ಭೂಮಿಯೇ ಬಳಗವಾದ ಸೋಮಣ್ಣ 

ನೆನಪು

ಭೂಮಿಯೇ ಬಳಗವಾದ ಸೋಮಣ್ಣ 


ವ್ಯಕ್ತಿ-ವ್ಯಕ್ತಿತ್ವ


ಎಂ. ನಾಗರಾಜ ಶೆಟ್ಟಿ

    ಸುಮಾರು ಮೂರೂವರೆ ದಶಕಗಳ ಹಿಂದೆ.ಬೆಳಿಗ್ಗೆ ಸ್ಕೂಟರಿನಲ್ಲಿ ಬ್ಯಾಂಕಿಗೆ ಹೋಗುತ್ತಿದ್ದೆ. ನಂಜುಂಡೇಶ್ವರ ಹೋಟೆಲಿನ ಪಕ್ಕದ ಸಂದಿಯಿಂದ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದವನು ಸಾವರಿಸಿಕೊಂಡು ಏಳಲು ನೋಡಿದೆ. ಬವಳಿ ಬಂತು. ಮತ್ತೆ ಎದ್ದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ.


ಪ್ರೊ.ನಾಗಭೂಷಣ್ ಮತ್ತು ಕೆಲವು ಗೆಳೆಯರು ನನ್ನ ಪಕ್ಕದಲ್ಲಿ ನಿಂತಿದ್ದರು. ಹಣೆಗೆ ಏಟು ಬಿದ್ದಿತ್ತು. ಮತ್ತೇನೂ ತೊಂದರೆ ಆಗಿರಲಿಲ್ಲ.ʼ ಆಕ್ಸಿಡೆಂಟ್ ಆಗಿದ್ದು ಹೇಗೆ ತಿಳಿಯಿತು,ಆಸ್ಪತ್ರೆಗೆ ಸೇರಿಸಿದವರು ಯಾರು,ಸ್ಕೂಟರ್ ಎಲ್ಲಿ ಎಂದೆಲ್ಲʼ ನಾಗಭೂಷಣ್‌ಗೆ ಕೇಳಿದೆ. 


"ಎಲ್ಲಾ ಸರಿ ಇದೆ, ಮೊದಲು ಡಿಸ್ಚಾರ್ಜ್ ಆಗ್ಲಿ" ಎಂದ ನಾಗಭೂಷಣ್ ಆಸ್ಪತ್ರೆಗೆ ಸೇರಿಸಿದವರು ಯಾರು ಎಂದು ಹೇಳಲೊಪ್ಪಲಿಲ್ಲ. ಕೆಲದಿನಗಳ ನಂತರ ಒತ್ತಾಯಿಸಿದಾಗ ತಿಳಿಯಿತು. ಕಾಲೇಜಲ್ಲಿದ್ದ ನಾಗಭೂಷಣ್‌ಗೆ ಫೋನ್ ಮಾಡಿ "ನಿಮ್ಮ ಗೆಳೆಯರಿಗೆ ಆಕ್ಸಿಡೆಂಟ್ ಆಗಿದೆ,ಬನ್ನಿ" ಎಂದು ಹೇಳಿ ಅಸ್ಪತ್ರೆಗೆ ದಾಖಲು ಮಾಡಿದವರು ಸೋಮಣ್ಣ.


ಇದು ಜಿ.ಎಸ್.ಸೋಮಶೇಖರ್.


ಈ ಘಟನೆಗಿಂತ ಮೊದಲೇ ಸೋಮಣ್ಣನ ಪರಿಚಯವಿತ್ತು. ಸಿ ವಿ ಮಹದೇವಯ್ಯ ನಂಜುಂಡೇಶ್ವರ ಹೋಟೆಲ್ ಪ್ರಾರಂಭಿಸಿದಾಗ ಅವರ ಜತೆ ನಿಂತವರು ಸೋಮಣ್ಣ. ಸಂಜೆ ಆರರಿಂದ ರಾತ್ರಿ ಒಂಬತ್ತರ ತನಕ ಹೋಟೆಲಲ್ಲಿ ತಾನೇ ಮುಂದೆ ನಿಂತು ಬಂದವರನ್ನು ಸುಧಾರಿಸುತ್ತಿದ್ದರು. ಆ ದಿನಗಳಲ್ಲಿ ನಂಜುಂಡೇಶ್ವರ ಹೋಟೆಲಲ್ಲಿ ಗಿರಾಕಿಗಳ ಸಾಲು, ಸಾಲು. ಮಧ್ಯಾಹ್ನದ ಊಟಕ್ಕೆ ಗಂಟೆ ಗಟ್ಟಲೆ ಕಾಯಬೇಕಿತ್ತು. ಬ್ಯಾಂಕಿನ ಪಾರ್ಟಿ, ಊಟದ ವ್ಯವಸ್ಥೆಗೆ ನಾವು ಹೇಳುತ್ತಿದ್ದುದು ಸೋಮಣ್ಣಗೆ. ಹೀಗೆ ಶುರುವಾದ ಪರಿಚಯ ಗೆಳೆತನವಾಗಿ ಮಾರ್ಪಡಲು ಬಹಳ ದಿನ ಬೇಕಾಗಲಿಲ್ಲ.


