ವ್ಯಕ್ತಿ-ವ್ಯಕ್ತಿತ್ವ: ಡಾ.ಡಿ.ಮುರಳೀಧರ್

ವ್ಯಕ್ತಿ-ವ್ಯಕ್ತಿತ್ವ: ಡಾ.ಡಿ.ಮುರಳೀಧರ್

ವ್ಯಕ್ತಿ-ವ್ಯಕ್ತಿತ್ವ: ಡಾ.ಡಿ.ಮುರಳೀಧರ್

ವ್ಯಕ್ತಿ-ವ್ಯಕ್ತಿತ್ವ: ಡಾ.ಡಿ.ಮುರಳೀಧರ್

ತುಮಕೂರು ನಗರದ ಪಾವನ ಆಸ್ಪತ್ರೆಯ ಮುಖ್ಯಸ್ಥರಾಗಿರುವ ತಜ್ಞ ವೈದ್ಯ ಡಾ.ಡಿ.ಮುರಳೀಧರ್ ಅವರನ್ನು ಮಧುಗಿರಿ ತಾಲೂಕು ಆಡಳಿತ ಭಾರತ ರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದಂದು ಸನ್ಮಾನಿಸಿ ಗೌರವಿಸಿತು.

ಮಧುಗಿರಿ ತಾಲೂಕಿನ ಬೆಲ್ಲದಮಡುಗು ಗ್ರಾಮದ ದಿ. ಬೋರಮ್ಮ,  ಶಿಕ್ಷಕರಾಗಿದ್ದ ದಿ. ದೊಡ್ಡರಂಗಯ್ಯ ದಂಪತಿಯ ಐವರು ಅಣ್ಣಂದಿರು,ಮೂವರು ಅಕ್ಕಂದಿರ ತುಂಬು ಕುಟುಂಬದಲ್ಲಿ ಗೆ 1971ರ ಮೇ 20ರಂದು ಜನಿಸಿದ ಮುರಳೀಧರ್ ಅವರಿಗೆ ಒಬ್ಬ ತಮ್ಮನ್ನೂ ಇದ್ದಾರೆ. ಇವರ ಪತ್ನಿ ಡಾ.ಪಾವನ ಕೆಂಪಯ್ಯ, ಇವರು ಹೆರಿಗೆ ತಜ್ಞರಾಗಿದ್ದು ಪಾವನ ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಈ ವೈದ್ಯ ದಂಪತಿಗೆ ಸಾಕ್ಯ ವಂಶಿ ಹಾಗೂ  ಜೀವನ ಸಿದ್ಧಾರ್ಥ ಎಂಬ ಇಬ್ಬರು ಮಕ್ಕಳಿದ್ದಾರೆ.

ವೈದ್ಯ ಮುರಳೀಧರ್ ನಗರದ  ಸಿದ್ಧಗಂಗಾ ಪ್ರೌಢಶಾಲೆ, ಸರ್ವೋದಯ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ ಎಂಬಿಬಿಎಸ್ (1988-95) ಹಾಗೂ ಎಂ.ಡಿ(ಮೆಡಿಸಿನ್).(1995-98)ಗಳನ್ನು ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿಯಾಗಿ ಪೂರೈಸಿದರು.

ಮೊದಲಿಗೆ  ಕರ್ನಾಟಕ ಲೋಕಸೇವಾ ಆಯೋಗದಿಂದ ಸರ್ಕಾರಿ ವೈದ್ಯಾಧಿಕಾರಿಯಾಗಿ ನೇಮಕಗೊಂಡು ತುಮಕೂರು ತಾಲೂಕಿನ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ನಗರದ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರೂವರೆ ವರ್ಷ ಕಾಲ ಕಾರ್ಯ ನಿರ್ವಹಿಸಿದರು.

ನಂತರ  2000ದಲ್ಲಿ ತುಮಕೂರು ನಗರದಲ್ಲಿ ಪಾವನ ಕ್ಲಿನಿಕ್ ಸ್ಥಾಪನೆ ಹಾಗೂ  2015ರಲ್ಲಿ ನಗರದ ಶಂಕರಪುರಂನಲ್ಲಿ ನೂತನ ಕಟ್ಟಡದಲ್ಲಿ ಸುಸಜ್ಜಿತ ಕರ್ಮಯೋಗಿ ಬೆಲ್ಲದಮಡು ರಂಗಸ್ವಾಮಿ ಸ್ಮಾರಕ ಪಾವನ ಆಸ್ಪತ್ರೆ ಸ್ಥಾಪನೆ ಮಾಡಿ ನಡೆಸುತ್ತಿದ್ದಾರೆ.

