ಮಹಾನಾಯಕನ ಐಬು ಮತ್ತು ಅಂಧಭಕ್ತರ ಹೂಂಕಾರ

ಭಾರತ ದೇಶ ಕಳೆದ ಹತ್ತು ವರ್ಷಗಳಿಂದ ಅದೆಂಥ ಕರಾಳಕೂಪಕ್ಕೆ ಜಾರುತ್ತಿದೆ ಎಂಬುದರ ಬಗ್ಗೆ ಲೇಖಕ ಅವಯ್‌ ಶುಕ್ಲಾ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು: Disappearing of Democracy and Dismantling of a Nation -ಅಂದರೆ, ʻಪ್ರಜಾತಂತ್ರ ಕಣ್ಮರೆಯಾಗ್ತಿದೆ, ರಾಷ್ಟ್ರವೊಂದು ಕಳಚಿ ಬೀಳ್ತಿದೆʼ. ಈ ಗ್ರಂಥದ ಹುರುಳೇನು? The Wire ಜಾಲತಾಣದ ಖ್ಯಾತ ಪತ್ರಕರ್ತ ಕರಣ್‌ ಥಾಪರ್‌ ಈಚೆಗೆ ಗ್ರಂಥಕರ್ತ ಶುಕ್ಲಾ ಜೊತೆ ನಡೆಸಿದ ಸಂವಾದದ ತಿರುಳು ಇಲ್ಲಿದೆ.

ಮಹಾನಾಯಕನ ಐಬು ಮತ್ತು ಅಂಧಭಕ್ತರ ಹೂಂಕಾರ

  

ಕರಣ್‌ ಥಾಪರ್‌: ʻವಿಶ್ವಗುರುʼ ಅನ್ನಿಸಿಕೊಳ್ಳಬೇಕೆಂಬ ತವಕ ಮತ್ತು ʻಹಿಂದೂ ಹೃದಯ ಸಾಮ್ರಾಟʼ ಎನ್ನಿಸಿಕೊಳ್ಳುವ ತುಡಿತ- ಇವೆರಡೂ ಒಂದಕ್ಕೊಂದು ಹೊಂದಲ್ಲ ಅಂತೀರಲ್ಲ ಹೇಗೆ?

ಅವಯ್‌ ಶುಕ್ಲಾ: ಅವೆರಡರ ದಾರಿ ಬೇರೆ ಬೇರೆ. ವಿಶ್ವಮಟ್ಟದ ಮುತ್ಸದ್ದಿ ಆಗಬೇಕೆಂದರೆ ಅಂತರರಾಷ್ಟ್ರೀಯ ಸದ್ಭಾವನೆಗಳನ್ನು ಮಾನ್ಯ ಮಾಡಬೇಕಾಗುತ್ತದೆ. ಮಾನವಹಕ್ಕು, ಮಾಧ್ಯಮ ಸ್ವಾತಂತ್ರ್ಯ, ನ್ಯಾಯನಿಷ್ಠುರತೆ, ಧಾರ್ಮಿಕ ಸ್ವಾತಂತ್ರ್ಯ ಇವನ್ನೆಲ್ಲ ಗೌರವಿಸಬೇಕಾಗುತ್ತದೆ. ಮೋದಿಯವರು ತಮ್ಮನ್ನು ತಾವು ದಕ್ಷಿಣ ಗೋಲಾರ್ಧದ ಮಹಾನಾಯಕನೆಂದು ಬಿಂಬಿಸಿಕೊಳ್ಳಲೂ ವಿಫಲರಾಗಿದ್ದಾರೆ. ಇಸ್ರೇಲ್‌ ಪ್ಯಾಲಸ್ತೀನ್‌ ಸಂಘರ್ಷದಲ್ಲಿ ಅವರನ್ನು ಮೂಲೆಗೆ ತಳ್ಳಲಾಗಿದೆ. ಇತ್ತ, ತಾನು ಹಿಂದೂ ಸಾಮ್ರಾಟ್‌ ಎನ್ನಿಸಿಕೊಳ್ಳಬೇಕಾದರೆ ಮತಧರ್ಮಗಳ ನಡುವಣ ಬಿರುಕನ್ನು ದೊಡ್ಡದು ಮಾಡಬೇಕು. ಪ್ರತಿರೋಧವನ್ನು ಹತ್ತಿಕ್ಕಬೇಕು. ಅಲ್ಪಸಂಖ್ಯಾತರ ರೆಕ್ಕೆಪುಕ್ಕ ಕಳಚಬೇಕು. ಈ ಧೋರಣೆ ಜಾಗತಿಕ ಮುತ್ಸದ್ದಿಯಾಗುವ ಹಂಬಲಕ್ಕೆ ತೊಡಕನ್ನುಂಟು ಮಾಡುತ್ತದೆ.

