ಕಾಂಗ್ರೆಸ್ಸನ್ನು ದಿಕ್ಕೆಡಿಸುತ್ತಿರುವವರು ಯಾರು?

ಕಾಂಗ್ರೆಸ್ಸನ್ನು ದಿಕ್ಕೆಡಿಸುತ್ತಿರುವವರು ಯಾರು

ಕಾಂಗ್ರೆಸ್ಸನ್ನು ದಿಕ್ಕೆಡಿಸುತ್ತಿರುವವರು ಯಾರು?

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ


ಬಿಜೆಪಿಯಲ್ಲಿ ಗುಂಪುಗಾರಿಕೆ ಮತ್ತು ಒಳ ಜಗಳಗಳು, ಪರಸ್ಪರ ಕಾಲೆಳೆದಾಟಗಳಿಲ್ಲವೇ, ಯಾರಿಲ್ಲ ಎಂದವರು, ಖಂಡಿತಾ ಇದೆ ಅಂತಲೇ ಅವರ ಪಕ್ಷದವರೇ ಹೇಳುತ್ತಾರೆ, ಆದರೆ ನಮ್ಮಲ್ಲಿ ಸ್ಟಾçಂಗ್ ಆದ ಹೈಕಮಾಂಡ್ ಇದೆ, ಅದು ಹೇಳಿದಂತೆಯೇ ಎಲ್ಲ ನಡೆಯುತ್ತದೆ, ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ದುರ್ಬಲವಾಗಿದೆ ಎನ್ನುತ್ತಾರೆ.


ಕಾಂಗ್ರೆಸ್ಸನ್ನು ದಿಕ್ಕೆಡಿಸುತ್ತಿರುವವರು ಯಾರು?


ನಾನು ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ದಿನಪತ್ರಿಕೆಯಾಗಿದ್ದ ‘ಜನವಾಹಿನಿ’ಯಲ್ಲಿ ವರದಿಗಾರ ಕಂ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆ ಪತ್ರಿಕೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಒಬ್ಬರು ಮೊನ್ನೆ ಹೇಳುತ್ತಿದ್ದರು, “ ನೋಡೀ ಪ್ರಸನ್ನ, ನೆಕ್ಸ್ಟ್‌  ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಭ್ರಮೆ ಬೇಡ, ಆರ್‌ಎಸ್‌ಎಸ್ ಬಿಜೆಪಿ ಈಗಲಿಂದಾನೇ ಸೋಶಿಯಲ್ ಎಂಜಿನಿಯರಿಂಗ್ ಮಾಡೋಕೇ ಶುರು ಮಾಡಿವೆ. ಜೆಡಿಎಸ್ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ಳುತ್ತೆ, ಜೆಡಿಎಸ್ ಗೆಲ್ಲೋ ಅಂತ 30-35 ಕಡೆ ಬಿಜೆಪಿ ವೀಕ್ ಕ್ಯಾಂಡಿಡೇಟ್ ಹಾಕುತ್ತೆ, ಎಸ್‌ಡಿಪಿಐ ಅಂತ ಇದೆಯಲ್ಲ ಅದು 40-45 ಕಡೆ ನಿಂತು ಕಾಂಗ್ರೆಸ್ ಓಟ್‌ಗಳನ್ನು ಕೀಳುತ್ತೆ, ನಾರ್ತ್ ಕರ್ನಾಟಕದಲ್ಲಿ ಹೈದರಾಬಾದ್‌ನಿಂದ ಓವೈಸಿ ಬರ‍್ತಾನೆ, ಗವರ್ನಮೆಂಟ್ ಮೆಶಿನರಿ ಅವರ ಕಡೆ ಇರುತ್ತೆ, ಕಾಂಗ್ರೆಸ್‌ನಲ್ಲಿ ನಾನು ಸಿಎಂ ನಾನು ಸಿಎಂ ಅನ್ನೋ ಕಿತ್ತಾಟ ಇದೆ ಅನ್ನೋದನ್ನ ಮೀಡಿಯಾಗಳು ಹೈ ಲೈಟ್ ಮಾಡ್ತಾವೆ, ಇಷ್ಟು ಆದರೆ ಸಾಕಲ್ವ” ಅಂತ ಅಂದರು.


