ಸಮಕಾಲೀನ - ನಡೆ, ನುಡಿ ನಿರೂಪಣೆ, ಲಯದ "ಬಾ ಭವಿಷ್ಯದ ನಕ್ಷತ್ರಗಳಾಗೋಣ" - ಕೆಪಿ ನಟರಾಜ
ಓದಿನ ಪ್ರೀತಿಗಾಗಿ
ಡಾ.ಕೆ.ಪಿ.ನಟರಾಜ
ಸಮಕಾಲೀನ ನಡೆ, ನುಡಿ ನಿರೂಪಣೆ, ಲಯದ
"ಬಾ ಭವಿಷ್ಯದ ನಕ್ಷತ್ರಗಳಾಗೋಣ"
ಇತ್ತೀಚೆಗೆ ನಾನು ನಮ್ಮ ಸುತ್ತಿನ ಅಂದರೆ ತುಮಕೂರು ಪ್ರಾಂತದ ಯುವ ಕವಿ ತೇಜಾವತಿ ಎಚ್. ಡಿ. ಅವರ ಕವಿತೆಗಳ ಕುರಿತು ಮಾತಾಡಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕು ಹುಳಿಯಾರಿನ ಇವರು ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕುವೆಂಪು ವಿವಿಯ ವಿದ್ಯಾರ್ಥಿ, ವೃತ್ತಿಯಿಂದ ಶಿಕ್ಷಕಿ . ಇವರೊಬ್ಬ ಕವಿ ಅಷ್ಟೇ ಅಲ್ಲ, ತಮ್ಮ ತಾಯಿಯವರ ನೆನಪಿನಲ್ಲಿ ಪ್ರಕಾಶನವೊಂದನ್ನೂ, ಕಾವ್ಯ ಪ್ರಶಸ್ತಿಯನ್ನೂ ಸ್ಥಾಪಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಚರ್ಯೆಯನ್ನೂ ಮಾಡಬಲ್ಲ ಅಪರೂಪದ ಉತ್ಸಾಹಿ ವ್ಯಕ್ತಿತ್ವವನ್ನೂ ತೋರಿದ್ದಾರೆ. ಹೀಗಾಗಿ ಇವರ ಬಗ್ಗೆ ಬರೆಯಬೇಕೆನ್ನಿಸಿದೆ.ಹೀಗೆ ಒಳ್ಳೆಯ ಪದ್ಯ ಬರೆಯಬಲ್ಲ ಪ್ರತಿಭೆ ಮತ್ತು ಸಾಮಾಜಿಕ ಸ್ತರದಲ್ಲಿ ಕೆಲಸ ಮಾಡಬಲ್ಲ ಕರ್ತೃತ್ವ ಶಕ್ತಿ, ಎರಡೂ ಇರುವ ತೇಜಾವತಿ ಯವರ ಮಹತ್ವಾಕಾಂಕ್ಷೆ ಗಮನಾರ್ಹವಾದುದು.
ದಿನಾಂಕ 29.8.2021 ರಂದು ನಾನು ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ ನ ಅದ್ಯಕ್ಷರಾದ (ಅವರ ಅವಧಿ ಈಗಷ್ಟೇ ಮುಗಿದಿದೆ. ಅದು ಅವರ ಅವಧಿಯಲ್ಲಿ ನಡೆಸಿದ ಕೊನೆಯ ಕಾರ್ಯಕ್ರಮ) ಬಾ. ಹ. ರಮಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಕವನ ಸಂಕಲನ "ಬಾ ಭವಿಷ್ಯದ ನಕ್ಷತ್ರಗಳಾಗೋಣ " ಕುರಿತು ಮಾತಾಡಿದೆ ..
ಅಲ್ಲಿ ಇವರ ಕೆಲವು ಪದ್ಯಗಳನ್ನು ಕುರಿತು ಮಾತಾಡಿದ್ದು , ಮಾತಾಡಬೇಕಿದ್ದಿದ್ದು ಇಲ್ಲಿದೆ ..
