ಮರ್ಯಾದೆಗೇಡು ಹತ್ಯೆ ಮತ್ತು ಜಾತಿಯ ಕೇಡು

ಜಾತಿ ತಾರತಮ್ಯದಿಂದ ನೊಂದಿರುವ ಸಮುದಾಯದವರಲ್ಲಿಯೂ ಸಹ ತನ್ನ ಸ್ವಂತ ಮಗಳನ್ನೇ ಕೊಂದು, ಮರ್ಯಾದೆ ಉಳಿಸಿ ಕೊಳ್ಳಬಹುದಾದಂತಹ ಜಾತಿಯ ಶ್ರೇಷ್ಠತೆ ಮತ್ತು ಅದರ ಹಿಂದೆ ಅಡಗಿರುವ ಮನುಷ್ಯನ ಕ್ರೌರ್ಯವು ಮಾನವ ಪ್ರೀತಿಯಲ್ಲಿ ನಂಬಿಕೆಯಿಟ್ಟಿರುವ ನಮ್ಮಂತಹವರ ಎದೆ ನಡುಗಿಸುತ್ತದೆ. 

ಮರ್ಯಾದೆಗೇಡು ಹತ್ಯೆ ಮತ್ತು ಜಾತಿಯ ಕೇಡು

‘ಬೆವರ ಹನಿ’ ವಿಶೇಷ


ಎಚ್.ವಿ.ಮಂಜುನಾಥ


ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ತುಮಕೂರು ಮತ್ತು ಕೋಲಾರ ಜಿಲ್ಲೆಗಳಿಂದ ಎದೆ ನಡುಗಿಸುವ, ಮಾನವೀಯತೆ ತಲೆ ತಗ್ಗಿಸುವಂತಹ ಎರಡು ಹೃದಯವಿದ್ರಾವಕ ಘಟನೆಗಳು ಸುದ್ದಿಯಾಗಿವೆ.


ಘಟನೆ–1 


ಕಾಲೇಜಿನಲ್ಲಿ ಕಲಿಯುತಿದ್ದ ಪರಿಶಿಷ್ಟ ಪಂಗಡದ ಯುವತಿ ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣದಿಂದ ತಮ್ಮ ಮನೆಯ ಗೌರವ, ಮರ್ಯಾದೆ ಹಾಳಾಯಿತೆಂದು ಆಕೆಯನ್ನು ಆಕೆಯ ಹೆತ್ತ ತಂದೆ, ಸಹೋದರ ಮತ್ತು ಚಿಕ್ಕಪ್ಪ ಸೇರಿಕೊಂಡು ನೇಣು ಹಾಕಿ (ಜೂನ್ 9, 2023) ಕೊಂದಿರÀÄವ ಬಗ್ಗೆ ತುಮಕೂರು ಜಿಲ್ಲೆ, ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ. ಆತ್ಮಹತ್ಯೆ ಎಂದು ಬಿಂಬಿಸಲು ಮೊದಲು ಯುವತಿಗೆ ವಿಷ಼ ಕುಡಿಸಲು ಯತ್ನಿಸಿ ವಿಫಲವಾದ ನಂತರ ನೇಣು ಬಿಗಿದು ಕೊಲೆ ಮಾಡಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. 


ಘಟನೆ–2 


ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು, ಬೋಡುಗುರ್ಕಿ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಮತ್ತು ಗೊಲ್ಲ ಸಮುದಾಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಇದನ್ನು ತಿಳಿದ ಯುವತಿಯ ತಂದೆ ತಾನು ಹೆತ್ತ ಮಗಳನ್ನೇ ತನ್ನ ಕೈಯ್ಯಾರೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಇದನ್ನು ಕೇಳಿದ ಪ್ರೀತಿಸುತ್ತಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂತಲೂ ವರದಿಯಾಗಿದೆ. 


