ಜಿಲ್ಲೆಯಾದ್ಯಂತ ಯಶಸ್ವಿ ಲಸಿಕಾ ಮೆಗಾ ಮೇಳ ಅರಿವು ಮೂಡಿಸಿದ ಡಿಸಿ ವೈ.ಎಸ್.ಪಾಟೀಲ್
ಜಿಲ್ಲೆಯಾದ್ಯಂತ ಯಶಸ್ವಿ ಲಸಿಕಾ ಮೆಗಾ ಮೇಳ
ಅರಿವು ಮೂಡಿಸಿದ ಡಿಸಿ ವೈ.ಎಸ್.ಪಾಟೀಲ್
ತುಮಕೂರು: ಜಿಲ್ಲೆಯಾದ್ಯಂತ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಮೆಗಾ ಮೇಳ ಕಾರ್ಯಕ್ರಮದಲ್ಲಿ ಸಂಜೆ ೬ ಗಂಟೆಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.
ಜಿಲ್ಲೆಯಲ್ಲಿ ಆಯ್ದ ಶಾಲೆ ಹಾಗೂ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ ೭ ಗಂಟೆಯಿAದಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಲಸಿಕೆ ನೀಡಲು ಸಜ್ಜಾಗಿದ್ದು ಸಂಜೆಯವರೆಗೂ ನಿರಂತರವಾಗಿ ಲಸಿಕೆ ನೀಡುವ ಕಾರ್ಯ ನಿರ್ವಹಿಸಿದ್ದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೧,೧೧,೨೦೮ ಜನರಿಗೆ ಲಸಿಕೆ ನೀಡಲಾಗಿದೆ.
ಮೆಗಾ ಲಸಿಕಾ ಮೇಳ ಕಾಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ಕಾಗಿ ಸುಮಾರು ೪೬೦ ಲಸಿಕಾ ಕೇಂದ್ರಗಳನ್ನು ತೆರೆದು ಹೋಬಳಿ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ೫೦ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಲಸಿಕೆ ಪಡೆಯಲು ಬೆಳಗ್ಗಿನಿಂದಲೇ ಜನರು ಸಾಲಿನಲ್ಲಿ ನಿಂತು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಸಿಕೆಯನ್ನು ಪಡೆದರು.
ಈ ಲಸಿಕಾ ಮೇಳದಲ್ಲಿ ಜಿಲ್ಲೆಯ ತುಮಕೂರು ೨೯ ಸಾವಿರ, ಶಿರಾ ೧೪ ಸಾವಿರ, ತಿಪಟೂರು ೧೨ ಸಾವಿರ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ ಮತ್ತು ಗುಬ್ಬಿಯಲ್ಲಿ ೧೧ ಸಾವಿರ, ಕೊರಟಗೆರೆ-೮೦೦೦, ಪಾವಗಡ-೧೦೦೦೦, ತುರುವೇಕೆರೆ-೮೦೦೦ ಸೇರಿದಂತೆ ಒಟ್ಟು ೧,೨೫,೦೦೦ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು.
ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ೧೧೫೫೫, ಗುಬ್ಬಿ ತಾಲೂಕಿನಲ್ಲಿ ೧೧೯೬೪, ಕೊರಟಗೆರೆ ತಾಲೂಕಿನಲ್ಲಿ ೭೨೯೨, ಕುಣಿಗಲ್ ತಾಲೂಕಿನಲ್ಲಿ ೧೦೦೨೭, ಮಧುಗಿರಿ ತಾಲೂಕಿನಲ್ಲಿ ೭೪೭೫, ಪಾವಗಡ ತಾಲೂಕಿನಲ್ಲಿ ೬೨೪೦, ಶಿರಾ ತಾಲೂಕಿನಲ್ಲಿ ೧೩೦೬೫, ತಿಪಟೂರು ತಾಲೂಕಿನಲ್ಲಿ ೧೩೮೭೧, ತುಮಕೂರು ತಾಲೂಕಿನಲ್ಲಿ ೨೧೨೭೧, ತುರುವೇಕೆರೆ ತಾಲೂಕಿನಲ್ಲಿ ೮೪೪೮ ಸೇರಿದಂತೆ ಒಟ್ಟು ೧,೧೧,೨೦೮ ಮಂದಿಗೆ ಲಸಿಕೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಂದ ಮನೆ-ಮನೆ ಭೇಟಿ ನೀಡಿ ಅರಿವು:
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಶುಕ್ರವಾರ ಪಾವಗಡ ಪಟ್ಟಣ, ಕೊರಟಗೆರೆ ತಾಲ್ಲೂಕಿನ ತುಂಬಾಡಿ, ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಯಾವುದೇ ಆತಂಕ ಪಡದೆ ಲಸಿಕೆ ಪಡೆಯಬೇಕೆಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನಂತರ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಲಸಿಕಾ ಮೆಗಾ ಮೇಳದ ಯಶಸ್ವಿಗಾಗಿ ಎಲ್ಲಾ ತಾಲ್ಲೂಕಿನ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಶೇಖರಿಸಲಾಗಿತ್ತು. ನಿಗದಿಪಡಿಸಿದ ಲಸಿಕೆ ನೀಡುವ ಗುರಿಯನ್ನು ಸಾಧಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ರೋಟರಿ ಸಂಸ್ಥೆ, ರೆಡ್‌ಕ್ರಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಇದ್ದರು.