ಸಾಮ್ರಾಜ್ಯಶಾಹಿ ಕ್ರೌರ್ಯವೂ - ಯುದ್ಧಕೋರ ಮನಸ್ಥಿತಿಯೂ ; ಸರ್ವನಾಶದ ಹಾದಿಯೂ - ಆಧಿಪತ್ಯದ ಹಂಬಲವೂ

ಯುದ್ಧ ಪರಂಪರೆಗೂ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಗೂ ಅವಿನಾಭಾವ ಸಂಬಂಧವಿದೆ ವಿನಾಶಕಾರಿ ಯುದ್ಧವನ್ನು ತಡೆಗಟ್ಟುವ ಮನಸ್ಸೂ ಇಲ್ಲದ ಅನಾಗರಿಕ ಜಗತ್ತಿನ ದರ್ಶನ

ಸಾಮ್ರಾಜ್ಯಶಾಹಿ ಕ್ರೌರ್ಯವೂ - ಯುದ್ಧಕೋರ ಮನಸ್ಥಿತಿಯೂ ;     ಸರ್ವನಾಶದ ಹಾದಿಯೂ - ಆಧಿಪತ್ಯದ ಹಂಬಲವೂ

 

 

ನಾ ದಿವಾಕರ

 

ಭಾಗ 1

 

     ಯುದ್ಧ ಎಂದರೆ ಅಮಾಯಕರ ಸಾವು ನೋವು ಮತ್ತು ಸಂಪತ್ತಿನ ಒಡೆಯರ ವಿಜೃಂಭಣೆ. ಸಾಮಾಜಿಕ ನೆಲೆಯಲ್ಲಿ ನೋಡಿದಾಗ ಯುದ್ಧ ಎನ್ನುವುದು ಸಾವನ್ನು ಸಂಭ್ರಮಿಸುವ ಮನುಷ್ಯ ಕುಲದ ಕ್ರೂರ ಪ್ರಕ್ರಿಯೆ. ಸಾವು ಯಾರದು ಎನ್ನುವುದು ಸಂಭ್ರಮಿಸುವವರು ಯಾರು ಎನ್ನುವುದನ್ನೂ ನಿರ್ಧರಿಸುತ್ತದೆ. ಪಶ್ಚಾತ್ತಾಪ, ಪರಿತಾಪ ಅಥವಾ ಅನುಕಂಪ ಎಂಬ ಔದಾತ್ಯಗಳನ್ನೇ ಕಾಣದ ಮಾನವ ಸಮಾಜದ ಒಂದು ವರ್ಗ ತನ್ನ ಆಧಿಪತ್ಯವನ್ನು ಸಾಧಿಸುವ ಸಲುವಾಗಿ ಮತ್ತೊಂದು ಜನಾಂಗವನ್ನು, ಸಮಾಜ-ಸಮುದಾಯಗಳನ್ನು, ಭೌಗೋಳಿಕ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಲು ಅನುಸರಿಸುವ ಒಂದು ವಿಧಾನ ʼ ಯುದ್ಧ ʼ ಈ ಕ್ರೌರ್ಯದ ಅನಾವರಣಕ್ಕೆ ಅಗತ್ಯವಾದ ಕ್ಷಾತ್ರ ಗುಣ, ಧೈರ್ಯ ಶಕ್ತಿ ಶಸ್ತ್ರಾಸ್ತ್ರಗಳ ಬಲ ಮತ್ತು ಅಧಿಪತ್ಯದ ಹಂಬಲ ಇವೆಲ್ಲವನ್ನೂ ಮಾನವ ಸಮಾಜ ಕ್ರೌರ್ಯ ಎಂದು ಪರಿಭಾವಿಸಿರುವುದು ಚರಿತ್ರೆಯಲ್ಲಿ ಕಾಣುವುದು ಅಪರೂಪ.

 

       ಸಾಮ್ರಾಟ್‌ ಅಶೋಕ, ಅಲೆಕ್ಸಾಂಡರ್‌ ಯುಗದಿಂದ ಡಿಜಿಟಲ್‌ ಯುಗದ ಟ್ರಂಪ್‌-ನೇತನ್ಯಾಹುವರೆಗೂ ಕಾಣಬಹುದಾದ ಒಂದು ಸಮಾನ ಲಕ್ಷಣ ಎಂದರೆ ಈ ಯುದ್ಧ ಪರಂಪರೆಯನ್ನು ವೈಭವೀಕರಿಸಿ, ಸಾವು ನೋವುಗಳನ್ನು ಸಂಭ್ರಮಿಸುವ ಕ್ರೂರ ಮನಸ್ಥಿತಿ. ಪಶ್ಚಾತ್ತಾಪದಿಂದ ಈ ಕ್ರೂರ ಪರಂಪರೆಯನ್ನು ತೊರೆದು, ಶಾಂತಿ ಸೌಹಾರ್ದತೆಯ ಹಾದಿಯನ್ನು ಕ್ರಮಿಸಿದ ಏಕೈಕ ಉದಾಹರಣೆ ಮೌರ್ಯ ಸಾಮ್ರಾಟ್‌ ಅಶೋಕ ಮಾತ್ರ. ಆದರೂ ಈ ಪಶ್ಚಾತ್ತಾಪದ ನಡೆ ಕಳಿಂಗ ಯುದ್ಧದಲ್ಲಿ ಮಡಿದ ಸಾವಿರಾರು ಅಮಾಯಕರಿಗೆ ನ್ಯಾಯ ಒದಗಿಸುವುದಿಲ್ಲ. ಮತ್ತೊಂದು ಕಳಿಂಗ ನಡೆಯುವುದಿಲ್ಲ ಎಂಬ ಭರವಸೆಯಷ್ಟೇ. ಈ ಚಾರಿತ್ರಿಕ ಔದಾತ್ಯದ ಹೊರತಾಗಿಯೂ ಆಧುನಿಕ ವಿಶ್ವದ ಇತಿಹಾಸದಲ್ಲಿ                                ʼ ಕಳಿಂಗ ʼ ಗಳು ಸಂಭವಿಸುತ್ತಲೇ ಇವೆ. ರೋಮ್‌ ಸಾಮ್ರಾಜ್ಯಶಾಹಿಯ ಪಳೆಯುಳಿಕೆಗಳು ಜೀವಂತವಾಗಿವೆ. ಮಾನವ ಕುಲ ಸಾವನ್ನು ಸಂಭ್ರಮಿಸುವ ಯುದ್ಧ ಪರಂಪರೆಯನ್ನು ಕೈಬಿಟ್ಟಿಲ್ಲ.

 

ಆಧುನಿಕ ಸಮಾಜ-ಪ್ರಾಚೀನ ಮನಸ್ಥಿತಿ

 

      ಆಧುನಿಕ ನಾಗರಿಕತೆ (Modern Civilisation) ಮತ್ತು ನಾಗರಿಕ ಸಮಾಜಗಳ (Civil Societies) ಪ್ರಗತಿಯ ಹಾದಿಯನ್ನು ನೋಡಿದಾಗ, ಬೌದ್ಧಿಕವಾಗಿ ಮನುಷ್ಯ ಸಮಾಜದಲ್ಲಿ ಅಂತರ್ಗತವಾಗಿರುವ ಹಾಗೂ ಪ್ರಬಲ ಆಳುವ ವರ್ಗಗಳು ಅಂತರೀಕರಣಗೊಳಿಸಿಕೊಂಡಿರುವ (Internalised) ಜೀವ ವಿರೋಧಿ ದುಷ್ಟ ಗುಣಗಳನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ನಮ್ಮ ಸಮಾಜಗಳು ಬೆನ್ನು ತಟ್ಟಿಕೊಳ್ಳುವಂತೆ ನಾಗರಿಕತೆ (Civility) ಎಂಬ ಉದಾತ್ತ ಲಕ್ಷಣವನ್ನು ನಾವು ನಿಜಾರ್ಥದಲ್ಲಿ ರೂಢಿಸಿಕೊಂಡಿಲ್ಲ. ಹಾಗಾಗಿಯೇ ಆಂತರಿಕವಾಗಿಯೂ ಸಾವನ್ನು ಸಂಭ್ರಮಿಸುವ, ಹಂತಕರನ್ನು ಗೌರವಿಸುವ, ಕ್ರೌರ್ಯವನ್ನು ವೈಭವೀಕರಿಸುವ ಸಮಾಜಗಳು ಇಂದಿಗೂ ಸಕ್ರಿಯವಾಗಿವೆ.  ಜೀವ ಹತ್ಯೆಯನ್ನು ಖಂಡಿಸುವುದಕ್ಕೂ ಹಿಂಜರಿಯುವ ಕ್ರೂರ ಮನಸ್ಥಿತಿಯೇ, ಅನುಕಂಪ ಸಹಾನುಭೂತಿ ಇಲ್ಲದ ಸಾಮಾಜಿಕ ಕ್ರೌರ್ಯಕ್ಕೆ ಅಡಿಪಾಯವಾಗುತ್ತದೆ.

 

      ಆಧುನಿಕ ಜಗತ್ತು ಈ ಮನಸ್ಥಿತಿಯನ್ನೇ ಸಾರ್ವತ್ರೀಕರಿಸಿರುವುದು ಚಾರಿತ್ರಿಕ ಸತ್ಯ. ಒಂದು ಸಾರ್ವಭೌಮ ದೇಶದ ಸ್ಥಾಪಿತ ನಾಯಕನನ್ನು ಮತ್ತೊಂದು ದೇಶ ಹತ್ಯೆ ಮಾಡುವುದು ಅಥವಾ ಅಪಹರಿಸಿ ಬಂಧನದಲ್ಲಿರಿಸುವುದು 21ನೆ ಶತಮಾನದ ಅವಿಷ್ಕಾರದಂತೆ ಕಾಣುತ್ತದೆ. ವೆನೆಜುಯೆಲಾ ಅಧ್ಯಕ್ಷರನ್ನು ಅಪಹರಿಸಿದ ಅಮೆರಿಕ ಈಗ ಇರಾನ್‌ನ ಪರಮೋಚ್ಛ ನ್ಯಾಯಕನನ್ನು ಹತ್ಯೆ ಮಾಡಿ ಬೆನ್ನುತಟ್ಟಿಕೊಳ್ಳುತ್ತಿದೆ. ಅಯಾತುಲ್ಲಾ ಅಲಿ ಖಮೇನಿ ಅವರ ಸಿದ್ಧಾಂತ ಮತ್ತು ಆಳ್ವಿಕೆಯನ್ನು ತಾತ್ವಿಕ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡುವುದು ಸಾಮಾಜಿಕ ಲಕ್ಷಣ. ಆದರೆ ಭಿನ್ನ ಸಿದ್ದಾಂತದ ಕಾರಣಕ್ಕೇ ಆತನ ಅಸಹಜ ಸಾವನ್ನು ಬಯಸುವುದು ಅಥವಾ ಸಂಭ್ರಮಿಸುವುದು ಅಥವಾ ಹಂತಕರನ್ನು ಖಂಡಿಸದೆ ಇರುವುದು ಯುದ್ಧಕೋರ ಮನಸ್ಥಿತಿಯ ಲಕ್ಷಣ.

