2025: ಕಳೆದದ್ದು 365 ದಿನಗಳಲ್ಲ ಮೌಲ್ಯಾದರ್ಶಗಳು 2026ರ ಹೊಸ್ತಿಲಲ್ಲಿ ನಿಂತಾಗ ಕಣ್ಣಿಗೆ ರಾಚುವುದು ಸಿಕ್ಕುಗಳು ಮತ್ತು ಅಪಾಯಗಳಷ್ಟೇ !
ಈ ವಕ್ರಮಾರ್ಗಗಳನ್ನು ಬದಿಗಿಟ್ಟು 2026ರ ಭಾರತವನ್ನು ಮಾನವೀಯ ಮೌಲ್ಯಗಳ ಸುಂದರ ಉದ್ಯಾನವನ್ನಾಗಿ ಮಾಡಬೇಕಾದರೆ ನಾಗರಿಕರು, ರಾಜಕಾರಣಿಗಳು, ವಿದ್ವಾಂಸರು, ಕಲಾವಿದರು ಎಲ್ಲರೂ ಸಹ ಈ ಕೆಲವು ಸಂಕಲ್ಪಗಳನ್ನು ಮಾಡಬೇಕಿದೆ. ಲಿಂಗ ಭೇದ-ಜಾತಿ ಭೇದ-ಮತ ಭೇದ ಮಾಡುವುದಿಲ್ಲ. ಯಾವುದೇ ರೀತಿಯ ದೌರ್ಜನ್ಯ, ತಾರತಮ್ಯ, ದಬ್ಬಾಳಿಕೆ ಮಾಡುವುದಿಲ್ಲ. ಮಹಿಳೆಯನ್ನು ಅಧೀನಳನ್ನಾಗಿ ನೋಡುವುದಿಲ್ಲ. ಜಾತಿ-ಧರ್ಮದ ಶ್ರೇಷ್ಠತೆಯ ಕಲ್ಪನೆಯನ್ನು ವರ್ಜಿಸುತ್ತೇವೆ ಅಧಿಕಾರ-ಆಡಳಿತ-ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಹಿಂಸೆ-ಕ್ರೌರ್ಯದ ಮನೋಭಾವವನ್ನು ತೊಡೆದುಹಾಕುತ್ತೇವೆ ಮನುಷ್ಯರನ್ನು ಮನುಷ್ಯರಾಗಿ ಮಾತ್ರ ನೋಡುವ ಕಣ್ಣೋಟ ಬೆಳೆಸಿಕೊಳ್ಳುತ್ತೇವೆ.
ವರ್ತಮಾನ

ನಾ ದಿವಾಕರ
ʼ ಭಾರತ ವಿಕಸಿತ ದೇಶವಾಗುವ ಹಾದಿಯಲ್ಲಿ ಸಾಗುತ್ತಿದೆ ʼ ಎಂದರೆ ಸರ್ಕಾರದ ಪ್ರಚಾರವಾಗಿ ಕಾಣುತ್ತದೆ, ʼ ಭಾರತೀಯ ಸಮಾಜ ಅವನತಿಯತ್ತ ಸಾಗುತ್ತಿದೆ ʼ ಎಂದರೆ ಬಹುಶಃ ಬೌದ್ಧಿಕ ದಾಳಿಗೆ ಸಿದ್ಧವಾಗಿರಬೇಕಾಗುತ್ತದೆ. ʼದುಡಿಯುವ ವರ್ಗಗಳ ದೃಷ್ಟಿಯಲ್ಲಿ ಮುಂದಿನ ದಿನಗಳು ಅಪಾಯಕಾರಿಯಾಗಿ ಕಾಣುತ್ತವೆ ʼ ಎಂದರೆ ಸಿನಿಕತನ ಎಂದು ಹೇಳುವವರೂ ಇರಬಹುದು. ಈ ವಿಭಿನ್ನ ಅಭಿವ್ಯಕ್ತಿಗಳ ಮತ್ತು ಆಲೋಚನೆಗಳ ನಡುವೆ ಭಾರತ ಮತ್ತೊಂದು ವರ್ಷವನ್ನು ದಾಟಿ, 2026ಕ್ಕೆ ಕಾಲಿರಿಸುತ್ತಿದೆ. ಇದು ನಮಗೆ ಹೊಸ ವರ್ಷ ಅಲ್ಲ ಎಂದು ಸಂಪ್ರದಾಯವಾದಿಗಳು ವಾದಿಸಿದರೂ, ನಮ್ಮ ಆದಾಯ ಖರ್ಚು ವೆಚ್ಚ ವರಮಾನ ಎಲ್ಲಕ್ಕೂ ಇದೇ ಕ್ಯಾಲೆಂಡರ್ ಬಳಸುವುದರಿಂದ ಇದನ್ನು ಸಾರ್ವತ್ರಿಕ ಎನ್ನಲು ಅಡ್ಡಿಯಿಲ್ಲ.
