“ಎಲ್ಲೇ ಇರು ಎಂತೇ ಇರು ಎಂದೆಂದಿಗೂ ನೀ ಕನ್ನಡವಾಗಿರು” ಯುಎಸ್ಎ ‘ಕನ್ನಡ ಕೂಟ ‘ದಲ್ಲಿ ಯುಗಾದಿ ಸಂಭ್ರಮ
ನಮ್ಮೂರ ಲೇಖಕಿ ಸುಶೀಲಾ ಸದಾಶಿವಯ್ಯನವರು ಯುಎಸ್‌ಎ ಕನ್ನಡ ಕೂಟದ ಯುಗಾದಿ ಸಂಭ್ರಮ ಸಮಾರಂಭದಲ್ಲಿ ಮಾಡಿದ ಭಾಷಣ
ಅಮೆರಿಕೆಯ ಚಿಕಾಗೋದ ಮ್ಯಾಡಿಸನ್ ಸಿಟಿ ಯಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಕನ್ನಡಿಗರ “ಕನ್ನಡ ಕೂಟ” ದಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ ಯುಗಾದಿ ವಿಶೇಷವನ್ನು ಕುರಿತು ಮಾತಾಡಿದಾಗ ಮೊಮ್ಮಗಳು ನನ್ನ ಜೊತೆ ವೇದಿಕೆ ಯಲ್ಲಿದ್ದಳು. ಅವಳ ಹೆಸರು ‘ರಿಯೂ’ . ಅವಳಿಗೆ ಈಗ ನಾಲ್ಕು ವರ್ಷ. ನಾನು ಯು ಎಸ್ ಎ ಗೆ ಬಂದ ಒಂದು ವಾರದಲ್ಲಿ ಅವಳಿಗೆ ಕನ್ನಡದ ವರ್ಣಮಾಲೆ, ಪ್ರಾರ್ಥನೆ ಹಾಗೂ ವಚನ ಗಳನ್ನು ಹೇಳಿಕೊಡುತ್ತಿದ್ದೆ. ಆಕೆ ಕಾರ್ಯಕ್ರಮದಲ್ಲಿ ಒಂದೆರಡು ಶ್ಲೋಕ. ವಚನಗಳನ್ನು ಹೇಳಿದ್ದು ಸಂತೋಷ ವಾಯಿತು. ಅಲ್ಲಿ ಚಿಕ್ಕವಳಾಗಿ ಇವಳೊಬ್ಬಳೇ ಹೇಳಿದ್ದು ವಿಶೇಷವಾಗಿತ್ತು. ಎಲ್ಲರಿಂದ ಅಭಿನಂದನೆ ಹೇಳಿಸಿಕೊಂಡು ಇನ್ನಷ್ಟು ಕಲಿಯುವ ಆಸೆಯಲ್ಲಿದ್ದಾಳೆ.