 

ಸಾಮ್ರಾಜ್ಯಶಾಹಿಯ ಹೊಸ ಹಾದಿ

 

       ಡಿಜಿಟಲ್‌ ಯುಗ ಈ ಮನಸ್ಥಿತಿಗೆ ಸಾಕ್ಷಿಯಾಗುತ್ತಿದೆ. ತನ್ನ ಮಿಲಿಟರಿ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸುತ್ತಿರುವ ಅಮೆರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಭವಿಷ್ಯದ ಜಗತ್ತಿನ ಭೌಗೋಳಿಕ-ರಾಜತಾಂತ್ರಿಕ ಸಮೀಕರಣಗಳನ್ನೇ ಮರುನಿರ್ವಚನೆಗೊಳಪಡಿಸುತ್ತಿರುವುದು ಸ್ಪಷ್ಟವಾಗುತ್ತಿದೆ. 20ನೆ ಶತಮಾನದ ಸಾಮ್ರಾಜ್ಯಶಾಹಿಯ ಮೂಲ ಗುರಿ ಭೌಗೋಳಿಕ ವಿಸ್ತೀರ್ಣ ಮತ್ತು ನಿಯಂತ್ರಣವಾಗಿತ್ತು. ಭೂಪ್ರದೇಶಗಳನ್ನು ಆಕ್ರಮಿಸಿಕೊಂಡು ಅಲ್ಲಿನ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ಈ ಶತಮಾನ ಸಾಕ್ಷಿಯಾಗಿತ್ತು.  ಡಿಜಿಟಲ್‌ ಯುಗದಲ್ಲಿ ಸಂಪನ್ಮೂಲ ಮತ್ತು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುವ ಆಳ್ವಿಕೆಗಳನ್ನು ಸ್ಥಾಪಿಸುವುದು ಸಾಮ್ರಾಜ್ಯಶಾಹಿಯ ನೂತನ ಮಾದರಿಯಾಗಿದೆ.

 

       ಅಮೆರಿಕ ಮತ್ತು ಇಸ್ರೇಲ್‌ ಮೈತ್ರಿಕೂಟ ಇರಾನ್‌ ಮೇಲೆ ನಡೆಸುತ್ತಿರುವ ಮಾರಣಾಂತಿಕ ದಾಳಿಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಪರಸ್ಪರ ಕೊಲ್ಲುವ, ಪೈಪೋಟಿಯ ಮೇಲೆ ಸಾರ್ವಜನಿಕರ ಬದುಕನ್ನು ನಾಶಪಡಿಸುವ ಮತ್ತು ಸಾಮಾನ್ಯ ಜನರ ಭವಿಷ್ಯದ ಬದುಕನ್ನು ಹೈರಾಣಾಗಿಸುವ ದುಷ್ಟ ಕೃತ್ಯವನ್ನು ಸಾಮಾನ್ಯ ಪರಿಭಾಷೆಯಲ್ಲಿ ʼ ಯುದ್ಧ ʼ ಎಂದು ಕರೆಯುತ್ತೇವೆ. ಆದರೆ ಈ ಪರಸ್ಪರ ದಾಳಿಗಳಿಗೆ ವಿಶೇಷ ಹೆಸರುಗಳನ್ನು ನೀಡುವುದು ಆಧುನಿಕ ನಾಗರಿಕ ಜಗತ್ತಿನ ಒಂದು ವಿಧಾನ. ಅಮೆರಿಕ ಇರಾನ್‌ ಮೇಲಿನ ಆಕ್ರಮಣಕ್ಕೆ ʼ ಆಪರೇಷನ್‌ ಎಪಿಕ್‌ ಫ್ಯೂರಿ ʼ ಎಂದು ಹೆಸರಿಟ್ಟಿದೆ. ಇಸ್ರೇಲ್‌ ʼ ಆಪರೇಷನ್‌ ರೋರಿಂಗ್‌ ಲಯನ್‌ ʼ ಹೆಸರಿನಲ್ಲಿ ಆಕ್ರಮಣ ನಡೆಸುತ್ತಿದೆ.

 

     ಹೆಸರಲ್ಲೇನಿದೆ ? ಉದ್ದೇಶ ಮತ್ತು ಫಲಿತಾಂಶ ಒಂದೇ ಅಮಾಯಕರ ಸಾವು, ಜನಸಾಮಾನ್ಯರ ನೋವು ಮತ್ತು ಸಾಮ್ರಾಜ್ಯಶಾಹಿಯ ಗೆಲುವು. ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಗೆ ಮೊದಲು ತುತ್ತಾದವರು ಪ್ರಪಂಚವನ್ನೇ ಅರಿಯದ  153 ಶಾಲಾ ಮಕ್ಕಳು. ಇರಾನ್‌ನ ಮಿನಾಬ್‌ ಎಂಬಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಈ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇರಾನ್‌ನ ಪ್ರಜೆಗಳು ಎನ್ನುವುದರ ಹೊರತಾಗಿ, ಈ ಮಕ್ಕಳಿಗೂ , ಮಾರುಕಟ್ಟೆ ಆಧಿಪತ್ಯಕ್ಕಾಗಿ ನಡೆಯುವ ಭೀಕರ ಕಾಳಗಕ್ಕೂ ಏನು ಸಂಬಂಧವಿದೆ ? ಈ ನೈತಿಕ ಪ್ರಶ್ನೆಗೆ ವಿಶ್ವದ ಯಾವುದೇ ನಾಯಕರಾದರೂ ಉತ್ತರಿಸಲು ಸಾಧ್ಯವೇ ? “ ಯುದ್ಧಕಾಲದಲ್ಲಿ ಇವೆಲ್ಲಾ ಸಹಜ,,,, ” ಎಂಬ ಸಮಜಾಯಿಷಿ ನೀಡಲಾಗುತ್ತದೆ. ಇದೇ ಪ್ರಮೇಯವನ್ನೂ ಆಂತರಿಕ ಕೋಮು ಗಲಭೆಗಳಲ್ಲೂ, ಜನಾಂಗೀಯ ಹತ್ಯಾಕಾಂಡಗಳಲ್ಲೂ ಅನುಸರಿಸಲಾಗುತ್ತದೆ.

 

ಮನುಷ್ಯ ಜೀವ ಮತ್ತು ಯುದ್ಧದ ಕ್ರೌರ್ಯ

 

      ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುವ ಅಮಾಯಕರ ಜನರ ಆಕಸ್ಮಿಕ-ಅಸಹಜ ಸಾವುಗಳನ್ನು ʼ ಸ್ವಾಭಾವಿಕೀಕರಣಗೊಳಿಸುವ ʼ ( Naturalise) ಈ ಕ್ರೂರ ಮನಸ್ಥಿತಿಯೇ ಯುದ್ಧಗಳನ್ನು ಸ್ವಾಗತಿಸುವ ಮತ್ತು ವಿಜೃಂಭಿಸುವ ವಿಕೃತಿಗಳನ್ನೂ ಸೃಷ್ಟಿಸುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಾಗಿ ವ್ಯಕ್ತಿಯೊಬ್ಬನ ಸಾವನ್ನು ಸಂಭ್ರಮಿಸುವ ಒಂದು ಪರಂಪರೆಗೆ ಮಾನವ ಸಮಾಜ ತೆರೆದುಕೊಂಡಿದ್ದು, ಇಲ್ಲಿ ಕೆಲವರು ಸಾವಿಗೆ  ʼ ಅರ್ಹರಾಗಿಯೇ ʼ ಕಾಣುತ್ತಾರೆ. ಕೆಲವು ದೇಶಗಳು ʼ ವಿನಾಶ ʼ ಕ್ಕೆ ಅರ್ಹವಾಗಿಬಿಡುತ್ತವೆ. ಇನ್ನು ಕೆಲವರ ಸಾವು ವಿಶ್ವಶಾಂತಿಗಾಗಿ ʼಅನಿವಾರ್ಯ ʼ ಅಥವಾ        ʼ ಅಪೇಕ್ಷಣೀಯ ʼ ಆಗಿಬಿಡುತ್ತದೆ. ಈ ಅರ್ಹತೆಯನ್ನು ನಿರ್ಧರಿಸುವವರು ಯಾರು ? ಯಾವ ಮಾನದಂಡಗಳನ್ನು ಆಧರಿಸಲಾಗುತ್ತದೆ ? ಈ ಪ್ರಶ್ನೆಗಳಿಗೆ ಮಾನವ ಸಮಾಜ ಬಹುಶಃ ಉತ್ತರಿಸಲಾರದು.

 

       ಒಂದು ಯುದ್ಧ ನಡೆದರೆ ಈ ಎಲ್ಲ ಮಾನವೀಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಇರಾನ್‌ನ ಪ್ರಾಥಮಿಕ ಶಾಲೆಯ 153 ಹೆಣ್ಣುಮಕ್ಕಳು ಸಾವಿಗೆ ಅಥವಾ ಹತ್ಯೆಗೆ ಹೇಗೆ ಅರ್ಹರಾಗುತ್ತಾರೆ ? ಈ ಮಕ್ಕಳ ದಾರುಣ ಸಾವಿಗಾದರೂ ಮರುಗುವ, ಅನುಕಂಪ ತೋರುವ ಕನಿಷ್ಠ ಸೂಕ್ಷ್ಮ ಪ್ರಜ್ಞೆಯನ್ನೂ ನಾವು ಕಳೆದುಕೊಂಡಿದ್ದೇವೆ ಎಂದರೆ ನಾವಿರುವ ಸಮಾಜವನ್ನು ಹೇಗೆ ನಿರ್ವಚಿಸುವುದು ? ವಿಶ್ವದ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಮನುಷ್ಯರಾಗಿ ನಮ್ಮ ಮರುಕ ಇರಬೇಕಾದ್ದು, ದೇಶಗಳ ಮೇಲೆ ಆಧಿಪತ್ಯ ಸಾಧಿಸುವ ನಾಯಕರ ಬಗ್ಗೆ ಅಲ್ಲ  ಅಥವಾ ಅವರ ವಿಸ್ತರಣಾವಾದದ ಉದ್ದೇಶಗಳಿಗಾಗಿ ಅಲ್ಲ. ಇಂತಹ ನಾಯಕರ ಸ್ವಾರ್ಥ ಸಾಧನೆಗೆ ಬಲಿಯಾಗುವ ಸಾಮಾನ್ಯ ಜನರ ಬಗ್ಗೆ ಮತ್ತು ಇವರ ಅಡಿಯಾಳುಗಳಂತೆ ಯುದ್ಧಭೂಮಿಗೆ ನುಗ್ಗಿ ಪ್ರಾಣ ಕಳೆದುಕೊಳ್ಳುವ ಯೋಧರ ಬಗ್ಗೆ.