ಈ ಎರಡೂ ಪ್ರಕರಣದಲ್ಲಿಯೂ ಪ್ರೀತಿಸುತ್ತಿದ್ದ ಯುವಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ತುಮಕೂರಿನ ಚೇಳೂರಿನಿಂದ ವರದಿಯಾಗಿರುವ ಪ್ರಕರಣದಲ್ಲಿ ಯುವತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಬೋಡುಗುರ್ಕಿ ಗ್ರಾಮದಿಂದ ವರದಿಯಾಗಿರುವ ಪ್ರಕರಣದಲ್ಲಿ ಯುವತಿ ಗೊಲ್ಲ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ಎರಡೂ ಹತ್ಯೆಗಳನ್ನು ತಮ್ಮ ಕುಟುಂಬದ ಗೌರವ, ಮರ್ಯಾದೆ ಹಾಳಾಯಿತೆಂದು ಮಾಡಲಾದ ಮರ್ಯಾದೆಗೇಡು ಹತ್ಯೆ ಎಂದು ಹೇಳಲಾಗುತ್ತಿದೆ. ಇಲ್ಲಿ ಗಮನಿಸಬೇಕಾಧ ಅಂಶವೆಂದರೆ ಯುವಕ ಮತ್ತು ಯುವತಿಯರ ಕುಟುಂಬಗಳು ಹಿಂದುಳಿದ ಜಾತಿಗಳಿಗೆ ಸೇರಿರುವಂತದ್ದು. ಜಾತಿ ತಾರತಮ್ಯದಿಂದ ನೊಂದಿರುವ ಆ ಸಮುದಾಯದವರಲ್ಲಿಯೂ ಸಹ ತನ್ನ ಸ್ವಂತ ಮಗಳನ್ನೇ ಕೊಂದು, ಮರ್ಯಾದೆ ಉಳಿಸಿಕೊಳ್ಳಬಹುದಾದಂತಹ ಜಾತಿಯ ಶ್ರೇಷ್ಠತೆ ಮತ್ತು ಅದರ ಹಿಂದೆ ಅಡಗಿರುವ ಮನುಷ್ಯನ ಕ್ರೌರ್ಯವು ಮಾನವ ಪ್ರೀತಿಯಲ್ಲಿ ನಂಬಿಕೆಯಿಟ್ಟಿರುವ ನಮ್ಮಂತಹವರ ಎದೆನಡುಗಿಸುತ್ತದೆ. 


ಕೋಲಾರದಲ್ಲಿ ನಡೆದಿರುವ ಮರ್ಯಾದೆಗೇಡು ಹತ್ಯೆ ಕುರಿತು ಮಾತನಾಡಿರುವ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಸಾಹಿತಿಯಾದ ಕೋಟಿಗಾನಹಳ್ಳಿ ರಾಮಯ್ಯನವರು “ದಲಿತ ಸಂಘರ್ಷ ಸಮಿತಿ ತಾರುಣ್ಯದಲ್ಲಿದ್ದ 1980 ರ ದಶಕದಲ್ಲಿ ದಲತ ಹುಡುಗ ಮೇಷ್ಟ್ರು, ಹುಡುಗಿ ಒಕ್ಕಲಿಗರವಳು ಪರಸ್ಪರ ಪ್ರೀತಿಸಿ ಓಡಿಹೋಗಿ ಮದುವೆಯಾದರು, ಹುಡುಗಿ ಮನೆಯವರು ಹುಡುಕಿ ಒಪ್ಪಿಸಿ ಊರಿಗೆ ಕರೆತಂದು ಆಕೆಯನ್ನು ನಾಡ ಬಂದೂಕಿನಿಂದ ಸುಟ್ಟು ಮನೆಯಲ್ಲೇ ಹೂತು ಹಾಕಿದರು. ಆಗ ಪರಿಶಿಷ್ಟ ಜಾತಿಯ ಹುಡುಗರ ಬೆನ್ನಿಗೆ ದಸಂಸ ಇತ್ತು, ಈಗ 40 ವರ್ಷಗಳ ನಂತರ ಇನ್ನೊಂದು ಮರ್ಯಾದೆಗೇಡು ಹತ್ಯೆಯಾಗಿದೆ. ಬೆನ್ನಿಗೆ ಯಾವ ದಸಂಸ, ಯಾವ ನಾಯಕರು ಇದ್ದಾರೋ ಇಲ್ಲವೋ ಗೊತ್ತಿಲ್ಲ!” ಎಂಬ ಆತಂಕದ ಮಾತುಗಳನ್ನಾಡಿದ್ದಾರೆ ಹಾಗೂ ತನ್ನ ಸ್ನೇಹಿತರಾದ ಶಿವಪ್ಪ ಮತ್ತಿತರರೊಂದಿಗೆ ಆ ಗ್ರಾಮಕ್ಕೆ ಭೇಟಿ ನೀಡಿ ನೋವನ್ನು ಭರಿಸಲಾಗಿದೆ ಜೀವ ತೆತ್ತಿರುವ ಹುಡುಗನ ನೊಂದ ಕುಟಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಂತರ್ಜಾತಿ ವಿವಾಹಿತರ ಮತ್ತು ಪ್ರಗತಿಪರರ ದೊಡ್ಡ ಗುಂಪೇ ಇರುವ ತುಮಕೂರಿನಲ್ಲಿ ಇಂತಹುದು ನಡೆಯಿತೋ ಇಲ್ಲವೋ ಗೊತ್ತಿಲ್ಲ.


