ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ? ಸಯನೈಡ್ ತೆಗೆದುಕೊಂಡು ಸಾಯಬಾರದಾ.., ! ನೇತ್ರಾವತಿ.ಕೆ.ಬಿ

ಆದರೆ ನಾನು ನನ್ನ ನಂಬಿದವರನ್ನೆಲ್ಲ ಒಂದು ದಡ ಸೇರಿಸಿದೆ ಅಂತಹ ಒಂದು ಗುರಿ ನಮ್ಮ ದಲಿತರಿಗೆ ಅವಶ್ಯಕತೆ ಇರುತ್ತದೆ. ಆದರೆ ಬಹಳಷ್ಟು ಜನ ಅವರ ಸ್ವಂತ ದೈಹಿಕ ಆಸೆ ಊಟ ತಿಂಡಿಗೆ ಅಂತ ತಮ್ಮ ಜೀವನವನ್ನೆಲ್ಲ ಬಲಿಕೊಡುತ್ತಾರೆ. ನೆಂಟರು ಅವರು ಮಾತ್ರ ಮೇಲೆ ಬಂದರೆ ಸಾಕು ಅಂತ ಬೇರೆಯವರಿಗೆ ಸಹಾಯ ಮಾಡುವುದ ಮರೆತು ಅವರನ್ನ ಹೀಯಾಳಿಸಲು ಶುರು ಮಾಡುತ್ತಾರೆ. ಅವರ ಏಳಿಗೆಯನ್ನ ಸಹಿಸದೆ ಕಾಲೆಳೆಯಲು ಶುರು ಮಾಡುತ್ತಾರೆ. ಸಹಾಯ ಮಾಡಬೇಕಾದವರೇ ವಿರುದ್ಧವಾಗಿ ನಿಲ್ಲುತ್ತಾರೆ

ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ?   ಸಯನೈಡ್ ತೆಗೆದುಕೊಂಡು ಸಾಯಬಾರದಾ.., !                                              ನೇತ್ರಾವತಿ.ಕೆ.ಬಿ

ಜೀವದ ಕತೆ -೧೩

ಕೆ.ಬಿ.ನೇತ್ರಾವತಿ


     ನಾವು ತಿಪಟೂರಿನಲ್ಲಿ ಇದ್ದೆವು. ಚಿಕ್ಕಜ್ಜಿ ಬದುಕಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನಮ್ಮ ಕಂಡರೆ ಅಷ್ಟು ಪ್ರೀತಿ ಇತ್ತು. ನಮ್ಮ ಮನೆಗೆ ಮಾತ್ರ ಬರುತ್ತಿದ್ದ ಚಿಕ್ಕಜ್ಜಿ (ಅಜ್ಜಿಯ ಚಿಕ್ಕ ತಂಗಿ) ನಮ್ಮ ಮನೆಯಲ್ಲಿ ತಟ್ಟೆ ಅವಶ್ಯಕತೆಯೇ ಇಲ್ಲ ನೆಲದಲ್ಲೇ ಊಟ ಮಾಡಬಹುದು ಅಂತ ಹೋಲಿಸುತ್ತಿತ್ತು ಅಷ್ಟು ಕ್ಲೀನಾಗಿ ಮನೆ ಇಟ್ಟುಕೊಂಡಿದ್ದೆವು, ಮನೆ ಸುತ್ತ ಕೈತೋಟ ಹೂವಿನ ತೋಟ ಎಲ್ಲರ ಕಣ್ಣು ಸೆಳೆಯುವಂತೆ ಇಟ್ಟುಕೊಂಡಿದ್ದೆವು. ರೆಡ್ ಆಕ್ಸೈಡ್ ನೆಲ ಒಂದೂ ಹೆಜ್ಜೆ ಗುರುತು ಕಾಣದ ರೀತಿ ಇಟ್ಟಿರುತ್ತಿದ್ದೆವು. ಆ ಕಾಲ ಬಹಳ ಬೇಗ ಮುಗಿದು ಹೋಯಿತು.


     ನಮಗೆ ನೆಂಟರು ಅಂದರೆ ಅಮ್ಮನ ಕಡೆಯವರು ಮಾತ್ರವೇ , ಅಮ್ಮನ ಅಣ್ಣ, ತಮ್ಮಂದಿರು, ತಂಗಿ ಹಾಗೂ ಅವರ ಕುಟುಂಬ, ಅಮ್ಮನ ಅಮ್ಮನ ಅಕ್ಕ ತಂಗಿಯರ ಮಕ್ಕಳು ಹಾಗೂ ಅವರ ಕುಟುಂಬಗಳು ಇಷ್ಟು ಮಾತ್ರವೇ. ಅಪ್ಪ ಬಹಳ ಹಿಂದೆಯೇ ಹುಟ್ಟೂರು ಹಾಗೂ ಪಿತ್ರಾರ್ಜಿತ ಆಸ್ತಿಯನ್ನೆಲ್ಲ ಬಿಟ್ಟು ಬಂದಿದ್ದರಿAದ ಅಪ್ಪನ ಊರನ್ನಾಗಲೀ,ನಮ್ಮ ಅಜ್ಜ, ಅಜ್ಜಿ ಹಾಗು ದೊಡ್ಡಪ್ಪ, ಚಿಕ್ಕಪ್ಪಂದಿರಾಗಲೀ ನಮಗೆ ಅವರೆಲ್ಲ ಯಾರೂ ಅಂತಲೇ ಗೊತ್ತಿರಲಿಲ್ಲ. ನಮಗೆ ತಿಳುವಳಿಕೆ ಬಂದಂತೆಲ್ಲ ಅಮ್ಮನ ಕಡೆಯ ನೆಂಟರುಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗಿತ್ತು.


