ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು-ಪಿ.ಲಂಕೇಶ್

ಪಿ.ಲಂಕೇಶ್- ಕನ್ನಡದಒಂದು ಪೀಳಿಗೆಗೆ ಅವರುಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭಾವವಿದೆ. ಸಾಹಿತ್ಯ, ಪತ್ರಿಕೋದ್ಯಮ, ನಾಟಕ, ಸಿನಿಮಾಹೀಗೆ ಕೈ ಹಾಕಿದಎಲ್ಲದರಲ್ಲೂ ಶ್ರೇಷ್ಟಎನ್ನುವ ಕೃತಿಗಳನ್ನು ನೀಡಿದ ಲಂಕೇಶ್‌ಕನ್ನಡದ ಅಂತಃಸತ್ವ . ದೇಶವನ್ನು ಹತ್ತಿ ಉರಿಸುತ್ತಿರುವ ದುರುಳರು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಅನು ದಿನವೂ ಲಂಕೇಶ್ ನೆನಪಾಗುತ್ತಿದ್ದಾರೆ. ಅವರಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು, ಏನು ಬರೆಯುತ್ತಿದ್ದರು, ಹೇಗೆ ಗೇಲಿ ಮಾಡುತ್ತಿದ್ದರುಎಂದೆಲ್ಲಕನವರಿಸುವಂತೆ ಆಗಿ ಬಿಟ್ಟಿದೆ. ಇಂಥಾ ಲಂಕೇಶರನ್ನು ತೀರಾ ಹತ್ತಿರದಿಂದ ಕಂಡು, ಒಡನಾಡಿದ ಕೆ.ಬಿ.ನೇತ್ರಾವತಿ ತಮ್ಮ ನೆನಪುಗಳನ್ನು ‘ಬೆವರ ಹನಿ’ ದಿನಪತ್ರಿಕೆಯ ಓದುಗರಿಗಾಗಿ ಬರೆದಿದ್ದಾರೆ.-ಸಂಪಾದಕ

ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು-ಪಿ.ಲಂಕೇಶ್

ಲಂಕೇಶ್‌ ಎಂಬ ಹೆಸರು ನನಗೆ ಪರಿಚಯವಾದದ್ದು ಬಹಳ ಕುತೂಹಲದೊಂದಿಗೆ. ನಾನು ಐದುಅಥವಾಆರನೇತರಗತಿಇರಬಹುದು, ನಮ್ಮ ಶಾಲೆಯ ಟೀಚರ್‌ಗಳು ಮಾತಾಡುತ್ತಿದ್ದರು, “ಲಂಕೇಶ್ ಪತ್ರಿಕೆಯಲ್ಲಿ ವರದಿಯಾಗಿದೆ, ಅಬ್ಬಾಎಂತಹ ಲೇಖನ, ಎಷ್ಟು ಬೋಲ್ಡ್, ...!?” ಮತ್ತೊಬ್ಬಟೀಚರ್“ಅದೆಲ್ಲ ಹಾಗಿರಲಿ ಈ ಪೇಪರ್‌ನ ಮಕ್ಕಳು ಓದಿದರೆ ಹೇಗೆ, ಹಾಗೆಲ್ಲ ಬರೆಯಬಾರದು..,” ಮನಸ್ಸಿನ ಮೂಲೆಯಲ್ಲಿಯಾವುದರ ಬಗ್ಗೆ ಆ ವರದಿ,ಯಾರದು ಲಂಕೇಶ್ ಎಂಬ ಕುತೂಹಲ. ಪ್ರಶ್ನೆಗೆ ಉತ್ತರಗಳು ಸಿಗಲಿಲ್ಲ. ಕಾರಣನನ್ನ ಲೋಕ- ಮನೆ, ಶಾಲೆ, ಆಟ ಪಾಠ.

