‘ಆಸನ’ ಮತ್ತು ‘ಹರಸೀಕೆರೆ’ಗಳೆಂಬ  ‘ಅ’ ಕಾರ ‘ ಹ’ಕಾರಗಳ ಆಹಾ ಖಾರ ! - ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ

‘ಆಸನ’ ಮತ್ತು ‘ಹರಸೀಕೆರೆ’ಗಳೆಂಬ  ‘ಅ’ ಕಾರ ‘ ಹ’ಕಾರಗಳ ಆಹಾ ಖಾರ ! ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ

‘ಆಸನ’ ಮತ್ತು ‘ಹರಸೀಕೆರೆ’ಗಳೆಂಬ  ‘ಅ’ ಕಾರ ‘ ಹ’ಕಾರಗಳ ಆಹಾ ಖಾರ !     - ಒಂದು ಗಳಿಗೆ -ಕುಚ್ಚಂಗಿ ಪ್ರಸನ್ನ


‘ಆಸನ’ ಮತ್ತು ‘ಹರಸೀಕೆರೆ’ಗಳೆಂಬ 


‘ಅ’ ಕಾರ ‘ ಹ’ಕಾರಗಳ ಆಹಾ ಖಾರ !

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ


1
ಸುಮಾರು 20 ವರ್ಷದ ಹಿಂದಿನ ಘಟನೆ, ನಾನು ಆಗ ತಾನೇ ‘ಜನವಾಹಿನಿ’ ಎಂಬ ಅಲ್ಪಾಯುಷಿ ರಾಜ್ಯ ಮಟ್ಟದ ದಿನಪತ್ರಿಕೆಯ ವರದಿಗಾರನ ಹುದ್ದೆ ತೊರೆದು ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಿರಿಯ ಸಹಾಯಕನ ಹುದ್ದೆಗೆ ಕರ್ತವ್ಯ ವರದಿ ಮಾಡಿಕೊಂಡಿದ್ದೆ. ಸಚಿವಾಲಯ ಎಂದರೆ ಸರ್ಕಾರ, ಎಲ್ಲ ಇಲಾಖೆಗಳ ಮಾತೃಸ್ವರೂಪಿ ಕಾರ್ಯಾಲಯ, ನನ್ನ ಮೊದಲನೇ ಸ್ಥಳ ನಿಯುಕ್ತಿಯನ್ನು ಕಾನೂನು ಇಲಾಖೆಯ ಆಡಳಿತ ವಿಭಾಗದ ಉಪಕಾರ್ಯದರ್ಶಿಯ ಆಪ್ತ ಶಾಖೆಗೆ ಕೊಟ್ಟಿದ್ದರು. ಅಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಕೆಎಎಸ್ ಅಧಿಕಾರಿಯೊಬ್ಬರು ಇದ್ದರು. 


ಕಾನೂನು ಇಲಾಖೆಯ ಮುಖ್ಯ ಕಾರ್ಯವೆಂದರೆ, ಅಡ್ವೊಕೇಟ್ ಜನರಲ್ ಸೇರಿದಂತೆ ಸರ್ಕಾರಿ ವಕೀಲರು, ನೋಟರಿಗಳು,ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ, ಇಡೀ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸೃಷ್ಟಿಯಾಗುವ ಹಾಗೂ ಇತ್ಯರ್ಥವಾಗುವ ಪ್ರಕರಣಗಳು ಮೇಲ್ಮನವಿಗೆ ಅರ್ಹವೇ ಅಲ್ಲವೇ ಎನ್ನುವುದನ್ನು ನಿರ್ಧರಿಸುವುದು, ಸರ್ಕಾರದ ಹಂತದಲ್ಲಿ ನ್ಯಾಯಾಲಯಗಳ ತೀರ್ಪಿನ ಕುರಿತ ಅಭಿಪ್ರಾಯಗಳನ್ನು ನೀಡುವುದು, ಇತ್ಯಾದಿ ಇರುತ್ತವೆ. 