ಸಾಮಾನ್ಯವಾಗಿ ಹೊಸ ವರ್ಷ ಎಂದ ಕೂಡಲೇ ಪ್ರತಿಯೊಬ್ಬರೂ ಸಹ ಮುಂದಿನ 365 ದಿನಗಳಲ್ಲಿ ತಮ್ಮ ನಡಿಗೆಯ ಬಗ್ಗೆ ಸಂಕಲ್ಪ ಮಾಡುವುದು ಒಂದು ಮಾದರಿ. ʼ ನುಡಿದಂತೆ ನಡೆ ʼ ಎಂಬ ಔದಾತ್ಯ ಮತ್ತು ಆದರ್ಶವನ್ನು ಕ್ರಮೇಣವಾಗಿ ಗ್ರಾಂಥಿಕಗೊಳಿಸುತ್ತಿರುವ ನವ ಭಾರತದಲ್ಲಿ ಈ ಸಂಕಲ್ಪಗಳು ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲು ಸಾಧ್ಯ ಎಂಬ ಜಿಜ್ಞಾಸೆ ಸಹಜ. ಏನೇ ಆದರೂ ಪ್ರಮಾಣೀಕರಿಸುವುದರಲ್ಲಿ, ಸಂಕಲ್ಪ ಮಾಡುವುದರಲ್ಲಿ ನಿಷ್ಣಾತರಾಗಿರುವ ಭಾರತೀಯ ಸಮಾಜದ ಎಲ್ಲ ವರ್ಗಗಳು 2026ಕ್ಕೆ ಸಂಬಂಧಿಸಿದಂತೆ ಇದು ನಿಷ್ಠೆಯಿಂದ ಈಡೇರಿಸುವ ನಿಟ್ಟಿನಲ್ಲಿ ಯೋಚಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಹೊಸ ವರ್ಷದ ಆಚರಣೆ ಅಥವಾ ಸಂಭ್ರಮ ಎಂದರೆ ಕೇವಲ ʼ ಹ್ಯಾಪಿ ನ್ಯೂ ಇಯರ್ – ಹೊಸ ವರ್ಷಕ್ಕೆ ಸ್ವಾಗತ ʼ ಎಂಬ ಘೋಷಣೆ ಮಾತ್ರವಲ್ಲ.
ಇದೊಂದು ಆತ್ಮವಿಮರ್ಶೆಯ ಗಳಿಗೆ. ಕಳೆದ ಒಂದು ವರ್ಷದಲ್ಲಿ ದೇಶ ಸಾಗಿಬಂದಿರುವ ಹಾದಿ, ನೀಗಿಸುತ್ತಾ ಬಂದಿರುವ ಸವಾಲುಗಳು, ನಿವಾರಿಸಲಾಗದ ಸಂಕಟಗಳು ಹಾಗೂ ಸರ್ಕಾರಗಳು ಜಾರಿ ಮಾಡಿರುವ ಜನವಿರೋಧಿ ಆಡಳಿತ ನೀತಿಗಳು, ಅವುಗಳಿಂದ ಭವಿಷ್ಯದ ತಲೆಮಾರಿಗೆ ಎದುರಾಗಲಿರುವ ಅಪಾಯಗಳು ಇವೆಲ್ಲವನ್ನೂ ಕುರಿತು ಗಂಭೀರ ಆಲೋಚನೆ ಮಾಡುವ ಗಳಿಗೆ. ಮತ್ತೊಂದು ಮಗ್ಗುಲಲ್ಲಿ ದೇಶದ ಅಪ್ರತಿಮ ಸಾಧನೆಗಳನ್ನು ನೆನೆಯುವುದೂ ಅಗತ್ಯ. ವಿಶೇ಼ಷವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಸಾಧನೆಯನ್ನು ಹೆಮ್ಮೆಯಿಂದ ನೆನೆಯಲೇಬೇಕು. ಭೌಗೋಳಿಕ ರಕ್ಷಣೆಯ ಹಾದಿಯಲ್ಲಿ ಭಾರತ ಎದುರಿಸಿದ ಆತಂಕಗಳು ಮತ್ತು ನಿವಾರಿಸಿದ ಬಗೆ ನಮ್ಮ ಆಲೋಚನೆಗಳ ಒಂದು ಭಾಗವಾಗಬೇಕು.
ನೆಲದ ಕಟು ವಾಸ್ತವಗಳ ನಡುವೆ
ಈ ಆಡಳಿತಾತ್ಮಕ ಅಂಶಗಳಿಂದ ಹೊರಬಂದು ಭಾರತದ ಸಾಮಾಜಿಕ ವಿದ್ಯಮಾನಗಳು ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಪರಾಮರ್ಶೆ ಮಾಡಿದಾಗ ಹೊಸ ವರ್ಷದ ದಿನಗಳಲ್ಲಿ ನಮ್ಮ ಆತಂಕಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳೇ ಕಾಣುತ್ತಿರುವುದು ನಮ್ಮನ್ನು ಚಿಂತೆಗೆ ದೂಡುವ ವಿಷಯವಾಗಿದೆ. ವರ್ಷಾಂತ್ಯದಲ್ಲಿ, ಡಿಸೆಂಬರ್ ತಿಂಗಳಲ್ಲಿ ದೇಶದ ವಿವಿಧೆಡೆ ನಡೆದಿರುವ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಿದರೆ, ತಳಮಟ್ಟದ ಜನತೆಯಲ್ಲಿ ವಿಶ್ವಾಸ, ಭರವಸೆ ಹೆಚ್ಚಿಸುವ ಒಂದೇ ಒಂದು ಘಟನೆಯನ್ನೂ ಗುರುತಿಸಲಾಗುವುದಿಲ್ಲ. ಸಾಮಾನ್ಯವಾಗಿ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಜನಸಾಮಾನ್ಯರ ಸಬಲೀಕರಣದ ಹಾದಿಯಲ್ಲಿ, ವಿಶಾಲ ಸಮಾಜವೂ ಸಹ ಪ್ರಗತಿಶೀಲ ಲಕ್ಷಣಗಳೊಂದಿಗೆ ಮುಂದೆ ಸಾಗುವುದು ಅಪೇಕ್ಷಣೀಯ. ಬಲಿಷ್ಠ ರಾಷ್ಟ್ರದ ಕಲ್ಪನೆಯನ್ನು ದೇಶದ ರಕ್ಷಣಾ ವ್ಯವಸ್ಥೆ ಅಥವಾ ಮಿಲಟರಿ ಸಾಮರ್ಥ್ಯದ ಮೂಲಕ ಅಳೆಯುವ ಯುದ್ಧೋತ್ತರ ಕಾಲದ ಕಲ್ಪನೆಯಿಂದ ಹೊರನಿಂತು ನೋಡಿದಾಗ, ಈ ಬಲಿಷ್ಠ ಎನ್ನುವ ಪದವನ್ನು ಬಿಡಿಸಿ ನೋಡಬೇಕಾಗುತ್ತದೆ.