ಆದಾದ ಕೆಲವೇ ದಿನಗಳಲ್ಲಿ ನಮ್ಮ ಮನೆಯಲ್ಲಿ ನಮ್ಮಪ್ಪನ ಕೈಲಿ ಪ್ರತ್ಯಕ್ಷವಾಗಿತ್ತು ಲಂಕೇಶ್ ಪತ್ರಿಕೆ. ಅಪ್ಪ ಪೇಪರ್ ಓದಿ ಮುಗಿಸಿದ ತಕ್ಷಣಕುತೂಹಲದಿಂದನಾನೂ ಕುಳಿತು ಆ ಪೇಪರನ್ನಒಂದಕ್ಷರವನ್ನೂ ಬಿಡದೆಓದಿದ್ದೆ,ಇದು ನಂತರ ನಮ್ಮ ಮನೆಯ ‘ಅವಿಭಾಜ್ಯ ಅಂಗ’ವಾಗಿತ್ತು. 


ಕೆಲವು ವರ್ಷಗಳ ನಂತರ, ತಿಪಟೂರಿನಲ್ಲಿ ನಡೆದ ಒಂದು ವರದಕ್ಷಿಣೆ ಕಿರಕುಳದ ಸಾವಿನ ಬಗ್ಗೆ ನನ್ನ ಅಕ್ಕ ಇದೇ ಪತ್ರಿಕೆಗೆ ವರದಿ ಬರೆದು ಊರಿನ ಕೆಲವರ ಕೆಂಗಣ್ಣಿಗೆ ಗುರಿಯಾಗುವ ಜೊತೆಗೆ ಕೆಲವರಿಗೆ ಹೋರಾಟದ ಸ್ಫೂರ್ತಿಯೂ ಆಗಿ, ಆ ಘಟನೆ ಸಂಬಂಧ ನಂಡೆದ ಪ್ರತಿಭಟನಾ ಮೆರವಣಿಗೆಗಳ ಮುಖಾಂತರ ಜನಪ್ರಿಯಳಾಗಿದ್ದಳು. ಬಹಳ ಭಯಪಟ್ಟಿದ್ದ ನಾನು ನಂತರ ನಿರಾಳವಾಗಿದ್ದೆ ಕಾರಣ ಅಕ್ಕನಿಗೆ ಧೈರ್ಯತುಂಬಿ ಲಂಕೇಶರು ಬರೆದಿದ್ದ ಪತ್ರ. ನಂತರ ಓದಿನ ಸಲುವಾಗಿ ದಾವಣೆಗೆರೆಯ ಬಿಡಿಟಿ ಇಂಜಿನಿಯರಿಂಗ್‌ ಕಾಲೇಜು ಸೇರಿದ ನನಗೆ ಮೊದಲ ವರ್ಷದ ಅಂತ್ಯದಲ್ಲಿ ಮೈಸೂರು ವಿವಿಯಿಂದ ನಮ್ಮ ಕಾಲೇಜನ್ನು ಹೊಸದಾಗಿ ಪ್ರಾರಂಭಮಾಡಿದ್ದ ಕುವೆಂಪು ವಿವಿಗೆ ವರ್ಗಾಯಿಸುವ ಪ್ರಸ್ತಾಪ ಓದಿ ಮನಸ್ಸಿಗೆ ನೋವಾಯಿತು. ಯಾರನ್ನು ಕೇಳಿದರೂ ಇಲ್ಲ ನಿಮ್ಮ ಬ್ಯಾಚ್‌ ಕೂಡ ಕುವೆಂಪು ವಿವಿಗೆ ಸೇರಿಸುತ್ತಾರೆ ಅಂತ ಸರಿಯಾದ ಉತ್ತರ ಸಿಗದ ನಾನು ಲಂಕೇಶರಿಗೆ ಪತ್ರ ಬರೆದು ನನ್ನದುಗುಡ ಹೇಳಿಕೊಂಡೆ. ಮರು ವಾರವೇ ಅವರಿಂದ ಉತ್ತರ ಬಂದಾಗ ಖುಷಿಯಿಂದ ಕುಣಿದಾಡಿದ್ದೆ, ಅದರಲ್ಲಿ ಅವರು ವಾಸ್ತವಗಳ ಬಗ್ಗೆ ತಿಳಿ ಹೇಳಿ ಧೈರ್ಯತುಂಬಿದ್ದರು, ಅವರಂದಂತೆಯೇ ಮುಂದೆ ನಮ್ಮಕಾಲೇಜನ್ನು ಕುವೆಂಪು ವಿವಿಗೆ ಸೇರಿಸಿದರೂ ನಾವಾಗಲೇ ಮೈಸೂರು ವಿವಿಗೆ ಪ್ರವೇಶ ಪಡೆದಿದ್ದರಿಂದ ನಮಗೆ ಮೈಸೂರು ವಿವಿಯಿಂದಲೇ ಅಂಕ ಪಟ್ಟಿ ಪದವಿ ಪತ್ರ ದೊರೆಯುವುದಾಗಿ ಘೋಷಿಸಿದರು. 