ಕಾಂಗ್ರೆಸ್‌ನಲ್ಲೇ ಹತ್ತಾರು ವರ್ಷಗಳಿಂದ ಇರುವವರೂ ಒಪ್ಪಿ ತಲೆತೂಗುವಂಥ ನೆರೇಟಿವ್ ಇದು, ಬೆಲೆ ಏರಿಕೆ, ನಿರುದ್ಯೋಗ, ಬಡತನ ಇತ್ಯಾದಿ ಸಂಕಷ್ಟಗಳೆಲ್ಲ ಮತದಾನದ ಕ್ಷಣದಲ್ಲಿ ನೆನಪಿಗೇ ಬರುವುದಿಲ್ಲ. ರಾತ್ರಿ ಮಲಗಿದ್ದಾಗ ಬಾಗಿಲು ಬಡಿದು ಬಂದು ಹಣ ಕೊಟ್ಟವರ ರುಣವೇ ಮುಖ್ಯವಾಗಿಬಿಡುತ್ತದೆ.


2013ರಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂತು, ಯಾರ ವಿರೋಧವೂ ಇಲ್ಲದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು, ಉಚಿತ ರೇಶನ್, ಅಗ್ಗದ ದರದ ಊಟ,ತಿಂಡಿ ಸೇರಿ ಹತ್ತಾರು ‘ಭಾಗ್ಯ’ಗಳನ್ನು ಜನತೆಗೆ ಕೊಟ್ಟರು. ಯಾವ ಹೇಳಿಕೊಳ್ಳುವಂಥ ಹಗರಣಗಳೂ ಆ ಸರ್ಕಾರವನ್ನು ಕಾಡಲಿಲ್ಲ. ಆದರೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 78 ಸೀಟು ಪಡೆದು ಸೋತಿತು. ಬಿಜೆಪಿಗೂ ಸರಳ ಬಹುಮತ ದಕ್ಕಲಿಲ್ಲ, 104 ಸೀಟುಗಳಿಗೇ ನಿಂತು ಹೋಯಿತು. ಮತ ಎಣಿಕೆ ಮುಗಿವ ಮುನ್ನವೇ ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ನಡೆದು ಜೆಡಿಎಸ್‌ಗೆ ಮುಖ್ಯಮಂತ್ರಿ ಗಾದಿ ಬಿಟ್ಟುಕೊಟ್ಟಿತು ಕಾಂಗ್ರೆಸ್, ಈ ಮೈತ್ರಿ ಹೆಚ್ಚು ಅವಧಿಗೆ ಉಳಿದರೆ 2023ರ ಚುನಾವಣೆಯನ್ನು ಎದುರಾಳಿಗಳೇ ಇಲ್ಲದೇ ಎದುರಿಸುವುದು ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ಮೈತ್ರಿ ಮುರಿದು ಬಿತ್ತು. ಅಷ್ಟೇ ಅಗಲು ಬಿಟ್ಟಿದ್ದರೆ ಸಾಕಾಗಿತ್ತು.


ಎರಡನೇ ಹಂತದಲ್ಲಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಲು ಜೆಡಿಎಸ್‌ಗೆ ಅವಕಾಶ ಕೊಡಬೇಕಿತ್ತು, ಆದರೆ ಅಂಥಾ ಸುವರ್ಣಾವಕಾಶವನ್ನು ಕಾಂಗ್ರೆಸ್ ದಕ್ಕಿಸಿಕೊಳ್ಳಲಿಲ್ಲ. ಬದಲಿಗೆ ಕಾಂಗ್ರೆಸ್‌ನ ಒಂದು ಆಯ್ದ ತಂಡ ಬಿಜೆಪಿ ಸೇರಲು ಮುಂಬೈಗೆ ಹಾರಿಬಿಟ್ಟಿತು. ಅದರ ನೆಗೆಟಿವ್ ಪರಿಣಾಮವನ್ನು ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅನುಭವಿಸುವುದು ಅನಿವಾರ‍್ಯ.


ವಾರಕ್ಕೊಂದು ಹದಿನೈದು ದಿನಗಳಿಗೊಂದು ಹೊಸ ಹೊಸ ವಿವಾದಗಳನ್ನು ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗ ಬಿಜೆಪಿ ಸೃಷ್ಟಿ ಮಾಡುತ್ತಲೇ ಇದೆ, ಹಿಜಾಬ್ ಆಯಿತು, ಭಜರಂಗದಳದ ಕಾರ‍್ಯಕರ್ತನ ಕೊಲೆ ಆಯಿತು, ಇದೀಗ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ವಿವಾದ ಸೃಷ್ಟಿ ಮಾಡಲಾಯಿತು. “ ನೀವು ಈಗಲೂ ನಿನ್ನ ಹೆಂಡತಿಯನ್ನು ಹೊಡೆಯುತ್ತಿದ್ದೀಯಾ? “ ಎಂದು ನ್ಯಾಯಾಲಯದ ಕಟಕಟೆಯಲ್ಲಿ ನಿಂತ ಗಂಡನನ್ನು ವಕೀಲರು ಕೇಳಿದರೆ, ಆತ “ಹೂಂ” ಎಂದರೂ  ಅಥವಾ “ ಊ ಹೂಂ” ಅಂತಂದರೂ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಇಬ್ಬಂದಿ ಗಡಿಬಿಡಿಯಲ್ಲಿ ಕಾಂಗ್ರೆಸ್ ಬಂದು ನಿಲ್ಲುವಂತ ಸಂಗತಿಗಳಿವು.


ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಿಜಾಬ್ ನಿಷೇಧ ಅಂತ ಹೇಳುವ ಶಿಕ್ಷಣ ಸಚಿವ ನಾಗೇಶ್‌ರವರಿಗೆ ಸಿದ್ದರಾಮಯ್ಯನವರು ಅಟ್ ಲೀಸ್ಟ್ ದುಪ್ಪಟ್ಟಾ ಹಾಕಿಕೊಂಡು ಬರಲು ಅವಕಾಶ ಕೇಳಿದರೆ ಅದೇ ಮಹಾಪರಾಧ ಎಂಬಂತೆ ಟಿವಿಗಳು ಬಿಂಬಿಸತೊಡಗಿದವು. ಶನಿವಾರ ಮೈಸೂರಿನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೊಡುವಾಗ ಸಿದ್ದರಾಮಯ್ಯನವರು ವರದಿಗಾರರ ಮೇಲೆ ಸಿಡಿಮಿಡಿಗೊಂಡದ್ದರಲ್ಲಿ ತಪ್ಪೇನೂ ಕಾಣಿಸಲಿಲ್ಲ. ಆದರೆ ಈ ರೀತಿ ಮುಜುಗರಕ್ಕೆ ಈಡು ಮಾಡುವುದೇ ಮಾಧ್ಯಮಗಳ ಉದ್ದೇಶವಾಗಿದೆ ಎನ್ನುವುದೂ ಅವರಿಗೆ ಅರ್ಥವಾಗಿದೆ, ಆದರೆ, ಆರ್‌ಎಸ್‌ಎಸ್-ಬಿಜೆಪಿಗಳ ದಿಕ್ಕೆಡಿಸುವ ದಾಳಿಯ ಎದುರು ಕಾಂಗ್ರೆಸ್‌ನ ಸಾಂಪ್ರದಾಯಿಕ ಶೈಲಿಯ ರಾಜಕಾರಣ ತೀರಾ ನಿಧಾನ, ಆಮೆ ಗತಿ ಅಂತ ಅವರ ಜೊತೆ ಇರುವವರಿಗೂ ಅನ್ನಿಸಿ ಖಾಸಗಿಯಾಗಿ ಗೊಣಗಿಕೊಳ್ಳಲು ಶುರು ಮಾಡಿದ್ದಾರೆ. 


ಉತ್ತರ  ಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ,ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಐತಿಹಾಸಿಕ ಜಯ ಗಳಿಸಿದ್ದರಿಂದ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಅಂಥ ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಸಲುವಾಗಿ ಗುಂಪುಗಾರಿಕೆ, ಒಳ ಜಗಳಗಳೆಲ್ಲ ಆ ಪಕ್ಷವನ್ನು ಅಧಿಕಾರದತ್ತ ಸಾಗುವುದಕ್ಕೆ ಅಡ್ಡಿಯಾಗಲಿವೆ ಎಂದೂ ಹೇಳಲಾಗುತ್ತಿದೆ.


ಹಾಗಾದರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಮತ್ತು ಒಳ ಜಗಳಗಳು, ಪರಸ್ಪರ ಕಾಲೆಳೆದಾಟಗಳಿಲ್ಲವೇ, ಯಾರಿಲ್ಲ ಎಂದವರು, ಖಂಡಿತಾ ಇದೆ ಅಂತಲೇ ಅವರ ಪಕ್ಷದವರೇ ಹೇಳುತ್ತಾರೆ, ಆದರೆ ನಮ್ಮಲ್ಲಿ ಸ್ಟಾçಂಗ್ ಆದ ಹೈಕಮಾಂಡ್ ಇದೆ, ಅದು ಹೇಳಿದಂತೆಯೇ ಎಲ್ಲ ನಡೆಯುತ್ತದೆ, ಆದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ದುರ್ಬಲವಾಗಿದೆ, ಐದಾರು ಜನರು ನಾನೇ ಮುಂದಿನ ಸಿಎಂ ಎನ್ನುತ್ತಾರೆ. ಪಕ್ಷ ಅಧಿಕಾರಕ್ಕೆ ಬರಲಿ ಎಂದು ಕಾಯುವಷ್ಟು ತಾಳ್ಮೆಯಿಲ್ಲ ನೋಡಿ ಎನ್ನುತ್ತಾರೆ.


