ಯುದ್ದ, ಪ್ರೀತಿ ಮತ್ತು ರಕ್ತಲೇಪನದ  ನಾಗರಿಕತೆ...

ಯುದ್ಧ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ವಿನಾಶಕಾರಿಯೇ.

ಯುದ್ದ, ಪ್ರೀತಿ ಮತ್ತು ರಕ್ತಲೇಪನದ  ನಾಗರಿಕತೆ...

ದಯಾ ಗಂಗನಗಟ್ಟ

 

 

      ಅದೊಂದು ದಟ್ಟವಾದ ಅರಣ್ಯ,ನಾನು ಅದ್ಯಾಕೆ ಈ ಕಾಡಿನೊಳಕ್ಕೆ ಬಂದೆನೋ ಗೊತ್ತಾಗುತ್ತಿಲ್ಲ, ಅದೆಷ್ಟು ಹೊತ್ತಿನಿಂದ ಅಲೆಯುತ್ತಿದ್ದೇನೋ ಅದೂ ಗೊತ್ತಿಲ್ಲ, ಹಾದಿತಪ್ಪಿರುವೆನಾ? ಹಾಗಿದ್ದರೆ ನನಗೇಕೆ ಭಯವಾಗುತ್ತಿಲ್ಲ, ಬಹಳ ಬಾಯಾರಿಕೆ ಯಾಗುತ್ತಿದೆ, ಅಗೋ! ದೂರದಲ್ಲೆಲ್ಲೋ ನದಿ ಹರಿಯುತ್ತಿರುವ ಸದ್ದು ಕೇಳುತ್ತಿದೆ, ಕಾಲು ನನಗರಿವಿಲ್ಲದೇ‌ ಅದರ ದಡಕ್ಕೆ ತಂದು ನಿಲ್ಲಿಸಿದವು,ಆಹಾ ನೀರು ಅದೆಷ್ಟು ಸಿಹಿಯಾಗಿವೆ! ಸ್ವಲ್ಪ ಹೊತ್ತು ಇಲ್ಲೇ ಕೂತು ಸುಧಾರಿಸಿಕೊಳ್ಳುವ, ಅರೆ! ಅದೇನದು ಸದ್ದು!ಯಾರೋ ಹೆಂಗಸು ಅಳುತ್ತಿರುವಂತಿದೆ, ಈ ಭಯಾನಕ ಕಾಡಿನಲ್ಲಿ ಯಾರೋ ನನ್ನಂತೇ ಹಾದಿ ತಪ್ಪಿರಬಹುದಾ? ಇರಲಿ ನೋಡೋಣ ಎಂದು ದನಿ ಕೇಳಿಬಂದ ದಿಕ್ಕಿಗೆ ಹೋದರೆ,ನದಿಗೆ ಆನಿಸಿದಂತೆ ಇದ್ದ ಕರಿ ಬಂಡೆಯ ಮೇಲೆ ಯಾರೋ ಕುಳಿತಂತೆ ಅಸ್ಪಷ್ಟವಾಗಿ ಕಾಣುತ್ತಿದೆ, ಹತ್ತಿರ ಹೋದಂತೆ ಅದೊಂದು ಹೆಣ್ಣು! ತೇಟ್ ಕತೆಗಳಲ್ಲಿ ಓದಿದ ರಾಕ್ಷಸರ ವರ್ಣನೆಗೆ ಬಹಳ ಹತ್ತಿರವೆನಿಸುವಂತಹ ಬೃಹದಾಕಾರದ ದೇಹ, ವಿಶಾಲ ಬೆನ್ನು ಮತ್ತು ಗಟ್ಟಿಮುಟ್ಟಾದ ತೋಳುಗಳು,ಇಳಿಬಿಟ್ಟ ಕೆದರಿದ ಕೂದಲು, ನಡುವಯಯಸ್ಸಿನ ಅರೆಬರೆ ದೇಹವನ್ನು ಮುಚ್ಚಿದ ಚರ್ಮದ ಉಡುಗೆ, ಆಕೆಯ ಮುಖ ನಾನು ನಿಂತಿದ್ದ ದಿಕ್ಕಿಗೆ ವಿರುದ್ಧವಾಗಿದ್ದರಿಂದ ನನಗೆ ಬೆನ್ನು ಮಾತ್ರ ಕಾಣುತ್ತಿತ್ತು, ಆಕೆ ತನಗೆ ತಾನೇ ಎಂಬಂತೆ ಏನೋ ಗೊಣಗಿಕೊಳ್ಳುತ್ತಿದ್ದಳು, ಸ್ವಲ್ಪ ಸಮೀಪ ಹೋದಂತೆ ಅವಳ‌ ಮಾತುಗಳು ಕೇಳತೊಡಗಿದವು.