ಒಂದು ದಿನ ನನ್ನ ಮುಂದೆ ಒಬ್ಬರು ಬಂದು ನಿಂತು, “ನೋಡಿ ನನ್ನದೊಂದು ಕಡತ ಬಂದಿದೆ,ಕೂಡಲೇ ಮುಂದೆ ಕಳಿಸಿ” ಎಂದರು. ಅವರ ದನಿಯಲ್ಲಿ ಆತುರ, ಆಗ್ರಹ, ಒತ್ತಾಯ, ಕೋರಿಕೆಗಳೆಲ್ಲ ಮಿಳಿತವಾಗಿದ್ದವು. ಕತ್ತೆತ್ತಿ ನೋಡಿದೆ, ಇವರನ್ನ ಎಲ್ಲೋ ನೋಡಿದ್ದೀನಲ್ಲ ಅಂತ ಅನಿಸಿತು. ತಲೆಯೆಂಬ ಸಿಪಿಯುಗೆ ಸರ್ಚ್ ಆಪ್ಷನ್ ಕೊಟ್ಟೆ, ಬಿಟ್ಟನೆಂದರೂ ಬಿಡದೀ ಮಾಯೆ ಎನ್ನುವಂತ ಪತ್ರಿಕಾ ವೃತ್ತಿಯ ಗುಂಗಿನಲ್ಲೇ ಇದ್ದೆನಲ್ಲ, ಓ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮುಖಾರವಿಂದ ಅಲ್ವಾ ಅನ್ನಿಸಿತು, ಏನೋ ಚೇಂಜ್ ಇದೆಯಲ್ಲಾ ಅಂತಲೂ ಅನಿಸಿ ಟ್ಯಾಲಿ ಮಾಡತೊಡಗಿತು ನನ್ನ ಮೆಮೊರಿ ಕಾರ್ಡ್. ಸುಮ್ಮನೇ ಇರಲಾಗಲಿಲ್ಲ, “ ಓ ನೀವು ಅವರಲ್ವಾ? “ ಅಂತAದೆ, ಆಗ ನೋಡಬೇಕಿತ್ತು ಅವರ ಮುಖ ಅರಳಿದ ಪರಿಯನ್ನ!.


“ ಹೌದು ಸರ್,ನಾನೇ ಅದು, ನೋಡಿ ಸುಮ್‌ಸುಮ್ನೇ ನನ್ನನ್ನ ಈ ಕೇಸಲ್ಲಿ ಸಿಕ್ಕಾಕಿಸಿಬಿಟ್ಟಿದ್ದಾರೆ” ಅಂತ ಅಂದರು. ಕಡತ ನನ್ನ ಬಳಿ ಇರಲಿಲ್ಲ, ಅದಾಗಲೇ ಮುಂದಿನ ಹಾದಿ ಹಿಡಿದಿತ್ತು. ಮಾಹಿತಿ ಕೊಟ್ಟೆ. ಮುಂದೆ ಇಡೀ ಕೇಸು ಸಾಬೀತಾಗಲಿಲ್ಲ. ಸಿಬಿಐನವರು ಸುಮೋಟೋ ಹಾಕಿದ್ದ ಕೇಸದು, ಸಾಬೀತು ಪಡಿಸಲಾಗಲಿಲ್ಲ, ಮುಂದೆ ಬಿದ್ದು ಹೋಯಿತು. ಸಿಬಿಐ ಕೇಸು ಬಿದ್ದು ಹೋದರೂ ಈತ ಸುಮ್ಮನಾಗಲಿಲ್ಲ, ಇವರಿಗೆ ವೈಯಕ್ತಿಕವಾಗಿ ಲಕ್ಷಾಂತರ ರೂಪಾಯಿ ನಷ್ಟ ಭರಿಸುವಂತೆ ನ್ಯಾಯಾಲಯ ಇಬ್ಬರು ಸಿಬಿಐ ಅಧಿಕಾರಿಗಳಿಗೆ ದಂಡನೆಯನ್ನೂ ವಿಧಿಸಿತು.