ಕರಣ್‌ ಥಾಪರ್‌: ಆದರೂ ಈ ಎರಡು ವಿರುದ್ಧ ಕನಸುಗಳನ್ನು ಹೊತ್ತ ಮೋದಿ ಹೇಗೆ ಮುನ್ನಡೆಯುತ್ತಾರೆ? ಅವರ ವ್ಯಕ್ತಿತ್ವದಲ್ಲೇ ಏನಾದರೂ ಐಬು ಇದೆಯಾ?

ಶುಕ್ಲಾ: ನೈತಿಕ ಮತ್ತು ಅನೈತಿಕ ಇವೆರಡರ ನಡುವಣ ʻನಿರ್ನೈತಿಕʼ ನಿಲುವು ಅವರದ್ದು. ಅಪಾರ ಆತ್ಮರತಿಯುಳ್ಳ ಅವರು ತಾನೊಬ್ಬ ನಿಜಕ್ಕೂ ದೇವದೂತ ಎಂಬ ಭ್ರಮಾಸ್ಥಿತಿಗೂ ಬಂದಂತಿದೆ. ತಾನು ಮಾಡಿದ್ದೇ ಸರಿ ಎಂಬ ಭ್ರಮೆಯಲ್ಲಿದ್ದವರಿಗೆ ನೀತಿ-ಅನೀತಿಗಳ ನಡುವಣ ವ್ಯತ್ಯಾಸ ಕಾಣುವುದಿಲ್ಲ. ಅವರ ವ್ಯಕ್ತಿತ್ವದಲ್ಲಿ ಐಬಿದೆಯೊ ಇಲ್ಲವೋ ಚರಿತ್ರೆ ಅದನ್ನು ನಿರ್ಧರಿಸುತ್ತದೆ. ಈಗಂತೂ ತನ್ನದು ಅತ್ಯಂತ ಯಶಸ್ವೀ ಅವತಾರ ಎಂದು ಅವರು ಭಾವಿಸಿದ್ದಾರೆ; ಅವರ ಅಸಂಖ್ಯಾತ ಭಕ್ತರೂ ಭಾವಿಸಿದ್ದಾರೆ.

ಕರಣ್‌ ಥಾಪರ್‌.: ಭ್ರಮಾಸ್ಥಿತಿ ಎಂದರೆ ಏನು? ತನ್ನನ್ನು ತಾನು ದೇವಾಂಶ ಸಂಭೂತ ಎಂಬ ಭ್ರಮೆಯಲ್ಲಿ ಇದ್ದಾರೆಯೆ ಮೋದಿ?

ಶುಕ್ಲ: ಮನೋವೈಜ್ಞಾನಿಕ ವಿಶ್ಲೇಷಣೆ ಮಾಡಬಲ್ಲ ತಜ್ಞರೇ ಅದನ್ನು ಹೇಳಬೇಕು. ಒಂದಂತೂ ನಿಜ. ಒಬ್ಬ ಮುತ್ಸದ್ದಿಗೆ ಇರಬೇಕಾದ ಪರಾನುಭೂತಿ, ಅನುಕಂಪ ಈ ಯಾವುದೂ ಈ ಮನುಷ್ಯನಲ್ಲಿಲ್ಲ. ರೈತರ ಬಗ್ಗೆ, ಮಹಿಳೆಯರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ, ಕೋವಿಡ್‌ ಕಾಲದ ಕಾಲ್ನಡಿಗೆಯ ಶ್ರಮಿಕರ ಬಗ್ಗೆ ಯಾವ ಅನುಭೂತಿಯೂ ಇಲ್ಲದ ವ್ಯಕ್ತಿತ್ವ ಇವರದು.

ಕರಣ್‌ ಥಾಪರ್‌.: ಸರಿ ಯಾವುದು, ತಪ್ಪು ಯಾವುದು ಎಂಬುದನ್ನೂ ಅರಿಯಲಾಗದ ವ್ಯಕ್ತಿತ್ವವೆ ಹಾಗಿದ್ದರೆ?

