ಅಧ್ಯಾತ್ಮದಂತೆ ಕೃಷಿಯೂ ಕೂಡ ಅಮೂರ್ತ ಚಿಂತನೆ

ಕುಂಟ ಕುರುಡರೆಂಟು ಮಂದಿ ರಂಟೀ ಹೊಡೆದರು? ಇದು ಹೇಗೆ ಸಾಧ್ಯ ಎಂಬುದು ಸಾಮಾನ್ಯ ಪ್ರಶ್ನೆ. 

ಅಧ್ಯಾತ್ಮದಂತೆ ಕೃಷಿಯೂ ಕೂಡ ಅಮೂರ್ತ ಚಿಂತನೆ

ತಾದ್ಯಾತ್ಮ


ಚಂ ಸು ಪಾಟೀಲ


'ಕುಂಟ ಕುರುಡರೆಂಟು ಮಂದೀ ರಂಟೀ ಹೊಡೆದರು' ಎಂಬೀ ಶಿಶುನಾಳ ಶರೀಫರ ತತ್ವಪದ ಬಹುಶಃ ನಮ್ಮ ಕೃಷಿ ಬದುಕಿಗೂ ಅನ್ವಯಿಸುವಂತಿದೆ. ಭಜನೀ ಪದವಾಗಿ ಹಳ್ಳಿ ಹಳ್ಳಿಗಳಲ್ಲು ಮೆಲ್ಲುಸಿರಂತೆ ಪಸರಿಸಿರುವ ಈ ಪದವನ್ನು ಅರಿಯದ ಪಂಡಿತ, ಪಾಮರರಿಲ್ಲ. 


ಕುಂಟ ಕುರುಡರೆಂಟು ಮಂದಿ ರಂಟೀ ಹೊಡೆದರು? ಇದು ಹೇಗೆ ಸಾಧ್ಯ ಎಂಬುದು ಸಾಮಾನ್ಯ ಪ್ರಶ್ನೆ. 


ನಂಬುಗೆ ಎನ್ನುವುದೇ ಉತ್ತರ ಇದ್ದೀತು. ಕೃಷಿ ಆಗಲಿ, ಅಧ್ಯಾತ್ಮವಾಗಲಿ ಅಲ್ಲಿ ನಂಬಿಕೆ ಇರದೇ ಏನನ್ನೂ ಸಾಧಿಸಲಾಗದು. ಅಧ್ಯಾತ್ಮದಂತೆ ಕೃಷಿಯೂ ಕೂಡ ಅಮೂರ್ತ ಚಿಂತನೆ. ಅಧ್ಯಾತ್ಮದಲ್ಲಿ ಆರಾಧನೆ ಇದ್ದರೆ, ಕೃಷಿಯಲ್ಲಿ ಕಾಯಕವಿದೆ. ಎರಡಕ್ಕೂ ಸಮರ್ಪಣಾ ಮನೋಭಾವ ಬಹುಮುಖ್ಯ. ನಮ್ಮ ಕೃಷಿಯೂ ಹೀಗೇ ಇತ್ತು. ಕುಂಟ ಕುರುಡರೂ ಕೂಡ ಕೃಷಿ ಮಾಡಿ ನೆಮ್ಮದಿಯಿಂದ ಬದುಕಬಹುದಿತ್ತು. ಅದಕ್ಕೆ ನಂಬುಗೆ, ಕಾಯಕ ನಿಷ್ಠೆ ಮತ್ತು ಸಮರ್ಪಣಾ ಮನೋಭಾವ ಕಾರಣವಾಗಿತ್ತು.