 

      ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಸೀಮೋಲ್ಲಂಘನ ಮಾಡಿದ್ದರೂ ಸಹ ಮಾನವ ಸಮಾಜ ಈ ದ್ವಂದ್ವವನ್ನು ಎದುರಿಸುತ್ತಲೇ ಬಂದಿದೆ. ಮಹಾಭಾರತದ ಕುರುಕ್ಷೇತ್ರದಲ್ಲಿ ಮಡಿದ 18 ಅಕ್ಷೋಹಿಣಿ ಸೈನ್ಯದ ಯೋಧರಿಗೆ ಎಂದಾದರೂ ನಮ್ಮ ಸಮಾಜ ಅನುಕಂಪ ತೋರಿದೆಯೇ ? ಹಾಗೆಯೇ ಅಮೆರಿಕ ತನ್ನ 250 ವರ್ಷಗಳ ಚರಿತ್ರೆಯಲ್ಲಿ ನಡೆಸಿರುವ ದಂಡಯಾತ್ರೆಗಳಲ್ಲಿ ಮಡಿದಿರುವ ಕೋಟ್ಯಂತರ ಜನರಿಗಾಗಿ ಆಧುನಿಕ ಜಗತ್ತು ಶ್ರದ್ಧಾಂಜಲಿ ಸಲ್ಲಿಸಿದೆಯೇ ? ಸದ್ದಾಂ ಹುಸೇನ್‌, ಕರ್ನಲ್‌ ಗಡಾಫಿ ಅವರಂತೆ ಹತ್ಯೆಯಾದ ಖಮೇನಿಗೆ ವಿಶ್ವದಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಆದರೆ ಈ ಸಾವುಗಳ ಹಿಂದೆ ಬಲಿಯಾದ ಲಕ್ಷಾಂತರ ಯೋಧರಿಗೆ, ಸಾಮಾನ್ಯ ಜನರಿಗೆ, ಮಕ್ಕಳು ಮಹಿಳೆಯರಿಗೆ ಶ್ರದ್ದಾಂಜಲಿ ಸಲ್ಲಿಸುವ ದಾಖಲೆ ಕಾಣಲು ಸಾಧ್ಯವೇ ? ನಾಗರಿಕ ಜಗತ್ತಿನ ಉತ್ಪಾದಿತ ಅಭಿಪ್ರಾಯದಲ್ಲಿ (Manufactured opinion) ಖಮೇನಿ ಶಿಕ್ಷಾರ್ಹ ಎನಿಸಿಕೊಳ್ಳುತ್ತಾನೆ ಆದರೆ 153 ಮಕ್ಕಳು ? ಉತ್ತರಿಸುವವರು ಯಾರು ?

 

ನವ ಶತಮಾನದ ಹೊಸ ಹಾದಿಗಳು

 

      20ನೆ ಶತಮಾನವನ್ನು ಯುದ್ಧಗಳ ಶತಮಾನ ಎನ್ನಲಾಗುತ್ತದೆ. ಹಾಗೆಯೇ ವಿಶ್ವಶಾಂತಿಗಾಗಿ ಯುದ್ಧಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ವಿಶ್ವ ಸಮುದಾಯ ಒಂದು ಸಂಸ್ಥೆಯನ್ನೇ ಸ್ಥಾಪಿಸಿದ ಶತಮಾನವಾಗಿಯೂ ದಾಖಲಾಗಿದೆ. ಈ ವಿಶ್ವಸಂಸ್ಥೆ ಈಗ ಸಾಮ್ರಾಜ್ಯಶಾಹಿಗಳ ಸಂಕೋಲೆಗಳಲ್ಲಿ ಬಂಧಿಯಾಗಿದೆ. ಈ 20ನೆ ಶತಮಾನದಲ್ಲೇ ಜಗತ್ತಿನಾದ್ಯಂತ ನಾಗರಿಕರು ಯುದ್ಧವಿರೋಧಿ ಧೋರಣೆಯನ್ನೂ ರೂಢಿಸಿಕೊಂಡಿರುವುದು ಗಮನಾರ್ಹ ಸಂಗತಿ. 1960-70 ದಶಕದ ವಿಯಟ್ನಾಂ ಯುದ್ಧ ಸಂದರ್ಭದಲ್ಲಿ ಸೃಷ್ಟಿಯಾದ ಈ ಮಾನವತೆಯ ದನಿ ಇಂದಿಗೂ ಜೀವಂತವಾಗಿದ್ದರೂ, ಕ್ಷೀಣವಾಗಿರುವುದು ವಾಸ್ತವ. ಜೀವ ವಿರೋಧಿ ಯುದ್ಧಗಳನ್ನು ಪ್ರಚೋದಿಸುವ, ಪ್ರೋತ್ಸಾಹಿಸುವ ಮತ್ತು ಸಂಭ್ರಮಿಸುವ ಒಂದು ಸಮಾಜ ಆಧುನಿಕ ಆಳ್ವಿಕೆಗಳಿಗೆ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ ಯುದ್ಧವಿರೋಧಿ ದನಿಗಳು ಸಮಾಜವಿರೋಧಿಯಾಗಿ ಕಾಣುತ್ತವೆ.

 

     ಯಾವುದೇ ಆಧುನಿಕ ಯುದ್ಧಗಳಲ್ಲಾದರೂ ಬಿದ್ದ ಹೆಣಗಳ  ತಲೆ ಎಣಿಕೆಯನ್ನು (Head count) ವ್ಯವಸ್ಥಿತವಾಗಿ ಮಾಡುವ ಸರ್ಕಾರಗಳಾಗಲೀ, ಮಾಧ್ಯಮಗಳಾಗಲೀ ಈ ಹೆಣಗಳು ಬಿಟ್ಟುಹೋಗುವ ಕುಟುಂಬಗಳು, ಸಂಗಾತಿಗಳು, ಎಳೆ ಮಕ್ಕಳು ಮತ್ತು ನಿರ್ಗತಿಕ ಸಮಾಜಗಳನ್ನು ಗಮನಿಸುತ್ತವೆಯೇ ? ಗಾಝಾ ಪಟ್ಟಿಯಲ್ಲಿ 2023ರ ಅಕ್ಟೋಬರ್‌ 7ರಿಂದ ಈವರೆಗೆ ಇಸ್ರೇಲ್‌ ದಾಳಿಗೆ 70 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆ ನಿರ್ದಿಷ್ಟ ದಿನದಂದೇ ಹಮಾಸ್‌ ಗುಂಪಿನ ದಾಳಿಗೆ 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ದಾಳಿ-ಪ್ರತಿದಾಳಿಯ ಸಂಘರ್ಷದಲ್ಲಿ ಪ್ರಾಣ ಕಳೆದುಕೊಳ್ಳುವವರು ಸಾವಿರಾರು ಅನಾಥ ಕುಟುಂಬಗಳನ್ನು ಬಿಟ್ಟು ಹೋಗಿರುತ್ತಾರೆ. ಈ ನಿರ್ಗತಿಕ ಸಮಾಜಗಳು ಮತ್ತು ಅನಾಥ ಮಕ್ಕಳು ಯಾರಿಗೆ ಸಲ್ಲುತ್ತವೆ ?

 

      ಕಾರಣ ಏನೇ ಇರಲಿ, ಮಾನವೀಯತೆಯನ್ನೇ ಮರೆತು ಅಮಾಯಕರ ಹತ್ಯೆ ಮಾಡುವಂತಹ ಹಿಂಸಾತ್ಮಕ ಮಾರ್ಗವನ್ನು ಹೇಗೆ ನಿರ್ವಚಿಸುವುದು ? ಈ ಪ್ರಶ್ನೆಗೆ ಭಯೋತ್ಪಾದಕ ಸಂಘಟನೆಗಳೂ ಉತ್ತರದಾಯಿಯಾಗುತ್ತವೆ.  ಕಾಶ್ಮೀರದ ಪೆಹಲ್ಗಾಮ್‌, ಪುಲ್ವಾಮಾದಲ್ಲಿ ಮಡಿದ ಯೋಧರು ಮತ್ತು ಅವರ ಕುಟುಂಬ ಸದಸ್ಯರು ಈ ಪ್ರಶ್ನೆ ಎತ್ತಿದರೆ, ಉತ್ತರಿಸುವವರಾರು ? ನಿರಂತರವಾಗಿ ನಡೆಯುತ್ತಲೇ ಇರುವ ಕೋಮು ಗಲಭೆಗಳಲ್ಲಿ ಶಾಶ್ವತವಾಗಿ ಕಳೆದುಹೋಗುವ ಪ್ರತಿಯೊಂದು ಜೀವವೂ ಈ ಪ್ರಶ್ನೆಗೆ ಉತ್ತರ ಬಯಸುತ್ತದೆ. ತತ್ವ, ಸಿದ್ದಾಂತ, ಬಂಡವಾಳ, ಮಾರುಕಟ್ಟೆ, ಸಂಪನ್ಮೂಲ, ಭೌಗೋಳಿಕ ಅಸ್ಮಿತೆ ಮತ್ತು ಜನಾಂಗೀಯ ಅಸ್ತಿತ್ವ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಮಾನವ ಜಗತ್ತು ಯುದ್ಧ ಪರಂಪರೆಯನ್ನು ಪೋಷಿಸಿಕೊಂಡೇ ಬಂದಿದೆ.

