‘ಸಾವಯವ ಗ್ರಾಮ’ ಎಂಬ  ಎಡಬಿಡಂಗಿ ಯೋಜನೆ 

‘ಸಾವಯವ ಗ್ರಾಮ’ ಎಂಬ  ಎಡಬಿಡಂಗಿ ಯೋಜನೆ 


ಕಟು ವಾಸ್ತವ

ಚಂಸು ಪಾಟೀಲ


ರಾಜ್ಯ ಸರ್ಕಾರದ ಸಾವಯವ ಗ್ರಾಮ ಯೋಜನೆ ಹಾವೂ ಸಾಯಬಾರದು; ಕೋಲೂ ಮುರಿಯಬಾರದು ಎಂಬ ಗಾದೆ ಮಾತನ್ನು ನೆನಪಿಸುತ್ತದೆ. ಅತ್ತ ಎಮ್ಮೆನ್ಸಿಗಳನ್ನು ಧಿಕ್ಕರಿಸಿದಂತೆ ನಟಿಸುತ್ತಲೇ ಇತ್ತ ಪರಿಸರ ಪ್ರಿಯರನ್ನೂ ಮೆಚ್ಚಿಸುವ ಎಡಬಿಡಂಗಿ ಯೋಜನೆ ಇದು.

ಒಂದು ಗ್ರಾಮದ ನೂರು ಹೆಕ್ಟೇರ್ ಜಮೀನು ದಾಖಲೆಗಳ ಪ್ರಕಾರ ಸಾವಯವಕ್ಕೆ ಅಳವಟ್ಟಿರುವುದನ್ನೆ ಅದು ತನ್ನ ಸಾಧನೆ ಎಂದು ಬಿಂಬಿಸುತ್ತದೆ. ನಿಜಕ್ಕೂ ಅಲ್ಲಿನ ಎಲ್ಲ ರೈತರು ಸಾವಯವ ಕೃಷಿಯನ್ನು ಒಪ್ಪಿದ್ದಾರೆಯೆ? ಮುಂದುವರೆದಿರುವ ರೈತರು ಎಷ್ಟು? ಹಿಂದೆ ಸರಿದಿರುವವರು ಎಷ್ಟು? ಎಂಬುದನ್ನು ಅದು ಗಮನಿಸುವುದೇ ಇಲ್ಲ. ಯೋಜನೆಯ ಅನುಷ್ಟಾನದ ನಂತರವೂ ಸಾವಯವ ಕೃಷಿಯನ್ನು ಮುಂದುವರೆಸಿರುವ ರೈತರಿಗೆ ಉತ್ತೇಜನ ನೀಡದಿದ್ದರೆ ಅವರು ಕೂಡ ಅದನ್ನು ಮುಂದುವರೆಸಲು ಹಿಂಜರಿಯಬಹುದಾಗಿದೆ. ಏಕೆಂದರೆ, ಸಾವಯವ ಕೃಷಿ ನಾವಂದುಕೊAಡಷ್ಟು ಸುಲಭವಾಗಿಲ್ಲ. ರಸಾಯನಿಕ ಕೃಷಿಯ ಬೇಸಾಯ ಕ್ರಮಗಳ ಹಿನ್ನೆಲೆಯಲ್ಲಷ್ಟೆ ನಾನು ಈ ಮಾತು ಹೇಳುತಿದ್ದೇನೆ. ರಸಾಯನಿಕ ಕೃಷಿಯಲ್ಲಿ ಯಾವುದೋ ಕಂಪನಿಯ ಬೀಜ ಕೊಂಡು ತಂದು ಬಿತ್ತಿ ಬಿಡುತ್ತೇವೆ. ಆದರೆ, ಸಾವಯವ ಕೃಷಿಯಲ್ಲಿ ನಮ್ಮ ಬೀಜಗಳನ್ನು ನಾವೇ ಸಂರಕ್ಷಿಸಿಕೊಳ್ಳಬೇಕು. ಗೊಬ್ಬರ , ಕೀಟನಾಶಕಗಳ ವಿಷಯದಲ್ಲೂ ಹೀಗೆ. ಅಲ್ಲದೇ , ರಸಾಯನಿಕ ಗೊಬ್ಬರವನ್ನು ಒಂದು ಪ್ರಮಾಣದಲ್ಲಿ ಹೊಲದ ತುಂಬಾ ಚೆಲ್ಲಿ ಬಿಡಬಹುದು. ಅದು ನಮ್ಮ ರೈತರಿಗೆ ಬಹಳ ಸುಲಭ. ಸಾವಯವ ಗೊಬ್ಬರವನ್ನು ಹಾಗೆ ಹೊಲದ ತುಂಬ ಚೆಲ್ಲಬೇಕೆಂದರೆ ಮನೆತುಂಬ ದನಕರುಗಳು ಇರಬೇಕಷ್ಟೆ. ಇನ್ನು ಜೀವಾಮೃತದಂತಹ ದ್ರವರೂಪದ ಗೊಬ್ಬರವನ್ನು ವಾರ ಮುಂಚಿತವಾಗಿ ನಾವೇ ತಯಾರಿಸಿಕೊಳ್ಳಬೇಕಾಗುತ್ತದೆ. ಅದನ್ನು ಹೊಲದ ತುಂಬ ಚೆಲ್ಲಲು ಬಹಳಷ್ಟು ಪ್ರಮಾಣದಲ್ಲಿ ತಯಾರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಾವಯವ ಕೃಷಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಅನುಕರಣೀಯವಾದ ವಿಧಾನ ಎಂದೇ ಹೇಳಬೇಕು. ಇದರಿಂದ ಖರ್ಚು ಕಡಿಮೆ ಆಗುವುದರಿಂದ ಲಾಭಾಂಶವೂ ಹೆಚ್ಚುತ್ತದೆ. ಈಗಾಗಲೇ ರಸಾಯನಿಕ ಕೃಷಿಗೆ ಒಗ್ಗಿ ಹೋಗಿರುವ ದೊಡ್ಡ ಹಿಡುವಳಿದಾರರಿಗೆ ಇದೆಲ್ಲ ರಂಪಾಟ ಎನ್ನಿಸಿಬಿಡುತ್ತದೆ. ಅವರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಸಾವಯವ ಯೋಜನೆಯನ್ನು ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರನ್ನೇ ಗಮನದಲ್ಲಿರಿಸಿಕೊಂಡು ಪುನರ್ರೂಪಿಸುವ ಅಗತ್ಯವಿದೆ ಎನ್ನಿಸುತ್ತದೆ.


