‘ಆ ತಪ್ಪನ್ನು ಕೂಡಲೇ ಸರಿಪಡಿಸಲಾಗುವುದು' -ಸಂವೇದನೆ-ಹೆಚ್-ವಿ-ಮಂಜುನಾಥ್

‘ಆ ತಪ್ಪನ್ನು ಕೂಡಲೇ ಸರಿಪಡಿಸಲಾಗುವುದು'  -ಸಂವೇದನೆ-ಹೆಚ್-ವಿ-ಮಂಜುನಾಥ್

‘ಆ ತಪ್ಪನ್ನು ಕೂಡಲೇ ಸರಿಪಡಿಸಲಾಗುವುದು' -ಸಂವೇದನೆ-ಹೆಚ್-ವಿ-ಮಂಜುನಾಥ್

 

 

ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೂ ಈ ದೇಶಕ್ಕೆ ಸಂವಿಧಾನ ನೀಡಿದ ಮತ್ತು ದೇಶದ ನಿರ್ಮಾತೃಗಳಲ್ಲೊಬ್ಬರಾದ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಸರ್ಕಾರಿ ಕಛೇರಿ, ನ್ಯಾಯಾಲಯಗಳು, ಸರ್ಕಾರಿ ಕಾಲೇಜುಗಳು ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಇಡಲು ಸರ್ಕಾರಿ ಆದೇಶವೋ ನ್ಯಾಯಾಲಯದ ಆದೇಶವೋ ಬೇಕಾಗಿರುವುದು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನವಲ್ಲ ಎಂದು ಭಾವಿಸದೆ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅವಮಾನ ಎಂಬುದನ್ನು ಮನಗಾಣಬೇಕಿದೆ.

 

ಅಂಬೇಡ್ಕರ್ ಭಾವಚಿತ್ರ ಮತ್ತು ತಮಿಳುನಾಡು ಹೈಕೋರ್ಟ್ ತೀರ್ಪು

‘ಆ ತಪ್ಪನ್ನು ಕೂಡಲೇ ಸರಿಪಡಿಸಲಾಗುವುದು' 

 

ನಮ್ಮ ಪಕ್ಕದ ಮದ್ರಾಸ್ ಹೈಕೋರ್ಟಿನ ಮಧುರೈ  ಪೀಠದಿಂದ 12ನೇ ಆಗಸ್ಟ್‌ 2022 ರಂದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಕುರಿತು ಕುತೂಹಲಕಾರಿಯಾದ ಸಂತಸದ ತೀರ್ಪೊಂದು  ಬಂದಿದೆ.

 

ಕರ್ನಾಟಕದ ರಾಯಚೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು 26ನೇ ಜನವರಿ 2022 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗಿ  ಟೀಕೆ ಮತ್ತು ಪ್ರತಿಭಟನೆಗಳು ನಡೆದವು. ಈ ಘಟನೆ ಮತ್ತು ನಂತರದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ನ್ಯಾಯಾಧೀಶರ ಸಭೆ ನಡೆಸಿ ಎಲ್ಲ ಹಂತದ ನ್ಯಾಯಾಲಯಗಳು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೊತ್ಸವ ದಿನ ಮತ್ತು ಗಣರಾಜೋತ್ಸವ ದಿನಗಳಂದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಆಚರಿಸಲು ನಿರ್ಣಯ ಕೈಗೊಂಡು 4.2.2022 ರಂದು ಸುತ್ತೋಲೆ  ಮೂಲಕ ಆದೇಶಿಸಲಾಯಿತು. ಈ ಘಟನೆ ಇನ್ನೂ ನಮ್ಮ ಮನಸ್ಸಿನಿಂದ ಮಾಸಿಲ್ಲ. ಇಂತಹ ಹೊತ್ತಿನಲ್ಲಿ ಸಮಾಧಾನ ನೀಡಬಹುದಾದ ತೀರ್ಪೊಂದನ್ನು ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ನೀಡಿದೆ.

