ʼದೋಸ್ತಿ-ಕುಸ್ತಿʼ‌ಗೆ ಕಂಗಾಲಾದ ಕರ್ನಾಟಕ

ʼದೋಸ್ತಿ-ಕುಸ್ತಿʼ‌ಗೆ ಕಂಗಾಲಾದ ಕರ್ನಾಟಕ

ರಾಜಕೀಯ ವಿಶ್ಲೇಷಣೆ

ಬಸವರಾಜು ಮೇಗಲಕೇರಿ

 

ಸಂಘಟನಾ ಚತುರ ಬಿ.ಎಲ್ ಸಂತೋಷ್

ಚಕ್ರವರ್ತಿ ಬಿ.ಎಸ್.ಯಡಿಯೂರಪ್ಪನವರ

ʼದೋಸ್ತಿ-ಕುಸ್ತಿʼ‌ಗೆ ಕಂಗಾಲಾದ ಕರ್ನಾಟಕ

 

 

    ಭಾರತೀಯ ಜನತಾ ಪಕ್ಷ ಅಳೆದು-ಸುರಿದು ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 189, ಎರಡನೇ ಪಟ್ಟಿಯಲ್ಲಿ 23 ಕಣಕ್ಕಿಳಿಸುವ ಕಲಿಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯ ಬೆನ್ನಲ್ಲೇ ಬಂಡಾಯ ಭುಗಿಲೆದ್ದಿದೆ. ಅಸಮಾಧಾನ, ಕಣ್ಣೀರು, ರಾಜೀನಾಮೆ, ಪಕ್ಷಾಂತರಗಳ ಸರಣಿಯೂ ಸುದ್ದಿಯಾಗುತ್ತಿದೆ. ಆಡಳಿತಾರೂಢ ಪಕ್ಷಗಳಲ್ಲಿ ಇದೆಲ್ಲ ಇದ್ದದ್ದೆ. ಒಂದು ಕ್ಷೇತ್ರಕ್ಕೆ ಎರಡು-ಮೂರು ಅಭ್ಯರ್ಥಿಗಳಿದ್ದು, ಎಲ್ಲರೂ ಟಿಕೆಟ್ ಆಕಾಂಕ್ಷಿಗಳೇ ಆಗಿರುವಾಗ ಪೈಪೋಟಿಯೂ ಇರುತ್ತದೆ. ಅದು ಬಿಜೆಪಿಯಲ್ಲೂ ಇದೆ. ಅದು ಈಗ ಬಹಿರಂಗವಾಗಿದೆ.

ಬಹಿರಂಗವಾಗದೆ ಉಳಿದ ವಿಷಯವೂ ಇದೆ. ಅದು ಬಹಿರಂಗವಾಗಲೇಬೇಕಿದೆ. 'ಜನನಾಯಕ' ಯಡಿಯೂರಪ್ಪ ಮತ್ತು 'ಸಂಘಜೀವಿ' ಬಿ.ಎಲ್.ಸಂತೋಷ್‌ ನಡುವಿನ ಹಗ್ಗಜಗ್ಗಾಟದ್ದು; ಶಕ್ತಿ-ಸಾಮರ್ಥ್ಯ ಪ್ರದರ್ಶನದ್ದು; ಸ್ವಕೇಂದ್ರಿತ ಹಿತಾಸಕ್ತಿಯದ್ದು; ತಂತ್ರ-ಕುತಂತ್ರಗಳದ್ದು. ಈ ಬಾರಿಯ ಬಿಜೆಪಿ ಟಿಕೆಟ್ ಹಂಚಿಕೆಯ ಹಿಂದೆ ಇದೆಲ್ಲವೂ ನಿಚ್ಚಳವಾಗಿ ಕಾಣತೊಡಗಿದೆ. ಕೆಲವು ಕಡೆ ಸಂಘ ಪರಿವಾರದ ಸಂತೋಷ್‌ಗೆ ಹಿನ್ನಡೆಯಾದರೆ, ಯಡಿಯೂರಪ್ಪನವರ ಗುಂಪಿನಲ್ಲಿ ಗುರುತಿಸಿಕೊಂಡ ಹಲವರಿಗೆ ಟಿಕೆಟ್ ಕೈತಪ್ಪಿದೆ.