ಏಕೆಂದರೆ ʼ ದೇಶವೆಂದರೆ ಮಣ್ಣಲ್ಲವೋ ಮನುಷ್ಯರು ʼ ಎಂಬ ಕವಿವಾಣಿಯ ಔದಾತ್ಯವನ್ನು ನಾವು ಮರೆಯಲಾಗುವುದಿಲ್ಲ. ಜಿಡಿಪಿ, ಮಾರುಕಟ್ಟೆ ಸೂಚ್ಯಂಕಗಳ ದೃಷ್ಟಿಯಲ್ಲಿ ಭಾರತ ಆರ್ಥಿಕವಾಗಿ ಖಚಿತವಾಗಿಯೂ ಪ್ರಗತಿಯ ಹಾದಿಯಲ್ಲಿದೆ. ಆದರೆ ಪ್ರಗತಿಯ ಫಲಾನುಭವಿಗಳು ಯಾರು ? ಬಂಡವಾಳಶಾಹಿ ಅರ್ಥವ್ಯವಸ್ಥೆಯ ನೆಲೆಯಲ್ಲಿ ನಿಂತು ನೋಡಿದಾಗ, ಈ ಪ್ರಗತಿಯ ದಾರಿಯಲ್ಲಿ ಅಸಮಾನತೆ, ಶೋಷಣೆ, ಬಡತನ, ನಿರ್ವಸತಿ ಮತ್ತು ನಿರ್ಗತಿಕತೆಯನ್ನು ಸಹಜ ಎಂದೇ ಭಾವಿಸಲಾಗುತ್ತದೆ. ಮಾರುಕಟ್ಟೆ ಆರ್ಥಿಕತೆಯ ತಜ್ಞರು ಅಸಮಾನತೆ, ಸಂಪತ್ತಿನ ಕ್ರೋಢೀಕರಣವನ್ನು ಸ್ವಾಗತಿಸುತ್ತಾರೆ. ಆದರೆ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದ ಸಮಾಜಗಳ ನಡುವೆ ನಿಂತು ನೋಡಿದಾಗ ನಮಗೆ ಈ ಸಮಸ್ಯೆಗಳೇ ಪ್ರಧಾನವಾಗಿ ಕಾಣುತ್ತವೆ. ನಮ್ಮ ದೃಷ್ಟಿ ಯಾವ ಕಡೆಗಿದೆ, ನಾವು ನಿಂತ ನೆಲೆ ಯಾವುದು ಎನ್ನುವುದು ಇಲ್ಲಿ ನಿರ್ಣಾಯಕವಾಗುತ್ತದೆ
ದೇಶದ ಸಂಪತ್ತಿನಲ್ಲಿ ಶೇಕಡಾ 40ರಷ್ಟು ಪಾಲು ಶೇಕಡಾ 1ರಷ್ಟು ಜನರ ಕೈಯ್ಯಲ್ಲಿದೆ ಎನ್ನುವುದೇ ಆತಂಕಕಾರಿಯಾಗಿ ಕಾಣುತ್ತದೆ. ಇದರೊಟ್ಟಿಗೆ ನೇರವಾಗಿ ಕಾಣುವಂತಹ ನಿರುದ್ಯೋಗ, ಬೆಲೆ ಏರಿಕೆ, ವಲಸೆ ಕಾರ್ಮಿಕರ ಬವಣೆ, ಶಿಕ್ಷಣ ವಂಚಿತ ಸಮುದಾಯಗಳು, ಆರೋಗ್ಯ ಸೇವೆಗಳ ಕೊರತೆ ಮತ್ತು ನೆಲ-ಜಲಮೂಲಗಳ ಕಾರ್ಪೋರೇಟೀಕರಣ ಪ್ರಕ್ರಿಯೆಗಳು ಈ ಆತಂಕವನ್ನು ಹೆಚ್ಚಿಸುತ್ತವೆ. ಈ ಅಲ್ಪ ಜನರ ಸಿರಿವಂತಿಕೆಗೂ, ರಾಜಕೀಯ ಭ್ರಷ್ಟಾಚಾರಕ್ಕೂ ಮತ್ತು ಅಪರಾಧಗಳ ಹೆಚ್ಚಳಕ್ಕೂ ನೇರ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತ್ತೊಂದೆಡೆ ಈ ಸಂಪತ್ತಿನ ಕ್ರೋಢೀಕರಣವೇ ಊಳಿಗಮಾನ್ಯ ದಬ್ಬಾಳಿಕೆಗೆ, ಪಿತೃಪ್ರಧಾನತೆಯ ಪ್ರಾಬಲ್ಯಕ್ಕೆ ಮತ್ತು ಜಾತಿ-ಮತ-ಧರ್ಮಗಳ ನೆಲೆಯಲ್ಲಿ ಮೇಲ್ವರ್ಗಗಳ ಅಹಮಿಕೆಗಳಿಗೆ ಕಾರಣವಾಗುತ್ತವೆ.