ನಾಡಿನ ಶೋಷಿತ, ದನಿಯಿಲ್ಲದ ಸಮುದಾಯಗಳ ಗಟ್ಟಿ ದನಿಯಾಗಿ ಹೊರಹೊಮ್ಮಿದ, ಇಡೀ ಜೀವನವನ್ನು ದಲಿತ ಸಮಾಜದ ಏಳಿಗೆಗಾಗಿ ದುಡಿದು ಹುತಾತ್ಮರಾದ ಕರ್ಮಯೋಗಿ ಬೆಲ್ಲದಮಡು ರಂಗಸ್ವಾಮಿ ಅವರ ಕಿರಿಯ ಸೋದರನಾಗಿ ಜನಿಸಿದ ಡಾ. ಡಿ.ಮುರಳೀಧರ ಅವರು ಬಾಲ್ಯದಿಂದಲೂ ಅತ್ಯಂತ ಪ್ರತಿಭಾನ್ವಿತರಾಗಿ ಶಿಕ್ಷಣ ಪಡೆದು, ಸೋದರರ ಹಾರೈಕೆಯಂತೆಯೇ ಮಹಾ ಕಾರುಣ್ಯ ಮೂರ್ತಿ ಬುದ್ಧಗುರುವಿನ ದಾರಿಯಲ್ಲಿ ರೋಗಿಗಳ ನಿಷ್ಕಾಮ ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿದ್ದಾರೆ.

ಎರಡು ವರ್ಷಗಳಿಂದ ಇಡೀ ಮಾನವ ಕುಲವನ್ನು ಆತಂಕ ಮತ್ತು ತಲ್ಲಣಕ್ಕೀಡು ಮಾಡಿರುವ ಕೊರೊನಾ ವೈರಸ್ ಸೋಂಕು ಹಾಗೂ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆಯನ್ನು ಮುಡಿಪಾಗಿಟ್ಟ ತುಮಕೂರು ನಗರದ ಬೆರಳೆಣಿಕೆಯ ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಡಾ. ಡಿ.ಮುರಳೀಧರ್ ಒಬ್ಬರಾಗಿದ್ದಾರೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳಲ್ಲಿ ಬಡತನ ರೇಖೆಯ ಕೆಳಗಿರುವವರಿಗಾಗಿ ಸರ್ಕಾರ ಒದಗಿಸಿರುವ ಎಬಿಆರ್‌ಕೆಡಿ ಯೋಜನೆಯಡಿ ಇವರು 500ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಸಾರ್ಥಕ ಸೇವೆ ಮಾಡಿದ್ದಾರೆ. ಪಾವನ ಕ್ಲಿನಿಕ್ ಹಾಗೂ ಪಾವನ ಆಸ್ಪತ್ರೆ ಸ್ಥಾಪಿಸಿದ ನಂತರದ 20 ವರ್ಷಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿರುವ ದಾಖಲೆ ಇವರದಾಗಿದೆ.

‘ಕೆಟ್ಟಿತ್ತು ಕಲ್ಯಾಣ’, ‘ಮಡಿವಾಳ ಮಾಚಿದೇವ’ ಮೊದಲಾದ ಸಾಂಸ್ಕೃತಿಕ ಹಿನ್ನೆಲೆಯ ನಾಟಕಗಳಲ್ಲಿ ಅಭಿನಯಿಸುತ್ತ, ಹಲವಾರು ಕಲಾ ಸಂಘಗಳಿಂದ ಪ್ರಶಸ್ತಿಗಳನ್ನು, ಗುಲ್ಬರ್ಗದ ಗಣ್ಯ ಸಂಸ್ಥೆಯೊಂದರಿಂದ ಅಂಬೇಡ್ಕರ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದು

2004ರಲ್ಲಿ ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಟ್ರಸ್ಟ್ ನೊಂದಾಯಿಸಿದ ಬಳಿಕ, ಮಧುಗಿರಿ ತಾಲೂಕಿನ ಕಾಟಿಗಾನಹಳ್ಳಿಯಲ್ಲಿ ನಿರಂತರ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದಾರೆ.

ಆಧ್ಯಾತ್ಮಿಕವಾಗಿ ಸರ್ವರಿಗೂ ಒಳಿತನ್ನು ಬಯಸುವ ಗೌತಮ ಬುದ್ಧ ತೋರಿದ ಹಾದಿಯಲ್ಲಿ ನಡೆಯುತ್ತಾ ಸದಾ ಚಿಂತನಶೀಲರ ಒಡನಾಟದಲ್ಲಿ, ಕವಿ, ಸಾಹಿತಿಗಳ ಸಂಗದಲ್ಲಿ , ತುಮಕೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಪೀಠದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಸಮಾಜಮುಖಿಯಾಗಿದ್ದಾರೆ ಡಾ. ಡಿ.ಮುರಳೀಧರ್‌ರವರು. ಹೀಗಾಗಿ ಡಾ. ಡಿ.ಮುರಳೀಧರ್ ಅವರನ್ನು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ  ಸೇವೆಗಾಗಿ ಅವರ ಹುಟ್ಟೂರಿನ ಮಧುಗಿರಿ ತಾಲೂಕಿನಲ್ಲಿ ಸನ್ಮಾನಿಸಿದ್ದರಲ್ಲಿ ಸಾರ್ಥಕ್ಯವಿದೆ.

 

.