    ನಮ್ಮ ನೆಂಟರು ಯಾಕೆ ನಮ್ಮನ್ನು ನಿರಾಕರಿಸುತ್ತಾರೆ. ಒಬ್ಬರ ಪ್ರಕಾರ ನಮ್ಮ ಅಪ್ಪನಿಗೆ ಅಫೇರ್ಗಳು ಜಾಸ್ತಿ ಅದಕ್ಕೆ ಕರೆಯುವುದಿಲ್ಲ ಅಂತ. ಹಾಗಾದ್ರೆ ನಾವು ಮತ್ತು ಅಮ್ಮ ಏನು ಮಾಡಿದ್ದೆವು. ನಮಗೆ ಅಂತ ಒಂದು ಅಸ್ತಿತ್ವ ಇಲ್ಲವೆ. ಅವರಲ್ಲಿ ಉತ್ತರವಿಲ್ಲ. ಒಂದು ಸಣ್ಣ ಉದಾಹರಣೆ ಅಮ್ಮನ ಕಸಿನ್ ಒಬ್ಬರು ಡಾಕ್ಟರ್, ಅವರ ಮದುವೆ ದಾವಣಗೆರೆಯಲ್ಲಿ ನಡೆಯಿತು. ನಾನಾಗ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದೆ. ನಮಗೆ ಮಾಮ ಆಗಬೇಕಿದ್ದ ಆ ಡಾಕ್ಟರೇ ತಮ್ಮ ಮದುವೆಗೆ ಖುದ್ದಾಗಿ ಕರೆದಿದ್ದರು.


    ಮದುವೆ ಹಿಂದಿನ ದಿನವೇ ಚೌಲ್ಟ್ರಿಗೆ ಬಂದಿದ್ದ ನೆಂಟರು ಹಾಗೂ ಅಮ್ಮ ಅಕ್ಕ ಎಲ್ಲ ಹಾಸ್ಟೆಲ್ ಹತ್ತಿರ ಬಂದು ಮಾತಾಡಿಸಿ ಹೋದರು. ನಾನು ನಾಳೆ ಬರುವೆ ಎಂದು ಮುಂದಕ್ಕೆ ಹಾಕಿದೆ. ಎಂದಿನಂತೆ ಕಾಲೇಜಿಗೆ ಹೋದೆ ಮಧ್ಯಾಹ್ನ ಬಂದಾಗ ಮದುವೆಗೆ ಬರಲೇಬೇಕೆಂದು ಅಕ್ಕನ ಜೊತೆ ಬಂದಿದ್ದ ದೊಡ್ಡಪ್ಪನ ಮಕ್ಕಳು ದುಂಬಾಲು ಬಿದ್ದು ಕರೆದುಕೊಂಡು ಹೋದರು. ನನ್ನನ್ನ ಕಂಡ ತಕ್ಷಣ ಡಾಕ್ಟರ್ ಮಾಮ ಏಯ್ ನಿನ್ನೆಯಿಂದ ಬಂದೇ ಇಲ್ಲ ಬಾ ಬಾ ಫೋಟೋ ತೆಗೆಸಿಕೊಳ್ಳೋಣ ಅಂತ ಕರೆದು ಕೈಹಿಡಿದುಕೊಂಡು ಫೋಟೋಕ್ಕೆ ಪಕ್ಕದಲ್ಲಿ ನಿಲ್ಲಿಸಿಕೊಂಡರು. ಒಂದರೆ ಕ್ಷಣದಲ್ಲಿ ಆತನ ತಂಗಿ ಅದೆಲ್ಲಿದ್ದಳೋ ಅಯ್ಯೋ ಅಕ್ಕ (ನಮ್ಮ ಅಮ್ಮನ ತಂಗಿ ) ನೀನು ಫೋಟೋ ತೆಗೆಸಿಕೊಂಡಿಲ್ಲವಾ ಬಾ ಬಾ ಅಂತ ಕೈಹಿಡಿದುಕೊಂಡು ಬಂದು ನನ್ನನ್ನ ಹಿಂದೆ ತಳ್ಳಿ ನನ್ನ ಮುಂದೆ ಚಿಕ್ಕಮ್ಮನನ್ನ ನಿಲ್ಲಿಸಿ ತಾನೂ ಫೋಟೋಗೆ ಪೋಸು ಕೊಟ್ಟಳು. ನನಗೆ ಚಿಕ್ಕಮ್ಮ ಅಡ್ಡ ಅಂತ ಅನ್ನಿಸಿದರೂ ಚಿಕ್ಕಮ್ಮನೂ ತನಗೇನೂ ಅರಿವೇ ಇಲ್ಲವೆಂಬಂತೆ ಮುಂದೆ ನಿಂತಿತು. ಕೈಬಿಡಿಸಿಕೊಂಡು ಬರಲು ಅದೊಂದು ಸೀನ್ ಕ್ರಿಯೇಟ್ ಆಗುತ್ತೆ ಅಂತ ಅವಮಾನವನ್ನ ಹಲ್ಲು ಕಚ್ಚಿ ಸಹಿಸಿಕೊಂಡೆ. ಅವರಿಗೆ ನಿನ್ನೆ ದಿನ ಬೆಳಗ್ಗೆಯಿಂದ ಸಮಯ ಇತ್ತಲ್ಲವ ಆಗ ಅವರಿಗೆ ಫೋಟೋ ಶೂಟ್ ಬಗ್ಗೆ ಜ್ಞಾನ ಇರಲಿಲ್ಲವಾ. ಆನಂತರ ಫೋಟೋ ಗಳು ಬಂದಾಗ ಮಾಮ ಕೇಳಿದ್ದು “ಏಯ್ ನೀನು ಫೋಟೋಗೆ ನಿಂತೆದ್ದೆಯಲ್ಲವಾ ಮತ್ತೆ ಒಂದೂ ಫೋಟೋದಲ್ಲಿ ನೀನಿಲ್ಲಾ”ಅಂತ. ನಕ್ಕು ಸುಮ್ಮನಾದೆ. ಇದಕ್ಕೆ ಏನು ಹೇಳಬೇಕು ಯಾವುದೇ ಕಾರಣ ಇಲ್ಲದೆ ನಮ್ಮ ಜನ ಇನ್ನೊಬ್ಬರನ್ನ ಅವಮಾನಿಸುತ್ತಾರೆ. ಸಂಬಂಧಗಳಿಗೆ ಗೌರವ ಕೊಡುವುದಿಲ್ಲ ಹಣ ಅಂತಸ್ತು ಇದ್ದರೆ ಮಾತ್ರ ನಿನಗೆ ಅವರಿಂದ ಕರೆ ಬರುತ್ತದೆ. 


