ಹೌದು ಇದು ಶೋಷಿತ ಜನರಿಂದ ಪ್ರಾಯೋಜಿತ ಮುಷ್ಕರ ! ನಾ ದಿವಾಕರ

ಹೌದು ಇದು ಶೋಷಿತ ಜನರಿಂದ ಪ್ರಾಯೋಜಿತ ಮುಷ್ಕರ ! ನಾ ದಿವಾಕರ


ಇದೇ ೨೭ಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರ ಹತ್ತು ತಿಂಗಳು ಪೂರೈಸುತ್ತದೆ. “ಪಾಕಿಸ್ತಾನ ಪ್ರೇರಿತ, ಭಯೋತ್ಪಾದಕರಿಂದ ಪ್ರಚೋದಿತ, ತುಕಡೆ ತುಕಡೆ ಗ್ಯಾಂಗ್ ಉತ್ತೇಜಿತ, ದೇಶದ್ರೋಹಿಗಳಿಂದ ಪ್ರೋತ್ಸಾಹಿತ ” ಹೀಗೆ ಪ್ರಧಾನಮಂತ್ರಿಯಾದಿಯಾಗಿ ಗ್ರಾಮ ಪಂಚಾಯತ್ ಸದಸ್ಯನವರೆಗೂ ಬಿರುದಾಂಕಿತವಾದ ಈ ಚಾರಿತ್ರಿಕ ಹೋರಾಟ ತನ್ನ ಆತ್ಮಸ್ಥೆöರ‍್ಯ ಮತ್ತು ಗುರಿಮುಟ್ಟುವ ಛಲವನ್ನು ಮತ್ತಷ್ಟು ಸ್ಪಷ್ಟವಾಗಿ ನಿರೂಪಿಸುತ್ತಲೇ ಹತ್ತು ತಿಂಗಳು ಪೂರೈಸಿದೆ.

ಹೌದು ಇದು ಶೋಷಿತ ಜನರಿಂದ ಪ್ರಾಯೋಜಿತ ಮುಷ್ಕರ !
ನಾ ದಿವಾಕರ

ಆತ್ಮಸಾಕ್ಷಿ ಸತ್ತುಹೋಗಿರುವ ಕ್ರೂರ ಆಡಳಿತ ವ್ಯವಸ್ಥೆಯ ಕರಾಳ ಕಾನೂನುಗಳು ಮತ್ತು ನೀತಿಗಳ ವಿರುದ್ಧ ಆತ್ಮನಿರ್ಭರ ಭಾರತದ ಸಾರ್ವಭೌಮ ಪ್ರಜೆಗಳು ಮತ್ತೊಮ್ಮೆ ಬೀದಿಗಿಳಿದಿದ್ದಾರೆ. ಕೋಟ್ಯಂತರ ಜನರ ಆಶೋತ್ತರಗಳನ್ನು ಬಿಂಬಿಸುವ, ಲಕ್ಷಾಂತರ ಜನರ ಹಕ್ಕೊತ್ತಾಯಗಳನ್ನು ಪ್ರತಿಪಾದಿಸುವ, ಸಮಸ್ತ ಪ್ರಜಾ ಸಮೂಹದ ಆತಂಕಗಳನ್ನು ಬಿಂಬಿಸುವ ೨೭ರ ದೇಶವ್ಯಾಪಿ ಮುಷ್ಕರವನ್ನು ಪ್ರಾಯೋಜಿತವೆಂದೋ, ಕೃಪಾಪೋಷಿತವೆಂದೋ ಅಥವಾ ವಿದೇಶಿ ಕೈವಾಡವೆಂದೋ ಬಣ್ಣಿಸುವ ಮೂಲಕ ಭಾರತದ ಆಳುವ ವರ್ಗಗಳು ಪದೇ ಪದೇ ತಮ್ಮ ಬೌದ್ಧಿಕ ದಾರಿದ್ರö್ಯವನ್ನು ಪ್ರದರ್ಶಿಸುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಸೌಮ್ಯವಾದಿ ಮುಖವಾಡ ಹೊತ್ತು ಯಡಿಯೂರಪ್ಪನವರ ಸ್ಥಾನವನ್ನು ಅಲಂಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮುಖವಾಡವನ್ನು ಸ್ವತಃ ಕಿತ್ತೊಗೆದು ಮಹದುಪಕಾರ ಮಾಡಿದ್ದಾರೆ. 

ಇದೇ ೨೭ಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರ ಹತ್ತು ತಿಂಗಳು ಪೂರೈಸುತ್ತದೆ. “ಪಾಕಿಸ್ತಾನ ಪ್ರೇರಿತ, ಭಯೋತ್ಪಾದಕರಿಂದ ಪ್ರಚೋದಿತ, ತುಕಡೆ ತುಕಡೆ ಗ್ಯಾಂಗ್ ಉತ್ತೇಜಿತ, ದೇಶದ್ರೋಹಿಗಳಿಂದ ಪ್ರೋತ್ಸಾಹಿತ ” ಹೀಗೆ ಪ್ರಧಾನಮಂತ್ರಿಯಾದಿಯಾಗಿ ಗ್ರಾಮ ಪಂಚಾಯತ್ ಸದಸ್ಯನವರೆಗೂ ಬಿರುದಾಂಕಿತವಾದ ಈ ಚಾರಿತ್ರಿಕ ಹೋರಾಟ ತನ್ನ ಆತ್ಮಸ್ಥೆöರ‍್ಯ ಮತ್ತು ಗುರಿಮುಟ್ಟುವ ಛಲವನ್ನು ಮತ್ತಷ್ಟು ಸ್ಪಷ್ಟವಾಗಿ ನಿರೂಪಿಸುತ್ತಲೇ ಹತ್ತು ತಿಂಗಳು ಪೂರೈಸಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಜನಸಮುದಾಯವಾಗಲಿ, ಯಾವುದೇ ಕ್ಷೇತ್ರದ ಸಂತ್ರಸ್ತರಾಗಲಿ ತಮ್ಮ ಹಕ್ಕೊತ್ತಾಯಗಳಿಗೆ ಪ್ರತಿಭಟಿಸಿದರೆ ಅವರ ಬೇಡಿಕೆಗಳನ್ನು ಆಲಿಸಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಮೂಲಕ ಪರಿಹಾರೋಪಾಯ ಮಾರ್ಗಗಳನ್ನು ಸೂಚಿಸುವುದು ಪ್ರಬುದ್ಧ ಆಡಳಿತದ ಲಕ್ಷಣ. ಬಹುಶಃ ಆತ್ಮನಿರ್ಭರ ಭಾರತದ ಆಳುವ ವರ್ಗಗಳು ಈ ಪ್ರಬುದ್ಧತೆಯನ್ನು ಕಳೆದುಕೊಂಡಿವೆ.