     "ನಿಜ ರಾಕ್ಷಸ ಕುಲದವಳು ನಾನು, ಆದರೆ ಅಂತಿತವಳೇನಲ್ಲ,ಹಿಂಡಿಂಬನಂತ ಪರಾಕ್ರಮಿಯ ತಂಗಿ, ಸಕಲ ವಿಧ್ಯೆಗಳನ್ನೂ ಕಲಿತಿದ್ದೆ, ಮಾಯಾವಿಧ್ಯೆಯಲ್ಲಿ ಪರಿಣತೆಯಾಗಿದ್ದೆ, ಬೇಕೆಂದಾಗ ಬೇಕಾದ ಆಕಾರ ಪಡೆವ ಶಕ್ತಿಯಿತ್ತು ನನಗೆ, ಹಿಡಿಂಬೆ ಎನ್ನುವುದಕ್ಕೂ ಮೊದಲು 'ಕಮಲಪಾಲಿಕೆ’ ಅನ್ನುವ ಸುಂದರ ಹೆಸರಿತ್ತಂತೆ ನನಗೆ. ಅಣ್ಣ ಹೇಳಿದ ಕೆಲಸಗಳನ್ನು ಮಾಡಿಕೊಂಡು ಸುಖವಾಗಿದ್ದೆ, ಆತ, ಆ 'ಭೀಮಸೇನ' ಈ ಕಾಡಿಗೆ ಬಂದೇ ಬಂದ ಎಲ್ಲವೂ ಬದಲಾಗಿ ಹೋಯ್ತು," ಎಂದಳು, ಓಹೋ ಇವಳುಭೀಮನ ಮೊದಲ ಹೆಂಡತಿ ಹಿಡಿಂಬಾ ಎಂಬುದು ನನಗೆ ಅರ್ಥವಾಯ್ತು. ಒಂದು ನಿಟ್ಟುಸಿರು ಬಿಟ್ಟು ಅವಳು ಮಾತು ಮುಂದುವರಿಸಿದಳು "ಅರಗಿನ ಮನೆಯ ಬೆಂಕಿಯಿಂದ ತಪ್ಪಿಸಿಕೊಂಡು ಬರುವಾಗ ದಣಿದು ರಾತ್ರಿಯ ಸಮಯ ಪಾಂಡವರು ಉಳಿದಿದ್ದು  ನಮ್ಮ ಹಿಡಿಂಬವನದಲ್ಲಿ.ಇವರ ದೇಹದ ವಾಸನೆಯಲ್ಲೆ ಜಾಡನ್ನು ಹಿಡಿದ ಅಣ್ಣ ‘ಅವರನ್ನೆಲ್ಲಾ ಕೊಂದು ಅಡಿಗೆ ಮಾಡಿ ತಾ ಇಬ್ಬರೂ ತಿನ್ನಬಹುದು’ ಎಂದು ಹೇಳಿ ಕಳಿಸಿದ್ದ, ಆದರೆ ನನಗೆ ಅಂದು ಅದೇನಾಯಿತೋ, ಮಲಗಿದ್ದ ಐದು ಜನರ ರಕ್ಷಣೆಯು ನನ್ನ ಕರ್ತವ್ಯ ಎಂಬಂತೆ ಕುಳಿತಿದ್ದ ಆ ಅಜಾನು ಬಾಹು, ಸ್ಪುರದ್ರೂಪಿ, ತೇಜಸ್ಸಿನಿಂದ ಕೂಡಿದ ಯುವಕನನ್ನು ನೋಡಿದ ತಕ್ಷಣ ನಾನು ಕರಗಿಹೋಗಿದ್ದೆ, ಮದುವೆ ಅಂತ ಆದರೆ ಅವನನ್ನೇ ಎಂಬ ನಿರ್ಧಾರಕ್ಕೆ ಆ ಕ್ಷಣವೇ ಬಂದುಬಿಟ್ಟಿದ್ದೆ, ಕೊಲ್ಲಲೆಂದು ಬಂದವಳು ಸುಂದರ ಹೆಣ್ಣಿನ ರೂಪ ಧರಿಸಿ,ಪ್ರೇಮ ನಿವೇದನೆಗೆ ನಿಂತುಬಿಟ್ಟೆ, ಆದರೆ ಅವನೋ ನನ್ನ ಕಡೆ ಕಣ್ಣೆತ್ತಿಯೂ ನೋಡಲಿಲ್ಲ, ಪರಿಪರಿಯಾಗಿ ಬೇಡಿದರೂ ಕರಗಲಿಲ್ಲ.