ನಗುಮೊಗದ ಮೋಡಿಗಾರ


ನವಂಬರ್,ಡಿಸೆಂಬರ್ ತಿಂಗಳಲ್ಲಿ ಬೆಳಿಗ್ಗಿನ ಉಪಾಹಾರ ಹೆಚ್ಚು,ಕಮ್ಮಿ ಸೋಮಣ್ಣನ ಮನೆಯಲ್ಲಿಯೇ ಆಗುತ್ತಿತ್ತು.ಅವರೇ ಆಯ್ದು ತಂದ ಸೊಗಡು ಅವರೆಕಾಯಿ ಉಸುಳಿ, ಅಕ್ಕಿ ರೊಟ್ಟಿ, ಚಪಾತಿ ಇತ್ಯಾದಿ. ಬೇಡ ಬೇಡವೆಂದರೂ ಹೊಟ್ಟೆ ಬಿರಿಯುವಂತೆ ತಿನಿಸುತ್ತಿದ್ದರು. ಕೆಲವೊಮ್ಮೆ ಜಿ ಎಂ ಶ್ರೀನಿವಾಸಯ್ಯನವರನ್ನು ಸ್ಕೂಟರಿನಲ್ಲಿ ಕರೆದುಕೊಂಡು ಹೋಗುವ ಕೆಲಸ ನನ್ನ ಮೇಲಿರುತ್ತಿತ್ತು. ಈ ಸಮಾರಾಧನೆ ಒಬ್ಬಿಬ್ಬರಿಗಲ್ಲ. ಜಿ ಎಂ ಶ್ರೀನಿವಾಸಯ್ಯ, ಎಸ್ ಜಿ ಸಿದ್ಧರಾಮಯ್ಯ, ನಾಗಭೂಷಣ್, ಜಿ ವಿ ಆನಂದಮೂರ್ತಿ, ನರಸೀಯಪ್ಪ ಯಾರಾದರೂ ಇದ್ದೇ ಇರುತ್ತಿದ್ದರು.


ಹಾಗೆ ಎಲ್ಲರೂ ಸೇರಿದ್ದ ಒಂದು ದಿನ 'ಭೂಮಿ ಬಳಗ'ಕ್ಕೆ ಕಾರ್ಯದರ್ಶಿಯಾಗಿ ನನ್ನ ಹೆಸರು ಬಂತು. ಅವರೆಲ್ಲ ಹಿರಿಯರು,ಸಾಕಷ್ಟು ಹೆಸರು ಮಾಡಿದವರು ಅವರ ನಡುವೆ ನಾನೆಷ್ಟರವನೆಂದು ಹಿಂಜರಿದೆ. ಬೇಡ ಎಂದರೂ ಬಿಡದೆ ಒಪ್ಪಿಸಿಬಿಟ್ಟರು. ಇದರಿಂದ,ತುಮಕೂರು ಬಿಡುವವರೆಗೂ  ಸೋಮಣ್ಣನ ಜತೆಯಲ್ಲಿದ್ದು ಅವರ ಸಂಘಟನಾ ಶಕ್ತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ದಿನದ ಇಪ್ಪತ್ತನಾಲ್ಕು ಗಂಟೆಯೂ ಆಯಾಸಗೊಳ್ಳದೆ, ಬೇಸರಿಸದೆ, ಮುಖದಲ್ಲಿ ಕಿರುನಗೆಯೊಂದನ್ನು ಉಳಿಸಿಕೊಂಡು ಕೆಲಸ ಮಾಡುವ ಅವರ ಅದಮ್ಯ ಶಕ್ತಿಯ ಪರಿಚಯವಾಯಿತು. 'ಭೂಮಿ ಬಳಗ' ಒಂದು ಸಾಂಸ್ಕೃತಿಕ ಸಂಘಟನೆ. ಅದರ ಪ್ರತಿಯೊಂದು ಕಾರ್ಯಕ್ರಮದ ರೂಪರೇಷೆ ನಮ್ಮಲ್ಲಿ ಚರ್ಚಿತವಾಗುತ್ತಿತ್ತು. ಕಾರ್ಯಭಾರವೆಲ್ಲ ಸೋಮಣ್ಣನವರದೇ. ಬಿಡಿಕಾಸೂ ಯಾರೂ ಖರ್ಚು ಮಾಡುವಂತಿರಲಿಲ್ಲ. ಹೀಗಿದ್ದರೂ 'ಭೂಮಿ ಬಳಗ' ನಡೆಸಿದ ಕಾರ್ಯಕ್ರಮಗಳು ನೂರಾರು. ನಾಟಕ, ಚಲನಚಿತ್ರಗಳ ಪ್ರದರ್ಶನ, ಪುಸ್ತಕ ಪ್ರಕಟಣೆ, ಚಿತ್ರಕಲಾ ಪ್ರದರ್ಶನ, ಸಂವಾದಗಳು, ತಜ್ಞರ ಭಾಷಣಗಳು, ಸಂಗೀತ ಗೋಷ್ಠಿಗಳು ಹೀಗೆ ತಿಂಗಳು, ತಿಂಗಳು ಒಂದೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.