   ಇದಾದ ನಂತರ ಅಮ್ಮನ ಮತ್ತೊಬ್ಬ ಕಸಿನ್ ಅಕ್ಕನಿಗೆ ಅವರ ಮ್ಯಾಗಜೀನ್ ಗೆ ಬರೆಯಲು ಆಹ್ವಾನ ಕೊಟ್ಟಾಗ ಅಕ್ಕ ಇದೇ ವಿಷಯ ಎತ್ತಿ, ನಿಮ್ಮ ಅಕ್ಕ ಈ ರೀತಿ ನಡೆದುಕೊಳ್ಳಲು ಕಾರಣ ಏನು, ನಿಮ್ಮಿಂದ ಇದೇ ಅಂತರವನ್ನ ಲೈಫ್ ಲಾಂಗ್ ಕಾಯ್ದುಕೊಳ್ತೇನೆ ಅಂದ ಪತ್ರ ಬರೆದಳು. ಅಷ್ಟು ಸಾಕಿತ್ತು ನಮ್ಮ ನೆಂಟರಿಗೆ. ಅಲ್ಲಿಂದ ಮುಂದೆ ಯಾರೂ ನಮ್ಮನ್ನ ಏನಕ್ಕೂ ಕರೆಯುತ್ತಿರಲಿಲ್ಲ.