ನಮ್ಮಲ್ಲೂ ಕೂಡ ಆಗಿದ್ದು ಹೀಗೆ.


ಸಣ್ಣ ಹಿಡುವಳಿದಾರ ರೈತರು ಸಾವಯವ ಕೃಷಿಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ದೊಡ್ಡ ಹಿಡುವಳಿದಾರರು ಯೋಜನೆಯಿಂದ ದೂರವೇ ಉಳಿದರು. ನಮ್ಮ ಹಳ್ಳಿಗಳಲ್ಲಿನ ಕಥೆ ಮತ್ತು ವ್ಯಥೆ ಏನೆಂದರೆ, ಈ ದೊಡ್ಡ ಹಿಡುವಳಿದಾರರೆ ಸಣ್ಣ ರೈತರಿಗೆ ಯಾವತ್ತಿಗೂ ಮಾದರಿ. ಅವರು ಯಾವ ಕಂಪನಿಯ ಬೀಜ ತಂದು ಹಾಕುತ್ತಾರೋ ಇವರೂ ಅದನ್ನೇ ಬಿತ್ತುವುದು, ಅವರು ಯಾವ.ಗೊಬ್ಬರ ತಂದು ಹಾಕುತ್ತಾರೋ ಇವರೂ ಅದನ್ನೇ ತಂದು ಹಾಕುವುದು ಒಟ್ಟಿನಲ್ಲಿ ಇವರಿಗೆ ಅವರಷ್ಟೇ ಇಳುವರಿ ತೆಗೆಯುವ ಹಮ್ಮು. ದೊಡ್ಡ ಹಿಡುವಳಿದಾರರು ಸಹಜವಾಗಿ ಅನುಕೂಲಸ್ಥರೂ ಆಗಿರುತ್ತಾರೆ. ಅಂದರೆ, ಟ್ರ‍್ಯಾಕ್ಟರ್, ರೂಟಾವೇಟರ, ಬಿತ್ತನೆ ಯಂತ್ರ, ಒಕ್ಕಣೆಯಂತ್ರ, ಆಳುಕಾಳೂ ಎಲ್ಲ ಅವರಿಗೆ ಆ ತಕ್ಷಣಕ್ಕೆ ಲಭ್ಯವಿರುತ್ತವೆ. ಹೀಗಾಗಿ ಅವರ ಬೇಸಾಯಕ್ರಮಗಳೆಲ್ಲ ಸಮಯಾನುಸಾರ ನಡೆದುಬಿಡುತ್ತವೆ. ಸಣ್ಣ ರೈತರ ವಿಷಯದಲ್ಲಿ ಇದೆಲ್ಲವೂ ಹೀಗೆ ಘಟಿಸುವುದಿಲ್ಲ. ಅವನು ಸದಾ ಬರಿಗೈ ದಾಸ. ಮಳೆ ಬೀಳುತ್ತಲೆ ಬಿತ್ತಬೇಕೆನ್ನುತ್ತಾನೆ. ಕೈಯಲ್ಲಿ ಕಾಸೆ ಇರುವುದಿಲ್ಲ. ಯರ‍್ಯಾರÀದೋ ಬಳಿ ಸಾಲಕ್ಕಾಗಿ ವಾರೊಪ್ಪತ್ತು ಎಡತಾಕುತ್ತಾನೆ.ಪೇಟೆಯಿಂದ ಇವನ ಮನೆಗೆ ಬೀಜ ಬಂದು ಬೀಳುವಷ್ಟರಲ್ಲಿ ತಿಥಿಮಿತಿ ಎರಡೂ ತಪ್ಪಿರುತ್ತವೆ. ಧೈರ್ಯ ಮಾಡಿ ಬಿತ್ತುತ್ತಾನೆ. ಅಷ್ಟರಲ್ಲೆ ಮತ್ತೆ ನಾಲ್ಕಾರು ಹನಿ ಮಳೆ ಉದುರಿದರೆ ಬೀಜ ಚೆನ್ನಾಗಿ ಹುಟ್ಟುತ್ತದೆ. ಮಳೆಯಾಗದಿದ್ದರೆ ಹುಟ್ಟುವುದು ಯದ್ವಾತದ್ವಾ ಆಗಿ ಅದಕ್ಕೆ ಮತ್ತೆ ಕುಂಟೆ ಹಾಕಬೇಕಾಗುತ್ತದೆ. ಹರಗಿ ಮತ್ತೊಮ್ಮೆ ಹೊಲ ಹಸನು ಮಾಡಿ ಮತ್ತೊಂದು ಮಳೆಗೆ ಬಿತ್ತಬೇಕಾಗುತ್ತದೆ. ಹೀಗೆ ಅವನ ಸಾಲ ಸ್ಟಾಪಿಲ್ಲದ ಟ್ರೇನಿನಂತೆ ಓಡುತ್ತಲೇ ಇರುತ್ತದೆ.


