ಮಲ್ಲಿಕಾರ್ಜುನ ಖರ್ಗೆಯವರ  ಮುಂದಿನ ದಾಳ ಊಹಿಸಬಲ್ಲಿರಾ?! -ವರ್ತಮಾನ - ಆರ್.ಹೆಚ್. ನಟರಾಜ್

ಮಲ್ಲಿಕಾರ್ಜುನ ಖರ್ಗೆಯವರ  ಮುಂದಿನ ದಾಳ ಊಹಿಸಬಲ್ಲಿರಾ?! ವರ್ತಮಾನ ಆರ್.ಹೆಚ್. ನಟರಾಜ್

ಮಲ್ಲಿಕಾರ್ಜುನ ಖರ್ಗೆಯವರ    ಮುಂದಿನ ದಾಳ ಊಹಿಸಬಲ್ಲಿರಾ?!  -ವರ್ತಮಾನ -    ಆರ್.ಹೆಚ್. ನಟರಾಜ್


ಮಲ್ಲಿಕಾರ್ಜುನ ಖರ್ಗೆಯವರ 


ಮುಂದಿನ ದಾಳ ಊಹಿಸಬಲ್ಲಿರಾ?!

ವರ್ತಮಾನ

ಆರ್.ಹೆಚ್. ನಟರಾಜ್
ರಾಜಕೀಯ ರಂಗದ ಹಾವು ಏಣಿಯಾಟದಲ್ಲಿ ಸದಾ ಹಾವಿನ ಬಾಯಿಗೆ ಸಿಕ್ಕಿ ಕೆಳಗಿಳಿಯುತ್ತಲೇ ಬಂದ ಮಲ್ಲಿಕಾರ್ಜುನ ಖರ್ಗೆ ಈಗ ದೊಡ್ಡ ಏಣಿಯೇರಿ ಆಟ ಗೆದ್ದು ‘ಕೈ’ಯಲ್ಲಿ ದಾಳ ಹಿಡಿದು ಕುಳಿತಿದ್ದಾರೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಗದ್ದುಗೆಯ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಾದಿ ಈಗ ಅಷ್ಟು ಸುಲಭವಲ್ಲ. ಹಾಗೆ ನೋಡಿದರೆ, ಖರ್ಗೆ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಡಾ.ಜಿ. ಪರಮೇಶ್ವರ ಈ ಹುದ್ದೆಯ ಪೈಪೋಟಿಯಲ್ಲಿ ಮೊದಲ ಸ್ಥಾನ ತಲುಪಿದರೂ ಅಚ್ಚರಿ ಪಡುವಂತಿಲ್ಲ. 


ರಾಜಕೀಯ ಹಾವು ಏಣಿಯಾಟ ಗೆದ್ದ ಕರ್ನಾಟಕದ ರಾಜಕಾರಣದಲ್ಲಿ ಅರ್ಧ ಶತಮಾನದಲ್ಲಿ ಚಾಲ್ತಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗಿದ್ದ ಹಿರಿತನ, ರಾಜಕೀಯ ಅನುಭವ, ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯ ಮತ್ತು ಶಿಸ್ತನ್ನು ಪರಿಗಣಿಸುವುದಾದರೆ ಅವರು ಯಾವತ್ತೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು.


ಈ ಕಾರಣಗಳಿಂದಲೇ ಖರ್ಗೆಯವರು ಹಲವು ಬಾರಿ ಮುಖ್ಯಮಂತ್ರಿ ಗಾದಿಯ ಸಮೀಪಕ್ಕೆ ಬಂದರೂ ಕೈ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಯಿತು. ಅಷ್ಟೇ ಅಲ್ಲ ಅವರು ರಾಜ್ಯ ರಾಜಕಾರಣದಿಂದಲೂ ಹೊರ ಹೋಗಿ ದಿಲ್ಲಿಯಲ್ಲಿ ನೆಲೆ ಕಾಣಬೇಕಾಯಿತು ಇಂಥ ಖರ್ಗೆ ಇದೀಗ ಅಖಿಲ ಭಾರತ ಕಾಂಗ್ರೆಸ್‌ನ ಸಾರಥಿ,ಮಹಾರಥಿ.


24 ವರ್ಷಗಳ ಬಳಿಕ ನೆಹರೂ–ಗಾಂಧಿ ಕುಟುಂಬದ ಹೊರಗಿನವರೊಬ್ಬರು ಈ ಹುದ್ದೆಗೆ ಏರಿದ್ದಾರೆ. ಪಕ್ಷದಲ್ಲಿ ಜಗಜೀವನ ರಾಂ ಅವರ ನಂತರ ಮೊದಲ ಬಾರಿಗೆ ದಲಿತ ನಾಯಕರೊಬ್ಬರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.