ರೈತ ಸಮುದಾಯದ ಬೇಡಿಕೆಗಳ ಔಚಿತ್ಯವನ್ನು ಪ್ರಶ್ನಿಸುವ ಮುನ್ನ, ಮುಷ್ಕರವನ್ನು ವಿರೋಧಿಸುವವರು ವಸ್ತುಸ್ಥಿತಿಯತ್ತ ಒಮ್ಮೆ ಗಮನಹರಿಸಬೇಕಲ್ಲವೇ ? ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದಂತೆ ರೈತರ ಈ ದಿಟ್ಟ ಹೋರಾಟ ಪ್ರಾಯೋಜಿತವೇ ಆಗಿದ್ದರೂ ತಪ್ಪೇನಿದೆ. ಹೌದು, ಈ ಚಾರಿತ್ರಿಕ ಮುಷ್ಕರದ ಪ್ರಾಯೋಜಕರು ಭಾರತದ ಪ್ರತಿಯೊಂದು ಮನೆಯಲ್ಲೂ ಇರುತ್ತಾರೆ, ಇರಬೇಕಲ್ಲವೇ ? ಅನ್ನ ತಿನ್ನುವ ಪ್ರತಿಯೊಬ್ಬ ಪ್ರಜೆಯೂ ರೈತರ ಆಕ್ರಂದನಕ್ಕೆ ಪ್ರಾಯೋಜಕನಾಗದೆ ಹೋದರೆ ಅವನು ಅಪ್ರಯೋಜಕನೆಂದೇ ಹೇಳಬೇಕಾಗುತ್ತದೆ. ಏಕೆಂದರೆ ರೈತರು ಆಗ್ರಹಿಸುತ್ತಿರುವುದು ಐಷಾರಾಮಿ ಬದುಕನ್ನು ಅಲ್ಲ, ತಮ್ಮ ಬದುಕು ಕಟ್ಟಿಕೊಳ್ಳಲು ಅವಲಂಬಿಸಿರುವ ಭೂಮಿ, ಬೆಳೆ ಮತ್ತು ವ್ಯವಸಾಯ ಸಂಬAಧಿತ ಮಾರುಕಟ್ಟೆಯ ರಕ್ಷಣೆಗಾಗಿ. ತಾವು ಬೆವರು ಬಿತ್ತಿ ಬೆಳೆಯುವ ಫಸಲು ಲಾಭಕೋರ ಕಾರ್ಪೋರೇಟ್ ಉದ್ಯಮಿಗಳಿಗೆ ಒಪ್ಪಿಸಲು ಈ ದೇಶದ ರೈತರು ಸಿದ್ಧರಾಗುವುದಿಲ್ಲ. ಏಕೆಂದರೆ ಶೇ ೮೬ರಷ್ಟು ರೈತರು ಐದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವವರೇ ಆಗಿದ್ದು ತಮ್ಮ ಜೀವನ ನಿರ್ವಹಣೆಗೆ ಅನ್ನ ಬೆಳೆಯುತ್ತಾರೆ. ತಾವು ಬೆಳೆದ ಫಸಲಿನಿಂದ ಹೆಚ್ಚಿನ ಲಾಭ ಗಳಿಸಿ ಮತ್ತೊಂದೆಡೆ ಬಂಡವಾಳ ಹೂಡುವಂತಹ ರೈತರ ಪ್ರಮಾಣ ಭಾರತದಲ್ಲಿ ನಗಣ್ಯ. ಭೂಮಿ ತನ್ನದಲ್ಲದಿದ್ದರೂ ಶ್ರದ್ಧೆಯಿಂದ ಬಿಸಿಲು ಮಳೆ ಲೆಕ್ಕಿಸದೆ ದುಡಿದು, ಅನ್ನ ಬೆಳೆದು ತನ್ನ ಸಾಧಾರಣ ಬದುಕಿಗೆ ಆಸರೆಯಾಗುವ ಲಕ್ಷಾಂತರ ರೈತರು ಈ ಮುಷ್ಕರದ ಒಂದು ಭಾಗವಾಗಿದ್ದಾರೆ.

ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ಟ್ರಾಕ್ಟರುಗಳ ಕೆಳಗೆ, ಹಿಂದೆ ಮತ್ತು ಮರೆಯಲ್ಲಿ ನಾಳೆಗಳನ್ನು ಎಣಿಸುವ ಕೃಷಿಕರು ಕಾಣದೆ ಹೋದರೆ ಅದು ನಮ್ಮ ದೃಷ್ಟಿದೋಷವಷ್ಟೇ. ಅವರಲ್ಲಿ ದೇಶದ್ರೋಹಿಗಳನ್ನು ಕಾಣುವುದು ದೃಷ್ಟಿ ಭ್ರಷ್ಟತೆಯಷ್ಟೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಚರ್ಚೆಯನ್ನೂ ನಡೆಸದೆ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಶಾಸನಗಳು ರೈತರ ಬಾಳಿಗೆ ಏಕೆ ಮರಣಶಾಸನಗಳಾಗುತ್ತವೆ ? ಏಕೆಂದರೆ ರೈತರು ಭೂಮಿಯ ಮೇಲೆ ತಮ್ಮ ಹಕ್ಕು ಕಳೆದುಕೊಳ್ಳುತ್ತಾರೆ. ತಾವು ಬೆಳೆದ ಫಸಲಿನ ಮೇಲೆ ಮತ್ತಾರೋ ಒಬ್ಬ ಉದ್ಯಮಿ ಅಧಿಕಾರ ಚಲಾಯಿಸುತ್ತಾನೆ. ತಮ್ಮ ಫಸಲನ್ನು ಮಾರಾಟ ಮಾಡಲು ರೈತರು ಈ ಕಾರ್ಪೊರೇಟ್ ಲೂಟಿಕೋರರನ್ನು ಅವಲಂಬಿಸಬೇಕಾಗುತ್ತದೆ. ತನ್ನ ಶ್ರಮಕ್ಕೆ ಪ್ರತಿಫಲವಾಗಿ ಸೂಕ್ತ ಬೆಲೆಯನ್ನು ಪಡೆಯಲು ಈ ಲಾಭಕೋರರ ಬಳಿ ಅಂಗಲಾಚಬೇಕಾಗುತ್ತದೆ. ತನ್ನ ಬೆವರಿನ ಫಸಲನ್ನು ದಾಸ್ತಾನು ಮಾಡಲೂ ಸಹ ಅದಾನಿ, ಅಂಬಾನಿಯAತಹ ಕಾರ್ಪೋರೇಟ್ ದಾಸ್ತಾನುಗಾರರನ್ನು ಅವಲಂಬಿಸಬೇಕಾಗುತ್ತದೆ. 

ಅನ್ನ ಬೆಳೆಯುವ ಭೂಮಿ, ಬಿತ್ತನೆಯ ಬೀಜ, ಫಸಲು, ಫಸಲಿನ ಮಾರಾಟ, ಸಾಗಾಣಿಕೆ ಮತ್ತು ದಾಸ್ತಾನು, ರಸಗೊಬ್ಬರ ಮತ್ತು ಇತರ ಉಪಕರಣಗಳು, ಬೆಳೆದ ಫಸಲಿನ ಮಾರುಕಟ್ಟೆ ಮೌಲ್ಯ, ಹಣಕಾಸು ಸೌಲಭ್ಯ ಈ ಎಲ್ಲವೂ ಸಹ ಕಾರ್ಪೊರೇಟ್ ಸಾಮ್ರಾಜ್ಯಕ್ಕೆ ಒಪ್ಪಿಸಿ, ಈ ದೇಶದ ಸ್ವಾವಲಂಬಿ ರೈತ ಮತ್ತೊಮ್ಮೆ ಊಳಿಗಮಾನ್ಯ ವ್ಯವಸ್ಥೆಯ ಗೇಣಿದಾರನಾಗುತ್ತಾನೆ. ಈ ದೇಶದ ಕೋಟ್ಯಂತರ ಎಕರೆ ಫಲವತ್ತಾದ ಕೃಷಿ ಭೂಮಿ ಕಾಪೊ

ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು ತಣಿಸುವ ಚಿನ್ನದ ಗಣಿಗಳಾಗುತ್ತವೆ. ದೇಶದ ಸಮಸ್ತ ಜನತೆಯ ನಿತ್ಯ ಬದುಕಿಗೆ ಅವಶ್ಯವಾದ ಅನ್ನ ಬೆಳೆಯಬೇಕಾದ ಕೃಷಿ ಭೂಮಿಯಲ್ಲಿ ಹೊರದೇಶದ ಮಾರುಕಟ್ಟೆಗಳಿಗೆ ಬೇಕಾದ ವಾಣಿಜ್ಯ ಬೆಳೆಗಳು ತಲೆಎತ್ತುತ್ತವೆ. ಮಾರುಕಟ್ಟೆಯ ಜಗುಲಿ ಕಟ್ಟೆಗಳಲ್ಲಿ ಹಣದ ಥೈಲಿಗಳು ರೈತ ಬೆಳೆದ ಫಸಲಿನೊಂದಿಗೆ ಅವನ ಭೂಮಿಯನ್ನೂ ಕೊಂಡುಕೊಳ್ಳಲು ಸಜ್ಜಾಗಿರುತ್ತವೆ. ಅವನ ಶ್ರಮವೂ ಅಂತಾರಾಷ್ಟಿçÃಯ ಮಾರುಕಟ್ಟೆಯ ಒಂದು ಸರಕಿನಂತೆ ಬಿಕರಿಯಾಗುತ್ತದೆ. 

ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯ ಮೂಲ ಮತ್ತು ಉತ್ಪಾದನಾ ಸಂಬAಧಗಳು ಮಾರುಕಟ್ಟೆಯ ಶಕ್ತಿಗಳಿಂದಲೇ ನಿರ್ವಹಿಸಲ್ಪಡುತ್ತವೆ. ಇದಕ್ಕೆ ಪೂರಕವಾದ ಒಂದು ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ಏಕಮಾತ್ರ ಧ್ಯೇಯದೊಂದಿಗೆ ೨೦೧೪ರಲ್ಲಿ ಭಾರತದ ಔದ್ಯಮಿಕ ವಲಯ ಒಂದು ಬಲಪಂಥೀಯ ಸರ್ಕಾರವನ್ನು ಆಯ್ಕೆ ಮಾಡಿದೆ. ಕಾರ್ಪೊರೇಟ್ ವಲಯದ ರಾಜಕೀಕರಣದೊಂದಿಗೆ ರಾಜಕಾರಣದ ಕಾರ್ಪೋರೇಟೀಕರಣ ಪ್ರಕ್ರಿಯೆ ಈ ಏಳು ವರ್ಷಗಳಲ್ಲಿ ಸಂಪೂರ್ಣವಾಗಿದೆ. ಹಾಗಾಗಿ ಇಂದು ಕೇಂದ್ರ ಸರ್ಕಾರ ಜಾರಿಗೊಳಿಸುವ ಎಲ್ಲ ಕಾಯಿದೆಗಳು, ಶಾಸನಗಳು, ಸಂಸತ್ತಿನಲ್ಲಿ ನೆಪಮಾತ್ರಕ್ಕೆ ಮಂಡಿಸುವ ಮಸೂದೆಗಳು, ಪೂರ್ವನಿರ್ಧರಿತ ಕಾನೂನುಗಳಾಗಿಯೇ ಇರುತ್ತವೆ. ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಮಾರಿಕೊಂಡಿರುವ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ಕಾನೂನುಗಳನ್ನು ಸಮ್ಮತಿಸುತ್ತಾ ತಮ್ಮ ಅಧಿಕಾರ ಪೀಠಗಳನ್ನು ಉಳಿಸಿಕೊಳ್ಳುತ್ತಾರೆ. 

ಹಾಗಾಗಿಯೇ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಒಂದು ರಾಜಕೀಯ ಜನಾಂದೋಲನ ಸಾಧ್ಯವಾಗುತ್ತಿಲ್ಲ. ಎಡಪಕ್ಷಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷದ ಸಾಂಕೇತಿಕ ವಿರೋಧವನ್ನು ಹೊರತುಪಡಿಸಿದರೆ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರಾಜಕೀಯ ಸಂಘರ್ಷ ಹತ್ತು ತಿಂಗಳಾದರೂ ಕನಸಾಗಿಯೇ ಉಳಿದಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಅಧಿಕಾರ ರಾಜಕಾರಣದ ಪೊರೆ ಕಳಚಿಕೊಂಡು ಈ ಸಂಘರ್ಷದಲ್ಲಿ ಪಾಲ್ಗೊಳ್ಳಬಹುದಿತ್ತು. ಜೆಡಿಎಸ್, ಬಿಎಸ್‌ಪಿ, ಸಮಾಜವಾದಿ ಪಕ್ಷ, ಆರ್‌ಜೆಡಿ, ಶಿವಸೇನೆ, ಎಲ್‌ಜೆಡಿ ಮುಂತಾದ ಮಣ್ಣಿನ ಮಕ್ಕಳ ಪಕ್ಷಗಳು ತಮ್ಮ ಚುನಾವಣಾ ರಾಜಕಾರಣದಿಂದಾಚೆಗೆ ಒಂದು ಜನಪರ ದನಿ ಇದೆ ಎಂದು ಗುರುತಿಸಬೇಕಿತ್ತು. ಆದರೆ ಇದು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಭೂ ಸ್ವಾಧೀನ ಮಸೂದೆಯ ತಿದ್ದುಪಡಿಗೆ ಅನುಮೋದನೆ ದೊರೆಯಲು ನೆರವಾಗಿದ್ದೇ ತೆನೆಹೊತ್ತ ಮಹಿಳೆಯನ್ನು ಪ್ರತಿನಿಧಿಸುವ ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್. ಏಕೆ ಹೀಗೆ ಎಂದು ಯೋಚಿಸಿದರೆ, ನಮ್ಮ ದೃಷ್ಟಿ ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಮಾರುಕಟ್ಟೆ ಆರ್ಥಿಕತೆಯತ್ತ ಹೊರಳುತ್ತದೆ. ಈ ಮಾರುಕಟ್ಟೆ ಆರ್ಥಿಕತೆಯೇ ಇಂದು ಭಾರತದ ಆಡಳಿತ ನೀತಿಗಳನ್ನು ನಿಯಂತ್ರಿಸುತ್ತಿದೆ. 
ಆದರೆ ಅಧಿಕಾರ ರಾಜಕಾರಣದಿಂದಾಚೆಗೂ, ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ಚಲಾಯಿಸುವ ಜನತೆಯ ನಡುವೆಯೂ ಒಂದು ಪ್ರಬಲ ದನಿ ಅಡಗಿದೆ. ಈ ವರ್ಗ ಇಂದು ಜಾಗೃತವಾಗಿದೆ. ಏಕೆಂದರೆ ಇಂದು ಅಪಾಯದಲ್ಲಿರುವುದು ಕೇವಲ ರೈತರ ಬದುಕು ಅಲ್ಲ. ಕೃಷಿ ವ್ಯವಸ್ಥೆ ಈ ದೇಶದ ಮುಖ್ಯ ನಾಡಿ, ನಗರ ಪ್ರದೇಶಗಳಲ್ಲಿರುವ ಜನತೆಯ ಪೈಕಿ ಶೇ ೬೦ಕ್ಕೂ ಹೆಚ್ಚು ಕೃಷಿ ಅವಲಂಬಿತರು. ಗ್ರಾಮೀಣ ಆರ್ಥಿಕತೆಯನ್ನು ಅವಲಂಬಿಸಿ, ನಗರಗಳಲ್ಲಿ ಬದುಕು ಕಟ್ಟಿಕೊಳ್ಳುವವರು. ಕಳೆದ ಮೂರು ದಶಕಗಳ ನವ ಉದಾರವಾದದ ಆಳ್ವಿಕೆಯಲ್ಲಿ ಗ್ರಾಮೀಣ ಆರ್ಥಿಕತೆಯ ಬಿಕ್ಕಟ್ಟು ಸೃಷ್ಟಿಸಿರುವುದು ಕೋಟ್ಯಂತರ ವಲಸೆ ಕಾರ್ಮಿಕರನ್ನು ಮತ್ತು ನಗರವಾಸಿ ಬಡವರನ್ನು. ಈ ಬಡ ಜನತೆ ಈಗ ಮತ್ತೊಮ್ಮೆ ಗ್ರಾಮಗಳತ್ತ ಹೊರಟಿದ್ದಾರೆ. ಆದರೆ ಈ ಗ್ರಾಮಗಳಲ್ಲಿನ ಕೃಷಿ ಭೂಮಿ ಮತ್ತು ಬೇಸಾಯದ ಪರಿಕರಗಳು ನಗರ ಕೇಂದ್ರಿತ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದಕ್ಕೆ ಕಾರಣ ಇದು.

ನಗರಗಳಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಜನತೆಯ ಪಾಲಿಗೆ ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳು ಮರಣಶಾಸನಗಳಾಗಿವೆ. ಹೆಚ್ಚು ದುಡಿಮೆ-ಕಡಿಮೆ ಕೂಲಿಯ ಸೂತ್ರದಲ್ಲಿ ಔದ್ಯೋಗಿಕ ಕ್ಷೇತ್ರ ತನ್ನ ಮಾರುಕಟ್ಟೆ ಕಂಡುಕೊಳ್ಳಲಿದೆ. ಬ್ಯಾಂಕಿAಗ್, ವಿಮೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನೂ, ಸಂಸ್ಥೆಗಳನ್ನೂ ಖಾಸಗಿ ಕಾರ್ಪೊರೇಟ್ ಉದ್ಯಮಿಗಳಿಗೆ ಒಪ್ಪಿಸುತ್ತಿರುವ ಬಂಡವಾಳಸ್ನೇಹಿ ಕೇಂದ್ರ ಸರ್ಕಾರ, ವ್ಯಾಪಾರ-ವಹಿವಾಟು ಸರ್ಕಾರದ ಕೆಲಸ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಂದರೆ ಉತ್ಪಾದನೆಯ ಮೂಲಗಳ ಮೇಲಿನ ಸರ್ಕಾರದ ಸ್ವಾಮ್ಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ನಿಟ್ಟಿನಲ್ಲಿ ರೈಲ್ವೆ, ರಸ್ತೆ ಸಾರಿಗೆ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ಬಂದರು, ಕಡಲ ಸಾರಿಗೆ, ವಿಮಾನಯಾನ ಮತ್ತು  ತಯಾರಿಕಾ ವಲಯದ ಕೈಗಾರಿಕೆಗಳನ್ನು, ಎಲ್ಲ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಗುತ್ತದೆ. ಖಾಸಗೀಕರಣಕ್ಕೊಳಗಾದ ಉದ್ಯಮ ಮತ್ತು ಸಂಸ್ಥೆಗಳಲ್ಲಿನ ಕಾರ್ಮಿಕರು ನೂತನ ಕರಾಳ ಕಾರ್ಮಿಕ ಸಂಹಿತೆಗಳಿAದ ನಿಯಂತ್ರಿಸಲ್ಪಡುತ್ತಾರೆ. 

ದುಡಿಮೆಯ ಅವಧಿಯನ್ನು ೮ ರಿಂದ ೧೨ ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಇದನ್ನು ಸರಿದೂಗಿಸಲು ವಾರದ ಎರಡು ದಿನ ರಜೆ ಎಂದು ಘೋಷಿಸಲಾಗಿದ್ದರೂ, ಗಾರ್ಮೆಂಟ್ ಕಾರ್ಖಾನೆಗಳಲ್ಲಿ, ಬಿಡಿ ಉಪಕರಣಗಳ ತಯಾರಿಕಾ ಘಟಕಗಳಲ್ಲಿ ಮತ್ತು ನಿತ್ಯಾವಶ್ಯ ಪದಾರ್ಥಗಳ ಉತ್ಪಾದನೆಯಲ್ಲಿ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯುವ ಖಚಿತತೆ ಇರುವುದಿಲ್ಲ. ಏಕೆಂದರೆ ಮಾರುಕಟ್ಟೆಯ ಬೇಡಿಕೆಗೆ ಸ್ಪಂದಿಸಲು ಹೆಚ್ಚಿನ ಶ್ರಮವನ್ನು ಖರೀದಿಸುವುದು ಮಾಲೀಕರಿಗೆ ಅನಿವಾರ್ಯವಾಗುತ್ತದೆ. ಈ ಶ್ರಮವನ್ನು ಕೊಂಡುಕೊಳ್ಳಲು ಶ್ರಮಿಕರಿಗೆ ನೀಡುವ ಕೂಲಿಯ ಪ್ರಮಾಣವನ್ನು ಮಾಲೀಕನೇ ನಿರ್ಧರಿಸುತ್ತಾನೆ, ಹೆಚ್ಚಿನ ಕೂಲಿಗಾಗಿ ಆಗ್ರಹಿಸಲು ಅಗತ್ಯವಾದ ಸಂಘಟನೆಯ ಹಕ್ಕುಗಳನ್ನು ನೂತನ ಕಾನೂನುಗಳು ಕಸಿದುಕೊಂಡಿವೆ. ೧೮-೧೯ನೆಯ ಶತಮಾನದ ಔದ್ಯೋಗಿಕ ಕ್ರಾಂತಿಯ ಸಂದರ್ಭದಲ್ಲಿ ಬಂಡವಾಳಶಾಹಿ ರಾಷ್ಟçಗಳಲ್ಲಿದ್ದ ಮುಷ್ಕರ ನಿಷೇಧಿಸುವ ನೀತಿಯನ್ನು #ಆತ್ಮನಿರ್ಭರ ಭಾರತದಲ್ಲೂ ಜಾರಿಗೊಳಿಸಲಾಗುತ್ತಿದೆ. ಶ್ರಮಜೀವಿಗಳ ಐಕ್ಯತೆಗೆ ಅತ್ಯಗತ್ಯವಾದ ಕಾರ್ಮಿಕರ ಸಂಘಟಿತರಾಗುವ ಹಕ್ಕುಗಳಿಗೂ ಕಡಿವಾಣ ಹಾಕಲಾಗುತ್ತಿದೆ. 