ಕನ್ನಡಿಗರೆಲ್ಲಾ ಸೇರಿ ಬಹಳ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಬೇಸಿಗೆಯೆಂದರೆ ಅವರಿಗೆಲ್ಲಾ ಹುರುಪು. ಪ್ರಾರಂಭ ವಾಗುತ್ತಿರುವ ವಸಂತ ಕಾಲ , ಒಂದೆಡೆ ಸೇರಿರುವ ಸಂತೋಷ ಎಲ್ಲರ ಮುಖದಲ್ಲಿತ್ತು. ನನಗೆ ಎಲ್ಲರ ಪರಿಚಯ ಹೊಸದು . ಮಗಳು ಬಂದಿರಲ್ಲಿಲ್ಲ. ಎಲ್ಲರೂ ಬಹಳ ಆತ್ಮೀಯವಾಗಿ ಮಾತಾಡಿಸಿ ನಾನು ಬೆಂಗಳೂರಿನ ಸಿಟಿಯಲ್ಲಿದ್ದೇವೆ ಅನಿಸುವಂತೆ ಕನ್ನಡದ ಮಾತು. ಕವನ. ಹಾಡು, ಕೋಲಾಟ. ಭರತನಾಟ್ಯ, ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಾಡು, ಅವರು ಕನ್ನಡ ಮಾತಾಡಿದರು ಇಂಗ್ಲಿಷ್ ಭಾಷೆಯನ್ನು ಪೂರ್ಣವಾಗಿ ಬಿಟ್ಟು ಮಾತಾಡುವುದು ಕಷ್ಟ ಕೆಲವರಿಗೆ. ನನ್ನ ಮಗಳ ಮನೆಯಲ್ಲಿ ಕನ್ನಡದಲ್ಲೇ ಮಾತಾಡುವುದು. ಹಾಗಾಗಿ ಮೊಮ್ಮಗಳು ಕನ್ನಡವನ್ನು ಚೆನ್ನಾಗಿ ಮಾತಾಡುತ್ತಾಳೆ. ನನ್ನ ಕನ್ನಡ ಭಾಷಣ ಪೂರಾ ಕನ್ನಡಮಯವಾಗಿತ್ತು. ಅಚ್ಚ ಕನ್ನಡ ಕೇಳಿ ಮೈಮರೆತು ನಮ್ಮ ಕನ್ನಡಿಗರು ಹೇಳಿದ ಅಭಿಮಾನದ ನುಡಿಗಳು ನನಗೊಂದಿಷ್ಟು ಉತ್ಸಾಹ, ಚೈತನ್ಯ ಕೊಟ್ಟಿತು.
ಕನ್ನಡ ಕೂಟದ ಅಧ್ಯಕ್ಷರಾದ ಡಾ. ಕೃಷ್ಣೇಗೌಡರು ವರ್ಷಕ್ಕೆ ಹಲವು ಬಾರಿ ಇಂತಹ ಕಾರ್ಯಕ್ರಮ ಮಾಡುತ್ತಿರುತ್ತಾರೆ. ಎಲ್ಲರನ್ನು ಒಂದಡೆ ಸೇರಿಸಿ ಅವರಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಲು ವೇದಿಕೆಯಲ್ಲಿ ಅವಕಾಶ ಕೊಡುತ್ತಾರೆ. ಎಲ್ಲದಕ್ಕೂ ಅವರೇ ಮುಂದೆ ನಿಂತು ಕಾರ್ಯಕ್ರಮದ ಪ್ರಾರಂಭದಿಂದ ಮುಕ್ತಾಯ ಹಂತದ ಸ್ವಚ್ಚಗೊಳಿಸುವ ಕೆಲಸವೂ ಅವರದೇ ಆಗಿತ್ತು . ಅವರು ನನ್ನ ಪರಿಚಯ ಮಾಡಿಕೊಂಡಿದ್ದರು. ಮಾತಾಡುವುದಕ್ಕೆ ಸಮಯದ ಮಿತಿಯಿಲ್ಲ. ನೀವು ಎಷ್ಟು ಹೊತ್ತು ಮಾತಾಡಿದರು ನಮಗೆ ಸಂತೋಷವೇ ಎಂಬ ಅವರ ಅಂತಃಕರಣದ ನುಡಿ. ಸರಳತೆ, ವೇದಿಕೆಯಿಂದ ದೂರದಲ್ಲಿದ್ದು ಗಮನಿಸುತ್ತಾ ಎಲ್ಲದರ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಅವರ ಜೊತೆ ತೆಗೆದುಕೊಂಡ ಪೋಟೊ ಇಲ್ಲವಾಗಿರುವುದು ಒಂದು ಬೇಸರ. ನನಗೆ ಇಷ್ಟು ಒಳ್ಳೆಯ ವೇದಿಕೆಯಲ್ಲಿ ಮಾತಾಡುವುದಕ್ಕೆ ಅವಕಾಶವನ್ನು ಕೊಟ್ಟ ಅವರಿಗೆ ಧನ್ಯವಾದಗಳು.