ಇದನ್ನೆಲ್ಲಯಾಕೆ ಹೇಳಿದೆ ಎಂದರೆಅವರ ಬಿಡುವಿಲ್ಲದ ಸಮಯದಲ್ಲಿಕೂಡಎಲ್ಲರ ಅಹವಾಲುಗಳಿಗೆ ಸ್ಪಂದಿಸುತ್ತಿದ್ದ ರೀತಿ ನನಗೆ ಬಹಳ ಮೆಚ್ಚುಗೆಯಾಗಿತ್ತು, ಅದೇ ರೀತಿ ಅವರು ಮತ್ತೊಬ್ಬರಿಗೆ ತುಂಬುತ್ತಿದ್ದ ಧೈರ್ಯ ಕೂಡ. 


ಅಕ್ಕನ ಹೆಚ್ಚು ಹೆಚ್ಚು ಲೇಖನಗಳು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಹೆಣ್ಣು ಮಕ್ಕಳ ತೊಂದರೆಗಳು, ಅವುಗಳನ್ನು ನಿಭಾಯಿಸುವ ಬಗ್ಗೆ ಕಳಕಳಿ ತುಂಬಿ ಬರೆಯುತ್ತಿದ್ದಳು, ಅದೇರೀತಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳ ಕಥೆ, ಲೇಖನ, ಕವಿತೆ ಗಳನ್ನು ಲೇಖನಗಳನ್ನು ಯಾರಿಗೂ ಹೆದರದೆ ಪ್ರಕಟಿಸುವ ಮುಖಾಂತರತಮಗೆ ಹೆಣ್ಣು ಮಕ್ಕಳ ಬಗ್ಗೆ ಇದ್ದ ಕಾಳಜಿಯನ್ನು ಸಾಮಾಜಿಕಜವಾಬ್ದಾರಿಯನ್ನುಲಂಕೇಶ್‌ಎತ್ತಿ ಹಿಡಿದಿದ್ದರು. ಅದೇರೀತಿಎಲ್ಲರಿಗೂ ಬರೆಯಲು ಹುರಿದುಂಬಿಸುತ್ತಿದ್ದರುಅವರು.