ಸೋಮಣ್ಣ 'ಮುನ್ನುಡಿ' ಚಿತ್ರದ ನಿರ್ಮಾಪಕರಲ್ಲೊಬ್ಬರು. ಆ ಸಿನಿಮಾವನ್ನು ಪ್ರಶಾಂತ್ ಟಾಕೀಸಿನಲ್ಲಿ ಬೆಳಗಿನ ಹೊತ್ತು ಪ್ರದರ್ಶಿಸಿದಾಗ ನಿರೀಕ್ಷೆಗಿಂತಲೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಸೋಮಣ್ಣನ ಮೇಲಿನ ಅಭಿಮಾನದಿಂದ ತುಮಕೂರಿನ ಗಣ್ಯರು,ಹಿರಿಯರು ಆಗಮಿಸಿದ್ದರು. ಈ ಚಿತ್ರದ ಸ್ಪೂರ್ತಿಯಿಂದ ಸೋಮಣ್ಣ, ಪಿ ಶೇಷಾದ್ರಿ ಜೊತೆಯಲ್ಲಿ ಮತ್ತೆ ಕೆಲವು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿದರು. 


'ಮುನ್ನುಡಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಾಗ ಪ್ರಶಸ್ತಿಯನ್ನು ಪಡೆಯಲು ಸೋಮಣ್ಣ ದೆಹಲಿಗೆ ಹೋಗಿದ್ದರು. ಇದು ಅವರ ಜೀವನದ ಮರೆಯಲಾರದ ಘಟನೆಗಳಲ್ಲೊಂದು. ಸಿನಿಮಾರಂಗದ ಘಟಾನುಘಟಿಗಳನ್ನು ಸಮೀಪದಲ್ಲಿ ನೋಡುವ ಅವಕಾಶ ಸಿಕ್ಕಿತ್ತು. ಶ್ರೀದೇವಿಯನ್ನು ಹತ್ತಿರದಲ್ಲಿ ಕಂಡು "ಅವಳು ಸಿನಿಮಾದಲ್ಲಿ ಕಾಣುವ ಹಾಗಿಲ್ಲ.ಎತ್ತರ ಕಮ್ಮಿ,ಮುಖ ತಂಬಾ ಚಂದ" ಎಂದಿದ್ದು ಈಗಲೂ ನೆನಪಿದೆ.


ಟಿ.ಎನ್.ಸೀತಾರಾಂರವರ 'ಮುಕ್ತ,ಮುಕ್ತ' ಧಾರಾವಾಹಿಯ ಸಂವಾದವನ್ನು ಎಸ್‌ಐಟಿಯ ಸಭಾಂಗಣದಲ್ಲಿ ಏರ್ಪಡಿಸಿದ್ದೆವು. ಧಾರಾವಾಹಿಯ ನಟ-ನಟಿಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಎಲ್ಲರಿಗೂ ವೇದಿಕೆ ಹತ್ತುವ, ಪ್ರಶ್ನೆ ಕೇಳುವ ಕಾತುರ. ಭದ್ರತಾ ಸಿಬ್ಬಂದಿಯೂ ಇಲ್ಲದ ಆ ಕಾರ್ಯಕ್ರಮವನ್ನು ಸೋಮಣ್ಣನ ಸಮ್ಮೋಹಿನಿಯೇ ನಿಯಂತ್ರಿಸಿತ್ತು.


ತುಮಕೂರಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಒಂದಲ್ಲ,ಒಂದು ರೀತಿಯಲ್ಲಿ ಸೋಮಣ್ಣನ ಭಾಗವಹಿಸುವಿಕೆ ಇರುತ್ತಿತ್ತು. ಕೆಲವೊಮ್ಮೆ ತೆರೆಮರೆಯಲ್ಲಿ. ಯು ಆರ್ ಅನಂತಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಸಿದ್ಧಗಂಗಾ ಮಠದ ಕಾರ್ಯಕ್ರಮಗಳು, ಹಲವು ಗಣ್ಯರ ಅಭಿನಂದನಾ ಕಾರ್ಯಕ್ರಮಗಳಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತಿತ್ತು.