ಯಡಿಯೂರಪ್ಪನವರ ಪುತ್ರ ವಿಜಯೇಂದ್ರರಿಗೆ ಶಿಕಾರಿಪುರ ಸಿಕ್ಕರೆ; ಅರಸೀಕೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟು ಓಡಾಡುತ್ತಿದ್ದ ಬಿಎಸ್ವೈ ಸಂಬಂಧಿಕ ಎನ್.ಆರ್. ಸಂತೋಷ್‌ಗೆ ಸಿಗಲಿಲ್ಲ. ಇದೇ ರೀತಿ ತುಮಕೂರು, ಬ್ಯಾಟರಾಯನಪುರ, ಹನೂರು, ಹೊಸದುರ್ಗ,ಅಥಣಿ, ವರುಣಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಹೇಳಿದವರಿಗೇ ಟಿಕೆಟ್ ಕೊಡಲಾಗಿದೆ. ಹಾಗೆಯೇ ಮೂಡಿಗೆರೆ, ಗುಬ್ಬಿ, ಹಾವೇರಿ, ಗಾಂಧಿನಗರ, ಅರಸೀಕೆರೆ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದಂತೆ ನೋಡಿಕೊಳ್ಳಲಾಗಿದೆ. ಇದು ಪಕ್ಷದೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಕಾರ್ಯಕರ್ತರು, ನಿಷ್ಠರು, ನಾಯಕರ ನಡುವೆ ಗುಂಪುಗಳನ್ನು ಹುಟ್ಟುಹಾಕಿದೆ. ಬಿಜೆಪಿ ಒಡೆದ ಮನೆಯಂತಾಗಿದೆ. ಭರವಸೆಯೇ ಬಿಜೆಪಿ ಎನ್ನುವ ಸ್ಲೋಗನ್ ನಗೆಪಾಟಲಿಗೀಡಾಗಿದೆ.

ಅಷ್ಟಕ್ಕೂ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ನಡುವೆ ನಡೆದಿದ್ದಾದರೂ ಏನು? ಒಂದೇ ಪಕ್ಷದಲ್ಲಿದ್ದರೂ, ಒಳಗೊಳಗೇ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುವಂಥದ್ದು ಏನಾಗಿದೆ? ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ, ಯಡಿಯೂರಪ್ಪ-ಸಂತೋಷರ ನಡುವಿನ `ಸಹಬಾಳ್ವೆ’ಯ ದಿನಗಳತ್ತ ನೋಡಬೇಕಾಗಿದೆ. ದಶಕಗಳ ಹಿಂದಿನ ರಾಜಕೀಯ ಪುಟಗಳನ್ನು ತಿರುವಿ ಹಾಕಬೇಕಾಗುತ್ತದೆ.

ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ಬೂಕನಕರೆಯ ಯಡಿಯೂರಪ್ಪನವರು 1970ರಲ್ಲಿ ಆರೆಸ್ಸೆಸ್‌ ಸೇರಿ, ಜನಸಂಘದ ಸೇವಕರಾಗಿ, ಶಿಕಾರಿಪುರ ಪುರಸಭೆ ಸದಸ್ಯರಾಗಿ, 75ರ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸಿಯಾಗಿ ಸಾರ್ವಜನಿಕ ವ್ಯಕ್ತಿಯಾಗಿ ಹಂತ ಹಂತವಾಗಿ ಬೆಳೆದವರು. 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದವರು. 1988ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಮೂರು ಮತ್ತೊಂದು ಜನರಿದ್ದ ಪಕ್ಷವನ್ನು ಕಟ್ಟಿ ಬೆಳೆಸಿದವರು. ಹೋರಾಟಗಳ ಮೂಲಕ ಜನನಾಯಕನಾಗಿ ರೂಪುಗೊಂಡವರು. 1994ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಅನುಭವ ಗಳಿಸಿಕೊಂಡವರು.

1983ರಿಂದ 2006ರವರೆಗೆ, ಸುಮಾರು 23 ವರ್ಷಗಳ ಕಾಲ ಯಡಿಯೂರಪ್ಪನವರು ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿ ಇಳಿದಿದ್ದರೂ, ಅಧಿಕಾರದ ಕುರ್ಚಿ ಏರಲು ಸಾಧ್ಯವಾಗಿರಲಿಲ್ಲ. ಅಂತಹ ವಾತಾವರಣವೂ ಸೃಷ್ಟಿಯಾಗಿರಲಿಲ್ಲ. ಆದರೆ 2006ರಲ್ಲಿ, ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಸರ್ಕಾರ ರಚಿಸಿದಾಗ, ಉಪಮುಖ್ಯಮಂತ್ರಿಯಾದ ಯಡಿಯೂರಪ್ಪ ಮೊದಲ ಬಾರಿಗೆ ಅಧಿಕಾರದ ರುಚಿ ಕಂಡಿದ್ದರು. ಅಧಿಕಾರ ತರುವ ಗತ್ತು-ಗಾಂಭೀರ್ಯದ ಜೊತೆಗೆ ಜನಪ್ರಿಯತೆ, ವರ್ಚಸ್ಸು ಮತ್ತು ಹಣದ ಹರಿವು ಯಡಿಯೂರಪ್ಪನವರನ್ನು ದೂರಾಲೋಚನೆಗೆ ಈಡುಮಾಡಿತ್ತು. ಮುಖ್ಯಮಂತ್ರಿಯಾಗಲೇಬೇಕೆಂಬ ಆಸೆ ಗರಿಗೆದರಿತ್ತು.

