ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ 

ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ 

 


ವರ‍್ತಮಾನ

ಹರೀಶ್ ಎಸ್ ವಾಂಖೆಡೆ 


      ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಂಸ್ಥೆಯು ನಡೆಸಿರುವ ವಿಶ್ಲೇಷಣೆಯಲ್ಲಿ ನೀಡಿರುವ ಅಂಕಿ ಅಂಶಗಳ ಅನುಸಾರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಗಮನಾರ್ಹ ಜನಸಂಖ್ಯೆಯು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿರುವುದು ಸ್ಪಷ್ಟವಾಗಿ ತೋರುತ್ತದೆ. ಕೇವಲ ಒಂದು ದಶಕದ ಹಿಂದೆ ಬಿಜೆಪಿಯನ್ನು ಮೇಲ್ಪದರ ಸಮಾಜದ (Social Elites) ಪಕ್ಷವೆಂದು ಪ್ರತಿಪಕ್ಷಗಳು ಆಗಾಗ್ಗೆ ಮೂಲೆಗುಂಪು ಮಾಡುತ್ತಿದ್ದುದರ ಹಿನ್ನೆಲೆಯಲ್ಲಿ ಈ ಫಲಿತಾಂಶಗಳು ಪ್ರಮುಖ ಬೆಳವಣಿಗೆಯಾಗಿ ಕಾಣುತ್ತದೆ. ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಆಗಮನದೊಂದಿಗೆ ಬಿಜೆಪಿಯನ್ನು ಸಾಮಾಜಿಕವಾಗಿ ಅಂಚಿನಲ್ಲಿರುವ ಹಿಂದೂ ಜನಸಮೂಹಗಳಿಗೆ ಬದ್ಧತೆ ಹೊಂದಿರುವ ಪಕ್ಷವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈ ವಿದ್ಯಮಾನವನ್ನು ಈಗ ತಳಮಟ್ಟದ ಹಿಂದುತ್ವದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. 


      ಉತ್ತರ ಭಾರತದ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಛತ್ತೀಸ್‌ಘಡದಲ್ಲಿ ಬಿಜೆಪಿ ಈಗ ಪ್ರಬಲ ರಾಜಕೀಯ ಶಕ್ತಿಯಾಗಿದೆ. ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳ ಜನಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ ರಾಜ್ಯಗಳಾಗಿ ಇವು ಮುಖ್ಯವಾಗುತ್ತವೆ. ಕಳೆದ ಎರಡು ದಶಕಗಳಲ್ಲಿ, ಬಿಜೆಪಿ ನವೀನ ರಾಜಕೀಯ ತಂತ್ರಗಳ ಮೂಲಕ ಮತ್ತು ಪ್ರಭಾವಶಾಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಗುಂಪುಗಳನ್ನು ಯಶಸ್ವಿಯಾಗಿ ತನ್ನೆಡೆಗೆ ಸೆಳೆದುಕೊಂಡಿದೆ. ಆದಾಗ್ಯೂ, ಆರ್ಥಿಕ ಬೆಳವಣಿಗೆಗಳು ಮತ್ತು ರಾಜಕೀಯ ಬದಲಾವಣೆಯ ನಿಜವಾದ ಪ್ರಯೋಜನಗಳನ್ನು ಸಾಂಪ್ರದಾಯಿಕ ಸಮಾಜದ ಮೇಲ್ಪದರದಲ್ಲಿರುವವರೇ ಬಹಿರಂಗವಾಗಿ ನಿಯಂತ್ರಿಸಿದ್ದಾರೆ. ಈ ಬೆಳವಣಿಗೆಯು ಬಲಪಂಥೀಯರ ತ್ವರಿತ ಮುನ್ನಡೆಯ ಹಾದಿಯಲ್ಲಿ ದಲಿತ-ಬಹುಜನ ಜನಸಾಮಾನ್ಯರನ್ನು ನಿಷ್ಕ್ರಿಯ ಬಾಹ್ಯ ಪ್ರೇಕ್ಷಕರಾಗಿ ಮಾತ್ರ ಉಳಿಸುತ್ತದೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪಕ್ಷವು ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಅನ್ಯಾಯದ ಸಮಸ್ಯೆಗಳನ್ನು ಹೆಚ್ಚು ಸೂಕ್ಷ್ಮವಾಗಿ ಪರಿಹರಿಸಬೇಕಿದೆ.


