ಡಿಕೆಶಿ ಹಂಬಲದ ಪಾದಯಾತ್ರೆಗೆ ಚಾಲನೆ ಕಾವೇರಿ-ಅರ್ಕಾವತಿ ಸಂಗಮದಿಂದ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು

dk-shivakumar-congress-padayatre

ಡಿಕೆಶಿ ಹಂಬಲದ ಪಾದಯಾತ್ರೆಗೆ ಚಾಲನೆ  ಕಾವೇರಿ-ಅರ್ಕಾವತಿ ಸಂಗಮದಿಂದ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು

 

ಡಿಕೆಶಿ ಹಂಬಲದ ಪಾದಯಾತ್ರೆಗೆ ಚಾಲನೆ

ಕಾವೇರಿ-ಅರ್ಕಾವತಿ ಸಂಗಮದಿಂದ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರು

ಕನಕಪುರ: ಮೇಕೆದಾಟು ಜಲಾಶಯ ಯೋಜನೆ ಜಾರಿಗೆ ಆಗ್ರಹಿಸಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ “ನೀರಿಗಾಗಿ ನಡಿಗೆ” ಪಾದಯಾತ್ರೆಗೆ ಭಾನುವಾರ ಇಲ್ಲಿನ ಕಾವೇರಿ ಸಂಗಮ ಸ್ಥಳದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಾದ ಎಸ್.ಆರ್.ಪಾಟೀಲ್, ಕೆ.ಎನ್.ರಾಜಣ್ಣ, ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ಏಕೈಕ ಸಂಸದ ಡಿ.ಕೆ.ಸುರೇಶ್, ಸೇರಿದಂತೆ ಹಾಗೂ ಪಕ್ಷದ ಬಹುತೇಕ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗವಹಿಸಿದ್ದ ಸಮಾರಂಭವನ್ನು ಗಿಡಗಳಿಗೆ ನೀರು ಹನಿಸುವ ಹಾಗೂ ಡೋಲು ಬಡಿಯುವ ಮೂಲಕ ಪಾದಯಾತ್ರೆ ಆರಂಭಗೊಂಡಿತು.

ಕೋವಿಡ್ ಸೋಂಕು ಹೆಚ್ಚಿನ ವೇಗದಲ್ಲಿ ಹರಡುವುದನ್ನು ನಿಯಂತ್ರಿಸಲೆಂದು ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯ ಕರ್ಫ್ಯೂ ಹಾಗೂ ಸರ್ಕಾರದ ವಿರೋಧವನ್ನು ಲೆಕ್ಕಿಸದೇ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದ್ದು, ಪಾದಯಾತ್ರೆಯನ್ನು ನೇರವಾಗಿ ತಡೆಯದೇ ಹೋದರೂ ನಿಯಮಾನುಸಾರ  ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.

ಭಾನುವಾರ ಬೆಳಿಗ್ಗೆ ಮೇಕೆ ದಾಟುಗೆ ಹೋಗುವ ಹಾದಿಯಲ್ಲಿ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಮಹಾಕವಿ ಕುವೆಂಪು ಅವರ 'ಉಳುವ ಯೋಗಿಯ ನೋಡಲ್ಲಿ' ಮತ್ತು “ಪಾದಯಾತ್ರೆ ಆಗಿರುವುದರಿಂದ ಹೆಜ್ಜೆ ಹಾಕುತ್ತೇವೆ ನಾವು ಎಂಬ ಹಾಡುಗಳನ್ನು ಕಲಾವಿದರು ಹಾಡಿದರು. ಸೇರಿದ್ದ ಜನರು ಹಸಿರು ಶಾಲುಗಳನ್ನು ಬೀಸುತ್ತಾ ಬೆಂಗಳೂರಿಗೆ ನೀರಿಗಾಗಿ, ರೈತರ ನೀರಿಗಾಗಿ, ನಮ್ಮ ಹೋರಾಟ ಎಂದು ಘೋಷಣೆ ಕೂಗಿದರು.

ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿ, ಇದು ಅತ್ಯಂತ ಮಹತ್ವದ ಕಾರ್ಯಕ್ರಮ. ಅತ್ಯುಪಯುಕ್ತ ಯೋಜನೆ ಅನುಷ್ಠಾನಕ್ಕಾಗಿ ಅನುಷ್ಠಾನದ ಶೀಘ್ರ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ನಡಿಗೆ. ರಾಜ್ಯ, ಕೇಂದ್ರ ಸರಕಾರಗಳು ಇದಕ್ಕೆ ಸ್ಪಂದಿಸಬೇಕು. ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.