ಆಸೆ ಈಡೇರಿಸಿಕೊಳ್ಳುವ ಯಡಿಯೂರಪ್ಪನವರ ಹಾದಿಗೆ ಆ ಸಂದರ್ಭದಲ್ಲಿ ತೊಡಕಾಗಿದ್ದವರು, ಪಕ್ಷದ ಹಿರಿಯ ನಾಯಕರಾದ ಬಿ.ಬಿ.ಶಿವಪ್ಪ ಮತ್ತು ಅನಂತಕುಮಾರ್. ಸಾಧುಪ್ರಾಣಿ ಬಿ.ಬಿ.ಶಿವಪ್ಪನವರ ಕೈಕಾಲು ಮುರಿದು ಮೂಲೆಗೆ ಕೂರಿಸಿದ್ದ ಯಡಿಯೂರಪ್ಪನವರಿಗೆ, ಪ್ರಬಲ ಪೈಪೋಟಿ ನೀಡುತ್ತಿದ್ದುದು ಅನಂತಕುಮಾರ್ ಮಾತ್ರ. ಅನಂತಕುಮಾರ್ ಮೂಲತಃ ಸಂಘ ಪರಿವಾರದಿಂದ ಬಂದವರು, ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿರುವವರು ಮತ್ತು ಬ್ರಾಹ್ಮಣ ಕೋಮಿಗೆ ಸೇರಿದವರು. ಇಂತಹ ಸಂದಿಗ್ಧ ಸಮಯದಲ್ಲಿ ಅನಂತಕುಮಾರ್ ಹಣಿಯಲು ಯಡಿಯೂರಪ್ಪನವರ ಕಣ್ಣಿಗೆ ಕಂಡದ್ದು ಬಿ.ಎಲ್.ಸಂತೋಷ್. ಏಕೆಂದರೆ ಅನಂತಕುಮಾರ್ ಅವರಲ್ಲಿದ್ದ ಮೂರೂ ಗುಣಗಳು ಸಂತೋಷರಲ್ಲಿದ್ದವು.

ಬಿ.ಎಲ್. ಸಂತೋಷ್, ಉಡುಪಿಯ ಹಿರಿಯಡ್ಕದವರು. ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಚಿನ್ನದ ಪದಕ ಪಡೆಯುವ ಮೂಲಕ ಪಾಸು ಮಾಡಿದವರು. ಆ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಸೇರಿ, ಪೂರ್ಣಾವಧಿ ಕಾರ್ಯಕರ್ತರಾಗಿ, ಪ್ರಚಾರಕರಾಗಿ ಕೆಲಸ ನಿರ್ವಹಿಸಿದವರು. ಇಂತಹ ಸಂತೋಷ್, ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳ ವಿಭಾಗ ಮಟ್ಟದಲ್ಲಿ ಆರೆಸ್ಸೆಸ್ ಸಂಘಟನೆಗೆ ಶಕ್ತಿ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿ, ಸಂಘಟನಾ ಚತುರ ಎಂಬ ಬಿರುದು ಪಡೆದಿದ್ದರು. ಈ ಕಾರಣಕ್ಕಾಗಿಯೇ ರಾಷ್ಟ್ರ ಮಟ್ಟದ ಸಂಘ ಪರಿವಾರದ ಮತ್ತು ಬಿಜೆಪಿಯ ಹಿರಿಯ ನಾಯಕರ ಕಣ್ಣಿಗೆ ಬಿದ್ದು, ಅವರಿಂದ ಶಹಬ್ಬಾಸ್ ಗಿರಿ ಪಡೆದಿದ್ದರು. ಅದರಲ್ಲೂ ಇವರು ಶಿವಮೊಗ್ಗದಲ್ಲಿದ್ದಾಗ, ಸಂಘ ಪರಿವಾರವನ್ನು ಸದೃಢವಾಗಿ ಕಟ್ಟಿದ್ದನ್ನು ಸ್ವತಃ ಯಡಿಯೂರಪ್ಪನವರೇ ಕಂಡಿದ್ದರು ಮತ್ತು ಮುಕ್ತಕಂಠದಿಂದ ಹೊಗಳಿದ್ದರು. ಸಂತೋಷ್ ಕೂಡ, ಯಡಿಯೂರಪ್ಪನವರ ರಾಜಕೀಯ ಬಿಕ್ಕಟ್ಟಿನ ಸಂದರ್ಭಗಳಲ್ಲೆಲ್ಲ ಸಲಹೆ ಸೂಚನೆಗಳನ್ನು ಕೊಟ್ಟು ಕಾಪಾಡಿದ್ದರು.