ಮದುವೆ, ಗೃಹಪ್ರವೇಶ, ಉದ್ದಿಮೆಗಳ ಪ್ರಾರಂಭೋತ್ಸವ ಇತ್ಯಾದಿ ಸಣ್ಣ ಪುಟ್ಟ ಕಾರ್ಯಗಳಲ್ಲು ಸೋಮಣ್ಣನ ಕಣ್ಗಾವಲಿದ್ದರೆ ಯಶಸ್ವಿಯಾಯಿತೆಂದೇ ಲೆಕ್ಕ. ಅವರಿಗೆ ವಿಶೇಷ ಆಹ್ವಾನ ಕೊಡುವ ಅಗತ್ಯವಿರಲಿಲ್ಲ. "ಸೋಮಣ್ಣ ಬನ್ನಿ" ಅಂದರೆ ಸಾಕು; ಶಾಮಿಯಾನದಿಂದ ಹಿಡಿದು,ಅಡುಗೆಯ ರುಚಿ ನೋಡುವ ವರೆಗೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಿ ಅತಿಥಿಗಳ ಮನಸ್ಸಂತೋಷಗೊಳಿಸುವ ಕಲೆ ಕರಗತವಾಗಿತ್ತು. ಎಂತಹ ಜವಾಬ್ದಾರಿಯೇ ಆಗಲಿ ಅದನ್ನು ಪೂರ್ಣಗೊಳಿಸುವ ವರೆಗೆ ವಿರಮಿಸುತ್ತಿರಲಿಲ್ಲ. ಅಸಾಧ್ಯ ಎನ್ನುವ ಶಬ್ದ ಅವರ ಶಬ್ದಕೋಶಕ್ಕೆ ಹೊರತು.

ರಾಜಕಾರಣಿಯಾಗದ ನಾಯಕ

ಕ್ರೀಡಾ ತಂಡಗಳನ್ನು ಮುನ್ನಡೆಸುತ್ತಿದ್ದ ಸೋಮಣ್ಣನವರಲ್ಲಿ ಸಹಜವಾಗಿ ನಾಯಕತ್ವದ ಗುಣವಿತ್ತು. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ರಾಜಕೀಯದ ಸೆಳೆತವಿರುವುದು ವಿಶೇಷವಲ್ಲ. ಅದರಲ್ಲೂ ತುಮಕೂರು ಆಡುಂಬೊಲವಾದವರಿಗೆ, ಅಲ್ಲಿನ ಓರೆ,ಕೋರೆಗಳನ್ನು ದೂರ ಮಾಡಲು ಸಕ್ರಿಯ ರಾಜಕಾರಣ ಬೇಕೆನ್ನಿಸುವುದು ಸಹಜ.


ಸೋಮಣ್ಣ ಎರಡು ಚುನಾವಣೆಗಳಲ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದರು. ಮೊದಲು ಪದವೀಧರರ ಕ್ಷೇತ್ರ, ಬಳಿಕ ವಿಧಾನ ಸಭಾ ಚುನಾವಣೆ. ಇವೆರಡರಲ್ಲಿನಿರೀಕ್ಷಿತ ಯಶಸ್ಸು ದೊರಕದಿದ್ದರೂ ಎದೆಗುಂದಿರಲಿಲ್ಲ. ತುಮಕೂರಿನ ಮತ್ತು ರಾಜ್ಯ ಮಟ್ಟದ ರಾಜಕಾರಣಿಗಳ ಪರಿಚಯ, ತಳಮಟ್ಟದ ಜನಸಂಪರ್ಕವಿತ್ತು. ಒಂದಲ್ಲ,ಒಂದು ದಿನ ಅವಕಾಶಗಳ ಬಾಗಿಲು ತೆರೆಯಬಹುದು ಎನ್ನುವ ನಿರೀಕ್ಷೆಯಿತ್ತು.


ರಾಜಕೀಯ ಮೇಲಾಟದಲ್ಲಿ ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸೋಮಣ್ಣ ಅವರನ್ನು ಮನೆಗೆ ಕರೆಸಿ, ಗಂಟೆಗಟ್ಟಳೆ ಚರ್ಚಿಸಿದ್ದರು. ಆ ನಂತರ ಸರ್ಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾದ ಅಭೂತಪೂರ್ವ ಅಹಿಂದ ಸಮಾವೇಶದಲ್ಲೂ ತೊಡಗಿಸಿಕೊಂಡಿದ್ದರು. ಕಾಲಾಂತರದಲ್ಲಿ ಸಿದ್ಧರಾಮಯ್ಯ ಮುಖ್ಕಮಂತ್ರಿಯಾದರು. ಆ ಸಂದರ್ಭದಲ್ಲಿ ಹಳೆಯ ಪರಿಚಯವನ್ನು ನವೀಕರಿಸುವ ಪ್ರಯತ್ನವನ್ನು ಸೋಮಣ್ಣ ಮಾಡಲೇ ಇಲ್ಲ; ಸುಮ್ಮನೇ ಇದ್ದು ಬಿಟ್ಟರು.


