ಅದಾನಿ- ಕ್ರೋನಿ ಕ್ಯಾಪಿಟಲಿಸಂ ತಂದದುರಂತ

ಈ ಪದ ಬಳಕೆ 90ರ ದಶಕದಿಂದೀಚೆಗೆ ಬಂದಿದೆಯಾದರೂ ನಡವಳಿಕೆ ಮಾತ್ರ ಬ್ರಿಟಿಷರ ಕಾಲದಿಂದಲೂಇದೆ,

ಅದಾನಿ- ಕ್ರೋನಿ ಕ್ಯಾಪಿಟಲಿಸಂ ತಂದದುರಂತ

ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ


ಅದಾನಿ- ಕ್ರೋನಿ ಕ್ಯಾಪಿಟಲಿಸಂ ತಂದದುರಂತ

“ ಹಿಂಗಾಗುತ್ತೆ ಅಂತ ನಾನು ಅವತ್ತೇ ಹೇಳಿದ್ದೆ” 


    ಎಷ್ಟೋ ಸಲ ಇಂತ ಮಾತಿಗೆ ಬೆಲೆ ಬಂದು ಬಿಡುತ್ತದೆ, ಅದಾನಿ ಕಂಪನಿಗಳ ಅಡ್ನಾಡಿತನ ಕುರಿತು ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ಎಂಪಿ ಮಹುವಾ ಮೋಯ್ತಾçಅವರು ಹಿಂದೆಂದೋ ಮಾಡಿದ್ದ ಟ್ವೀಟ್‌ಅನ್ನ ಉಲ್ಲೇಖಿಸಿ ಹೇಳಿದರು. 


     ಭಾರತ್‌ ಜೋಡೋ ಕಾಲ್ನಡಿಗೆಯಾತ್ರೆಯ ಬಿಡುವಿನಲ್ಲಿ ಮಾತನಾಡುವಾಗ ರಾಹುಲ್‌ಗಾಂಧಿ ಕೂಡಾ ಅದಾನಿ ಕಂಪನಿಯ ವಿಪರೀತ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಮಹುವಾ ಪತ್ರದ ಮೇಲೆ ಸೆಬಿ ಕೂಡಾ ತನಿಖೆ ಆರಂಭಿಸಿತ್ತು.


    ಗುಜರಾತಿನ ಸಾಮಾನ್ಯವರ್ತಕ ಕುಟುಂಬದ ಅದಾನಿ ಉದ್ಯಮಿಯಾಗಿ ರೂಪುಗೊಳ್ಳಲು ಹಾಗೂ ಜಗತ್ತಿನ ಮೂರನೇ ಅತಿ ಶ್ರೀಮಂತನಾಗುವ ಹಂತಕ್ಕೆತಲುಪಲು ನೂರಕ್ಕೆ ನೂರು ಕಾರಣರಾದ ಅವತ್ತು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಇವತ್ತು ಭಾರತದ ಪ್ರಧಾನ ಮಂತ್ರಿಯಾಗಿರುವ ನರೇಂದ್ರದಾಮೋದರದಾಸ್ ಮೋದಿಗೆ ಜನವರಿ 23ರಂದು ಅಮೆರಿಕಾದ ಹಿಂಡೆನ್‌ಬರ್ಗ್ ಕಂಪನಿ ಬಿಡುಗಡೆ ಮಾಡಿದ ವರದಿಯ ಕಾರಣವಾಗಿ ಆದಾನಿಯ ಶೇರುಗಳ ಮೌಲ್ಯ ವಾರದೊಳಗಾಗಿ 70%ನಷ್ಟು ಕುಸಿದು ಹೋದದ್ದರ ಕುರಿತು ಪಾರ್ಲಿಮೆಂಟಿನಲ್ಲಿ ಸೊಲ್ಲೆತ್ತಲು ಸಾಧ್ಯವಾಗುತ್ತಿಲ್ಲ.


