ಗೌತಮನು ಮನೆಯನ್ನು ತ್ಯಜಿಸಿದ್ದು ಏಕೆ?  

ಏಶಿಯಾ ಖಂಡದ ಬೆಳಕು ಎಂದು ಬಣ್ಣಿಸಲಾದ ಗೌತಮ  ಬುದ್ಧ ಪತ್ನಿ, ಮಗ ಮತ್ತು ಕುಟುಂಬವನ್ನು ತೊರೆದು ಸತ್ಯವನ್ನು ಅರಸುತ್ತಾ ಪರಿವ್ರಾಜಕನಾಗಲು ಕಾರಣವಾದ ಅಂಶಗಳ ಕುರಿತಂತೆ ಜನಪ್ರಿಯಗೊಂಡಿರುವ ಸರಳೀಕೃತ ಸಂಗತಿಗಳು ಬೇರೆ ಇವೆ. ಆದರೆ ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಕಾಣ್ಕೆಯೇ ಬೇರೆ ಇದೆ. ಈ ಕುರಿತ ಒಂದು ಓದು ಇಲ್ಲಿದೆ.- ಸಂಪಾದಕ

ಗೌತಮನು ಮನೆಯನ್ನು ತ್ಯಜಿಸಿದ್ದು ಏಕೆ?  

ಬುದ್ಧ ನಡೆ

ನಟರಾಜ ಬೂದಾಳು

 

 

ಸಾಕ್ಯ ಬುಡಕಟ್ಟು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸಂಘವೊಂದನ್ನು ಸ್ಥಾಪಿಸಿಕೊಂಡಿತ್ತು. ಇಪ್ಪತ್ತು ವರ್ಷ ತುಂಬಿದ ಗೌತಮನನ್ನು ಸಾಕ್ಯ ಬುಡಕಟ್ಟಿನ ಪದ್ಧತಿಯ ಪ್ರಕಾರ ಆ ಬುಡಕಟ್ಟಿನ ಸಂಘಕ್ಕೆ ಸದಸ್ಯನನ್ನಾಗಿ ಸೇರಿಸಿಕೊಳ್ಳಲಾಯಿತು. ಗೌತಮನಿಗೆ ಇಪ್ಪತ್ತೆಂಟು ವರ್ಷಗಳಾಗಿದ್ದಾಗ ಈ ಸಂಘದಲ್ಲಿ ಒಂದು ಸಂಘರ್ಷ ಉಂಟಾಯಿತು. ಸಾಕ್ಯರ ಕಪಿಲವಸ್ತುವಿನ ಪಕ್ಕದಲ್ಲಿ ಕೋಲಿ ಬುಡಕಟ್ಟಿನ ರಾಜ್ಯವಿದ್ದು ಎರಡೂ ರಾಜ್ಯಗಳ ನಡುವೆ ರೋಹಿಣಿ ನದಿ ಹರಿಯುತ್ತಿತ್ತು. ಎರಡು ರಾಜ್ಯದವರೂ ಆ ನದಿಯ ನೀರನ್ನು ಹಂಚಿಕೆ ಮಾಡಿಕೊಂಡು ಬಳಸಿಕೊಳ್ಳುತ್ತಿದ್ದರು. ಈ ನದಿನೀರಿನ ಹಂಚಿಕೆಯ ಕಾರಣಕ್ಕೆ ಎರಡು ರಾಜ್ಯಗಳ ನಡುವೆ ಆಗಾಗ್ಗೆ ತಕರಾರುಗಳು ಉಂಟಾಗುತ್ತಿದ್ದವು. ಸಣ್ಣಪುಟ್ಟ ಸಂಘರ್ಷಗಳೂ ನಡೆಯುತ್ತಿದ್ದವು. ಒಮ್ಮೆ ಈ ಬಿಕ್ಕಟ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಎರಡೂ ರಾಜ್ಯಗಳ ನಡುವೆ ಯುದ್ಧವೇ ನಡೆಯುವ ಹಂತಕ್ಕೆ ಬಂದಾಗ, ಸಾಕ್ಯ ಸಂಘದವರು ಈ ಬಗೆಗೆ ಚರ್ಚಿಸಲು ಸಭೆಯನ್ನು ಕರೆದರು. ಸಭೆಯಲ್ಲಿ ಈ ಸಮಸ್ಯೆಯನ್ನು ಒಂದೇ ಸಾರಿಗೆ ಬಗೆಹರಿಸಲು ಕೋಲಿಯರ ಜೊತೆಗೆ ಯುದ್ಧವೇ ಸರಿಯೆಂಬ ಅಭಿಪ್ರಾಯ ವ್ಯಕ್ತವಾಯಿತು. ಸಂಘದ ಸೇನಾಪತಿ ಯುದ್ಧ ಘೋಷಣೆಯ ನಿರ್ಣಯವನ್ನು ಮಂಡಿಸಿ ಒಪ್ಪಿಗೆ ಕೋರಿದನು.