    ಅಷ್ಟರಲ್ಲಿ ನನಗೇಕೆ ತಡವಾಯ್ತೆಂದು ನೋಡಲು ಅಣ್ಣನೇ ಅಲ್ಲಿಗೆ ಬಂದುಬಿಟ್ಟ, ವಿಚಿತ್ರ ನೋಡಿ. ಹಸಿವಿನಿಂದ ಕಂಗೆಟ್ಟಿದ್ದ ಅಣ್ಣ,. ತನ್ನವರನ್ನು ಕಾಯಲು ಹಸಿವು,ನಿದ್ರೆ ಇಲ್ಲದೇ ಕಂಗೆಟ್ಟಿದ್ದ ಭೀಮ ಇಬ್ಬರೂ ನಾನೆಷ್ಟು ತಡೆದರೂ ನಿಲ್ಲದೆ ಮಾರಾಮಾರಿ ಯುದ್ಧಕ್ಕೆ ಬಿದ್ದೇ ಬಿಟ್ಟರು,ಅಣ್ಣನನ್ನು ಅವನು ಕೊಂದೇ ಬಿಟ್ಟ, ನನಗೆ ಅವನ ಮೇಲೆ ಅದೆಂತಹಾ ಪ್ರೇಮವಾಗಿತ್ತೆಂದರೆ, ಕುಂತಿಗೆ ನನ್ನ ಪರಿಚಯ ಮಾಡಿಕೊಂಡು,ಭೀಮನಿಗೆ ನನ್ನನ್ನು ವರಿಸಲು ಹೇಳು, ಅವನು ಸಿಗದಿದ್ದರೆ ನಾನು ನನ್ನ ದೇಹ ತ್ಯಜಿಸುತ್ತೇನೆ ಎಂದೆ.ಇದಕ್ಕೆ ಒಪ್ಪಿದ ಕುಂತಿ ಭೀಮನನ್ನು ನನ್ನೊಂದಿಗೆ ಮದುವೆ ಮಾಡಿಸಿದಳು." ಇಷ್ಟು ಮಾತಾಡಿ ಮತ್ತೆ ಅಳತೊಡಗಿದಳು ಹಿಡಿಂಬಾ.