ಕನಿಷ್ಟ ನೂರು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲು, ಕಾರ್ಮಿಕರನ್ನು ವಜಾ ಮಾಡಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಈ ಸಂಖ್ಯೆಯನ್ನು ೩೦೦ ಮಾಡಲಾಗಿದೆ. ಅಂದರೆ ಬಹುತೇಕ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು (ಎಂಎಸ್‌ಎAಇ ವಲಯದ ಉದ್ದಿಮೆಗಳು) ಇನ್ನು ಕಾರ್ಮಿಕರ ಪ್ರತಿರೋಧವನ್ನು ಲೆಕ್ಕಿಸದೆ ಬಾಗಿಲು ಮುಚ್ಚಬಹುದು. ಇದನ್ನೆ ಮುಖ್ಯವಾಗಿ ಅಡ್ಡಿಯಾಗಿದ್ದುದು ಕಾರ್ಮಿಕ ಸಂಘಟನೆಗಳು. ಈಗ ಯಾವುದೇ ಒಂದು ಉದ್ದಿಮೆಯಲ್ಲಿ ಶೇ ೫೧ರಷ್ಟು ಬೆಂಬಲ ಹೊಂದಿರುವ ಕಾರ್ಮಿಕ ಸಂಘಟನೆಯಷ್ಟೇ ಮಾನ್ಯತೆ ಪಡೆಯಲಿವೆ. ಈ ಸಂಘಟನೆಯೊAದಿಗೆ ಮಾತ್ರ ಮಾಲೀಕ ವರ್ಗ ಮಾತುಕತೆ ನಡೆಸುತ್ತವೆ. ಅಂದರೆ ಒಂದೇ ಉದ್ದಿಮೆಯಲ್ಲಿ ಬಹುಸಂಖ್ಯೆಯ ಕಾರ್ಮಿಕ ಸಂಘಟನೆಗಳಿಗೆ ಆಸ್ಪದ ಇರುವುದಿಲ್ಲ. ಉದ್ಯೊಗ ಭದ್ರತೆ ಮತ್ತು ಸುಸ್ತಿರ ಜೀವನ ನಿರ್ವಹಣೆಗಾಗಿ ಬಂಡವಳಿಗ ಉದ್ಯಮಿಯ ಷರತ್ತುಗಳಿಗೆಲ್ಲಾ ತಲೆದೂಗಿಸುವ ಕಾರ್ಮಿಕ ಸಂಘಟನೆಗಳನ್ನು ಮಾಲೀಕ ವರ್ಗ ಹೆಚ್ಚು ಪ್ರೋತ್ಸಾಹಿಸುತ್ತವೆ. ಇದರಿಂದ ಅನ್ಯಾಯಕ್ಕೊಳಗಾದ ಕಾರ್ಮಿಕ ವಲಯ ತನ್ನ ಹಕ್ಕೊತ್ತಾಯದ ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನೂ ಕಳೆದುಕೊಳ್ಳುತ್ತದೆ. ಔದ್ಯೋಗಿಕ ಕ್ರಾಂತಿಯ ಸಂದರ್ಭದ ಆತಂಕಗಳು ಮತ್ತೊಮ್ಮೆ ತಲೆದೋರುವ ಸ್ಪಷ್ಟ ಸೂಚನೆಗಳು ಕಾಣುತ್ತಿವೆ. 

