ಸಿಎಂ ಔತಣ ಕೂಟ: ಸಂಕುಚಿತ ಮನಸ್ಸುಗಳ ರಂಪಾಟ
ಒಂದು ಸಮಾಜ ಆರೋಗ್ಯಕರವಾಗಿ ನೈತಿಕವಾಗಿ ಇರಬೇಕೆಂದರೆ ಅದರ ಎಲ್ಲ ಜನ ವರ್ಗಗಳು ಪ್ರಾಮಾಣಿಕವಾಗಿ ಇರಬೇಕಾಗುತ್ತದೆ. ಸಾಮಾಜಿಕ ಮಾಧ್ಯಮ (ಸೋಷಿಯಲ್ ಮೀಡಿಯಾ) ದಿನೇ ದಿನೇ ಪ್ರಬಲವಾಗುತ್ತಿರುವ ಈ ದಿನಗಳಲ್ಲಿ ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಉಳಿವಿಗಾಗಿ ಏದುಸಿರು ಬಿಡುತ್ತಿವೆ. ಇದರಿಂದಾಗಿ ಅವುಗಳನ್ನು ನೆಚ್ಚಿ, ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಪತ್ರಕರ್ತರು ತಮ್ಮ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದಾರೆ. ಈ ಬಗ್ಗೆಯೂ ಸಮಾಜ ಯೋಚಿಸಬೇಕು.

-ಎನ್.ಸಿದ್ದೇಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಮಂಡಿಸಿದ ರಾಜ್ಯ ಬಜೆಟ್ ಗಿಂತ ಹಿಂದಿನ ದಿನ ಆಯ್ದ ಪತ್ರಕರ್ತರಿಗೆ ನೀಡಿದ ಔತಣ ಕೂಟ ಹೆಚ್ಚಿನ ಸುದ್ದಿ ಸದ್ದು ಮಾಡಿದೆ. ಆ ಕೂಟದಲ್ಲಿ ಮದ್ಯಪಾನಕ್ಕೆ ಅವಕಾಶವಿತ್ತು ಎಂಬ ಒಂದೇ ಕಾರಣಕ್ಕೆ ಮಡಿ ಮೈಲಿಗೆಯ ಸಂಕುಚಿತ ಮನಸ್ಸುಗಳು ಭಾರಿ ಪ್ರಮಾದವಾಗಿದೆ ಎಂಬ ರೀತಿಯಲ್ಲಿ ಆತಂಕ ವ್ಯಕ್ತಪಡಿಸುತ್ತಿವೆ.
ನನ್ನ ಪ್ರಕಾರ ಔತಣ ಕೂಟ ಎಂಬುದು ಒಂದು ಊಟದ ವಿಷಯವಷ್ಟೆ. ಮದ್ಯಪಾನ ಕೂಡ ಊಟದ ಒಂದು ಭಾಗ. ಹಿತ ಮಿತವಾದ ಮದ್ಯಪಾನ ಆರೋಗ್ಯಕ್ಕೆ ಪೂರಕ ಎಂಬುದು ವೈಜ್ಞಾನಿಕ ಪರಿಶೋಧನೆಗೆ ಒಳಗಾಗಿರುವ ಹೇಳಿಕೆಯೇ ಆಗಿದೆ. ಈ ನನ್ನ ಮಾತಿಗೆ ಮದ್ಯವ್ಯಸನ, ಕುಡಿತದ ಚಟ ಅನ್ವಯವಾಗದು. ಅತಿಯಾದರೆ ಅಮೃತವೂ ವಿಷ ಎಂಬಂತೆ ಮದ್ಯವಾಗಲಿ, ಊಟವಾಗಲಿ ಅತಿಯಾದರೆ ಅದರಿಂದ ವ್ಯತಿರಿಕ್ತ ಪರಿಣಾಮ ಅನುಭವಿಸಲೇಬೇಕು.
ವೇದ ಪುರಾಣಗಳಲ್ಲೂ ದೇವಾನುದೇವತೆಗಳ ಸುರಪಾನದ ಬಗೆಗಿನ ರೋಚಕ ಕಥೆಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸುವುದು ಕ್ಲೀಷೆ ಎನಿಸಿದರೂ ಅದರ ಪ್ರಸ್ತುತೆಯನ್ನು ಅಲ್ಲಗೆಳೆಯಲಾಗದು. ಹಲವು ಸಮುದಾಯಗಳು ಮದುವೆ ಮತ್ತಿತರ ಸಮಾರಂಭಗಳಲ್ಲಿಯೇ ಮದ್ಯಪಾನ ಸಹಿತ ಭೋಜನಕೂಟಗಳನ್ನು ಏರ್ಪಡಿಸುವುದರಲ್ಲಿ ಯಾವುದೇ ಅಸಹಜತೆ ಇಲ್ಲ.
