ತುಮಕೂರಲ್ಲಿ ಯಾರು ಗೆಲ್ತಾರೆ ಅಂತ ಹೇಳದಿದ್ದರೆ ಬೈತೀರಾ ಅಲ್ವಾ? -ಕುಚ್ಚಂಗಿ ಪ್ರಸನ್ನ

ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಓಟಿಂಗ್‌ಗೆ ಐದಾರು ದಿನ ಮೊದಲೇ ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂತಿಂಥವರೇ ಗೆಲ್ತಾರೆ ಅಂತ ಹೇಳಿಬಿಟ್ಟಿದ್ದೆ.

ತುಮಕೂರಲ್ಲಿ ಯಾರು ಗೆಲ್ತಾರೆ ಅಂತ ಹೇಳದಿದ್ದರೆ ಬೈತೀರಾ ಅಲ್ವಾ? -ಕುಚ್ಚಂಗಿ ಪ್ರಸನ್ನ

99% ಲೋಕಲ್

ಕುಚ್ಚಂಗಿ ಪ್ರಸನ್ನ

      ಯಾರು ಗೆಲ್ಲಬಹುದು, ಲೋಕಸಭಾ ಚುನಾವಣೆಯ ಓಟಿಂಗ್ ಮುಗಿದ ದಿನದಿಂದ ಇವತ್ತಿನವರೆಗೆ ಆರಂಭದಲ್ಲಿ ಹೆಚ್ಚು ತೀವ್ರವಾಗಿದ್ದು ಇತ್ತೀಚೆಗೆ ಕ್ಷೀಣಗೊಂಡಿರುವ ಪ್ರಶ್ನೆ ಇದು. ಏಳು ಹಂತಗಳನ್ನು ಮಾಡಿರುವ ಕಾರಣದಿಂದಾಗಿ ಏಪ್ರಿಲ್ 26ರಿಂದ ಜೂನ್ 4ರವರೆಗೆ ಸರಿಯಾಗಿ 38 ದಿನ ಕೌಂಟಿಂಗ್‌ಗಾಗಿ ಕಾಯುವುದು, ರೈಲಿಗೆ ಸಿಕ್ಕಿ ತುಂಡು ತುಂಡಾಗಿ ಬಿದ್ದ ಹೆಣವನ್ನು ಕಾಯುತ್ತ ನಿಲ್ಲುವ ಪೊಲೀಸರಿಗೂ ಆಗದಷ್ಟು ಬೇಸರದ ಸಂಗತಿ ಎಂದರೂ ತಪ್ಪಿಲ್ಲ.

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು, ಮುದ್ದಹನುಮೇಗೌಡರು ಗೆಲ್ತಾರೆ ಬಿಡ್ರಿ ಅಂತ ಅಂದರೆ ಸೋಮಣ್ಣನವರನ್ನು ಬೆಂಬಲಿಸಿದ್ದವರ ಕಣ್ಣು ಕೆಂಪಾಗಿಬಿಡುತ್ತದೆ. ಬಾಯರ್ಸ್‌ ಹೋಟೆಲ್ ಅಂಗಳದಲ್ಲಿ ಮಾತ್ರ, ನೀವು ಯಾರು ಏನೇ ಹೇಳಿದರೂ ಗೆಲ್ಲೋದೇ ಸೋಮಣ್ಣ ಬಿಡ್ರಿ, ಅನ್ನೋರ ಸಂಖ್ಯೆಯೇ ಜಾಸ್ತಿ. ಇಡೀ ತುಮಕೂರಿನಲ್ಲಿ ಬಾಯರ್ಸ್‌ ಹೋಟೆಲ್‌ನಂತ ಹತ್ತಾರು ಕಾಫಿ,ಟೀ ಅಡ್ಡಗಳಿವೆಯಾದರೂ ಇಲ್ಲಿ ಸೇರುವವರಲ್ಲಿ ಬಿಜೆಪಿ ಅಥವಾ ಮೋದಿ ಬೆಂಬಲಿಗರ ಸಂಖ್ಯೆ ಸಹಜವಾಗೇ ಹೆಚ್ಚಾಗಿದೆ. ಇವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮೆಚ್ಚುತ್ತ ಮೋದಿಯನ್ನು ಒಳಗೇ ಬೈದುಕೊಳ್ಳುವವರೂ ಇದ್ದಾರೆ.

      ತುಮಕೂರು ಮಾತ್ರವೇ ಅಲ್ಲ ತುಮಕೂರಿನಂತ ಮಧ್ಯಮ ಗಾತ್ರದ ಯಾವುದೇ ಜಿಲ್ಲಾ ಕೇಂದ್ರಗಳಲ್ಲೂ ಕಾಲದಿಂದಲೂ ನೆಲೆ ಕಂಡಿರುವ ಬಿಸಿನೆಸ್ ಕ್ಲಾಸ್ ಎಂದು ಕರೆಸಿಕೊಳ್ಳುವ ವರ್ತಕರು ಆರ್‌ಎಸ್‌ಎಸ್ , ಜನಸಂಘ ಹಾಗೂ ಬಿಜೆಪಿಯನ್ನು ಪೋಷಿಸುವವರೇ ಆಗಿರುತ್ತಾರೆ. ಸಮೀಪದ ಹಳ್ಳಿಗಳಿಂದ ಓದಿಗೋ, ಉದ್ಯೋಗಕ್ಕೋ ಅಂತ ಬಂದು ನೆಲೆಸಿ ಯಾವ ಉದ್ಯೋಗವನ್ನೂ ಸರಿಯಾಗಿ ಮಾಡಲಾಗದೇ ರಿಯಲ್ ಎಸ್ಟೇಟ್  ವೃತ್ತಿ ಮಾಡುತ್ತಿರುವವರೂ ವ್ಯಾವಹಾರಿಕ ಕಾರಣಗಳಿಗಾಗಿ ಈ ವರ್ತಕ ಸಮುದಾಯವನ್ನೇ ಆಧರಿಸಿರುವ ಕಾರಣಕ್ಕೆ ಅವರೂ ಅಂತರಂಗದಲ್ಲಿ ಏನೇ ಇದ್ದರೂ ಬಹಿರಂಗದಲ್ಲಿ ಬಿಜೆಪಿ ಬೆಂಬಲಿಗರಂತೇ ವರ್ತಿಸುತ್ತಾರೆ. ಸಿನಿಮಾ ನಟ ಹನುಮಂತಗೌಡರಂತ ಸಾವಿರಕ್ಕೋ ಲಕ್ಷಕ್ಕೋ ಒಬ್ಬರು ಮಾತ್ರವೇ ತಮ್ಮ ಮನದ ಮಾತುಗಳನ್ನು ನೇರಾ ನೇರಾ ಆಡುತ್ತಾರೆ.