    ಆಸ್ತಿಯ ಮೌಲ್ಯಕ್ಕಿಂತ ಹಲವಾರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದ ಅದಾನಿಯ ಏಳು ಕಂಪನಿಗಳ ಶೇರುಗಳ ಮೌಲ್ಯ ಕೇವಲ ಮೂರು ವರ್ಷದಲ್ಲಿ ನೂರಾರು ಸಾವಿರಾರು ಪಟ್ಟು ಹೆಚ್ಚಾಗಲು ಕಾರಣವೇನು ಎಂಬುದನ್ನು ಹಿಂಡೆನ್‌ಬರ್ಗ್ ಸಂಶೋಧಿಸಿ ಪ್ರಕಟಿಸಿದೆ. ಜಗತ್ತಿನ ಅತಿದೊಡ್ಡ ವಂಚನೆ ಇದಾಗಿದೆ, ಅದಾನಿ ಕುಟುಂಬದ ಎಂಟಕ್ಕೂ ಸದಸ್ಯರು ಅವರ ಕಂಪನಿಗಳ ಮಾಲಿಕತ್ವ ಹೊಂದಿದ್ದಾರೆ, ಒಟ್ಟು ಶೇರುಗಳ 73% ಇವರ ಹತೋಟಿಯಲ್ಲೇ ಇದೆ, ಜೊತೆಗೆ ಕಡ್ಡಾಯವಾಗಿ ಮಾರುಕಟ್ಟೆಗೆ ಬಿಡಬೇಕಾದ 25% ಶೇರುಗಳಲ್ಲಿ 15% ಶೇರುಗಳನ್ನು ಅದಾನಿ ಕುಟುಂಬದ ಮತ್ತೊಬ್ಬ ಮಾರಿಷಸ್ ಮತ್ತು ಅಂಥ ಸಣ್ಣಪುಟ್ಟ ದ್ವೀಪ ದೇಶಗಳಲ್ಲಿ ನಕಲಿ(ಷೆಲ್) ಕಂಪನಿಗಳನ್ನು ತೆರೆದು ಅವುಗಳ ಹೆಸರಿನಲ್ಲಿ ಕೋಟಿಗಟ್ಟಲೆ ಬಂಡವಾಳ ಹೂಡಿ ಖರೀದಿಸುತ್ತಾನೆ, ಉಳಿದ 8-10% ಶೇರುಗಳಿಗೆ ಸಹಜವಾಗೇ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ, ಜೊತೆಗೆ ಈ ಶೇರುಗಳನ್ನು ಅದಾನಿಗೆ ಸಾಲ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್‌ಇಂಡಿಯಾ ಮತ್ತು ಜನರ ವಿಮಾ ಕಂತುಗಳಿಂದ ನಡೆಯುತ್ತಿರುವ ಜೀವವಿಮಾ ನಿಗಮ(ಎಲ್‌ಐಸಿ) ಖರೀದಿಸಿಬಿಡುತ್ತವೆ. ಹೀಗಾಗಿ, ಒಂದರೆಡು ವರ್ಷಗಳಿಂದ ಅದಾನಿ ದಿಡೀರ್‌ ಧನಿಕನಾಗುತ್ತಿರುವುದನ್ನು ಕಂಡು ಎಲ್ಲರೂ ಆತಂಕಕ್ಕೊಳಗಾಗಿದ್ದರು, ಮತ್ತು ಅವರೆಲ್ಲರ ಆತಂಕ ನಿಜವಾಗಿದೆ.


ಆದರೂಯಾರೂ ಏನೂ ಮಾಡಲಾಗಲೇಇಲ್ಲ, ಲಗೋರಿ ಆಟದಲ್ಲಿ ಜೋಡಿಸಿದ ಕಲ್ಲುಗಳು ಉರುಳಿ ಬೀಳುವಂತೆ ಅದಾನಿ ಕಂಪನಿ ನೆಲಕಚ್ಚಿದೆ. ಅವರನ್ನು ನಂಬಿ ಶೇರು ಖರೀದಿಸಿದ ಎಸ್‌ಬಿಐ, ಎಲ್‌ಐಸಿಗಳಿಗೆ ಆಗುವ ನಷ್ಟ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ದೇಶದ ಜನರೇ ಭರಿಸಬೇಕಾಗುತ್ತದೆ ಎನ್ನುವುದಷ್ಟೇ ಸತ್ಯ. 