    ಇನ್ನ ಅಮ್ಮನ ಸ್ವಂತ ಅಣ್ಣ ಮಾಡಿದ್ದೇನು. ತಿಪಟೂರಿನ ನಮ್ಮ ಹೌಸಿಂಗ್ ಬೋರ್ಡ್ ಅಂತಿಮ ರಿಜಿಸ್ಟೇಷನ್ ಬಾಕಿ ಇತ್ತು, ನಾವಾಗ ಬೆಂಗಳೂರಲ್ಲಿ ಇದ್ದೆವು. ಅಪ್ಪ ಮತ್ತು ತಮ್ಮನ ನಡುವೆ ಆ ಮನೆಯ ಬಾಡಿಗೆ ಪಡೆಯುವ ವಿಷಯವಾಗಿ ಜಗಳವಾಗಿ ಬಾಡಿಗೆಯವ ಖಾಲಿ ಮಾಡಿದ. ಅದನ್ನೆ ಅವಕಾಶವಾಗಿ ಮಾಡಿಕೊಂಡ ಮಾಮ ರಾತ್ರೋ ರಾತ್ರಿ ಮನೆ ಬೀಗ ಒಡೆದು ಆತನ ಸ್ನೇಹಿತನನ್ನ ಮನೆ ಒಳಗೆ ಬಿಟ್ಟು, “ನನ್ನ ಸ್ನೇಹಿತನಿಗೆ ಮನೆ ಇಲ್ಲ ಅವನಿಗೆ ಮಾಡಿಕೊಡಿ” ಅಂತ ಹೌಸಿಂಗ್ ಬೋರ್ಡಲ್ಲಿ ಕಮಿಷನರ್ (ನಮ್ಮ ಅಮ್ಮನ ಕಸಿನ್ನ ಗಂಡ) ಅವರ ಬಳಿ ಹೋಗಿ ಆತನ ಸ್ನೇಹಿತನ ಹೆಸರಿಗೆ ಮಾಡಿಸಿಕೊಟ್ಟ. ನಮಗೆ ಅದು ತಿಳಿಯುವ ಹೊತ್ತಿಗೆ ಕಾಲಮೀರಿತ್ತು, ಹೌಸಿಂಗ್ ಬೋರ್ಡ್ನವರೇ ನೋಡಿ ನಿಮ್ಮ ನೆಂಟರೇ ಅಂತಲ್ಲ ಆವರೇ ಹೀಗೆ ಮಾಡಿರುವುದು ಅವರನ್ನ ಹೋಗಿ ಕೇಳಿ ಸರಿ ಮಾಡಿಸಿಕೊಳ್ಳಿ ಅಂತ. ಅಪ್ಪ ಅವರನ್ನ ಕೇಳುವ ಬದಲಿಗೆ ಕೋರ್ಟಿಗೆ ಹಾಕಿದಾಗ ಅಪ್ಪನ ಹಲವು ಅಫರ್ ಗಳಲ್ಲಿ ಒಂದಾಗಿದ್ದ ಮಧುಗಿರಿಯವಳು ನಾವು ಕೊಟ್ಟಿದ್ದ ಡಾಕ್ಯುಮೆಂಟ್ಗಳೆಲ್ಲವನ್ನ ತಾನೇ ಎತ್ತಿಟ್ಟುಕೊಂಡು ಅಪ್ಪ ಕೇಸ್ ಸೋಲುವ ಹಾಗೆ ಮಾಡಿದಳು. ಅವಳ ಪ್ರಕಾರ ಅವಳಿಗೆ ಆ ಆಸ್ತಿ ಬೇಕಿತ್ತು. ಅದು ಹೇಗೆ ಸಾಧ್ಯವಾಗುತ್ತೆ, ಒಟ್ಟಾರೆ ನಮಗೆ ಮನೆ ಇಲ್ಲವಾಯಿತು.