ತಿಪಟೂರಿನಲ್ಲಿ ಪ್ರಗತಿರಂಗದ ಸಮಾವೇಶ, ನಾನು ದಾವಣಗೆರೆಯಲ್ಲಿದ್ದೆ ಎನ್ನುವ ಕಾರಣಕ್ಕೆ ಅಕ್ಕ ಮನೆಯಲ್ಲಿದ್ದ ಟೇಪ್‌ ರೆಕಾರ್ಡರ್‌ ತೆಗೆದುಕೊಂಡು ಹೋಗಿ ರೆಕಾರ್ಡ್ ಮಾಡಿ ತಂದು ನನಗೆ ಕೇಳಿಸಿದ್ದಳು. ಅದರಲ್ಲಿ ಅವರು ರಾಜಕೀಯ, ಸಾಮಾಜಿಕ ಸನ್ನಿವೇಶದ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತಾಡಿದ್ದರು. ಯಾಕೆ ಹೊಸ ರಾಜಕೀಯ ಪಕ್ಷ ಬೇಕು ಎನ್ನುವ ಬಗ್ಗೆ ಅರ್ಥವಾಗುವಂತೆ ಹೇಳಿದ್ದರು. ಬಹುಶಃ ಅವರು ಇಂದು ಬದುಕಿದ್ದರೆ ಕರ್ನಾಟಕ ಈ ರೀತಿಯ ರಾಜಕೀಯ ಸಂಘರ್ಷಕ್ಕೆ ಇಷ್ಟು ಬೇಗ ಸಾಕ್ಷಿಯಾಗುತ್ತಿರಲಿಲ್ಲ. ಅವರ ಲೇಖನಗಳು, ಟೀಕೆ ಟಿಪ್ಪಣಿ, ನೀಲು ಕವನ, ಕಥೆಗಳು ಸಮಾಜದಎಲ್ಲ ಮಜಲುಗಳಿಗೆ ಕನ್ನಡಿ ಹಿಡಿಯುತ್ತಿದ್ದವು. ಜನರ ತಿಳುವಳಿಕೆ ಹೆಚ್ಚಿಸಲುಅವಕಾಶವಾಗುತ್ತಿತ್ತು.


ನಾನು ಹೆಚ್ಚು ಜನರೊಂದಿಗೆ ಬೆರೆಯಲು ಬಯಸುತ್ತಿರಲಿಲ್ಲ. ಅವರನ್ನು ಭೇಟಿ ಮಾಡಿಸುವ ಸಲುವಾಗಿಯೇ ನನ್ನನ್ನು ಅವರ ಕಚೇರಿಗೆ ಕರೆದೊಯ್ದ ಅಕ್ಕನ ಜೊತೆ ಬಾಗಿಲು ತೆಗೆದು ಒಳ ಹೋಗುವಾಗ ನನಗೆ ಭಯದಿಂದ ಮುಖದಲ್ಲಿ ಬೆವರಿಳಿದಿತ್ತು, ಅಕ್ಕ ಸಲೀಸಾಗಿ ನಮಸ್ತೆ ಹೇಳಿ ನನ್ನ ಪರಿಚಯಿಸಲು ಹಿಂದೆ ತಿರುಗಿದಳು, ಅವಳ ಹಿಂದೆ ಅವಿತಂತೆ ನಿಂತಿದ್ದ ನಾನು ಪಕ್ಕಕ್ಕೆ ಬಂದು ನಮಸ್ತೆ ಹೇಳಿದೆ. ಬಾಯ್ತುಂಬ ನಗುತ್ತಾ ನಮಸ್ತೆ ಹೇಳಿ ಕುಳಿತುಕೊಳ್ಳಲು ಹೇಳಿದರು. ಅವರ ಮುಖದಲ್ಲಿನ ಮನಸ್ಪೂರ್ತಿ ನಗು ನನ್ನ ಭಯವನ್ನೆಲ್ಲ ಮಾಯ ಮಾಡಿತ್ತು. ಅವರೊಂದಿಗೆ ನಡೆದ ಕುಶಲೋಪರಿ ರಾಜಕೀಯ ಸಾಹಿತ್ಯದ ಮಾತುಕತೆ ಮಧ್ಯೆ ಅವರು ನನ್ನಅಭಿಪ್ರಾಯ ಕೇಳಿದಾಗ ಅಲ್ಲೊಂದು ಇಲ್ಲೊಂದು ಪ್ರಶ್ನೆಗೆ ಉತ್ತರಿಸಿದೆ. ಉಳಿದ ಪ್ರಶ್ನೆಗಳಿಗೆ ಬರಿ ನಗು ಉತ್ತರವಾಗಿತ್ತು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದಅವರ ಮಗಳು ಕವಿತಾಳಿಗೆ ನಮ್ಮನ್ನು ಪರಿಚಯಿಸಿದರು ಅವರೂ ಕೂಡ ನಮಸ್ತೆ ಹೇಳಿದರು. ಅವರು ಏನೋ ಮಾತಾಡಲು ಬಂದಿದ್ದವರು ನಮ್ಮನ್ನು ನೋಡಿ ಹೆಚ್ಚೇನು ಮಾತನಾಡದೆ ಹೊರಡಲು ಅನುವಾದಾಗ, “ಕವಿತಾ ಗಿರಿ ಕಾಣ್ತಾಇಲ್ಲ, ಹಾಗೇ ಜೂಸ್‌ ಅಂಗಡಿಯವನಿಗೆ ಎರಡು ಪೈನ್‌ ಆಪಲ್‌ ಜೂಸ್ ಕಳಿಸಲು ಹೇಳು”ಅಂದರು. ಕವಿತಾ ಮುಖದಲ್ಲಿ ಯಾವ ಭಾವವೂ ವ್ಯಕ್ತವಾಗದೇ ಆಯ್ತು ಅಂತ ಹೇಳಿ ಅಲ್ಲಿಂದ ತೆರಳಿದರು.