 

ಆಧುನಿಕತೆ ಮತ್ತು ಮಾನವೀಯತೆ

 

     ಆದರೂ ನಮ್ಮನ್ನು ನಾವು ʼಆಧುನಿಕ ನಾಗರಿಕತೆʼ (Modern Civilisation) ಎಂದೇ ಕರೆದುಕೊಳ್ಳುತ್ತಿದ್ದೇವೆ. ಈ ನಾಗರಿಕತೆಯನ್ನು ಕಾಪಾಡಲು ವಿಜ್ಞಾನ ಮತ್ತು ವೈಜ್ಞಾನಿಕ ಜ್ಞಾನ ಸಂಪತ್ತನ್ನು ಜೀವವಿರೋಧಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಬಳಕೆಗಾಗಿ ಯಾವುದೇ ಅಳುಕು, ಮುಜುಗರ, ಹಿಂಜರಿಕೆ ಇಲ್ಲದೆ ಬಳಸುತ್ತಿದ್ದೇವೆ. ಈ ವೈಜ್ಞಾನಿಕ ಮುನ್ನಡೆಯಿಂದ ಆಗುತ್ತಿರುವ ಅನಾಹುತಗಳಿಗೆ, ಸಾವು ನೋವುಗಳಿಗೆ ಪಶ್ಚಾತ್ತಾಪ ವ್ಯಕ್ತಪಡಿಸುವ ಕನಿಷ್ಠ ಸೂಕ್ಷ್ಮ ಪ್ರಜ್ಞೆಯನ್ನೂ ಮಾನವ ಸಮಾಜ ಕಳೆದುಕೊಂಡಿದೆ. ಈ ಸಮಾಜವೇ ಜೀವವಿರೋಧಿ ಯುದ್ಧಗಳನ್ನು ಸಂಭ್ರಮಿಸುತ್ತಾ, ಯುದ್ಧವಿರೋಧಿಗಳನ್ನು ಖಂಡಿಸುತ್ತಾ ಬಂದಿದೆ. ಇದು ಸಾರ್ವತ್ರಿಕ ಲಕ್ಷಣ. ಹಾಗಾಗಿಯೇ ಭಾರತದಲ್ಲೂ ಸಹ ʼ ಯುದ್ಧ ವಿರೋಧಿ ʼ ದನಿಗಳು ನಿಗಾ ಇಡಬೇಕಾದ, ದುಷ್ಟ ಶಕ್ತಿಗಳಾಗಿ ಪರಿಗಣಿಸಲ್ಪಡುತ್ತವೆ. ವಿಶಾಲ ಸಮಾಜದ ನೆಲೆಯಲ್ಲಿ ಭಯೋತ್ಪಾದನೆ, ಮತಾಂಧತೆಯನ್ನು ಸಾಪೇಕ್ಷವಾಗಿ ನೋಡುವಂತೆಯೇ ಯುದ್ಧಗಳನ್ನೂ ನೋಡಲಾಗುತ್ತದೆ.

      ತನ್ನ ಸರ್ವಾಧಿಕಾರದ ಆಳ್ವಿಕೆಯಲ್ಲಿ ಸಾವಿರಾರು ಹೋರಾಟಗಾರರ, ಮಹಿಳೆಯರ, ಹಸುಳೆಗಳ, ಅಮಾಯಕ ಜನರ ಸಾವಿಗೆ ಕಾರಣವಾಗಿರುವ ಆಯೊತುಲ್ಲಾ ಖಮೇನಿ ಶಿಕ್ಷಾರ್ಹನೇ ಹೌದು. ಆದರೆ ಈ ಶಿಕ್ಷೆ ನೀಡುವ ಹಕ್ಕು ಮತ್ತು ಜವಾಬ್ದಾರಿ ಇರುವುದು ಇರಾನಿನ ಜನತೆಗೇ ಹೊರತು, ಅಮೆರಿಕ ಅಥವಾ ಇಸ್ರೇಲ್‌ಗೆ ಅಲ್ಲ. ಮತ್ತೊಂದು ಸಾರ್ವಭೌಮ ರಾಷ್ಟ್ರದ ನಾಯಕನನ್ನು ಅಪಹರಿಸುವ, ಹತ್ಯೆ ಮಾಡುವ ಹಕ್ಕನ್ನು ಯಾವ ಅಂತಾರಾಷ್ಟ್ರೀಯ ಕಾನೂನು ಸಂಹಿತೆಗಳೂ ಮಾನ್ಯ ಮಾಡುವುದಿಲ್ಲ. ಆದರೂ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ವಿಸ್ತರಣೆಯ ಹಾದಿಯಲ್ಲಿ ಇಂತಹ ಹಲವು ಹತ್ಯೆಗಳಿಗೆ ಕಾರಣವಾಗಿದೆ. ಇದನ್ನು ಪ್ರಶ್ನಿಸುವ ವಿವೇಕ ಮತ್ತು ವಿವೇಚನೆ ಮಾನವ ಸಮಾಜದಲ್ಲಿ ಇರಬೇಕಲ್ಲವೇ ?

 

     ಯುದ್ಧದ ಮಾದರಿಗಳು ಬದಲಾಗಿವೆ, ಶಸ್ತ್ರಾಸ್ತ್ರಗಳ ಪ್ರಯೋಗ ವಿಧಾನಗಳು ಬದಲಾಗಿವೆ. ಆದರೆ ಶಸ್ತ್ರಾಸ್ತ್ರ ಉತ್ಪಾದನೆ, ಸಂಗ್ರಹ ಮತ್ತು ಮಾರಾಟ ಇಲ್ಲದೆ ತನ್ನ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗದ ಅಮೆರಿಕದ ಯುದ್ಧಕೋರ ನೀತಿ ಬದಲಾಗಿಲ್ಲ. ಪ್ರತಿ ಹತ್ತು ವರ್ಷಗಳಿಗೊಂದು ದೊಡ್ಡ ಪ್ರಮಾಣದ ಯುದ್ಧ ನಡೆಯುತ್ತಲೇ ಇರುವುದನ್ನು 1960ರ ದಶಕದಿಂದಲೂ ಗುರುತಿಸಬಹುದು. ಇದರ ವರ್ತಮಾನದ ಆಯಾಮವನ್ನು ಇಡೀ ಜಗತ್ತು ಇರಾನ್‌, ಲೆಬನಾನ್‌, ಮಧ್ಯಪ್ರಾಚ್ಯ ದೇಶಗಳಲ್ಲಿ ನೋಡುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ವಿಶ್ವಸಮುದಾಯದ ಜೀವನ ವಿಧಾನವಾಗಿ ನೆಲೆಗೊಳ್ಳಬೇಕಾದರೆ, ಎಲ್ಲ ದೇಶಗಳಲ್ಲೂ ಸರ್ವಾಧಿಕಾರ, ನಿರಂಕುಶಾಧಿಕಾರ ಮತ್ತು ಯುದ್ಧಗಳಿಂದಲೇ ವಿಸ್ತರಿಸುವ ಸಾಮ್ರಾಜ್ಯಶಾಹಿಯನ್ನು ಕೊನೆಗಾಣಿಸಬೇಕಾಗುತ್ತದೆ.

 

      ಈ ದೃಷ್ಟಿಯಿಂದ ವಿಶ್ವ ಸಮುದಾಯದ ಪ್ರಜ್ಞಾವಂತ ಸಮಾಜಗಳು ಜಾಗತಿಕ ಮಟ್ಟದಲ್ಲಿ ಜಾಗೃತವಾಗಬೇಕಿದೆ. ಎಲ್ಲ ದೇಶಗಳಲ್ಲಿರುವ ಯುದ್ಧ ವಿರೋಧಿ ಮನಸ್ಸುಗಳು, ಪ್ರಜಾತಂತ್ರದ ದನಿಗಳು, ಮಾನವೀಯ ಮನಸ್ಸುಗಳು ಹಾಗೂ ವಿಶ್ವ ಶಾಂತಿ ಬಯಸುವ ಸಂಘಟನೆಗಳು ಒಕ್ಕೊರಲಿನ ದನಿಯೊಂದನ್ನು ಸೃಷ್ಟಿಸಬೇಕಿದೆ. ಇದು ಆಧುನಿಕ ನಾಗರಿಕತೆಯ ನೈತಿಕ ಕರ್ತವ್ಯ ಮತ್ತು ಮುಂದುವರೆದ ಸಮಾಜದ ಆದ್ಯತೆಯಾಗಬೇಕಿದೆ. ಮನುಕುಲ ಈ ಜಗತ್ತಿಗೆ ಸೇರಿದ ಆಸ್ತಿ. ಇಡೀ ಜಗತ್ತು ಮನುಕುಲದ ಆಸ್ತಿ. ಎರಡನ್ನೂ ಭವಿಷ್ಯದ ದಿನಗಳಿಗಾಗಿ ಸಂರಕ್ಷಿಸುವ ವಿವೇಕವನ್ನು ಮಾನವ ಸಮಾಜ ರೂಢಿಸಿಕೊಳ್ಳಬೇಕಿದೆ.

 

      ಈ ವಿವೇಕ-ಸೃಷ್ಟಿಗೆ ಅಡ್ಡಿಯಾಗುವ ಯುದ್ಧ ಪರಂಪರೆಯನ್ನು ಮತ್ತು ಯುದ್ಧಕೋರ ಮನಸ್ಥಿತಿಯನ್ನು ಕೊನೆಗಾಣಿಸುವುದು ನಾಗರಿಕತೆಯ (Civilisational) ಪ್ರಥಮ ಆದ್ಯತೆಯಾದಾಗ, ಇಡೀ ವಿಶ್ವವೇ ʼಸರ್ವ ಜನಾಂಗದ ಶಾಂತಿಯ ತೋಟʼ ಆಗುತ್ತದೆ. ಮಾನವ ಸಮಾಜವನ್ನು ಪ್ರತಿನಿಧಿಸುವವರು                     ʼ ವಿಶ್ವಮಾನವ ʼರಾಗುತ್ತಾರೆ. ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷವನ್ನು ಈ ದೃಷ್ಟಿಯಿಂದಲೇ ಪರಾಮರ್ಶಿಸಬೇಕಿದೆ. ಇಲ್ಲಿ ಪರ-ವಿರೋಧ ಪ್ರಶ್ನೆ ಉದ್ಭವಿಸಿದರೆ ಅದು ಯಾವುದೇ ದೇಶ ಅಥವಾ ನಾಯಕ ಕಾಣಬೇಕಿಲ್ಲ. ಜೀವ ಪರ-ಜೀವ ವಿರೋಧ ಅಷ್ಟೇ ಕಾಣಬೇಕಿದೆ. ಈ ಔದಾತ್ಯಕ್ಕಾಗಿ ಶ್ರಮಿಸುವ ದೇಶಗಳನ್ನು ಗುರುತಿಸಲು ಸಾಧ್ಯವೇ ? ಅಸಾಧ್ಯವಾಗಿರುವುದೇ ನಮ್ಮ ಮುಂದಿರುವ ಜಟಿಲ ಸವಾಲು.