    ಇನ್ನ ನಮ್ಮ ಅಜ್ಜಿಯ ತೆಂಗಿನ ತೋಟ. ಹೌದು, ನಮ್ಮ ತಾತ ಕಾಡೇನಹಳ್ಳಿ ತೋಟವನ್ನ ಮಾರಾಟ ಮಾಡಲೆಂದು 2 ಲಕ್ಷಕ್ಕೆ ವ್ಯಾಪಾರ ಮಾಡಿ ಅಡ್ವಾನ್ಸ್ ಪಡೆದದ್ದು ಕಂಡ ಅಜ್ಜಿ ತಾನು ಮಾಡಿದ ತೋಟ ಕೈಬಿಟ್ಟು ಹೋಗುವುದೆಂದು ವ್ಯಥೆ ತಾಳಲಾರದೆ ವಿಷ ಕುಡಿದು ಬಿಟ್ಟಿತ್ತು. ಚಿಕ್ಕ ಮಾಮ ಅಜ್ಜಿಯನ್ನು ತಿಪಟೂರಿನ ಆಸ್ಪತ್ರೆಗೆ ಸೇರಿಸಿ ನಮ್ಮ ಮನೆಗೆ ಬಂದು ವಿಷಯ ತಿಳಿಸಿದಾಗ ಅಷ್ಟು ದಿನ ವೈಮನಸ್ಯ ಬಿಟ್ಟು ಅಪ್ಪ ರೀಕಂಸೈಲ್ ಆಗಿತ್ತು. ಅಷ್ಟು ದಿನ ತನ್ನ ಅಣ್ಣಂದಿರನ್ನ ಮಾತಾಡಿಸದೆ ಇದ್ದ ಅಪ್ಪ ಅವರನ್ನ ಕರೆ ತಂದು ಉಪಾಯವಾಗಿ ತಾತನ ಕೈ ಕಾಲು ಕಟ್ಟಿ ಆಸ್ತಿಯನ್ನ ಮಕ್ಕಳಿಗೆ ವಿಲ್ ಮಾಡಿಕೊಡುವಂತೆ ಹೇಳಿದಾಗ ನಾನು ನನ್ನ ದೊಡ್ಡ ಮಗಳಿಗೆ 10 ಗಿಡ ತೆಂಗಿನ ಗಿಡ ಬರೀತೀನಿ ಅದು ನನ್ನ ಮೊಮ್ಮಗನ ಹೆಸರಿಗೆ ಹಾಗಾದ್ರೆ ಮಿಕ್ಕ ವಿಷಯ ಅಂತ ಕಂಡಿಷನ್ ಹಾಕಿದಾಗ ವಿಧಿಯಿಲ್ಲದೆ ಒಪ್ಪಿದ ಅಪ್ಪ ಎಲ್ಲರೂ ಅಂತೆಯೇ ಇಬ್ಬರು ಗಂಡು ಮಕ್ಕಳಿಗೆ ವಿಲ್ ಮಾಡಿ ನನ್ನ ತಮ್ಮನ ಹೆಸರಿಗೆ 10 ತೆಂಗಿನ ಗಿಡ ದಾನ ಪತ್ರ ರಿಜಿಸ್ಟರೇಷನ್ ಆಯಿತು. ಇದರಿಂದ ಕೆರಳಿದ ನೆಂಟರು ಮತ್ತು ಚಿಕ್ಕಪ್ಪ ನಿಮ್ಮಪ್ಪ ಬೇಕೆಂತಲೇ ಆಸ್ತಿ ಬರೆಸಿಕೊಂಡಿದೆ ಇಲ್ಲವಾದರೆ ಇನ್ನೊಬ್ಬ ಮಗಳಿಗೂ ಪಾಲು ಕೊಡಬೇಕಿತ್ತು ಅಂತ ಹೀಯಾಳಿಸಲು ಶುರು ಮಾಡಿದರು ಆದರೆ ಆಸ್ತಿ ಉಳಿಸಿಕೊಡುವಾಗ ಅವರಾರೂ ಸೀನ್ನಲ್ಲೇ ಇರಲಿಲ್ಲ. ಅಪ್ಪನ ಬಗ್ಗೆ ಯಾವಾಗಲೂ ಒಂದು ಅನುಮಾನ ಹೊಂದಿದ್ದ ತಾತ ತನ್ನ ಮಗಳು ಅಂದರೆ ನಮ್ಮ ಅಮ್ಮನಿಗೆ ಆಸ್ತಿ ಇಲ್ಲದಿದ್ದರೆ ಈ ಗಂಡು ಮಗ ಮತ್ತು ಬರುವ ಸೊಸೆ ಒಂದು ತುತ್ತು ಅನ್ನ ಹಾಕಲ್ಲ, ಕಷ್ಟದ ಸಮಯ ಬಂದರೆ ನೀನು ಬಂದು ಇಲ್ಲಿ ಗುಡಿಸಲು ಹಾಕಿಕೋಬಹುದು ಎಂಬುದು . 


    ಅಷ್ಟಕ್ಕೂ ನಮ್ಮ ನೆಂಟರು ಯೋಚಿಸಬೇಕಿದ್ದದ್ದು ಎಲ್ಲಾ ಆಸ್ತಿಯನ್ನ ತೆಂಗಿನ ತೋಟ ಗದ್ದೆ ಒಂದು ಮನೆ ಇವನ್ನೆಲ್ಲ ತನ್ನ ಅಣ್ಣಂದಿರಿಗೆ ಬಿಟ್ಟು ಬಂದಿದ್ದ ಅಪ್ಪ ತನ್ನ ಸ್ವಂತ ದುಡ್ಡಿನಿಂದ ತೆಂಗಿನ ತೋಟದ ಒಡೆಯನಾಗಿದ್ದ ಜೊತೆಗೆ ೫ ಎಕರೆ ಹೊಲ ಮಾಡಿದ್ದ ಅಪ್ಪನಿಗೆ ಆ ೧೦ ಗಿಡ ತೆಂಗಿನ ಗಿಡ ಯಾವ ಲೆಕ್ಕಕ್ಕೂ ಇಲ್ಲ ಅನ್ನುವುದನ್ನ. ಇದರಿಂದ ನಮ್ಮಗಳ ಮೇಲೆ ಮತ್ತಷ್ಟು ತಿರಸ್ಕಾರ ಬೆಳೆಸಿಕೊಂಡರು ಅದರ ಬದಲಿಗೆ ತಾತ ಇನ್ನೂ ಬದುಕಿತ್ತು ಮತ್ತೊಬ್ಬ ಮಗಳಿಗೂ ಆಸ್ತಿ ಕೊಡು ಅಂತ ಸಂಧಾನ ಮಾಡಬಹುದಿತ್ತು ಹಾಗೆ ಮಾಡಲಿಲ್ಲ ಅಥವಾ ತಮ್ಮಂದಿರು ಕೂಡ ಹಾಗೆ ಯೋಚಿಸಲಿಲ್ಲ ಆದರೆ ನಾವು ಮಾತ್ರ ವಿಲನ್ ಗಳಾದೆವು.


