ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ  ಡಾ.ಎನ್.ಎಸ್.ಜಯಕುಮಾರ್ ನೇಮಕ ಆಗಬಾರದೇಕೆ

n-s-jayakumar-arya-vysya-nigama

ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ  ಡಾ.ಎನ್.ಎಸ್.ಜಯಕುಮಾರ್ ನೇಮಕ ಆಗಬಾರದೇಕೆ

ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ 
ಡಾ.ಎನ್.ಎಸ್.ಜಯಕುಮಾರ್ ನೇಮಕ ಆಗಬಾರದೇಕೆ


ತುಮಕೂರು: ನಾಡಿನ ಆರ್ಯ ವೈಶ್ಯ ಸಮುದಾಯವು ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ವಾಣಿಜ್ಯ ರಂಗದ ಅಭಿವೃದ್ಧಿಗೆ ನೀಡುತ್ತಿರುವ ಗಣನೀಯ ಕೊಡುಗೆಗೆ ಹೋಲಿಸಿದಲ್ಲಿ ಆ ಸಮುದಾಯಕ್ಕೆ ದೊರಕಿರುವ ರಾಜಕೀಯ ಪ್ರಾತಿನಿಧ್ಯ ತೀರಾ ಅಲ್ಪ ಎಂದೇ ಹೇಳಬೇಕು.


ವಿಧಾನ ಸಭೆ ಮತ್ತು ಲೋಕ ಸಭಾ ಚುನಾವಣೆಗಳಿರಲಿ ಪುರಸಭೆ, ನಗರಸಭೆ ಮತ್ತು ಮಹಾನಗರಪಾಲಿಕೆ ಚುನಾವಣೆಗಳಲ್ಲೂ ತನ್ನ ಸಮುದಾಯದ ಸಂಖ್ಯಾ ಬಲವನ್ನು ಆಧರಿಸಿ ಚುನಾವಣೆಗಳಿಗೆ ಸ್ಪರ್ಧಿಸುವುದು ಆರ್ಯವೈಶ್ಯರಿಗೆ ಕನಸಿನ ಮಾತೇ ಸರಿ. ಹಿಂದೆ ಬಂದರೆ ಹಾಯದ ಮುಂದೆ ಬಂದರೆ ಒದೆಯದ ಪುಣ್ಯಕೋಟಿ ಎಂದೇ ಭಾವಿಸಲಾಗಿರುವ ಆರ್ಯ ವೈಶ್ಯ ಸಮುದಾಯವು ಪರಂಪರಾಗತ ವ್ಯಾಪಾರ, ವಾಣಿಜ್ಯೋದ್ಯಮಗಳಲ್ಲೇ ಮುಂದುವರೆದಿರುವುದೇ ಕಾರಣವಾಗಿ ವ್ಯವಹಾರವನ್ನು ನಿರ್ವಹಿಸುವ ಮಟ್ಟಿಗೆ ಸೀಮಿತ ಶಿಕ್ಷಣ ಪಡೆಯುತ್ತಿರುವುದರಿಂದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ನಂಥ ವೃತ್ತಿ ಪರ ಶಿಕ್ಷಣ ಹೊಂದುತ್ತಿರುವವರ ಸಂಖ್ಯೆಯೂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದುವರೆದ ಜನಾಂಗ ಎಂಬುದೊಂದು ಹಿರಿಮೆ ಬಿಟ್ಟರೆ ಸಮಕಾಲೀನ ರಾಜಕೀಯ ಸನ್ನಿವೇಶದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ  ಎಂಬಂತಾಗಿದೆ ಈ ವೈಶ್ಯ ಸಮುದಾಯ.


ಎರಡೂವರೆ ಸಾವಿರ ವರ್ಷದ ಹಿಂದೆ ಈ ನೆಲದಲ್ಲಿ ಸಾಮಾಜಿಕ ಪರಿವರ್ತನೆಗೆ ನಾಂದಿಹಾಡಿದ ಗೌತಮ ಬುದ್ಧನ ಧರ್ಮ ನೆಲೆಗೊಳ್ಳಲು ಹಾಗೂ ದೇಶದಾದ್ಯಂತ ಮತ್ತು ನೆರೆ ದೇಶಗಳಲ್ಲೂ ಹರಡಲು ಪ್ರಾರಂಭಿಕ ಹಂತದಲ್ಲಿ ಈ ವೈಶ್ಯ ಸಮುದಾಯ ನೀಡಿದ ಪೋಷಣೆಯೂ ಮುಖ್ಯ ಕಾರಣ. ಹೀಗೆ ಎಲ್ಲ ಕಾಲದಲ್ಲೂ ಧರ್ಮಗಳನ್ನು ಪೋಷಿಸುತ್ತಾ ಬಂದ ಆರ್ಯವೈಶ್ಯ ಸಮುದಾಯವು ರಾಜಕೀಯವಾಗಿ ತೀರಾ ಹಿಂದುಳಿದಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ.