 

(ಇಸ್ರೇಲ್-ಅಮೆರಿಕ ಮತ್ತು ಇರಾನ್‌ ಸಂಘರ್ಷದ ಆಂತರಿಕ ಸೂಕ್ಷ್ಮಗಳು – ಮುಂದಿನ ಭಾಗದಲ್ಲಿ)

 

(ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ ಲೇಖನದ ಮುಂದುವರೆದ ಭಾಗ)

ಭಾಗ 2

 

     ಒಂದು ಸಾರ್ವಭೌಮ ದೇಶದ ಭೌಗೋಳಿಕ ಅಖಂಡತೆಯನ್ನೂ ಉಲ್ಲಂಘಿಸಿ, ಒಳನುಗ್ಗಿ, ಆ ದೇಶದ ಸ್ಥಾಪಿತ ನಾಯಕನನ್ನು ಹತ್ಯೆ ಮಾಡುವುದು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಷ್ಟೇ ಅಲ್ಲದೆ, ನಾಗರಿಕತೆಗೆ ಮಾಡುವ ಅಪಮಾನ. ಆದರೆ ಈ ಉಲ್ಲಂಘನೆಯನ್ನು ಪ್ರಶ್ನಿಸುವ ದನಿಗಳು ಅಂತಾರಾಷ್ಟ್ರೀಯ ಸ್ತರದಲ್ಲೇ ನಿಷ್ಕ್ರಿಯವಾಗಿರುವುದು 21ನೆ ಶತಮಾನದ ದುರಂತ. ಈಗ ಆ ದೇಶದ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ವ್ಯಕ್ತಿಯನ್ನೂ ಕೊಲ್ಲುತ್ತೇವೆ ಎಂದು ಹೇಳುತ್ತಿರುವುದು ಈ ದುರಹಂಕಾರದ ಪರಮಾವಧಿ. ಆದರೆ ಮಾನವ ಸಮಾಜ ಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಕನಿಷ್ಠ ಮಟ್ಟದ ಸಹಾನುಭೂತಿ, ಅನುಕಂಪ ಮತ್ತು ಜೀವಪ್ರೀತಿಗೂ ಅವಕಾಶವಿಲ್ಲದ ʼ ಯುದ್ಧ ʼದ ಸಂದರ್ಭಗಳಲ್ಲಿ ಈ ದುರ್ವರ್ತನೆಗಳು ಸಹಜ ಎನಿಸಿಕೊಳ್ಳುತ್ತವೆ. ಇಲ್ಲಿ ಸೋಲು-ಸಾವು-ನೋವು ಮತ್ತು ಗೆಲುವು-ಸಂಭ್ರಮ ಇಷ್ಟೇ ಗಣನೆಗೆ ಬರುತ್ತದೆ.

 

      ಅಮೆರಿಕ ಮತ್ತು ಇಸ್ರೇಲ್‌ ಕೈಗೊಂಡಿರುವ ದಂಡಯಾತ್ರೆ ಈಗಾಗಲೇ ಭವಿಷ್ಯದ ವಿಶ್ವ ಭೂಪಟವನ್ನು ಪುನಾರಚಿಸುವ ಸಾಧ್ಯತೆಗಳನ್ನು ತೋರುತ್ತಿದೆ. ಅಮೆರಿಕದ ಗುರಿ ಕೇವಲ ಇರಾನ್‌ ಅಥವಾ ಖಮೇನಿ ಅಲ್ಲ. ಇಸ್ರೇಲ್‌ ಜೊತೆಗೂಡಿ ಇಡೀ ವಿಶ್ವ ಸಮುದಾಯದ ಮೇಲೆ ತನ್ನ ಮಿಲಿಟರಿ ಪ್ರಾಬಲ್ಯವನ್ನು ಸ್ಥಾಪಿಸುವ ಮತ್ತು ತೈಲ ಸಂಪತ್ತಿನ ಮೇಲೆ ಒಡೆತನ ಸ್ಥಾಪಿಸುವ ಮಹತ್ವಾಕಾಂಕ್ಷೆ ಸ್ಪಷ್ಟವಾಗಿ ಕಾಣುತ್ತಿದೆ. ಅಪಾರ ತೈಲ ಸಂಪತ್ತನ್ನು ಹೊಂದಿರುವ ಮುಸ್ಲಿಂ, ಮಧ್ಯಪ್ರಾಚ್ಯ ದೇಶಗಳ ಪೈಕಿ ಇರಾನ್‌ ಮಾತ್ರವೇ ಪ್ರಬಲ ಸೈನ್ಯ, ಆಧುನಿಕ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನವನ್ನು ಹೊಂದಿದೆ. ಹಾಗಾಗಿ ಇರಾನ್‌ ಸಮಾಪ್ತಿಯಾದರೆ ಸಾಮ್ರಾಜ್ಯಶಾಹಿಗೆ ಈಗಿರುವ ವಿರೋಧಿ ಶಕ್ತಿಗಳೂ ಬಹುತೇಕ ಇಲ್ಲವಾಗುತ್ತದೆ.

 

ವಿನಾಶಕಾರಿ ಅಸ್ತ್ರದ ಹಂಬಲ

 

     ಹಾಗಾಗಿ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿರುವ ಸಂಗತಿಯೇ ಅಮೆರಿಕ ಮತ್ತು ಇಸ್ರೇಲ್‌ನ ನಿದ್ದೆಗೆಡಿಸಿದೆ. ಇಡೀ ವಿಶ್ವವನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡಬಹುದಾದ ಜೀವ ವಿರೋಧಿ, ಪರಮಾಣು ಅಸ್ತ್ರವನ್ನು ಹೊಂದಿರುವುದೇ ಒಂದು ಹೆಮ್ಮೆಯ ಸಂಗತಿಯಾಗಿರುವ ಆಧುನಿಕ ನಾಗರಿಕತೆಯಲ್ಲಿ, ಈ ವಿಧ್ವಂಸಕ ಶಕ್ತಿ ತನ್ನ ಹೊರತಾಗಿ ಮತ್ತಾರ ಬಳಿಯೂ ಇರಕೂಡದು ಎಂದು ಬಯಸುವುದು ಕ್ರೌರ್ಯದ ಸಾಂಸ್ಥೀಕರಣದಂತೆ ಕಾಣುತ್ತದೆ.  ಕ್ಷಣಮಾತ್ರದಲ್ಲಿ ಸಕಲವನ್ನೂ ಸುಟ್ಟು ಬೂದಿ ಮಾಡುವ ಅಸ್ತ್ರವೊಂದನ್ನು ಸ್ವಯಂ ರಕ್ಷಣೆಗಾಗಿ ಹೊಂದಿರುವುದು, ರಾಜತಾಂತ್ರಿಕವಾಗಿ ಒಪ್ಪಿತವಾಗಿರುವ ಒಂದು ಮನೋವೈಕಲ್ಯ. ಈ ಸರ್ವನಾಶಕ ಅಸ್ತ್ರ ನಾಗರಿಕ ಜಗತ್ತಿನ ಹೆಮ್ಮೆ ಎನಿಸಿಕೊಂಡಾಗಲೇ, ಮಾನವ ಸಮಾಜ ತನ್ನ ನೈತಿಕತೆಯನ್ನು ಕಳೆದುಕೊಂಡಿತ್ತು. ಈಗ ಅವಸಾನದ ಅಂಚಿನಲ್ಲಿದೆ.

 

     ಈ ವಿನಾಶಕಾರಿ ಅಸ್ತ್ರವೇ ಹಲವು ದೇಶಗಳಲ್ಲಿ ಸರ್ವಶಕ್ತ ಭಾವನೆಯನ್ನೂ ಮೂಡಿಸಿದ್ದು, ಆಳ್ವಿಕೆಗಳು ಅನ್ಯ ದೇಶಗಳ ಮೇಲೆ ದಾಳಿ ನಡೆಸಲು, ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸಲು ಹಾಗೂ ವಿಭಜಕ ಸಮಾಜಘಾತುಕ ಶಕ್ತಿಗಳನ್ನು ತಯಾರು ಮಾಡಲು ಈ ಅಹಮಿಕೆಯೇ ಕಾರಣವಾಗುತ್ತದೆ. ಪಾಕಿಸ್ತಾನ, ಇಸ್ರೇಲ್‌, ಅಮೆರಿಕ ಮುಂತಾದ ದೇಶಗಳು ಈ ಮಾದರಿಯನ್ನೇ ಸಾರ್ವತ್ರಿಕಗೊಳಿಸುತ್ತಿವೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಮೊದಲು ಗುಂಡಿ ಒತ್ತಿದ ದೇಶ ಯಾವುದು ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ ಏಕೆಂದರೆ ಇಷ್ಟು ಯೋಚಿಸುವ ಮುನ್ನ ಎರಡೂ ದೇಶಗಳು ಧ್ವಂಸವಾಗಿರುತ್ತವೆ. ಆದರೂ “ ನಾವು ಮೊದಲು ಪ್ರಯೋಗಿಸುವುದಿಲ್ಲ ” ಎಂಬ ಸೂತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತವಾಗಿದೆ. ಇಸ್ರೇಲ್‌ ಮತ್ತು ಅಮೆರಿಕ ಈಗ ನಡೆಸಿರುವ ದಂಡಯಾತ್ರೆಯ ಹಿನ್ನೆಲೆಯಲ್ಲಿ ವಿಶ್ವ ಸಮುದಾಯ ಆತಂಕದಲ್ಲಿರುವುದು ಈ ಕಾರಣಕ್ಕಾಗಿಯೇ. ಇದು ಮೂರನೆ ಮಹಾಯುದ್ಧದ ಮೊದಲ ಹೆಜ್ಜೆ ಎಂಬ ವ್ಯಾಖ್ಯಾನಗಳೂ ಕೇಳಿಬರುತ್ತಿವೆ.