ಸಂತೋಷ್ ಸಂಘದ ಮೇಲಿಟ್ಟಿರುವ ಭಕ್ತಿಯನ್ನು, ಅದಕ್ಕಾಗಿ ವಿನಿಯೋಗಿಸುತ್ತಿರುವ ಬುದ್ಧಿಶಕ್ತಿಯನ್ನು ಬಲ್ಲವರಾಗಿದ್ದ ಯಡಿಯೂರಪ್ಪನವರು, ಅಂದಿನ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ವಾಮನಾಚಾರ್ಯ ಸ್ಥಾನ ತೆರವು ಮಾಡಿದಾಗ, ಆ ಸ್ಥಾನಕ್ಕೆ ಸಂಘ ಪರಿವಾರದ ಪ್ರಚಾರಕ್ ಹುದ್ದೆಯಲ್ಲಿದ್ದ ಸಂತೋಷ್‌ ನೇಮಕಗೊಳ್ಳುವಂತೆ ನೋಡಿಕೊಂಡರು. 2008 ರಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವ ಸಂದರ್ಭ ಒದಗಿ ಬಂದಾಗ, ಯಡಿಯೂರಪ್ಪನವರು ಮುಂಚೂಣಿ ನಾಯಕರಾಗಿ ಮುಖ್ಯಮಂತ್ರಿಯಾಗುವ ಕಾಲ ಕೂಡಿ ಬಂದಾಗ, ಇವರ ಬೆನ್ನಿಗೆ ನಿಂತವರು ಇದೇ ಸಂತೋಷ್. ಕಡಿಮೆಬಿದ್ದ ಶಾಸಕರನ್ನು ಖರೀದಿಸುವ, ಗಣಿರೆಡ್ಡಿಗಳ ಸಹಕಾರದಿಂದ ಸುಭದ್ರ ಸರ್ಕಾರ ರಚಿಸುವ ಸಮಯದಲ್ಲಿ ಸಂತೋಷ್ ಯಡಿಯೂರಪ್ಪನವರ ಪರವಿದ್ದರು. ಹಾಗೆಯೇ ವಿರೋಧಿ ಪಾಳೆಯದಲ್ಲಿದ್ದ ಅನಂತಕುಮಾರ್ ಇದ್ದರೂ ಇಲ್ಲದಂತಾಗಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ನಿಜಕ್ಕೂ ಚಕ್ರವರ್ತಿಯಂತೆ ಮೆರೆಯತೊಡಗಿದರು.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸಂತೋಷ್ ಅವರ ಸಲಹೆ, ಸೂಚನೆಗಳನ್ನು ಕೇಳುತ್ತಿದ್ದರಿಂದ, ಅವರ ಆದೇಶಗಳನ್ನು ಕೈ ಕಟ್ಟಿ ಪಾಲಿಸುತ್ತಿದ್ದರಿಂದ ಸಹಜವಾಗಿಯೇ ಸಂತೋಷ್ ರಿಗೆ ರಾಜ್ಯ ಬಿಜೆಪಿ ವಲಯದಲ್ಲಿ ಹುದ್ದೆಗೂ ಮೀರಿದ ಮಣೆ, ಮನ್ನಣೆ ದೊರೆಯತೊಡಗಿತು. ಅವರ ಮಾತು ಎಂದರೆ ವೇದವಾಕ್ಯವಾಯಿತು. ಹೊಸದಾಗಿ ಬೆಂಗಳೂರಿನ ಮಲ್ಲೇಶ್ವರಂನ 16 ಕ್ರಾಸ್ ನಲ್ಲಿ ಕಟ್ಟಿದ ಬಿಜೆಪಿ ಕಚೇರಿಯನ್ನೇ ತಮ್ಮ ಮುಖ್ಯ ಕಾರಾಸ್ಥಾನವನ್ನಾಗಿಸಿಕೊಂಡ ಸಂತೋಷ್, ನಾಲ್ಕನೇ ಮಹಡಿಯನ್ನೆ ಪರ್ಯಾಯ ವಿಧಾನಸೌಧವನ್ನಾಗಿ ಪರಿವರ್ತಿಸಿಕೊಂಡರು. ಅಲ್ಲಿಗೇ ಮಂತ್ರಿಗಳು ಬಂದುಹೋಗುವಂತೆ, ಸಾಮಾನ್ಯರು ಯಾರೂ ಕಾಲಿಡದಂತೆ ಅಘೋಷಿತ ನಿಯಮ ಜಾರಿಗೊಳಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಸಂತೋಷ್ ರ ಮತ್ತೊಂದು ಮುಖವೂ ಇದೆ. ಇವತ್ತಿಗೂ ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತನಂತೆಯೇ ಚಾಪೆ ಮೇಲೆ ಮಲಗುತ್ತಾರೆ. ಬಿಜೆಪಿ ಕಚೇರಿಯಲ್ಲಿ ಸಿಗುವ ಊಟ-ತಿಂಡಿಯನ್ನೇ ತಿನ್ನುತ್ತಾರೆ. ಸಂಬಳ ಪಡೆಯದೆ ಕೆಲಸ ಮಾಡುತ್ತಾರೆ. ಮತ್ತು ಓಡಾಡಲಿಕ್ಕೆ ಪಕ್ಷ ನೀಡಿದ ಕಾರನ್ನು ಮಾತ್ರ ಬಳಸುತ್ತಾರೆ. ಇವರ ಈ ಸರಳ ಬದುಕು, ಅವರ ವಿರುದ್ಧ ಮಾತನಾಡುವವರ ಬಾಯಿಗೆ ಬೀಗ ಹಾಕಿದೆ. ವಿಚಿತ್ರವೆಂದರೆ, ಅತ್ತ ಯಡಿಯೂರಪ್ಪನವರು ಸರ್ಕಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸತೊಡಗಿದರೆ, ಇತ್ತ ಸಂತೋಷ್ ಬಿಜೆಪಿ ಪಕ್ಷವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಬಿಜೆಪಿಯನ್ನು ಸಂಪೂರ್ಣವಾಗಿ ಸಂಘ ಪರಿವಾರದ ಅಧೀನದಲ್ಲಿರುವಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಸಂಘ ಪರಿವಾರದ ರೀತಿ-ನೀತಿಗಳಿಗೇ ವಿರುದ್ಧವಾಗಿ ಸಂತೋಷ್ ಕೂಡ ತಮ್ಮದೇ ಆದ ಗುಂಪು ಕಟ್ಟಿಕೊಳ್ಳತೊಡಗಿದರು. ಕೋರ್ ಕಮಿಟಿ ರಚಿಸಿಕೊಂಡರು. ಆ ಕಮಿಟಿ ಕೊಡುವ ಗುಪ್ತ ವರದಿಗಳನ್ನು ಆಧರಿಸಿ ಮಂತ್ರಿ-ಶಾಸಕರ ಮೇಲೆ ಅಧಿಕಾರ ಚಲಾಯಿಸತೊಡಗಿದರು. ಸರ್ಕಾರದ ನಡೆಯಲ್ಲಿ, ಹುದ್ದೆ ನೀಡುವ ವಿಷಯದಲ್ಲಿ ಮೂಗು ತೂರಿಸತೊಡಗಿದರು. ಬಿಜೆಪಿಯನ್ನು ಆವರಿಸಿಕೊಳ್ಳುತ್ತಲೇ ಅವರಲ್ಲೂ ಸಿಎಂ ಆಸೆ ಗರಿಗೆದರತೊಡಗಿತು.