ಪಕ್ಷದ ಕಾರ್ಯತಂತ್ರದ ರೂಪುರೇಷೆ


ದಲಿತ-ಬಹುಜನ ಜನಸಮೂಹದ ಏಳಿಗೆಗಾಗಿ ಬಿಜೆಪಿ ರೂಪಿಸಿರುವ ಕಾರ್ಯತಂತ್ರಗಳಿಗೆ ಮೂರು ಆಯಾಮಗಳಿವೆ. ಮೊದಲನೆಯದಾಗಿ, ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳು ಉಚಿತ ಎನ್ನಲಾಗುವ ಗ್ಯಾರಂಟಿ ಸೌಲಭ್ಯಗಳು, ಸಾಲ ಮನ್ನಾಗಳು, ಮಹಿಳಾ ಕೇಂದ್ರಿತ ನೀತಿಗಳು ಮುಂತಾದ ಸಾಮಾನ್ಯ ಜನಕಲ್ಯಾಣ ಕ್ರಮಗಳಿಂದ ಪ್ರಯೋಜನ ಪಡೆಯುತ್ತವೆ. ಸರ್ಕಾರವು ಬಡವರನ್ನು ಜಾತಿಯ ಆಧಾರದ ಮೇಲೆ ಗುರುತಿಸದೆ ಆಹಾರ ಧಾನ್ಯಗಳನ್ನೂ ಒಳಗೊಂಡಂತೆ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತದೆ. ಎರಡನೆಯದಾಗಿ, ಪ್ರಬಲ ಒಬಿಸಿ ಜಾತಿಗಳು, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಯಾದವ ಸಮುದಾಯಗಳು, ಸಾಮಾಜಿಕ ನ್ಯಾಯ ನೀತಿಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸುವ ಬಿಜೆಪಿ ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ವಿಶೇಷ ಮೀಸಲಾತಿ ಕೋಟಾವನ್ನು ರೂಪಿಸಬೇಕು ಎಂದು ಪ್ರತಿಪಾದಿಸುತ್ತದೆ. 


      ಮೂರನೆಯದಾಗಿ, ಪಕ್ಷದ ಕಾರ್ಯನೀತಿಯಿಂದ ಪ್ರಭಾವಿತವಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ರಂಗಗಳನ್ನು ಬಳಸಿಕೊಂಡು ಅವರ ಇತಿಹಾಸ, ಚಾರಿತ್ರಿಕ ವ್ಯಕ್ತಿಗಳು ಮತ್ತು ಜಾತಿ ಹಿರಿಮೆಯ ಬಗ್ಗೆ ಭಾವನಾತ್ಮಕ ನಿರೂಪಣೆಗಳನ್ನು ಸಂಗ್ರಹಿಸುವ ಮೂಲಕ ಬಿಜೆಪಿ ಕೆಳವರ್ಗದವರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಆದರೆ ಇಲ್ಲಿ ಕಾಣಬಹುದಾದ ವೈರುಧ್ಯ ಎಂದರೆ ಭೂರಹಿತ ಸಮುದಾಯಗಳಿಗೆ ಗಣನೀಯ ಪ್ರಮಾಣದ ಭೂ ಹಂಚಿಕೆ, ಅಧಿಕಾರದ ಉನ್ನತ ಶ್ರೇಣಿಗಳಲ್ಲಿ ದಲಿತ-ಬಹುಜನ ಗುಂಪುಗಳ ಪ್ರಾತಿನಿಧ್ಯ ಮತ್ತು ಪ್ರಮುಖ ಭಾಗಿದಾರರಾಗಿ ನವ-ಉದಾರವಾದಿ ಆರ್ಥಿಕ ಬೆಳವಣಿಗೆಯಲ್ಲಿ ಅವರ ಭಾಗವಹಿಸುವಿಕೆಯ ನಿಜವಾದ ಸಮಸ್ಯೆಗಳು ಬಿಜೆಪಿಯ ತಳಮಟ್ಟದ ಹಿಂದುತ್ವದ ಕಾರ್ಯತಂತ್ರದ ಚರ್ಚೆಗಳಲ್ಲಿ ಮುಖ್ಯವಾಗಿ ಕಾಣುವುದಿಲ್ಲ. .