ನನಗಾದ ಆಶ್ಚರ್ ಯಅಪ್ಪ ಮಗಳಿಗೆ ಈ ರೀತಿ ಹೇಳಬಹುದಾ ಅವರಿಗೆ ಬೇಜಾರು ಆಗುವುದಿಲ್ಲವಾ. ಅವರಿಗೆ ಅಂತಸ್ತಿನ ಹಮ್ಮು ಇಲ್ಲವಾ ನಾವು ಅವರಿಗೆ ಹೊಸಬರು ಬೇರೆ ಅಥವಾ ಎಲ್ಲರೂ ಸಮಾನರು ಎಂಬ ಮಾತನ್ನು ಅಕ್ಷರಃ ಮಾಡಿ ತೋರಿಸಿದರಾ ಎಂದು ಹೀಗೆ ಯೋಚನಾ ಲಹರಿಯಲ್ಲಿದ್ದಾಗ ಪೈನ್‌ ಆಪಲ್‌ ಜೂಸ್ ಬಂತು. ಹುಂ,ಅದನ್ನು ಕುಡಿದು ಹೊರಡಲು ಅನುವಾದಾಗ ಮನಸ್ಸು ಖುಷಿಯಿಂದ ಹೆಮ್ಮೆಯಿಂದ ತುಂಬಿತ್ತು. 


ಆದರೂ ಲಂಕೇಶರನ್ನು ನಾನು ಮುಖತಃ ಭೇಟಿ ಮಾಡಿದ್ದನ್ನ ಎಲ್ಲೂ ಹೇಳಿಕೊಂಡಿಲ್ಲ. ಕಾರಣ ಇವೆಲ್ಲ ನಮ್ಮ ಅನುಭವಗಳನ್ನ ಹೆಚ್ಚಿಸಿಕೊಳ್ಳಲು ಸದಾವಕಾಶಗಳು ಅದರ ಲಾಭ ಪಡೆಯುವ ಮನಸ್ಸು ಮಾಡಬಾರದು ಎನ್ನುವುದು ನನ್ನ ಅನಿಸಿಕೆ.