ಆಳುವ ವರ್ಗಗಳು ಮತ್ತು ಖಾಸಗಿ ಕಾರ್ಪೊರೇಟ್ ವಲಯದ ಸಹಯೋಗ ಕಾರ್ಮಿಕರ ಮೂಲಭೂತ ಹಕ್ಕುಗಳನ್ನೂ ಕಸಿದುಕೊಳ್ಳಲು ಅವಶ್ಯವಾದ ಭೂಮಿಕೆಯನ್ನು ನೂತನ ಕಾರ್ಮಿಕ ಸಂಹಿತೆಗಳು ನಿರ್ಮಿಸುತ್ತವೆ. ಕೃಷಿ ಕ್ಷೇತ್ರದಿಂದ ಉಚ್ಚಾಟಿಸಲ್ಪಟ್ಟ ಸಣ್ಣ, ಅತಿ ಸಣ್ಣ ರೈತರು , ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡಜನತೆ ಈ ಖಾಸಗಿ ವಲಯದ ಬಂಡವಾಳಶಾಹಿ ಸಾಮ್ರಾಜ್ಯದಲ್ಲಿ ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ. ಈ ಶ್ರಮಜೀವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಹಲವು ಸ್ವಾಗತಾರ್ಹ ನಿಯಮಗಳನ್ನು ನೂತನ ಸಂಹಿತೆಗಳಲ್ಲಿ ಕಾಣಬಹುದಾದರೂ, ಇದು ಖಾಯಂ ನೌಕರರಿಗೆ ಹೆಚ್ಚು ಅನ್ವಯಿಸುತ್ತದೆ ಎನ್ನುವುದನ್ನು ಗಮನಿಸಬೇಕಿದೆ. ಕಾರ್ಮಿಕ ಸಂಘಟನೆ ಮತ್ತು ಮುಷ್ಕರದ ಹಕ್ಕುಗಳನ್ನು ನಿರಾಕರಿಸುವ ದೃಷ್ಟಿಯಿಂದಲೇ ಹೆಚ್ಚಿನ ಪ್ರಮಾಣದ ಉದ್ದಿಮೆಗಳು ತಮ್ಮ ಖಾಯಂ ನೌಕರರ ಸಂಖ್ಯೆಯನ್ನು ನಿಗದಿತ ೩೦೦ ಕ್ಕಿಂತಲೂ ಕಡಿಮೆ ಕಾಪಾಡಿಕೊಳ್ಳುತ್ತವೆ. ಇದರ ಪರಿಣಾಮ ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಇನ್ನೂ ಉಲ್ಬಣಿಸಲಿದೆ.

ಅಸಂಘಟಿತ ಕಾರ್ಮಿಕರ ಹೋರಾಟಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ, ಈ ಅತಂಕಗಳು ಇನ್ನೂ ಉಲ್ಬಣಿಸುವ ಸಾಧ್ಯತೆಗಳೂ ನಿಚ್ಚಳವಾಗುತ್ತಿವೆ. ಅಸಂಘಟಿತ ಕಾರ್ಮಿಕರಿಗೆ ನೇರ ಪಾವತಿ, ಭವಿಷ್ಯನಿಧಿ, ವಿಮಾ ಸೌಲಭ್ಯ ಮುಂತಾದ ಸವಲತ್ತುಗಳನ್ನು ಒದಗಿಸಿದರೂ, ಉದ್ಯೋಗ ಭದ್ರತೆಯೇ ಇಲ್ಲದಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಉದ್ಯೋಗ ಭದ್ರತೆ ಒದಗಿಸುವ ಅಥವಾ ನಿರುದ್ಯೋಗ ಭತ್ಯೆ ನೀಡುವ ಯಾವುದೇ ನೀತಿಗಳನ್ನು ಈ ಕಾರ್ಪೋರೇಟ್ ಸರ್ಕಾರಗಳಿಂದ ನಿರೀಕ್ಷಿಸಲೂ ಆಗುವುದಿಲ್ಲ. ನಗರೀಕರಣ ಪ್ರಕ್ರಿಯೆ ಚುರುಕಾದಂತೆಯೇ, ರೈಲ್ವೆ ಮುಂತಾದ ಬೃಹತ್ ಔದ್ಯೋಗಿಕ ವಲಯಗಳು ಖಾಸಗೀಕರಣವಾಗುವುದರಿಂದ ನಗರ ಕೇಂದ್ರಿತ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗುತ್ತದೆ, ನಗರಕೆಂದ್ರಿತ ನಾಗರಿಕ ಸಮಸ್ಯೆಗಳೂ ಉಲ್ಬಣಿಸುತ್ತವೆ. ಈ ಸಂದರ್ಭದಲ್ಲಿ ಉದ್ಭವಿಸಬಹುದಾದ ಅವಕಾಶವಂಚಿತರ ಆಕ್ರೋಶ ಮತ್ತು ಹೋರಾಟಗಳನ್ನು ನಿಯಂತ್ರಿಸುವ ಸಲುವಾಗಿಯೇ ಕಠಿಣ ಶಾಸನಗಳನ್ನು ಪ್ರಭುತ್ವ ಜಾರಿಯಲ್ಲಿರಿಸಿದೆ. ಅಸ್ಸಾಂನಲ್ಲಿ ಇತ್ತೀಚೆಗೆ ಮುಸ್ಲಿಂ ಕುಟುಂಬವೊAದನ್ನು ಉಚ್ಚಾಟಿಸಲು ಪೊಲೀಸರು ನಡೆಸಿರುವ ಹತ್ಯಾಕಾಂಡ ಒಂದು ಪ್ರಾತ್ಯಕ್ಷಿಕೆ ಎಂದೇ ಭಾವಿಸುವುದು ಸೂಕ್ತ. 