ಬಿಹಾರ ಜಾತಿ ವರದಿ


ಇತ್ತೀಚೆಗೆ ಬಿಡುಗಡೆಯಾದ ಬಿಹಾರದ ಜಾತಿ ಸಮೀಕ್ಷೆಯ ವರದಿಯನ್ನು ಗಮನಿಸಿದಾಗ, ಅತ್ಯಂತ ಹೀನ ಸ್ಥಿತಿಯಲ್ಲಿರುವ ಸಾಮಾಜಿಕ ಗುಂಪುಗಳು, ಅದರಲ್ಲೂ ವಿಶೇಷವಾಗಿ ಇಬಿಸಿಗಳು ಇಂದಿಗೂ ಸಹ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳನ್ನು, ಸಾಮಾಜಿಕ ಅಭದ್ರತೆಗಳನ್ನು ಎದುರಿಸುತ್ತಿವೆ ಮತ್ತು ಮೂಲಭೂತ ಮಾನವ ಹಕ್ಕುಗಳಿಂದ ವಂಚಿತವಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಇತರ ರಾಜ್ಯಗಳಲ್ಲಿ ಇಬಿಸಿಗಳು ಮತ್ತು ದಲಿತರು ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎನ್ನುವುದೂ ಸ್ಪಷ್ಟವಾಗಿದೆ. ಆದಾಗ್ಯೂ, ಬಿಜೆಪಿ ಇನ್ನೂ ಈ ವಿಷಯಗಳ ಬಗ್ಗೆ ಹೆಚ್ಚಾಗಿ ಆಸಕ್ತಿ ತೋರಿಲ್ಲ. ಹಾಗೆಯೇ ಬಡತನ, ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಭೂ ಹೀನತೆಯ ಪ್ರಚಲಿತ ಸಮಸ್ಯೆಗಳನ್ನು ಎದುರಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಬಿಜೆಪಿಯ ಚುನಾವಣಾ ವಿಜಯಗಳನ್ನು ಸಾಧಿಸುವಲ್ಲಿ ಬಿಜೆಪಿಗೆ ತಳಮಟ್ಟದ ಹಿಂದುತ್ವದ ಪ್ರಯೋಗ ಬಹುಮುಖ್ಯ ಕಾರ್ಯತಂತ್ರದಂತೆ ಕಾಣುವುದಾದರೂ ಅತ್ಯಂತ ಹೀನ ಸ್ಥಿತಿಯಲ್ಲಿರುವ ಸಾಮಾಜಿಕ ಗುಂಪುಗಳ ಆಕಾಂಕ್ಷೆಗಳನ್ನು ಪೂರೈಸಲು ಯಾವುದೇ ಜನಾದೇಶವನ್ನು ನೀಡುವುದಿಲ್ಲ.


ವಿಷ್ಣು ದೇವ್ ಸಾಯಿ ಮತ್ತು ಮೋಹನ್ ಯಾದವ್ ಕ್ರಮವಾಗಿ ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುದರೊಂದಿಗೆ ಬಿಜೆಪಿ ತಳಮಟ್ಟದ ಗುಂಪುಗಳಿಂದ ಹೊಸ ನಾಯಕತ್ವವನ್ನು ಉತ್ತೇಜಿಸುವ ಇಚ್ಛೆಯನ್ನು ಪ್ರದರ್ಶಿಸಿದೆ. ಉನ್ನತ ರಾಜಕೀಯ ಸ್ಥಾನಗಳನ್ನು ಪ್ರಜಾಸತ್ತಾತ್ಮಕವಾಗಿಸುವ ಪ್ರಕ್ರಿಯೆಗೆ ಇದು ಚಾಲನೆ ನೀಡಿದಂತಾಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳ ಸಬಲೀಕರಣಕ್ಕಾಗಿ ಹಾಗೂ ಭಾಗವಹಿಸುವಿಕೆಗಾಗಿ ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಇಂತಹ ಉಪಕ್ರಮಗಳಿಗೆ ಪೂರಕವಾದ ನೀತಿಗಳನ್ನು ರೂಪಿಸುವುದು ಅತ್ಯವಶ್ಯ. 