ಅದು 1993ರ ಒಂದು ದಿನ, ನಾವು ಬೆಂಗಳೂರಿನ ಬನಶಂಕರಿಯಲ್ಲಿದ್ದೆವು, ನಾನು ಇಂಜಿನಿಯರಿಂಗ್ ಮುಗಿಸಿ ಕೆಲಸದ ಬೇಟೆಯಲ್ಲಿದ್ದ ಕಾಲವದು. ನಾನು ಮನೆ ಕೆಲಸದಲ್ಲಿ ಮಗ್ನಳಾಗಿದ್ದೆ. ಗೇಟ್‌ ತೆಗೆದುಯಾರೋ ಒಳ ಬಂದ ಸದ್ದು. ಅಕ್ಕ ಆಚೆ ಹೋಗಿ ನೋಡಿದಳು, ಲಂಕೇಶ್‌ ನಮ್ಮಮನೆಯ ಕಡೆ ಬರುತ್ತಿದ್ದರು ಎಂದು ಹೇಳಿದ ಅವಳ ಖುಷಿ ಹೇಳ ತೀರದು, “ನಮ್ಮ ಮನೆಗೆ ಲಂಕೇಶ್”ಎಂದು ಓಡಿ ಬಂದು ಒಳಗೆ ಹೇಳಿದಳು ನನಗೆ ಎದೆ ಢವಢವ, ಛೇ ಮನೆ ಚೆನ್ನಾಗಿ ಓರಣವಾಗಿಟ್ಟಿದ್ದೇನೆ, ಆದರೆ ಅವರಿಗೆ ತಿನ್ನಲು ಕುಡಿಯಲು ಏನು ಕುಡಿಯಲು ಕೊಡುವುದು ಎನ್ನುವ ಬಗ್ಗೆ ತಲೆ ಕೆಡಿಸಿಕೊಂಡು ಅಡುಗೆ ಮನೆ ಸೇರಿದೆ. ಅಮ್ಮ ಅವರಿಗೆ ಟೀ ಕಾಫಿ ಎಂದು ಕೇಳಿದರು ಕಾಫಿ ಆದರೆ ಒಳ್ಳೆಯದು ಎಂದರು ಕಾಫಿ ಮಾಡಿ ಅಮ್ಮ ಹಾಲು ಜಾಸ್ತಿ ಬೆರೆಸಿ ಕೊಟ್ಟರು ಅದನ್ನು ನೋಡಿದ ಕೂಡಲೇ ಲಂಕೇಶರು, “ಇದು ಹಾಲು ಜಾಸ್ತಿಯಾಯ್ತು ಇನ್ನು ಸ್ವಲ್ಪ ಕಾಪಿ ಪುಡಿ ಹಾಕಿ ಕುದಿಸಿ ಕೊಡಿ“ ಎಂದರು. ಅಮ್ಮ ಕೂಡಲೇ ಅದನ್ನ ಮತ್ತೆ ರೀಮೇಕ್ ಮಾಡಿ ತಂದು ಕೊಟ್ಟಾಗ ಯಾವ ಹಮ್ಮು ಬಿಮ್ಮ ಇಲ್ಲದೆ ಮಾತನಾಡುತ್ತಾ ಕಾಫಿ ಕುಡಿಯತೊಡಗಿದರು. ಅಷ್ಟರಲ್ಲಿ ನನ್ನ ಮನಸ್ಸಿಗೆ ಬಂದದ್ದು ಮನೆಯಲ್ಲಿದ್ದ ಕ್ಯಾಮೆರಾ, ಅದರಲ್ಲಿ ರೀಲ್‌ ಇದೆಯಾ ಎಂದು ನೋಡಿದೆ ಇರಲಿಲ್ಲ. ಅಕ್ಕನಿಗೆ ಹೇಳಿ ಐದೇ ನಿಮಿಷ ಬಂದೆ ಎಂದು ಹೇಳಿ ಬಿಡಿಎ ಕಾಂಪ್ಲೆಕ್ಸ್ನಲ್ಲಿದ್ದ ಸ್ಟುಡಿಯೋದಿಂದ ರೀಲ್ ಹಾಕಿಸಿ ತಂದೆ. ಅಷ್ಟರಲ್ಲಿ ಅವರಿನ್ನೂ ಕಾಫಿಕುಡಿದು ಬಟ್ಟಲು ಕೆಳಗಿರಿಸುತ್ತಿದ್ದರು, ನನ್ನ ಮುಖದಲ್ಲಿ ಇಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಕ್ಯಾಮರಾ ಹಿಡಿದು“ಒಂದು ಫೋಟೋ ತೆಗೆದುಕೊಳ್ಳಲೇ”ಎಂದೆ “ಓ ಅಗತ್ಯವಾಗಿ”ಅಂತ ನಗುತ್ತಾ “ಕ್ಯಾಮರಾದಲ್ಲಿ ರೀಲು ಮೊದಲೇ ಇತ್ತಾ”ಎಂದರು. “ಇಲ್ಲ ಈಗ ಹಾಕಿಸಿ ತಂದೆ”ಎಂದೆ ಅವರ  ಕಣ್ಣುಗಳಲ್ಲಿ ಆಶ್ಚರ್ಯ  ಸಂತೋಷ ಎರಡೂ ಇಣುಕಿತ್ತು. 


