ನಾನು, ದೇವರು ಮತ್ತು ದೆವ್ವ

ಕೊನೆ ಕಂತು

   ನಾನು, ದೇವರು ಮತ್ತು ದೆವ್ವ

60ರ ಹಿನ್ನೋಟ(15)

ಡಾ.ಹೆಚ್.ವಿ.ರಂಗಸ್ವಾಮಿ

 

ತುಮಕೂರಿನಲ್ಲಿ ನೆಲೆಸಿರುವ ಹೆಚ್ .ವಿ. ರಂಗಸ್ವಾಮಿ ಪರಿಶಿಷ್ಟ ಜಾತಿಗೆ ಸೇರಿದ ಹಂದಿ ಜೋಗಿ, ಹಂದಿ ಗೊಲ್ಲರು, ಕಂಚಿ ಗೊಲ್ಲರು ಎಂಬ ಭಿನ್ನ ಹೆಸರುಗಳಿಂದ ಕರೆಯುವ ಅಸ್ಪೃಶ್ಯರಲ್ಲದ ಅರೆ ಅಲೆಮಾರಿ ಜಾತಿಯಲ್ಲಿ ಜನಿಸಿದ ಕಾರಣವಾಗಿ ಕಂಡುಂಡ ವಿಶಿಷ್ಟ ಅನುಭವಗಳನ್ನು ಕಳೆದ ಕೆಲವು ತಿಂಗಳಿಂದ  ‘ ಬೆವರ ಹನಿ’ ದಿನಪತ್ರಿಕೆಯ ಭಾನುವಾರದ ಪುರವಣಿ ‘ ಕಿನ್ನರಿ’ಯ ಓದುಗರ ಮುಂದೆ ಮಂಡಿಸಿದ್ದಾರೆ. ವೈದ್ಯರಾಗಿ, ವೈದ್ಯಾಧಿಕಾರಿಯಾಗಿ, ಆಡಳಿತಗಾರರಾಗಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ, ಇತ್ತೀಚೆಗೆ ವಯೋ ನಿವೃತ್ತಿ ಹೊಂದಿ ಅವರು ತಮ್ಮ ಜೀವನ ಚರಿತ್ರೆಯಂತೆ ಪೂರ್ಣಗೊಳಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಿ ಎಂದು ಆಶಿಸುತ್ತ, ಇವರ ಲೇಖನಮಾಲೆಯನ್ನು ಸಮಾರೋಪಗೊಳಿಸಿದೆ, ಪ್ರತಿ ವಾರ ಓದುಗರನ್ನು ಸಂತುಷ್ಟಗೊಳಿಸಿದ ಈ ಲೇಖಕರಿಗೆ ಪತ್ರಿಕೆಯ ತಂಡ ರುಣಿಯಾಗಿದೆ -  ಸಂಪಾದಕ

 

                         ನಾನು ಮಾಧ್ಯಮಿಕ ಶಾಲೆಯಿಂದಲೆ ಈ ಅಮೂರ್ತ ಕಲ್ಪನೆಗಳಿಗೆ ತಿಲಾಂಜಲಿ ಇಟ್ಟುಬಿಟ್ಟಿದ್ದೆ.  ಆ ಕಾರಣದಿಂದ ನಾನು ದೇವಸ್ಥಾನಗಳಿಗೆ ನಿಮಿತ್ತ ಮಾತ್ರಕ್ಕೆ ಹೋಗುತ್ತಿದ್ದೆನಾದರೂ ಪೂಜೆ ಪುನಸ್ಕಾರಗಳ ಬಗ್ಗೆ ನನಗೇನೂ ಅಂತಹ ಒಲವು ಇರಲಿಲ್ಲ.  ಆದರೆ ದೇವಾಲಯಗಳ ಪ್ರಶಾಂತತೆ ಇಷ್ಟವಾಗುತ್ತಿತ್ತು.  ಅರ್ಥವಾಗದ ಮಂತ್ರಘೋಷಗಳು, ಮನುಷ್ಯರನ್ನು ದೇವಾಲಯಗಳಲ್ಲೂ ಗರ್ಭಗುಡಿಗೆ ಕೆಲವರು, ಆಲಯಕ್ಕೆ ಮತ್ತೆ ಕೆಲವರು ಮತ್ತು ಬಾಗಿಲಿನಿಂದ ಹೊರಗೆ ಈ ರೀತಿ ವಿಂಗಡಣೆಯಿಂದ ದೇವಸ್ಥಾನಗಳು ಒಳಗೊಳ್ಳುವ ಸಂಸ್ಕೃತಿಯನ್ನು ಪೋಷಿಸಿಲ್ಲವೆಂಬ ಕಾರಣಕ್ಕೆ ನನಗೆ ತಿರಸ್ಕಾರವಿತ್ತು.  