ಮದ್ಯಪಾನದ ಬಗೆಗಿನ ಕೆಟ್ಟ ಅಭಿಪ್ರಾಯವು `ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ’ ಎಂಬ ಅಭಿಯಾನದ ಮುಂದುವರೆದ ಭಾಗ. ಅದೊಂದು ಜನರ ವೈವಿಧ್ಯಮಯ ಆಹಾರ ಕ್ರಮ ಮತ್ತು ಶೈಲಿಯ ಬಗ್ಗೆ ಗೌರವ ಇಲ್ಲದೇ, ಶ್ರೇಷ್ಠತೆಯ ವ್ಯಸನವುಳ್ಳವರ ಪ್ರಲಾಪ.
ಈಗ ನಮ್ಮ ಸಿಎಂ ಔತಣಕೂಟದ ವಿಚಾರಕ್ಕೆ ಬರೋಣ. ಈ ಊಟದ ಕೂಟದ ಬಗ್ಗೆ ವಿವಾದ ಎಬ್ಬಿಸುತ್ತಿರುವ, ಟೀಕಿಸುತ್ತಿರುವ ಗುಂಪುಗಳಲ್ಲಿ ಬೇರೆ ಬೇರೆ ಹಿತಾಸಕ್ತಿಗಳು ಮತ್ತು ಕಾರ್ಯಸೂಚಿಗಳು ಇರುವಂತೆ ಕೆಲ ಗುಂಪುಗಳು ನೈತಿಕ ಪ್ರಶ್ನೆಯಾಗಿಯೂ ಇದನ್ನು ಚರ್ಚಿಸುತ್ತಿವೆ.
ಬಜೆಟ್ ಸೇರಿದಂತೆ ತಮ್ಮ ಬಗ್ಗೆ ಧನಾತ್ಮಕವಾಗಿ ಪ್ರಚಾರ ನೀಡಲಿ ಎಂದು ದುಬಾರಿ ಬೆಲೆಯ ಮದ್ಯಗಳ ಸಹಿತ ಈ ಔತಣ ಕೂಟ ಕೊಡಲಾಗಿದೆ ಎಂಬುದು ಒಂದು ಆರೋಪ. ಇಪ್ಪತ್ತಾರು ಸಾವಿರ ಅಲ್ಲ; ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮದ್ಯ ಕೊಡಿಸಿದರೂ ಆ ಕೂಟದಲ್ಲಿ ಭಾಗಿಯಾದ ಪತ್ರಕರ್ತರು ಸಿದ್ದರಾಮಯ್ಯನವರ ಬಗ್ಗೆ ಹೊಗಳಿ ಬರೆಯುತ್ತಾರೆ ಎಂಬ ತರ್ಕವೇ ಅತ್ಯಂತ ಬಾಲೀಶತನದ್ದು.
ಸದರಿ ಔತಣ ಕೂಟದಲ್ಲಿ ಭಾಗಿಯಾದ ಪತ್ರಕರ್ತರಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತರಿಗೆ ಮಾತ್ರ ತಮಗೆ ಬೇಕಾದ ಹಾಗೆ ಬರೆಯುವ ಛಾತಿ, ಅವಕಾಶ ಇರುವುದು. ಅವರು ತಮ್ಮ ಪರವಾಗಿ ಬರೆಯುತ್ತಾರೆ ಎಂಬ ನಿರೀಕ್ಷೆಯಾಗಲಿ ಭ್ರಮೆಯಾಗಲಿ ಆ ಕೂಟವನ್ನು ಆಯೋಜಿಸಿದವರಿಗೆ ಇರಲಿಕ್ಕಿಲ್ಲ. ಹತ್ತಾರು ವರ್ಷಗಳಿಂದ ಪಕ್ಷ ಯಾವುದೇ ಇರಲಿ, ಮುಖ್ಯಮಂತ್ರಿ ಯಾರೇ ಇರಲಿ ಬಜೆಟ್ ಗೆ ಮುಂಚೆ ಪತ್ರಕರ್ತರಿಗೆ ಒಂದು ಔತಣಕೂಟ ಏರ್ಪಡಿಸುವ ಸಂಪ್ರದಾಯವಾಗಿ ಅದನ್ನು ಅನುಸರಿಸಿಕೊಂಡು ಬಂದಿದ್ದಾರೆ.