    ರೌದ್ರದಿಂದ ಪ್ರಾರಂಭಗೊಂಡು ಶೃಂಗಾರಕ್ಕೆ ಬಂದು ನಿಲ್ಲುವ ಆ ಕಾಲದ 'ಲವ್ ಅಟ್ ಫರ್ಸ್ಟ್ ಸೈಟ್' ಮತ್ತು 'ಒನ್ ವೇ ಲವ್' ಅನ್ನು ಶೃಂಗಾರಭರಿತ ಸುಖಾಂತ್ಯ ಕತೆಯಾಗಿಸಿ 'ಪಂಪ' ಕಟ್ಟಿಕೊಟ್ಟಿದ್ದನ್ನು ಓದಿದ್ದು ನೆನಪಾಯ್ತು ನನಗೆ. ಮಹಾಭಾರತ ದ ಹಿಡಿಂಬಾ ಮತ್ತು ರಾಮಾಯಣದ ಶೂರ್ಪನಖಾ, ತಮಗೆ‌ ಇಷ್ಟವಾದ ಗಂಡನ್ನು ತಾವೇ ನೇರವಾಗಿ ಹೋಗಿ ಮಾತಾಡಿಸಿ ಪ್ರಪೋಸ್ ಮಾಡಿದ ದಿಟ್ಟ ಹೆಂಗಳೆಯರು, ಆ ತರಹದ ಒಂದು ಸ್ವಾತಂತ್ರ್ಯ ಅಂದಿನ ತಳಸಮುದಾಯಕ್ಕೆ ಇದ್ದ ಬಗ್ಗೆ ನಾನು ಯೋಚಿಸುತ್ತಿದ್ದೆ, ಅವಳು ಮತ್ತೆ ಮಾತಿಗೆ ತೊಡಗಿದಳು,"ಭೀಮನಿಗೆ ಇಷ್ಟವೇ ಇರಲಿಲ್ಲವೆಂದಲ್ಲ,ಮದುವೆಯ ನಂತರ  ತಿಂಗಳುಗಟ್ಟಲೆ ಇದೇ ಕಾಡಿನಲ್ಲೇ, ಸರೋವರ, ಹಚ್ಚಹಸಿರ ನಡುವೆ ಪ್ರೇಮ, ಪ್ರಣಯದಲ್ಲಿ, ಸಂಸಾರಸುಖವನ್ನು ಕಂಡೆವು. ನನ್ನ ಮುದ್ದು ಕಂದ ಘಟೋತ್ಕಚನ ಜನನ ಎಲ್ಲರಲ್ಲೂ ಹರುಷ ಉಕ್ಕಿಸಿತು, ಅಲ್ಲಿಯವರೆಗೂ ಎಲ್ಲವೂ ಸೊಗಸಾಗಿತ್ತು, ಆದರೆ..." ಮತ್ತೆ ಅವಳು ಬೋರೆಂದು ಅಳತೊಡಗಿದಳು, ಇಂತಹ ಅಜಾನುಬಾಹು ದೇಹಕ್ಕೆ ಆ ಅಳುವಿನ ದನಿ ಯಾಕೋ ಸೂಟ್ ಆಗುತ್ತಿಲ್ವಲ್ಲಾ ಅನಿಸಿತು ನನಗೆ, ಆದದ್ದಾಗಲಿ ಹತ್ತಿರ ಹೋಗಿ ಮಾತಾಡಿಸಿ ಬಿಡೋಣ ಅಂತ ಗುಡ್ಡವನ್ನು ಹತ್ತತೊಡಗಿದೆ, ಇನ್ನೇನು ಹತ್ತಿರ ಹೋಗಬೇಕು ಅಷ್ಟರಲ್ಲಿ  ಬಲಗಡೆಯ ಮರಗಳ ನಡುವೆ ನೊರನೊರನೆ ಜೋರಾದ ಸದ್ದಾಗತೊಡಗಿತು, ಗಾಭರಿಯಾಗಿ ಹತ್ತಿರವಿದ್ದ ಮರದ ಮರೆಯಲ್ಲಿ ಅವಿತುಕೊಂಡು ಗಮನಿಸತೊಡಗಿದೆ, ಆ ದಿಕ್ಕಿನಲ್ಲಿ ಏನೋ ಚಲನೆ, ಮರಗಳನ್ನು ಸೀಳಿಕೊಂಡು ಮತ್ತೊಂದು ಬೃಹದಾಕಾರ ಹೊರಬಂದಿತು, ತುಂಬು ಹರೆಯದ ಕಟ್ಟುಮಸ್ತಾದ ಹರೆಯದ ರಾಕ್ಷಸ ದೇಹ, ಮುಖದಲ್ಲಿ ಅದೇನೋ ತೇಜಸ್ಸು, ಫಳಫಳನೆ ಹೊಳೆವ ಘಟದಂತಹ ಬೋಳು ತಲೆ, ಪರ್ವತವೇ ನಡೆದು ಬಂದಂತೆ ಆತ ಬಂದು ಆ ಹೆಂಗಸಿನ ಮುಂದೆ ನಿಂತ.

    ಅವನನ್ನು ಕಂಡ ತಕ್ಷಣ ಬಾಚಿ ತಬ್ಬಿದ ಹಿಡಿಂಬಾ "ಕಂದಾ ಘಟೋತ್ಗಜಾ" ಎಂದು ಇನ್ನೂ ಜೋರಾಗಿ ಅತ್ತಳು.

ಘಟೋತ್ಕಜ :  ಅಮ್ಮಾ ಇಲ್ಲಿಗೇಕೆ ಬಂದು ಕುಳಿತಿರುವೆ?