ಚಾರಿತ್ರಿಕವಾಗಿ ಅವಕಾಶವಂಚಿತರಾದ ಜನಸಮೂಹಗಳು ತಮ್ಮ ಆರ್ಥಿಕ ಯೋಗಕ್ಷೇಮ ಮತ್ತು ಉನ್ನತ ರಾಜಕೀಯ ಭಾಗವಹಿಸುವಿಕೆಯ ಬಗ್ಗೆ ಆಳವಾದ ನಿರೀಕ್ಷೆಗಳೊಂದಿಗೆ ಬಿಜೆಪಿ ಕಡೆಗೆ ಹೋಗಿರುವುದರಿಂದ ಪಕ್ಷವು ಸಾಮಾಜಿಕ ನ್ಯಾಯದ ಅಗ್ನಿಪರೀಕ್ಷೆಯಲ್ಲಿ ಸಫಲವಾಗಬೇಕಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡದಲ್ಲಿ, ದಲಿತರು ಮತ್ತು ಆದಿವಾಸಿಗಳ ಒಟ್ಟು ಜನಸಂಖ್ಯೆಯು ಶೇಕಡಾ 40ರಷ್ಟಿದ್ದರೂ, ರಾಜಕೀಯ ಅಧಿಕಾರದಲ್ಲಿ, ಸಚಿವ ಸಂಪುಟದ ಮಂತ್ರಿ ಸ್ಥಾನ ಮತ್ತು ಇತರ ಪ್ರಮುಖ ಖಾತೆಗಳಲ್ಲಿ, ಈ ಸಮುದಾಯಗಳ ಪಾಲು ನಗಣ್ಯವಾಗಿದೆ. ಹಾಗೆಯೇ ಪ್ರಮುಖ ರಾಜಕೀಯ ಆಸ್ತಿಪಾಸ್ತಿಗಳ ವಿತರಣೆಯನ್ನು ಗಮನಿಸಿದಾಗ ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿಗಳು) ಮತ್ತೊಂದು ನಿರ್ಲಕ್ಷಿಸಲ್ಪಟ್ಟ ಸಮೂಹವಾಗಿ ಕಾಣುತ್ತದೆ. ಸಾಮಾಜಿಕ ಮೇಲ್ಪದರದ ಜನಸಂಖ್ಯೆ ಕಡಿಮೆಯಾಗಿದ್ದರೂ ಅವರೇ ಹಿಂದುತ್ವದ ಅಭಿವೃದ್ಧಿ ಕಾರ್ಯಸೂಚಿಯ ಮುಂಚೂಣಿಯಲ್ಲಿ ಕಾಣುತ್ತಿದ್ದಾರೆ. 


ಎರಡನೆಯದಾಗಿ, ದಲಿತರು ಮತ್ತು ಆದಿವಾಸಿಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ವರ್ಗಗಳಿಂದ ಹೊಸ ನಾಯಕತ್ವ ಮೂಡುವುದು, ವ್ಯಾಪಾರ-ವಾಣಿಜ್ಯದ ಉದ್ಯಮಿಗಳು ಸೃಷ್ಟಿಯಾಗುವುದು ಹಾಗೂ ಆರ್ಥಿಕ ವಲಯದಲ್ಲಿ ಪ್ರಭಾವಶಾಲಿ ಗುಂಪುಗಳು ಹೊರಹೊಮ್ಮುವುದನ್ನು ಬಿಜೆಪಿ ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಾಗುವುದರ ಮೂಲಕ ದಲಿತ-ಆದಿವಾಸಿ ಗುಂಪುಗಳನ್ನು ರಾಜ್ಯದ ಜನಕಲ್ಯಾಣ ಪ್ಯಾಕೇಜ್‌ಗಳ ನಿಷ್ಕ್ರಿಯ ಫಲಾನುಭವಿಗಳು ಎಂದು ಪರಿಗಣಿಸುವ ಸಾಂಪ್ರದಾಯಿಕ ಸಾಮಾಜಿಕ ನ್ಯಾಯದ ನೀತಿ ನಿರೂಪಣೆಗಳನ್ನು ತೀವ್ರಗೊಳಿಸಲು ಸಾಧ್ಯವಾಗುತ್ತದೆ. ದಲಿತರು ಮತ್ತು ಆದಿವಾಸಿಗಳನ್ನು ನವ-ಉದಾರವಾದಿ ಆರ್ಥಿಕ ಅಭಿವೃದ್ಧಿಯ ಪ್ರಮುಖ ಭಾಗಿದಾರರು ಎಂದು ಗುರುತಿಸುವ ಮೂಲಕ ನಗರೀಕರಣ, ಕೈಗಾರಿಕಾ ಉತ್ಪಾದನೆ ಮತ್ತು ತಾಂತ್ರಿಕ ಅಭಿವೃದ್ಧಿಯ ಲಾಭದಲ್ಲಿ ಸಮಾನ ಪಾಲನ್ನು ಹೊಂದುವಂತೆ ಮಾಡಬೇಕು. ಜಾಗತಿಕ ಆರ್ಥಿಕತೆಯಲ್ಲಿ ದಲಿತ-ಆದಿವಾಸಿ ವರ್ಗವು ನಿರ್ಣಾಯಕ ಪ್ರಭಾವಿಗಳಾಗಿ ಹೊರಹೊಮ್ಮಲು ಹೆಚ್ಚಿನ ನೀತಿ ನಿರ್ದೇಶನಗಳು ಮತ್ತು ಸಕಾರಾತ್ಮಕ ನೀತಿಗಳ ಅಗತ್ಯವಿದೆ.