ಈ ಕರಾಳ ಪರಿಸ್ಥಿತಿಯನ್ನು ಎದುರಿಸಲು ಸಶಕ್ತವಾದ ಜನಾಭಿಪ್ರಾಯವನ್ನು ರೂಪಿಸಲು ಅತ್ಯವಶ್ಯವಾದ ಶೈಕ್ಷಣಿಕ ವಲಯವನ್ನೂ ಸಹ ಕಾರ್ಪೊರೇಟ್ ಉದ್ಯಮಿಗಳಿಗೆ ಪರಭಾರೆ ಮಾಡುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತದ ಬಂಡವಾಳಶಾಹಿ ವ್ಯವಸ್ಥೆ ಹೊಸ ಶಿಕ್ಷಣ ನೀತಿ- ೨೦೨೦ ಜಾರಿಗೊಳಿಸಿದೆ. ಕೌಶಲಾಭಿವೃದ್ಧಿಯ ಹೆಸರಿನಲ್ಲಿ ನವ ಉದಾರವಾದದ ಮಾರುಕಟ್ಟೆಗೆ ಅಗತ್ಯವಾದ ಸರಕುಗಳನ್ನು ಉತ್ಪಾದಿಸಲು ಈಗ ಶಿಕ್ಷಣ ಸಂಸ್ಥೆಗಳು ಸಜ್ಜಾಗಲಿವೆ. ತಂಡೋಪತAಡವಾಗಿ ಶಾಲಾ ಕಾಲೇಜುಗಳಿಂದ ಹೊರಬರುವ ಹಸಿದ ಹೊಟ್ಟೆಗಳು ತಮ್ಮ ಜೀವನ ನಿರ್ವಹಣೆಗಾಗಿ ತಮ್ಮದೇ ಕೌಶಲ್ಯವನ್ನು ಅವಲಂಬಿಸಬೇಕಾಗುತ್ತದೆ. ಮಾರುಕಟ್ಟೆಗೆ ಪೂರಕವಾಗದ ಕೌಶಲಗಳು ಕಸದಬುಟ್ಟಿ ಸೇರುತ್ತವೆ. ಕಸುಬು ಆಧಾರಿತ ವರ್ಣ ವ್ಯವಸ್ಥೆಗೆ ಮರಳಬೇಕಾದ ಪರಿಸ್ಥಿತಿಯನ್ನು ಈ ಹೊಸ ಶಿಕ್ಷಣ ನೀತಿ ನಿರ್ಮಿಸುತ್ತದೆ. ಶ್ರೀಸಾಮಾನ್ಯರಿಗೆ ಉನ್ನತ ಶಿಕ್ಷಣ ಕೈಗೆಟುಕದ ಹುಳಿದ್ರಾಕ್ಷಿಯಂತಾಗುತ್ತದೆ. ಕೌಶಲ್ಯಾಭಿವೃದ್ಧಿಯ ಹೆಸರಿನಲ್ಲಿ ಮಾರುಕಟ್ಟೆಗೆ ಅವಶ್ಯವಾದ ಉತ್ಪಾದನಾ ಸಾಧನಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಶೈಕ್ಷಣಿಕ ಸಂಸ್ಥೆಗಳು ತಮ್ಮ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲಿವೆ. 

೨೭ರ ದೇಶವ್ಯಾಪಿ ಮುಷ್ಕರ ರೈತರ ಹೋರಾಟಕ್ಕೆ ಸ್ಪಂದಿಸುವ ಶ್ರಮಜೀವಿಗಳ ಪ್ರತಿರೋಧದ ಒಕ್ಕೊರಲ ದನಿ. ವಿದ್ಯಾರ್ಥಿಗಳು, ಯುವ ಜನತೆ, ಮಹಿಳೆಯರು, ಶೋಷಿತರು, ಅಸ್ಪೃಶ್ಯರು, ನಿರುದ್ಯೋಗಿಗಳು, ನೌಕರರು, ಕಾರ್ಮಿಕರು ಮತ್ತು ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯಲ್ಲಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಎಲ್ಲ ಜನಸಮುದಾಯಗಳು ಈ ಮುಷ್ಕರದ ಭಾಗವಾಗಿದ್ದಾರೆ. ಆದರೆ ನವ ಉದಾರವಾದದ ಭ್ರಮೆ,  ಹಿಂದುತ್ವ ಮತಾಂಧತೆಯ ಉನ್ಮಾದ , ಕೋಮುವಾದದ ಕರಾಳ ಛಾಯೆ ಮತ್ತು ಇವೆಲ್ಲವನ್ನೂ ಮರೆಮಾಚುವ ಒಂದು ರಾಜಕೀಯ ಮೌಢ್ಯ ಈ ದೇಶದ ಬಹುಪಾಲು ಜನತೆಯನ್ನು ಆವರಿಸಿದೆ. ತಾವು ನಿಂತ ನೆಲವೇ ಕುಸಿಯುತ್ತಿದ್ದರೂ ಪ್ರಜ್ಞಾಹೀನರಂತೆ ಆಳುವವರ್ಗಗಳ ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತಿರುವ ಬೃಹತ್ ಸಂಖ್ಯೆಯ ಜನರು ಈ ರಾಜಕೀಯ ಮೌಢ್ಯಕ್ಕೆ ಬಲಿಯಾಗಿದ್ದಾರೆ. 

೨೭ರ ದೇಶವ್ಯಾಪಿ ಮುಷ್ಕರ ಆಳುವ ವರ್ಗಗಳಿಗೆ ಎಚ್ಚರಿಕೆಯ ಗಂಟೆಯಾದರೆ ರಾಜಕೀಯ ಮೌಢ್ಯಕ್ಕೆ ಬಲಿಯಾಗಿರುವ ಜನತೆಗೆ ಜಾಗೃತಿಯ ಗಂಟೆಯಾಗಿ ಪರಿಣಮಿಸಲಿದೆ. ಈ ಮುಷ್ಕರದ ಯಶಸ್ಸು ದೇಶದ ದುಡಿಯುವ ವರ್ಗಗಳ ಮತ್ತು ಶೋಷಿತ ವರ್ಗಗಳ ಮುನ್ನಡೆಗೆ ನಾಂದಿ ಹಾಡಲಿದೆ. ಈ ಆಶಯದೊಂದಿಗೇ ಮುಷ್ಕರದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯ ಆದ್ಯತೆಯಾಗಲಿ.

-೦-೦-೦-೦-