ಪದ್ಯದ ಭಾಷೆ ಬಲ್ಲ, ಸಮಕಾಲೀನ ಕವಿತೆಯ ನಡೆ ನುಡಿ ನಿರೂಪಣೆ, ಲಯ .. ಇವೆಲ್ಲವನ್ನೂ ಕಂಡುಕೊಂಡಿರುವಂತಿರುವ
ಒಂದು ಸುಶಿಕ್ಷಿತ, ಸುಸಂಸ್ಕೃತ ಮನಸ್ಸು ಇಲ್ಲಿ ತನ್ನೆಲ್ಲ ತಯಾರಿಯೊಂದಿಗೆ ನಿರತವಾಗಿದೆ..ಈ ಸಿದ್ದತೆ ಇವರ ಕಾವ್ಯಕ್ಕೆ ಒಂದು ಸಿದ್ಧಿಯನ್ನೂ ತಂದಿದೆ.
ಊರುಗಳನ್ನು ತೊರೆದ ನಮಗೆ ಹೊಸ ಜಾಗ ಮತ್ತು ಜನಗಳ ತಾಕುಗಳೇ ನಮ್ಮ ಸಂವೇದನೆಗಳು ರೂಪುಗೊಳ್ಳುವ ನೆಲೆಗಳಾಗಿರುವ ಕಾರಣ ಭಾಷೆಯೂ ಹೊಸತಾಗಬೇಕಾಗಿ ಬರುತ್ತದೆ .ಮಹಿಳೆಯರು ತೌರಿನಿಂದ ಗಂಡನ ಮನೆಗೆ ಹೋಗುವ ವಲಸೆ ಸಮುದಾಯವಾದ ಕಾರಣವಾಗಿ, ಕಾಲಾನುಕಾಲದಿಂದಲೂ ಒಂದು ಘಾಸಿಗೊಳಗಾದ ಅರ್ಧ ಜಗತ್ತು ತನ್ನ ದುಗುಡವನ್ನು ಹೇಳಿಕೊಳ್ಳುತ್ತಲೇ ಬಂದಿದೆ..ಇದನ್ನು ನೋಡಿಕೊಂಡು ಬರೆಯುವುದನ್ನೇ ಚಿಲಿಯ ಮಹಾಕವಿ ಪಾಬ್ಲೊ ನೆರಡಾ ಅಶುದ್ದ ಕಾವ್ಯ ಎಂದು ಕರೆದ ಎಂದು ಕಾಣುತ್ತದೆ.
ನಮ್ಮ ಭಾಷೆಗೆ ಹಾದಿ ಬೀದಿ ಮನೆ ಮಠ ಸಾರ್ವಜನಿಕ ಅಪರಿಚಿತರ ಜೊತೆಗಿನ ಸಂವಾದ ಕೊಡುಕೊಳು ಸಂಘರ್ಷಗಳನ್ನು ಹೊತ್ತ ಭಾಷೆ ಮತ್ತು ಲಯಗಳು ಆಗಮಿಸಿದರೆ ನಮ್ಮ ಕಾವ್ಯಕ್ಕೆ ತಾಜಾತನ ಆಗಮಿಸುತ್ತದೆ. ಇದರಿಂದ ಕವಿತೆ ಸಮಕಾಲೀನವಾಗುತ್ತದೆ.
ಅದಕ್ಕೇನೆ ಎಲ್ಲ ದೊಡ್ಡ ಕವಿಗಳೂ informal ಆದ ಹೊಸದಾದ ಭಾಷೆ ಮತ್ತು ಭಾವನೆಗಳಿಗಾಗಿ ಪರದಾಡುತ್ತಾರೆ. ಇದು ಮೊದಲಿಂದಲೂ ನಡೆದುಬಂದಿದೆ.
- ಕತೆಯಲ್ಲಿ ಮಾಸ್ತಿಯವರು ಮತ್ತು ತೇಜಸ್ವಿಯವರಂತಹ ಮುಖ್ಯ ಲೇಖಕರಿಂದ ಹಿಡಿದು ಎಲ್ಲ ಮುಖ್ಯ ಲೇಖಕರಲ್ಲಿ ನಡೆದ ವಿದ್ಯಮಾನವಾಗಿದೆ.
- ಲಂಕೇಶ್ ಅವರ ಕಲ್ಲು ಕರಗುವ ಸಮಯದ ಸಂಕಲನದಲ್ಲಿ ಈ ಬಗ್ಗೆ ಲಂಕೇಶ್ ಅವರು ಪ್ರಸ್ತಾಪಿಸುತ್ತಾರೆ .