ಶುಕ್ಲಾ: ಹಿಂದಿನ ಯಾವ ಪ್ರಧಾನಿಯಲ್ಲೂ ಕಾಣದ ಗುಣ ಇವರಲ್ಲೇನಿದೆ ಅಂದರೆ ಅದೊಂದೇ! ಬಹಳಷ್ಟು ಸಂದರ್ಭಗಳಲ್ಲಿ ತನಗೆ ಬೇಕೆಂದ ಹಾಗೆ ಸತ್ಯವನ್ನು ತಿರುಚುವ ಗುಣ ಅವರಲ್ಲಿದೆ. ಅಂದರೆ ಸತ್ಯವನ್ನು ಹಂಚುವ ವಿಷಯದಲ್ಲಿ ಇವರು ಅಪಾರ ಜಿಪುಣ. ಚುನಾವಣೆ ಗೆಲ್ಲುವ ಸಾಮರ್ಥ್ಯವನ್ನು ಬಿಟ್ಟರೆ ಅವರಲ್ಲಿ ಎದ್ದುಕಾಣುವ ಬೇರೆ ಸದ್ಗುಣಗಳು, ಮೌಲ್ಯಗಳು ಏನೇನಿವೆ ಎಂದು ನಾನಂತೂ ತುಂಬಾ ಹುಡುಕಿ ನಿರಾಶನಾದೆ.

ಕರಣ್‌ ಥಾಪರ್‌.: ಬೇರೆ ಯಾವ ಅನುಕರಣೀಯ ಮೌಲ್ಯವೂ ಇಲ್ಲ ಅಂತೀರಾ?

ಶುಕ್ಲಾ: ಚುನಾವಣೆ ಗೆಲ್ಲೋದು ಮತ್ತು ಅಧಿಕಾರಕ್ಕೆ ಅಂಟಿಕೊಳ್ಳೋದು- ಇವೆರಡೂ ತನಗೆ ದೇವನಿರ್ದೇಶಿತ ಎಂದೇ ಅವರು ಭಾವಿಸಿದಂತಿದೆ.

ಕರಣ್‌ ಥಾಪರ್‌: ಅವರ ಆಳ್ವಿಕೆಯಲ್ಲಿ ದೇಶ ಎತ್ತ ಸಾಗುತ್ತಿದೆ ಎಂತಲೂ ನೀವು ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದೀರಿ. ನೀವು ಹೇಳುವ ಪ್ರಕಾರ ನಮ್ಮದು ʼಮೃಗಗಳ ದೇಶʼ ಆಗುತ್ತಿದೆ. ʻಮೃಗ ಅಂದರೆ ಹುಲಿ-ಸಿಂಹಗಳದ್ದಲ್ಲ, ಸೂಕರಗಳದ್ದುʼ ಎಂತಲೂ ನೀವು ಹೇಳಿದ್ದೀರಿ. ಕಳೆದ ಹತ್ತು ವರ್ಷಗಳಲ್ಲಿ ʻನಮ್ಮ ದೇಶದ ಸಾಮಾಜಿಕ ಮೌಲಿಕ ಸರೋವರ ಈಗ ಅಂಧಶ್ರದ್ಧೆ, ಅಜ್ಞಾನ, ದುರಭಿಮಾನ ಮತ್ತು ಧಾರ್ಮಿಕ ಅಸಹನೆಗಳ ಕೊಳಕು ಕೂಪವಾಗಿದೆʼ ಎಂದು ಬರೆದಿದ್ದೀರಿ. ತುಸು ವಿವರಿಸಿ ಹೇಳ್ತೀರಾ?