ತನಗಾಗಿ ಏನನ್ನೂ ಕೇಳುವುದು ಸೋಮಣ್ಣನ ಜಾಯಮಾನವಲ್ಲ. ಓಲೈಕೆ ಅವರಿಂದಾಗುತ್ತಿರಲಿಲ್ಲ. ಇವೆಲ್ಲ ಇಲ್ಲದ ಸೋಮಣ್ಣನ ಕಣ್ಣ ಮುಂದೆ ಅವರು ಬೆಳೆಸಿದವರೇ ಮೆರೆಯುತ್ತಿದ್ದರು. ಈ ಬಗ್ಗೆ ಸೋಮಣ್ಣನಿಗೆ ಕಿಂಚಿತ್ತೂ ಖೇದವಿರಲಿಲ್ಲ. "ನಾವೇನು ಚೆನ್ನಾಗಿಲ್ವ" ಎಂದು ನಕ್ಕು ನಮಗೇ ಹೇಳುತ್ತಿದ್ದರು. ಅದರಲ್ಲಿ ಸತ್ಯವಿತ್ತು. ರಾಜಕಾರಣಿಯೊಬ್ಬನಿಗೆ ದಕ್ಕದ ಪ್ರೀತಿ ಅವರಿಗೆ ದಕ್ಕಿತ್ತು. ಎಲ್ಲರಿಗೂ ಸೋಮಣ್ಣ ಗೊತ್ತಿತ್ತು. ಇದನ್ನವರು ಆನಂದಿಸುತ್ತಿದ್ದರು.
ತುಮಕೂರು ನಗರದ ಅಭಿವೃದ್ದಿ ಬಗ್ಗೆ ಸೋಮಣ್ಣನಿಗೆ ತನ್ನದೇ ಆದ ಯೋಜನೆಗಳಿದ್ದವು. ಸುಂದರ ನಗರವನ್ನು ಕನಸಿದ್ದರು, ಬಡವರ ಬಗ್ಗೆ, ದಲಿತರ ಬಗ್ಗೆ ಅಪಾರ ಕಾಳಜಿಯಿತ್ತು, ಎಲ್ಲರ ಬದುಕು ಹಸನಾಗಬೇಕೆಂದು ಬಯಸಿದ್ದರು. ಅವರ ಆಶೋತ್ತರಗಳು ನನಸಾಗಲು ಭೂಮಿಕೆ ಒದಗಲಿಲ್ಲ. ಸೋಮಣ್ಣನವರಿಗೆ ಇದರಿಂದ ವೈಯಕ್ತಿಕ ನಷ್ಟವಾಗದಿದ್ದರೂ .ಜನಪರ ರಾಜಕಾರಣಿಯನ್ನು ಗುರುತಿಸುವಲ್ಲಿ ಜನರು ಸೋತರು.


ಆಚಾರವಿಡಿದು ಶರಣ


ತುಮಕೂರಿನಲ್ಲಿ ಹಲವರ ಅಸ್ತಿತ್ವವಿರುವುದು ಲಿಂಗಾಯತನೆನಿಸಿಕೊಳ್ಳುವುದರಲ್ಲಿ. ಬಹುತೇಕರ ವ್ಯಕ್ತಿತ್ವ ಈ ಸರಹದ್ದನ್ನು ಮೀರಿ ಬೆಳೆಯುವುದೇ ಇಲ್ಲ.
ಸೋಮಣ್ಣ ಧಾರ್ಮಿಕ.ಆದರೆ ಧರ್ಮದ ಪರಿಧಿ ಸೋಮಣ್ಣನ್ನು ಕಟ್ಟಿ ಹಾಕಿರಲಿಲ್ಲ.


ಸೋಮಣ್ಣನಿಗೆ ಸಿದ್ಧಗಂಗಾ ಮಠದ ಮೇಲೆ ಪರಮ ನಿಷ್ಠೆ.ಅದಕ್ಕೆ ಬಹುಮುಖ್ಯ ಕಾರಣ ಶಿವಕುಮಾರ ಸ್ವಾಮಿಗಳು.ಸ್ವಾಮೀಜಿಯ ಮೇಲೆ ಸೋಮಣ್ಣನವರಿಗೆ ಗೌರವ,ಭಕ್ತಿ, ಅತೀವ ಪ್ರೀತಿ.ಅದು ತೋರಿಕೆಯದಲ್ಲ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗಲೆಲ್ಲ ಸ್ವಾಮೀಜಿಯವರ ಹತ್ತಿರ ಕೇಳದೆ ಇರುತ್ತಿರಲಿಲ್ಲ.ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.ಮಠದ ಬಗ್ಗೆ ಅಥವಾ ಮಠದ ಸಂಸ್ಥೆಗಳ ಬಗೆಗಿನ ಟೀಕೆಗಳನ್ನು ಸಹಿಸುತ್ತಿರಲಿಲ್ಲ. ಮಠದ ಗೊಂದಲದ ದಿನಗಳಲ್ಲಿ ಹಲವು ನಿಷ್ಠರು ದೂರವಾದಾಗಲೂ ಸೋಮಣ್ಣ ದೃಢವಾಗಿದ್ದರು. 