ವರ್ಷಾಂತ್ಯದ ಆಘಾತಗಳ ನಡುವೆ
2025ರ ವರ್ಷದ ಕೊನೆಯ ತಿಂಗಳಲ್ಲೇ ಈ ಎಲ್ಲ ಲಕ್ಷಣಗಳನ್ನು ಎತ್ತಿ ತೋರಿಸುವ ಘಟನೆಗಳು ದೇಶಾದ್ಯಂತ ನಡೆದಿರುವುದನ್ನು ಗಮನಿಸಬೇಕಿದೆ. ಸಾಮಾಜಿಕ ಶೋಷಣೆ ಮತ್ತು ದಬ್ಬಾಳಿಕೆಗೆ ಪೂರಕವಾದ ಆರ್ಥಿಕ ಭೂಮಿಕೆಗಳನ್ನು ಸೃಷ್ಟಿಸುವ ಮಾರುಕಟ್ಟೆ ಆರ್ಥಿಕತೆ ತನ್ನ ಡಿಜಿಟಲ್ ಮಾಧ್ಯಮಗಳ ಮೂಲಕ ತಳಸಮಾಜದಲ್ಲಿರುವ ಸಾಮಾನ್ಯ ಜನತೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನಸ್ಥಿತಿಯಿಂದ ವಿಮುಖವಾಗುವಂತೆ ಮಾಡುತ್ತಲೇ ಇರುತ್ತದೆ. ವಿದ್ಯುನ್ಮಾನ ವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮಗಳು ಬಹುತೇಕವಾಗಿ ಕಾರ್ಪೋರೇಟ್ ಹಿಡಿತದಲ್ಲಿರುವುದರಿಂದ, ಟಿವಿ ಧಾರಾವಾಹಿಗಳು ಮತ್ತು ಸಿನೆಮಾಗಳೂ ಸಹ ಇದೇ ಮಾದರಿ ಅನುಸರಿಸುತ್ತಿರುವುದನ್ನು ಗಮನಿಸಬಹುದು.
ಹಾಗಾಗಿಯೇ ವಿಶಾಲ ಸಮಾಜಕ್ಕೆ ಅತ್ಯಾಚಾರಗಳು, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಹತ್ಯೆಗಳು ಇವೆಲ್ಲವೂ ಕಾನೂನು ಸುವ್ಯವಸ್ಥೆಯಲ್ಲಿ ಸ್ವಾಭಾವಿಕವಾಗಿ ನಡೆಯುತ್ತಲೇ ಇರುವ ಘಟನೆಗಳಾಗಿ ಕಾಣತೊಡಗುತ್ತವೆ. ಧಾರವಾಡದ ಬಳಿ ಇತ್ತೀಚೆಗೆ ತಂದೆಯೇ, ಅಂತರ್ಜಾತಿ ವಿವಾಹವಾಗಿದ್ದ ತನ್ನ ಗರ್ಭಿಣಿ ಮಗಳನ್ನು ಹತ್ಯೆ ಮಾಡಿದ ಭೀಕರ ಘಟನೆ ಸಮಾಜದ ಅಂತಃಸತ್ವವನ್ನೇ ಕದಡಿ ವಿಚಲಿತಗೊಳಿಬೇಕಿತ್ತು. ಆದರೆ ಅದನ್ನು ʼಮರ್ಯಾದಾ ಹತ್ಯೆ ʼ ಎಂದು ನಿರ್ವಚಿಸುವ ಮೂಲಕ, ನಾಚಿಕೆಗೇಡಿನ ವರ್ತನೆಗೆ ಗೌರವಯುತ ಸ್ಥಾನವನ್ನು ಕಲ್ಪಿಸಲಾಗುತ್ತದೆ. ಈ ದಾರುಣ ಹತ್ಯೆ ಮತ್ತು ಅದರ ಹಿಂದೆ ಅಡಗಿರುವ ಹಿಂಸೆ ಮತ್ತು ಕ್ರೌರ್ಯ, ಅಪರಾಧ ಸಂಹಿತೆಯ ಅನುಸಾರ ಕೊಲೆ ಎನಿಸಿಕೊಳ್ಳದೆ, ಕೌಟುಂಬಿಕ ಘಟನೆಯಾಗಿ ಕಾಣತೊಡಗುತ್ತದೆ. ಕರ್ನಾಟಕದ ಸಚಿವರೂ ಸಹ ʼ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸಿ ʼ ಎಂದು ಹೇಳಿರುವುದು ಈ ಅಸೂಕ್ಷ್ಮತೆಯ ಸೂಚಕವಾಗಿದೆ.