ಶುಕ್ಲಾ: ಈ ದೇಶ ಈಚೆಗೆ ತುಂಬ ಬದಲಾಗಿದೆ. ನಗರದ ಮಧ್ಯಮವರ್ಗ ಸಾಕಷ್ಟು ದೊಡ್ಡದಾಗಿ ಬೆಳೆದಿದೆ. ನಮ್ಮಲ್ಲಿ ಅಸಹನೆ ತೀರಾ ಜಾಸ್ತಿಯಾಗಿದೆ. ದೇಶದ ಇತರ 90% ಜನ ಹೇಗಿದ್ದಾರೆ, ಹೇಗೆ ಬದುಕುತ್ತಿದ್ದಾರೆ ಎಂಬುದರ ಪರಿಜ್ಞಾನವೇ ಇಲ್ಲ. ಕೋವಿಡ್‌ ನಂತರವಂತೂ ಈ ಅಸಹನೆ ಮಿತಿಮೀರಿದೆ. ವಾಟ್ಸಾಪ್‌ ಗ್ರುಪ್‌, ಮಾಧ್ಯಮಗಳ ಚರ್ಚೆ, ಬಹುಮಹಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA)ಗಳಲ್ಲಿನ ಚರ್ಚೆ, ಡ್ರಾಯಿಂಗ್‌ ರೂಮ್‌ ಹರಟೆಗಳಲ್ಲಿ ಅದು ವ್ಯಕ್ತ ಆಗ್ತಾ ಇದೆ. ಇದರಲ್ಲಿ ಅಚ್ಚರಿ ಏನಿಲ್ಲ ಕರಣ್‌! ಸಮಾಜವನ್ನು ಹೇಗೆ ʻತೀವ್ರವಾದʼದ ಕಡೆ ತಿರುಗಿಸಬಹುದು ಎಂಬ ಬಗ್ಗೆ ಸರ್‌ ಇಯಾನ್‌ ಕರ್ಶಾವ್‌ ಎಂಬ ಇತಿಹಾಸ ತಜ್ಞ ಈ ಹಿಂದೆಯೇ ವಿವರಿಸಿದ್ದಾನೆ. ಇಡೀ ದೇಶವನ್ನೇ ʻತೀವ್ರವಾದʼದ (ರಾಡಿಕಲೈಸೇಶನ್‌) ಕಡೆ ಕೊಂಡೊಯ್ಯುವುದು ಹೇಗೆ ಎಂದು ಆತ ವಿಶ್ಲೇಷಣೆ ಮಾಡಿದ್ದಾನೆ. ನಾಝಿ ಆಡಳಿತದಲ್ಲಿ ಜರ್ಮನಿಯ ಇಡೀ ಸಮಾಜವೇ ಹೇಗೆ ಕ್ರೂರವಾಗುತ್ತ ಹೋಯಿತು ಅನ್ನೋದನ್ನು ಕರ್ಶಾವ್‌ ಆಳವಾಗಿ ಅಧ್ಯಯನ ಮಾಡಿ ವಿವರಿಸಿದ್ದಾನೆ.

ಕರಣ್‌ ಥಾಪರ್‌.: ನಮ್ಮ ದೇಶ ʻಸೂಕರಗಳ ದೇಶʼ ಆಗುತ್ತಿದೆ ಅಂದಿರಲ್ಲ?

ಶುಕ್ಲಾ: ಜಾರ್ಜ್‌ ಆರ್ವೆಲ್‌ನ ಅನಿಮಲ್‌ ಫಾರ್ಮ್‌ ಮಾದರಿಯ ಪರಿವರ್ತನೆ ಅದು. ಕರ್ಶಾವ್‌ ಪ್ರಕಾರ ಸರ್ವಶಕ್ತ ನಾಯಕನಿಂದ ಆರಂಭವಾಗುವ ಈ ಪರಿವರ್ತನೆ ಏಳು ಪದರಗಳನ್ನು ದಾಟುತ್ತ ಹೋಗುತ್ತದೆ. ಅಧಿಕಾರವರ್ಗ, ಪೊಲೀಸ್‌, ಮಾಧ್ಯಮ, ಸಾಂಸ್ಥಿಕ ವೃಂದ, ಸಾಂಸ್ಕೃತಿಕ ಸಂಘಟನೆ.. ಹೀಗೆ ಆರು ಪದರಗಳನ್ನು ದಾಟಿ ಏಳನೆಯ ಪದರದಲ್ಲಿ ಇಡೀ ಸಮಾಜ ಬದಲಾಗಿರುತ್ತದೆ. ಸರ್ವೋಚ್ಚ ನಾಯಕನ ತೆವಲುಗಳೆಲ್ಲ -ಅಂದರೆ ಮತಾಂಧತೆ, ಬಹುಸಂಖ್ಯಾತರೆಂಬ ಹಮ್ಮು, ನಿರ್ಭಾವುಕತೆ, ಅಲ್ಪಸಂಖ್ಯಾತರ ತುಳಿತ- ಇವೆಲ್ಲವೂ ಪ್ರತಿಯೊಂದು ಪದರದಲ್ಲೂ ಹೆಚ್ಚಳಗೊಳ್ಳುತ್ತ ಹೋಗುತ್ತದೆ. ಕೊನೆಯ ಪದರಕ್ಕೆ ಬಂದಾಗ ಆ ಸಮಾಜದಲ್ಲಿ ಎರಡೇ ಗುಂಪುಗಳಿರುತ್ತವೆ.(1) ಸರ್ವೋಚ್ಚ ನಾಯಕನನ್ನು ಆರಾಧಿಸುವ ಭಕ್ತರ ಪಡೆ ಮತ್ತು (2) ತೆಪ್ಪಗೆ ತಲೆಬಾಗಿ ಎಲ್ಲವನ್ನೂ ಸಹಿಸಿಕೊಳ್ಳುವವರ ಪಡೆ. ನಮ್ಮ ಸಮಾಜ ಕ್ರಮೇಣ ಆ ಹಂತಕ್ಕೆ ಜಾರುತ್ತದೆ. ಈಗ ಭಕ್ತರ ಹಾವಳಿ ಅದೆಷ್ಟು ವ್ಯಾಪಕ ಆಗುತ್ತಿದೆ ಎಂದರೆ, ಯಾವ ಹೊಸ ಆದೇಶವನ್ನೂ ಸರ್ವೋಚ್ಚ ನಾಯಕ ಕೊಡಬೇಕಾಗಿಯೇ ಇಲ್ಲ. ಭಕ್ತರು ತಾವೇ ನೈತಿಕ ಪೊಲೀಸರಾಗುತ್ತಾರೆ. ಯಾರು ಹೇಗೆ ಬದುಕಬೇಕು ಎಂಬುದನ್ನು ಅವರೇ ನಿರ್ದೇಶಿಸುತ್ತಾರೆ.