ಒಳ್ಳೆಯ ಊಟದ ವ್ಯವಸ್ಥೆ ಇತ್ತು . ಮೊದಲಿಗೆ ಬಂದವರಿಗೆಲ್ಲಾ ಲಘು ಉಪಹಾರ ಚಿರುಮರಿ. ಬೊಂಡಾ , ಜ್ಯೂಸ್ . ರಾತ್ರಿ ಊಟಕ್ಕೆ ಕರ್ನಾಟಕದಿಂದ ಬಂದಿದ್ದ ಕಾಯಿ ಹೋಳಿಗೆ, ತುಪ್ಪ ಮನೆಯಿಂದ ಒಬ್ಬೊಬ್ಬರು ಒಂದೊಂದು ರೀತಿಯ ಅಡುಗೆಯನ್ನು ರುಚಿಕಟ್ಟಾಗಿ ಮಾಡಿಕೊಂಡು ಬಂದಿದ್ದರು . ಕೋಸಂಬರಿ, ಚಪಾತಿ ಅದಕ್ಕೆ ಚನ್ನಾ ಮಸಾಲಾ, ಪನ್ನೀರ ಮಸಾಲಾ, ಬಿಸಿಬೇಳೆಬಾತ್, ಬೊಂಡಾ , ಉಪ್ಪಿನಕಾಯಿ, ಮೊಸರನ್ನ ಕಲ್ಕತ್ತಾ ಪಾನ್ , ಮಸಾಲೆ ಚಹಾ ಅಬ್ಬಾ … ಕನ್ನಡಿಗರ ಮನಸ್ಸು ವಿಶಾಲವಾದದ್ದು. ಎಲ್ಲವೂ ಸೊಗಸಾಗಿತ್ತು . ನೆನಪಲ್ಲಿ ಉಳಿಯುವಂತ ಕಾರ್ಯಕ್ರಮ. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ಮನತುಂಬಿದ ಮಮತೆಯ ವಂದನೆಗಳು
ತಾಯಿ ನೆಲದ ಋಣ ತೀರಿಸಲೇಬೇಕು
(ನಮ್ಮೂರ ಲೇಖಕಿ ಸುಶೀಲಾ ಸದಾಶಿವಯ್ಯನವರು ಯುಎಸ್‌ಎ ಕನ್ನಡ ಕೂಟದ ಯುಗಾದಿ ಸಂಭ್ರಮ ಸಮಾರಂಭದಲ್ಲಿ ಮಾಡಿದ ಭಾಷಣ)
“ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸೀ “ ಜನನಿ, ಜನ್ಮ ನೀಡಿದ ಭೂಮಿ ತಾಯಿ ಸ್ವರ್ಗಕ್ಕಿಂತ ಹಿರಿದಾದದ್ದು ಎಂದು ಶ್ರೀ ರಾಮ ತನ್ನ ತಾಯ್ ನೆಲಕ್ಕೆ ಬಂದಾಗ ಹೇಳುವ ಮಾತು ಎಲ್ಲಾ ಕಾಲಕ್ಕೂ ಸತ್ಯವಾದ ಮಾತು. ನಾವು ಎಲ್ಲಿದ್ದರೂ ಎಷ್ಟೇ ಸುಖವಾಗಿದ್ದರೂ ನಮಗೆ ಜನ್ಮ ನೀಡಿದ ತಾಯಿ , ತಾಯಿ ನೆಲವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದು ನಮ್ಮಲ್ಲಿ ಒಂದು ಭಾವನಾತ್ಮಕ ಸೆಳೆತವನ್ನುಂಟು ಮಾಡುತ್ತದೆ. ನಾವು ಎಷ್ಟೇ ಹಿರಿದಾದ ಸುಖದಲ್ಲಿದ್ದರೂ ಅದು ನಮಗೆ ನಿಜವಾದ ಸುಖವಾಗಿರುವುದಿಲ್ಲ. ಪಂಪ ಹೇಳಿದ ಮಾತು ಎಲ್ಲಾ ಕಾಲಕ್ಕೂ ಸತ್ಯ .“ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ “ ಎನ್ನುವ ಮಾತು ತಾಯ್ ನಾಡಿನ ಹಿರಿತನವನ್ನು, ಅದರೊಂದಿಗೆ ನಮಗಿರುವ ಸೆಳೆತವನ್ನು ಬಿಂಬಿಸುತ್ತದೆ.