ತುಮಕೂರಿನಲ್ಲೇ ನೋಡಿ, ಬಿಜೆಪಿಯ ಇಬ್ಬರು ಮಾಜಿ ಜಿಲ್ಲಾಧ್ಯಕ್ಷರ ನಡುವೆ ಹೊಂದಾಣಿಕೆ ಇಲ್ಲ, ಮಾಜಿ ಶಾಸಕರು ಹಾಲಿ ಶಾಸಕರ ನಡುವೆ ಸಾಮರಸ್ಯವಿಲ್ಲ, ಮಾಜಿ ಸಚಿವರೇ ಪಕ್ಷದ ಹಾಲಿ ಚುನಾಯಿತ ಸದಸ್ಯರು ಭ್ರಷ್ಟಾಚಾರಲ್ಲಿ ತೊಡಗಿದ್ದಾರೆ ಎಂದು ಆರೋಪಿಸುತ್ತಾರೆ, ಹಾಲಿ ಸಂಸದರೇ ಉಸ್ತುವಾರಿ ಸಚಿವರ ವಿರುದ್ಧ ವೇದಿಕೆಯಲ್ಲಿ ಗುಸುಗುಸು ಎನ್ನುತ್ತಾರೆ. ಆದರೂ ಅದೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಿರ್ವಹಿಸಲಾಗುತ್ತಿದೆ.


ಕಾಂಗ್ರೆಸ್ ಕೈಲಿ ಬಿಜೆಪಿ ಥರಾ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಮ್ಯಾನೇಜ್ ಮಾಡಲು ಬರಲ್ಲ ಎನ್ನುತ್ತಾರೆ. ಸುಳ್ಳುಗಳ ಸಮಾರಾಧನೆಯಲ್ಲಿ ಬಿಜೆಪಿ ಪರಿವಾರ ಎತ್ತಿದ ಕೈ. ಮೊನ್ನೆ ಕೋಲಾರದಲ್ಲಿ ಕ್ಲಾಕ್ ಟವರ್‌ಗೆ ಬಿಳಿ ಬಣ್ಣ ಬಳಿದು, ರಾಷ್ಟçಧ್ವಜ ಹಾರಿಸಲಾಯಿತು, ಅದಕ್ಕೂ ಮೊದಲು ಆ ಟವರ್ ಮೇಲೆ ಸಾಬರ ಹಸಿರು ಬಣ್ಣ ಹಾಗೂ ಹಸಿರು ಬಾವುಟ ಹಾರಾಡುತ್ತಿತ್ತು. ಅದನ್ನೊಂದು ವಿಜಯೋತ್ಸವದ ರೀತಿ ಅಲ್ಲಿನ ಸಂಸದರು ಆಚರಿಸಿದರು. ಅದಕ್ಕಾಗಿ ಅವರಿಗೆ ಪ್ರಾಣ ಬೆದರಿಕೆಯೂ ಬಂತು ಎನ್ನುವ ದೂರೂ ದಾಖಲಾಯಿತು. ಕೋಲಾರ ನಗರ ತುಮಕೂರಿನಂತೆಯೇ  ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಣ, ಆದರೂ ಏಳು ಸಲ ಎಂಪಿಯಾಗಿದ್ದ ಕೇಂದ್ರ ಸಚಿವರೂ ಆಗಿದ್ದ ಕಾಂಗ್ರೆಸ್‌ನ ಕೆ.ಹೆಚ್.ಮುನಿಯಪ್ಪನವರನ್ನು ಅವರದೇ ಪಕ್ಷದವರು ಸೇರಿಸೋಲಿಸಿ ಬಿಟ್ಟರು. ಮೊದಲ ಸಲ ಬಿಜೆಪಿ ಅಲ್ಲಿ ಗೆದ್ದಿತು.


ಹೀಗೆ ಇತಿಹಾಸದುದ್ದಕ್ಕೂ ಕಾಂಗ್ರೆಸ್‌ನವರೇ ಕಾಂಗ್ರೆಸ್‌ನ್ನು ಸೋಲಿಸುತ್ತ ಬಂದವರು.ಮುಂದೊಮ್ಮೆ ಬಿಜೆಪಿಯಲ್ಲೂ ಅಂಥದ್ದೇ ಮರುಕಳಿಸುತ್ತದೆ.