    ನನ್ನ ತಮ್ಮನಿಗೆ 18 ತುಂಬಿದ ನಂತರ ಆ ಜಮೀನನ್ನು ಅವರಿಗೆ ವಾಪಸ್ಸು ಬರೆದುಕೊಡಬಹುದಿತ್ತು. ಅಮ್ಮ ತನ್ನ ಹೆಸರಲ್ಲಿದ್ದ ೫ ಎಕರೆ ಜಮೀನನ್ನು ಮಾರಾಟ ಮಾಡಲು ತೀರ್ಮಾನಿಸಿ ಅಡ್ವಾನ್ಸ್ ಪಡೆದು ರಿಜಿಸ್ಟರೇಷನ್ ಮಾಡಿಕೊಡಲೆಂದು ಚಿಕ್ಕನಾಯಕನಹಳ್ಳಿಯ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋದಾಗ ಅದಕ್ಕಾಗೇ ಕಾದಿದ್ದ ಮಾಮ ಅದಕ್ಕೆ ತಡೆ ಹಾಕಿದ. ಸಬ್ ರಿಜಿಸ್ಟ್ರಾರ್ ನಮ್ಮನ್ನು ಕರೆದು ಹೇಳಿದ. ನೋಡಿ ಮಾಜಿ ಶಾಸಕರು ಫೋನ್ ಮಾಢಿದ್ದರು , ನಿಮ್ಮ ಮಗನಿಗೆ ಅವರ ತಾತ ಬರೆದುಕೊಟ್ಟಿರುವ ೧೦ ಗಿಡ ತೆಂಗಿನ ಗಿಡದ ಜಾಗ ನಿಮ್ಮ ಮಾಮನ ಹೆಸರಿಗೆ ಮಾಡಿಕೊಟ್ಟರೆ ಮಾತ್ರ ನಂತರ ನಿಮ್ಮ ಜಮೀನಿನ ರಿಜಿಸ್ಟ್ರೇಶನ್ ಅಂತ. ಎಂದೂ ಅಂತಹ ಆಘಾತ ನಾವು ಊಹಿಸಿರಲಿಲ್ಲ. ತಮ್ಮ ಅಂತರಜಾತಿ ಮದುವೆಯಾಗಿ ಹುಡುಗಿ ಕಡೆಯವರು ಹಣ ಕೊಟ್ಟು, ಪ್ರಭಾವ ಬೀರಿ ಆತನ ಮೇಲೆ ನಾನ್ ಬೈಲಬಲ್ ವಾರಂಟ್ ಹೊರಡಿಸಿದ್ದರು, ತಲೆಮರೆಸಿಕೊಂಡಿದ್ದ ತಮ್ಮನಿಗೆ ಬೈಲ್ ಕೊಡಿಸಲೆಂದು ಆತನನ್ನು ಬಿಡಿಸಿಕೊಂಡು ಬರಲು  ನೆಪದಲ್ಲಿ ನಮ್ಮದೇ ಜಾತಿಯ ತುಮಕೂರಿನ ವಕೀಲ,‌ ಬೆಂಗಳೂರಿನ ವಕೀಲರು, ಬುದ್ದಿಜೀವಿಗಳು ನಮ್ಮನ್ನು ನಂಬಿಸಿ, ಸ್ಯಾಡಿಸ್ಟ್ ಒಬ್ಬನ್ನನ್ನು ನಮ್ಮ ಮನೆಗೆ ತಗುಲಿಹಾಕಿದರು, ಆತ ಅಕ್ಕನಿಗೆ ಮದುವೆಯಾಗುವಂತೆ ಒತ್ತಾಯಸಿ ಮದುವೆಯಾದ. ಆ ಗೋಜಲಿನಿಂದ ಬಿಡಿಸಿಕೊಳ್ಳಲು ಹಣ ಬೇಕಿತ್ತು, ಅಂತಾ ಕಷ್ಟದಲ್ಲಿ ಅಮ್ಮನ ಹೆಸರಲ್ಲಿದ್ದ ಜಮೀನು ಮಾರಲು ಹೋದಾಗ ನಮಗೆ ಆಸರೆಯಾಗಿ ನಿಲ್ಲಬೇಕಿದ್ದ ಅಮ್ಮನ ತಮ್ಮಂದಿರು ಹೀಗೆ ಬ್ಲಾಕ್ ಮೇಲ್ಗೆ ಇಳಿದಿದ್ದು ಊಹಿಸಲೂ ಅಸಾಧ್ಯ. ಆ ಪತ್ರದಲ್ಲಿ ಏನೇನು ಬರೆದಿತ್ತು ತಿಳಿಯಲಿಲ್ಲ, ಓದಲು ಅವಕಾಶವನ್ನೂ ಕೊಡಲಿಲ್ಲ . ಮನೆಯ ಎಲ್ಲರೂ ಸುಮ್ಮನೆ ಸಹಿ ಹಾಕಿದೆವು. ಅಜ್ಜಿ ತನ್ನ ಅಸಹಾಯಕತೆಯ ಮುಖ ಮಾಡಿತ್ತು. 