ಅಂದರೆ ಈ ಘಟನೆಯ ಹಿಂದಿರುವ ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆ ಮತ್ತು ಪಿತೃಪ್ರಧಾನ ಕ್ರೌರ್ಯವನ್ನು ಗುರುತಿಸಲು ಸಮಾಜ ವಿಫಲವಾಗಿದೆ. ಹಂತಕ ವ್ಯಕ್ತಿಯನ್ನು ಪ್ರತಿನಿಧಿಸುವ ಮೇಲ್ಜಾತಿ-ಮೇಲ್ವರ್ಗಗಳು ಇದನ್ನು ಅಪರಾಧ ಎಂದು ಭಾವಿಸುವುದೇ ಇಲ್ಲ. ಈ ಮನೋವೃತ್ತಿಯ ಪರಿಣಾಮವಾಗಿಯೇ ಶೋಷಿತ ಜನರ ಮೇಲೆ, ಅವಕಾಶವಂಚಿತ-ಅಲಕ್ಷಿತ ಸಮುದಾಯಗಳ ಮೇಲೆ ಮುಕ್ತವಾಗಿ ದಾಳಿ ನಡೆಸಬಹುದು ಎಂಬ ಮನಸ್ಥಿತಿ ಇಡೀ ದೇಶದಲ್ಲಿ ಕಾಣುತ್ತಿದೆ. ಒಡಿಷಾ, ಕೇರಳ, ಮಧ್ಯಪ್ರದೇಶ ಇತರೆಡೆಗಳಲ್ಲಿ ಕ್ರಿಸ್‌ಮಸ್ ಆಚರಣೆಯ ನಡುವೆ, ಅಂಧ ಬಾಲೆಯನ್ನೂ ಒಳಗೊಂಡಂತೆ, ಕ್ರೈಸ್ತರ ಮೇಲೆ ನಡೆದಿರುವ ದಾಳಿಗಳ ಹಿಂದೆ ಇರುವುದೂ ಸಹ ಇದೇ ವರ್ಗಪ್ರಜ್ಞೆ ಮತ್ತು ಮೇಲ್ವರ್ಗದ ಆಧಿಪತ್ಯದ ದುಷ್ಟತನ. ಈ ಘಟನೆಗಳ ಬಗ್ಗೆ ಸರ್ಕಾರಗಳು, ಮಾಧ್ಯಮಗಳು ಮತ್ತು ಮೇಲ್ಪದರ ಸಮಾಜಗಳು (Elite socities)ಮೌನ ವಹಿಸುವುದು ವರ್ತಮಾನದ ಅತಿ ದೊಡ್ಡ ದುರಂತ.
ದೌರ್ಜನ್ಯಗಳ ಅಟ್ಟಹಾಸದ ನಡುವೆ
ಈ ದೃಷ್ಟಿಯಿಂದ ನೋಡಿದಾಗ ಕರ್ನಾಟಕದಲ್ಲಿ ವರ್ಷಾಂತ್ಯದಲ್ಲಿ ಕೇಳಿಬಂದ ಮಹಿಳಾ ಧ್ವನಿ ʼ ಕೊಂದವರು ಯಾರು ,,,,? ʼ ಎಂಬ ಪ್ರಶ್ನೆ ಮಾನವ ಸಮಾಜದ ಅಂತರ್ ಪ್ರಜ್ಞೆಯನ್ನು ಬಡಿದೆಬ್ಬಿಸುವಂತಹುದು. ಈ ಪ್ರಶ್ನೆಯ ಹಿಂದಿರುವ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸಮಾಜ ಸೋತಿದೆ. ಮತ್ತೊಂದೆಡೆ ಈ ಪ್ರಶ್ನೆಯ ಹಿಂದಿರುವ ಔಚಿತ್ಯ, ಕರ್ನಾಟಕದ ಮಹಿಳಾ ಪ್ರಜ್ಞೆಗೆ ಆಗಿರುವ ಘಾಸಿ ಒಂದು ಪ್ರದೇಶಕ್ಕೆ ಸೀಮಿತವಲ್ಲ ಎನ್ನುವುದನ್ನು ಹುಬ್ಬಳ್ಳಿಯ ʼಮರ್ಯಾದೆ-ಕೇಡು-ಹತ್ಯೆ ʼಯ ಮೂಲಕ ಮೇಲ್ಜಾತಿಯ ಶ್ರೇಷ್ಠತೆಯ ಪ್ರಜ್ಞೆ ಸ್ಪಷ್ಟಪಡಿಸಿದೆ. ಈ ವರ್ಷದಲ್ಲಿ ಭಾರತೀಯ ಸಮಾಜ ಖಚಿತವಾಗಿಯೂ ಒಂದು ಹೆಜ್ಜೆ ಮುಂದಿಟ್ಟಿದೆ. ದೈಹಿಕ ದಾಳಿ ಅಥವಾ ಹತ್ಯೆ ನಡೆಸುವ ಮುನ್ನ, ʼ ನೀನು ಯಾರು,,,,? ಎಂದು ಕೇಳಿ ಥಳಿಸಲಾಗುತ್ತಿದೆ. ಈ ʼ ಯಾರು ʼಎಂಬ ಪ್ರಶ್ನೆಯೇ ನಮ್ಮ ಸಮಾಜದ ಅಂತರ್ ಪ್ರಜ್ಞೆಯನ್ನು ನಿರ್ಧರಿಸುತ್ತದೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ʼ ಸಂಕಲ್ಪ ʼ ಮಾಡುವ ವಾಡಿಕೆ ಇರುವುದರಿಂದ ಹಿನ್ನೆಲೆಯಲ್ಲಿ ಈ ಪ್ರಜ್ಞೆ ವ್ಯಕ್ತಿಗತವಾಗಿ-ಸಾಮೂಹಿಕವಾಗಿ ʼ ಆತ್ಮಸಾಕ್ಷಿ ʼ ಯನ್ನು ತಟ್ಟುವುದೇ ಎಂಬ ಜಿಜ್ಞಾಸೆ ಮೂಡುವುದು ಸಹಜ.