ಅದಾನಿಯಂಥ ಕಂಪನಿಗಳು ಮಾಡುವ ವ್ಯವಹಾರಿಕ ಬ್ಲಂಡರ್‌ಗೆಕ್ರೋನಿ ಕ್ಯಾಪಿಟಲಿಸಮ್‌ ಎಂದು ಕರೆಯುತ್ತಾರೆ. ಈ ಪದ ಬಳಕೆ 90ರ ದಶಕದಿಂದೀಚೆಗೆ ಬಂದಿದೆಯಾದರೂ ನಡವಳಿಕೆ ಮಾತ್ರ ಬ್ರಿಟಿಷರ ಕಾಲದಿಂದಲೂ ಇದೆ, ಜಗತ್ತಿನ ಬಹುಪಾಲು ಎಲ್ಲ ದೇಶಗಳಲ್ಲೂ ನಡೆಯುತ್ತಿದೆ. ಅಧಿಕಾರದಲ್ಲಿರುವ ರಾಜಕಾರಣಿಗಳು ಹಾಗೂ ಉದ್ಯಮಿಗಳು ಅಥವಾ ವರ್ತಕರು ಸಾರ್ವಜನಿಕ ಆಸ್ತಿ ಹಾಗೂ ಹಣವನ್ನು ಪರಸ್ಪರ ಹಂಚಿಕೊಳ್ಳುವುದನ್ನು ಕ್ರೋನಿ ಕ್ಯಾಪಿಟಲಿಸಮ್‌ಎನ್ನುತ್ತಾರೆ. ಬ್ರಿಟಿಷರು ಪಾರ್ಸಿಗಳನ್ನು ಹೀಗೆ ಬೆಳೆಸಿದರು, ಕಾಂಗ್ರೆಸ್ ಅಂಬಾನಿಗೆ , ಬಿಜೆಪಿ ಅದಾನಿಗೆ ಹೀಗೆ ನೆರವಾದವು. 


