ಎಸ್‌ಐಟಿ ಮಹಿಳಾ ಅಧಿಕಾರಿಗಳ ಪ್ರಶ್ನೆಗಳಿಗೆ ‌ ಉತ್ತರ ಕೊಡಲು ತತ್ತರಿಸಿಹೋದ ಪ್ರಜ್ವಲ್

    ಹಾಸನದಲ್ಲಿ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ,

ಎಸ್‌ಐಟಿ ಮಹಿಳಾ ಅಧಿಕಾರಿಗಳ ಪ್ರಶ್ನೆಗಳಿಗೆ ‌  ಉತ್ತರ ಕೊಡಲು ತತ್ತರಿಸಿಹೋದ ಪ್ರಜ್ವಲ್

       ಬೆಂಗಳೂರು:ವಿಡಿಯೋ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡು ಕಳೆದ ತಡ ರಾತ್ರಿ ವಿದೇಶದಿಂದ ಹಿಂದಿರುಗುತ್ತಿದ್ದಂತೆಯೇ ಎಸ್‌ಐಟಿ ವಶವಾದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪ ಕುರಿತಂತೆ ವಿಶೇಷ ತನಿಖಾ ತಂಡದ ಪ್ರಶ್ನೆಗಳಿಗೆ ತತ್ತರಿಸಿ ಹೋಗಿದ್ದಾರೆ.

    ಸಂತ್ರಸ್ತ ಮಹಿಳೆಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಶ್ವಾಸ ಮತ್ತು ಧೈರ್ಯ ತುಂಬುವ ನಿಟ್ಟಿನಲ್ಲಿ ಬಂಧನದ ಕ್ಷಣದಿಂದಲೂ ಮಹಿಳಾ ಪೊಲೀಸ್ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನನ್ನು ಸುತ್ತುವರೆದಿದ್ದು, ವಿಚಾರಣೆಯನ್ನೂ ಅವರೇ ನಡೆಸುತ್ತಿದ್ದಾರೆ.

    ಜರ್ಮನಿಯ ಮ್ಯುನಿಕ್ ನಿಂದ ಕಳೆದ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಬಂದು ಇಳಿಯುತ್ತಿದ್ದಂತೆ ಅವರನ್ನು ವಿದೇಶಾಂಗ ಇಲಾಖೆಯ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿ ಕರ್ನಾಟಕದ ಎಸ್ಐಟಿ ತಂಡಕ್ಕೆ ಹಸ್ತಾಂತರಿಸಿದರು.

    ಕಳೆದ ರಾತ್ರಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಸಿಐಡಿ ಕಚೇರಿಯಲ್ಲೇ ಉಳಿಸಿಕೊಳ್ಳಲಾಯಿತು. ಬೆಳಿಗ್ಗೆ ಪ್ರಜ್ವಲ್‌ ತಿಂಡಿ ಸೇವಿಸಿದ ನಂತರ ತೀವ್ರ ವಿಚಾರಣೆಗೊಳಪಡಿಸಿದ ಎಸ್‌‍ಐಟಿ ಅಧಿಕಾರಿಗಳು ಪ್ರಜ್ವಲ್‌ಗೆ ಪ್ರಶ್ನೆಗಳ ಸುರಿಮಳೆಗೈದರು. ಬಳಿಕ ಅತ್ಯಂತ ಬಿಗಿ ಭದ್ರತೆಯಲ್ಲಿ ಬೆಂಗಳೂರಿನ 42 ನೇ ಎಸಿಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರು ಪಡಿಸಿದರು, ಈ ವೇಳೆ ಎಸ್‌ಐಟಿ ಪರ ಎಸ್‌ಪಿಪಿ ಅಶೋಕ್‌ ನಾಯಕ್‌ ಅವರು ವಾದ ಮಂಡನೆ ಮಾಡಿದರು. 15 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನಿಡುವಂತೆ ಮನವಿ ಮಾಡಿದರು,. ಆದರೆ ನ್ಯಾಯಾಧೀಶರು 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶವನ್ನು ಹೊರಡಿಸಿದರು.

    ನ್ಯಾಯಾಲಯದ ಆವರಣದಿಂದ ಮತ್ತೆ ಅವರನ್ನು ಸಿಐಡಿ ಕೇಂದ್ರ ಕಚೇರಿಗೆ ಕರೆತಂದ ಪೊಲೀಸ್ ತಂಡ ವಿಚಾರಣೆ ಆರಂಭಿಸಿದ್ದು ಹಲವು ಸಿದ್ಧಪಡಿಸಿದ ಪ್ರಶ್ನೆಗಳನ್ನು ಅವರ ಮುಂದೊಡ್ಡಿತು,

ಪೆನ್‌ಡ್ರೈವ್‌ನಲ್ಲಿರುವ ಫೋಟೊ, ವಿಡಿಯೋ ನಿಮದೇ?