ಉತ್ತರದಾಯಿತ್ವದ ಔದಾತ್ಯವೇ ನಶಿಸಿಹೋಗಿರುವ ಭಾರತೀಯ ಸಮಾಜ ಮತ್ತು ಆಳ್ವಿಕೆಯಲ್ಲಿ, ʼ ಕೊಂದವರು ಯಾರು ʼ ಪ್ರಶ್ನೆಗೆ ಯಾರೂ ಉತ್ತರಿಸುವುದಿಲ್ಲ. ʼ ನೀನು ಯಾರು ʼಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಿದ ವ್ಯಕ್ತಿ ಮರುಕ್ಷಣ ಆಸ್ಪತ್ರೆಯಲ್ಲೋ, ಸ್ಮಶಾನದಲ್ಲೋ ಇರುತ್ತಾನೆ/ಳೆ. ಹೊಸ ವರ್ಷದ ಹೊಸ್ತಿಲಲ್ಲಿ ಈ ದ್ವಂದ್ವವನ್ನು ಛೇದಿಸುವುದೇ ನಮ್ಮ ಮೊದಲ ಸಂಕಲ್ಪವಾಗಬೇಕಿದೆ. ಈ ಎರಡೂ ಪ್ರಸಂಗಗಳನ್ನು ಗಮನಿಸಿದಾಗ, ನವ ಭಾರತದ ರಾಜಕೀಯ ಸಂಕಥನಗಳಲ್ಲಿ ಆಣೆ, ಪ್ರಮಾಣ, ನೈತಿಕತೆ ಇಂತಹ ಸುಂದರ ಪದಗಳು ನರ್ತಿಸುತ್ತಲೇ ಇರುತ್ತವೆ ಆದರೆ ಈ ಗುಣಲಕ್ಷಣಗಳಿಗೆ ಅಡಿಪಾಯವಾಗುವ ʼ ಉತ್ತರದಾಯಿತ್ವ ʼ ಅಥವಾ ʼಆತ್ಮಸಾಕ್ಷಿ ʼ ಮಾತ್ರ ಕಾಣಲಾಗುವುದಿಲ್ಲ. ಇದು ಆಳ್ವಿಕೆಯ ಕೇಂದ್ರಗಳಿಂದ ಕುಟುಂಬಗಳ ಅಂಗಳದವರೆಗೂ ಕಾಣುವ ಒಂದು ಸಮಾನ ಲಕ್ಷಣ.
ಆತ್ಮ-ಸಾಕ್ಷಿ ಮತ್ತು ಮನುಜ ಪ್ರಜ್ಞೆ
ವಾಸ್ತವದಲ್ಲಿ ಆತ್ಮ ಎಂಬ ಕಲ್ಪನೆ ವ್ಯಕ್ತಿಯಲ್ಲಿ ಇರಲೇಬೇಕಾದ ಜೀವಪ್ರಜ್ಞೆಯನ್ನು ಸೂಚಿಸುತ್ತದೆ. ಇದೇ ಜೀವಪ್ರಜ್ಞೆಯೇ ಸಮಾಜದಲ್ಲೂ ಇರಬೇಕೆಂದು ಆಶಿಸುವುದು ಮಾನವೀಯತೆ. ಹಾಗಾಗಿಯೂ ಅಪರಾಧ ಮಾಡಿರುವ ವ್ಯಕ್ತಿಗಳೇ ಹೆಚ್ಚು ಆಣೆ ಪ್ರಮಾಣದ ಬಗ್ಗೆ ವಿಶ್ವಾಸ ತೋರುತ್ತಾರೆ. ಪ್ರಾಮಾಣಿಕ, ಸತ್ಯಸಂಧ ವ್ಯಕ್ತಿಗೆ ಯಾವ ದೇವರೂ ಸಾಕ್ಷಿಯಾಗಬೇಕಿಲ್ಲ. ಈ ದೃಷ್ಟಿಯಿಂದ ಕಳೆದ ವರ್ಷದಲ್ಲಿ ಸಂಭವಿಸಿದ ಆತ್ಮಘಾತುಕ ಘಟನೆಗಳನ್ನು ನೆನೆದರೆ ನವ ಭಾರತದಲ್ಲಿ ಕೊರತೆ ಇರುವುದು ಈ ಪ್ರಾಮಾಣಿಕತೆಯೇ ಎನ್ನುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಯಾವ ಘಟನೆಗೂ ಯಾರೂ ಉತ್ತರದಾಯಿಯಾಗುವುದಿಲ್ಲ. ಎಳೆಬಾಲೆಯ ಅತ್ಯಾಚಾರದಿಂದ ಹಿಡಿದು ಮರ್ಯಾದೆಹೀನ ಹತ್ಯೆಯವರೆಗೂ, ಮತಾಂಧ ದಾಳಿಯಿಂದ ಭಯೋತ್ಪಾದಕ ದಾಳಿಯವರೆಗೂ , ಸಂಭವಿಸುವ ಸಾವು ನೋವು ಎಲ್ಲವೂ ದೈನಂದಿನ ಬದುಕಿನ ಸಹಜ ಪ್ರಕ್ರಿಯೆಗಳಂತೆ ಕಾಣತೊಡಗುತ್ತವೆ.