ಅತ್ಯಂತ ಅಗ್ಗದ ದರದಲ್ಲಿ ಭೂಮಿಯನ್ನು ಗುತ್ತಿಗೆ ಅಥವಾ ಮಾರಾಟಕ್ಕೆ ನೀಡುವುದು, ಪಕ್ಕಾ ದಾಖಲೆಗಳು ಇಲ್ಲದೇ ಹೋದರೂ ಸುಲಭವಾಗಿ ಸಾಲ ದೊರಕುವಂತೆ ಮಾಡುವುದು, ಪಡೆದ ಸಾಲವನ್ನು ಉದ್ದೇಶ ಪೂರ್ವಕವಾಗಿ ತೀರಿಸದೇ ಹೋದರೂ, ಅಂಥ ಸಾಲವನ್ನು ಎನ್‌ಪಿಎ ಅಂತ ಬರೆದು ವಜಾ ಮಾಡುವುದು, ಇತರ ಉದ್ಯಮಿಗಳು ಸಾರ್ವಜನಿಕ ಸ್ಪರ್ಧಾತ್ಮಕ ಟೆಂಡರ್‌ಗಳಲ್ಲಿ ಬಿಡ್ ಮಾಡಲು ಅವಕಾಶ ನೀಡದೇ ತಮಗೆ ಬೇಕಾದವರಿಗೆ ಮಾತ್ರವೇ ಸರಕಾರದ ಭಾರೀ ಮೊತ್ತದ ಕೆಲಸಗಳನ್ನು ಗುತ್ತಿಗೆಕೊಡುವುದು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸದೇ ಇದ್ದರೂ ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚಾಗಿದೆ ಎಂಬ ಕಾರಣ ನೀಡಿ ಗುತ್ತಿಗೆ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಡುವುದು, ಇಂತದ್ದೆಲ್ಲ ಕ್ರೋನಿ ಕ್ಯಾಪಿಟಲಿಸಮ್‌ ಎನ್ನಬಹುದು. ತಾತ್ವಿಕ ವಿವರಣೆಯಲ್ಲಿ ಚೂರು ಹೆಚ್ಚು ಕಮ್ಮಿಇದ್ದರೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಇಂಥ ಉದ್ಯಮಿಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷ ನೆರವು ಪಡೆಯುತ್ತ ಹೋಗುತ್ತವೆ. 2019ರ ಚುನಾವಣಾ ಪ್ರಚಾರದ ಉದ್ದಕ್ಕೂ ನರೇಂದ್ರ ಮೋದಿ ಇದೇಅದಾನಿಯ ಖಾಸಗಿ ವಿಮಾನಗಳಲ್ಲೇ ಸಂಚರಿಸಿದ್ದು, ಈವನ್ ಮತಎಣಿಕೆ ಮುಗಿದು ಪಕ್ಷ ಅತಿ ಹೆಚ್ಚಿನ ಸೀಟು ಗೆದ್ದುಅಧಿಕಾರಕ್ಕೆ ಬಂತುಎನ್ನುವಾಗಲೂ ಅಹಮದಾಬಾದ್‌ನಿಂದ ಹೊಸದಿಲ್ಲಿಗೆ ಪ್ರಯಾಣ ಮಾಡಿದ್ದೂ ಇದೇ ಅದಾನಿಯ ಖಾಸಗಿ ವಿಮಾನದಲ್ಲಿ, ಇದು ಸ್ಯಾಂಪಲ್ ಮಾತ್ರ. ಬಿಜೆಪಿ ಸರಕಾರ ಪಾರ್ಟಿ ಫಂಡ್ ಸಂಗ್ರಹಿಸುವ ಸಲುವಾಗಿ ಪರಿಚಯಿಸಿದ ಎಲೆಕ್ಟೊರಲ್ ಬಾಂಡ್‌ಗಳ ಮೂಲಧನವೂ ಇಂತದ್ದೇ ಉದ್ಯಮಿಗಳದೇ ಆಗಿರುತ್ತದೆ ಎನ್ನುವುದನ್ನು ಅಲ್ಲಗೆಳೆಯಲಾಗುವುದಿಲ್ಲ. ನೇರ ಮಾತುಗಳಲ್ಲಿ ಹೇಳುವುದಾದರೆ ಇದು ಅನೈತಿಕಅಥವಾ ಭ್ರಷ್ಟ ಬಂಡವಾಳ ಹೂಡಿಕೆ ವ್ಯವಸ್ಥೆ.


ಗಾಳಿ ತುಂಬಿದ ಬಲೂನಿನಂತೆ ಉಬ್ಬಿದ ಅದಾನಿ ಕಂಪನಿಗಳು ಹೀಗೆ ಅಕಾಲದಲ್ಲಿ ಕುಸಿದು ಹೋದಾಗ, ಅವರನ್ನು ನಂಬಿ ಶೇರು ಖರೀದಿಸಿದ ಸಾರ್ವಜನಿಕ ಒಡೆತನದ ಕಂಪನಿಗಳು ನಷ್ಟಕ್ಕೊಳಗಾಗುತ್ತವೆ. ಸಹಜವಾಗೇ ಅಂಥ ನಷ್ಟವನ್ನು ನಾವೇ ಅಂದರೆ ಈ ದೇಶದ ಜನರೇ ಭರಿಸಬೇಕಾಗುತ್ತದೆ. ಹೇಗೆ ಅಂತ ಕೇಳಬೇಡಿ, ಕಳೆದ ಎಂಟೊಂಬತ್ತು ವರ್ಷಗಳಿಂದ ಭರಿಸುತ್ತಿದ್ದೇವಲ್ಲ ಅದೇರೀತಿ, ಅಂದರೆ ಲೀಟರಿಗೆ ಕೇವಲ 30-40 ರೂಪಾಯಿಗೆ ಆಮದು ಮಾಡಿಕೊಳ್ಳುವ ಪೆಟ್ರೋಲಿಗೆ 100 ರೂ ತೆರುತ್ತಿದ್ದೀವಲ್ಲ ಹಾಗೆ, ಬಡಜನರು ತುಳಿಯುವ ಬೈಸಿಕಲ್‌ನ ಟೈರ್, ಟ್ಯೂಬ್‌ಗಳಿಗೆ 28 % ಜಿಎಸ್‌ಟಿ ತೆರುತ್ತಿದ್ದೀವಲ್ಲ ಹಾಗೆ, 400 ರೂಪಾಯಿಯ ಅಡಿಗೆ ಅನಿಲಕ್ಕೆ 1200 ರೂಪಾಯಿ ಕಕ್ಕುತ್ತಿದ್ದೀವಲ್ಲ ಹಾಗೆ, ಮಕ್ಕಳು ಮರಿಗೆ ಅನಿವಾರ‍್ಯವಾಗಿರುವ ಹಾಲು, ಮೊಸರಿಗೂ ಜಿಎಸ್‌ಟಿ ಕಟ್ಟುತ್ತಿದ್ದೀವಲ್ಲ ಹಾಗೆ.