ಇಷ್ಟಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರು, ಸಂತೋಷ್ ನಮ್ಮವರೇ ಎಂದುಕೊಂಡು ಯಥಾವ್ಯಾಪಾರದಲ್ಲಿ ನಿರತರಾದರು. ಯಾವಾಗ ಡಿ ನೋಟಿಫಿಕೇಷನ್, ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ವರದಿಗಳು ಹೊರಬಂದು ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ರಾಷ್ಟ್ರದಾದ್ಯಂತ ಪ್ರಚಾರ ಪಡೆಯತೊಡಗಿತೋ ಆಗ ಸಂಘ ಪರಿವಾರದ ಸಂತೋಷ್ ಎಚ್ಚೆತ್ತರು. ರಾಷ್ಟ್ರೀಯ ನಾಯಕರಿಗೆ ವರದಿ ನೀಡುವ ಮೂಲಕ, ಮೊದಲ ಬಾರಿಗೆ ತಮಗೊಪ್ಪಿಸಿದ್ದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗವಾಕ್ಷಿಯಲ್ಲಿ ಮರಳಿ ಬರಲಿದೆಯೇ ‘ಪೆಗಸಸ್’ ದೆವ್ವ?

ಆಶ್ಚರ್ಯವೆಂದರೆ ಆ ವರದಿಯೇ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಳುವಾಗಿತ್ತು. ಮಾಧ್ಯಮಗಳ ನಿರಂತರ ದಾಳಿ, ಲೋಕಾಯುಕ್ತ ವರದಿ ಮತ್ತು ಸಂತೋಷ್ ಅವರ ಗುಪ್ತ ಪತ್ರದ ಆಧಾರದ ಮೇಲೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ಆದೇಶಿಸಿತು. ತಮ್ಮನ್ನು ಯಾರೂ ಮುಟ್ಟಲಾರರು ಎಂದು ಭಾವಿಸಿದ್ದ ಯಡಿಯೂರಪ್ಪನವರಿಗೆ ಸಂತೋಷ್ ರ ಪತ್ರ ಶಾಕ್ ನೀಡಿತ್ತು. ಸಂಘ ಪರಿವಾರ ಮತ್ತು ಪಕ್ಷದ ರಾಷ್ಟ್ರೀಯ ನಾಯಕರೆದುರು ತಮ್ಮನ್ನು ಸಮರ್ಥಿಸಿಕೊಳ್ಳಬೇಕಾದ ಸಂತೋಷ್, ತಮ್ಮ ವಿರುದ್ಧವೇ ನಿಂತದ್ದನ್ನು ಕಂಡು ಕೆಂಡವಾದರು. ಕೊನೆಗೆ ವಿಧಿಯಿಲ್ಲದೆ ರಾಜೀನಾಮೆ ಕೊಟ್ಟು ಅಧಿಕಾರದ ಕುರ್ಚಿಯಿಂದ ಕೆಳಗಿಳಿದರು. ಆ ಸಂದರ್ಭದಲ್ಲಿಯೇ ಸಂತೋಷ್, ಸಿಎಂ ಕುರ್ಚಿ ಏರಲು ಹವಣಿಸಿದ್ದರು. ಆ ಸೂಕ್ಷ್ಮವನ್ನರಿತ ಯಡಿಯೂರಪ್ಪನವರು, 'ನಗುವ ಗೊಂಬೆ' ಸದಾನಂದಗೌಡರನ್ನು ಸಿಎಂ ಮಾಡಿ, ತಾತ್ಕಾಲಿಕ ಗೆಲುವು ಸಾಧಿಸಿದರು.