 

(ಈ ನಿಟ್ಟಿನಲ್ಲಿ ದ ಹಿಂದೂ ಪತ್ರಿಕೆಯಲ್ಲಿ ಮಾರ್ಚ್‌ 3 2026ರಂದು ಪ್ರಕಟವಾಗಿರುವ  Israel the U.S. and a war to build a unipolar West Asia – ಸ್ಟ್ತಾನ್ಲಿ ಜಾನಿ – ಲೇಖನದ ಸಂಗ್ರಹಾನುವಾದ ಇಲ್ಲಿದೆ )

 

ಏಕಧೃವ ಪಶ್ಚಿಮ ಏಷ್ಯಾ ಗುರಿಯತ್ತ

 

      ಅಮೆರಿಕ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿದ್ದ ಮಾತುಕತೆಗಳ ಮಧ್ಯಸ್ಥಿಕೆ ವಹಿಸಿದ್ದ ಒಮಾನ್‌ನ ವಿದೇಶಾಂಗ ಸಚಿವ ಬದರ್‌ ಬಿನ್‌ ಹಮಾದ್‌ ಅಲ್‌ ಬುಸೈದಿ, ಮಾತುಕತೆಗಳು ಫಲಪ್ರದವಾಗಲಿದೆ ಎಂದು ಫೆಬ್ರವರಿ 27ರಂದು ಹೇಳಿದ್ದರು. ಇರಾನ್‌ ಪರಮಾಣು ಬಾಂಬ್‌ ಎಂದಿಗೂ  ತಯಾರಿಸುವುದಿಲ್ಲ ಮತ್ತು ಪರಮಾಣು ವಸ್ತುಗಳನ್ನು ದಾಸ್ತಾನು ಮಾಡುವುದಿಲ್ಲ  ಎಂಬ ಭರವಸೆ ನೀಡಿದೆ  ಎಂದು ಬುಸೈದಿ ಹೇಳಿದ್ದರು.  ಮರುದಿನವೇ ಇಸ್ರೇಲ್‌ ಮತ್ತು ಅಮೆರಿಕ ಇರಾನ್‌ ಮೇಲೆ ದಾಳಿ ಆರಂಭಿಸಿದ್ದವು. ಇರಾನ್‌ನ ಪರಮೋಚ್ಛ ನಾಯಕ ಖಮೇನಿ ಮತ್ತಿತರ ಹಿರಿಯ ಅಧಿಕಾರಗಳನ್ನು ಹತ್ಯೆ ಮಾಡಲಾಯಿತು. ತಮ್ಮ ಮೇಲಿನ ಸಂಭಾವ್ಯ ದಾಳಿಯನ್ನು ತಪ್ಪಿಸುವ ಸಲುವಾಗಿ ಈ ಆಕ್ರಮಣ ಅಗತ್ಯವಾಯಿತು ಎಂದು ಇಸ್ರೇಲ್‌ ಹೇಳಿತ್ತು, ಡೊನಾಲ್ಡ್‌ ಟ್ರಂಪ್‌ ಇರಾನ್‌ ಜನತೆಗೆ ಆಳ್ವಿಕೆಯನ್ನು ತಾವೇ ವಹಿಸಿಕೊಳ್ಳುವಂತೆ ಕರೆ ನೀಡಿದ್ದರು. ಇರಾನ್‌ನಲ್ಲಿ ಆಳುವ ಪಕ್ಷವನ್ನು ಬದಲಾಯಿಸುವುದೇ ದಾಳಿಯ ಉದ್ದೇಶ ಎನ್ನುವುದು ಸ್ಪಷ್ಟವಾಗಿತ್ತು.

 

     ಆರಂಭದ ಹಿನ್ನಡೆಗಳ ಹೊರತಾಗಿಯೂ ಇರಾನ್‌ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತಲೇ ಇದೆ. ಸಾವಿರಾರು ಜನರ ಸಾವು ಅನುಭವಿಸಿದರೂ ಸಹ ಇರಾನ್‌ ಇಸ್ರೇಲ್‌ ಮೇಲೆ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ.  ಎರಡನೆ ಮಹಾಯುದ್ಧದ ನಂತರದಲ್ಲಿ ಮೊದಲ ಬಾರಿಗೆ ಜಲಾಂತರ್ಗಾಮಿ (Submarine) ದಾಳಿ ನಡೆದಿದ್ದು, ಶ್ರೀಲಂಕಾ ಸಮೀಪ ಹಿಂದೂ ಮಹಾಸಾಗರದಲ್ಲಿ ಭಾರತದಿಂದ ಹೊರಟಿದ್ದ ಇರಾನ್‌ನ ಯುದ್ಧ ನೌಕೆಯನ್ನು ಧ್ವಂಸ ಮಾಡಲಾಗಿದೆ. ಈ ದಾಳಿಗೆ ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.  ಈ ದಾಳಿ-ಪ್ರತಿದಾಳಿಯು ಅಂತಿಮವಾಗಿ ಮುಂದಿನ ಹಲವು ದಶಕಗಳ ಕಾಲ ಮಧ್ಯಪ್ರಾಚ್ಯದ ಚಿತ್ರಣವನ್ನು ಒದಗಿಸುತ್ತದೆ.

 

ಇರಾನ್‌ ಎಂಬ ದೈತ್ಯ ಶಕ್ತಿಯ ವಿರುದ್ಧ

 

    ಜೂನ್‌ 2025ರಲ್ಲಿ ನಡೆದ 12 ದಿನಗಳ ಕದನದ ನಂತರ , ಇರಾನ್‌ನ ಪರಮಾಣು ಅಸ್ತ್ರ ಯೋಜನೆಯನ್ನೇ ಕೊನೆಗೊಳಿಸಲಾಗಿದೆ ಎಂದು ಟ್ರಂಪ್‌ ಘೋಷಿಸಿದ್ದರು. ಇದನ್ನು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಚಾರಿತ್ರಿಕ ವಿಜಯ ಎಂದೂ ಬಣ್ಣಿಸಿದ್ದರು. ಹಾಗಾದರೆ ಎಂಟು ತಿಂಗಳು ಕಳೆದು, ಮತ್ತೊಮ್ಮೆ ಯುದ್ಧ ಆರಂಭಿಸಿರುವುದೇಕೆ ? ಮೂಲ ಪ್ರಶ್ನೆಗೆ ಉತ್ತರ ಇಲ್ಲಿ ಗುರುತಿಸಬಹುದು. ಇಡೀ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್‌ನ ಆಧಿಪತ್ಯಕ್ಕೆ ಸವಾಲಾಗಿ ನಿಲ್ಲುವ ಏಕೈಕ ಪರಿಷ್ಕರಣವಾದಿ ದೇಶ (Revisionist country) ಎಂದರೆ ಇರಾನ್‌ ಮಾತ್ರ.  ಹಾಗಾಗಿ ಅಲ್ಲಿ ಆಡಳಿತ ಬದಲಾವಣೆ (Regime Change ) ಮಾಡುವುದು ಇಸ್ರೇಲ್‌ನ ಆದ್ಯತೆಯಾಗಿತ್ತು. ಬಹುತೇಕ ಅರಬ್‌ ರಾಷ್ಟ್ರಗಳು ಅಮೆರಿಕದ ಸೇನಾ ನೆಲೆಗಳನ್ನು ಹೊಂದಿವೆ ಮತ್ತು ಅಮೆರಿಕದ ನೆರವನ್ನು ಆಶ್ರಯಿಸಿವೆ. ಈ ಯಾವ ದೇಶಗಳೂ ಇಸ್ರೇಲ್‌ನೊಡನೆ ನೇರ ಸಂಪರ್ಕವನ್ನು ಸಾಧಿಸಿಲ್ಲ ಅಥವಾ ಇಸ್ರೇಲ್‌ನ ಸೇನಾ ಪ್ರಾಬಲ್ಯ, ಪ್ಯಾಲೆಸ್ಟೈನ್‌ ಸಿರಿಯಾ ಮತ್ತು ಲೆಬನಾನ್‌ ದೇಶಗಳ ಅತಿಕ್ರಮಣವನ್ನು ಒಪ್ಪಿಕೊಂಡಿಲ್ಲ.  ಹಾಗಾಗಿ ಅತ್ಯಾಧುನಿಕ ಕ್ಷಿಪಣಿ ಯೋಜನೆಗಳನ್ನು ಹೊಂದಿರುವ ಇರಾನ್‌, ಇಸ್ರೇಲ್‌ನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಕಂಡಿತ್ತು.

 

     2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಇರಾನ್‌ನೊಡನೆ ಪರಮಾಣು ಒಪ್ಪಂದಕ್ಕೆ ಸಹಿ ಮಾಡಿದಾಗ, ಇರಾನ್‌ನ ಯೋಜನೆಯನ್ನು ನಿಷ್ಕ್ರಿಯಗೊಳಿಸುವುದೇ ಪ್ರಧಾನ ಆಲೋಚನೆಯಾಗಿತ್ತು. ತನ್ಮೂಲಕ ಪರಮಾಣು ಅಸ್ತ್ರ ಇಲ್ಲದ ಇರಾನ್‌ ಪಶ್ಚಿಮ ಏಷ್ಯಾದ ಪಾಲಿಗೆ ಅಪಾಯಕಾರಿಯಾಗಿ ಕಾಣುವುದಿಲ್ಲ ಎಂಬ ನಿರೀಕ್ಷೆ ಇತ್ತು . ಆದರೆ ಇಸ್ರೇಲ್‌ ಈ ಒಪ್ಪಂದವನ್ನು ಅನುಮೋದಿಸಿರಲಿಲ್ಲ, ಏಕೆಂದರೆ ಇಸ್ರೇಲ್‌ ದೃಷ್ಟಿಯಲ್ಲಿ ಇರಾನ್‌ನ ಪರಮಾಣು ಅಸ್ತ್ರ ಯೋಜನೆಗಿಂತಲೂ ಅದರ ಸಾಂಪ್ರದಾಯಿಕ ಶಕ್ತಿ ಅಪಾಯಕಾರಿಯಾಗಿ ಕಂಡಿತ್ತು. ಹೇಗಾದರೂ ಮಾಡಿ ಇರಾನ್‌ನಲ್ಲಿ ಹೊಸ ಆಳ್ವಿಕೆಯನ್ನು ಸ್ಥಾಪಿಸುವ ಮತ್ತು ಈ ಪ್ರಬಲ ರಾಜ್ಯದ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುವ ಇಸ್ರೇಲ್‌ನ ಮಹತ್ವಾಕಾಂಕ್ಷೆಗೆ ಈಗ ಅವಕಾಶ ಲಭಿಸುತ್ತಿದೆ.