“ಇಷ್ಟು ಬೇಗ ನೀನು ಹೋಗಿ ರೀಲು ಹಾಕಿಸಿ ತಂದೆಯಾ. ಗುಡ್. ಹೆಣ್ಣು ಮಕ್ಕಳೆಂದರೆ ಹೀಗೆ ಇರಬೇಕು, ಸಬಲರಾಗಿರಬೇಕು, ಧೈರ‍್ಯವಂತರಾಗಿರಬೇಕು”ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ಫೋಟೋಗೆ ಪೋಸು ಕೊಟ್ಟರು, ನಾನು ಎಲ್ಲರ ಫೋಟೋ ತೆಗೆದೆ. ನಾನು ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ವಿಷಯ ತಲೆಗೆ ಬಂದಿರಲೇ ಇಲ್ಲ ಅಥವಾ ಅಕ್ಕನಿಗೆ ಅಮ್ಮನಿಗೆ ಕೂಡ, ಅವರೇ ಕರೆದು ಯಾಕೆ ನೀನು ಬಾ ಫೋಟೋಗೆ ಅಂತ ಕರೆದು ಪಕ್ಕದಲ್ಲಿ ಕೂರಿಸಿಕೊಂಡು ಫೋಟೋಗೆ ನೀಡಿದ ಪೋಸು ನಾನೆಂದೂ ಮರೆಯಲಾಗದಕ್ಷಣ. 


“ಹೆಣ್ಣು ಮಕ್ಕಳು ಓದಬೇಕು ಸ್ವಾವಲಂಬಿಗಳಾಗಬೇಕು, ಹಾಗಂತ ಗಂಡು ಮಕ್ಕಳು ಎಲ್ಲ ಅವಕಾಶಗಳನ್ನು ಹೆಣ್ಣು ಮಕ್ಕಳಿಗೆ ಬಿಟ್ಟುಕೊಟ್ಟು ಕಡೆಗೆ ಅವರು ಹಕ್ಕಿಗೆ ಹೋರಾಡುವಂತಾಗಬಾರದು”ಎಂದು ನಕ್ಕಿದ್ದರು.


ಹೆಣ್ಣು ಮಕ್ಕಳು ವಿದ್ಯೆಕಲಿಯಬೇಕು, ಸ್ವಾವಲಂಬಿಗಳಾಗಿರಬೇಕು , ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕೊಡಬೇಕು ಎಂಬ ಆಶಯಗಳನ್ನು ಹೊಂದಿದ್ದ ನಮ್ಮ ಅಪ್ಪನ ಚಿಂತನೆಗಳು ನನ್ನಜೀವನ ರೂಪಿಸಿದೆಯೋ ಅದೇ ರೀತಿ ಲಂಕೇಶರ ವಿಚಾರಗಳು ಬಹಳಷ್ಟು ತಿಳುವಳಿಕೆ ಧೈರ‍್ಯಗಳನ್ನು ನನ್ನಲ್ಲಿ ತುಂಬಿದೆ. ಇಂದಿನ ರಾಜಕೀಯ ಕೆಸರೆರಚಾಟದಲ್ಲಿ ಅವರನ್ನು ನೆನಪಿಸಿಕೊಳ್ಳದ ದಿನಗಳಿಲ್ಲ. ಅವರು ನಮ್ಮಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದರು, 


ಪಿ.ಲಂಕೇಶ್‌ ಅವರೊಂದಿಗೆ ಲೇಖಕಿ ಕೆ.ಬಿ.ನೇತ್ರಾವತಿ