ಇದು 2008ರ ಕತೆ. ಮತ್ತೊಂದು 2019ರದ್ದು. 2019ರಲ್ಲಿ ಹೋರಾಟಗಾರ ಯಡಿಯೂರಪ್ಪ ಹಣವಂತ ಯಡಿಯೂರಪ್ಪನವರಾಗಿ ಮಾರ್ಪಾಡಾಗಿದ್ದರು. ಅಲ್ಲಿಗೆ ವಯಸ್ಸು 76 ವರ್ಷವಾಗಿತ್ತು. ಬಿಜೆಪಿಯ ಲೆಕ್ಕಾಚಾರದಂತೆ, 75ರ ನಂತರ ಅಧಿಕಾರವಿಲ್ಲ. ಆದರೆ 2018ರ ಚುನಾವಣೆಯಲ್ಲಿ ಯಡಿಯೂರಪ್ಪನವರ ಮುಖವಿಲ್ಲದಿದ್ದರೆ, ಬಿಜೆಪಿ ಮೂರು ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಗೆಲ್ಲುವವರೆಗೆ ಸುಮ್ಮನಿದ್ದ ದಿಲ್ಲಿಯ ಬಿಜೆಪಿ ನಾಯಕರು, ಅಧಿಕಾರಕ್ಕೇರುವಾಗ ವಯಸ್ಸಿನ ನೆಪ ಮುಂದೆ ಮಾಡಿದರು. ಆದರೆ ಯಡಿಯೂರಪ್ಪ, ದುಡಿದಿದ್ದ ದುಡ್ಡನ್ನೆಲ್ಲ ಸುರಿದು, ಶಾಸಕರನ್ನು ಖರೀದಿಸಿ, ದಿಲ್ಲಿಯ ನಾಯಕರಿಗೆ ಸಡ್ಡು ಹೊಡೆದು ಮುಖ್ಯಮಂತ್ರಿಯಾಗಿಯೇ ಬಿಟ್ಟರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಹುದ್ದೆ ಅಲಂಕರಿಸಿ, ರಾಜ್ಯ ಬಿಜೆಪಿಯಲ್ಲಿ ಹಿಡಿತ ಸಾಧಿಸಿದ್ದ ಬಿ.ಎಲ್. ಸಂತೋಷ್, ಬಿಜೆಪಿ ಅಡ್ಡದಾರಿಯಲ್ಲಿ ಅಧಿಕಾರಕ್ಕೇರಿದಾಗ ಮೌನಕ್ಕೆ ಶರಣಾದರು. ಆದರೆ ಯಡಿಯೂರಪ್ಪನವರ ಆಟಕ್ಕೆ ಕಣ್ಣು-ಕಿವಿ ತೆರೆದು ಕೂತರು. ಸಂತೋಷರನ್ನು ಸೈಡಿಗೆ ಸರಿಸಿದ ಯಡಿಯೂರಪ್ಪನವರು, ಇದೇ ತಮ್ಮ ಕೊನೆ ಅವಧಿ ಎಂದು ಮಗ ವಿಜಯೇಂದ್ರರನ್ನು ಭವಿಷ್ಯದ ನಾಯಕನನ್ನಾಗಿ ರೂಪಿಸಲು ಬೇಕಾದ ವೇದಿಕೆ ಸಿದ್ಧಮಾಡುವತ್ತ ಮಗ್ನರಾದರು. ವಿಜಯೇಂದ್ರ ಅಪ್ಪನ ಆಸೆ-ಆಜ್ಞೆಯಂತೆ ಎಲ್ಲಾ ಖಾತೆಗಳಿಗೂ ಕೈಹಾಕಿ, ಡಿಫ್ಯಾಕ್ಟೋ ಸಿಎಂನಂತೆ ಮೆರೆಯತೊಡಗಿದರು. ಉಪಚುನಾವಣೆಗಳನ್ನು ಗೆದ್ದು ಸಾಮ್ರಾಟನಂತೆ ಹಾರಾಡತೊಡಗಿದರು. ಅಪ್ಪ-ಮಕ್ಕಳ ಈ ಆಟ ಅತಿಯಾದಾಗ, ಸೋಮಣ್ಣ, ಅಶೋಕ್, ಅಶ್ವತ್ಥನಾರಾಯಣಗಳು ಸಂತೋಷ್ ಬಳಿ ಬಂದು ಬಗ್ಗಿ ನಿಂತರು. ಸಂತೋಷರ ಕೀಲುಗೊಂಬೆ ಯತ್ನಾಳ್ ಎದ್ದು ಕೂತು, ಅಪ್ಪ-ಮಕ್ಕಳ ಆಟವನ್ನು ಬೀದಿಯಲ್ಲಿ ಹರಾಜು ಹಾಕಿದರು. ಇದ್ದಕ್ಕಿದ್ದಂತೆ ಒಂದು ದಿನ ಬಿ.ಎಲ್. ಸಂತೋಷ್ ಮತ್ತೆ ವರದಿ, ಫೈಲುಗಳನ್ನು ಹೊತ್ತು ದಿಲ್ಲಿ ನಾಯಕರ ಮುಂದಿಟ್ಟರು. 'ಮೋಶಾ' ಜೋಡಿ ಯಡಿಯೂರಪ್ಪನವರನ್ನು ಕರೆದು, `ಆಯ್ಕೆ’ಯ ಅವಕಾಶ ನೀಡಿದರು. ವಿಧಿಯಿಲ್ಲದೆ ಸಿಎಂ ಕುರ್ಚಿಯಿಂದ ಕೆಳಗಿಳಿದು, ಬಿದ್ದರೂ ಮೀಸೆ ಮಣ್ಣಾಗಬಾರದೆಂದು, ಬೊಮ್ಮಾಯಿ ಸಿಎಂ ಮಾಡಿ, ನಮ್ಮದೇ ಸರ್ಕಾರ ಎಂದು ಸುಮ್ಮನಾದರು.