    ಆಯಿತು ಬಿಡಪ್ಪ, ಅವರೆಲ್ಲ ಏನೋ ಹೇಳ್ತಾರೆ ಬಿಡು, ಇಷ್ಟು ವರ್ಷ ಎಲ್ಲ ಚುನಾವಣೆಗಳಲ್ಲಿ ಓಟಿಂಗ್‌ಗೆ ಮೊದಲೇ ಇಂಥಾವರು ಗೆಲ್ತಾರೆ ಅಂತ ಹೇಳುತ್ತಿದ್ದಲ್ಲ, ಈಗ ನೀನು ಹೇಳಪ್ಪ ಈ ಸಲ ತುಮಕೂರಲ್ಲಿ ಯಾರು ಗೆಲ್ತಾರೆ,ಸೋಮಣ್ಣನೋ ಮುದ್ದಹನುಮೇಗೌಡರೋ? ಅಂತ ನನ್ನನ್ನ ಕೇಳಿದಾಗ ನಾನೂ ಸಹ ಇವರೇ ಗೆಲ್ತಾರೆ ಅಂತ ಹೇಳಕ್ಕಾಗದೇ ಬೇರೆ ಏನೋ ಮಾತಾಡಿ ಮಾತು ಮರೆಸುವ ಪ್ರಯತ್ನ ಮಾಡುತ್ತಿದ್ದೇನೆ.

     ಹೌದು, ಈ ಸಲ ಯಾರು ಗೆಲ್ತಾರೆ ಅಂತ ಯಾಕೆ ಹೇಳಕ್ಕೆ ಆಗ್ತಾ ಇಲ್ಲ ಅಂತ ನನಗೆ ನಾನೇ ಅನೇಕ ಸಲ ಪ್ರಶ್ನಿಸಿಕೊಂಡಿದ್ದುಂಟು. ನಾನು ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಓಟಿಂಗ್‌ಗೆ ಐದಾರು ದಿನ ಮೊದಲೇ ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂತಿಂಥವರೇ ಗೆಲ್ತಾರೆ ಅಂತ ಹೇಳಿಬಿಟ್ಟಿದ್ದೆ. ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರಗಳಲ್ಲಿ ಮಾತ್ರವೇ ನೆಕ್ ಟು ನೆಕ್ ಫೈಟ್ ಇದೆ ಅಂತ ಹೇಳಿದ್ದೆ. ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದವರು ಗೆದ್ದದ್ದು ತೀರಾ ಕಡಿಮೆ ಓಟುಗಳ ಲೀಡಿಂಗ್‌ನಲ್ಲಿ ಅಂತ ನಿಮಗೆಲ್ಲ ಗೊತ್ತಿದೆ. ಕಾಂಗ್ರೆಸ್ ಯಾವ್ಯಾವ ಏಳು ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಅಂತ ಹೇಳಿದ್ದೆನೋ ಅವುಗಳ ರಿಸಲ್ಟ್ ಹಂಗೇ ಬಂತು. ಚಿಕ್ಕನಾಯಕನಹಳ್ಳಿಗೆ ಸಿದ್ದರಾಮಯ್ಯನವರು ಬಂದು ಹೋದ ದಿನವೇ ಅಲ್ಲಿ ಗೆಲ್ಲೋದೇ ಜೆಡಿಎಸ್‌ನ ಸುರೇಶಬಾಬು ಅಂತ ಗೊತ್ತಾಗಿಬಿಟ್ಟಿತ್ತು. ಅದೆಲ್ಲ ಇರಲಿ, ಈಗ ತುಮಕೂರು ಎಂಪಿ ಕ್ಷೇತ್ರದ್ದು ಹೇಳ್ರೀ ಅಂತಾರೆ.

     ಸಿದ್ದರಾಮಯ್ಯ, ಪರಮೇಶ್ವರ್, ಕೆಎನ್ಆರ್ ಹಾಗೂ ಸೋಮಣ್ಣ ಅಂದುಕೊಂಡಂತೇ ಎಲ್ಲ ನಡೆದುಬಿಟ್ಟಿದ್ದರೆ ಜನವರಿ ಮೂರನೇ ವಾರವೇ ಸೋಮಣ್ಣ ಸಿದ್ಧಗಂಗಾ ಮಠದಲ್ಲಿ ಬೃಹತ್ ಸಮಾರಂಭ ಏರ್ಪಡಿಸಿ ಕಾಂಗ್ರೆಸ್ ಸೇರ್ಪಡೆ ಘೋಷಿಸಿಬಿಟ್ಟಿರುತ್ತಿದ್ದರು. ಯಡಿಯೂರಪ್ಪ ಮತ್ತೆ ವಿಜಯೇಂದ್ರರಿಗೆ ಫೈಟ್ ಕೊಡೋದಕ್ಕೆ ರಾಜ್ಯದ ಉತ್ತರ ಭಾಗದಲ್ಲಿ ಯತ್ನಾಳ್ ಇದ್ದಾರೆ, ಆದರೆ ದಕ್ಷಿಣ ಭಾಗದ ಹಳೇ ಮೈಸೂರಿನಲ್ಲಿ ಸೋಮಣ್ಣ ಮತ್ತು ಅವರ ಮಗ ಅರುಣ್ ಬಿಟ್ಟರೆ ಬೇರೆ ಯಾರಿದ್ದಾರೆ, ಅದೂ ಅವರದೇ ಸಮುದಾಯದವರು ಅಂತ ಅಮಿತ್ ಶಾ ತಮ್ಮ ಚಾಣಕ್ಯ ಲೆಕ್ಕ ಹಾಕಿದರೋ ಏನೋ, ಒಟ್ಟಾರೆ ಸೋಮಣ್ಣನವರ ಕಾಂಗ್ರೆಸ್ ಸೇರುವ ಆಸೆ ಈಡೇರಲಿಲ್ಲ. ಹಂಗೂ ಆಗದೇ ಹೋದರೆ ರಾಜ್ಯ ಸಭೆಗಾದರೂ ಕರೆದುಕೊಳ್ಳಿ ಅಂತ ದಿಲ್ಲಿಗೇ ಹೋಗಿ ಕೇಳಿಕೊಂಡು ಬಂದರೂ ಒಪ್ಪದ ಅಮಿತ್ ಶಾ, ತುಮಕೂರಿನ ಕಡೆ ಕೈ ತೋರಿಸಿಬಿಟ್ಟರು.