ಅಪ್ಪ ಬಂದಿದ್ದಾನೆ, ನಿನಗಾಗಿ ಎಲ್ಲರೂ ಕಾಯುತ್ತಿದ್ದಾರೆ,

ಬಾ ಅಮ್ಮ, ಮನೆಗೆ ಹೋಗೋಣ, ನನಗಿವತ್ತು ಬಹಳ ಸಂತೋಷವಾಗಿದೆ ಗೊತ್ತಾ? ಇದುವರೆಗೆ ಕೇವಲ ಹೆಸರು ಮಾತ್ರ ಕೇಳಿದ್ದ ವೀರಾಧಿವೀರ, ವಾಯುಪುತ್ರ,ಎಲ್ಲರ ಮೆಚ್ಚಿನ  ‘ಭೀಮ’ ನನ್ನ ಅಪ್ಪನನ್ನು ಇವತ್ತು ಕಂಡೆ ಅಮ್ಮ.

ಹಿಡಿಂಬೆ : ಹಿಂತಿರುಗಿ ಬರುವನೆಂಬ ಸಣ್ಣ ಬರವಸೆಯನ್ನೂ ಕೊಡದೆ,ಅಂದು ತಿರುಗಿನೋಡದೇ ಹೋದ ನಿನ್ನ ಅಪ್ಪ, ನೀನು ಹೇಗಿದ್ದಿಯಾ? ಎಂದು ಯಾವತ್ತೂ ಕೇಳದವ,ತಂದೆಯಿದ್ದೂ ಅನಾಥನಂತೆ ಬೆಳೆದ ನಿನ್ನನ್ನು ನೋಡಲು ಈಗ ಏಕೆ ಬಂದಿದ್ದಾನೆ ನಿನಗೆ ಗೊತ್ತಾ ಕಂದ.

ಘ:  ಇಲ್ಲ ಅಮ್ಮ, ಅಪ್ಪನಿಗೆ ಈಗ ನನ್ನನ್ನು ನೋಡಬೇಕು ಅನಿಸಿರಬಹುದು, 

ಹಿ: ಅಯ್ಯೋ ನೀನು ಅದೆಷ್ಟು ಮುಗ್ಧ ಕಂದಾ, ಈ ನಾಗರಿಕ ಜನರ ಹುನ್ನಾರಗಳು ನಿನಗಿನ್ನೂ ಅರ್ಥವಾಗಿಲ್ಲ ಮಗೂ, ಅವನು ನಿನ್ನ ಮೇಲಿನ ಪ್ರೀತಿಗಾಗೊ, ಇಲ್ಲವೇ ಮಮತೆಗಾಗಿಯೋ ಬಂದಿಲ್ಲ..ಅವನು ಬಂದಿರುವುದು ರಾಜಕೀಯ ಕೆಲಸಕ್ಕಾಗಿ,ಮುಂದೆ ನಡೆವ ಕುರುಕ್ಷೇತ್ರ ಯುದ್ಧದಲ್ಲಿ ಗೆಲ್ಲಲು ಬೇಕಾಗಿರುವ ಘಟೋತ್ಗಜ ಎಂಬ ಸಾಧನಕ್ಕಾಗಿ.

ಘ: ಆಹಾ, ಯುದ್ಧವೇ! ನಾನು ಪಾಂಡವರ ಪರವಾಗಿ ಯುದ್ಧದಲ್ಲಿ ಕಾದಾಡುವುದೇ ! ಇದಕ್ಕಿಂತ ಸೌಭಾಗ್ಯ ಒಬ್ಬ ವೀರನ ಮಗನಾಗಿ ನನಗೆ ಬೇರೇನಿದೆ ಅಮ್ಮಾ?

ಹಿ: ಕಂದಾ ನೀನು ವೀರನೇನೋ ಹೌದು, ಆದರೆ ನಗರದ ಜನರ ಕುಯುಕ್ತಿ,ಮೋಸದ ಆಟ ನಿನಗೆ ಗೊತ್ತಿಲ್ಲ, ವೀರಾಧಿವೀರರೂ, ಬೃಹತ್ ಸ್ಯನ್ಯವೂ ಇರುವ ಕೌರವರ ವಿರುದ್ಧ ನಿನ್ನನ್ನು ಯುದ್ಧಕ್ಕೆ ಹೇಗೆ ಕಳಿಸಲಿ?