ಕರಣ್‌ ಥಾಪರ್‌: ಇದಕ್ಕೆಲ್ಲ ಭಾಜಪಾ ಸರಕಾರವೇ ಕಾರಣ ಎನ್ನುತ್ತೀರಾ?

ಶುಕ್ಲಾ: ನಮ್ಮನ್ನೂ ನಾವು ಪ್ರಶ್ನಿಸಿಕೊಳ್ಳಬೇಕು. 2012ರಲ್ಲಿ ನಿರ್ಭಯಾ ಪ್ರಕರಣದಲ್ಲಿ ಹೇಗೆ ಇಡೀ ದೇಶ ಎದ್ದು ನಿಂತಿತ್ತು ನೆನಪಿದೆಯೆ? ದಿಲ್ಲಿಯ ಬೋಟ್‌ ಕ್ಲಬ್‌ನಲ್ಲಿ ಹತ್ತಾರು ಸಾವಿರ ಜನ ವಾರಗಟ್ಟಲೆ ಬೀಡುಬಿಟ್ಟಿದ್ದರು. ಆನಂತರದ ಅಂಥ ಪ್ರಕರಣಗಳು -ಕಠುವಾ ರೇಪ್‌, ಹಾಥ್ರಸ್‌ ರೇಪ್‌ ಆದಾಗ ಏನಾಯ್ತು? JNU Jamia Miliaಗಳಲ್ಲಿ ಗೂಂಡಾಗಳು ವಿದ್ಯಾರ್ಥಿನಿಯರನ್ನು ಥಳಿಸಿದಾಗ ಏನಾಯ್ತು? ದನಿ ಎತ್ತಿದವರೇ ಇಲ್ಲ. ಕುಸ್ತಿಯುವತಿಯರ ಅಳಲಿಗೆ ಧ್ವನಿಕೊಡಲು ಯಾರೂ ಮುಂದೆ ಬಂದಿಲ್ಲ. ಪ್ರತಿಭಟನೆ ಮಾಡಿದರೆ ಪೊಲೀಸ್‌ ದಬ್ಬಾಳಿಕೆಯ ಭಯ ಎಂತಲೇ ಎಲ್ಲರೂ ಮನೆಯೊಳಗಿದ್ದೆವು ತಾನೆ? ತಪ್ಪು ನಮ್ಮದೂ ಇದೆ...

ಕರಣ್‌ ಥಾಪರ್‌.: ನಿರ್ಭಯಾ ಸಂದರ್ಭದ ಧೈರ್ಯವನ್ನು ಶ್ಲಾಘಿಸಿದ ನೀವು ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ತಪ್ಪಿತಸ್ಥರ ಬಿಡುಗಡೆ ಆದಾಗ ಸಮಾಜ ತೆಪ್ಪಗೆ ಉಳಿದಿದ್ದನ್ನು ಖಂಡಿಸಿದ್ದೀರಿ....

ಶುಕ್ಲಾ: ಹೌದು. ಈ ಹತ್ತು ವರ್ಷಗಳಲ್ಲಿ ನಮ್ಮ ಧೋರಣೆ ಹೇಗೆ ಬದಲಾಯ್ತು ಅನ್ನೋದನ್ನ ದಾಖಲಿಸಿದ್ದೇನೆ.

ಕರಣ್‌ ಥಾಪರ್‌: ಏನು ಬದಲಾಯ್ತು, ಹೇಗೆ ಬದಲಾಯ್ತು..?