ಪ್ರಜಾಸತ್ತಾತ್ಮಕವಾಗಿಸುವ ಸಾಧ್ಯತೆ


ರಾಜಕೀಯವಾಗಿ ಬಲಪಂಥೀಯ ವೇದಿಕೆಗೆ ತಳಮಟ್ಟದ ಸಾಮಾಜಿಕ ಗುಂಪುಗಳ ಹೊಸ ಆಗಮನದಿಂದ ಬಿಜೆಪಿಯ ಆಕ್ರಮಣಕಾರಿ ಕೋಮುವಾದಿ ಪರಿಭಾಷೆ ಹಿಂಬದಿಗೆ ಸರಿಯುತ್ತದೆ. ಅಷ್ಟೇ ಅಲ್ಲದೆ ಸಾಮಾಜಿಕ ನ್ಯಾಯದ ಕಾಳಜಿಗಳನ್ನು ಎದುರಿಸಲು ಪ್ರಭುತ್ವದ ಮೇಲೆ ಒತ್ತಡ ಹೇರುತ್ತದೆ ಎಂದು ನಿರೀಕ್ಷಿಸಬಹುದು. ಈ ಬೆಳವಣಿಗೆಯು ಬಲಪಂಥೀಯ ವೇದಿಕೆಯನ್ನು ಸಾಮಾಜಿಕ ಸುಧಾರಣೆಗಳ ಮೌಲ್ಯಗಳಿಗೆ ಅನುಕೂಲಕರವಾಗಿಸಲು, ಆದಿವಾಸಿಗಳ ಪರಿಸರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಧಿಕಾರದ ಉನ್ನತ ಸ್ತರಗಳನ್ನು ಪ್ರಜಾಸತ್ತಾತ್ಮಕವಾಗಿಸುವ ಸಾಧ್ಯತೆಗಳನ್ನು ಹೊಂದಿದೆ. ಅಂತಹ ಆಶ್ವಾಸನೆಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನವು ಬಿಜೆಪಿಯನ್ನು ಭಾರತದ ತಳಮಟ್ಟದ ಜನತೆಯ ಯೋಗಕ್ಷೇಮ-ಕಲ್ಯಾಣ ಮತ್ತು ಸಬಲೀಕರಣಕ್ಕೆ ಜವಾಬ್ದಾರವಾದ ಒಂದು ಗಣನೀಯ ಪ್ರಜಾಸತ್ತಾತ್ಮಕ ಪಕ್ಷವನ್ನಾಗಿ ಮಾಡುತ್ತದೆ.


(ಲೇಖಕರು ಜೆಎನ್‌ಯು ವಿಶ್ವವಿದ್ಯಾಲಯದ ರಾಜಕೀಯ ಅಧ್ಯಯನ ಕೇಂದ್ರದ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ )


(Subatern Hindutva & the crucial social justice test – ದ ಹಿಂದೂ 22-12-2023)


ಕನ್ನಡಕ್ಕೆ : ನಾ ದಿವಾಕರ