ಅದೇನೇ ಇರಲಿ, ತಮ್ಮ ಪಕ್ಷ ನಿಷ್ಠೆ, ತತ್ವ,ಸಿದ್ದಾಂತ ಮತ್ತು ಶಿಸ್ತನ್ನು ಎಂದಿಗೂ ಬಿಟ್ಟು ಕೊಡದ ನಾಯಕ,ಪಕ್ಷ ಸಂಘಟನೆ ವಿಷಯದಲ್ಲಿ ಪ್ರತಿ ಪಕ್ಷ ನಾಯಕರಾಗಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಖರ್ಗೆಯವರು ರಾಜ್ಯಕ್ಕೆ ನೀಡಿದ ಕೊಡುಗೆ ಗಣನೀಯ ಕೊಡುಗೆ. 


ರಾಷ್ಟ್ರಮಟ್ಟದಲ್ಲಿ ಬಸವಳಿದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಹಲವು ಬಾರಿ ಮರು ಜೀವ ನೀಡಿದೆ,ಪ್ರತಿಫಲವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿಸುವ ಮೂಲಕ ಕಾಂಗ್ರೆಸ್ ಋಣ ತೀರಿಸಿಕೊಂಡಿದೆ ಎನ್ನಬಹುದು.


ನುರಿತ ರಾಜಕಾರಣಿ. ಪಕ್ಷ ಮತ್ತು ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಕಂಡವರು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದರೂ ಯಾವತ್ತೂ ಅವರು ಹೆಸರಿಗೆ ಕಳಂಕ ಅಂಟಿಸಿಕೊಂಡವರಲ್ಲ. ದಲಿತ ಅಸ್ಮಿತೆಯೂ ಇದೆ. ಸಮಚಿತ್ತ , ಸಮಯೋಚಿತ ಸೂಕ್ಷ್ಮ ಸ್ವಭಾವ ಹೊಂದಿರುವ ಇಲ್ಲಿಯವರೆಗೆ ದುಡುಕಿ ಇಲ್ಲವೇ ಆತುರವೆನಿಸುವ ತೀರ್ಮಾನ ಕೈಗೊಂಡಿಲ್ಲ ಇದೇ ಅವರ ಹೆಗ್ಗಳಿಕೆ.

ಆದರೆ ಈಗ ಅವರ ಎದುರಿಸಬೇಕಿರುವ ಸವಾಲುಗಳು ಬೆಟ್ಟದಷ್ಟಿವೆ.ಅದನ್ನು ಹೇಗೆ ನಿಭಾಯಿಸಬಲ್ಲರು ಎನ್ನುವುದು ಕುತೂಹಲಕರ ಪಕ್ಷದ ಸತತ ಸೋಲುಗಳು ಹಲವರನ್ನು ಪಕ್ಷ ತೊರೆಯುವಂತೆ ಮಾಡಿದೆ. ಮಾತು,ನಡೆ,ನುಡಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಕ್ಷ ತೊರೆಯುವರ ಸಂಖ್ಯೆ ಹೆಚ್ಚುತ್ತಿದೆ.ಇಂತಹ ಸಮಯದಲ್ಲಿ ಒಂದರಂತೆ ಸೋಲು ಕಾಣುತ್ತಿರುವ, ನಾಯಕರನ್ನು ಕಳೆದುಕೊಂಡಿರುವ ಹಾಗೂ ನೀತಿ ಮತ್ತು ಕಾರ್ಯತಂತ್ರಗಳ ವಿಚಾರದಲ್ಲಿ ಎಡವುತ್ತಿರುವ ಪಕ್ಷಕ್ಕೆ ಅವರು ಶಕ್ತಿ ತುಂಬಬೇಕಿದೆ. 


ಸದ್ಯಕ್ಕೆ ಖರ್ಗೆ ಮುಂದೆ ಹಿಮಾಚಲ ಪ್ರದೇಶ,ಗುಜರಾತ್ ಚುನಾವಣೆಗಳಿವೆೆ, ಇವೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಚುನಾವಣೆಯೂ ಬರಲಿದೆ. ಹುಟ್ಟಿ ಬೆಳೆದ ಕರ್ನಾಟಕ ಅವರಿಗೆ ಅತ್ಯಂತ ಪ್ರತಿಷ್ಟೆ  ಹಾಗೂ ಮಹತ್ವದ ಚುನಾವಣೆಯಾಗಿದೆ. ಈ ಬಾರಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಜಗಳದಲ್ಲಿ ಖರ್ಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದರು.ಈಗ ಅದು ಮುಗಿದ ಅಧ್ಯಾಯ. ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯೊಬ್ಬರು ದೂರಾದರೆಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಖುಷಿ ಪಡಬಹುದು.ಆದರೆ, ಈ ಖುಷಿ ಮುಂದೆ ಯಾವ ಸ್ವರೂಪ ಪಡೆಯಬಹುದು ಎನ್ನುವುದನ್ನು ಊಹಿಸುವುದು ಕಷ್ಟ.


ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಕಾಂಗ್ರೆಸ್ ನಿಷ್ಟರಾಗೇ ಉಳಿದು ಬೆಳೆದು ಬಂದಿದ್ದಾರೆ. ಅಲ್ಲದೇ  ಸದಾ ಪಕ್ಷ ನಿಷ್ಟರಿಗೇ  ಮನ್ನಣೆ ಕೊಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಮೂಲ ಮತ್ತು ವಲಸಿಗ ಎಂಬ ವಿಷಯ ಮುನ್ನೆಲೆಗೆ ಬಂದಾಗ ಸದಾ ಮೂಲ ಕಾಂಗ್ರೆಸ್ಸಿಗರ ಪರ ನಿಂತ ಇದಕ್ಕಾಗಿ ಹಲವು ಬಾರಿ ಮುಖಭಂಗ ಅನುಭವಿಸಿದ್ದಾರೆ.


ಹಲವರ ಪ್ರಯತ್ನದ ಬಳಿಕ ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯ ಕ್ರಮೇಣ ಪಕ್ಷದಲ್ಲಿ ತಮ್ಮದೇ ಹಿಡಿತ ಸಾಧಿಸಿದರು. ಸಿದ್ದರಾಮಯ್ಯ ಎಂಟ್ರಿಯಿಂದ ನೇರ ನಷ್ಟಕ್ಕೊಳಗಾದವರು ಮಲ್ಲಿಕಾರ್ಜುನ ಖರ್ಗೆ.


ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಕನಸು ಕಂಡ ಖರ್ಗೆ ಸಿದ್ದರಾಮಯ್ಯ ಅವರಿಗಾಗಿ ತಮ್ಮ ಪ್ರತಿಪಕ್ಷ ನಾಯಕನ ಹುದ್ದೆ ತೊರೆದು ರಾಜ್ಯ ರಾಜಕಾರಣ ಬಿಟ್ಟು ದೆಹಲಿ ವಿಮಾನ ಹತ್ತ ಬೇಕಾಯಿತು. ಇದರ ಬೆನ್ನಲ್ಲೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಖರ್ಗೆಯವರ ಆಪ್ತ ಹಾಗೂ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋತು, ಸಿದ್ದರಾಮಯ್ಯ ಆಪ್ತ ಪಕ್ಷೇತರ ಬೈರತಿ ಬಸವರಾಜ್ ಆಯ್ಕೆಯಾಗಿ ಮುಖಭಂಗ ಅನುಭವಿಸುವಂತಾಯಿತು. ಇಂತಹ ಹಲವು ಘಟನೆಗಳು ನಡೆದವು. ಖರ್ಗೆ ಅವರೊಂದಿಗೆ ಗುರುತಿಸಿಕೊಂಡ ಅನೇಕರು ಸಿದ್ದರಾಮಯ್ಯ ಆಪ್ತರಿಗಾಗಿ ಕಾಂಗ್ರೆಸ್ ಟಿಕೆಟ್ ವಂಚಿತರಾದರು ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಕೆಲವರು ಪಕ್ಷ ಬಿಟ್ಟರೆ, ಸಂಗಮೇಶ್ ಸೇರಿ ಕೆಲವರು ಪಕ್ಷೇತರರಾಗಿ ಕಣಕ್ಕಿಳಿದರು, ಎಸ್.ಆರ್.ಪಾಟೀಲ್, ವೀರ ಕುಮಾರ್ ಪಾಟೀಲ್ ಸೇರಿದಂತೆ ಪಕ್ಷದ ಶಿಸ್ತನ್ನು ಮೀರದ ಹಲವು ಮಂದಿ ಪಕ್ಷದ ಶಿಸ್ತಿನ ಚೌಕಟ್ಟು ಮೀರದೇ ನೇಪಥ್ಯಕ್ಕೆ ಸರಿದರು.