    ವಿಧಾನ ಸಭಾ ಚುನಾವಣೆಯಲ್ಲಿ ಗೋವಿಂದರಾಜನಗರ ಕೈತಪ್ಪಿಹೋದರೂ ಚಾಮರಾಜನಗರದಲ್ಲಾದರೂ ಎಂಎಲ್‌ಎ ಆಗಬಹುದಾ ಅಂತ ಅಂದುಕೊಂಡರೆ ಇದೇ ಹೈಕಮಾಂಡ್ ಅಡಿಶನಲ್ ಆಗಿ ವರುಣಾ ಬೇರೆ ಕೊಟ್ಟು ಎರಡೂ ಕಡೆ ನಿಂತು ಯಾವುದನ್ನೂ ಫೋಕಸ್ ಮಾಡಲಾಗದೇ “ಎರಡು ಕಣ ನೆಚ್ಚಿ ಕುರುಡು ದಾಸಯ್ಯ ಕೆಟ್ಟ” ಅನ್ನೋ ಗಾದೆ ನಿಜವಾಗಿ ಪರಿಣಮಿಸಿದರೂ ಪಕ್ಷದ ಶಿಸ್ತಿನ ಸಿಪಾಯಿಯಂತೆ ತುಮಕೂರಿನಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುವುದನ್ನು ಬಿಟ್ಟರೆ ಅನ್ಯ ದಾರಿ ಸೋಮಣ್ಣನವರಿಗೆ ಇರಲಿಲ್ಲ. ಹಂಗಾಗಿ ಫಂಡು-ದಂಡಿನ ಜೊತೆಗೆ ತುಮಕೂರಿನ ಸಿಎನ್‌ವಿ ಚೇಂಬರ್‌ನ ಜಿ-1, ಜಿ-2ಗಳಲ್ಲಿ ನೆಲೆಯೂರಿದರು ಸೋಮಣ್ಣ.

     ಸೋಮಣ್ಣ ತುಮಕೂರಿಗೆ ಬರುತ್ತಾರೆ ಎಂಬ ಸ್ಕೂಪ್ ಸುದ್ದಿಯನ್ನು ಹಾಲಿ ಸಂಸದ ಜಿ.ಎಸ್.ಬಸವರಾಜು ವರ್ಷ ಮೊದಲಿನಿಂದಲೂ ಗಾಳಿಯಲ್ಲಿ ಬಿಡುತ್ತಲೇ ಇದ್ದದ್ದು ಎಲ್ಲರಿಗೂ ಗೊತ್ತಿತ್ತು. ಗುಬ್ಬಿ ವಿಧಾನ ಸಭೆಗೆ ಅರುಣ್ ಸೋಮಣ್ಣ ಬರುತ್ತಾರೆ ಅಂತಲೂ ಜಿಎಸ್‌ಬಿ ಸುದ್ದಿ ಹಬ್ಬಿಸಿದ್ದರು. ಆದರೆ ಅದಾಗಲಿಲ್ಲ, ಆದರೆ ದಿಲೀಪ್‌ನನ್ನು ಗೆಲ್ಲಲು ಇವರು ಬಿಡಲಿಲ್ಲ. ಇತ್ತ ಯಡಿಯೂರಪ್ಪಾಜಿ ಬೇರೆ ಚಿಕ್ಕನಾಯಕನಹಳ್ಳಿಯಲ್ಲಿ ಸೋತು ಮನೆಯಲ್ಲಿದ್ದ ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಲೋಕಸಭೆಯ ಟಿಕೆಟ್ ಕೊಡಿಸುವದಾಗಿ ನಂಬಿಸಿ ಕೈ ಕೊಟ್ಟರು. ಸುಮ್ಮನೆ ಮನೆಯಲ್ಲಿದ್ದವನ್ನು ಬೀದಿಗೆಳೆದು ಮರ‍್ಯಾದೆ ಕಳೆದರು ಎಂಬ ಆಕ್ರೋಶದಿಂದ ಮಾಧುಸ್ವಾಮಿಯವರು, ಎರಡೆರಡು ದಿನ ಜೆಸಿ ಪುರದ ನಿವಾಸದಲ್ಲೇ ಕೂತು, ಟಿವಿಗಳ ಎದುರು ಮುಖಾ ಮೋರೆ ನೋಡದೆ ಇಡೀ ಪಕ್ಷವನ್ನು ಜಾಲಾಡಿಬಿಟ್ಟರು, “ ತುಮಕೂರು ಇತಿಹಾಸದಲ್ಲೇ ಹೊರಗಿನವರು ಗೆದ್ದ ನಿದರ್ಶನಗಳಿಲ್ಲ” ಎಂಬ ಘೋಷವಾಕ್ಯವನ್ನು ಘೋಷಿಸಿಬಿಟ್ಟರು. ಖುದ್ದು ಅಮಿತ್ ಶಾ ಕರೆ ಮಾಡಿದರೂ, ಸೋಮಣ್ಣನ ಪರ ಬಿಲ್ ಕುಲ್ ಪ್ರಚಾರಕ್ಕೆ ಬರಲ್ಲ ಅಂತ ಹೇಳುವಷ್ಟು ಛಾತಿ ಇದ್ದರೆ ಅದು ಮಾಧುಸ್ವಾಮಿ ಅವರಿಗೆ ಮಾತ್ರವೇ ಎನ್ನುವುದೂ ನಿಜ.