ಈ ನಿರ್ಣಯದ ವಿರುದ್ಧವಾಗಿ ಮಾತನಾಡಿದ ಗೌತಮನು, “ಯುದ್ಧವು ಸಮಸ್ಯೆಯನ್ನು ಬಗೆಹರಿಸಲಾರದು, ಬದಲಿಗೆ ಅದು ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವುದೆಂದೂ, ಯುದ್ಧ ಇನ್ನಷ್ಟು ಯುದ್ಧಗಳಿಗೆ ಕಾರಣವಾಗುವುದೆಂದೂ, ಕೊಲೆ ಇನ್ನಷ್ಟು ಕೊಲೆಯಲ್ಲಿ ಪರ್ಯವಸಾನ ವಾಗುವುದೆಂದೂ, ಆದುದರಿಂದ ಯುದ್ಧವು ಪರಿಹಾರವಲ್ಲ” ಎಂದು ವಾದಿಸಿದನು. ಅದರ ಬದಲಿಗೆ, ತಪ್ಪು ಯಾರಿಂದ ಜರುಗುತ್ತಿದೆ. ಸಮಸ್ಯೆ ಕೋಲಿಯರ ಕಡೆಯಿಂದ ಉಂಟಾಗುತ್ತಿದೆಯೋ ಸಾಕ್ಯರ ಕಡೆಯಿಂದ ಉಂಟಾಗುತ್ತಿದೆಯೋ ಎಂದು ಸಮಾಧಾನದಿಂದ ಯೋಚಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆಯೆಂದನು. ಇದರ ಜೊತೆಗೆ ಸಾಕ್ಯರಲ್ಲಿನ ಅನೇಕ ಯುವಕರು ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದ್ದಾರೆ ಎಂಬ ಸಂಗತಿಯೂ ಇದೆ. ಆದುದರಿಂದ ನಿಷ್ಪಕ್ಷಪಾತವಾಗಿ ಯೋಚಿಸಿ ನಡೆದು ಕೊಳ್ಳುವುದರಿಂದ ಎರಡೂ ರಾಜ್ಯಗಳಿಗೆ ಒಳಿತನ್ನು ತರುತ್ತದೆ ಎಂದನು. ಅದಕ್ಕೆ ಸೇನಾಪತಿಯು, “ನಿಜ ನಮ್ಮ ಕಡೆಯವರೂ ಈ ವಿಷಯದಲ್ಲಿ ಮುನ್ನುಗ್ಗಿ ನಡೆದುಕೊಂಡಿದ್ದಾರೆ. ಆದರೆ ಈ ಬಾರಿಯ ನೀರಿನ ಮೊದಲ ಹಕ್ಕು ನಮ್ಮದೇ ಇತ್ತು. ಅದನ್ನು ಪಡೆಯುವ ಭರದಲ್ಲಿ ಹಾಗೆ ನಡೆದುಕೊಂಡಿರುವುದು ತಪ್ಪಲ್ಲ" ಎಂದು ವಾದಿಸಿದನು. ಅದಕ್ಕೆ ಗೌತಮನು, “ಇದು ನಮ್ಮ ಕಡೆಯವರಿಂದಲೂ ತಪ್ಪುಗಳು ನಡೆದಿವೆ ಎಂಬುದನ್ನು ಸಾಬೀತುಮಾಡುತ್ತದಷ್ಟೆ. ಆದುದರಿಂದ ನನ್ನ ಸಲಹೆ ಏನೆಂದರೆ: ನಮ್ಮ ಕಡೆಯಿಂದ ಇಬ್ಬರನ್ನು ಮತ್ತು ಕೋಲಿಯರ ಕಡೆಯಿಂದ ಅವರು ಇಬ್ಬರನ್ನು ಆಯ್ಕೆ ಮಾಡಲಿ. ಈ ನಾಲ್ವರು ಸೇರಿ ಮತ್ತೊಬ್ಬನನ್ನು ಆಯ್ಕೆ ಮಾಡಿ ಈ ಐವರೂ ಸೇರಿ ಎರಡೂ ಕಡೆಯ ವಾದಗಳನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸಲಿ” ಎಂದು ಸಲಹೆ ನೀಡಿದನು.