                   ಒಂದು ಬಾರಿ ಕೇರಳದ ಗುರುಯಾಯೂರಿಗೆ ಪ್ರವಾಸ ಹೋದ ಸಂಬರ್ಭದಲ್ಲಿ ಅಲ್ಲಿನ ದೇವಾಲಯಕ್ಕೆ ಬಟ್ಟೆ ಕಳಚಿ ಬರಿ ಮೈಯಲ್ಲಿ ಪಂಚೆ ಉಟ್ಟುಕೊಂಡು ಹೋಗಬೇಕೆಂದು ಕೇಳಿ ನಾನು ಮತ್ತು ಸುಬ್ರಹ್ಮಣ್ಯ ಅಡಿಗ ಪ್ರತಿಭಟಿಸಿದೆವು.  ನಮ್ಮ ಪ್ರತಿಭಟನೆಯಿಂದ ವ್ಯಘ್ರರಾದ ಅಲ್ಲಿನವರು ನಮ್ಮನ್ನು ಯಾವ ರಾಜ್ಯ, ಯಾವ ಜಿಲ್ಲೆ ಅಂತೆಲ್ಲಾ ಕೆದಕಲು ಶುರುಮಾಡಿದರು.  ನಾವು ಚಿಕ್ಕಮಗಳೂರು ಜಿಲ್ಲೆಯವರು ಅಂತಿದ್ದಂತೆ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯಯವರನ್ನು ಗೆಲ್ಲಿಸಿದ್ದೆವೆಂಬ ಕಾರಣಕ್ಕೆ ಅಪಹಾಸ್ಯ ಮಾಡಲು ಶುರುಮಾಡಿದರು.  ಅಂತೂ ನಾವೂ ಕೂಡ ಅಲ್ಲಿ ನಿಯಮದಂತೆಯೇ ಕೊನೆಗೂ ಪಂಚೆ ಉಟ್ಟು ಬರಿ ಮೈಯಲ್ಲಿ ಒಳಗೆ ಹೋಗಬೇಕಾಯ್ತು.  ನಮ್ಮ ಈ ರೀತಿ ಪ್ರತಿಭಟನೆಯಿಂದ ಆ ದೇವಾಲಯದ ಉಸ್ತುವಾರಿಯಲ್ಲಿದ್ದವರಿಗಷ್ಟೆ ಅಲ್ಲ, ನಮ್ಮ ಸಹಪಾಠಿಗಳಿಗೂ ನಮ್ಮ ಧೋರಣೆ ವಿಚಿತ್ರದ್ದು ಮತ್ತು ಅಧಿಕ ಪ್ರಸಂಗಿತನದ್ದು ಅನ್ನಿಸಿಬಿಟ್ಟಿತ್ತು.  ಇಲ್ಲಿಂದ ನಮಗೆ ದೇವರ ಆಸ್ತಿತ್ವವನ್ನು ಸಾಬೀತುಪಡಿಸಲು ತರೇವಾರಿ ಪ್ರಶ್ನೆಗಳನ್ನು ಕೇಳುವುದು ಮತ್ತು ಕಾಲ್ಪನಿಕ ದೃಷ್ಟಾಂತಗಳನ್ನು ಉಲ್ಲೇಖಿಸಿ ಗೋಳು ಹೊಯ್ದುಕೊಳ್ಳುವುದು ಮಾಮೂಲಿಯಾಯ್ತು.