    ಜೊತೆಗೆ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಹಿಂದುಳಿದ ವರ‍್ಗಗಳ ಮೋರ್ಚಾದ  ಸ್ಪೂರ್ತಿ ಚಿದಾನಂದ್, ಸಿದ್ದಗಂಗಾ ಆಸ್ಪತ್ರೆಯ ಡಾ.ಎಸ್.ಪರಮೇಶ್, ವಕ್ತಾರ ಹೆಚ್.ಎನ್.ಚಂದ್ರಶೇಖರ್ ಮೊದಲಾದವರನ್ನ ಒಲಿಸಿಕೊಳ್ಳುವ ಹೆಚ್ಚುವರಿ ಶ್ರಮವೂ ಸೋಮಣ್ಣನವರಿಗೆ ಬಿತ್ತು. ಸ್ಥಳೀಯ ಆರ್‌ಎಸ್‌ಎಸ್ ನಾಯಕರು ಹಾಗೂ ಕಾರ‍್ಯಕರ್ತರ ಮನವೊಲಿಸಲು ರಾತ್ರೋರಾತ್ರಿ ಸಂತೋಷ್‌ಜೀ ತುಮಕೂರಿಗೆ ಬಂದೂ ಹೋದರಾದರೂ ರಾಷ್ಟ್ರೀಯ ಮಟ್ಟದಲ್ಲೇ ಮೋದಿ-ಅಮಿತ್ ಶಾ ಜೋಡಿಯ ದಬ್ಬಾಳಿಕೆ ಮತ್ತು ಅಸಡ್ಡೆಯ ನಡವಳಿಕೆ ವಿರುದ್ಧ ಮೌನ ಕ್ರಾಂತಿ ನಡೆಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ‍್ಯಕರ್ತರು 2014 ಹಾಗೂ 2019ರ ಚುನಾವಣೆಗಳಲ್ಲಿ ಕೊಟ್ಟಂತ ಬೆಂಬಲವನ್ನು ಈ ಸಲ ತುಮಕೂರಿನಲ್ಲೂ ಬಿಜೆಪಿ ಅಭ್ಯರ್ಥಿಗೆ ಕೊಡದೇ ಹೋದರು. 40-44 ಜನರಿರುವ ಮತದಾರರ ಪಟ್ಟಿಯ ಒಂದು ಪುಟಕ್ಕೆ ಒಬ್ಬರನ್ನು ಪೇಜ್ ಪ್ರಮುಖ್ ಎಂದು ನೇಮಿಸಲಾದ ಆರ್‌ಎಸ್‌ಎಸ್ ಕಾರ‍್ಯಕರ್ತರ‍್ಯಾರೂ ಈ ಚುನಾವಣೆಯಲ್ಲಿ ಎಲ್ಲೂ ಕಾಣದೇ ಹೋದದ್ದೇ ಈ ಆಂತರಿಕ ಬಂಡಾಯಕ್ಕೆ ಸಾಕ್ಷಿ. ಕಳೆದ ಎರಡೂ ಚುನಾವಣೆಯಲ್ಲಿ ಈ ಪೇಜ್ ಪ್ರಮುಖ್ ಯಾ ಪನ್ನಾ ಪ್ರಮುಖ್‌ಗಳು ಆಯಾ ಬೀದಿಗಳ ಓಟರುಗಳ ಪೈಕಿ ಬಿಜೆಪಿಯ ಕಟ್ಟಾ ಬೆಂಬಲಿಗರು ಯಾರು, ಬೇಲಿಯ ಮೇಲೆ ಕುಂತಿರುವವರು ಯಾರು, ಖಡಕ್ ಆಗಿ ಬಿಜೆಪಿಗೆ ಓಟು ಹಾಕುವುದೇ ಇಲ್ಲ ಎನ್ನುವವರು ಯಾರು ಎಂಬುದನ್ನೆಲ್ಲ ಅಧ್ಯಯನ ಮಾಡಿ, ತಮ್ಮ ಪಕ್ಷದ ಪರ ಇರುವವರನ್ನು ಸಂಬಂಧಿಸಿದ ಬೂತುಗಳಿಗೆ ಕರೆತಂದು ಓಟು ಮಾಡಿಸುತ್ತಿದ್ದ ಈ ಆರ್‌ಎಸ್‌ಎಸ್ ಕಾರ‍್ಯಕರ್ತರು ಈ ಚುನಾವಣೆಯಲ್ಲಿ ಕಾಣದೇ ಹೋದುದಕ್ಕೆ ಐತಿಹಾಸಿಕ ಕಾರಣವಿದೆ.