ಗೌತಮನ ಸಲಹೆಯನ್ನು ಕೆಲವು ಹಿರಿಯ ಸದಸ್ಯರು ಒಪ್ಪಿಕೊಂಡರೂ, ಸೇನಾಪತಿ ಅದನ್ನು ವಿರೋಧಿಸಿ ಯುದ್ಧವೇ ಸಮಸ್ಯೆಯನ್ನು ಬಗೆಹರಿಸಲು ಇರುವ ಏಕೈಕ ಮಾರ್ಗವೆಂದೂ, ಒಮ್ಮೆ ಕೋಲಿಯರನ್ನು ಬಗ್ಗುಬಡಿದರೆ ಮುಂದೆ ನಮಗೆ ಸಮಸ್ಯೆ ಇರುವುದಿಲ್ಲವೆಂದೂ ಯುದ್ಧದ ಪರವಾಗಿ ವಾದಿಸಿದನು. ಇದರಿಂದಾಗಿ ಗೌತಮನ ನಿಲುವು ತಿರಸ್ಕೃತವಾಗಿ ಕಡೆಗೆ ಯುದ್ಧವೇ ನಡೆಯಬೇಕೆಂದು ಬಹುಮತದ  ತೀರ್ಮಾನವಾಯಿತು. ಆದರೂ ಗೌತಮನು ಸಂಘದ ಎಲ್ಲ ಸದಸ್ಯರೂ ಇದನ್ನು ಮತ್ತೊಮ್ಮೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿ, ಕೋಲಿಯರೂ ಸಾಕ್ಯರೂ ಸಂಬಂಧಿಗಳೇ ಆಗಿರುವುದರಿಂದ ಯುದ್ಧವು ಇಬ್ಬರಿಗೂ ಒಳಿತಲ್ಲವೆಂದು ಎಲ್ಲರಲ್ಲೂ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದನು, ಪ್ರೀತಿಯ ಮೂಲಕ ದ್ವೇಷ ನಿವಾರಣೆ ಸಾಧ್ಯವೇ ಹೊರತು ಯುದ್ಧದ ಮೂಲಕ ಅಲ್ಲ ಎಂದು ಮತ್ತೆ ಮತ್ತೆ ವಾದಿಸಿದನು. ಇದರಿಂದ ತೀವ್ರ ಯುದ್ಧೋತ್ಸಾಹಿಯಾಗಿದ್ದ ಸೇನಾಪತಿ ಸಹನೆ ಕಳೆದುಕೊಂಡು, ಇದು ತನ್ನನ್ನು ವಿರೋಧಿಸುವ ನಿಲುವೆಂದೂ, ಇದರ ಬಗೆಗೆ ಮತ್ತೆ ಮತನಿರ್ಣಯವಾಗಲಿ, ಇಲ್ಲಿ ಗೌತಮನಿರಬೇಕು ಇಲ್ಲವೇ ಸೇನಾಪತಿ ಇರಬೇಕು ಯಾವುದೂ ತೀರ್ಮಾನವಾಗಲಿ ಎಂದು ಮತನಿರ್ಣಯಕ್ಕೆ ಮುಂದಾದನು. ಕಡೆಗೆ ಸಂಘವು ಸೇನಾಪತಿಯ ಪರವಾಗಿ ತೀರ್ಪು ನೀಡಿತು. ಅಂತಿಮವಾಗಿ ಯುದ್ಧವನ್ನ ಸಂಘವು ನಿರ್ಣಯಿಸಿದಾಗ ಗೌತಮನು ಅದನ್ನು ತಿರಸ್ಕರಿಸಲೇಬೇಕಾದಾಗ ಅವನ ಪರವಾಗಿದ್ದ ಕೆಲವೇ ಸದಸ್ಯರೊಂದಿಗೆ ಅದನ್ನು ವಿರೋಧಿಸಲು ಮುಂದಾದನು. ಅವನ ಜೊತೆಗಿದ್ದ ಕೆಲವೇ ಸದಸ್ಯರೂ ಅಸಹಾಯಕರಾಗಿ ಬಹುಮತದ ನಿರ್ಣಯಕ್ಕೆ ಒಪ್ಪಿಕೊಳ್ಳುವ ಹಂತಕ್ಕೆ ಬಂದಾಗ, ಗೌತಮನು ಎಲ್ಲರನ್ನೂ ಉದ್ದೇಶಿಸಿ, “ಗೆಳೆಯರೆ, ಏನು ಮಾಡಬೇಕೆಂಬುದು ನಿಮ್ಮ ಇಚ್ಚೆಗೆ ಬಿಟ್ಟದ್ದು, ನಿಮಗೆ ಬಹುಮತವಿದೆ. ಆದರೆ ಕ್ಷಮಿಸಿ ನಾನು ಕೋಲಿಯರ ವಿರುದ್ಧ ಯುದ್ಧ ಮಾಡಲು ನಿಮ್ಮ ಜೊತೆ ಸೇರಲಾರೆ" ಎಂದನು ಅದಕ್ಕೆ ಸೇನಾಪತಿಯು, “ನೀನು ಸಂಘಕ್ಕೆ ಸೇರುವಾಗ ಸಂಘದ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಮತ್ತು ಸಾಕ್ಯರ ಹಿತವನ್ನು ಕಾಪಾಡಲು ಸಂಘವು ಏನನ್ನು ನಿರ್ಣಯಿಸುತ್ತದೆಯೋ ಅದಕ್ಕೆ ಒಪ್ಪುವೆನೆಂದು ಪ್ರಮಾಣ ಮಾಡಿರುತ್ತೀಯ, ಈಗ ಹೀಗೆ ಮಾತಾಡಲು ನಿನಗೆ ನಾಚಿಕೆಯಾಗಬೇಕು” ಎಂದು ವಾದಿಸಿದನು ಅದಕ್ಕೆ ಗೌತಮನು, “ಹೌದು, ನಾನು ಸಂಘಕ್ಕೆ ಸೇರುವಾಗ ಸಾಕ್ಯರಿಗೆ ಒಳಿತಾಗುವ ನಿರ್ಣಯಕ್ಕೆ ಕಾಯಾ ವಾಚಾ ಮನಸಾ ಬದ್ಧನಾಗಿರುತ್ತೇನೆ ಎಂದು ಪ್ರಮಾಣ ಮಾಡಿರುವುದು ನಿಜ. ಆದರೆ ಯುದ್ಧದಿಂದ ಸಾಕ್ಯರಿಗೆ ಒಳಿತಾಗುವುದಿಲ್ಲ. ಹಾಗಾಗಿ ಇದರಲ್ಲಿ ನಾಚಿಕೆಪಟ್ಟುಕೊಳ್ಳುವುದು ಏನೂ ಇಲ್ಲ" ಎಂದನು. ಇದರ ಜೊತೆಗೆ ಕೋಲಿಯರ ಸ್ನೇಹ ಸಂಬಂಧವನ್ನು ಕಳೆದುಕೊಳ್ಳುವುದರಿಂದ ಕೋಸಲದ ರಾಜನಿಗೆ ನಮ್ಮ ಮೇಲೆ  ಇನ್ನೂ ಹೆಚ್ಚಿನ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ. ಇದನ್ನು ಕೂಡ ನಾವು ಯೋಚಿಸಬೇಕಾಗುತ್ತದೆ ಎಂದನು.