ಆದರೆ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ, ಆ ಗಳಿಗೆಯಿಂದಲೇ ಸಂತೋಷರ ಕೈಗೊಂಬೆಯಾದರು. ಸಿಎಂ ಮಾಡಿದ ಯಡಿಯೂರಪ್ಪನವರನ್ನು ನಿರ್ಲಕ್ಷಿಸತೊಡಗಿದರು. ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡ ಬಿ.ಎಲ್.ಸಂತೋಷ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಯಾದರು. ಇಬ್ಬರು ಸೇರಿ, ಚುನಾವಣೆಗೆ ಒಂದು ವರ್ಷವಿರುವಾಗ ಆರೆಸ್ಸೆಸ್ ಅಜೆಂಡಾಗಳನ್ನು ಬೊಮ್ಮಾಯಿ ಮೂಲಕ ಜಾರಿ ಮಾಡತೊಡಗಿದರು. ತಣ್ಣಗಿದ್ದ ಕನ್ನಡ ನಾಡು ಹಿಜಾಬ್, ಹಲಾಲ್, ಅಝಾನ್, ಸಾವರ್ಕರ್, ಟಿಪ್ಪು, ಉರಿ-ನಂಜುಗಳ ಕುಲುಮೆಯಲ್ಲಿ ಕುದಿಯತೊಡಗಿತು. ಭ್ರಷ್ಟಾಚಾರ 40 ಪರ್ಸೆಂಟ್‌ ದಾಟಿ ಮುಂದೆ ಹೋಯಿತು. ಸರ್ಕಾರ ಕೊರೊನಾ, ಪಿಎಸ್ಐ, ಬಿಟ್ ಕಾಯಿನ್, ಚಿಲುಮೆ, ಮಾಡಾಳುಗಳಿಂದ ಮುಳುಗೇಳತೊಡಗಿತು. ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾದರೂ, ಮಾರಿಕೊಂಡ ಮಾಧ್ಯಮಗಳ ಮೂಲಕ ಮೋದಿ ಭಜನೆ ಮುಂದುವರೆಯಿತು. ಧರ್ಮ, ದೇಶ, ಮೋದಿ ಮತ್ತು ಮೀಡಿಯಾಗಳಿದ್ದರೆ ಗೆಲ್ಲುವುದು ಸುಲಭ ಎಂದುಕೊಂಡ 'ಸಂಘಜೀವಿ' ಸಂತೋಷ್, ಪಕ್ಷ ಕಟ್ಟಿ ಬೆಳೆಸಿದ ಹಿರಿಯ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರ ಇಟ್ಟರು. ಬೊಂಬೆ ಬೊಮ್ಮಾಯಿಯನ್ನು ಬಳಸಿಕೊಂಡು ಮುಖ್ಯಮಂತ್ರಿಯ ಕನಸು ಕಾಣತೊಡಗಿದರು.