    ಹಿಂಗಾಗಿ ಸೋಮಣ್ಣನವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ‍್ಯಕರ್ತರ ದಂಡನ್ನು ಮರೆತು ಬೆಂಗಳೂರಿನಿಂದ ತಂದಿದ್ದ ಫಂಡನ್ನು ಮಾತ್ರವೇ ನೆಚ್ಚಿಕೊಳ್ಳಬೇಕಾಯಿತು. ಜೊತೆಗೆ ವೈಯಕ್ತಿಕ ವರ್ಚಸ್ಸು ಬೇರೆ ಇತ್ತಲ್ಲ. ಋಣಭಾರ ಇಳಿಸಿಕೊಳ್ಳುವ ಲೆಕ್ಕಾಚಾರದಿಂದ ಸೋಮಣ್ಣನವರನ್ನು ತುಮಕೂರಿಗೆ ಕರೆತಂದರು ಎಂಬ ಆಪಾದನೆಯನ್ನು ಹೊತ್ತ ಹಾಲಿ ಸಂಸದ ಜಿ.ಎಸ್.ಬಸವರಾಜು ತಮ್ಮ ಪರ್ಸನಲ್ ಕಾಂಟಾಕ್ಟ್‌ಗಳ  ನೆರವಿನಿಂದ ಎಷ್ಟರ ಮಟ್ಟಿಗೆ ಸೋಮಣ್ಣನವರಿಗೆ ಓಟುಗಳನ್ನು ಟ್ರಾನ್ಸ್‌ಫರ್ ಮಾಡಿಸಿಕೊಟ್ಟರು ಎಂಬುದನ್ನು ಅವರೇ ಹೇಳಬೇಕಾಗಿದೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಐದನೇ ಸಲ ಗೆದ್ದಿರುವ ಹಾಗೂ ಔಟ್‌ಗೋಯಿಂಗ್ ಎಂಪಿ ಎಂಬ ಪ್ರಭಾವದಡಿ ಮಾತ್ರ ಸೋಮಣ್ಣನವರ ಗೆಲುವಿಗೆ ನೆರವಾಗಲು ಬಸವರಾಜು ಅವರಿಂದ ಸಾಧ್ಯವಾಗಲಿಲ್ಲ ಎಂಬುದು ಐತಿಹಾಸಿಕ ದುರಂತ ಮಾತ್ರ. ನೋಡಿ, ಜಿಎಸ್‌ಬಿ ಮಧುಗಿರಿ ಕ್ಷೇತ್ರದಲ್ಲಿ ‘ ಗೋ ಬ್ಯಾಕ್ ‘ ಎಂಬ ಪ್ರತಿಭಟನೆ ಎದುರಿಸಬೇಕಾಗಿ ಬಂತು. ಹಳ್ಳಿಗಳಲ್ಲಿ ಅರಳಿಕಟ್ಟೆಗಳ ನೆರಳಲ್ಲಿ ನಿಂತು ಸೋಮಣ್ಣನವರು ಊರಿನ ಜನರ ಪರಿಚಯ ಮಾಡಿಕೊಂಡು ಓಟು ಕೇಳುವಾಗ ಪಕ್ಕದಲ್ಲಿ ಅವರದೇ ಪಕ್ಷದ ಹಾಲಿ ಎಂಪಿ ನಿಂತು ತನ್ನ 40 ವರ್ಷಗಳ ಸಂಸದೀಯ ರಾಜಕೀಯದಲ್ಲಿ ಅತಿಪರಿಚಿತರಾಗಿರುವ ಓಟುದಾರರಿಗೆ ತನ್ನ ಪರವಾಗಿ ಇವರನ್ನು ಗೆಲ್ಲಿಸಿ ಎಂದು ಕೇಳಲಾಗದೇ ಹೋದದ್ದು ಸೋಮಣ್ಣನವರ ಪಾಲಿನ ಮತ್ತೊಂದು ದುರಂತ ಎನಿಸಿಬಿಟ್ಟಿತು. ಪ್ರಚಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಖುದ್ದು ಸೋಮಣ್ಣನವರೇ ಜಿಎಸ್‌ಬಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದನ್ನು ಅವಾಯ್ಡ್ ಮಾಡತೊಡಗಿದ್ದು ಇದೇ ಕಾರಣಕ್ಕೇ ಅಂತ ಅನಿಸುತ್ತದೆ.

      ಸ್ವಪಕ್ಷದೊಳಗಿನ ಈ ಎಲ್ಲ ಅದ್ವಾನಗಳನ್ನು ಬಹುಬೇಗ ಗ್ರಹಿಸಿಕೊಂಡು ಬಿಟ್ಟ ಸೋಮಣ್ಣನವರಿಗೆ ಆಪತ್ಬಾಂಧವನಂತೆ ಒದಗಿಬಂದದ್ದು ಮೈತ್ರಿ ಪಕ್ಷ ಜೆಡಿಎಸ್ ಮಾತ್ರ. ಚಿಕ್ಕನಾಯಕನಹಳ್ಳಿ, ತುರುವೇಕೆರೆಗಳಲ್ಲಂತೂ ಜೆಡಿಎಸ್ ಶಾಸಕರಾದ ಎಂ.ಟಿ.ಕೃಷ್ಣಪ್ಪ ಮತ್ತು ಸಿ.ಬಿ.ಸುರೇಶಬಾಬು ತಮ್ಮ ಸ್ವಂತದ ಚುನಾವಣೆಗೂ ಓಡಾಡಿರಲಿಲ್ಲ ಎಂದು ಜನರು ಅಚ್ಚರಿಪಡುವಷ್ಟರ ಮಟ್ಟಿಗೆ ಪ್ರಚಾರದಲ್ಲಿ ತೊಡಗಿಕೊಂಡು ಬಿಟ್ಟರು. ನೂರು ಕೋಟಿ ಆದರೂ ಸರಿಯೇ ನಮ್ಮ ಸೋಮಣ್ಣನವರು ಗೆಲ್ಲದೇ ಬಿಡುವುದಿಲ್ಲ ಎಂಬ ಅನ್‌ಅಫಿಶಿಯಲ್ ಟ್ಯಾಗ್‌ಲೈನ್ ಜೊತೆಗೇ ಜೆಡಿಎಸ್ ದಳಪತಿಗಳು ಪ್ರಚಾರ ನಡೆಸಿದರು. ಹಂಗಾಗಿ ತುರುವೇಕೆರೆ, ಚಿಕ್ಕನಾಯಕನಹಳ್ಳಿಗಳು ಮಾತ್ರವೇ ಅಲ್ಲ ಗುಬ್ಬಿ ಮತ್ತು ಕೊರಟಗೆರೆಗಳಲ್ಲೂ ನಾವು ಲೀಡ್ ಬರುತ್ತೇವೆ ಎನ್ನುತ್ತಾರೆ ಸೋಮಣ್ಣನವರಿಗೆ ಕೆಲಸ ಮಾಡಿದವರು. ಜೊತೆಯಲ್ಲಿ ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಬಿ.ಸುರೇಶಗೌಡರು ಕೂಡಾ ಲೀಡಿಂಗ್ ಕೊಡಿಸುತ್ತಾರೆ, ಇನ್ನೇನು ತುಮಕೂರು ನಗರ ಮತ್ತು ತಿಪಟೂರು ಬಿಜೆಪಿಯ ಭದ್ರಕೋಟೆ ಅಲ್ವಾ ಎನ್ನುತ್ತಾರೆ. ಬಿಜೆಪಿಯ ಸಾಂಪ್ರದಾಯಿಕ ಓಟುಗಳು, ಮೋದಿ ಪ್ರಭಾವ(ಎಷ್ಟರ ಮಟ್ಟಿಗೆ ಇದೆ ಅಂತ ನೀವೇ ಹೇಳಬೇಕು) ಸೋಮಣ್ಣನವರ ಸ್ವಜಾತಿ ಲಿಂಗಾಯಿತರ ಓಟುಗಳ ಜೊತೆಗೆ ದೇವೇಗೌಡರ ಹೆಸರಿನಲ್ಲಿ ಬರುವ ಜೆಡಿಎಸ್ ಒಕ್ಕಲಿಗರ ಓಟುಗಳೆಲ್ಲ ಸೇರಿದರೆ ಇನ್ನೇನು ಎನ್ನುವ ಇವರ ಲೆಕ್ಕದಲ್ಲಿ ಸೋಮಣ್ಣನವರೇ ಗೆಲ್ಲುತ್ತಾರೆ ಅಂತ ಅನಿಸುತ್ತೆ ಅಲ್ವಾ.