ಇದರಿಂದ ಮತ್ತೂ ವ್ಯಗ್ರನಾದ ಸೇನಾಪತಿಯು ನಿನ್ನನ್ನು ಹೀಗೆ ತಪ್ಪಿಸಿಕೊಂಡು ಹೋಗಲು ಬಿಡುವುದು ಕೂಡಾ ತಪ್ಪಾಗುತ್ತದೆ. ಕೋಸಲ ರಾಜನ ನೆಪವಿಟ್ಟುಕೊಂಡು, ಸಂಘಕ್ಕೆ ನಿನ್ನನ್ನು ಶಿಕ್ಷಿಸುವ ಹಕ್ಕಿಲ್ಲವೆಂಬ ಪ್ರತಿಪಾದನೆಯನ್ನು ಮಾಡುತ್ತಿರುವೆ. ಆದರೆ ಸಂಘಕ್ಕೆ ನಿನ್ನನ್ನು ದೇಶದಿಂದ ಆಚೆಗೆ ಕಳಿಸುವ ಅಥವಾ ಮರಣದಂಡನೆ ವಿಧಿಸುವ ಹಕ್ಕುಗಳೂ ಇವೆ ಎಂಬುದು ನೆನಪಿರಲಿ.” ಎಂದು ಎಚ್ಚರಿಸಿದನು. ಅಷ್ಟೇ ಅಲ್ಲದೆ ಗೌತಮನ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುವುದರ ಜೊತೆಗೆ ಅವನ ಕುಟುಂಬದ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿ ಅವರ ಮೇಲೂ ಸಾಮಾಜಿಕ ಬಹಿಷ್ಕಾರ ಹಾಕಬಹುದು ಎಂದನು. ಇದಕ್ಕೆ ಗೌತಮನು ತನ್ನ ಈ ನಿರ್ಣಯಕ್ಕೆ ತಾನು ಮಾತ್ರ ಹೊಣೆಗಾರನೇ ಹೊರತು ತನ್ನ ಕುಟುಂಬಕ್ಕೆ ಇದರಿಂದ ಕೆಡುಕಾಗುವುದು ಸರಿಯಲ್ಲವೆಂದು ನಿರ್ಧರಿಸಿ ತಾನಾಗಿ ದೇಶದಿಂದ ಬಹಿಷ್ಕೃತನಾಗಿ ಹೋಗುವುದನ್ನು ಆಯ್ಕೆಮಾಡಿಕೊಂಡನು. ಇದಕ್ಕೆ ತಾನು ಏಕಾಂಗಿ ಹೊಣೆಗಾರನೆಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದು ಕೋರಿ, ಈ ಸಂಗತಿಯನ್ನು ಕೋಸಲ ರಾಜನಿಗೆ ತಿಳಿಸುವುದಿಲ್ಲವೆಂದೂ ಹೇಳಿ ತಾನಾಗಿ ದೇಶ ತ್ಯಜಿಸಿ ಹೊರಟನು. ಆದರೆ ಇದರಿಂದ ಉಂಟಾಗುವ ರಾಜಕೀಯ ಬಿಕ್ಕಟ್ಟನ್ನು ಕೋಸಲದ ರಾಜನು ಪಡೆದುಕೊಳ್ಳುವ ಸಾಧ್ಯತೆಯಿರುವುದನ್ನು ಮನಗಂಡ ಸೇನಾಪತಿಯು ಇದಕ್ಕೆ ಸಮ್ಮತಿ ಸೂಚಿಸಲು ಸಂಘಕ್ಕೆ ಸಾಧ್ಯವಾಗದು ಎಂದನು. ಹಾಗಾದರೆ ತಾನು ಪರಿವ್ರಾಜಕನಾಗಿ ದೇಶ ತ್ಯಜಿಸಿ ಹೊರಟುಹೋಗುತ್ತೇನೆ ಎಂದು ಗೌತಮನು ಹೇಳಲು, ಅದಕ್ಕೆ ಸೇನಾಪತಿಯು "ನೀನು ಪರಿವ್ರಾಜಕನಾಗುವುದಾದರೆ, ನಿನ್ನ ಕುಟುಂಬದ ಅನುಮತಿ ಬೇಕಾಗುತ್ತದೆ." ಎಂದಾಗ ಅದಕ್ಕೆ ಗೌತಮನು, "ದಯವಿಟ್ಟು ನನ್ನನ್ನು ನಂಬಿರಿ, ನಾನು ಪರಿವ್ರಾಜಕನಾಗಿ ಹೊರಟುಹೋಗಲು ನನ್ನ ಕುಟುಂಬದ ಅನುಮತಿಯನ್ನು ಪಡೆಯಲು ಪ್ರಯತ್ನಿಸುತ್ತೇನೆ. ಅವರು ಒಪ್ಪಿದರೂ, ಒಪ್ಪದಿದ್ದರೂ ಪರಿವ್ರಾಜಕನಾಗುವುದು ಅನಿವಾರ್ಯವಾಗಿರುವು ದರಿಂದ ನನ್ನ ನಿರ್ಧಾರವನ್ನು ಬದಲಿಸುವುದಿಲ್ಲ” ಎಂದನು. ಇದಕ್ಕೆ ಸಂಘವು ಸಮ್ಮತಿಸಿದರೂ ಯುದ್ಧದ ನಿರ್ಣಯವನ್ನು ಸ್ವಲ್ಪಕಾಲ ಮುಂದೂಡಲು ನಿರ್ಧರಿಸಿತು.