ಶುಕ್ಲಾ: ಅರ್ಧದಷ್ಟು ಜನರು ಭಕ್ತರಾಗಿದ್ದಾರೆ. ಸರಕಾರದ ಎಲ್ಲ ಅನೈತಿಕ ಕೃತ್ಯಗಳೂ, ಎಲ್ಲ ಕರಾಳ ಹೆಜ್ಜೆಗಳೂ ಸರಿ ಎಂದು ಅಂಧಭಕ್ತರು ನಂಬುತ್ತಿದ್ದಾರೆ. ʻಮುಸ್ಲಿಮರಿಗೆ ಈ ದೇಶದಲ್ಲಿ ಜಾಗ ಇಲ್ಲʼ; ʻರೋಹಿಂಗ್ಯಾ ನಿರಾಶ್ರಿತರನ್ನು ಒದ್ದೋಡಿಸಿದ್ದು ಸರಿʼ, ʻಸಿಎಎ ಜಾರಿಗೆ ಬರೋದು ಬರೋಬ್ಬರಿ ಇದೆʼ ಎಂದು ಇವರು ನಂಬುತ್ತಿದ್ದಾರೆ. ಅಷ್ಟರಮಟ್ಟಿಗೆ ಅಂಥ ಭಕ್ತರ ಅಂಧತ್ವನ್ನು ಮೆಚ್ಚಿಕೊಳ್ಳೋಣ. ಅವರು ತಮ್ಮ ಕೈಗೆ ಬಂದ ತುತ್ತನ್ನು ಮಹಾಪ್ರಸಾದವೆಂದು ಬಾಯಿಗೆ ಇಟ್ಟುಕೊಳ್ಳುತ್ತಿದ್ದಾರೆ. ಆದರೆ ಇನ್ನರ್ಧ ಜನ, ತೆಪ್ಪಗೆ ಕೂತಿದ್ದಾರಲ್ಲ, ಅವರಿಗೆ ಏನನ್ನೋಣ?

ಕರಣ್‌ ಥಾಪರ್‌.: ಇದೆಲ್ಲಕ್ಕೂ ಸರಕಾರಿ ನೀತಿಯೇ ಕಾರಣ ಎನ್ನುತ್ತೀರಾ?

ಶುಕ್ಲಾ: ಸರಕಾರ ಆರಂಭಿಸಿದ ಈ ನಡೆಯನ್ನು ಭಕ್ತರು ತಾವಾಗಿ ಉತ್ಸಾಹದಿಂದ ಮುಂದಕ್ಕೊಯ್ಯುತ್ತಿದ್ದಾರೆ. ಅದಕ್ಕೇ ನಾನು ʼಪ್ರಜಾತಂತ್ರ ಕಳಚಿಕೊಳ್ಳುತ್ತಿದೆʼ ಎಂದು ಹೇಳಿದ್ದು. ನಮ್ಮ ನೈತಿಕ ಕುಸಿಯುತ್ತಿದೆ; ಈ ಕುಸಿತ ಇನ್ನೂ ತೀವ್ರವಾದರೆ ಅದರ ಮತ್ತೆ ಎತ್ತಿ ನಿಲ್ಲಿಸಲು ಸಾಧ್ಯವಿಲ್ಲ.

ಕರಣ್‌ ಥಾಪರ್‌.: ಅಂದರೆ ನಾವು ಒಂದು ಸಮಾಜವಾಗಿ ನಮ್ಮನ್ನು ನಾವೇ ಅಧಃಪತನಕ್ಕೆ ಒಯ್ಯುತ್ತಿದ್ದೇವೆಯೆ?

ಶುಕ್ಲಾ: ಹೌದು, ನಾವು ನಮ್ಮ ಚರಿತ್ರೆಯನ್ನೇ ಪರಿತ್ಯಾಗ ಮಾಡುತ್ತಿದ್ದೇವೆ.

ಕರಣ್‌ ಥಾಪರ್‌.: ಈ ಹತ್ತು ವರ್ಷಗಳಲ್ಲಿ ನಮ್ಮ ದೇಶದ ಜನರ ಬಗ್ಗೆ ನಿಮಗೆ ಅಭಿಮಾನ ಕಡಿಮೆ ಅಗುತ್ತಿದೆಯೆ?

ಶುಕ್ಲಾ: ಹೌದು, ನನ್ನ ಸಹೋದ್ಯೋಗಿ ಮಿತ್ರರು, ಬಂಧುವರ್ಗ, ವಾಟ್ಸಾಪ್‌ ಗ್ರುಪ್‌ RWA ಗೆಳೆಯರು, ನಿವೃತ್ತ ಐಎಎಸ್‌ ಅಧಿಕಾರಿಗಳು ಎಲ್ಲರೂ ಬದಲಾಗಿದ್ದಾರೆ. ತಂತಮ್ಮ ವೈಯಕ್ತಿಕ ಹಿತಾಸಕ್ತಿ, ಶೇರುಪೇಟೆ ವ್ಯವಹಾರ ಬಿಟ್ಟರೆ ಇನ್ನೆಲ್ಲದರಲ್ಲೂ ಆಸಕ್ತಿ ಹೊರಟುಹೋಗಿದೆ.