     ಆದರೆ ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಯಾವ ಗುಣಾಕಾರ ಭಾಗಾಕಾರ ನಡೆದಿದೆ ಅಂತಾನೂ ನೋಡಬೇಕಲ್ವಾ. ತುಮಕೂರು ಎಂಟು ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಅವರಲ್ಲಿ ಇಬ್ಬರು ಸಚಿವರು ಹಾಗೂ ಗುಬ್ಬಿಯ ಎಸ್.ಆರ್.ಶ್ರೀನಿವಾಸ್ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹೊಂದಿದ್ದಾರೆ. 2014ರ ಚುನಾವಣೆಯಲ್ಲಿ ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರಗಳು ಒಟ್ಟು ಒಂದು ಲಕ್ಷದಷ್ಟು ಓಟಿನ ಲೀಡಿಂಗ್ ಕೊಟ್ಟಿದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುದ್ದಹನುಮೇಗೌಡರು ಮುಕ್ಕಾಲು ಲಕ್ಷದ ಅಂತರದಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು ಸೋಲಿಸಲು ಸಾಧ್ಯವಾಗಿತ್ತು. ಆದರೆ ಈ ಸಲ ಈ ಅಷ್ಟೂ ಕ್ಷೇತ್ರಗಳು ಅಷ್ಟು ದೊಡ್ಡ ಪ್ರಮಾಣದ ಲೀಡಿಂಗ್ ಕೊಡಬಲ್ಲವೇ ಎಂಬ ಪ್ರಶ್ನೆಯಿದೆ.

     ಗೆದ್ದು ಗೃಹ ಸಚಿವರಾಗಿ, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಡಾ.ಜಿ. ಪರಮೇಶ್ವರ್ ತಮ್ಮ ಕ್ಷೇತ್ರದ ಮುಖಂಡರು ಹಾಗೂ ಕಾರ‍್ಯಕರ್ತರನ್ನು ಪಕ್ಕದ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಷ್ಟು ಮುತುವರ್ಜಿಯಿಂದ ನೋಡಿಕೊಂಡಿಲ್ಲ, ವಿವಿಧ ನಿಗಮ ಮಂಡಳಿಗಳಿಗೆ ನಾಮಿನೇಶನ್ ಮಾಡಿಸುವಲ್ಲಿ ಆಸಕ್ತಿ ತೋರಿಸಿಲ್ಲ, ಇವೆಲ್ಲ ಮಾಡಿಸಿಕೊಡುವುದಿರಲಿ ಭೇಟಿಗೂ ಅವಕಾಶ ದೊರಕುತ್ತಿಲ್ಲ ಎಂಬ ಕಾರಣಕ್ಕೆ ಕೊರಟಗೆರೆ ಮಧುಗಿರಿಯಷ್ಟು ಲೀಡಿಂಗ್ ಕೊಡಲ್ಲ ಎನ್ನುವುದನ್ನು ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಾರೆ.

       ಆದರೆ ತುಮಕೂರು ನಗರ ಹಾಗೂ ಗ್ರಾಮಾಂತರ ಮುದ್ದಹನುಮೇಗೌಡರ ಕೈ ಹಿಡಿದಿವೆ ಎಂಬ ಮಾತೂ ಇದೆ. ಗುಬ್ಬಿ ಕ್ಷೇತ್ರದಲ್ಲಿ ನನ್ನ ಸ್ವಂತ ಚುನಾವಣೆಗೆ ಪಟ್ಟಷ್ಟೇ ಕಷ್ಟ ಪಟ್ಟಿದ್ದೇನೆ, ಲೀಡ್ ಬಂದರೂ ಆಶ್ಚರ್ಯ ಪಡುವಂತಿಲ್ಲ ಎನ್ನುತ್ತಾರೆ ವಾಸಣ್ಣ.