ಘ: ಅಮ್ಮಾ ನಾನು ಕಂಡಂತೆ ಸದಾ ಅಪ್ಪನ ನೆನಪಿನಲ್ಲೇ ಕಾಲ ಕಳೆದ ಸಾಧ್ವಿ ನೀನು, ರಾಜಾಸ್ಥಾನವಾಗಲೀ, ಹಿರಿಹೆಂಡತಿಯ ಪಟ್ಟವಾಗಲೀ ಎಂದೂ ಬೇಕೆಂದವಳಲ್ಲ,ಸಕಲ ಗುಣವಿರುವವಳು, ಆದರ್ಶ ನಾರಿಯಾದ ನಿನ್ನನ್ನು ನನ್ನ ಅಪ್ಪನು ಏಕೆ ತನ್ನಲ್ಲಿಗೆ ಕರೆಸೆಕೊಳ್ಳಲಿಲ್ಲ?

ಹಿ: ಬಯಸಿದ ದೇವತೆಗಳಲ್ಲಿ ಮಕ್ಕಳನ್ನು ಪಡೆಯುವ, ಒಬ್ಬಳೇ ಐವರಿಗೆ ಹೆಂಡತಿಯಾಗುವ, ನಿಯೋಗದಲ್ಲಿ ವಂಶೋದ್ಧಾರಕರನ್ನು ಪಡೆಯುವ ನಿರ್ಧಾರಗಳನ್ನು ಮಾಡುವಾಗ ಅಡ್ಡ ಬರದ ನ್ಯಾಯ,ಧರ್ಮಗಳು ಕುರುವಂಶಜರಿಗೆ ಭೀಮನ ಹೆಂಡತಿಯಾಗಿ ನನ್ನನ್ನು ಒಪ್ಪಿಕೊಳ್ಳುವಾಗ ಅಡ್ಡ ಬಂದುಬಿಟ್ಟವು ಮಗೂ,ಬಹುಶಃ ನಾನು ಅನಾರ್ಯಳು ಎಂದಿರಬಹುದು, ಆದರೆ ನೋಡು,ಈಗ ನನ್ನ ಮಗ ಅವರಿಗೆ ಬೇಕಾಗಿದ್ದಾನೆ!

ಘ : ಅಮ್ಮಾ ಹೆದರದಿರು, ನೀನು ವೀರನ ಪತ್ನಿ, ನಿನಗೆ ಅನ್ಯಾಯವಾಗಿದೆ ನಿಜ, ಆದರೆ ಇದುವವರೆಗೆ ನನ್ನನ್ನು ಯಾವ ರಾಜಕುಮಾರನಿಗೂ ಕಮ್ಮಿಯಿಲ್ಲದಂತೆ ಬೆಳೆಸಿರುವೆ, ಈಗ ಅದೇ ಕ್ಷತ್ರಿಯ ಸೊಸೆಯಂತೆ ಹರಸಿ ಯುದ್ಧಕ್ಕೆ ಕಳಿಸು, ಅಲ್ಲಿ ಜಗದೇಕ ವೀರರಾದ ದೊಡ್ಡಪ್ಪ, ಚಿಕ್ಕಪ್ಪರಿರುತ್ತಾರೆ.ಯುದ್ಧ ನನ್ನ ಯಾವತ್ತಿನ ಕನಸು ಅಮ್ಮ.

ಹಿ: ಆಗಲಿ, ನಡೆ ಕಂದ, ನಿನ್ನ ಆಸೆಗೆ ನಾನು ಯಾವತ್ತೂ ಅಡ್ಡಿಯಾಗಿಲ್ಲ, ಹಾಗೆಯೇ ಸೊಸೆ ಧರ್ಮಕ್ಕೂ,ಒಮ್ಮೆಲೇ ನೂರಾರು ಜನರನ್ನು ಕೊಲ್ಲಬಲ್ಲಂತಹ ನೀನು ಯುದ್ಧಕ್ಕೆ ನಿಂತರೆ ಇಡೀ ವೈರಿಪಡೆಯನ್ನು ನುಂಗಿಹಾಕಬಹುದಾದಂತ ವೀರಾಧಿವೀರ, ನಡಿ ಮಗೂ.