- ತೇಜಸ್ವಿಯವರು ತಮ್ಮ ಅಬಚೂರಿನ ಪೊಸ್ಟಾಫೀಸು ಕಥಾ ಸಂಕಲನಕ್ಕೆ ಬರೆದ ಹೊಸ ದಿಗಂತದೆಡೆಗೆ ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾರೆ ..
- ಕವಿ ಅಡಿಗರು " ಅನ್ಯರೊರೆದುದನೆ ಬರೆದು ಬಿನ್ನಗಾಗಿದೆ ಮನವು " ಎಂದು ನಿಡುಸುಯ್ಯುತ್ತಾರೆ ...
- ತೇಜಸ್ವಿಯವರು ತಮ್ಮ ಕತೆಗಳ ಒಳಗೆ ಈ ಕಾರಣದಿಂದ ಕಾವ್ಯವು ಆಗಮಿಸುವಂತೆ ಮಾಡುತ್ತಾರೆ.
ಎಲ್ಲರೂ ಒಪ್ಪಬಲ್ಲ ಭಾಷೆ, ಪ್ರಚಲಿತವಾದ ಪೂಜ್ಯ ಭಾವಗಳು ಸಲೀಸಾಗಿ ದಕ್ಕಿಬರಬಹುದಾದರೂ ಅವುಗಳನ್ನು ಪಕ್ಕಕ್ಕಿಟ್ಟು ತನ್ನ ಭಾಷೆ ತನ್ನ ಭಾವ ತನ್ನ ವಿಚಾರಗಳನ್ನು ಅರಸುವುದು ಕವಿಗೆ ಯಾವಾಗಲೂ ಅಗತ್ಯ ಸಂಗತಿಯಾಗಿ ಕಾಣುತ್ತದೆ ..
ಈ ಕವಿಯಲ್ಲಿ ಸುಶಿಕ್ಷಿತ ಪ್ರಜ್ಞೆಯೂ, ಶಕ್ತಿಯುತ ಭಾವವೂ ಅಭಿವ್ಯಕ್ತಿಯಲ್ಲಿ ತನ್ನತನವೊಂದು ದಾಖಲಾಗಲು ಹವಣಿಸಿದೆ ಎಂಬುದು ಅವರ ಕವನಗಳನ್ನು ನೋಡಿದಾಗ ಅನ್ನಿಸುತ್ತದೆ.
ಈ ಕವಿ ತನ್ನೊಳಾಯವನ್ನು ನಿರೀಕ್ಷಿಸುತ್ತ ಬರೆಯಲಾರಂಭಿಸಿದರೆ ಆ ತಾದಾತ್ಮ್ಯ. ಎಂತಹ ನುಡಿಗಟ್ಟಿನಲ್ಲಿ ಅವತರಿಸಬೇಕೆಂಬುದಕ್ಕೆ ಈ ಕವಿತೆ ಉದಾಹರಣೆಯಾಗಿದೆ
ಬಲು ಕಠಿಣ ಮಹಿಳೆಯಾಗುವುದು
_______
ಬಲು ಕಠಿಣ ಕಣೇ ಮಹಿಳೆಯಾಗುವುದು
ಬಲು ಕಠಿಣ ಮುಂಜಾನೆ ಬೆಳಗಾಯಿತೆಂದರೆ ಗೊಣಗು
ಪಾತ್ರೆಗಳ ಸದ್ದು ತಲೆಗೊಂದು ಒಗ್ಗರಣೆ
ಕರ್ಣಗಳಿಗೆ ಸುಪ್ರಭಾತ
ನಿದಿರೆ ಬಂದರದೇ ಸ್ವರ್ಗ ಹಗಲೆಲ್ಲಾ ಘೋರ ನರಕ
ಇರುಳು ಬಿದ್ದ ದುಃಸ್ವಪ್ನಗಳ
ಅರೆ ಬರೆ ನೆನಪುಗಳು
ಎಲ್ಲೆಯಿಲ್ಲದ ವಿಸ್ತಾರವೇ ಚೆಂದ ದಾರಿ ನಡಿಗೆ ಸ್ವಚ್ಛಂದ
ಗಡಿಯ ತಲುಪದ ಗುರಿಗೆ
ಪ್ರವಹಿಸುವ ಗುಣ
ಮೆಟ್ಟಿದ ನಿಂದನೆಯ ಗಣನೆಯಿಲ್ಲ ನನಗೆ ಧ್ವನಿಯಾಗದ ಉಕ್ತಿಗಳು
ನೂರೆಂಟು ಅನುಭವದ ಹೆಜ್ಜೆ ಗುರುತುಗಳು
ಹಾಗೆಯೇ ಉಳಿದು ಹೋಗಿವೆ.