                          ಅಲ್ಲಿಂದ ಹಿಂತಿರುಗಿ ಬಂದ ಮೇಲೆ ಈ ಚರ್ಚೆ ಜಾವಳಿಯ ಹಾಸ್ಟಲ್‌ನಲ್ಲೂ ಮುಂದುವರೆಯಿತು.  ಪ್ರವಾಸಕ್ಕೆ ಬರದಿದ್ದವರೂ ಕೂಡ ಇಲ್ಲಿನ ಚರ್ಚೆಯಲ್ಲಿ ಭಾವಾವೇಷದಿಂದ ಭಾಗವಹಿಸುತ್ತಿದ್ದರು.  ಈ ಚರ್ಚೆಗೆ ಕೊನೆಮೊದಲಿರಲಿಲ್ಲ.  ವಾರದ ಹಿಂದೆ ನಮ್ಮ ಹಾಸ್ಟಲ್‌ನಿಂದ ಸುಮಾರು ಒಂದು ಮುಕ್ಕಾಲು ಮೈಲಿ ದೂರದ ತಗ್ಗಿನಲ್ಲಿ ತೀರಿಕೊಂಡ ಒಬ್ಬನನ್ನು ಹೂತಿದ್ದರು.  ಈತನನ್ನು ಹೂತಿದ್ದ ಜಾಗ ಎಂತದ್ದೆಂದರೆ ನಮ್ಮ ಹಾಸ್ಟಲ್‌ಮತ್ತು ರಸ್ತೆಯು ಎತ್ತರದ ಗುಡ್ಡದ ಭಾಗವನ್ನು ಕಡಿದು ಮಾಡಿದ ಮಧ್ಯಬಾಗವಾದರೆ, ಗುಡ್ಡದ ತಳಭಾಗದಲ್ಲಿ ಸ್ವಲ್ಪ ಸಮತಟ್ಠದ ಜಾಗ.  ಅದು ಸ್ಮಶಾನವು ಹೌದು. ಇಲ್ಲಿಂದ ಮುಂದುವರೆದರೆ ಪೂರ್ತಿ ಗದ್ದೆ ಬಯಲುಗಳು.  ಗದ್ದೆ ಕೊಯ್ಲಿನ ನಂತರ ನೀರು ಹಿಂಗಿ ಹದವಾಗುತ್ತಿದ್ದುದು ಮತ್ತು ಸಮತಟ್ಟಾಗಿಯೂ ಇದ್ದದ್ದರಿಂದ ಬೇಸಿಗೆ ಆಸುಪಾಸಿನಲ್ಲಿ ಇಲ್ಲಿ ಯಕ್ಷಗಾನವನ್ನು ಆಯೋಜಿಸಲಾಗುತ್ತಿತ್ತು.  ಯಕ್ಷಗಾನದ ಮೊದಲ ಸವಿಯನ್ನು ಅನುಭವಿಸಿದ್ದು ಇಲ್ಲೆ.

                      ಗುಡ್ಡ ಮತ್ತು ಗದ್ದೆಯ ಮಧ್ಯಭಾಗದ ಖಾಲಿ ಜಾಗವನ್ನ ಸ್ಮಶಾನದಂತೆ ಬಳಸುತ್ತಿದ್ದರಾಗಿ ಇಲ್ಲಿ ಹೆಣಗಳನ್ನು ಹೂಳುತ್ತಿದ್ದರು.  ಈಗ್ಗೆ ಒಂದು ವಾರವೋ ಹತ್ತು ದಿನಗಳ ಹಿಂದೆ ಹೂತಿದ್ದವನೊಬ್ಬ ದೆವ್ವವಾಗಿ ಅಲೆಯುತ್ತಿದ್ದಾನೆ ಅಂತ ಪುಕಾರು ಹಬ್ಬಿಸಿ ಹಾಸ್ಟಲ್‌ನ ಅಳ್ಳೆದೆಯ ಕೆಲವರು ಭಯಭೀತರಾಗಿದ್ದರು.  ಇದೇ ಸರಿಯಾದ ಸಂದರ್ಭವೆಂದು ʼದೆವ್ವ-ದೇವರುಗಳು ಕಲ್ಪನೆ ಮಾತ್ರ, ಅವು ಮನುಷ್ಯ ಸೃಷ್ಟಿʼ ಅಂತ ವಾದ ಮಾಡುತ್ತಿದ್ದ ನಮ್ಮನ್ನು ಪರೀಕ್ಷೆ ಮಾಡಲು ಸವಾಲೊಂದನ್ನು ಒಡ್ಡಿದರು.  ಆ ಸವಾಲಿನ ಪ್ರಕಾರ ನಾನು ರಾತ್ರಿ ಹತ್ತು ಗಂಟೆಯ ನಂತರ ಆ ಸ್ಮಶಾನಕ್ಕೆ ತೆರಳಿ ಆ ಸತ್ತವನನ್ನು ಹೂತಿದ್ದ ಗುಡ್ಡೆಯ ಮೇಲೆ ಪ್ರತಿಸ್ಪರ್ದಿಗಳು ಗುರುತು ಮಾಡಿ ಕೊಟ್ಟಿದ್ದ ಕಲ್ಲೊಂದನ್ನು ಇಟ್ಟುಬರಬೇಕಿತ್ತು.  ಭಂಡ ಧೈರ್ಯ ಮಾಡಿ ನಾನು ಈ ದುಸ್ಸಾಹಸಕ್ಕೆ ಒಪ್ಪಿ ಬಿಟ್ಟೆ.