ಮುಂದಿನ ಸಾಲು ನೋಡಿ ಹೇಗಿದೆ:
"ಸುಂಟರಗಾಳಿಗೆ ಸಿಗದೇ ಲೋಕದ 
ರಂಟೀ ಹೊಡೆದರೂ....!"
ನಮ್ಮ ಅಜ್ಜಂದಿರ ತಲೆಮಾರಿನ ಮಾತಿದು. ಆದರೆ, ನಾವು ಆಧುನಿಕ ಕೃಷಿ ಎಂಬ ಸುಂಟರ ಗಾಳಿಗೆ ಸಿಕ್ಕಿಬಿದ್ದೆವು. ಟ್ರ‍್ಯಾಕ್ಟರ್ ಮೇಲೆ ಕೂತು ರಂಟೀ ಹೊಡೆಯಲು ಆರಂಭಿಸಿದೆವು.
"ಸುಜ್ಞಾನವೆಂಬ 
ರಂಟೀ ಹೂಡಿ 
ಕುಂಟೀ ಹೊಡೆದರು" 
ಆಗ ನಮ್ಮ ಹಿರೀಕರಿಗೆ ಯುಕ್ತಾಯುಕ್ತ, ಉಚಿತಾನುಚಿತ, ಇತಿಮಿತಿ, ತಿಥಿಗತಿಗಳಂಥಹ ಸಮಯೋಚಿತ ಜ್ಞಾನವಿತ್ತು. ಬಹುಶಃ ಅದೇ ಸುಜ್ಞಾನ. ಆದರೆ, ಈ ಆಧುನಿಕ ಕಾಲಕ್ಕೆ ಬಂತು ನೋಡಿ ವಿಜ್ಞಾನ. ಬೀಜ(Biotechnology) ದಿಂದ ಹಿಡಿದು ಒಕ್ಕಲಾಟದವರೆಗೂ ಅದರದೇ ಹವಾ. 


ಪ್ರಜ್ಞೆ ಅಂದರೆ, ಅರಿವು ತಾನೇ? ಈ ಅರಿವು ಎಂದರೆ ಯಾವುದು? ಎಲ್ಲರೂ ಬದುಕಬೇಕೆಂಬುದೇ ಅಲ್ಲವೇ? ಅದಕ್ಕೆ ಶರೀಫರು ಹೇಳುತ್ತಾರೆ: 
"ಪ್ರಜ್ಞಾನವೆಂಬ ಕೂರಿಗಿ 
ಹೂಡಿ ಬೀಜ ಬಿತ್ತಿದರು"


ನಾವೇನು ಮಾಡಿದೆವು. ಹೆಚ್ಚು ಇಳುವರಿ, ಹೆಚ್ಚು ಲಾಭದ ಪ್ರಲೋಭನೆಗೆ ಬಿದ್ದು ಎಂಥ ಬೀಜ ಬಿತ್ತಿದೆವು..ಮೊದಲು ಶರೀಫರ ಮುಂದಿನ ಸಾಲು ನೋಡೋಣ: 
"ಕರಿಯ ಬೀಜ, ಬಿಳಿಯ ಬೀಜ, ಬೀಜ ಹಿಡಿದರು." ನಾವು ಮಹೀಕೋ ಬೀಜ, ಸ್ಯಾಂಡೋಜ್ ಬೀಜ ಹಿಡಿಯಲಿಲ್ಲ. ಕೊಂಡು ತಂದು ಬಿತ್ತಿದೆವು.


" ಅರಿಯದಾದ ಮಾತು ಇದರ ಮರ್ಮ ತಿಳಿಯದು" ಎಂದರು ಶರೀಫ ಸಾಹೇಬರು. Seed termination) ಅಂದರೆ, ಮೊಳಕೆಗೆ ಮೊಳೆ ಹೊಡೆವ ತಂತ್ರಜ್ಞಾನ? ಅಥವಾ ಅದೇ ಮರ್ಮ! ಬೀಜೋತ್ಪಾದಕ ಕಂಪನಿಗಳಿಗಷ್ಟೇ ಗೊತ್ತು. ಪಾಪ, ನಮ್ಮ ಬಡಪಾಯಿ ರೈತರಿಗೆ ಹೇಗೆ ಗೊತ್ತಾಗಬೇಕು? ಇವರು ಕೊಂಡು ತಂದು ಬಿತ್ತಿದರು. ಬೆಳೆದರು. ಕೊನೆಗೆ ಸಾಲವೊಂದೇ ಉಳಿದು... ಸಾಲ ತೀರಿಸಲಾಗದೆ...
ಹೆಣಭಾರದ ಬದುಕನ್ನೂ ಸಾಗಿಸಲಾಗದೇ.....


ಎಷ್ಟೋ ಜನ ರೈತರು ಆತ್ಮಹತ್ಯೆ ಯ ದಾರಿ ಹಿಡಿದರು. ರೈತರ ಆತ್ಮಹತ್ಯೆಗಳ ಸರಣಿಯಲ್ಲಿ ಮಂಡ್ಯದ ನಂತರ ಸ್ಥಾನ ಹಾವೇರಿಯದ್ದೇ! 


ಶೀಗೀ ಹುಣ್ಣಿವೀ ದಿನ ಅನ್ನೋದು ಶಿಶುನಾಳ ಶರೀಫ ಸಾಹೇಬರ ಇನ್ನೊಂದು ಪದ ಉತ್ತರ ಕರ್ನಾಟಕದ ಭಾಗದಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಶೀಗೀ ಹುಣ್ಣೀವೀ ಕುರಿತು ಬಹಳ ಸೊಗಸಾಗಿ ವಿವರಿಸುತ್ತದೆ. ಅದನ್ನು ಓದುವುದೇ ಚಂದ. ಅದು ಇಲ್ಲಿದೆ:
ಶೀಗೀ ಹುಣ್ಣೀವೀ ದಿನಾ
ಉಣ್ಣಲಿಕ್ಕೆ ಕರೆಯುವರೆಲ್ಲ
ಕರೆದರೆ ಹೋಗದೆ ಬಿಡಲ್ಲಾ/
ಹುರಿಯಕ್ಕಿ ಹೋಳಿಗೀ
ಹೂರಣಗಡುಬು;
ಕಡ್ಡಲೀ ಪಚ್ಚಡೀ 
ಕಟ್ಟಿನಾಂಬರಾ;
ಉಂಡಿಗಡಬು
ಪುಂಡೀಪಲ್ಯೆ;
ಬುಟ್ಟಿಯೊಳಿಟ್ಯಲ್ಲಾ
ಕೆಮ್ಮಣ್ಣು ಬುಟ್ಟಿಗೆ ಬಡಿದ್ಯಲ್ಲಾ
ಅದರನುಭವ ತಿಳೀಲಿಲ್ಲಾ!
ಅಂದು ಇಂದು
ಬಂದು ಬಹುದಿನ
ಹೊಲದೊಳು ಕುಂತ್ಯಲ್ಲಾ
ಮನಸಿನ ಮೈಲಿಗೆ
ತೊಳೀಲಿಲ್ಲಾ!
ಗಂಧದ ಬೊಟ್ಟು
ಗಮಕೀಲೆ ಇಟ್ಟು
ಹಂಗನೂಲು ಹಾಕಿಯೆಷ್ಟೂ
ಬಟ್ಟನ್ನ ಕಲ್ಲಿಗೆ ಸುಣ್ಣಾ ಇಟ್ಟು
ಕಣ್ಣಿಗೆ ಕಂಡೆಲ್ಲ
ಆ ಕಲ್ಲೇನೂ ಉಣಲಿಲ್ಲ!
ಎಡೀ ಮಾಡಿ ನೀನೇ ಉಂಡ್ಯೆಲ್ಲಾ!


ಶರೀಫ ಸಾಹೇಬರ ಇನ್ನೊಂದು ಪದ ' ಸುಗ್ಗಿ ಮಾಡೋಣ ಬಾರೇ ಗೆಳತಿ' ಕೃಷಿಕರ ಸುಗ್ಗೀಕಾಲದ ಹಿಗ್ಗನು ಬಣ್ಣಿಸುತ್ತದೆ. 


" ಸುಗ್ಗೀ ಮಾಡೋಣು ಬಾರೇ ಗೆಳತಿ
ಎಗ್ಗಿಲ್ಲದೇ ಸುಮ್ಮನ್ಯಾಕ ಕುಂತೀ!
ಅಗ್ಗದ ಫಲಗಳ ಕೊಯ್ಯಲು! ಹೊಲದವ
ರೊಗ್ಗೀಲಿ ಕರೆದರೆ ಹಿಗ್ಗೀಲಿ ಹೋಗಿ//
ಕನ್ನಡಿಗರ ಮನೆಮನೆಯ ಕವಿ ಆಗಿರುವ ನಮ್ಮ ಸರ್ವಜ್ಞನ ತ್ರಿಪದಿಗಳಲ್ಲಂತೂ ಬೇಸಾಯಕ್ಕೆ, ಕೃಷಿಗೆ ಚಿರಂತನ ಸ್ಫೂರ್ತಿ ಆಗಿರುವ, ಕೃಷಿಯ ಮಹತ್ವವನ್ನೂ ಸಾರುವ ಶ್ರೇಷ್ಠ ನುಡಿ ಮೈದಾಳಿದೆ. 
ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಿಂ ರಾಟಿ ನಡೆದುದಲ್ಲದೇ, 
ದೇಶದಾಟವೇ ಕೆಡಗು ಸರ್ವಜ್ಞ!