*****


    ನನ್ನ ಅಪ್ಪನಿಗೆ ಇಷ್ಟೊಂದು ಅಫೇರ್ ಅವಶ್ಯಕತೆ ಇದೆಯಾ. ನನಗೂ ಕಾಲೇಜಿನಲ್ಲಿ ಪ್ರೀತಿಸಿ ಮದುವೆಯಾಗಲು ಹೇರಳವಾದ ಅವಕಾಶವಿತ್ತು. ನಾನು ಕಪ್ಪಗಿದ್ದರೂ ನನ್ ಫೀಚರ್ಸ್ ಚೆನ್ನಾಗಿದೆ ಎಂದು ಹುಡುಗಿಯರಿಂದ ಹಿಡಿದು ಹುಡುಗರು ಹೇಳಿದ್ದರು, ಹಾಗೇ ನನಗೆ ಹತ್ತಿರವಾಗಲು ಪ್ರಯತ್ನ ಕೂಡ ಪಟ್ಟಿದ್ದರು. ಆದರೆ ನನಗೆ ನಾನು ಜೀವನದಲ್ಲಿ ಮೊದಲು ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಆನಂತರ ಅವೆಲ್ಲಾ ಅನ್ನುವ ಧೋರಣೆ ನನ್ನದು. ನನ್ನ ತಮ್ಮನಿಗೂ ಅದರ ಅರಿವಿರಬೇಕಿತ್ತು. ಅಪ್ಪ ಅವನನ್ನು ಗದರಿದ್ದು ಕಡಿಮೆಯೇ! 


    ನನ್ನ ಅಕ್ಕನಿಗೆ ಬಿಎಸ್ಸಿ ನಂತರ ಬೆಂಗಳೂರಿನ ಬಿಎಂಸಿಯಲ್ಲಿ ಮೆಡಿಕಲ್ ಸೀಟು ಸಿಕ್ಕಿತು. ಮೆಡಿಕಲ್ ಸೇರಲು ಅರ್ಧಕ್ಕೆ ಬಿಟ್ಟ ಎಂ.ಎಸ್ಸಿಯ ಮೊದಲ ವರ್ಷ ಮುಕ್ಕಾಲು ಆಗೇ ಹೋಗಿತ್ತು. ಇನ್ನೊಂದು ವರ್ಷ ಓದಿದ್ದರೆ ಉಪನ್ಯಾಸಕಿ ಆಗಂಬಹುದಿತ್ತು. ನಮ್ಮ ಆಸೆಗಳೇ ಹಾಗೆ ನಾನೂ ಹಾಗೇ ನನಗೆ ಇಂಜಿನಿಯರ್ ಕೆಲಸವೇ ಬೇಕು ಎಂದು ಕುಳಿತಿದ್ದರೆ ನಮ್ಮ ಮನೆಯನ್ನು ಮೇಲೆತ್ತಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಅವಳ ಕಸಿನ್ನ ಹೆಲ್ಪ್ ಕೇಳಿದಾಗ, ಇಷ್ಟು ಕಷ್ಟ ಪಟ್ಟು ಯಾಕೆ ಬದುಕಿದ್ದೀರಾ ಸಯನೈಡ್ ತೆಗೆದುಕೊಂಡು ಸಾಯಬಾರದಾ ಎನ್ನುವ ಉತ್ತರ ಬಂದಿತ್ತು, ಬೆಂಗಳೂರು ಹಾಳು ಮಾಡಲು ಇಲ್ಲೇಕೆ ಬಂದಿದಿರಾ ಅಲ್ಲೇ ತೋಟದಲ್ಲೆ ಸಾಯಬಾರದ ಎನ್ನುವ ಚಿಕ್ಕಜ್ಜನ ಮಾತುಗಳು ನಾನು ಎಸ್ ಡಿ ಎ ಗೆ ಸೆಲೆಕ್ಟ್ ಆದಾಗ ಕೆಪಿಎಸ್ಸಿಯಲ್ಲಿ ಆಪ್ಷನ್ ಕೊಡುವಾಗ ಬೆಂಗಳೂರಿನ ವಿಧಾನ ಸೌಧ ಸೆಕ್ರೆಟರಿಯಟ್ ಅಂತ ಕೊಟ್ಟಿದ್ದೆ, ಅಲ್ಲಿಗೇ ಪೋಸ್ಟಿಂಗ್ ಆಯಿತು. ಅದು ತಪ್ಪಾ ಸರಿನಾ ಇನ್ನೂ ನನಗೆ ಅರಿವಾಗಿಲ್ಲ. ಬಹುಶಃ ನಾನು ಕಮರ್ಷಿಯಲ್ ಟ್ಯಾಕ್ಸ್ ಆಫ್ಷನ್ ಕೊಟ್ಟಿದ್ದರೆ ಜೀವನವೇ ಬೇರೆ ಆಗಿರುತ್ತಿತ್ತೇನೋ.