* ಹಾಗಾದರೆ ಮೊಬೈಲ್‌ನಲ್ಲಿ ಸೆರೆಹಿಡಿದು ಅವುಗಳನ್ನು ಏಕೆ ಮೊಬೈಲ್‌ನಲ್ಲಿ ಏಕೆ ಇಟ್ಟುಕೊಂಡಿದ್ದೀರಿ?

* ಎಷ್ಟು ಮಹಿಳೆಯರ ವಿಡಿಯೋಗಳಿವೆ?

* ಅವರೆಲ್ಲಾ ನಿಮಗೆ ಹೇಗೆ ಗೊತ್ತು?

* ನಿಮ್ಮ ಮೊಬೈಲ್‌ನಲ್ಲಿ ಇರುವ ಅಶ್ಲೀಲ ಚಿತ್ರಗಳು ಹೇಗೆ ಹೊರಗೆ ಬಂದವು?

* ನಿಮ್ಮ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ನೀವೇನಾದರೂ ಅವುಗಳನ್ನು ಕೊಟ್ಟಿದ್ದೀರ?

* ಪೆನ್‌ಡ್ರೈವ್‌ಗಳು ಹೊರಗೆ ಬಂತು ಎಂದು ನಿಮಗೆ ಗೊತ್ತಾಗಿದ್ದು ಯಾವಾಗ?

* ಮುಂದೆ ನೀವೇನು ಮಾಡಿದಿರಿ?

* ಹೊಳೆನರಸೀಪುರ, ಹಾಸನದಲ್ಲಿ ನಿಮಗೆ ಮನೆಗಳಿದ್ದರೂ ಹಾಸನ ಸಂಸದರ ನಿವಾಸದಲ್ಲಿ ನೀವು ಮಲಗುತ್ತಿದ್ದುದು ಏಕೆ?

* ವಿದೇಶಕ್ಕೆ ಹೋಗಿದ್ದು ಏಕೆ?

* ನಾವು ನೋಟೀಸ್‌‍ ಕೊಟ್ಟರೂ ವಿಚಾರಣೆಗೆ ಹಾಜರಾಗಲಿಲ್ಲ ಏಕೆ?

* ಜರ್ಮನಿಯಿಂದ ಟಿಕೆಟ್‌ ಬುಕ್‌ ಮಾಡಿ ಪದೇಪದೇ ಕ್ಯಾನ್ಸಲ್‌ ಮಾಡಿದ್ದು ಏಕೆ?

* ವಿದೇಶಕ್ಕೆ ಯಾರೊಂದಿಗೆ ಹೋಗಿದ್ದಿರಿ?

* ಅಲ್ಲಿ ಎಲ್ಲಿದ್ದಿರಿ?

* ನಿಮೊಂದಿಗೆ ಯಾರು ಯಾರಿದ್ದರು? ಎಂದು ಸರಣಿ ಪ್ರಶ್ನೆಗಳನ್ನು ಎಸ್‌ಐಟಿ ಅಧಿಕಾರಿಗಳು ಕೇಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶೀಘ್ರ ತನಿಖೆ: ಇನ್ನು ಈ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, ಮೊಬೈಲ್‌ ನಾಶವಾಗಿರುವ ಬಗ್ಗೆ ಬೇರೆ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಲಾಗುವುದಿಲ್ಲ. ಎಸ್‌ಐಟಿ ಅಧಿಕಾರಿಗಳು ಹೇಳಿದರೆ ಅದು ಅಧಿಕೃತ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣದ ಬಗ್ಗೆ ಸಂತ್ರಸ್ತರು ದೂರು ನೀಡುವಂತೆ ಈಗಾಗಲೇ ಕರೆ ನೀಡಲಾಗಿತ್ತು. ಯಾರೇ ದೂರು ನೀಡಿದರೂ ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು, ಆದಷ್ಟು ಶೀಘ್ರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದರು.