ಆದಿ ಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವು ಗುರುಗಳು ಕುಂಡಗಳಲ್ಲಿದ್ದ ಸಸಿಗಳಿಗೆ ನೀರೆರೆದರು.ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ನೀರಿಗಾಗಿ ಹೋರಾಟಕ್ಕೆ ಬದ್ಧ ಎಂಬ ಸಂದೇಶ ಸಾರಿದರು. ಕಾಂಗ್ರೆಸ್ ಕಾರ್ಯಕರ್ತೆಯರು ವೇದಿಕೆ ಸನಿಹ ಇದ್ದ ಕೊಡಗಳಿಗೆ ಸಂಗಮದ ನೀರನ್ನು ತಂದು ತುಂಬಿದರು. ಈ ನೀರು ಪಾದಯಾತ್ರೆಯೊಂದಿಗೆ ರಾಜಧಾನಿ ತಲುಪಲಿದೆ.

ಪಾದಯಾತ್ರೆ ನೇತೃತ್ವ ವಹಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಸ್ಕ್‌ ಧರಿಸದೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಲವು ಕಾರ್ಯಕರ್ತರು ಕೂಡಾ ಮಾಸ್ಕ್‌ ಧರಿಸದೆ ಒಟ್ಟು 11 ದಿನಗಳ ಕಾಲ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಮೊದಲನೇ ದಿನ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ವಾಸ್ತವ್ಯ, ಕೊನೆಯ ದಿನದಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ.

ಮೇಕೆದಾಟು ಜಲಾಶಯ ನಿರ್ಮಾಣದಿಂದ ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದು  ಹೋಗುವ ಕಾವೇರಿ ನೀರನ್ನು ಅಲ್ಲಿ ಸಂಗ್ರಹಿಸಿ ತಮಿಳುನಾಡಿನ ಪಾಲನ್ನು ನಿಗದಿತ ಕಾಲದಲ್ಲಿ ಆ ರಾಜ್ಯಕ್ಕೆ  ಹರಿಸಲು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿಯೇ ಈ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಕಟಿಸಿದೆ.

ಆಯ ತಪ್ಪಿ ಉರುಳಿ ಬಿಜೆಪಿ ಬಾಯಿಗೆ ಬಿದ್ದರು!?

ನದಿಯಲ್ಲಿ ಮಿಂದು ಮಡಿಯುಟ್ಟ ಡಿ.ಕೆ.ಶಿವಕುಮಾರ್ ಕಾವೇರಿ ನದಿಗೆ ಪೂಜೆ ಸಲ್ಲಿಸಿದರು. ಪೂಜೆ ಮಾಡಲು ಕುಳಿತುಕೊಳ್ಳುವ ಸಂದರ್ಭದಲ್ಲಿ ಅವರು ಆಯತಪ್ಪಿ ಉರುಳಿದರು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಡಿತು. ಈ ದೃಶ್ಯವನ್ನು  ಬಿಜೆಪಿ ಡಿಕೆಯವರನ್ನು ವ್ಯಂಗ್ಯವಾಗಿ ಟೀಕಿಸಲು ಬಳಸಿಕೊಂಡಿದೆ.

ಸಂಗಮದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ರಾಷ್ಟ್ರ ಧ್ವಜ, ಕಾಂಗ್ರೆಸ್ ಧ್ವಜ, ಕನ್ನಡ ಧ್ವಜಗಳ ಜೊತೆಗೆ ಪಾದಯಾತ್ರೆಗಾಗಿಯೇ ವಿನ್ಯಾಸಗೊಳಿಸಿರುವ ಮತ್ತೆರಡು ಧ್ವಜಗಳು ಹಾರಾಡುತ್ತಿದ್ದವು. ಕಳಸಗಳನ್ನು ಪೂಜಿಸಲಾಗಿತ್ತು. ಎರಡು ದಿನಗಳಿಂದ ಈ ಸ್ಥಳವು ಹೆಚ್ಚೂ ಕಡಿಮೆ ವಿವಿಧ ಪೂಜಾ ಕ್ರಿಯೆಗಳ ಕೇಂದ್ರವಾಗಿ ಮಾರ್ಪಟ್ಟಿತ್ತು.