ನಾಗನಗೌಡ ರೆಡ್ಡಿ ಅವರು ಆಗ ನಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾಗಿದ್ದರು. ಯೋಜನೆಯ ಅನುಷ್ಟಾನದಲ್ಲಿ ಅವರು ಕೂಡ ನಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಲಿದ್ದರು. ಸಾವಯವ ರೈತರಿಗೆ ಉತ್ತೇಜನ ಸಿಗಬೇಕಾದರೆ ಅವರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನೀಡ್ಸನ ಅಕ್ಕಿ ಅವರು, ಚನಬಸಣ್ಣ ಕೊಂಬಳಿ, ಹಿರಿಯ ಸಾವಯವ ಕೃಷಿಕರಾಗಿದ್ದ ಗುರುಮೂರ್ತೆಣ್ಣ ಎಲ್ಲರೂ ಸಭೆ ಸೇರಿ ಚರ್ಚಿಸಿದರು. ನಗರಸಭೆಯವರಿಗೆ ಈ ಸಂಬಂಧ ಮನವಿ ಮಾಡಿಕೊಂಡು ಸಾವಯವ ಉತ್ಪನ್ನಗಳ ಮಾರಾಟಕ್ಕೆ ನಗರಸಭೆಯ ವಾಣಿಜ್ಯ ಸಂಕೀರ್ಣಗಳಲ್ಲಿ ಮಳಿಗೆಯೊಂದನ್ನು ನೀಡಬೇಕೆಂದು ಕೋರಲು ಸಭೆಯಲ್ಲಿ ತೀರ್ಮಾನಿಸಲಾಗಿ, ಆ ಪ್ರಕಾರ ಮನವಿಯನ್ನೂ ಸಲ್ಲಿಸಲಾಯಿತು. ಆದರೆ, ನಗರಸಭೆಯಿಂದ ಇದಕ್ಕೆ ಯಾವುದೆ ಸ್ಪಂದನೆಯೇ ಸಿಗಲಿಲ್ಲ. ಅಲ್ಲದೇ, ಈ ವಿಷಯವನ್ನು ಸ್ಥಳೀಯ ಶಾಸಕರ ಗಮನಕ್ಕೂ ತರಲಾಯಿತು. ಆದರೂ ಅದು ಉಪಯೋಗಕ್ಕೆ ಬರಲಿಲ್ಲ.

ಸಾವಯವ ಗ್ರಾಮ ಯೋಜನೆಯ ಬಗ್ಗೆ ನಮ್ಮ ಕೃಷಿ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಸಾವಯವ ಉತ್ಪನ್ನಗಳಿಗೆ ಸೂಕ್ತ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಯೋಜನೆಯ ಸುರುವಾಯ್ತಿನಿಂದಲೂ ಏನೇನೋ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸಾವಯವ ರೈತರು ಮತ್ತು ವ್ಯಾಪಾರಸ್ಥರ ಮಧ್ಯೆ ಲಿಂಕ್ ಮಾಡುವುದು,ತಿಂಗಳಿಗೊಂದು ವಿಡಿಯೋ ಕಾನ್ಫರೆನ್ಸ್ ಹೀಗೆ ಏನೇನೋ ನಡದೇ ಇದೆ. ಹೀಗೆ ಲಿಂಕ್ ಆದ ರೈತರು ಈ ಕೊಂಡಿಯಿಂದ ಕಳಚಿಕೊಂಡು ಎಲ್ಲೋ ಕಳೆದು ಹೋಗುವುದೂ ನಡದೇ ಇದೆ. ಏಕೆಂದರೆ, ಇಂಥ ರೈತರಿಂದ ಉತ್ಪನ್ನ ಖರೀದಿಸಿದರೆ ವ್ಯಾಪಾರಸ್ಥರಿಗೆ ದೊಡ್ಡಲಾಭ ಸಿಗುವುದಿಲ್ಲ. ಹೀಗಾಗಿ ಅವರು ಈ ರೈತರನ್ನು ನಡುನೀರಲ್ಲೇ ಕೈಬಿಡುತ್ತಾರೆ. ಮತ್ತೆಲ್ಲೋ ಸಸ್ತಾ ಸಿಗುವಲ್ಲಿ ಕೊಂಡು ತಂದು ಚಂದದ ಪ್ಯಾಕೇಟ್ನಲ್ಲಿ ತುಂಬಿ ಸಾವಯವದ ಲೇಬಲ್ ಬಿಗಿದು ಬಿಕರಿಗಿಡುತ್ತಾರೆ. ಈ ಕೊಂಡಿಯಿಂದ ಕಳಚಿಕೊಂಡ ರೈತ ಸಾವಯವಕ್ಕೆ ಸಾವಿರ ಸಲಾಮು ಹೇಳಿರುತ್ತಾನೆ. ಇದುವೇ ವಾಸ್ತವ!.