 

ತಮಿಳುನಾಡಿನ ಜಿಲ್ಲಾ ಕೇಂದ್ರ ಥೇಣಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನ ಸಸಿಕುಮಾರ್ ಎಂಬ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿ ಕಾಲೇಜಿನ ಪ್ರಿನ್ಸಿಪಲ್ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಹಾಕಬೇಕು ಮತ್ತು ತಮಿಳಿನಲ್ಲಿ ಪಾಠ ಮಾಡಬೇಕು ಎಂಬ ಬೇಡಿಕೆ ಇಡುತ್ತಾನೆ. ಈ ಹಂತದಲ್ಲಿ ಪ್ರಿನ್ಸಿಪಲ್ ಮತ್ತು ಆ ವಿದ್ಯಾರ್ಥಿ ನಡುವೆ ತೀವ್ರ ವಾಗ್ವಾದ ನಡೆದು ಅವರ ಬಳಿ ಆತ ಸ್ವಲ್ಪ ಒರಟಾಗಿ ನಡೆದುಕೊಂಡು ತರಗತಿಗಳಿಗೆ ತೆರಳಿ ಜೋರು ಧ್ವನಿಯಲ್ಲಿ ಕೂಗಿ ಸಂಘಟಿಸಲು ಯತ್ನಿಸಿದ್ದು 'ಅಶಿಸ್ತಿನ ನಡವಳಿಕೆ' ಎಂದು ಆತನನ್ನು ಕಾಲೇಜಿನಿಂದ ಅಮಾನತು ಮಾಡಿ ವಿಚಾರಣೆ ನಡೆಸಲು ಕಾಲೇಜಿನ ಆಡಳಿತ ಆದೇಶಿಸುತ್ತದೆ. ಆ ಆದೇಶವನ್ನು ರದ್ದುಪಡಿಸಲು ಕೋರಿ ಸಸಿಕುಮಾರ್ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದ ಎದುರು ರಿಟ್ ಅರ್ಜಿ ಸಲ್ಲಿಸಿ ತಾನೇ ವಾದ ಮಂಡಿಸುತ್ತಾನೆ. 

 

ವಿದ್ಯಾರ್ಥಿಯ ಭವಿಷ್ಯ ಮತ್ತು ಅಂಬೇಡ್ಕರರ ಪ್ರಸ್ತುತತೆ ಎರಡನ್ನೂ ಮನಗಂಡ ಘನವೆತ್ತ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ರವರು ಅತ್ಯಂತ ಜಾಣ್ಮೆಯಿಂದ ಆ ವಿದ್ಯಾರ್ಥಿ ತನ್ನ  ವರ್ತನೆಗೆ ಕ್ಷಮಾಪಣ ಪತ್ರ ಬರೆದುಕೊಡುವಂತೆ ಮಾಡಿ  ಕಾಲೇಜು ಆಡಳಿತ ಆರಂಬಿಸಿದ್ದ ಆ ವಿದ್ಯಾರ್ಥಿ ಮೇಲಿನ ವಿಚಾರಣೆಯನ್ನು ಕೈ ಬಿಡಿಸುತ್ತಾರೆ ಮತ್ತು ಪ್ರಿನ್ಸಿಪಲ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ  ಹಾಕುವಂತೆ ನೋಡಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸುವುದಲ್ಲದೆ ಬೇರೊಂದು ಪ್ರಕರಣದಲ್ಲಿ ವಿಧಿಸಿದ್ದ ದಂಡದ ಮೊತ್ತ ರೂ 10,000/-  ವನ್ನು ಕಾನೂನು ಪುಸ್ತಕ ಕೊಳ್ಳಲು ಅನುಕೂಲವಾಗುವಂತೆ ಅರ್ಜಿದಾರ ವಿದ್ಯಾರ್ಥಿಗೆ ನೀಡಲು ಆದೇಶಿಸುತ್ತಾರೆ.

 

ಅದಷ್ಟೇ ಆಗಿದ್ದರೆ ತೀರ್ಪು ಕುತೂಹಲ ಹುಟ್ಟಿಸುತ್ತಿರಲಿಲ್ಲವೇನೋ!?.