ಜವಹಾರ್ ಲಾಲ್ ನೆಹರೂ, ಇಂದಿರಾಗಾಂಧಿ ಅವರ ನಂತರದಲ್ಲಿ ಅತ್ಯಂತ ಜನಪ್ರಿಯ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ ಅವರು ಪತ್ರಕರ್ತರಿಗೆ ಔತಣ ಕೂಟ ಇರಲಿ ಪತ್ರಿಕಾಗೋಷ್ಠಿಯನ್ನೇ ನಡೆಸದೇ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಸಿಗುತ್ತಿರುವ ಪ್ರಚಾರದಲ್ಲಿ ಕಡಿಮೆ ಏನಾದರೂ ಆಗಿದೆಯೇ?
ಪತ್ರಿಕಾಗೋಷ್ಠಿಯನ್ನೇ ನಡೆಸದಿದ್ದರೂ, ಪತ್ರಕರ್ತರೊಂದಿಗೆ ಮಾತನಾಡದಿದ್ದರೂ ಮಾಧ್ಯಮ ಲೋಕದಲ್ಲಿ ಮೋದಿ ಅವರ ಹವಾ ಹೇಗಿದೆ? ಸದಾ ಟೀಕಾ ಪ್ರಹಾರಕ್ಕೆ ಗುರಿಯಾಗಿಯೂ ಪತ್ರಕರ್ತರೊಂದಿಗೆ ಮಾತನಾಡುವ ಸೌಜನ್ಯ ಉಳಿಸಿಕೊಂಡಿರುವ ಇತರ ಪಕ್ಷಗಳ ರಾಜಕೀಯ ನಾಯಕರನ್ನು ಮಾಧ್ಯಮಗಳಲ್ಲಿ ಹೇಗೆಲ್ಲಾ ಬಿಂಬಿಸಲಾಗುತ್ತಿದೆ?
ಆಮೀಷ, ಭ್ರಷ್ಟಾಚಾರ ಎಂಬುದು ಎಲ್ಲ ಜನ ವರ್ಗಗಳಲ್ಲಿ ಇರುವಂತೆ ಪತ್ರಿಕಾ ಮತ್ತು ಮಾಧ್ಯಮ ಲೋಕದಲ್ಲೂ ಇದ್ದೇ ಇದೆ, ಮುಂದೆಯೂ ಇರಲಿದೆ. ಔತಣಕೂಟವನ್ನು ಒಂದು ಬಗೆಯ ಆಮೀಷ ಎಂದು ವಾದಿಸುತ್ತಿರುವವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಪತ್ರಿಕೆಗಳು, ಮಾಧ್ಯಮಗಳು ಮತ್ತು ಪತ್ರಕರ್ತರ ಐತಿಹಾಸಿಕ ಸಂಬಂಧದ ಬಗ್ಗೆ ಸಾಕಷ್ಟು ತಿಳಿವಳಿಕೆ ಇಲ್ಲ ಎಂದೆನಿಸುತ್ತಿದೆ.
ನನಗೆ ಗೊತ್ತಿರುವಂತೆ 1980- 90ರ ದಶಕಗಳಲ್ಲಿ ಮುಖ್ಯಮಂತ್ರಿಯಾದವರು ವರದಿಗಾರರು ಮತ್ತು ಮುಖ್ಯ ವರದಿಗಾರರ ಜತೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರೆ 2000ದಿಂದೀಚೆಗೆ ಪತ್ರಿಕೆಗಳು ಮತ್ತು ಮಾಧ್ಯಮಗಳ ಮಾಲೀಕರೊಂದಿಗೆ ನಿಕಟ ಮತ್ತು ನೇರ ಒಡನಾಟ ಇರಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ವಾದಕ್ಕೆ ಔತಣಕೂಟವನ್ನು ಒಂದು ಆಮೀಷ ಎನ್ನುವುದಾದರೆ ಸಾಮಾನ್ಯವಾಗಿ ಯಾವುದೇ ಆಮೀಷವನ್ನು ಕದ್ದು ಮುಚ್ಚಿ ನೀಡಲಾಗುತ್ತದೆಯೇ ಹೊರತು ಬಹಿರಂಗವಾಗಿ ಅಲ್ಲ. ಇದು ಆಮೀಷ, ಇದಕ್ಕೆ ಸರ್ಕಾರದ ಹಣ ಖರ್ಚಾಗಿದ್ದರೆ ಅದು ಅಕ್ಷಮ್ಯ ಎನ್ನುವವರು ಪತ್ರಿಕಾ ಮತ್ತು ಮಾಧ್ಯಮ ಲೋಕದಲ್ಲಿ ನಡೆದಿರುವ, ನಡೆಯುತ್ತಿರುವ ನಾಜೂಕಿನ ವ್ಯವಹಾರಗಳ ಬಗೆಗೂ ಗಮನಹರಿಸಬೇಕು.
ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿಯೇ ಸುದ್ದಿಗಳ ರೂಪದಲ್ಲಿ ಬರುತ್ತಿರುವ ಜಾಹೀರಾತುಗಳು, ಬ್ರ್ಯಾಂಡ್ ಅಭಿವೃದ್ಧಿ ಹೆಸರಲ್ಲಿ ಪುಟಗಟ್ಟಲೇ ಪ್ರಕಟವಾಗುತ್ತಿರುವ ಮತ್ತು ಗಂಟೆಗಟ್ಟಲೇ ಪ್ರಸಾರವಾಗುತ್ತಿರುವ ವರದಿಗಳು- ಇವುಗಳ ಬಗೆಯೂ ಚಿತ್ತ ಹರಿಸಬೇಕು. ಇವೆಲ್ಲ ಮರೆಮಾಚಿದ ಜಾಹೀರಾತುಗಳು. ಇವುಗಳಿಗೆ ಕೋಟಿಗಟ್ಟಲೆ ಹಣವನ್ನು ಅಧಿಕೃತವಾಗಿಯೇ ಬಿಡುಗಡೆ ಮಾಡಲಾಗುತ್ತಿದೆ. ಇದು ಜನರ ತೆರಿಗೆ ಹಣದ ದುರುಪಯೋಗ ಆಗುವುದಿಲ್ಲವೇ?
ಬೇಕಾದ ಕಂಪೆನಿಗಳಿಗೆ ಆರ್ಡರ್ ಪಡೆದುಕೊಳ್ಳುವುದು, ಟೆಂಡರ್ ಗಳನ್ನು ತಮ್ಮದಾಗಿಸಿಕೊಳ್ಳುವುದು, ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳುವುದು, ಡಿ ನೋಟಿಫಿಕೇಷನ್ ಮಾಡಿಸಿಕೊಳ್ಳುವುದು- ಇವೇ ಮೊದಲಾದ ಹತ್ತಾರು ಡೀಲ್-ಗಳ ಮುಂದೆ ಒಂದು ಔತಣಕೂಟ ಕಣ್ಣು ಕುಕ್ಕುವಂತಾಗಿದ್ದು ವಿಪರ್ಯಾಸವೇ ಸರಿ.
ಒಂದು ಸಮಾಜ ಆರೋಗ್ಯಕರವಾಗಿ ನೈತಿಕವಾಗಿ ಇರಬೇಕೆಂದರೆ ಅದರ ಎಲ್ಲ ಜನ ವರ್ಗಗಳು ಪ್ರಾಮಾಣಿಕವಾಗಿ ಇರಬೇಕಾಗುತ್ತದೆ. ಸಾಮಾಜಿಕ ಮಾಧ್ಯಮ (ಸೋಷಿಯಲ್ ಮೀಡಿಯಾ) ದಿನೇ ದಿನೇ ಪ್ರಬಲವಾಗುತ್ತಿರುವ ಈ ದಿನಗಳಲ್ಲಿ ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಉಳಿವಿಗಾಗಿ ಏದುಸಿರು ಬಿಡುತ್ತಿವೆ. ಇದರಿಂದಾಗಿ ಅವುಗಳನ್ನು ನೆಚ್ಚಿ, ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಪತ್ರಕರ್ತರು ತಮ್ಮ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದಾರೆ. ಈ ಬಗ್ಗೆಯೂ ಸಮಾಜ ಯೋಚಿಸಬೇಕು.
bevarahani1