ತುಮಕೂರಿನ ಹಿರೇಮಠದ ಸ್ವಾಮಿಗಳು, ಕರಿಬಸವ ಸ್ವಾಮಿಗಳಲ್ಲಿ ಸೋಮಣ್ಣನಿಗೆ ಹೊಕ್ಕು ಬಳಕೆಯಿತ್ತು. ಅಲ್ಲೆಲ್ಲ ಏನು ಕೆಲಸವಿದ್ದರೂ ಅವರಿಗೆ ಆಹ್ವಾನವಿತ್ತು. 


ಅದೇ ರೀತಿ ಸಿಎಸ್‌ಐ ಸಂಸ್ಥೆಯ ಜೊತೆಯಲ್ಲು ಒಡನಾಟವಿತ್ತು. ಒಮ್ಮೆ ಸೋಮಣ್ಣನವರ ಜತೆ ಸಿಎಸ್‌ಐ ಚರ್ಚಿನ ಫಾದರ್ ಮನೆಗೆ ಹೋಗಿದ್ದೆ. ಯಾವುದೋ ಕೆಲಸ ಆಗಬೇಕಿತ್ತು. ಚರ್ಚಿಗೆ ಸಂಂಧಪಟ್ಟ ಕೆಲಸದಲ್ಲಿ ಮಗ್ನರಾಗಿದ್ದ ಫಾದರ್, ಸೋಮಣ್ಣ ಬಂದಿರುವುದು ತಿಳಿದ ತಕ್ಷಣ ಬಂದರು. ಸೋಮಣ್ಣ ಹೇಳಿದ್ದನ್ನು ಮರುಮಾತಿಲ್ಲದೆ ಒಪ್ಪಿದರು.


ಕೋಳಿ ನೈವೇದ್ಯ ಸ್ವೀಕರಿಸುವ ದೇವರು, ಸಾರಾಯಿ ಹರಕೆ ಸಲ್ಲಿಸುವ ಗುಡಿ, ಬೇಡಿದುದನ್ನು ನೀಡುವ ದರ್ಗಾ ಇವೆಲ್ಲ ಸೋಮಣ್ಣನಿಗೆ ಗೊತ್ತಿತ್ತು. ಅಲ್ಲೆಲ್ಲ ಅವರೊಂದಿಗೆ ತಿರುಗಾಡಿದ್ದೆವು. ಅವರ ಸ್ನೇಹ ವಲಯದಲ್ಲಿ ಎಲ್ಲರಿಗೂ ಜಾಗವಿತ್ತು. ಎಲ್ಲರೂ ನಮ್ಮವರು. ಬಗಲಲ್ಲಿ ನನ್ನಂತ ನಾಸ್ತಿಕನಿದ್ದರೂ ಅವರವರ ಭಾವ, ಭಕುತಿಗೆ ತಕ್ಕಂತಿರುತ್ತಿದ್ದರು. ಇದರಲ್ಲಿ ಬೂಟಾಟಿಕೆಯಿರಲಿಲ್ಲ.


ಇದ್ದಕ್ಕಿದ್ದಂತೆ ಸೋಮಣ್ಣ ಗೆಳೆಯರ ಮನೆಗೆ ಲಗ್ಗೆಯಿಡುವುದಿತ್ತು. ನೇರ ಅಡುಗೆ ಮನೆಗೆ ದಾಳಿ ಮಾಡಿ ನನ್ನ ಹೆಂಡತಿಗೆ ಏನಿದೆ ಎಂದು ಕೇಳಿ ಅವರೇ ಹಾಕಿಕೊಳ್ಳುತ್ತಿದ್ದರು. ಚಿದಂಬರಯ್ಯನ ಮನೆಗೆ ಹೋದರೆ ಅವರ ಶ್ರೀಮತಿಗೆ ಇದನ್ನೇ ಮಾಡಿ ಎನ್ನುವ ಸ್ವಾತಂತ್ರ‍್ಯವಿತ್ತು. ನರಸೀಯಪ್ಪನ ಮನೆಯಲ್ಲಿಯೂ ಅದೇ ಕ್ರಮ. ಜಾತ್ಯತೀತನಾಗಿರುವುದು ಹೇಗೆ ಎನ್ನುವುದಕ್ಕೆ ಅವರೊಂದು ನಿದರ್ಶನದಂತಿದ್ದರು.


ಒಳಿತು ಮಾಡುವ ಮನಸ್ಸು ಸಾಧಕರನ್ನು ಗುರುತಿಸಿ, ಗೌರವಿಸುವುದು ಅನೂಚಾನವಾಗಿ ಸೋಮಣ್ಣ ಅನುಸರಿಸಿಕೊಂಡು ಬಂದ ಪದ್ಧತಿ. ಇದರಲ್ಲಿ ಹಿರಿಯರು,ಕಿರಿಯರು ಎನ್ನುವ ಭೇದವಿಲ್ಲ. ಸಾಧನೆಯಲ್ಲಿ ಹಿರಿದು,ಕಿರಿದು ವ್ಯತ್ಯಾಸವಿಲ್ಲ. ಕಣ್ಣಿಗೆ ಬಿದ್ದವರನ್ನು ಕರೆಸಿ ಬೆನ್ನು ತಟ್ಟಿದರೆ ತೃಪ್ತಿ.


ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸೋಮಣ್ಣನವರ ಮನೆಗೆ ಬಂದಿದ್ದರೆAದು ನಾಗಭೂಷಣ್ ಹೇಳಿದರು. ಸೋಮಣ್ಣನವರಿಗೆ ಹಂಸಲೇಖ ಅವರ ಪರಿಚಯ ನಿನ್ನೆ ಮೊನ್ನೆಯದಲ್ಲ. ತುಮಕೂರಿನಲ್ಲಿ ಹಂಸಲೇಖರವರ ನಾಟಕದ ಕಂಪೆನಿ ಬೀಡು ಬಿಟ್ಟಿತ್ತು. ಹಂಸಲೇಖ ಅವರ ಸಂಕಷ್ಟದ ದಿನಗಳವು. ಗಲ್ಲಾ ಪೆಟ್ಟಿಗೆ ತುಂಬುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಜತೆಗೂಡಿದವರು ಸೋಮಣ್ಣ. ಆ ನಂತರದಲ್ಲಿ ಹಂಸಲೇಖ ಬಹಳ ಎತ್ತರಕ್ಕೆ ಏರಿದರು. ಆದರೂ ಸಂಕಷ್ಟದ ದಿನಗಳ ಜೊತೆಗಾರನನ್ನು ಮರೆಯದೆ ಬಾಂಧವ್ಯ ಕಾಪಿಟ್ಟುಕೊಂಡಿದ್ದರು ಹಂಸಲೇಖ.
ಸೋಮಣ್ಣನ ಮನೆ ತುಮಕೂರಿಗೆ ಬರುವ ಕಲಾವಿದರ ಕೊನೆಯ ನಿಲ್ದಾಣ. ಅಲ್ಲಿ ಆತ್ಮೀಯರ ನಡುವೆ ಸಂವಾದ, ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿತ್ತು. 


ಸಿದ್ಧಗಂಗಾ ಕಾಲೇಜಿನಲ್ಲಿ ಕ್ರೀಡಾನಿರ್ದೇಶಕರಾಗಿದ್ದ ಸೋಮಣ್ಣಗೆ ಸಹಜವಾಗಿಯೇ ಆಟಗಳ ಮೇಲೆ ಒಲವಿತ್ತು. ವಾಲಿಬಾಲ್, ಟೆನಿಸ್, ಬ್ಯಾಂಡಿಮಿಂಟನ್ ಆಟಗಳಲ್ಲಿ ಪರಿಶ್ರಮವಿತ್ತು. ಆಥ್ಲೆಟಿಕ್ಸ್ ಅಚ್ಚುಮೆಚ್ಚು. ಕ್ಷಣಮಾತ್ರದಲ್ಲಿ ಕ್ರೀಡಾಪಟುಗಳ ಲೋಪದೋಷಗಳನ್ನು ಕಂಡುಹಿಡಿಯುವ,ಪ್ರತಿಭೆಯನ್ನು ಗುರುತಿಸುವ ಗುಣವೂ ಇತ್ತು.


 ಒಮ್ಮೆ ಅವರ ಮನೆಯಲ್ಲಿದ್ದಾಗ ಹದಿಹರೆಯದ ಹುಡುಗನೊಬ್ಬ ಬಂದಿದ್ದ. ತುಮಕೂರು ಪಕ್ಕದ ಹಳ್ಳಿಯ ಹುಡುಗ. ಹೈಸ್ಕೂಲ್ ಮಟ್ಟದ ಓಟದ ಸ್ಪರ್ಧೆಯಲ್ಲಿ ಸೋಮಣ್ಣನ ಕಣ್ಣಿಗೆ ಬಿದ್ದಿದ್ದ.ಅವನಿಗೆ ಪ್ರೋತ್ಸಾಹ ನೀಡಿ, SOI (ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ)ಗೆ ಕಳುಹಿಸಿ, ಖರ್ಚುವೆಚ್ಚ ನೋಡಿಕೊಂಡವರು ಸೋಮಣ್ಣ. ಆತನನ್ನು ತೋರಿಸಿ, ಓಟಗಾರನಿರಬೇಕಾದ ಕಾಲಿನ ಮೀನಖಂಡ, ಪಾದ ರಚನೆಯ ಬಗೆಗೆ ನಮಗೆ ಪಾಠ ಮಾಡಿದರು.


ಸೋಮಣ್ಣನವರ ಸಾಹಿತ್ಯಾಸಕ್ತಿ ಬರಿ ಮಾತಿನದಲ್ಲ.ಪಟ್ಟಾಗಿ ಕೂತು ಓದುತ್ತಿದ್ದರು. ಓದಿದ್ದನ್ನು ಚರ್ಚೆ ಮಾಡುತ್ತಿದ್ದರು. ಇದ್ದಕ್ಕಿಂದ್ದಂತೆ ಕವಿತೆಯ ಸೊಲ್ಲನ್ನು ಗುಣುಗುತ್ತಿದ್ದರು. ನಾವೆಲ್ಲ ಅದು ಯಾರ ಕವನ ಎಂದು ಹೇಳಬೇಕು!