              ಸರಿ, ರಾತ್ರಿ ಹತ್ತೂವರೆಯ ನಂತರ ಆ ಕಲ್ಲನ್ನ ಕೈಗಿಟ್ಟು ನನ್ನನ್ನು ಈ ಸಾಹಸಕ್ಕೆ ಬೀಳ್ಕೊಡಲಾಯ್ತು.  ಅಲ್ಲಿಗೆ ತಲುಪಲು ನಾನು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಹಾಸ್ಟಲ್‌ನಿಂದ ರಸ್ತೆಗಿಳಿದು ಬಲಭಾಗದಿಂದ ಹೋಟೆಲ್‌ಮತ್ತು ಅಂಗಡಿಗಳ ಮಧ್ಯೆದಿಂದ ಇಳಿಜಾರಿನಲ್ಲಿ ಆ ತಗ್ಗಿನ ಭಾಗಕ್ಕೆ ತಲುಪುವ ಬಳಸುದಾರಿ; ಇಲ್ಲವಾದರೆ ರಸ್ತೆಯ ಎಡಭಾಗದಿಂದ ನಮ್ಮ ಗ್ರೂಪ್‌ಡಿ ಸಿಬ್ಬಂದಿ ಜಯರಾಮಯ್ಯನ ಮನೆ ದಾಟಿ ಇಳಿಜಾರಿನಲ್ಲಿ ಇಳಿದು ತಲುಪುವ ದಾರಿಯಲ್ಲದ ದಾರಿ.   ನಾನು ಈ ಹತ್ತಿರದ ದಾರಿಯನ್ನು ಆಯ್ಕೆ ಮಾಡಿಕೊಂಡು ಮುಂದುವರೆದೆ.  ಜಯರಾಮಯ್ಯನ ಮನೆ ದಾಟುವವರೆಗೆ ಸ್ವಲ್ಪ ಬೀದಿ ದೀಪಗಳ ಬೆಳಕು ಇತ್ತಾಗಿ ಧೈರ್ಯವಾಗಿ ಮುಂದುವರೆದೆ.  ಆಮೇಲೆ ಗೌಗತ್ತಲು ಸುತ್ತೆಲ್ಲಾ ಮುತ್ತಿದ್ದರಿಂದ ದಾರಿಯನ್ನು ಪ್ರಯಾಸದಿಂದ ಹುಡುಕಿಕೊಂಡು ಮುಂದುವರೆಯಬೇಕಿತ್ತು.  ಹೇಗೋ ರಸ್ತೆಗುಂಟ ಮುಂದುವರೆಯುವಷ್ಟು ದಾರಿ ಸವೆಸಿ ನಂತರ ಸ್ಮಶಾನ ಭಾಗಕ್ಕೆ ತಲುಪುವ ಇಳಿಜಾರಿಗೆ ಇಳಿಯಬೇಕಿತ್ತು.