ಈಗ ನಡೆದಿರುವ ಮರ್ಯಾದೆಗೇಡು ಹತ್ಯೆ ಹೊಸದೇನು ಅಲ್ಲ ಮತ್ತು ಕೊನೆಯದು ಅಲ್ಲ. ಜಾತಿ ಎಂಬುದು ಇರುವ ತನಕ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ನಮ್ಮಂತವರ ಜವಾಬ್ದಾರಿ ಏನು? ನಾವು ಏನು ಮಾಡಬಹುದು? ಎಂಬ ಪ್ರಶ್ನೆಗಳು ಏಳುವುದು ಸಹಜ. ಇಂತಹ ಪ್ರಶ್ನೆ ನಮ್ಮಲ್ಲಿ ಹುಟ್ಟದಿದ್ದರೆ ನಾವು ಸತ್ತಿದ್ದೇವೆ ಎಂದು ಅರ್ಥ. 


“ಸ್ವಕುಲದೊಳಗಿನ ಮದುವೆ ಅಥವಾ ಅಂತರ್ಜಾತಿಯ ವಿವಾಹದ ನಿಷೇಧ ಜಾತಿಯ ಪ್ರಮುಖ ಸಾರ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹಗಳೆಂದರೆ ಜಾತಿಗಳ ಬೆಸುಗೆ ಎಂದರ್ಥ” ಎಂದು ಹೇಳಿ ಜಾತಿ ನಿರ್ಮೂಲನೆಗೆ ಅಂತರ್ಜಾತಿಯ ವಿವಾಹಗಳೂ ಪರಿಹಾರ ಎಂದು ಪ್ರತಿಪಾದಿಸಿದವರು ಡಾ. ಬಿ.ಆರ್. ಅಂಬೇಡ್ಕರ್. 