ನಾವು ಯಾವ ದೇಶದಲ್ಲಿದ್ದರೂ ಅದನ್ನು ಮರೆತು ಬದುಕುವುದು ಕಷ್ಟ. ಕನ್ನಡ ನಾಡು ನುಡಿಯನ್ನು ಜೀವಂತ ಉಳಿಸಿಕೊಳ್ಳುವ ನಿಮ್ಮ ಪ್ರಯತ್ನವು ಶ್ಲಾಘನೀಯವಾದದ್ದು. ನೀವೆಲ್ಲಾ ನವೆಂಬರ್ ೧ ಕನ್ನಡ ರಾಜ್ಯೋತ್ಸವ ದಿನವನ್ನು ಅಮೆರಿಕಾದ ವಿಸ್ಕಾಸಿನ್ ರಾಜ್ಯದ ಕ್ಯಾಲೆಂಡರ್ ನಲ್ಲಿ ಗುರುತಿಸುವಂತಹ ಕೆಲಸವನ್ನು ನೀವೆಲ್ಲಾ ಮಾಡಿರುವುದು ಕನ್ನಡ ನಾಡಿನ ಹೆಮ್ಮೆ. ಕನ್ನಡ ಭಾಷೆಯ ಉಳಿವಿಗೆ , ಅದರ ಬೆಳವಣಿಗೆಗೆ ಕಾರಣವಾಗುವಂತದ್ದು. ನೀವು ಯಾವುದೇ ದೂರದ ದೇಶದಲ್ಲಿದ್ದರೂ ಕನ್ನಡತನವನ್ನು ಉಳಿಸಿಕೊಂಡು ಹೋಗುವಂತ ಕೆಲಸವನ್ನು ಇಲ್ಲಿಯ ಮ್ಯಾಡಿಸನ್ ಸಿಟಿಯಲ್ಲಿರುವ ಕನ್ನಡ ಕೂಟದ ಅಧ್ಯಕ್ಷರಾದ ಡಾ. ಕೃಷ್ಣೇ ಗೌಡರು ಮಾಡುತ್ತಿದ್ದಾರೆ. ತಮ್ಮ ಅಮೂಲ್ಯ ಸಮಯದಲ್ಲಿ ಕನ್ನಡಿಗ ರನ್ನು ಒಂದೆಡೆ ಸೇರಿಸಿ ಅವರಲ್ಲಿರುವ ಪ್ರತಿಭೆಯನ್ನು ಈ ವೇದಿಕೆಯ ಮೂಲಕ ಅನಾವರಣ ಮಾಡುತ್ತಿದ್ದಾರೆ. ಬಸವಣ್ಣನವರ ವಚನ “ ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವನಮ್ಮವ ಇವನಮ್ಮವ ನೆಂದೆನಿಸಯ್ಯಾ ಕೂಡಲಸಂಗಮ ದೇವಯ್ಯಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ “ ಎನ್ನುವಂತೆ ನಾವು ಇರುವ ದೇಶ ಭಾಷೆಯನ್ನು ನಮ್ಮದು ಎನ್ನುವಂತೆ ಪ್ರೀತಿಸುತ್ತಾ ಬದುಕಲೇ ಬೇಕಾದ ಅನಿವಾರ್ಯತೆಗಳು ನಮಗಿದೆ. ಅಂತಹ ಸವಾಲ್ ಜವಾಬ್ಧಾರಿಗಳ ನಡುವೆಯೂ ನಮ್ಮ ಭಾಷೆ ನಮ್ಮ ತಾಯಿ ನೆಲದ ಋಣವನ್ನು ತೀರಿಸಲೇ ಬೇಕು. ನೀವೆಲ್ಲರು ಕನ್ನಡ ನಾಡು ನುಡಿಗಾಗಿ ಮಾಡುತ್ತಿರುವ ಅಭಿಮಾನ ದೊಡ್ಡದು ಎಂದು ಹೇಳಿದರು.