ವ್ಯವಸ್ಥೆಯ ಮತ್ತೊಂದು ಬದಿಯಲ್ಲಿ, ಪ್ರಜಾಪ್ರಭುತ್ವ ಆಳ್ವಿಕೆಯ ಅಂತಃಸತ್ವವೇ ಆಗಿರುವ ಆಡಳಿತ-ಹಣಕಾಸು ಭ್ರಷ್ಟಾಚಾರ ʼಸುದ್ದಿʼ ಯ ಹಂತದಿಂದ ಮೇಲೇರುವುದೇ ಇಲ್ಲ. ತನಿಖೆ, ವಿಚಾರಣೆ ಮೊದಲಾದ ನ್ಯಾಯವ್ಯವಸ್ಥೆಯ ಪ್ರಕ್ರಿಯೆಗಳೆಲ್ಲವೂ ಅಧಿಕಾರ ಕೇಂದ್ರಗಳ ಬಳಕೆಯ ಅಸ್ತ್ರವಾಗಿರುವುದರಿಂದ, ಸಾಂಸ್ಥಿಕ ನೆಲೆಯಲ್ಲಿ ಈ ವಿದ್ಯಮಾನವನ್ನು ನಿರ್ವಚಿಸಲಾಗುವುದೇ ಹೊರತು, ತಾತ್ವಿಕ ನೆಲೆಯಲ್ಲಿ ಅಲ್ಲ. ಪ್ರಾಮಾಣಿಕ-ಭ್ರಷ್ಟ-ಹಂತಕ-ಸಭ್ಯಸ್ಥ-ಸಂಸ್ಕಾರವಂತ ಈ ಪದಗಳು ಅಧಿಕಾರ ರಾಜಕಾರಣದ ಅಗತ್ಯತೆಗಳಿಗೆ ತಕ್ಕಂತೆ ಅದಲುಬದಲಾಗುವ ಒಂದು ವಿಚಿತ್ರ ಸನ್ನಿವೇಶಕ್ಕೆ 2025ರಲ್ಲೂ ಸಾಕಷ್ಟು ನಿದರ್ಶನಗಳನ್ನು ಕಾಣಬಹುದು. ನ್ಯಾಯ ವ್ಯವಸ್ಥೆಯಲ್ಲಿ ನಮಗೆ ಅಂತಿಮ ನ್ಯಾಯ ದೊರೆಯುವುದು ನಿಶ್ಚಿತ ಎಂಬ ಭಾವನೆ ದಾಳಿಗೊಳಗಾದವರಲ್ಲಿ, ಹತ್ಯೆಗೊಳಗಾದವರ ಕುಟುಂಬಗಳಲ್ಲಿರುವುದು ಸಹಜ. ಆದರೆ ಇಲ್ಲಿ ಸಾಕ್ಷಿ, ಪುರಾವೆಗಳು ಇಲ್ಲದಿದ್ದರೆ, ನ್ಯಾಯ ಮರೀಚಿಕೆಯಾಗುತ್ತದೆ. ಇದು ನ್ಯಾಯಶಾಸ್ತ್ರದ ನಿಯಮ ತಪ್ಪೇನಿಲ್ಲ.
ಆದರೆ ಅಪರಾಧ ಮಾಡಿದವರಲ್ಲಿ, ಮಾಡಿಸಿದವರಲ್ಲಿ ಒಂದು ಆತ್ಮ ಮತ್ತು ಸಾಕ್ಷಿಪ್ರಜ್ಞೆ ಇರಬೇಕಲ್ಲವೇ ? ಅಥವಾ ಜೀವಂತ ಸಮಾಜದಲ್ಲಾದರೂ ಇದು ಇರಬೇಕಲ್ಲವೇ ? ಹಾಗೊಮ್ಮೆ ಇದ್ದಿದ್ದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಸಂಭವಿಸುವ ಅಪರಾಧಗಳು ಆಯಾ ದೇವರ ಸನ್ನಿಧಿಯಲ್ಲೇ , ಭಕ್ತಾದಿಗಳಿಂದಲೇ ದಂಡನೆಗೊಳಗಾಗಬೇಕಿತ್ತು. ಸಮಾಜದ ಕಣ್ಣೆದುರಿನಲ್ಲೇ ನಡೆಯುವ ಕ್ರೌರ್ಯ-ಹಿಂಸೆ ಆಯಾ ಸಮಾಜದಲ್ಲೇ ಅಪರಾಧಿ ಪ್ರಜ್ಞೆ ಮತ್ತು ಸ್ವಲ್ಪ ಲಜ್ಜೆ ಮೂಡಿಸಬೇಕಿತ್ತು. ಎರಡೂ ಇಲ್ಲವಾದಾಗ ಸ್ವಾಭಾವಿಕವಾಗಿ ನಾವು ʼ ಆತ್ಮಸಾಕ್ಷಿ ʼಎಂಬ ಪದವನ್ನು ಬಳಸುತ್ತೇವೆ. ಈ ಜೀವಪ್ರಜ್ಞೆ ಜೀವಂತವಾಗಿದ್ದರೆ, ಜಾತಿ ಶ್ರೇಷ್ಠತೆ-ದಬ್ಬಾಳಿಕೆ, ಪುರುಷಾಹಮಿಕೆ, ಧಾರ್ಮಿಕ ಪಾವಿತ್ರ್ಯತೆ-ದರ್ಪ, ಆರ್ಥಿಕ ಮೇಲರಿಮೆ, ಅಧಿಕಾರದ ಅಹಂ ಇದಾವುದೂ ಇರುತ್ತಿರಲಿಲ್ಲ. ಆಗ ಹೆಣ್ಣು ಮಕ್ಕಳು, ಬಡಜನರು, ಅಸ್ಪೃಶ್ಯರು, ಅಲಕ್ಷಿತರು ಧೈರ್ಯದಿಂದ ಬದುಕಲು ಸಾಧ್ಯವಾಗುತ್ತಿತ್ತು.