ತನ್ನ ನಿರ್ಣಯಕ್ಕೆ ಬದ್ಧನಾದ ಗೌತಮನು ಕುಟುಂಬದ ಸದಸ್ಯರನ್ನು ಒಪ್ಪಿಸಲು ಪ್ರಯತ್ನಿಸಿದರೂ ಅದು ಅಷ್ಟು ಸುಲಭಸಾಧ್ಯವಲ್ಲವೆಂದು ಅವನಿಗೂ ಅರಿವಿತ್ತು. ಒಂದು ರಾತ್ರಿ ತನ್ನ ಪ್ರಿಯ ಕುದುರೆ ಕಂಥಕನನ್ನು ಏರಿ ತನ್ನ ಸೇವಕನಾದ ಛನ್ನನೊಂದಿಗೆ ಆರಮನೆಯನ್ನು ತೊರೆದು ಹೊರಟು ಹೋದನು. ಆಗ ಅವನ ವಯಸ್ಸು ಇಪ್ಪತ್ತೊಂಬತ್ತು. ಕಪಿಲವಸ್ತುವನ್ನು ತೊರೆದ ಗೌತಮನು ಮೊದಲಿಗೆ ಬಿಂಬಸಾರನಿದ್ದ ಮಗಧರಾಜ್ಯದ ರಾಜಗೃಹಕ್ಕೆ ಬಂದನು, ಕಪಿಲವಸ್ತುವಿನಿಂದ ರಾಜಗೃಹಕ್ಕೆ ಸುಮಾರು ೪೦೦ ಮೈಲಿಗಳಷ್ಟು ದೂರವಿದ್ದು, ಅದನ್ನು ಬರಿಗಾಲಿನಿಂದ ಕ್ರಮಿಸಿದನು. ರಾಜಗೃಹದ ಬಳಿಯ ವನದಲ್ಲಿ ಒಂದು ಎಲೆಮನೆಯನ್ನು ಸಿದ್ಧಪಡಿಸಿಕೊಂಡು ಇದ್ದ ಗೌತಮನ ಬಗೆಗೆ ಕೇಳಿ ತಿಳಿದುಕೊಂಡ ಬಿಂಬಸಾರನು ತಾನೇ ಅವನ ಬಳಿ ಬಂದು ಭೇಟಿಯಾದನು, ಅವನ ವಂಶದ ಕೀರ್ತಿಯ ಬಗೆಗೆ ಮತ್ತು ಅದನ್ನು ಮುಂದುವರೆಸುವ ಬಗೆಗೆ ವಿವರಿಸಿ ಮತ್ತೆ ವಾವಸ್ಸು ಹೋಗುವಂತೆ ಕೋರಿಕೊಂಡನು. ಆದರೆ ಗೌತಮನು ಯಾವುದೇ ಲೌಕಿಕದ ವ್ಯಾಮೋಹಗಳಿಂದ ಮುಕ್ತನಾಗಿದ್ದನು. ಬಿಂಬಸಾರನ ಕೋರಿಕೆಯನ್ನು ಅವನು ಮನ್ನಿಸಲಿಲ್ಲ.