ಕರಣ್‌ ಥಾಪರ್‌.: ನಾವೆಲ್ಲ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ, ಅಸೂಕ್ಷ್ಮರಾಗಿದ್ದೇವೆ ಎಂತಲೂ ನೀವು ಈ ಕೃತಿಯಲ್ಲಿ ವಾದಿಸಿದ್ದೀರಿ. ಅದು ಹೇಗೆ?

ಶುಕ್ಲಾ: ಕಷ್ಟದಲ್ಲಿದ್ದವರಿಗೆ ಸಹಾಯ, ಕರುಣೆ, ಸಹಕಂಪನ, ಮಿಡಿವಮನ ಇವೆಲ್ಲ ಕಡಿಮೆ ಆಗುತ್ತಿವೆ. ವಿಮಾನದಲ್ಲಿ ಬೇರೊಬ್ಬರ ಮೇಲೆ ಮೂತ್ರವಿಸರ್ಜನೆ ಮಾಡಿದರೂ ನಮಗೆ ಏನೂ ಅನ್ನಿಸಲಾರದು. ಆದರೆ ಇಲ್ಲೊಂದು ವಿರೋಧಾಭಾಸ ಇದೆ. ಧರ್ಮದ ವಿಚಾರ ಬಂದಾಗ, ನಮ್ಮ ಸ್ವಂತದ ಧರ್ಮದ ವಿಚಾರ ಬಂದಾಗ ನಾವು ಮಹಾಸೂಕ್ಷ್ಮ ಆಗುತ್ತೇವೆ. ಪ್ರತಿಷ್ಠಿತ ಬೂಕರ್‌ ಬಹುಮಾನ ಪಡೆದ ಸಾಹಿತಿ ಗೀತಾಂಜಲಿಶ್ರೀ ವಿರುದ್ಧ, ಅವರ ಕಾದಂಬರಿಯಲ್ಲಿ ಧರ್ಮಕ್ಕೆ ಅಪಚಾರ ಆಗಿದೆ ಎಂಬ ಕಾರಣಕ್ಕೆ ಕಾನಪುರದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅದು ಹಾಗಿರಲಿ, ಅಕಬರ್‌ ಹೆಸರಿನ ಸಿಂಹವೊಂದರ ಜೊತೆ ಇರಲೆಂದು ಸೀತಾ ಹೆಸರಿನ ಸಿಂಹಿಣಿಯನ್ನು ಕರೆತಂದಿದ್ದಕ್ಕೆ ಖಟ್ಲೆ ಹೂಡಲಾಗಿದೆ. ಅದನ್ನು ಹೈಕೋರ್ಟ್‌ ಮಾನ್ಯ ಮಾಡಿದೆ ಕೂಡ! ನಮ್ಮ ಧರ್ಮದ ಬಗ್ಗೆ ಅಪಾರ ಗರ್ವ, ಇತರರ ಧರ್ಮದ ಬಗ್ಗೆ ಅತೀವ ಅಸಹನೆ. ಒಟ್ಟಾರೆ ಹಿಂದೂ ಶ್ರೇಷ್ಠತೆಯ ವ್ಯಸನ ತಾರಕಕ್ಕೇರುತ್ತಿದೆ.

ಕರಣ್‌ ಥಾಪರ್‌.: ಇದಕ್ಕೆ ಸಂಘ ಪರಿವಾರದ ಪ್ರಭಾವವೇ ಕಾರಣ ಎನ್ನುತ್ತೀರಾ?

ಶುಕ್ಲಾ: ಸಂಘ ಪರಿವಾರವಷ್ಟೇ ಅಲ್ಲ, ಸರಕಾರದ ನಡೆಗಳೂ ಕಾರಣ. ಅದು ಕ್ರಮೇಣ ಇಡೀ ಸಮಾಜದ ಧೋರಣೆಯನ್ನೂ ರೂಪಿಸುತ್ತದೆ. ನನ್ನದೇ ಉದಾಹರಣೆ ನೋಡಿ: ನನ್ನ ಮೂರನೆಯ ಪುಸ್ತಕಕ್ಕೆ ನಾನು ʻಲೂಸ್‌ ಕ್ಯಾನನ್ಸ್‌ ಅಂಡ್‌ ಹೋಲಿ ಕೌಸ್‌ʼ (ಫಿರ್ಕಿ ಫಿರಂಗಿ ಮತ್ತು ಪವಿತ್ರ ಗೋವು) ಎಂದು ಹೆಸರಿಟ್ಟಿದ್ದೆ. ʻಪವಿತ್ರ ಗೋವುʼ ಪದ ಬೇಡವೇ ಬೇಡವೆಂದು ಪ್ರಕಾಶಕ ಪಟ್ಟು ಹಿಡಿದು ಕೂತ.