ಸಾಮಾಜಿಕ ಅಧಃಪತನದ ಆತಂಕಗಳು
ಭಾರತೀಯ ಸಮಾಜ ಅವನತಿಯತ್ತ ಸಾಗುತ್ತಿದೆ ಎಂಬ ಅಭಿವ್ಯಕ್ತಿ ಆಕ್ರೋಶದ ನುಡಿಗಳಲ್ಲ. ಆತ್ಮಾವಲೋಕನದ ಮಾತುಗಳು. ಸಮಾಜದ ಎಲ್ಲ ಸ್ತರಗಳಲ್ಲಿ ದುಷ್ಟತನ ಜೀವಂತಿಕೆಯಿಂದಿರುವುದರಿಂದಲೇ ಸಮಾಜವು ಆತ್ಮಘಾತುಕತೆಯ ಕೂಪವಾಗಿ ಕಾಣುತ್ತಿದೆ. ಈ ಮನಸ್ಥಿತಿಯಿಂದ ಹೊರಬರಲು ಪ್ರೇರಣೆಯಾಗುವ ದಾರ್ಶನಿಕರು, ನಿತ್ಯ ಜಂಗಮರಾಗಿ ನಮ್ಮ ನಡುವೆ ಜೀವನಾದರ್ಶ, ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ದುರದೃಷ್ಟವಶಾತ್ ಬುದ್ಧ, ಬಸವ, ಗಾಂಧಿ, ಅಂಬೇಡ್ಕರಾದಿಯಾಗಿ ಎಲ್ಲ ದಾರ್ಶನಿಕರನ್ನೂ ನಾವು ಸ್ಥಾವರದಲ್ಲಿ ಬಂಧಿಸಿಟ್ಟಿದ್ದೇವೆ. ಪ್ರತಿಮೆ-ಆಚರಣೆಗಳ ಸಂಕೋಲೆಗಳಿಂದ ವರ್ಗೀಕರಿಸಿಬಿಟ್ಟಿದ್ದೇವೆ. ಈ ರೂಪಾಂತರಕ್ಕೆ ಬಹುಶಃ ಕುವೆಂಪು ಸಹ ಒಳಗಾಗುವ ಲಕ್ಷಣಗಳು ನಿಚ್ಛಳವಾಗಿ ಕಾಣುತ್ತಿವೆ. ಕುವೆಂಪು ಜನ್ಮದಿನದಂದು. ಪ್ರತಿಯೊಂದು ಮನೆಯಲ್ಲೂ ಅವರ ಫೋಟೋ ಇಟ್ಟು, ಧೂಪ ದೀಪ ಹೂಗಳಿಂದ ಆರಾಧಿಸುವಂತೆ ಕರೆ ನೀಡಲಾಗುತ್ತಿದೆ.
ಈ ವಕ್ರಮಾರ್ಗಗಳನ್ನು ಬದಿಗಿಟ್ಟು 2026ರ ಭಾರತವನ್ನು ಮಾನವೀಯ ಮೌಲ್ಯಗಳ ಸುಂದರ ಉದ್ಯಾನವನ್ನಾಗಿ ಮಾಡಬೇಕಾದರೆ ನಾಗರಿಕರು, ರಾಜಕಾರಣಿಗಳು, ವಿದ್ವಾಂಸರು, ಕಲಾವಿದರು ಎಲ್ಲರೂ ಸಹ ಈ ಕೆಲವು ಸಂಕಲ್ಪಗಳನ್ನು ಮಾಡಬೇಕಿದೆ.
ಲಿಂಗ ಭೇದ-ಜಾತಿ ಭೇದ-ಮತ ಭೇದ ಮಾಡುವುದಿಲ್ಲ.
ಯಾವುದೇ ರೀತಿಯ ದೌರ್ಜನ್ಯ, ತಾರತಮ್ಯ, ದಬ್ಬಾಳಿಕೆ ಮಾಡುವುದಿಲ್ಲ.
ಮಹಿಳೆಯನ್ನು ಅಧೀನಳನ್ನಾಗಿ ನೋಡುವುದಿಲ್ಲ.
ಜಾತಿ-ಧರ್ಮದ ಶ್ರೇಷ್ಠತೆಯ ಕಲ್ಪನೆಯನ್ನು ವರ್ಜಿಸುತ್ತೇವೆ
ಅಧಿಕಾರ-ಆಡಳಿತ-ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ.
ಹಿಂಸೆ-ಕ್ರೌರ್ಯದ ಮನೋಭಾವವನ್ನು ತೊಡೆದುಹಾಕುತ್ತೇವೆ
ಮನುಷ್ಯರನ್ನು ಮನುಷ್ಯರಾಗಿ ಮಾತ್ರ ನೋಡುವ ಕಣ್ಣೋಟ ಬೆಳೆಸಿಕೊಳ್ಳುತ್ತೇವೆ.
ಇದು ಸಾಧ್ಯವಾದರೆ ನಾವು ಹೆಮ್ಮೆಯಿಂದ ಆತ್ಮಸಾಕ್ಷಿ ಅಥವಾ ಪ್ರಮಾಣೀಕರಣದ ಬಗ್ಗೆ ಸೊಲ್ಲೆತ್ತಬಹುದು. ನಾವು ನಾಗರಿಕರು/ಹೆಮ್ಮೆಯ ಭಾರತೀಯರು ಎಂದು ಎದೆಮುಟ್ಟಿ ಹೇಳಬಹುದು. ಸಾಧ್ಯವೇ ? ಯೋಚಿಸೋಣ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
-೦-೦-೦-
bevarahani1