ಸ್ವಲ್ಪ ಕಾಲ ಗೌತಮನು ಅಲ್ಲಿಯೇ ತಂಗಿದ್ದನು. ಆಗ ಅವನ ಜೊತೆಗೆ ಇನ್ನೂ ಇವರು ಪರಿವ್ರಾಜಕರು ಬಂದು ಸೇರಿಕೊಂಡರು. ಅವರುಗಳೆಂದರೆ: ಕೌಂಡಿನ್ಯ, ಆಶ್ವಜಿತ, ಕಶ್ಯಪ, ಮಹಾನಾಮ ಮತ್ತು ಭದ್ಧಕ, ಅವರೆಲ್ಲರೂ ಗೌತಮನ ಪ್ರಭಾವಕ್ಕೆ ಒಳಗಾಗಿ ಬಂದವರಾಗಿದ್ದರು. ಗೌತಮನು ಕಪಿಲವಸ್ತುವನ್ನು ತ್ಯಜಿಸಿ ಬಂದನಂತರದ ಅಲ್ಲಿಯ ಬೆಳವಣಿಗೆಗಳನ್ನು ಅವರೇ ಗೌತಮನಿಗೆ ತಿಳಿಸಿದರು. ಗೌತಮನ ನಿರ್ಗಮನದ ನಂತರ ಕೋಲಿಯರ ಮೇಲೆ ಯುದ್ಧ ಹೂಡಲು ಸಾಕ್ಯ ಸಾಮಾನ್ಯರು ನಿರಾಕರಿಸಿ ಪ್ರತಿಭಟನೆಗಳನ್ನು ನಡೆಸಿದುದರಿಂದ ಸಾಕ್ಯ ಸಂಘವು ಕೋಲಿಯರ ಮೇಲೆ ಯುದ್ಧ ನಡೆಸುವ ಯೋಚನೆಯನ್ನು ಕೈಬಿಟ್ಟುದುದನ್ನು ತಿಳಿಸಿದರು. ಇದರಿಂದಾಗಿ ಕೋಲಿಯರ ಮತ್ತು ಸಾಕ್ಯರ ನಡುವೆ ಈಗ ಯಾವುದೇ ಸಂಘರ್ಷವಿಲ್ಲವೆಂದೂ, ಗೌತಮನು ಪರಿವ್ರಾಜಕನಾಗಿ ಮುಂದುವರಿಯುವ ಅಗತ್ಯವಿಲ್ಲದುದರಿಂದ ಕಪಿಲವಸ್ತುವಿಗೆ ಹಿಂತಿರುಗಿ ಹೋಗಬಹುದೆಂದೂ ತಿಳಿಯಹೇಳಿದರು. ಅದನ್ನು ಕೇಳಿದ ಗೌತಮನು ಯುದ್ಧದ ಯೋಚನೆ ಕೈಬಿಟ್ಟುದುದರ ಬಗೆಗೆ ಸಂತಸವಾದರೂ, ಪರಿವ್ರಾಜಕತ್ವವನ್ನು ಬಿಟ್ಟು ಮತ್ತೆ ಕಪಿಲವಸ್ತುವಿಗೆ ಹಿಂತಿರುಗಿ ಹೋಗಲಾರೆ' ಎಂದನು. ಆ ಪರಿವ್ರಾಜಕರು ಹಾಗಾದರೆ ತಮ್ಮ ಜೊತೆಗೆ ತಪಸ್ಸಿನಲ್ಲಿ ತೊಡಗಲು ಕೇಳಿದಾಗ, ಅದಕ್ಕಿಂತ ಮೊದಲು ತನ್ನ ಮುಂದಿನ ದಾರಿಯ ಬಗೆಗೆ ಶೋಧನೆ ನಡೆಸುವ ಅಗತ್ಯವಿದೆ ಎಂದು ಗೌತಮನು ಮೊದಲು ತನ್ನ ದಾರಿಯನ್ನು ಗುರುತಿಸಿಕೊಳ್ಳುವ ಶೋಧನೆಗೆ ತೊಡಗಿಕೊಂಡನು.