ಸುಪ್ರೀಂಕೋರ್ಟ್ 2006ನೇ ಇಸವಿಯಲ್ಲಿಯೇ “ಲತಾ ಸಿಂಗ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ” ಪ್ರಕರಣದಲ್ಲಿ “ಮರ್ಯಾದಾ ಹತ್ಯೆ” ಯನ್ನು ಕಟುವಾಗಿ ಟೀಕಿಸಿರುವುದಲ್ಲದೆ ಅಂತಹ ಕೃತ್ಯ ಅಂತ್ಯಂತ ಹೇಯ ಮತ್ತು ನಾಚಿಕೆಗೇಡಿತನದ್ದಷ್ಟೇ ಅಲ್ಲ ಸಂವಿಧಾನ ವಿರೋಧಿಯಾದುದು. ಅಂತರ್ಜಾತಿ/ಅಂತರ್‌ಧರ್ಮೀಯ ವಿವಾಹಗಳು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹವು ಎಂದು ಹೇಳಿರುವುದಲ್ಲದೆ ಅಂತಹ ಅಂತರ್ಜಾತಿ/ಅಂತರ್‌ಧರ್ಮಿಯ ವಿವಾಹಿತರಿಗೆ ಸರ್ಕಾರ ಸೂಕ್ತ ಪೋಲೀಸ್ ರಕ್ಷಣೆ ಒದಗಿಸಬೇಕು ಎಂದು ಇಡೀ ರಾಷ್ಡçಕ್ಕೆ ಅನ್ವಯವಾಗುವಂತೆ ನಿರ್ದೇಶಿಸಿದೆ. ಆದರೆ ಕುರುಡು ಸರ್ಕಾರಗಳು ಇದುವರೆಗೂ ಒಂದು ಆದೇಶವನ್ನೋ ಅಥವಾ ಸುತ್ತೋಲೆಯನ್ನೋ ಹೊರಡಿಸಿ ಆ ನಿರ್ದೇಶನದ ಜಾರಿಗೆ ಯತ್ನಿಸಿಲ್ಲ. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಿತರ ವೇದಿಕೆಯಾದ ಮಾನವ ಮಂಟಪ, ದಸಂಸ ಮತ್ತು ಇನ್ನಿತರ ಸಂಘಟನೆಗಳು ಸರ್ಕಾರಕ್ಕೆ ಒಂದೆರಡು ಸಾರಿ ಮನವಿ ಮಾಡಿವೆಯಾದರೂ ಅದು ಕಾಟಾಚಾರಕ್ಕೆ ಎಂಬಂತಾಗಿ ಒಂದು ಪ್ರಬಲ ಒತ್ತಡದ ಗುಂಪಾಗಿಯೋ ಅಥವಾ ಹೋರಾಟದ ರೂಪದಲ್ಲಿಯೋ ನಡೆದಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದೆ ಇರಲು ಇದೂ ಒಂದು ಕಾರಣ ಇರಬಹುದು. 
ಕಾನೂನು ತನ್ನ ಕೆಲಸ ತಾನು ಮಾಡುತ್ತದೆ ಎಂದು ಸುಮ್ಮನಿರದೆ ನಾವು ಏನು ಮಾಡಬಹುದು ಎಂದರೆ ಮೊದಲು ಮರ್ಯಾದೆ ಹತ್ಯೆಯನ್ನು ಖಂಡಿಸಬೇಕು, ನಾವಿರುವ ಸ್ಥಳದಲ್ಲಿಯೇ ಸಣ್ಣ ಸಣ್ಣ ಗುಂಪುಗಳಾಗಿಯಾದರೂ ಪ್ರತಿಭಟಿಸಿ ಸಮಾಜದ ಗಮನ ಸೆಳೆಯಬೇಕು. ಸಾಧ್ಯವಾದರೆ ಘಟನೆ ನಡೆದ ಊರಿಗೆ ಹೋಗಬೇಕು. ಹತ್ಯೆ ಮಾಡಿದ, ಹತ್ಯೆಗೊಳಗಾದ ಎರಡೂ ಕುಟುಂಬಗಳು ನಮ್ಮವೇ ಆಗಿರುವುದರಿಂದ ಎರಡು ಕುಟುಂಬದವರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಬೇಕು, ತಪ್ಪು ಮಾಡಿದ ಕುಟುಂಬದವರಿಗೆ ಅವರು ಮಾಡಿದ ತಪ್ಪನ್ನು ತಿಳಿಸಬೇಕು. ಜೊತೆಜೊತೆಗೆ ತಪ್ಪು ಮಾಡಿದವರು ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು. ನಡೆದಿರುವ ತಪ್ಪಿನಲ್ಲಿ ಸಮಾಜದ ಭಾಗವಾಗಿರುವ ನಮ್ಮದು ತಪ್ಪಿರುವ ಕಾರಣ ನಡೆದ ತಪ್ಪಿಗೆ ನಾವು ಸ್ವಲ್ಪವಾದರೂ ನಾಚಿಕೆಪಟ್ಟುಕೊಳ್ಳಬೇಕು. 


ಈಗ ತಕ್ಷಣಕ್ಕೆ ಪ್ರೇಮಿಗಳನ್ನು ರಕ್ಷಿಸುವ, ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಮಾಡುವ ಮೂಲಕ ತನ್ನ ಸಂವಿಧಾನ ಬದ್ಧ ಕರ್ತವ್ಯವನ್ನು ನಿರ್ವಹಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು. ಒಂದು ವೇಳೆ ಸರ್ಕಾರ ಯಥಾಪ್ರಕಾರ ಕಣ್ಮುಚ್ಚಿ ಕುಳಿತರೆ ನಮ್ಮ ಮುಂದಿನ ನಡೆಗಳನ್ನು ನಿರ್ಧರಿಸಿ ಕಾರ್ಯ ಪ್ರವೃತ್ತರಾಗಬೇಕು. ಸಮಾನತೆಯ ಕನಸು ಕಾಣುತ್ತಿರುವವರೆಲ್ಲರೂ ಇದನ್ನು ತಮ್ಮ ಕರ್ತವ್ಯ ಎಂದು ಭಾವಿಸುತ್ತಾರೆ ಎಂದು ಆಶಿಸುತ್ತೇನೆ.