    ಇತ್ತ ಹಾಸನದಲ್ಲಿ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ, ಎಸ್‌ಐಟಿ ಅಧಿಕಾರಿಗಳು ಶನಿವಾರ ಬೆಳಿಗ್ಗೆ ವಿಚಾರಣೆಗೆ ಸಿದ್ದವಿರುವಂತೆ ಆಕೆಗೆ ನೋಟೀಸ್‌ ನೀಡಿದ್ದು, ಯಾವುದೇ ಕ್ಷಣದಲ್ಲಿ ಅವರ ಬಂಧನ ಆಗುವುದನ್ನು ತಳ್ಳಿಹಾಕಲು ಬರುವುದಿಲ್ಲ. ಇತ್ತ ಹೈಕೋರ್ಟ್‌ನಲ್ಲಿ ರೇವಣ್ಣ ಅವರಿಗೆ ಜಾಮೀನು ನೀಡಿದ ಪ್ರಕರಣ ವಿಚಾರಣೆಗೆ ಬಂದಿದ್ದು , ಅಧೀನ ನ್ಯಾಯಾಲಯ ಜಾಮೀನು ನೀಡಿರುವುದರಲ್ಲೇ ದೋಷವಿದೆ  ಎಂಬ ಪ್ರಾಸಿಕ್ಯೂಶನ್‌ ವಾದವನ್ನು ಮನ್ನಿಸಿದ್ದು ವಿಚಾರಣೆಗೆ ಅನುಮತಿ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಡೀ ಕುಟುಂಬ ಕಾನೂನಿನ ಬಲೆಯಲ್ಲಿ ಸಿಕ್ಕಿಕೊಂಡಂತಾಗಿದೆ ಎನ್ನಬಹುದು.

  ಎಚ್ ಡಿ ರೇವಣ್ಣ ಜಾಮೀನು ಆದೇಶದಲ್ಲಿ ಲೋಪ  

   ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ಆದೇಶದಲ್ಲಿ ಕಾನೂನು ನಿಬಂಧನೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದಂತಿದೆ,ಇದು ಲೋಪದಿಂದ ಕೂಡಿರುವಂತೆ ಕಾಣುತ್ತಿದೆ ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಹೇಳಿದೆ.

   ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ದಳ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ಎಸ್‌ಐಟಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಸಂತ್ರಸ್ತೆಯನ್ನು ಅಪಹರಿಸಿರುವ ಈ ಪ್ರಕರಣ ಅತ್ಯಂತ ಗಂಭೀರವಾಗಿದೆ” ಎಂದರು.

    ವಾದ ಮಂಡನೆಯ ವೇಳೆ ಪ್ರೊ. ರವಿವರ್ಮ ಕುಮಾರ್‌, “ಜಾಮೀನು ನೀಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ತಪ್ಪಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಚಾರಣಾಧೀನ ನ್ಯಾಯಾಲಯವು ಐಪಿಸಿ ಸೆಕ್ಷನ್‌ 364ಎ ಅರ್ಜಿಯಲ್ಲಿ ಪ್ರಮಾದ ಎಸಗಿದೆ” ಎಂದು ವಾದಿಸಿದ್ದಾರೆ.

  ಆಗ ಪೀಠವು ವಾದದಲ್ಲಿ ಬಲ ಇದೆ. ದಾಖಲೆಯನ್ನು ಪರಿಶೀಲಿಸಿದರೆ ದೋಷ ಇದ್ದಂತಿದೆ” ಎಂದಿತು. ಆಗ ಪ್ರೊ. ರವಿವರ್ಮ ಕುಮಾರ್‌ ಅವರು “ದೂರು ನೀಡುವುದರಿಂದ ಆಕೆಯನ್ನು ತಡೆಯಲು ಅಪಹರಿಸಲಾಗಿದೆ. ಸಾಕ್ಷಿಯನ್ನು ಅಪಹರಿಸಲಾಗಿದೆ. ಪ್ರಕರಣವನ್ನು ತುರ್ತಾಗಿ ಆಲಿಸಬೇಕು. ಜಾಮೀನು ಅನುಮತಿಸಿದರೆ ಯಾರೂ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗದು” ಎಂದು ಹೇಳಿದ್ದಾರೆ.

   ಆಗ ನ್ಯಾಯಮೂರ್ತಿ ದೀಕ್ಷಿತ್‌ ಅವರು “ವಾದ ಆಲಿಸಲು ಇದು ಸೂಕ್ತ ಪ್ರಕರಣವಾಗಿದೆ. ನೋಟಿಸ್‌ ಜಾರಿ ಮಾಡಲಾಗಿದೆ. ಈ ಪೀಠ ಪ್ರತ್ಯೇಕವಾಗಿ ಕುಳಿತಾಗ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಆದೇಶಿಸಿತು.

    ಹೊಳೆನರಸೀಪುರದಲ್ಲಿ ಏಪ್ರಿಲ್‌ 28ರಂದು ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ದೂರುದಾರೆಯನ್ನು ಅಪಹರಿಸಿದ ಸಂಬಂಧ ಆಕೆಯ ಪುತ್ರ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲೆಯ ಕೆ ಆರ್‌ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ರೇವಣ್ಣಗೆ ಜಾಮೀನು ಮಂಜೂರಾಗಿದೆ.