ಪಕ್ಷದ ಆಂತರಿಕ ಹಾವು ಏಣಿಯಾಟದಲ್ಲಿ ಸದಾ ಹಾವಿಗೆ ಬಾಯಿಗೆ ಸಿಕ್ಕಿ ಕೆಳಗಿಳಿಯುತ್ತಲೇ ಬಂದ ಖರ್ಗೆ ಇದೀಗ ದೊಡ್ಡ ಏಣಿಯೇರಿ ಆಟ ಗೆದ್ದು , ಖುದ್ದು ದಾಳ ಉರುಳಿಸುವ ಸ್ಥಾನಕ್ಕೆ ಬಂದು ಕುಳಿತಿದ್ದಾರೆ. ಸಹಜವಾಗಿ ಖರ್ಗೆ ಬೆಂಬಲಿಗರೀಗ ಸಂತಸದಿಂದ ಇದ್ದಾರೆ . ಖರ್ಗೆ ಆಯ್ಕೆ ಸ್ವಾಗತಿಸಿ ಪತ್ರಿಕೆಗಳಲ್ಲಿ ಪ್ರಕಟವಾದ ಬಹುಪಾಲು ಜಾಹೀರಾತುಗಳಲ್ಲಿ ಅವರ ಬೆಂಬಲಿಗರ ನಗುಮುಖಗಳಿರುವುದೇ ಈ ಮಾತಿಗೆ ಸಾಕ್ಷಿ.


ಈಗ ನಿಜವಾದ ಸವಾಲಿರುವುದು ಸಿದ್ದರಾಮಯ್ಯ ಅವರಿಗೆ. ಖರ್ಗೆ ಈಗಾಗಲೇ ತಾವು ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಗಾಂಧಿ ಕುಟುಂಬದ ಸಲಹೆ ಪಡೆಯುವುದಾಗಿ ಹೇಳಿದ್ದಾರೆ. ಹಾಗೆಯೇ ಅವರು ಸೋನಿಯಾ ಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಬಾಂಧವ್ಯ ರಾಹುಲ್ ಗಾಂಧಿ ಅವರ ಜೊತೆಗಿಲ್ಲ. ಸಿದ್ದರಾಮಯ್ಯ ಅವರು ರಾಹುಲ್ ಆಪ್ತವಲಯದಲ್ಲಿದ್ದರೂ ಸೋನಿಯಾ ಜೊತೆಗೆ ಅಂತಹ ಸಂಪರ್ಕವಿಲ್ಲ. ಅಲ್ಲದೇ ಕರ್ನಾಟಕದ ಕುರಿತು ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಖರ್ಗೆ ಅವರ ಕೈ ಮೇಲಾಗಲಿದೆ. ಇದು ಸಿದ್ದರಾಮಯ್ಯ ಅವರ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ.


ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡಾ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಬಹುದು. ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ ಖರ್ಗೆ ಅವರ ಹೆಸರು ಪ್ರಸ್ತಾಪವಾಯಿತು.ಇದರ ಸೂಚನೆ ಅರಿತ ಹಲವು ಕಾಂಗ್ರೆಸ್ ನಾಯಕರು ಖರ್ಗೆ ಪರ ಬ್ಯಾಟಿಂಗ್ ಆರಂಭಿಸಿದರೆ, ಶಿವಕುಮಾರ್ ಮಾತ್ರ ರಾಹುಲ್ ಗಾಂಧಿ ಜಪ ಮಾಡುತ್ತಿದ್ದರು. ಬದಲಾವಣೆಯ ಗತಿಯನ್ನು ಗುರುತಿಸಲು ಅವರಿಂದ ಸಾಧ್ಯವಾಗಲಿಲ್ಲ. ಇದೊಂದು ಕಡೆಯಾದರೆ 1999ರ ಅಂತ್ಯದಲ್ಲಿ ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾದ ವೇಳೆ ಅವರ ಬಲಗೈ ಬಂಟನಾಗಿದ್ದ ಶಿವಕುಮಾರ್ ಅಂದು ಖರ್ಗೆ ಮತ್ತವರ ಆಪ್ತವಲಯದ ಜೊತೆಗೆ ವರ್ತಿಸಿದ್ದನ್ನು ನೆನಪು ಮಾಡಿಕೊಂಡರೆ ಅವರು ದೊಡ್ಡ ಸವಾಲು ಎದುರಿಸಬೇಕಾದೀತು.