ಇವು ‘ಮರ್ಯಾದಾ’ ಹತ್ಯೆಗಳಲ್ಲ 

ಅನಾಗರಿಕ ಕೃತ್ಯಗಳು: ಸುಪ್ರೀಂ ಕೋರ್ಟ್ 

ಲತಾ ಸಿಂಗ್ ವರ್ಸಸ್ ಸ್ಟೇಟ್ ಆಫ್ ಯುಪಿ, ಮತ್ತೊಬ್ಬರು

(ತೀರ್ಪು ದಿನಾಂಕ 7 ಜುಲೈ, 2006) 

ಜಾತಿ ಪದ್ಧತಿಯು ದೇಶಕ್ಕೆ ಶಾಪವಾಗಿದ್ದು, ಇದನ್ನು ಎಷ್ಟು ಬೇಗ ನಿರ‍್ಮೂಲನೆ ಮಾಡುತ್ತೇವೋ ಅಷ್ಟೂ ದೇಶಕ್ಕೆ ಒಳಿತು. ವಾಸ್ತವವಾಗಿ, ದೇಶದ ಮುಂದಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸಲು ನಾವು ಒಗ್ಗಟ್ಟಿನಿಂದ ಇರಬೇಕಾದ ಸಮಯದಲ್ಲಿ ಇದು ದೇಶವನ್ನು ವಿಭಜಿಸುತ್ತಿದೆ. ಅಂತರ್ಜಾತಿ ವಿವಾಹಗಳು ಜಾತಿ ಪದ್ಧತಿಯನ್ನು ನಾಶ ಮಾಡುವುದರಿಂದ ಇವು ದೇಶದ ಹಿತಕ್ಕೆ ಪೂರಕವಾಗಿವೆ. ಹಾಗಿದ್ದಾಗ್ಯೂ ಅಂತರ್ಜಾತಿ ವಿವಾಹವಾಗುತ್ತಿರುವ ಯುವಕ-ಯುವತಿಯರಿಗೆ ಹಿಂಸಾಚಾರದ ಬೆದರಿಕೆ ಇದೆ ಅಥವಾ ಅವರ ಮೇಲೆ ಹಿಂಸಾಚಾರ ನಡೆಯುತ್ತಿದೆ ಎಂಬ ಆತಂಕದ ಸುದ್ದಿಗಳು ದೇಶದ ಹಲವಾರು ಭಾಗಗಳಿಂದ ಬರುತ್ತಿವೆ. 