                   ಈ ಇಳಿಜಾರಿನ ಭಾಗದ ರಸ್ತೆಯ ಪಕ್ಕದಿಂದ ಹಬ್ಬಿದ್ದ ಗಿಡಗೆಂಟೆಗಳ ನಂತರ ಸಮತಟ್ಟಾದ ಜಾಗ ಸ್ವಲ್ಪ ಮರೆಯಲ್ಲಿ ಇತ್ತಾಗಿ, ಇಲ್ಲಿ ನಮ್ಮ ಜಾವಳಿ ಆಸ್ಪತ್ರೆಯ ವೈದ್ಯರು ಅನುಮಾನಾಸ್ಪದ ಸಾವುಗಳ ಶವಪರೀಕ್ಷೆಗಳನ್ನು ಮಾಡುವ ಜಾಗವಾಗಿತ್ತು.  ಈ ಜಾಗವನ್ನು ಮೆಟ್ಟಿಕೊಂಡೆ ನಾನು ಅಲ್ಲಿಗೆ ಮುಂದುವರೆಯಬೇಕಿತ್ತು.  ನಾನು ಈ ಬಗ್ಗೆ ಹೊರಡುವ ಮೊದಲಾಗಲಿ, ಅಥವಾ ಇಲ್ಲಿಗೆ ಸಮೀಪಿಸುವ ಸಂದರ್ಭದಲ್ಲಾಗಲಿ ಆ ಬಗ್ಗೆ ನನಗೆ ನೆನಪೇ ಆಗಿರಲಿಲ್ಲ.  ದುರಾದೃಷ್ಟವಶಾತ್‌ ನಾನು ಆ ದುರ್ಗಮ ಕಗ್ಗತ್ತಲ ರಾತ್ರಿಯಲ್ಲಿ ನನಗರಿವಿಲ್ಲದೆ ಆ ಜಾಗದ ಮೇಲೆ ಕಾಲಿಟ್ಟ ಕ್ಷಣಾರ್ಧದಲ್ಲಿ ನನಗದು ಮಿಂಚಿನಂತೆ ಹೊಳೆದು ಇದ್ದಕ್ಕಿದ್ದಂತೆ ಮೈಯೆಲ್ಲಾ ವಿದ್ಯುತ್‌ಸಂಚಾರವಾದಂತಾಗಿ ದೇಹಸ್ತಬ್ದವಾದಂತಾಗಿ ನಿಂತಲ್ಲೇ ನಿಂತುಬಿಟ್ಟಿದ್ದೆ.  ಕಾಲು ಕಿತ್ತು ಮುಂದಿಡುವುದೂ ಸಾಧ್ಯವಾಗದಂತ ಸ್ಥಿತಿ!  ʼನೀರೊಳಿದ್ದು ಬೆವರುತಿರ್ದನ್‌ʼ ಅನ್ನುವ ದುರ್ಯೊಧನನ ಪರಿಸ್ಥಿತಿ ನಂದಾಗಿತ್ತು. ಅದೆಷ್ಟೊತ್ತು ಅಲಗಾಡಲೂ ಸಾಧ್ಯವಾಗದೆ ಸ್ತಬ್ಧವಾಗಿ ನಿಂತಿದ್ದೆನೋ, ನನಗೆ ಚೇತರಿಸಿಕೊಂಡಾಗ ಮುಖ ಮತ್ತು ಮೈಯೆಲ್ಲಾ ಬೆವೆತು ಹೋಗಿತ್ತು.  ನಾನು ಈ ದುಸ್ಸಾಸಕ್ಕೆ ಒಪ್ಪಿಕೊಳ್ಳಬಾರದಿತ್ತು ಅಂತ ಆ ಕ್ಷಣಕ್ಕೆ ಅನ್ನಿಸಿಬಿಟ್ಟಿತು.  ಆದರೆ ಸೋತು ಹಿಂತಿರುಗಲೂ ಮನಸ್ಸು ಒಪ್ಪದು.  ಹೇಗೋ ಧೈರ್ಯ ಮಾಡಿ ಒಂದೊಂದೇ ಹೆಜ್ಜೆ ಇಡುತ್ತಾ ಮುಂದುವರೆದೆ.

                 ನಿದಾನಕ್ಕೆ ಆ ಕತ್ತಲಲ್ಲೂ ದಾರಿ ಮಾಡಿಕೊಂಡು ಮುಂದುವರೆಯುವಷ್ಟು ಆಗಲೆ ಕಣ್ಣುಗಳು ಹೊಂದಿಕೊಂಡಿದ್ದವು.  ಎದೆಬಡಿತ ಕೇಳಿಸುವಷ್ಟು ಜೋರಾಗಿತ್ತು!  ಆದರೂ ಉಸಿರು ಬಿಗಿಹಿಡಿದು ಮುಂದುವರೆದೆ.  ಹೆಣವನ್ನ ಹೂತಿದ್ದ ಗುಡ್ಡೆಗೆ ಹತ್ತಿರವಾಗುತ್ತಿದ್ದಂತೆ ಮತ್ತೆ ಎದೆಯ ಢವ ಢವ ಜಾಸ್ತೀನೆ ಆಗುತ್ತಾ ಇತ್ತು.  ಅಂತು ಸಾವರಿಸಿಕೊಂಡು ಅಲ್ಲಿಯವರೆಗೂ ಮುಂದುವರದು ಸ್ವಲ್ಪ ದೂರದಿಂದಲೆ ಆ ಕಲ್ಲನ್ನು ಅದರ ಮೇಲೆ ಹಾಕಿದೆ.