 

     ಇತ್ತೀಚಿನ ಅಮೆರಿಕ-ಇರಾನ್‌ ಮಾತುಕತೆಗಳ ಸಂದರ್ಭದಲ್ಲಿ ಇರಾನ್‌ನ ಕ್ಷಿಪಣಿ ಯೋಜನೆಗಳನ್ನೂ (Missile Programme) ಹಾಗೂ ಈ ಪ್ರದೇಶದಲ್ಲಿ ರಾಜ್ಯೇತರ ಸೇನಾಪಡೆಗಳಿಗೆ (Non state militias) ನೀಡುವ ಪ್ರಚೋದನೆಯನ್ನು ಒಳಗೊಳ್ಳುವಂತೆ ಇಸ್ರೇಲ್‌ ಒತ್ತಾಯಿಸುತ್ತಲೇ ಬಂದಿತ್ತು.  ಇರಾನ್‌ನ ಸಂಪೂರ್ಣ ನಿಶ್ಶಸ್ತ್ರೀಕರಣ ̇(Total disarmament) ಇಸ್ರೇಲ್‌ನ ಪ್ರಧಾನ ಗುರಿಯಾಗಿತ್ತು. ಈ ಸೂಕ್ಷ್ಮಗಳನ್ನು ಇರಾನ್‌ನ ರಕ್ಷಣಾ ತಜ್ಞರು ಅರಿತಿದ್ದರಿಂದಲೇ, ಯಾವುದೇ ಕಾರಣಕ್ಕೂ ಅಮೆರಿಕದೊಡನೆ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂಬ ನಿರ್ಧಾರ ತಳೆದಿತ್ತು. ಒಂದು ವೇಳೆ ಈ ಒಪ್ಪಂದ ಮಾಡಿಕೊಂಡರೂ ಮುಂದಿನ ದಿನಗಳಲ್ಲಿ ಇಸ್ರೇಲ್‌ ತಮ್ಮ ಮೇಲೆ ದಾಳಿ ಮಾಡುವುದು ಖಚಿತ ಎಂಬ ಅಭಿಪ್ರಾಯವನ್ನು ಇರಾನ್‌ನ ಭದ್ರತಾ ವಿಶ್ಲೇಷಕರೊಬ್ಬರು ವ್ಯಕ್ತಪಡಿಸಿದ್ದರು.

 

ಆಡಳಿತ ಬದಲಾವಣೆಯ ಆಕಾಂಕ್ಷೆ

 

     ಹಾಗಾಗಿ ಇಸ್ರೇಲ್‌ ತನ್ನ ಎಲ್ಲ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಇರಾನ್‌ನಲ್ಲಿ ಆಡಳಿತ ಬದಲಾವಣೆ ಅನಿವಾರ್ಯವಾಗಿತ್ತು. ಇರಾಕ್, ಲಿಬ್ಯಾ ಈಗ ದುರ್ಬಲವಾಗಿವೆ. ಸಿರಿಯಾದ ನಾಯಕ ಬಶಾರ್‌ ಅಲ್‌ ಅಸಾದ್‌ ರಷ್ಯಾ ಆಶ್ರಯದಲ್ಲಿದ್ದಾರೆ, ಜಿಹಾದಿ ಗುಂಪು ಇಲ್ಲಿ ಆಳುತ್ತಿದೆ. ಹಿಜ್ಬೊಲ್ಲಾ ಸಂಘಟನೆ ದುರ್ಬಲವಾಗಿದೆ.  ಹಮಾಸ್‌ ಸಂಘಟನೆಯನ್ನು ಗಾಝಾದಲ್ಲಿ ನಿರ್ವೀರ್ಯಗೊಳಿಸಲಾಗಿದೆ. ಈ ಬೆಳವಣಿಗೆಗಳ ನಡುವೆ ಅರಬ್‌ ರಾಷ್ಟ್ರಗಳು ಈ ಆಕ್ರಮಣಗಳನ್ನು ಖಂಡಿಸುವುದು ಬಿಟ್ಟು ಮತ್ತಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ.  ಹಾಗಾಗಿ ಇಸ್ರೇಲ್‌ನ ಪರಮಾಧಿಪತ್ಯಕ್ಕೆ ಸವಾಲಾಗಿ ನಿಲ್ಲುವ ಏಕೈಕ ರಾಷ್ಟ್ರ ಇರಾನ್‌ ಮಾತ್ರ. ಈ ದೇಶವನ್ನು ಮಣಿಸಿಬಿಟ್ಟರೆ, ಪ್ರಾದೇಶಿಕ ಆಧಿಪತ್ಯದ ಸಮೀಕರಣ ಸಂಪೂರ್ಣ ಬದಲಾಗಿ, ಅಮೆರಿಕದ ಶಾಶ್ವತ ಬೆಂಬಲ ಇರುವ ಇಸ್ರೇಲ್‌-ಕೇಂದ್ರಿತ ಏಕಧೃವ ಪಶ್ಚಿಮ ಏಷ್ಯಾ (Uni polar West Asia) ಸಾಧ್ಯವಾಗುತ್ತದೆ. ಇಲ್ಲಿ ಇರಾನ್‌ ಪ್ರಜೆಗಳ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿರುವುದು ಇಸ್ರೇಲ್‌ನ  ಭೌಗೋಳಿಕ ರಾಜಕೀಯ ಹಿತಾಸಕ್ತಿ (Geo political Interest ) .

 

     ಇಲ್ಲಿ ಸಮಸ್ಯೆ ಎಂದರೆ ಇರಾನ್‌ ಅತಿ ಎತ್ತರದ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಒಂದು ದೇಶ.  ಇಸ್ರೇಲ್‌ಗಿಂತಲೂ 70 ಪಟ್ಟು  ದೊಡ್ಡದು. ಹಾಗಾಗಿ ಏಕಾಂಗಿಯಾಗಿ ಇಸ್ರೇಲ್‌ ಇಲ್ಲಿ ಆಡಳಿತ ಬದಲಾವಣೆಗೆ ಪ್ರಯತ್ನಿಸಲಾಗುವುದಿಲ್ಲ. ಭೂಸೇನೆಯನ್ನು ಬಳಸಿ ಆಕ್ರಮಣ ನಡೆಸಿದರೂ ಸಹ ಇದು ಸುಲಭಸಾಧ್ಯವಲ್ಲ. ಎರಡು ವರ್ಷಗಳ ಕಾಲ ಇಸ್ರೇಲ್‌ ಗಾಝಾ ಪಟ್ಟಿಯ ಮೇಲೆ ಆಕ್ರಮಣ ನಡೆಸುತ್ತಿದ್ದು 70 ಸಾವಿರಕ್ಕೂ ಹೆಚ್ಚು ಜನರ ಜೀವಬಲಿ ಪಡೆದಿದೆ. ಆದಾಗ್ಯೂ ಹಮಾಸ್‌ ಆಡಳಿತವನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ.  ಅಮೆರಿಕವನ್ನು ಹೊರತುಪಡಿಸಿ ಯಾವ ದೇಶವೂ ಇರಾನ್‌ ಒಳಗೆ ತನ್ನ ಭೂ ಸೇನೆಯನ್ನು ಕಳುಹಿಸಲು ಒಪ್ಪುವುದಿಲ್ಲ.

 

      ಲಿಬ್ಯಾ ಮತ್ತು ಸಿರಿಯಾದಲ್ಲಿರುವಂತೆ ಇಲ್ಲಿನ ಆಡಳಿತವನ್ನು ವಿರೋಧಿಸುತ್ತಿರುವ ಸಶಸ್ತ್ರ ವಿರೋಧಿಗಳೂ ಇರಾನ್‌ನಲ್ಲಿ ಕಾಣುವುದಿಲ್ಲ. ಲಿಬ್ಯಾದಲ್ಲಿ ಆಡಳಿತ ಬದಲಾವಣೆ ಮಾಡಲು ನ್ಯಾಟೋ (NATO) ಸೇನೆಗೆ ಒಂದು ತಿಂಗಳಿಗೂ ಹೆಚ್ಚು ಕಾಲ ದಾಳಿ ನಡೆಸಿ ಕರ್ನಲ್‌ ಗಡಾಫಿಯನ್ನು ಸೆರೆಹಿಡಿಯಬೇಕಾಯಿತು. ಸಿರಿಯಾದಲ್ಲಿ  2012ರಲ್ಲಿ ಆರಂಭವಾದ ನಾಗರಿಕ ಅಂತರ್ಯುದ್ಧ 12 ವರ್ಷಗಳ ನಂತರ ಅಂತ್ಯವಾಗಿ ಅಸ್ಸಾದ್‌ ಪದಚ್ಯುತಗೊಂಡಿದ್ದ. ಇರಾನ್‌ನಲ್ಲಿ ಈ ರೀತಿಯ ಸಶಸ್ತ್ರ ವಿರೋಧಿ ಪಡೆಗಳು ಇರುವುದಿಲ್ಲ. ಹಾಗಾಗಿ  ಜೂನ್‌ 2025ರಲ್ಲಿ ಮತ್ತು ಈಗ ಇಸ್ರೇಲ್‌ ಕ್ಷಿಪಣಿ, ಡ್ರೋನ್‌, ಬಾಂಬ್‌ ದಾಳಿಯನ್ನು ಅವಲಂಬಿಸಿದೆ. ಜೂನ್‌ ತಿಂಗಳ ಅಲ್ಪಾವಧಿಯ ಕದನದಲ್ಲಿ ಇರಾನ್‌ ಪ್ರತಿದಾಳಿ ನಡೆಸಲು ಯಶಸ್ವಿಯಾಗಿತ್ತು. ಹಾಗಾಗಿ ಕದನವಿರಾಮ ಘೋಷಿಸಬೇಕಾಯಿತು. ಈಗ ಅಮೆರಿಕದ ಸಕ್ರಿಯ ಸಹಾಯದೊಂದಿಗೆ ಇಸ್ರೇಲ್‌ ತನ್ನ ಮಹತ್ವಾಕಾಂಕ್ಷಿ  ಯುದ್ಧವನ್ನು ಮುಂದುವರೆಸಿದೆ.