ಕೃಷಿಯ ಅನುಭವವನ್ನೇ ಸಾರವತ್ತಾಗಿ, ಕೃಷಿಕರು ಹೇಗಿರಬೇಕು, ಏನು ಮಾಡಬೇಕು ಎಂಬುದನ್ನೆಲ್ಲ ಬಹಳ ಸ್ವಾರಸ್ಯಪೂರ್ಣವಾಗಿ ಹೇಳಿರುವ ಸರ್ವಜ್ಞ ನ ಕೆಲ ತ್ರಿಪದಿಗಳು ಇಲ್ಲಿವೆ.
ಉತ್ತೊಮ್ಮೆ ಹರಗದಲೆ ಬಿತ್ತೊಮ್ಮೆ ನೋಡದಲೆ
ಹೊತ್ತೇರಿ ಹೊಲಕೆ ಹೋದರೆ ಅವ ತನ್ನ ನೆತ್ತರವ ಸುಡುವ ಸರ್ವಜ್ಞ.
ಹರಗದ ಎತ್ತಾಗಿ ಬರಡಾದ ಹಯನಾಗಿ
ಹರಟೆ ಹೊಡೆವ ಮಗನಾಗೆ ಹೊಲದಲ್ಲಿ ಕರಡವೇ ಬೆಳಗು ಸರ್ವಜ್ಞ.
ಹದಬೆದೆಯಲಾರಂಭ ಕದನದಲಿ ಕೂರಂಬ
ನದಿಯ ಹಾಯುವಲ್ಲಿ ಹರಿಗೋಲ ಮರೆದಾತ ವಿಧಿಯ ಬೈದೇನು? ಸರ್ವಜ್ಞ.


"ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು" ಎಂದ, ಸಂತ ಕನಕದಾಸರು ತಮ್ಮ ರಾಮಧಾನ್ಯ ಚರಿತೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ಆ ಕಾಲದಲ್ಲಿ ಬೆಳೆಯುತಿದ್ದ ತೃಣಧಾನ್ಯಗಳು ಯಾವುವು ಎಂಬುದರ ವಿವರ ನೀಡಿದ್ದಾರೆ. ಆ ತೃಣಧಾನ್ಯಗಳೇ ಈಗ ಸಿರಿಧಾನ್ಯಗಳಾಗಿವೆ. ಈ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ? ಯಾಕೆ? ಎಂಬುದರ ಸೊಗಸಾದ ವಿಶ್ಲೇಷಣೆ ಈ ಕಾವ್ಯದಲ್ಲಿದೆ. ಭತ್ತ ಇಲ್ಲಿ ಉಳ್ಳವರ ಆಹಾರವಾಗಿಯೂ, ರಾಗಿ ಬಡವರ ಆಹಾರವಾಗಿಯೂ ಕಾಣಿಸಿಕೊಳ್ಳುವ ಮೂಲಕ ಇದು ವರ್ಗ ಸಂಘರ್ಷದ ಚರಿತೆಯಾಗಿಯೂ ಮೂಡಿಬಂದಿದೆ. 


ನರೆದಲೆಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವಧಾನ್ಯವೆಂದೆನಲು
ಮೆರೆವ ರಾಸಿಯ ಕಂಡು ಇದರೊಳು


ಪರಮಸಾರದ ಹೃದಯನಾರೆಂದರಸಿ ಕೇಳಿದನಲ್ಲಿರುತಿಹ ಮಹಾಮುನೀಶ್ವರರ!


ರಾಮನ ಪ್ರಶ್ನೆಗೆ ಕೆಲವರು ಸಾವೆ, ಹಲವರು ನವಣೆ, ಕೆಲವರು ಭತ್ತ, ಗೋದಿ,.ಜೋಳ ಶ್ರೇಷ್ಠ ವೆಂದು ವಾದಿಸಿದರು. ಅಲ್ಲೇ ಇದ್ದ ಗೌತಮ ಮುನಿ  ನಮ್ಮ ದೇಶಕೆ ನರೆದಲಗನೇ ಶ್ರೇಷ್ಠ ಎಂದು ಬಿಟ್ಟರು. ಇದರಿಂದ ರೊಚ್ಚಿಗೆದ್ದ ಭತ್ತ ತನ್ನನ್ನು ಹೀಗೆ ಸಮರ್ಥಿಸಿಕೊಂಡಿತು. 