ಲೋಕದ ತಲ್ಲಣಗಳಿಗೆ ಕಾರಣ ಹುಡುಕುತ್ತ ಹೊರಟ ಸಿದ್ಧಾರ್ಥ ಗೌತಮನಿಗೆ ಮೊದಲು ಇದಿರಾದದ್ದು ಆರಾಡ ಕಲಾಮನೆಂಬ ಶ್ರಮಣಸಾಧಕ, ಅವನ ತಾತ್ವಿಕತೆಯನ್ನು ಅಧ್ಯಯನ ಮಾಡಿದ ಗೌತಮನಿಗೆ ಧ್ಯಾನದ ವಿವಿಧ ಹಂತಗಳು, ಸಮಾಧಿ ಮುಂತಾದ ಬೇರೆ ಬೇರೆ ಜ್ಞಾನದ ಮಾಧ್ಯಮಗಳ ಪರಿಚಯವಾಯಿತು. ಆರಾಡ ಕಲಾಮನ ತಾತ್ವಿಕತೆಯನ್ನು ಆಳವಾಗಿ ಅಭ್ಯಾಸ ಮಾಡಿದ ಗೌತಮನಿಗೆ ಅದು ಸತ್ಯವನ್ನು ಕಾಣಿಸಿಕೊಡಲಾರದು ಎಂಬುದು ಖಚಿತವಾಯಿತು. ಹಾಗಾಗಿ ಅವನನ್ನು ತೊರೆದು ಮುಂದೆ ಹೋದನು. ನಂತರ ಅವನಿಗೆ ದೊರಕಿದ್ದು ಉದಕ ರಾಮಪುತ್ತನೆಂಬ ಮತ್ತೊಬ್ಬ ಶ್ರಮಣ ಸಾಧಕ. ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡ ಗೌತಮನಿಗೆ ಅಲ್ಲಿಯೂ ಅವನ ಹುಡುಕಾಟಕ್ಕೆ ಪರಿಹಾರ ದೊರಕಲಿಲ್ಲ. ಆರು ವರ್ಷಗಳ ಕಾಲ ಗಂಗಾನದಿಯ ತಟದಲ್ಲಿ ಅನೇಕ ತಾತ್ವಿಕರನ್ನು ಭೇಟಿ ಮಾಡಿ ಅವರೊಡನೆ ಚರ್ಚಿಸಿದನು. ಆ ತಾತ್ವಿಕತೆಗಳು ಅವನಿಗೆ ಸಮಾಧಾನ ಉಂಟುಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಆಗ ಪ್ರಚಲಿತದಲ್ಲಿದ್ದ ಸುಮಾರು ಅರುವತ್ತಮೂರು ಚಿಂತನಾ ಪ್ರಸ್ಥಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಗೌತಮನಿಗೆ ಅತ್ಯಂತಿಕವಾಗಿ ಲೋಕವನ್ನು ಸರಿಯಾಗಿ ಗ್ರಹಿಸುತ್ತಿಲ್ಲವೆಂದು ಮಾತ್ರ ಗೊತ್ತಾಯಿತು. ಅವುಗಳನ್ನು ಅದೇ ಕಾರಣಕ್ಕೆ ತಿರಸ್ಕರಿಸಿದ ಗೌತಮನು ಮತ್ತೆ ತನ್ನ ಹುಡುಕಾಟವನ್ನು ಮುಂದುವರಿಸಿದನು. ಮಗಧ ರಾಜ್ಯದ ಉರುವೇಲ ಎಂಬ ಬಳ ಪ್ರಶಾಂತವಾದ ತಾಣವೊಂದನ್ನು ಅರಿಸಿಕೊಂಡು ತನ್ನ ಹುಡುಕಾಟವನ್ನು ಮುಂದುವರಿಸಿದನು. ಅಲ್ಲಿ ದೀರ್ಘಕಾಲ ಧ್ಯಾನದಲ್ಲಿ ತೊಡಗಿದನು. ಕ್ರಮೇಣ ಅವನ ಮನಸ್ಸು ಎಲ್ಲ ಬಂಧನಗಳಿಂದ ಮುಕ್ತವಾಗಿ ಸಮತೆಯನ್ನು ಸಾಧಿಸಿತು. ಕಡೆಗೆ ಒಂದು ಪೂರ್ಣಿಮೆಯ ಸಂಜೆ ಬುದ್ಧಗಯಾದ ಹತ್ತಿರ ನೈರಂಜನ ನದಿಯ ದಡದಲ್ಲಿ ಬೋಧಿ ವೃಕ್ಷದಡಿಯಲ್ಲಿ ಕುಳಿತು ಧ್ಯಾನದಲ್ಲಿದ್ದಾಗ ಲೋಕದ ನಿಜ ಅರಿವಾಗಿ ಜ್ಞಾನೋದಯ ವಾಯಿತು. ಆಗ ಅವನ ವಯಸ್ಸು ೩೫ ವರ್ಷಗಳು. ಅಂದಿನಿಂದ ಅವನು ಜ್ಞಾನವನ್ನು ಪಡೆದು ಎಚ್ಚರಗೊಂಡವನಾದುದರಿಂದ ಬುದ್ಧನಾದನು.