ಹೆಚ್ಚೂಕಡಿಮೆ ಯಡಿಯೂರಪ್ಪನವರ ಕಾಲ ಮುಗಿಯಿತು ಎನ್ನುವಾಗ, ಚುನಾವಣೆ ಎದುರಾಯಿತು. ಮೋದಿ-ಶಾಗಳು ಕರ್ನಾಟಕಕ್ಕೆ ಬಂದುಹೋಗುತ್ತಿದ್ದಂತೆ ಯಡಿಯೂರಪ್ಪ ಏನು ಎನ್ನುವುದು ಅರಿವಾಗತೊಡಗಿತು. ಬಲಿಷ್ಠ-ಬಹುಸಂಖ್ಯಾತ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿದರೆ ನಾಶ ಎನ್ನುವುದು ತಿಳಿಯಿತು. ಹಾಗಾಗಿ ಯಡಿಯೂರಪ್ಪನವರನ್ನು ಹಾಡಿ ಹೊಗಳುವುದು ಅತಿಯಾಯಿತು. ಆದರೆ ದಿಲ್ಲಿಯ ನಿರ್ಣಾಯಕ ಸಭೆಗಳಲ್ಲಿ, ಚರ್ಚೆಗಳಲ್ಲಿ, ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪನವರನ್ನು ದೂರ ಇಡಲಾಯಿತು. ಭೇಟಿಗೂ ಅವಕಾಶ ಕೊಡದಂತೆ ಅವಮಾನಿಸಲಾಯಿತು. ಮಗನ ಭವಿಷ್ಯಕ್ಕಾಗಿ ಪಕ್ಷದ ವಿರುದ್ಧ ಸೆಟೆದು ನಿಲ್ಲಲಾಗದ ಯಡಿಯೂರಪ್ಪ, ಹಿಂಬಾಲಕರ ಪಟ್ಟಿ ಕೊಟ್ಟು ಪಟ್ಟು ಹಿಡಿದರು. ದಿಲ್ಲಿ ನಾಯಕರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಶರತ್ತಿನೊಂದಿಗೆ ಮಗ ಮತ್ತು ಕೆಲವರಿಗೆ ಟಿಕೆಟ್ ಕೊಟ್ಟು, ಕಟ್ಟಿಹಾಕಿದರು.

ದಿಲ್ಲಿಯ ನಾಯಕರೇನೋ ಸಿಟ್ಟಿನ ಯಡಿಯೂರಪ್ಪನವರನ್ನು ಸಮಾಧಾನಿಸಿ ಸಂಭಾಳಿಸಬಹುದು. ಸಂಘಿ ಸಂತೋಷರೇನೋ, ಈ ಬಾರಿ ನಮ್ಮದಲ್ಲವೆಂದು ಸುಮ್ಮನಾಗಬಹುದು. ಆದರೆ ಇವರಿಬ್ಬರ ಸ್ವಾರ್ಥಸಾಧನೆಗೆ, ದೋಸ್ತಿ-ಕುಸ್ತಿಗೆ ಕರ್ನಾಟಕ ಕಂಗಾಲಾಗಿಹೋಗಿದೆ. ಪ್ರಜ್ಞಾವಂತ ಮತದಾರರು ಈಗಲಾದರೂ ಈ ಸಂಘ ಪರಿವಾರದ ಹಿಕ್ಮತ್ತುಗಳನ್ನು, ಬಿಜೆಪಿಯ ಅಧ್ವಾನಗಳನ್ನು ಅರಿತು, ಬಸವಣ್ಣನ ನಾಡಿಗೆ ಬೇಕಾದ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

 

(ಸೌಜನ್ಯ: ಈದಿನ.ಕಾಮ್ )