ಅಲ್ಲಿ ಬೆಳಗುವ ತಾರೆ … ಇಲ್ಲಿ ಉರಿಯುವ ಜ್ವಾಲೆ
ಚಿಮಣಿ ದೀಪದ ಬೆಳಕಿನಲ್ಲಿ ಕಳೆದ ಗಾಢ ರಾತ್ರಿಗಳು
ಮೈಲುಗಟ್ಟಲೆ ಸಾಗಿ ಕಲಿತ ಪಾದರಕ್ಷೆಯ ಸ್ಪರ್ಶವಿಲ್ಲದ ಅಂಗಾಲುಗಳು
ಉಸುಕಿನಲ್ಲಿ ತಿಕ್ಕಿ ತಿಕ್ಕಿ ತುರಿಸವೆದ ಬೆರಳುಗಳು
ಇಳಿ ಹೊತ್ತಿನವರೆಗೆ ಊಟವಿಲ್ಲದೆ ಹಸಿದು ತಾಳ ಹಾಕುತ್ತಿದ್ದ ಕರುಳುಗಳು
ಕಿಟ್ಟಗಟ್ಟಿದ ಒಲೆ ಹಚ್ಚಿ
ಹಿಟ್ಟು ಬೇಯಿಸಲು ಊದಿದ ಊದುಗೊಳವೆಗಳು
ಹೊಗೆಯೂದರ ತುಂಬಿದ ಕಣ್ಣು ಎದೆಗೂಡುಗಳು
ಆಧುನಿಕತೆಯ ಗಾಳಿ ಎಲ್ಲೆಲ್ಲೂ ಬೀಸಿದೆ.
ಈಗ ಇದಾವುದರ ಗುರುತೂ ಇಲ್ಲ ಬಿಡು
ಎಲ್ಲವನ್ನೂ ಮೀರಿ ತಪಕ್ಕೆ ಅಣಿಯಾದ
ವಿರಾಗಿಯಾಗಿರುವೆ ನಾನಿಂದು
ಈಗೀಗ ಪ್ರಪಂಚ ಅಣಕ ನಗೆಯ ಬೀರಿದೆ ಕಣೆ
ಅರಸಿ ಹೊರಟಿದ್ದೇನೆ. ಬುದ್ಧ ಬೆಳಕ ಅಲ್ಲಮನ ಮನೆ ಹೊಕ್ಕು
ಈ ಕವಿತೆ ಒಂದು ಉದಾಹರಣೆ .. ಕವಿಗೆ ತನ್ನ ಅನುಭವವೇ ಗತಿ ಎಂದು ಅನಿಸಿದಾಗಲೇ ಅವನ ದಾರಿಯೂ ತೆರೆದುಕೊಳ್ಳುತ್ತದೆ..ಅದೇ ಅವನು ತನ್ನ ಬಿಡುಗಡೆಗಾಗಿ ಸವೆಸವೇಕಾದ ದಾರಿ. ಆಗ ಸಿಕ್ಕುವ ಪದ ಪದಾರ್ಥಗಳೆ ಕವಿ ಸಂಗ್ರಹಿಸಬಹುದಾದ 'ಅಶುದ್ಧ ಕಾವ್ಯ'ವಾಗಿರುತ್ತದೆ.. ಅಶುದ್ದ ಯಾಕೆಂದರೆ ಅದು ಚಾಲ್ತಿಯಲ್ಲಿರುವ ಇನ್ನೊಂದರಂತೆ ಇರದೆ ಹೊಸದಾಗಿ ಕಾಣುತ್ತಿರುತ್ತದೆ ...
ಮತ್ತೊಂದು ಕವಿತೆಯನ್ನೂ ಇಲ್ಲಿ ನೋಡಬಹದು :
೨/ ಮುಳ್ಳು ಹಾಸಿಗೆ: ________
ಸಪ್ಪೆ ಮೊಗದ ಹಿಂದಿನ ಕಾರಣ ಕೇಳದಿರಿ ನೀವು ದುಃಖದ ಕಟ್ಟೆಯೊಡೆದು ನೋವಿನ ಕೋಡಿ ಹರಿದು ಕಂಬನಿಯ ಪ್ರವಾಹ ಹರಿದೀತು....!
ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವು... ಮುಳ್ಳು ಹಾಸಿಗೆ ಮೇಲೆ ನಡೆದು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು...!
ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವು ತಮದ ಕೂಪದಲಿ ಮಿಂದು ಕಣ್ಣೆದುರು ಹರಿದಾಡಿದ ನೆರಳು ಕಂಡು ಮನಸು ಮತಿಭ್ರಮಣೆಗೆ ಒಳಗಾದೀತು..!
ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವು..... ಭರವಸೆಯ ಬೆಟ್ಟ ಕುಸಿದು ನೆಮ್ಮದಿಯ ಕಣಿವೆ ಸವೆದು ಕಂಡ ಕನಸುಗಳು ಕೊಚ್ಚಿ ಹೋದಾವು......!
________
ಬಾ ಭವಿಷ್ಯದ ನಕ್ಷತ್ರಗಳಾಗೋಣ |೪೭
ಈ ಕವಿತೆಯು ಸಹ. ತುಟಿಯಲ್ಲಿ ತಡೆದಿರುವ ಬಿಕ್ಕಿನಂತೆ ಇನ್ನೇನು ಕಟ್ಟೆಯೊಡೆಯಲಿರುವ ದುಃಖದಂತೆ ಸಹಾನುಭೂತಿಗಾಗಿ ಕಾದ, ಸಹಾನುಭೂತಿ ಬೇಡದ ತನ್ನ ಪಾಡಿಗೆ ತಾನಿರುವ
ತಪ್ತ ಮನಸ್ಥಿತಿಯೊಂದನ್ನು ಚಿತ್ರಿಸುತ್ತದೆ..
ಹೀಗೆ ಸ್ವತಂತ್ರ ಮನಸ್ಸೊಂದು ಈ ಕವಿತೆಗಳಲ್ಲಿ ತನ್ನ ಧೀಮಂತಿಕೆಯನ್ನು ಬಿಟ್ಟುಕೊಡದ ನಿಲುವಿನಲ್ಲಿ ಕ್ರಿಯಾಶೀಲವಾಗಿರುವುದು ಅನುಭವಕ್ಕೆ ಬರುತ್ತದೆ ....
ಇನ್ನೊಂದು ಕವಿತೆಯನ್ನು ನನ್ನ ಮೇಲಿನ ಗ್ರಹಿಕೆಯಾದ ಧೀ ಶಕ್ತಿಯನ್ನು ಹಾಗೂ ಆತ್ಮ ಗೌರವವು ಜಾಗೃತವಾಗಿರುವ ಕುರುಹುಗಳಿಗಾಗಿ ನೋಡಬಹುದು ..
೩/ ಅನುಭವಿಸುವಿಯಾದರೆ
___________
ನನ್ನೆಲ್ಲಾ ನೋವುಗಳೂ ನಿನ್ನರಸಿ ಬಳಿಬರುವವು ದೇವ
ದೂಷಿಸುವಿಯಾದರೆ ನನ್ನೊಲವಿನ ಕ್ಷಣಗಳೂ ನಿನ್ನನ್ನು ತೊರೆದೋಡುವವು ದೇವ
ರಕ್ಷಿಸುವಿಯಾದರೆ ನಿನ್ನ ತೋಳತೆಕ್ಕೆಯಲಿ
ಅಲುಗಾಡದೆ ಸ್ತಬ್ಧವಾಗಿರುವೆನು
ಭಕ್ಷಿಸುವಿಯಾದರೆ ನನ್ನಿರುವಿಕೆಯ ಸುಳಿವುಗಳೂ ಹಿಂಬಾಲಿಸದಿರುವವು ದೇವ