 

ಮೊದಲಿಗೆ ಅವನು ಸಹವರ್ತಿಗಳಾಗಿದ್ದ ಐವರು ಶಿಷ್ಯರಿಗೆ ತಾನು ಪಡೆದುಕೊಂಡ ಜ್ಞಾನವನ್ನು ಹಂಚಿಕೊಳ್ಳಲು ಸಾರನಾಥದಲ್ಲಿ ಮೊದಲ ಉಪದೇಶ ನೀಡಿದನು. ಅವನು ನೀಡಿದ ಮೊದಲ ಉಪದೇಶದ ಪ್ರಮುಖಾಂಶಗಳನ್ನು ಧಮ್ಮಚಕ್ರ ಪ್ರವರ್ತನ ಸೂತ್ರವು ದಾಖಲಿಸಿದೆ. ಆ ನಂತರ ಸುಮಾರು ೪೫ ವರ್ಷಗಳ ಕಾಲ ಯಾವುದೇ ಭಿನ್ನ ಭೇದ ಮಾಡದೆ ಎಲ್ಲರಿಗೂ ತನ್ನ ಜ್ಞಾನವನ್ನು ಹಂಚಿಕೊಂಡನು. ತನ್ನ ೮೦ನೆಯ ವಯಸ್ಸಿನಲ್ಲಿ ಬುದ್ಧ (ಇಂದಿನ ಉತ್ತರ ಪ್ರದೇಶದಲ್ಲಿರುವ) ಕುಶಿನಾರ ಎಂಬಲ್ಲಿ ನಿರ್ವಾಣ ಹೊಂದಿದನು.

(ಲೇಖಕರ “ಬುದ್ಧ- ಬೌದ್ಧ ತಾತ್ವಿಕತೆಯ ಸರಳ ವಾಚಿಕೆ” ಪುಸ್ತಕದ ಆಯ್ದ ಭಾಗ)