ಕರ್ನಾಟಕದ ಮಟ್ಟಿಗೆ ಬಿಜೆಪಿಯಲ್ಲಿ ಶಿವಮೊಗ್ಗದಿಂದ ಡಿ.ಹೆಚ್.ಶಂಕರಮೂರ್ತಿ ಹಾಗೂ ಹುಣಸೂರಿನಿಂದ ಕಾಂಗ್ರೆಸ್‌ನಿAದ ಹೆಚ್.ಪಿ.ಮಂಜುನಾಥ್ ಆರ್ಯ ವೈಶ್ಯ ಸಮುದಾಯದಲ್ಲಿ ಎದ್ದು ಕಾಣುವಂತ ಇಬ್ಬರು ರಾಜಕಾರಣಿಗಳು. ಡಿ.ಹೆಚ್.ಶಂಕರಮೂರ್ತಿಯವರು ರಾಜಕೀಯವಾಗಿ ತೆರೆಗೆ ಸರಿದ ಬಳಿಕ ಅವರ ಪುತ್ರ ಡಿ.ಎಸ್.ಅರುಣ್ ಎರಡು ದಶಕಗಳ ಸುದೀರ್ಘ ಅವಧಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪದಾಧಿಕಾರಿಯಾಗಿ, 2019ರ ಅಕ್ಟೋಬರ್‌ನಿಂದ ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು ಪ್ರಸ್ತುತ ಕಳೆದ ತಿಂಗಳು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಗುರುವಾರ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ಬಿಜೆಪಿಯ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿಯಡಿ ಡಿ.ಎಸ್.ಅರುಣ್ ಅವರು ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡುವುದಾದಲ್ಲಿ ಅವರ ರಾಜಿನಾಮೆಯಿಂದ ತೆರವಾಗುವ ಈ ಸ್ಥಾನಕ್ಕೆ ತುಮಕೂರಿನ ಹೆಸರಾಂತ ಸಹಕಾರಿ ಹಾಗೂ ದಾನಿ ಡಾ.ಎನ್.ಎಸ್.ಜಯಕುಮಾರ್ ಅವರನ್ನು ನೇಮಿಸುವುದು ಸೂಕ್ತ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ.


ಎನ್.ಎಸ್.ಜಯಕುಮಾರ್ ಅವರು, ತುಮಕೂರು ನಗರ ಹಾಗೂ ರಾಜ್ಯದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ವೈಶ್ಯ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಆ ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದ ಹಾಗೂ ಆನಂತರ ತುಮಕೂರು ಮರ್ಚೆಂಟ್ಸ್ ಸಹಕಾರ ಸಂಘ (ಟಿಎಂಸಿಸಿ)ಯ ಸಂಸ್ಥಾಪಕ ಅಧ್ಯಕ್ಷರಾಗಿ ಒಂದೂವರೆ ದಶಕದಿಂದ ಸದರಿ ಹಣಕಾಸು ಸಂಸ್ಥೆಯನ್ನು ಅತ್ಯಂತ ದಕ್ಷವಾಗಿ ಮುನ್ನಡೆಸಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿದ್ದೇ ಅಲ್ಲದೇ, ವಿನೂತನ ಯೋಜನೆಗಳು ಮತ್ತು ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಅತಿ ಹೆಚ್ಚಿನ ಲಾಭಕ್ಕೆ ಒಯ್ದಿದ್ದಾರೆ. ಜೊತೆಗೆ ಸಂಕಷ್ಟದಲ್ಲಿದ್ದ ಶಾರದಾ ಮಹಿಳಾ ಸಹಕಾರ ಬ್ಯಾಂಕ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇವರ ನಾಯಕತ್ವದಲ್ಲಿ ಈ ಬ್ಯಾಂಕು ಕೂಡಾ ಮುಂದೊAದು ದಿನ ಉನ್ನತ ಹಂತ ತಲುಪಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರದ ‘ಸಹಕಾರ ರತ್ನ’ ಮಾತ್ರವಲ್ಲದೇ ದೇಶದ ಅನೇಕ ಪ್ರತಿಷ್ಟಿತ ವಾಣಿಜ್ಯ ಸಂಸ್ಥೆಗಳು ಇವರ ದಕ್ಷತೆಯನ್ನು ಗುರುತಿಸಿ ಗೌರವಿಸುತ್ತಿವೆ.


ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿದ್ದರೂ ಶೇ.30ರಷ್ಟು ಜನಸಂಖ್ಯೆ ಇನ್ನೂ ಬಡವರಾಗೇ ಉಳಿದಿರುವ ಆರ್ಯವೈಶ್ಯ ಸಮುದಾಯದ ಏಳಿಗೆ ಹಾಗೂ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಡಾ.ಎನ್.ಎಸ್.ಜಯಕುಮಾರ್ ಅವರನ್ನು ನೇಮಕ ಮಾಡಿದಲ್ಲಿ ಅವರ ನಿಸ್ಪೃಹ ಸೇವೆಯು ಸಮುದಾಯಕ್ಕೆ ದೊರಕುವಂತಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಖಾತೆಗಳ ಮಂತ್ರಿ ಜೆ.ಸಿ.ಮಾಧುಸ್ವಾಮಿಯವರು ಹಾಗೂ ಜಿಲ್ಲೆಯ ಮತ್ತೊಬ್ಬ ಜನಾನುರಾಗಿ ಮಂತ್ರಿ ಹೆಚ್.ಸಿ.ನಾಗೇಶ್ ಹಾಗೂ ಜಿಲ್ಲೆಯ ಶಾಸಕರು ಹಾಗೂ ಸಂಸದರು ಅವರು ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಎನ್.ಎಸ್.ಜಯಕುಮಾರ್ ಅವರನ್ನು ನೇಮಿಸುವಂತೆ ಜಿಲ್ಲೆ ಹಾಗೂ ಆರ್ಯ ವೈಶ್ಯ ಸಮುದಾಯದ ಪರವಾಗಿ ಸರ್ಕಾರವನ್ನು ಆಗ್ರಹಪಡಿಸಬೇಕಿದೆ.