ಇವೆಲ್ಲವನ್ನು ಗಮನಿಸಿದಾಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಗದ್ದುಗೆಯ ಕನಸು ಕಾಣುತ್ತಿರುವ ಈ ಇಬ್ಬರ ಹಾದಿ ಅಷ್ಟು ಸುಲಭವಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಗಾದಿಯ ಸಮೀಪ ಬಂದು ಒಳೇಟಿನಿಂದ ಸೋತ ಡಾ.ಜಿ. ಪರಮೇಶ್ವರ  ಈಗ ಮುಖ್ಯವಾಹಿನಿಗೆ ಬಂದರೂ ಬರಬಹುದು. ಖರ್ಗೆ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಪರಮೇಶ್ವರ ದಲಿತ ಮುಖ್ಯಮಂತ್ರಿ ಎಂಬ ಅಂಶವನ್ನು ಮುಂದೊಡ್ಡಿ ಈ ಹುದ್ದೆಯ ಪೈಪೋಟಿಯಲ್ಲಿ ಮೊದಲ ಸ್ಥಾನ ತಲುಪಿದರೂ ಅಚ್ಚರಿ ಪಡುವಂತಿಲ್ಲ. 


ಪರಮೇಶ್ವರ ಅವರ ತಂದೆ ಹೆಚ್.ಎಂ.ಗಂಗಾಧರಯ್ಯನವರ ಕಾಲದಿಂದಲೂ ಖರ್ಗೆ ಮತ್ತವರ ಸಂಬಂಧ ಉತ್ತಮವಾಗಿಯೇ ಇದೆ. ಈ ಮಧ್ಯೆ ಕೆಲವು ಕಾರಣಗಳಿಗಾಗಿ ಪರಮೇಶ್ವರ್ ಮತ್ತು ಖರ್ಗೆ ಸಂಬಂಧ ಹಳಸಿದರೂ ನಂತರದಲ್ಲಿ ಸಿದ್ದರಾಮಯ್ಯ ಕಾರಣಕ್ಕೆ ಇವರಿಬ್ಬರೂ ಒಂದಾಗಿದ್ದು ಗುಟ್ಟೇನಲ್ಲ. ಈಗಲೂ ಆ ಸಂಬಂಧ ಹಾಗೆಯೇ ಇದ್ದು ಪರಮೇಶ್ವರ ಅನುಕೂಲಕರ ಸ್ಥಿತಿಯಲ್ಲಿದ್ದಾರೆ.


ಇದಲ್ಲದೆ ಹೋದರೆ ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಅಲ್ಲಂ ವೀರಭದ್ರಪ್ಪ ಅವರಂತಹ ಹೆಸರುಗಳೂ ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿ ಕೇಳಿಬಂದರೆ ಅಚ್ಚರಿಯೇನಲ್ಲ.


ಇದೆಲ್ಲದರ ನಡುವೆ ಖರ್ಗೆ ಅವರಿಗೆ ತಮ್ಮ ರಾಜ್ಯದಲ್ಲಿ ಕಾಂಗ್ರೆಸನ್ನು ಗೆಲ್ಲಿಸುವಲ್ಲಿ ಅವರು ಸಮರ್ಥರಾಗದೇ ಇದ್ದರೆ, ಆ ವೈಫಲ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೇತಾಳನಂತೆ ಹೆಗಲೇರಿ ಕಾಡಲಿದೆ. ಒಂದು ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಲ್ಪ ಬಹುಮತ ಪಡೆಯಿತು ಎಂದುಕೊಳ್ಳೋಣ. ಆಗಲೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗುಂಪುಗಾರಿಕೆಯಿಂದ ಒಡೆದು ಹೋಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಖರ್ಗೆ ಅವರ ಮೇಲಿದೆ. ಸಿದ್ದರಾಮಯ್ಯ-ಶಿವಕುಮಾರ್ ನಡುವಿನ ಭಿನ್ನಮತವನ್ನು ಖರ್ಗೆ ಹೇಗೆ ಸಂಬಾಳಿಸಲಿದ್ದಾರೆ ಎನ್ನುವುದನ್ನು ಆಧರಿಸಿ ಅವರ ರಾಷ್ಟ್ರ ನಾಯಕತ್ವ ಬಲ ಪಡೆದುಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿದ್ದೇ ಬಿಜೆಪಿಯ ಜೊತೆಗೆ ಒಳಗೊಳಗೆ ಕೈ ಜೋಡಿಸಿರುವ ಕೆಲವರನ್ನು ನಿಭಾಯಿಸುವ ಹೊಣೆಗಾರಿಕೆಯೂ ಖರ್ಗೆಯವರ ಮುಂದಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಖರ್ಗೆ ಯುಗ ಹೇಗಿರಲಿದೆ ಎಂಬ ಕುತೂಹಲ ಎಲ್ಲೆಡೆ ಇದೆ.


***********