ಏನೆಲವೋ ನರೆದಲೆಗ ನೀನು ಸಮಾನನೇ ಎನಗಿಲ್ಲಿ? ಲೋಕದಲಧಿಕ ಭೋಜನವಿದೆಂದಾಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲಾ ಹೊಸಮನೆಯ ಪುಣ್ಯಾರ್ಚನೆಗೆ ಮಿಗೆಯೆಸೆವ ಮದುಮಕ್ಕಳಿಗೆ ಸೇಸೆಗೆ ವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದರ್ಚನೆಗೆ ಎಸೆವ ವಿಪ್ರರ ಫಾಲದಲಿ ರಂಜಿಸುವ ಗಂಧಾಕ್ಷತೆಯಹೆನು ಭಾವಿಸಲು ಲೋಕದೊಳಾರು ಸರಿಯಿಂತೆಂದನಾ ವ್ರಿಹಿಗ.


ಇದರಿಂದ ಕೋಪಗೊಂಡ ನರೆದಲೆಗ ಕಣ್ಣಲ್ಲೇ ಕಿಡಿ ಕಾರುತ್ತ ತುಂಬಿದ ಸಭೆಯಲ್ಲಿ ಸಿಡಿಲಿನಂತೆ ಘರ್ಜಿಸಿತು.
ಸತ್ವಹೀನನು ಬಡವರನು ಕಣ್ಣೆತ್ತಿ ನೋಡೆ, ಧನಾಡ್ಯರನು ಬೆಂಬತ್ತಿ ನಡೆವುವುಪೇಕ್ಷೆ ನಿನ್ನದು ಹೇಳಲೇನದನು, ಹೆತ್ತ ಬಾಣಂತಿಯರು ರೋಗಿಗೆ ಪಥ್ಯ ನೀನಹೆ, ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವೆಂದ.
ಹೀಗೆ ರಾಗಿ ಮತ್ತು ಭತ್ತದ ಮಧ್ಯೇ ಮಾತಿನ ಸಮರ ನಡೆದು, ಧಾನ್ಯಗಳೆಲ್ಲರನೂ ಸೆರೆಮನೆಗೆ ನೂಕಿ ಕಾಲಾನಂತರ ಕೆಡದೇ ಉಳಿದ ರಾಗಿಯ ಶ್ರೇಷ್ಠತೆಯನು ಸಾರುವ ಕಥೆಯೆ ರಾಮಧಾನ್ಯ ಚರಿತೆ. 


ಇತ್ತೀಚೆಗೆ ವಾಣಿಜ್ಯ ಬೆಳೆಗಳನೇ ಬೆಂಬತ್ತಿರುವ ಇವತ್ತಿನ ನಮ್ಮ ರೈತರಿಗೆ ಮತ್ತು ನಾವೆಲ್ಲರೂ ರೂಢಿಸಿಕೊಳ್ಳಬೇಕಿರುವ ಆಹಾರಪದ್ಧತಿಗೆ ಕನಕದಾಸರ ರಾಮಧಾನ್ಯ ಚರಿತೆ ಹೊಸಬೆಳಕು ಚೆಲ್ಲುವಂತಿದೆ.
ಶರಣ ಅಂಬಿಗರ ಚೌಡಯ್ಯ ನವರ ವಚನಗಳಂತೂ ನಿಷ್ಠೂರ ನಡೆನುಡಿಗೆ, ಶರಣ ತತ್ವದ ವಿಚಾರಗಳನ್ನು ಖಂಡ ತುಂಡವಾಗಿ ನಿರೂಪಿಸುವ ದಿಟ್ಟ ಶೈಲಿಗೆ ಪ್ರಖ್ಯಾತವಾಗಿವೆ. 


ಕೃಷಿಯಲ್ಲಿ ಅನುಭವ, ಅರಿವು ಎಷ್ಟು ಮುಖ್ಯವೋ ಅಷ್ಟೇ ಕ್ರಿಯೆಯೂ ಮುಖ್ಯ ಎಂದು ಹೇಳುವ ಅವರ ವಚನವೊಂದು ಹೀಗಿದೆ.


ಬೀಜ ಮೊಳೆವುದಲ್ಲದೇ ಮೊಳೆ ಮೊಳೆತುದುಂಟೇ?
ಕ್ರಿಯೆಗೆ ಅರಿವಲ್ಲದೇ ಅರಿವಿಂಗೆ ಅರಿವುಂಟೇ?
ಮೊಳೆ ಮೊಳೆತು ಪುನರಪಿ ಬೀಜವಾದಂತೆ,
ಅರಿವು ಕ್ರಿಯೆಯಲ್ಲಿ ನಿಂದು ಉಭಯವು ತಾನಾದ ತೆರದಂತೆ ಎರಡರಲ್ಲಿ ಕೂಡಿದ ಪೂಳುಮೆಯನರಿಯಬೇಕೆಂದನಂಬಿಗರ ಚೌಡಯ್ಯ.