ಪೂಜಿಸುವೆಯಾದರೆ ಪಯಣದುದ್ದಕ್ಕೂ
ನಿನ್ನಡಿಗಳಿಗೆ ಮೆಟ್ಟಿಲಾಗಿ ನಿಲ್ಲುವೆನು
ಧಿಕ್ಕರಿಸುವಿಯಾದರೆ ನನ್ನಡಿಯ ಧೂಳು ಕಣಗಳೂ ಸೋಕದಿರುವವು ದೇವ
ಗೌರವಿಸುವಿಯಾದರೆ ಮನದ ಮೂಲೆಯಾದರೂ
ಸಾಕು ಅಸ್ತಿತ್ವಕ್ಕೆ
ಅವಮಾನಿಸುವಿಯಾದರೆ ನೆನಪುಗಳು ಹೃದಯದಿಂದಲೇ ಬೇರುಸಹಿತ ಕಿತ್ತೊಗೆಯುವವು ದೇವ
ಪ್ರೇಮಿಸುವಿಯಾದರೆ
ನೂರು ದಿನದ ಬದುಕು ಮೂರೇ ಕ್ಷಣವಾದರೂ ತೃಪ್ತಿ 'ತೇಜ'
ದ್ವೇಷಿಸುವಿಯಾದರೆ ಸಹಸ್ರ ವರ್ಷಗಳೂ ಕೂಡ
ಸಂಕೋಲೆಯ ತೊಡಿಸುವವು ದೇವ
(೩೬ |ಬಾ ಭವಿಷ್ಯದ ನಕ್ಷತ್ರಗಳಾಗೋಣ)
ಈ ಭಾವಗೀತಾತ್ಮಕ ಕವಿತೆ ವೈಯಕ್ತಿಕ ಭಾವ ಸ್ತರ ಮೀರಿ ಮಹಿಳೆಯರ ಆತ್ಮ ಗೌರವಕ್ಕಾಗಿ ಸೆಣಸುವ ಸಾಮುದಾಯಿಕ ದನಿಯಾಗಿದೆ. ಈ ಪದ್ಯದಲ್ಲಿರುವ ಘನತೆಯ ಜಾಗೃತ ನಿಲುವು ಆಕರ್ಷಕವಾಗಿದೆ.ಶಿಶು ಪದ್ಯ ಮತ್ತು ಗಝಲ್ ಗಳನ್ನೂ ಯಶಸ್ವಿಯಾಗಿ ನಿರ್ವಹಿಸಿರುವ ತೇಜಾವತಿಯವರು ಒಬ್ಬ ಶಕ್ತ ಕವಿಯಾಗಿ ನನಗೆ ಕಾಣುತ್ತಾರೆ .
ತನ್ನ ಅನುಭವವನ್ನು ಗೌರವ ಘನತೆಯಿಂದ ನೋಡುವ ಆತ್ಮ ಸಮ್ಮಾನ ಜೀವಂತವಿರುವ ಮತ್ತು ಅದನ್ನು ಶೋಧಿಸುವ ಅಂತರ್ಯಾನದಲ್ಲಿ ಪಡೆದ ಸುಫಲಗಳಂತೆ ಈ ಕವಿತೆಗಳು ಇವೆ.ಹೀಗೆ ಆರಂಭದಲ್ಲೇ ಒಂದು ತಾತ್ವಿಕ ಸ್ಪಷ್ಟತೆ ಹೂವಿನ ಜೊತೆಗಿನ ಸುಗಂಧದಂತೆ ಜೊತೆಯಾಗಿರುವುದು ಇವರ ಕವಿತೆಗೆ ದಕ್ಕಿದ ವರದಂತಿದೆ.
ಸಾಧಾರಣ ಪದ್ಯಗಳನ್ನೂ ಬರೆದಿರಬಹುದಾದ ಇವರಲ್ಲಿ ಒಳ್ಳೆಯ ಪದ್ಯಗಳು ಕೈಮಾಡಿ ಕರೆಯುತ್ತವೆ. ಬಹುಷಃ..ಇದೇ ತರಹ ತೀವ್ರವಾಗಿ, ಮಾರ್ಮಿಕವಾಗಿ ಬರೆಯುತ್ತಿರುವ ತುಮಕೂರಿನ ಇನ್ನೊಬ್ಬ ಕವಯಿತ್ರಿ ವಿದ್ಯಾ ಅರಮನೆಯವರು ಕೂಡಾ ಇಲ್ಲಿ ನೆನಪಾಗುತ್ತಿದ್ದಾರೆ.
ಡಾ. ಕೆ. ಪಿ. ನಟರಾಜ
ಚಿಂತಕರು ಹಾಗೂ ವಿಮರ್ಶಕರು