ಕರಣ್‌ ಥಾಪರ್‌.: ನೀವು ಇನ್ನೂ ಕೆಲವು ಘಟನೆಗಳನ್ನು ಈ ಪುಸ್ತಕದಲ್ಲಿ ಕೊಟ್ಟಿದ್ದೀರಿ: ದೇವರ ಚಿತ್ರ ಇರುವ ಕಾಗದದಲ್ಲಿ ನಾನ್‌ವೆಜ್‌ ಪಕೋಡಾ ಕಟ್ಟಿಸಿಕೊಂಡಿದ್ದವನ ಮೇಲೆ ಪ್ರಹಾರ, ಅಸ್ಸಾಮಿನ ಒಂದು ಬೀದಿಯಲ್ಲಿ ಶಿವನ ವೇಷ ಹಾಕಿದವನೊಬ್ಬ ʻಬೆಲೆಯೇರಿಕೆಗೆ ಧಿಕ್ಕಾರʼ ಎಂದು ಕೂಗಿದ್ದಕ್ಕೆ ದಸ್ತಗಿರಿ -ಇಂಥವೇ ಕೆಲವು ಉದಾಹರಣೆಗಳು ಇಲ್ಲಿವೆ. ಇವೆಲ್ಲ ಮೋದಿ ಸರಕಾರದ ಕುಮ್ಮಕ್ಕಿನಿಂದಲೇ ಅನ್ನುತ್ತೀರಾ?

ಶುಕ್ಲಾ: ಕುಮ್ಮಕ್ಕಿನ ಘಟ್ಟವನ್ನು ದಾಟಿ ಆಗಿದೆ. ಮಹಾನಾಯಕ ಅಥವಾ ಆತನ ಸರಕಾರ ಈಗ ಮೌನವಾಗಿದ್ದರೂ ಜನಸಾಮಾನ್ಯರೇ ಬೀದಿಗಿಳಿದು ಪುಂಡಾಟ ನಡೆಸುತ್ತಾರೆ. ಮಹಾನಾಯಕನ ಮೌನ ಸಮ್ಮತಿ ಮತ್ತು ಸರಕಾರದ ಕೃಪಾಶೀರ್ವಾದ ತನ್ನ ಮೇಲೆ ಇದೆಯೆಂದೇ ಅವರು ಭಾವಿಸುತ್ತಾರೆ.

ಕ.ಥಾ.: ಅಂದರೆ ಮೋದಿಯವರು ಪ್ರಜೆಗಳ ಮನದಾಳದಲ್ಲಿ ಹುದುಗಿರಬಹುದಾದ ಕರಾಳ ಕ್ರೌರ್ಯಗಳನ್ನೆಲ್ಲ ಹೊರಕ್ಕೆಳೆದಿದ್ದಾರೆ ಅಂತಲೆ? ಅದರಿಂದಾಗಿಯೇ ನಮ್ಮ ಸುಸಂಸ್ಕೃತ ಸಭ್ಯ ಸಮಾಜ ಈಗ `ಸೂಕರಗಳ ಸಮುದಾಯ' ಆಗಿದೆ ಎಂದು ಹೇಳುತ್ತೀರಾ?

ಶುಕ್ಲಾ: ನಿಸ್ಸಂಶಯವಾಗಿ....

[ಸಂದರ್ಶನದ ಮುಖ್ಯಭಾಗ ಇಲ್ಲಿಗೆ ಮುಗಿಯಿತು. ಇವರಿಬ್ಬರ ಸಂವಾದದ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ:

https://www.youtube.com/watch?v=SSzcb6K-Apc&t=154s

 

ಕನ್ನಡದ ಹೆಸರಾಂತ ಲೇಖಕ , ಪತ್ರಕರ್ತ ನಾಗೇಶ ಹೆಗಡೆ ಅವರು ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂದರ್ಶನವನ್ನು ಕನ್ನಡಕ್ಕೆ ತಂದಿದ್ದಾರೆ.