ನಮ್ಮ ಅಭಿಪ್ರಾಯದಲ್ಲಿ, ಅಂತಹ ಹಿಂಸಾಚಾರ ಅಥವಾ ಬೆದರಿಕೆ ಅಥವಾ ಕಿರುಕುಳದ ಕೃತ್ಯಗಳು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಈ ಕೃತ್ಯಗಳನ್ನು ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಒಬ್ಬ ವ್ಯಕ್ತಿಯು ವಯಸ್ಕನಾದ ಬಳಿಕ ಅವನು ಅಥವಾ ಅವಳು ತಾವು ಇಷ್ಟಪಡುವವರನ್ನು ಮದುವೆಯಾಗಬಹುದು. ಹುಡುಗ ಅಥವಾ ಹುಡುಗಿಯ ಪೋಷಕರು ಅಂತಹ ಅಂತರ್ಜಾತಿ ಅಥವಾ ಅಂತರ್-ಧರ್ಮೀಯ ವಿವಾಹವನ್ನು ಒಪ್ಪದಿದ್ದರೆ ಅವರು ಮಾಡಬಹುದಾದ ಗರಿಷ್ಠ ಕೆಲಸವೆಂದರೆ ಅವರು ಮಗ ಅಥವಾ ಮಗಳೊಂದಿಗಿನ ಸಾಮಾಜಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳಬಹುದಾಗಿದೆ. ಆದರೆ ಅವರು ಬೆದರಿಕೆ ಹಾಕುವುದು ಅಥವಾ ಹಿಂಸಾಚಾರವನ್ನು ಪ್ರಚೋದಿಸುವಂತಿಲ್ಲ, ಅಂತರ್ಜಾತಿ ಅಥವಾ ಅಂತರ್-ಧರ್ಮೀಯ ವಿವಾಹಕ್ಕೆ ಒಳಗಾಗುವ ವ್ಯಕ್ತಿಗೆ ಕಿರುಕುಳ ನೀಡುವಂತಿಲ್ಲ ಅಥವಾ ಹಿಂಸೆ ಮಾಡುವಂತಿಲ್ಲ. ಆದ್ದರಿಂದ, ನಾವು ದೇಶಾದ್ಯಂತ ಆಡಳಿತ/ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸುವುದೇನೆಂದರೆ, ವಯಸ್ಕರಾಗಿರುವ ಯಾವುದೇ ಯುವಕ ಅಥವಾ ಯುವತಿ ಮತ್ತೊಬ್ಬ ವಯಸ್ಕ ಯುವಕ ಅಥವಾ ಯುವತಿಯೊಂದಿಗೆ ಅಂತರ್ಜಾತಿ ಅಥವಾ ಅಂತರ್ ಧರ್ಮೀಯ ವಿವಾಹವಾಗಿದ್ದರೆ ಆ ದಂಪತಿ ಯಾರಿಂದಲೂ ಕಿರುಕುಳಕ್ಕೊಳಗಾದಂತೆ ಅಥವಾ ಬೆದರಿಕೆಗಳು ಅಥವಾ ಹಿಂಸಾಚಾರದ ಕೃತ್ಯಗಳಿಗೆ ಒಳಗಾಗದಂತೆ ನೋಡಿಕೊಳ್ಳತಕ್ಕದ್ದು ಮತ್ತು ಅಂತಹ ಬೆದರಿಕೆಗಳನ್ನು ಅಥವಾ ಕಿರುಕುಳವನ್ನು ನೀಡುವವರು ಅಥವಾ ಹಿಂಸಾಚಾರವನ್ನು ಸ್ವತಃ ಅಥವಾ ಅವರ ಪ್ರಚೋದನೆಯಿಂದ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಮೂಲಕ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ ಪ್ರಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಯಂತ್ರಿಸತಕ್ಕದ್ದು .


ತಮ್ಮ ಸ್ವಂತ ಇಚ್ಛೆಯಿಂದ ಅಂತರ್ಜಾತಿ ಅಥವಾ ಅಂತರ್ ಧರ್ಮೀಯ ವಿವಾಹವಾಗುವ ವ್ಯಕ್ತಿಗಳ 'ಮರ‍್ಯಾದಾ ಹತ್ಯೆಗಳ’ ಸುದ್ದಿಯನ್ನು ನಾವು ಕೆಲವೊಮ್ಮೆ ಕೇಳುತ್ತೇವೆ. ಅಂತಹ ಹತ್ಯೆಗಳಲ್ಲಿ ಯಾವ ‘ ಮರ‍್ಯಾದೆಯೂ’ ಇಲ್ಲ, ಮತ್ತು ವಾಸ್ತವವಾಗಿ ಅವು ಕಠಿಣ ಶಿಕ್ಷೆಗೆ ಅರ್ಹವಾದ ಕ್ರೂರ, ಊಳಿಗಮಾನ್ಯ ಮನೋಭಾವದ ವ್ಯಕ್ತಿಗಳು ಮಾಡಿದ ಬರ್ಬರ ಮತ್ತು ನಾಚಿಕೆಗೇಡಿನ ಕೊಲೆಗಳಲ್ಲದೆ ಬೇರೇನೂ ಅಲ್ಲ. ಇಂಥ ಕೃತ್ಯಗಳನ್ನು ಎಸಗುವವರನ್ನು ಕಠಿಣ ಶಿಕ್ಷೆಗೊಳಪಡಿಸುವ ಮೂಲಕ ಮಾತ್ರವೇ ನಾವು ಇಂತಹ ಅನಾಗರಿಕ ಕೃತ್ಯಗಳನ್ನು ಮೆಟ್ಟಿ ನಿಲ್ಲಬಹುದು.