ಹೀಗೆ ಹೃಳಿದ ಹಿಡಿಂಬೆ ಮಗನ ಜೊತೆ ಸರಸರನೆ ಅದೇ ಮರಗಳ ನಡುವೆ ಹಾದು ಹೊರಟೇ ಬಿಟ್ಟಳು ದಿಟ್ಟ ಹೆಜ್ಜೆಗಳನ್ನಿಡುತ್ತಾ. ಇಬ್ಬರೂ ಆ ದಟ್ಟ ಕಾಡಿನಲ್ಲಿ ಮಾಯವಾದರು.ಇದಿಷ್ಟೂ ಚಿತ್ರಣ ನನ್ನ ಕಣ್ಣ ಮುಂದೆ ಕನಸಿನಂತೆ ನಡೆದು ಹೋಯ್ತು, ಕಣ್ಣುಜ್ಜಿ ಕಣ್ಣು ಬಿಟ್ಟಾಗ ನಾನು ಟೇಬಲಿನ ಮೇಲೆ ಪಂಪ, ರನ್ನ, ಕುಮಾರವ್ಯಾಸ ರು 'ಘಟೋತ್ಗಜ ವಧೆ ' ಎಂಬ ಪರ್ವವನ್ನು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನ ಓದುತ್ತಾ ಕುಳಿತಿದ್ದೆ,ಅದು ಹೇಗೆ ಹಿಡಿಂಬೆಯು ತನ್ನ ಏಕೈಕ ಆಸರೆಯಾದ ಮಗನನ್ನು ಎದೆಗೆ ಕಲ್ಲನ್ನು ಹಾಕಿಕೊಂಡವಳಂತೆ ದುಗುಡವನ್ನೆಲ್ಲಾ ಬಚ್ಚಿಟ್ಟು, ರಣವೀಳ್ಯವನ್ನು ಕೊಟ್ಟು ನಗುನಗುತ್ತಾ ಆರತಿ ಎತ್ತಿ ಆಶೀರ್ವದಿಸಿ " ಅಪ್ಪನ ಹೆಸರನ್ನು ಅಮರವಾಗಿಸು ಮಗೂ " ಎಂದು ಬೀಳ್ಕೊಟ್ಟಳೋ. ಇದುವರೆಗೆ ಬಾರದ ಭೀಮನಿಗಾಗಿ ಕಾದ ಅವಳು , ಮುಂದೆ ಮಗನಿಗಾಗಿ ಕಾಯುತ್ತಾ ತನ್ನ ಜೀವನವನ್ನು ಅದು ಹೇಗೆ ಕಳೆದಳೋ?. ಇಂತಹಾ ತ್ಯಾಗಮಯಿ ತಾಯಿ ಹಿಡಿಂಬೆಯನ್ನೇ ಒಬ್ಬ ಶಕ್ತಿ ದೇವತೆಯಾಗಿ ಆರಾಧಿಸುವ ಒಂದು ವಿಸ್ಮಯಕರ ದೇವಾಲಯವೂ ಭಾರತದಲ್ಲಿದೆ.  ಪ್ರಕೃತಿ ವಿಸ್ಮಯಕ್ಕೆ ಹೆಸರಾಗಿರುವ ಮನಾಲಿಯಲ್ಲಿದೆ ಈ ದೇವಸ್ಥಾನ. 

ಕುರುಕ್ಷೇತ್ರ ಎಂಬ ಒಂದು ಮಹಾ ಯುದ್ಧ ಹಲವರ ಬದುಕನ್ನು ಬಲಿತೆಗೆದುಕೊಂಡಿದ್ದು ಸುಳ್ಳಲ್ಲ, ಅಭಿಮನ್ಯು,ಬಬ್ರುವಾಹನ, ಘಟೋತ್ಗಜ, ಉಪ ಪಾಂಡವರು ಬಹಳ ಚಿಕ್ಕವಯಸ್ಸಿಗೇ ರಾಜಕೀಯ ದಾಳಕ್ಕೆ ಬಲಿಯಾದ ಜೀವಗಳು, ಇವರನ್ನು ಹೆತ್ತ ಅಮ್ಮಂದಿರ ಜೀವ ಅದಿನ್ನೆಷ್ಟು ಒದ್ದಾಡಿರಬಹುದು?

ಯುದ್ಧ ಅವತ್ತಿಗೂ ಇವತ್ತಿಗೂ ಯಾವತ್ತಿಗೂ ವಿನಾಶಕಾರಿಯೇ.