ನಿರುದ್ಯೋಗ ಅಳಿಯುವ ಬದಲು ಹೆಚ್ಚುತ್ತಾ ಹೋಗುತ್ತದೆ, ಅವಶ್ಯಕ ಪದಾರ್ಥಗಳ ಧಾರಣೆ ಹೆಚ್ಚುತ್ತಲೇ ಹೋಗುತ್ತದೆ. ನಾವು ಈ ನಷ್ಟವನ್ನು ಭರಿಸಲು ಇನ್ನೂ ಕನಿಷ್ಟ 20 ವರ್ಷ ಇಂಥ ಜೀತ ಮಾಡುತ್ತೇವೆ. 


ಇಷ್ಟೆಲ್ಲ ಆದರೂ, ಇಂಥದ್ದೆಲ್ಲ ಸಾಮಾನ್ಯ , ಏನೂ ಆಗಿಲ್ಲ, ಏನೂ ಆಗುವುದಿಲ್ಲ, ಎಲ್ಲ ಹೂಡಿಕೆಗಳು ಕಾನೂನು ಅನುಮತಿಸಿರುವ ಪರಿಮಿತಿಯಲ್ಲೇ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಿಣಿಯಂತೆ ಉಲಿಯುತ್ತಾರೆ. ಆದರೆ ವಾಸ್ತವಾಂಶವನ್ನು ದೇಶಕ್ಕೆ ತಿಳಿಸಬೇಕಾದ ಇವತ್ತು ಹೆಚ್ಚು ಜನರನ್ನು ತಲುಪುತ್ತಿರುವ ಟಿವಿ ಮಾಧ್ಯಮಗಳು ಸತ್ಯ ಹೇಳುತ್ತಿಲ್ಲ. ಅವುಗಳಿಗೆ ಸತ್ಯ ಹೇಳುವ ಉಮೇದೂ ಇಲ್ಲ. “ ಜಗತ್ತಿನ ಮೂರನೇ ಅತಿದೊಡ್ಡ ಶ್ರೀಮಂತನ ಸ್ಥಾನದಿಂದ ಕೆಳಕ್ಕೆ ಜಾರಿದಅದಾನಿ” ಎನ್ನುವಂತ ಮಾತುಗಳಲ್ಲಿ ತಿಪ್ಪೆ ಸಾರಿಸತೊಡಗಿವೆ. ಇದು ಹೆಚ್ಚೂ ಕಡಿಮೆ ಮಾಧ್ಯಮಗಳು ಮಾಡುತ್ತಿರುವ ದೇಶದ್ರೋಹವೇ ಸರಿ. ಇಂಥ ಪರಿಸ್ಥಿತಿಯಲ್ಲಿ ಭಾರತೀಯರು ಏನು ಮಾಡಬೇಕುಎನ್ನುವುದನ್ನುಇದೇ ಕಿನ್ನರಿಯ ಪುಟದಲ್ಲಿ ನಾಗೇಗೌಡರು ಹೇಳಿದ್ದಾರೆ. ಮರೆಯದೇ ಓದಿ,