      ಈ ಲೋಕಸಭಾ ಕ್ಷೇತ್ರದಲ್ಲಿ ಎರಡು ತರದ ಒಕ್ಕಲಿಗರಿದ್ದಾರೆ. ಗಂಗಟಕಾರರು, ಕುಂಚಿಟಿಗರು ಅಂತಲ್ಲ, ದೇವೇಗೌಡರ ಕಟ್ಟಾ ಬೆಂಬಲಿಗರು ಹಾಗೂ ಮುದ್ದಹನುಮೇಗೌಡರ ಕಾರ‍್ಯತತ್ಪರತೆಯನ್ನು ಇಷ್ಟ ಪಡುವವರು ಅಂತ, ಅವರೆಲ್ಲ ಕಾಂಗ್ರೆಸ್‌ಗೆ ಓಟ್ ಮಾಡಿದ್ದಾರೆ ಎನ್ನುತ್ತಾರೆ ಒಳಗಿನವರು.

      ಜೊತೆಗೆ ಮುದ್ದಹನುಮೇಗೌಡರು ಎಲೆಕ್ಷನ್ ಮಾಡಿದ ರೀತಿಯನ್ನೂ ಒಂಚೂರು ಗಮನಿಸಬೇಕಿದೆ. ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಪತ್ರಕರ್ತರ ಸಂಘವೇ ಕರೆದಿದ್ದ ಮಾಧ್ಯಮ ಸಂವಾದದಲ್ಲಿ ದೊರಕಿದ ಒಂದೂವರೆ ಗಂಟೆಯಷ್ಟು ಸುದೀರ್ಘ ಸಮಯವನ್ನು ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಬಳಸಿಕೊಂಡದ್ದನ್ನು ಬಿಟ್ಟರೆ ಉಳಿದ ಪ್ರಚಾರಕ್ಕೆ ಯಾವ ಮಾಧ್ಯಮಗಳನ್ನೂ ಸೋಮಣ್ಣನವರಷ್ಟು ಅವಲಂಬಿಸಲಿಲ್ಲ. ಜೊತೆಗೆ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಾಗೂ ಕಾಂಗ್ರೆಸ್‌ಗೆ ನೀಟಾಗಿ ಓಟು ಮಾಡುವ ಸಾಧ್ಯತೆ ಇದ್ದ ಎಡಗೈ ಸಮುದಾಯವೂ ಸೇರಿದಂತೆ ಅನ್ಯ ಸಮುದಾಯಗಳ ಯಾವ ಮುಖಂಡರನ್ನೂ ಜೊತೆಯಲ್ಲಿಟ್ಟುಕೊಂಡು ಕ್ಷೇತ್ರ ಸಂಚರಿಸಲಿಲ್ಲ. ಅಹಿಂದ ಸಮುದಾಯಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಓಟುಗಳಲ್ಲವೇ, ಇನ್ಯಾರಿಗೆ ಹಾಕುತ್ತಾರೆ ಎಂಬ ಒಳಗುಣಿತವೋ ಏನೋ ಗೊತ್ತಿಲ್ಲ, ಇಡೀ ಚುನಾವಣೆ ಪೂರ್ತಿ ಅವರ ಒಕ್ಕಲಿಗ ಸಮುದಾಯದ ಓಟುಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳುವತ್ತಲೇ ಹೆಚ್ಚು ಗಮನ ಹರಿಸಿದರು ಎನ್ನುತ್ತಾರೆ ಅವರೊಂದಿಗೆ ಇದ್ದ ಕೆಲವರು.

     1994ರಿಂದ ನಿರಂತರ ಎರಡು ಅವಧಿಗೆ ಇದೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಣಿಗಲ್ ವಿಧಾನ ಸಭಾ ಕ್ಷೇತ್ರದಿಂದ ವಿಧಾನ ಸಭೆಗೆ ಚುನಾಯಿತರಾದ ಮುದ್ದಹನುಮೇಗೌಡರ ಲೋಕಸಭಾ ಚುನಾವಣೆಯ ನಡಿಗೆಯನ್ನು ತುಸು ಗಮನಿಸಿ. ಗೌಡರು 2009ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 3.10 ಲಕ್ಷ ಓಟು ಗಳಿಸಿ ಸೋತಿದ್ದರು. ಅಂದು 20 ಸಾವಿರ ಚಿಲ್ಲರೆ ಓಟುಗಳಿಂದ ಬಿಜೆಪಿಯ ಜಿ.ಎಸ್.ಬಸವರಾಜ್ ಗೆದ್ದಿದ್ದರು. ಕಾಂಗ್ರೆಸ್‌ನಿಂದ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಕೋದಂಡರಾಮಯ್ಯನವರು 1.77 ಲಕ್ಷ ಓಟು ಗಳಿಸಿ ಮೂರನೇ ಸ್ಥಾನದಲ್ಲಿದ್ದರು. (1996ರಲ್ಲಿ ಹಿಂದುಳಿದ ವರ್ಗದ ದಿವಂಗತ ಸಿ.ಎನ್.ಭಾಸ್ಕರಪ್ಪನವರಿಗೆ ದೇವೇಗೌಡರು ಕೊಟ್ಟಂತ ಅವಕಾಶವನ್ನು ಕಾಂಗ್ರೆಸ್ ಕೋದಂಡರಾಮಯ್ಯನವರಿಗೆ ಕೊಡುವ ಪ್ರಯೋಗವನ್ನು ಮಾಡಿತ್ತು ಅಂತ ಭಾವಿಸುವಂತಿಲ್ಲ. ಅವತ್ತು ಮಾಧುಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರಕುವ ಎಲ್ಲ ಸಾಧ್ಯತೆಗಳಿದ್ದು, ಜಿಎಸ್‌ಬಿ ಅದನ್ನು ವಯಾ ಸೋಮಣ್ಣ-ಸಿದ್ದರಾಮಯ್ಯ ತಪ್ಪಿಸಿದರು,ಹಾಗಾಗಿ ಕೋದಂಡರಾಮಯ್ಯ ತುಮಕೂರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರು ಎಂಬ ಗುರುತರ ಆರೋಪವಿದೆ.)