              ಈಗ ಮತ್ತೆ ಹಿಂದಿನ ದಾರಿ ಆರಿಸಿಕೊಳ್ಳಲಿಲ್ಲ.  ಬಳಸಾದರೂ ಪರವಾಗಿಲ್ಲ ಅಂದುಕೊಂಡು ಪರವಾಗಿಲ್ಲ ಅನ್ನುವಷ್ಟಾದರೂ ಚೆನ್ನಾಗಿರುವ ವಿರುದ್ಧ ದಿಕ್ಕಿನ ದಾರಿಯನ್ನೇ ಆರಿಸಿಕೊಂಡು ಮುಂದುವರೆದೆ. ನಾನು ಮುಂದುವರೆದಂತೆಲ್ಲಾ ಹಿಂದಿನಿಂದ ಯಾರೋ ಹಿಂಬಾಲಿಸಿದಂತೆ ಭಾಸವಾಗುತ್ತಿತ್ತು.  ತಿರುಗಿ ನೋಡಲೂ ಭಯ! ಆದರೂ ಮನಸ್ಸು ಮಾಡಿ ಒಂದೆರಡು ಬಾರಿ ತಿರುಗಿ ನೋಡಿದೆ.  ಗಿಡಗೆಂಟೆಗಳೂ ಆ ಕತ್ತಲಲ್ಲಿ ಯಾರೋ ನಿಂತಿರುವಂತೆ ಕಾಣತೊಡಗಿದವು. ಹೇಗೋ ಕಚ್ಚಾದಾರಿಬಿಟ್ಟು, ಮಣ್ಣು ರಸ್ತೆಯನ್ನು ತಲುಪಿ ಉಸಿರು ಬಿಗಿ ಹಿಡಿದು ನಮ್ಮ ಹಾಸ್ಟಲ್‌ಸಮೀಪದ ಟಾರು ರಸ್ತೆ ತಲುಪುವವರೆಗೆ ಓಡಿಬಂದು ಸೇರಿಕೊಂಡು ಸ್ವಲ್ಪ ಹೊತ್ತು ಸಾವರಿಸಿಕೊಂಡು ಹಾಸ್ಟಲ್‌ ಕಡೆ ನಡೆದೆ.  ನನ್ನ ಬರವನ್ನೇ ನಿರೀಕ್ಷಿಸುತ್ತಿದ್ದವರು ಯಾಕೋ ನನಗಿಂತ ಗಾಬರಿಯಲಿದ್ದಂತೆ ಅನ್ನಿಸಿತು.  ನಾನು ಬರುವುದು ತಡವಾಯ್ತು ಅಂತಲೋ ಏನೋ ಭಯಭೀತರಾಗಿದ್ದರಾಗಿ ʼನಿಜವಾಗ್ಲೂ ಹೋಗಿ ಬಂದೆಯ?!” ಅಂತ ಉದ್ಗಾರವೆತ್ತಿದರು.  ಬೆಳಿಗ್ಗೆ ಕೆಲವರು ಹೋಗಿ ದೂರದಿಂದಲೆ ಆ ಕಲ್ಲು ಗುಡ್ಡೆಯ ಮೇಲಿರುವುದನ್ನು ಖಾತ್ರಿ ಮಾಡಿಕೊಂಡು ಬಂದವರು “ಪರವಾಗಿಲ್ಲ ಧೈರ್ಯ ಮಾಡಿದೀಯ! ನಿನಗೇನೂ ಆಗಲಿಲ್ಲವಾ?”  ಅಂತ ಕೇಳತೊಡಗಿದರು. 

              ಆಮೇಲೆ ನನಗೆ ಅರ್ಥವಾದ್ದು, ಕತ್ತಲೆಯೇ ಭಯದ ಮೂಲ ಅಂತ. ಕತ್ತಲೆ ಭ್ರಮೆ ಮತ್ತು ಭಯಗಳನ್ನು ಮನಸ್ಸಿನಲ್ಲಿ ಸೃಷ್ಟಿಸುತ್ತದಾದ್ದರಿಂದ ಮತ್ತೊಮ್ಮೆ ಇಂತಹ ಸಾಹಸಗಳಿಗೆ ಒಪ್ಪಿಕೊಳ್ಳಬಾರದೆಂದು ಅಂದು ತೀರ್ಮಾನಿಸಿದೆ.