ತು ಅದು ಹುಟ್ಟಿ ಬರುತ್ತಿರುವ ಆಕರಗಳು  ಇವೆಲ್ಲಾ ಪೊಳ್ಳನ್ನು ನಂಬಿಕೊಂಡಿರುವಂತಹವು. ಅದು ಈಗಲೇ ನಿಲ್ಲುವಂತೆ ಕಾಣುವುದಿಲ್ಲ. ಆದರೆ ನಾವು ಕೇಡನ್ನು ಬಯಸುವವರನ್ನು ದ್ವೇಷಿಸುವುದು ಬೇಡ, ಎಂದಾದರೂ ಅವರು ನಮ್ಮ ಜೊತೆಗೆ ಕುಳಿತುಕೊಂಡು ಉಂಡು ಹೋಗುತ್ತಾರೆ ಎಂಬ ವಿಶ್ವಾಸ ಇಟ್ಟುಕೊಳ್ಳೋಣ ಎಂದು ಅಭಿಪ್ರಾಯ ಪಟ್ಟರು. 

ಚಲನಚಿತ್ರ ನಟರಾದ  ಹನುಮಂತೇಗೌಡರು ಮಾತನಾಡಿ ಎಲ್ಲಾ ಧರ್ಮದಲ್ಲಿರುವ ಮತಾಂಧರನ್ನು ಎಲ್ಲರೂ ಖಂಡಿಸಬೇಕು. ಇಂದು ಇಂತಹ ಮತಾಂಧರಿಂದಲೇ ಕೇಡನ್ನೆ ಬಯಸುವ, ಸಂವಿಧಾನ ಬದಲಾಯಿಸುವ, ಪ್ರಜಾಪ್ರಭುತ್ವವನ್ನು ಧಿಕ್ಕರಿಸುವ ಸರ್ಕಾರಗಳು ಬರಲು ಕಾರಣವಾಗಿವೆ ಎಂದು ಚರ್ಚೆಗೆ ಒಂದು ಹೊಸ ಹೊಳಹು ನೀಡಿದರು. ಲಕ್ಷ್ಮಿಕಾಂತೆರಾಜ ಅರಸು ಅವರು ಮಾತನಾಡಿ ಇಂದು ಸಣ್ಣ ವಿಷಯಗಳನ್ನೆ ದೊಡ್ಡದು ಮಾಡಿ ಸಾಮರಸ್ಯ ಹಾಳು ಮಾಡುತ್ತಿದ್ದು, ಪ್ರತಿಯೊಬ್ಬರು ಇದನ್ನು ಖಂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಆರ್. ಶಾಂತಮೂರ್ತಿ, ನಿಕೇತ, ಬಾ.ಹ. ರಮಾಕುಮಾರಿ, ಗೀತಾ ವಸಂತ, ಎಸ್.ಎ. ಖಾನ್, ಹೆಚ್.ವಿ. ವೆಂಕಟಾಚಲ,  ಮಲ್ಲಿಕಾರ್ಜುನ ಹೊಸಪಾಳ್ಯ, ಚೈತನ್ಯ, ಮಧುಸೂಧನ್, ರಶ್ಮಿ, ಶಮಾ ಮುಂತಾದವರು ಭಾಗವಹಿಸಿದ್ದರು.

‘ಸೌಹಾರ್ದ ಕರ್ನಾಟಕ’ ಪುಸ್ತಕದ ಎರಡನೇ ಸಂಪುಟ ಇನ್ನೇನು ಬಿಡುಗಡೆಯಾಗಲಿದೆ. ಆ ಮೂಲಕ ಸಾಮರಸ್ಯದ ನೆನಪುಗಳು ಮತ್ತು ಅವುಗಳ ಪಸರಿಸುವಿಕೆ ಹೀಗೇ ನಡೆಯುತ್ತಿರಲಿ. ನಮ್ಮ ಎಳೆ ಮನಸುಗಳ ಭಾವಕೋಶ ಇಂತಹ ಸಹಜೀವನದ ಹೂರಣದಿಂದ ಆವೃತವಾಗಲಿ.