       ಬಳಿಕ 2014ರ ಚುನಾವಣೆಯ ಹೊತ್ತಿಗೆ ಇದೇ ಮುದ್ದಹನುಮೇಗೌಡರು ಜೆಡಿಎಸ್‌ನಿಂದ ಕಾಂಗ್ರೆಸ್ ತಲುಪಿ ಅಭ್ಯರ್ಥಿಯಾಗಿಬಿಟ್ಟರು, ಜೆಡಿಎಸ್‌ನ ದೇವೇಗೌಡರು ತಮ್ಮ 1996ರ ಅಹಿಂದ ಪ್ಲಸ್ ಒಕ್ಕಲಿಗ ಓಟುಗಳ ಪ್ರಯೋಗದ ನೆನಪಲ್ಲಿ ವರ್ತೂರಿನ ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪನವರಿಗೆ ಟಿಕೆಟ್ ಕೊಟ್ಟರು. ಆದರೆ ಈ ಚುನಾವಣೆಯಲ್ಲಿ ಕೃಷ್ಣಪ್ಪನವರಿಗೆ ಹಿಂದಿನ ಚುನಾವಣೆಯಲ್ಲಿ ಇದೇ ಪಕ್ಷದಿಂದ ಮುದ್ದಹನುಮೇಗೌಡರಿಗೆ ಬಂದಷ್ಟು ಓಟು ಬರಲಿಲ್ಲ. ಬದಲಿಗೆ ಕೃಷ್ಣಪ್ಪನವರು ಕೇವಲ 2.58ಲಕ್ಷ ಓಟು ಪಡೆದುಕೊಂಡರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮುದ್ದಹನುಮೇಗೌಡರು 4.29ಲಕ್ಷ ಓಟು ಗಳಿಸಿ, 74 ಸಾವಿರಕ್ಕೂ ಹೆಚ್ಚು ಓಟುಗಳ ಲೀಡಿಂಗ್‌ನಿಂದ ಬಿಜೆಪಿಯ ಜಿ.ಎಸ್.ಬಸವರಾಜ್ ಅವರನ್ನು ಸೋಲಿಸಿ ಎಂಪಿಯಾದರು. ಈ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಎ.ಕೃಷ್ಣಪ್ಪನವರನ್ನು ವರ್ತೂರಿನಿಂದ ಕರೆ ತಂದು ತುಮಕೂರಿನಲ್ಲಿ ನಿಲ್ಲಿಸಿದ ದೇವೇಗೌಡರು ತಮ್ಮ ಸಮುದಾಯದ ಓಟುಗಳನ್ನು ಮುದ್ದಹನುಮೇಗೌಡರಿಗೆ ಟ್ರಾನ್ಸ್‌ಫರ್‌ ಆಗುವಂತೆ ಮಾಡಿ, ತಮ್ಮವರನ್ನು ಸೋಲಿಸಿಬಿಟ್ಟರು ಎಂದು ಗೊಲ್ಲ ಸಮುದಾಯ ಈಗಲೂ ನೋವು ತಿನ್ನುತ್ತಿದೆ. ದೇವೇಗೌಡರೇ ಕೃಷ್ಣಪ್ಪನವರ ಅಕಾಲಿಕ ಸಾವಿಗೆ ಕಾರಣ ಎಂದು ಅವರು ಈಗಲೂ ದೂರುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ನೆನಪಿನಲ್ಲಿ ಇರಿಸಿಕೊಂಡು ಮುದ್ದಹನುಮೇಗೌಡರು 2019ರಲ್ಲಿ ತುಮಕೂರಿಗೆ ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಬಂದಾಗ ತುಸು ಸಾಫ್ಟ್ ಕಾರ್ನರ್ ತೋರಿಸಬೇಕಿತ್ತು. ಹಾಗೆ ಮೃದುವಾಗಿ ವರ್ತಿಸಿದ್ದರೆ ಈ ಸಲ ಅವರಿಗೆ ಎಲೆಕ್ಷನ್ ಈಸಿ ಆಗಿಬಿಡುತ್ತಿತ್ತು ಎನ್ನುತ್ತಾರೆ.

     ಇವೆಲ್ಲವನ್ನೂ ಮೀರಿ ರಾಜ್ಯದಲ್ಲಿ ಎರಡನೇ ಸಲ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಡಬಲ್ ಸ್ಟ್ರೋಕ್‌ ಕಾಂಗ್ರೆಸ್ ಸರ್ಕಾರ ನೀಡಿರುವ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಕೊಡುಗೆಗಳ ಫಲಾನುಭವಿಗಳು ಯಾವ ಪ್ರಮಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ‘ಕೈ’ ಹಿಡಿದಿದ್ದಾರೆ ಎನ್ನುವುದರ ಮೇಲೆ ಮುದ್ದಹನುಮೇಗೌಡರ ಗೆಲುವು ನಿಂತಿದೆ ಎಂಬ ಮಾತಿಗೂ ಬೆಲೆಯಿದೆ.

      ಇಷ್ಟೆಲ್ಲ ಹೇಳಿದ ಮೇಲೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಜೂನ್ ನಾಲ್ಕರಂದು ಯೂನಿವರ್ಸಿಟಿ ಸ್ಟಾಪ್ ಎದುರಿನ ಕೌಂಟಿಂಗ್ ಸೆಂಟರ್‌ನ ಮೈಕಿನಿಂದ ಮಾಡುವ ಅನೌನ್ಸ್‌ ಮೆಂಟೇ ಖಚಿತಪಡಿಸಬೇಕು ಅನ್ನೋದೇ ಅಂತಿಮ ಸತ್ಯ ಅಂದ್ರೆ ಬೈತೀರಾ ಅಲ್ವಾ.