ಒಂದು ಮುಂಜಾನೆ ಎಸ್ ಜಿ ಸಿದ್ಧರಾಮಯ್ಯನವರ ಕವಿತೆಯ ಸಾಲೊಂದನ್ನು ಹೇಳಿ,ಇದು ಯಾರದ್ದು ಹೇಳಿ ಎಂದು ಎಲ್ಲರೆದುರು ಪ್ರಶ್ನಿಸಿದರು. ನನಗೆ ಹೊಳೆಯಲಿಲ್ಲ.


"ಎಂತಾ ಸ್ನೇಹಿತರ‍್ರೀ ನೀವು? ನಿಮ್ಮ ಗೆಳೆಯರ ಕವನ ನಿಮಗೇ ಗೊತ್ತಿಲ್ಲ"ಎಂದು ತಮಾಷೆ ಮಾಡಿದರು.
ನಮ್ಮ ನಡುವೆ ಪ್ರೇಮಕಲಹವಿರುತ್ತಿತ್ತು. ಪರಸ್ಪರ ರೇಗಿಸುತ್ತಿದ್ದೆವು. ಸೋಮಣ್ಣಗೆ ಹೊಗಳಿಕೆ ಇಷ್ಟ. ಈ ದೌರ್ಬಲ್ಯ ಗೊತ್ತಿದ್ದ ನಾವು ಕೆಲವರು ಅವರಿಗೆ ಮೆಚ್ಚಿಗೆಯಾಗದ ಮಾತುಗಳನ್ನು ಆಡುತ್ತಿದ್ದೆವು. ನಮ್ಮ ಸ್ವಭಾವ ಗೊತ್ತಿದ್ದ ಅವರು ನಕ್ಕು ಸುಮ್ಮನಾಗುತ್ತಿದ್ದರು.


ಈ ಸಾವು ನ್ಯಾಯವೇ?


ಸೋಮಣ್ಣಗೆ ಬಹಳ ದಿನ ಮಾತಾಡದೇ ಇದ್ದರೆ ಸಿಟ್ಟು ಬರುತ್ತಿತ್ತು. ಕರೆಮಾಡಿ ಮುನಿಸು ತೋರಿಸುತ್ತಿದ್ದರು.
2020 ರ ಜುಲೈ ತಿಂಗಳಲ್ಲಿ ಫೋನ್ ಮಾಡಿದ್ದೆ.
"ತುಮಕೂರಿಗೆ ಬಂದೇ ಇಲ್ಲ" ಆಕ್ಷೇಪಿಸಿದರು
"ಹೇಗೆ ಬರೋದು ಸೋಮಣ್ಣ ಕೊರೋನ ಇರುವಾಗ"
"ನೀವೆಲ್ಲ ಬಹಳ ಹೆದರ್ತೀರಪ್ಪ"
"ನೀವೂ ಜಾಗ್ರತೆ ಮಾಡಿ,ಜಾಸ್ತಿ ತಿರುಗಾಡಬೇಡಿ"


...................................................


 ಏನೇನೋ ಮಾತಾಯಿತು."ಬೆಂಗಳೂರಿಗೆ ಬರ್ತೇನೆ" ಎಂದರು
"ಬನ್ನಿ, ಯಾವಾಗ ಬರ್ತೀರಿ"
"ಮೇಡಮ್‌ಗೆ ಟೊಮ್ಯಾಟೋ ಸಾರ್ ಮಾಡಲು ಹೇಳಿ.ಬಾಳಾ ದಿನಾಯ್ತು ತಿಂದು"
ನಮ್ಮನೆಯ ಟೊಮ್ಯಾಟೋ ಸಾರಿನಲ್ಲಿ ಏನು ರುಚಿ ಕಂಡು ಹಿಡಿದಿದ್ದಾರೋ, ಮನೆಗೆ ಬಂದಾಗಲೆಲ್ಲ ನನ್ನ ಹೆಂಡತಿಯನ್ನು ಹೊಗಳುತ್ತಿದ್ದರು.
"ಅದಕ್ಕೇನಂತೆ.ಬನ್ನಿ" ಅಂದೆ
ಅದೇ ಕೊನೆ.
ಸೋಮಣ್ಣನಲ್ಲಿ ಕಸುವಿತ್ತು, ಬತ್ತದ ಉತ್ಸಾಹವಿತ್ತು, ಅವರಿಂದ ಆಗಬೇಕಾದ ಕೆಲಸಗಳು ಬಹಳಷ್ಟಿದ್ದವು. 
ಆತ್ಮೀಯ ಗೆಳೆಯನಿಗೆ ಕಾಲನೆಂಬ ನಿಷ್ಟುರ ಗೆಳೆಯ ಅವಕಾಶ ನೀಡಲಿಲ್ಲ…….