   ಆದರೆ ನಾನು ನನ್ನ ನಂಬಿದವರನ್ನೆಲ್ಲ ಒಂದು ದಡ ಸೇರಿಸಿದೆ ಅಂತಹ ಒಂದು ಗುರಿ ನಮ್ಮ ದಲಿತರಿಗೆ ಅವಶ್ಯಕತೆ ಇರುತ್ತದೆ. ಆದರೆ ಬಹಳಷ್ಟು ಜನ ಅವರ ಸ್ವಂತ ದೈಹಿಕ ಆಸೆ ಊಟ ತಿಂಡಿಗೆ ಅಂತ ತಮ್ಮ ಜೀವನವನ್ನೆಲ್ಲ ಬಲಿಕೊಡುತ್ತಾರೆ. ನೆಂಟರು ಅವರು ಮಾತ್ರ ಮೇಲೆ ಬಂದರೆ ಸಾಕು ಅಂತ ಬೇರೆಯವರಿಗೆ ಸಹಾಯ ಮಾಡುವುದ ಮರೆತು ಅವರನ್ನ ಹೀಯಾಳಿಸಲು ಶುರು ಮಾಡುತ್ತಾರೆ. ಅವರ ಏಳಿಗೆಯನ್ನ ಸಹಿಸದೆ ಕಾಲೆಳೆಯಲು ಶುರು ಮಾಡುತ್ತಾರೆ. ಸಹಾಯ ಮಾಡಬೇಕಾದವರೇ ವಿರುದ್ಧವಾಗಿ ನಿಲ್ಲುತ್ತಾರೆ. ಈ ಎಲ್ಲಾ ವಿಷಯಗಳೇ ನಾನು ಮದುವೆಯೇ ಆಗಬಾರದು ಅದರಲ್ಲೂ ನಮ್ಮ ದಲಿತರನ್ನ ಮದುವೆಯಾಗಬಾರದು ಎಂಬ ನಿರ್ಣಯಕ್ಕೆ ಜೀವನದಲ್ಲಿ ಬರಲು ಕಾರಣ. ನಮ್ಮ ನೆಂಟರಿಂದ ಹಿಡಿದು ದಲಿತ ಮುಖಂಡರಿಂದ ಹಿಡಿದು ಎಲ್ಲರೂ ನಮಗೆ ಒಂಚೂರು ಸಹಾಯ ಮಾಡಿದ್ದರೆ ನಮ್ಮ ಜೀವನ ಅಷ್ಟು ದುರ್ಭರ ಆಗುತ್ತಿರಲಿಲ್ಲ. ಅದರ ಬದಲಿಗೆ ನಮ್ಮ ಕಷ್ಟದ ಸಮಯವನ್ನು ತಮ್ಮ ದುರಾಸೆಗೆ ಅದರ ಲಾಭ ಪಡೆಯುವ ಬಗ್ಗೆ ಯೋಚಿಸಿದ್ದರಿಂದಲೇ, ಶೋಷಣೆ ಮಾಡಿದ್ದರಿಂದಲೇ ನಮ್ಮ ಜೀವನ ಹಳಿತಪ್ಪಿದ್ದು. 


   ಅಷ್ಟಕ್ಕೂ ನಮ್ಮ ಜೀವನ ಹದಗೆಡಲು ನಮ್ಮದೇ ಜನ ಸಹಾಯ ಮಾಡದಿರುವುದು ಕಾರಣ, ನಾವೇನು ಹಣಕಾಸು ಸಹಾಯ ಕೇಳುತ್ತೇವೆಯೇ, ಸೋಷಿಯಲ್ ಜಸ್ಟೀಸ್, ನಮ್ಮವರು ತಮ್ಮವರು ಎನ್ನುವ ಪ್ರೀತಿ ಇಲ್ಲದ ಜನರೇ ನಮ್ಮ ಸುತ್ತಲು ಇದ್ದವರು. ಸ್ವಂತ ಅಮ್ಮನ ತಮ್ಮಂದಿರು ಕೂಡ ಅಮ್ಮನ ಸಹಾಯಕ್ಕೆ ನಿಲ್ಲಲಿಲ್ಲ ನನ್ನಂತದೇ ಛಲವನ್ನ ಅಜ್ಜಿ ತೋರಿಸಿ ಬಸವಣ್ಣನ ಗುಡಿಯಲ್ಲಿ ತೋಟ ಮಾಡಿ ಎಂತ ತೊಂದರೆ ಬಂದರೂ ಅದನ್ನುಉಳಿಸಿಕೊಟ್ಟಿದ್ದರಿಂದ ಇಂದು ಅವರೆಲ್ಲ ಒಂದು ಹಂತಕ್ಕೆ ನಿಂತಿದ್ದಾರೆ. ಅಮ್ಮ ಕೂಡ ನಮ್ಮನ್ನು ಓದಿಸದಿದ್ದರೆ ನಾವೂ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿದ್ದೆವೆನೋ.


------------------------