 

ಹುಸಿಯಾದ ನಿರೀಕ್ಷೆಗಳು

 

     ವಿಪರ್ಯಾಸವೆಂದರೆ, ಖಮೇನೀ ಹತ್ಯೆಯಾದ ಕೂಡಲೇ ಇರಾನಿನ ಜನತೆ ರಸ್ತೆಗಿಳಿದು, ಹೊಸ ಆಡಳಿತವನ್ನು ಸ್ಥಾಪಿಸಲು ಸ್ವಯಂಪ್ರೇರಿತರಾಗಿ ಮುನ್ನುಗ್ಗುತ್ತಾರೆ, ಆಡಳಿತ ಸಂಸ್ಥೆಗಳನ್ನು ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಮೆರಿಕ-ಇಸ್ರೇಲ್‌ನ ನಿರೀಕ್ಷೆ ಕೈಗೂಡಲಿಲ್ಲ.  ಇರಾನ್‌ ಈ ದುರ್ಗಮ ಕ್ಷಣವನ್ನು ನಿರೀಕ್ಷಿಸಿದ್ದಂತೆಯೇ ಕಾಣುತ್ತಿದ್ದು ಪ್ರಬಲ ವಿರೋಧ ತೋರುತ್ತಿದೆ. ನಿರಂತರ ಪ್ರತಿದಾಳಿಯನ್ನೂ ನಡೆಸುತ್ತಿದೆ. ಇದರ ಫಲವೇ ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆಯ ಮೇಲೆ ಜಲಾಂತರ್ಗಾಮಿಯಿಂದ ನಡೆದಿರುವ ಭೀಕರ ದಾಳಿ. ಮತ್ತೊಂದೆಡೆ ಜೂನ್‌ 2025ರ ಕದನದಲ್ಲಿ ಇಸ್ರೇಲ್‌ ವಿರುದ್ಧ ಮಾತ್ರ ಹೋರಾಡಿದ್ದ ಇರಾನ್‌ ಈಗ ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ.  ಯುಎಇನಲ್ಲಿರುವ ಫ್ರಾನ್ಸ್‌ನ ವಾಯು ನೆಲೆಯ ಮೇಲೆ ಸಹ ದಾಳಿ ನಡೆಸಿದೆ.

 

     ಈಗ ಜಾಗತಿಕ ಇಂಧನ ಪೂರೈಕೆಯ ಮೂರನೆ ಒಂದರಷ್ಟು ಪ್ರಮಾಣವನ್ನು ಪೂರೈಸಲು ಬಳಕೆಯಾಗುವ, ಅರಬ್ಬೀ ಸಮುದ್ರವನ್ನು ಪರ್ಷಿಯನ್‌ ಕೊಲ್ಲಿ ರಾಷ್ಟ್ರಗಳಿಗೆ ಸಂಪರ್ಕಿಸುವ, ಹರ್ಮುಜ್‌ ಜಲಸಂಧಿ ಮಾರ್ಗವನ್ನೂ ಇರಾನ್‌ ಬಂದ್‌ ಮಾಡಿದೆ. ಯುದ್ಧ ಆರಂಭವಾದ ಎರಡೇ ದಿನಗಳಲ್ಲಿ ಇರಾನ್‌ ಇಡೀ ಸಂಘರ್ಷವನ್ನು ಪ್ರಾದೇಶಿಕಗೊಳಿಸಿದೆ. ಒಂದು ವೇಳೆ ಇರಾನ್‌ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ತೀವ್ರಗೊಳಿಸಿದರೆ, ಈ ಕೊಲ್ಲಿ ರಾಷ್ಟ್ರಗಳೂ ಯುದ್ಧದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಕೊಲ್ಲಿ ರಾಷ್ಟ್ರಗಳ ನಡುವೆ ಏರ್ಪಡುವ ದಾಳಿ-ಪ್ರತಿದಾಳಿ ವಿಶ್ವದ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇದು ಜಾಗತಿಕ ಆರ್ಥಿಕತೆಗೂ ಧಕ್ಕೆ ಉಂಟುಮಾಡುತ್ತದೆ.

 

      ಯುದ್ಧ ಹೆಚ್ಚು ದಿನ ಮುಂದುವರೆದಷ್ಟೂ, ಈ ಸೇನಾ ನೆಲೆಗಳಲ್ಲಿ ಇಸ್ರೇಲ್‌ ಮತ್ತು ಅಮೆರಿಕ ಸಂಗ್ರಹಿಸಿರುವ ಕ್ಷಿಪಣಿಗಳ ರಕ್ಷಣಾ ಗೋಡೆಗಳು ಶಿಥಿಲವಾಗತೊಡಗುತ್ತವೆ. ಅಮೆರಿಕದ ರಕ್ಷಣಾ ತಜ್ಞರು ಈ ಆತಂಕವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಬ್ಯಾಲಿಸ್ಟಿಕ್‌ ಕ್ಷಿಪಣಿ ಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಮೂಲಕ ಆ ದೇಶದ ಉಡಾವಣಾ ನೆಲೆಗಳನ್ನು ಧ್ವಂಸ ಮಾಡುವ ಇಸ್ರೇಲ್-ಅಮೆರಿಕದ ತಂತ್ರ ವಿಫಲವಾದರೆ, ಡೊನಾಲ್ಡ್‌ ಟ್ರಂಪ್‌ ತಮ್ಮ ಯುದ್ಧ ತಂತ್ರದ ಬಗ್ಗೆ ಪುನರಾಲೋಚನೆ ಮಾಡಬೇಕಾಗುತ್ತದೆ. ಈಗಾಗಲೇ ಜಾಗತಿಕ ಮಾರುಕಟ್ಟೆ ಕುಸಿಯಲಾರಂಭಿಸಿದ್ದು, ಜಗತ್ತಿನ ಪ್ರಮುಖ ದೇಶಗಳು ಸಂಕಷ್ಟಕ್ಕೀಡಾಗುತ್ತಿವೆ.

 

ಯುದ್ಧದ ಅಂತ್ಯ ನೋವಿನ ಅಂತ್ಯವಲ್ಲ

 

      ಈ ಭೀಕರ ಯುದ್ಧ ಕೊನೆಗೊಳ್ಳಬಹುದು. ಆದರೆ ಸಾವಿನ ಸರದಾರರಿಂದ ಪ್ರಯೋಗಿಸಲ್ಪಟ್ಟ ಶಸ್ತ್ರಾಸ್ತ್ರಗಳಿಗೆ ಬಲಿಯಾದ ಇರಾನ್‌ನ ಸಾವಿರಾರು ಪ್ರಜೆಗಳು, ಏನೂ ಅರಿಯದ 150ಕ್ಕೂ ಹೆಚ್ಚು ಶಾಲಾ ಹೆಣ್ಣುಮಕ್ಕಳು, ಈ ಮಕ್ಕಳ ತಂದೆ-ತಾಯಿಯರು, ಜಲಾಂತರ್ಗಾಮಿ ದಾಳಿಯಲ್ಲಿ ಬಲಿಯಾದ ನೂರಕ್ಕೂ ಹೆಚ್ಚು ನೌಕಾ ಸಿಬ್ಬಂದಿ ಮತ್ತು ಈ ಭೌಗೋಳಿಕ ರಾಜಕೀಯ ಕದನದ (Geo political war) ಭಾಗಿದಾರರೂ ಅಲ್ಲದೆ, ಫಲಾನುಭವಿಗಳೂ ಅಲ್ಲದೆ ತಮ್ಮ ಭವಿಷ್ಯದ ಜೀವನವನ್ನು ಅಭದ್ರತೆಯಲ್ಲೇ ಸವೆಸಬೇಕಾದ ಮೂರೂ ದೇಶಗಳ ಸಾವಿರಾರು ಸಾಮಾನ್ಯ ಜನರು ಎದುರಿಸುವ ಸಂಕಷ್ಟಗಳು ಹಾಗೂ ಈ ಸಮಾಜಗಳು ಅನುಭವಿಸುವ ಸಾವು-ನೋವು-ಯಾತನೆ-ವೇದನೆ ಮತ್ತು ಮಾನಸಿಕ ಒತ್ತಡಗಳು ಶೀಘ್ರದಲ್ಲಿ ಕೊನೆಯಾಗುವುದಿಲ್ಲ.

 

        ಹಾಗೆಯೇ ಈ ಯುದ್ಧದಿಂದ ಮಾರುಕಟ್ಟೆಗಳು ಅನುಭವಿಸುವ ಕಷ್ಟಗಳೆಲ್ಲವೂ ಜನಸಾಮಾನ್ಯರ ಹೆಗಲಿಗೇರುತ್ತವೆ. ಕದನ ಪ್ರಿಯ ದೇಶಗಳ ಹಪಹಪಿಗೆ ಬಲಿಯಾದ ಮಕ್ಕಳ ಸಾವಿಗೂ ಶ್ರದ್ಧಾಂಜಲಿ ಸಲ್ಲಿಸಲು ಹಿಂಜರಿಯರಿಯುವ ಕ್ರೂರ ಸಮಾಜಗಳು, ಭವಿಷ್ಯದ ತಲೆಮಾರಿಗೆ ದ್ವೇಷಾಸೂಯೆಗಳ ಹೊಸ ಮಾದರಿಗಳನ್ನು ಕಟ್ಟಿಕೊಡುತ್ತವೆ. ಸಾವನ್ನು ಸಂಭ್ರಮಿಸುವ ಸಂಸ್ಕೃತಿಗಿಂತಲೂ ಅಪಾಯಕಾರಿಯಾಗುವ ಈ ಮಾದರಿಯು ಭವಿಷ್ಯದಲ್ಲಿ ಮಾನವ ಸಮಾಜವನ್ನು ಅಡ್ಡಡ್ಡಲಾಗಿ ವಿಭಜಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಧಾರ್ಮಿಕ, ಮತೀಯ, ಭೌಗೋಳಿಕ, ರಾಷ್ಟ್ರೀಯ, ಪ್ರಾದೇಶಿಕ, ಭಾಷಿಕ, ಜನಾಂಗೀಯ ಹಾಗೂ ಸಾಮಾಜಿಕ ಅಸ್ಮಿತೆಗಳು ಮಾನವ ಸಮಾಜವನ್ನು ಒಂದುಗೂಡಿಸುವ ಸೇತುವೆಗಳಾಗಬೇಕು. ಆದರೆ ಸಾಮ್ರಾಜ್ಯಶಾಹಿಯ ಕ್ರೌರ್ಯ, ಬಂಡವಾಳಶಾಹಿಯ ದಾಹ, ಅಧಿಕಾರಶಾಹಿಯ ಹಂಬಲ ಇವುಗಳನ್ನೇ  ವಿಭಜನೆ ಮತ್ತು ವಿಘಟನೆಯ ತಳಪಾಯಗಳನ್ನಾಗಿ ಮಾಡಿಬಿಡುತ್ತವೆ.

       ಸಂವೇದನಾಶೀಲ ಮಾನವ ಸಮಾಜ ಮಾತ್ರ ಈ ಅಡಿಪಾಯವನ್ನು ಕೆಡವಿ ಹೊಸ ಜಗತ್ತನ್ನು ಕಟ್ಟಲು ಸಾಧ್ಯ. ಆ ಸಮಾಜವನ್ನು ಕಟ್ಟುವ ಮನಸ್ಸುಗಳನ್ನು ತಯಾರಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಬೇಕಿದೆ. ಯೋಚಿಸೋಣವೇ ?

-೦-೦-೦-೦-೦-