 

"ಅಂಬೇಡ್ಕರ್ ಸಂವಿಧಾನದ ರಚನೆಕಾರ. ಅವರೊಬ್ಬ ಸಾಮಾಜಿಕ ವಿಮೋಚನಕಾರ. ಸರಿಗಟ್ಟಲಾಗದ ವಿದ್ವತ್ತನ್ನು ಹೊಂದಿದ್ದ ಅಂಬೇಡ್ಕರ್ ರವರು ಕಾನೂನು ವಿದ್ಯಾರ್ಥಿಗಳ ನಿಜವಾದ "ಅದ್ಭುತವಾದ ಸ್ಪೂರ್ತಿ " ಎಂದು ಬಣ್ಣಿಸಿ  ತಮಿಳುನಾಡಿನ ಪ್ರತಿಯೊಂದು ಸರ್ಕಾರಿ ಕಾನೂನು ಕಾಲೇಜುಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಇಡಲು ಸೂಕ್ತ ನಿರ್ದೇಶನ ನೀಡಿ  ಸುತ್ತೋಲೆ ಹೊರಡಿಸುವಂತೆ  ನಿರ್ದೇಶಕರು,  ಕಾನೂನು ಅಧ್ಯಯನ, ಚಿನೈ ಇವರಿಗೆ ತೀರ್ಪಿನಲ್ಲಿ ಕೋರಲಾಗುತ್ತದೆ.

 

ಪ್ರಕರಣದ ತೀರ್ಪನ್ನು ಹೇಳಿ ಬರೆಸುವ ಕೊನೆಯಲ್ಲಿ ಅವರ ನ್ಯಾಯಾಲಯದ ಕೊಠಡಿಯಲ್ಲಿ ಡಾ.ಅಂಬೇಡ್ಕರ್ ರವರ ಭಾವಚಿತ್ರ ಇಲ್ಲದಿರುವುದನ್ನು ನೋಡಿ ತಪ್ಪಿನ ಅರಿವಾಗಿ ‘ಆ ತಪ್ಪನ್ನು ಕೂಡಲೇ ಸರಿಪಡಿಸಲಾಗುವುದು'  ಎಂದು ತೀರ್ಪಿನಲ್ಲಿಯೇ ದಾಖಲಿಸುತ್ತಾರೆ. 

 

ಒಬ್ಬರು ನ್ಯಾಯಮೂರ್ತಿ ಸಾಮಾನ್ಯಪ್ರಜ್ಞೆ ಮತ್ತು ಸಂವೇದನಾಶೀಲ ಮನುಸುಳ್ಳವರಾಗಿದ್ದರೆ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ಬಗೆಹರಿಸಬಹುದು ಎಂಬುದಕ್ಕೆ ಈ ತೀರ್ಪು ಉದಾಹರಣೆ.

ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೂ ಈ ದೇಶಕ್ಕೆ ಸಂವಿಧಾನ ನೀಡಿದ ಮತ್ತು ದೇಶದ ನಿರ್ಮಾತೃಗಳಲ್ಲೊಬ್ಬರಾದ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಸರ್ಕಾರಿ ಕಛೇರಿ, ನ್ಯಾಯಾಲಯಗಳು, ಸರ್ಕಾರಿ ಕಾಲೇಜುಗಳು ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಇಡಲು ಸರ್ಕಾರಿ ಆದೇಶವೋ ನ್ಯಾಯಾಲಯದ ಆದೇಶವೋ ಬೇಕಾಗಿರುವುದು ಅಂಬೇಡ್ಕರ್ ಅವರಿಗೆ ಮಾಡುವ ಅವಮಾನವಲ್ಲ ಎಂದು ಭಾವಿಸದೆ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅವಮಾನ ಎಂಬುದನ್ನು ಮನಗಾಣಬೇಕಿದೆ.

 

  • ಲೇಖಕರು ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯವಾದಿ ದೂರವಾಣಿ: 9448004461