ಈ ವ್ಯಕ್ತಿ ಒಂಥರಾ ಬಂಗಾರಪ್ಪನವರಿದ್ದAತೆ ಸುಮ್ಮಸುಮ್ಮನೇ ಯರ‍್ಯಾರೋ ಯಾವ್ಯಾವುದೋ ಕೇಸುಗಳನ್ನು ಹಾಕುವುದು, ಅವೆಲ್ಲ ಸುಳ್ಳು ಆರೋಪ ಅಂತ ಇವರು ಸಾಬೀತು ಪಡಿಸುವುದು ಅವರ ಇಡೀ ಸೇವಾವಧಿಯೆಲ್ಲ ಹೀಗೇ ಮುಗಿದುಹೋಯಿತು. ಇನ್ನೊಂದು ಸಲ ಅವರ ಇಲಾಖೆಯಲ್ಲಿ ಉನ್ನತ ಹುದ್ದೆಗೆ ಮುಂಬಡ್ತಿ ಪಡೆಯುತ್ತಾರೆಂದು ಅಸೂಯೆಯಿಂದ ಅವರ ಮೇಲೆ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದರು ಅಂತ, ಮತ್ತೊಮ್ಮೆ ಇವರಿಗೆ ಡಾಕ್ಟರೇಟ್ ಪದವಿ ನೀಡಿರುವ ವಿದೇಶಿ ವಿಶ್ವವಿದ್ಯಾಲಯ ಇಲ್ಲೇ ಬಿಹಾರದಲ್ಲಿದೆ ಅಂತೆಲ್ಲ ಕೇಸುಗಳನ್ನು ಹಾಕಿದರು, ಆದರೆ ಅವುಗಳನ್ನೆಲ್ಲ ಸಾಬೀತು ಪಡಿಸಲಾಗದೇ ಪಡಿಪಾಡಲು ಬಿದ್ದರು ಅರ್ಜಿದಾರರು.


ಇವರಿಗೆ ತುಸು ಪ್ರಚಾರದ ಗೀಳು, ತುಸು ಅನ್ನುವಂತಿಲ್ಲ ದೊಡ್ಡ ಮಟ್ಟದ್ದೇ ಇತ್ತು. ಹಾಗಾಗಿ ಇವರೇ ವೇದಿಕೆ ಹತ್ತುವುದು, ನಿರೂಪಣೆ ಮಾಡುವುದು ಇತ್ಯಾದಿ ನಡೆದೇ ಇತ್ತು, ಕಡೆಗೆ ಒಂದು ದಿನ ಖುದ್ದು ಗಾಯಕರೂ ಆಗಿಬಿಟ್ಟರು. ಇವರನ್ನು ಅರಸಿಬಂದ ಪ್ರಶಸ್ತಿಗಳು ಒಂದೇ ಎರಡೇ, ಹೆಚ್ಚೂ ಕಮ್ಮಿ ಗಿನ್ನೆಸ್ ದಾಖಲೆಗೆ ಸೇರಿಸಬಹುದಿತ್ತು. 


ಎದುರಾಗುವ ಯಾವುದನ್ನೂ ಬಿಡದೇ ಸ್ವಂತಕ್ಕೆ ಬಳಸಿಕೊಳ್ಳುವವರನ್ನ ಇಂಗ್ಲಿಷ್‌ನಲ್ಲಿ ‘ಸ್ಮಾರ್ಟ್’ ಅಂತ ಕರೆಯುತ್ತಾರೆ. ನಮ್ಮ ಇವತ್ತಿನ ಸ್ಮಾರ್ಟ್ ಸಿಟಿಯೂ ಒಂಥರಾ ಅದೇ ಅಲ್ವಾ, ಇರೋಬರೋ ಎಲ್ಲ ಕಾಮಗಾರಿಗಳಲ್ಲೂ ಸ್ವಂತದ್ದೇ ಅಂತ ಅಲ್ಲಿನ ಇಂಜಿನಿಯರ್‌ಗಳು,ಅಧಿಕಾರಿಗಳು ಪರಿಭಾವಿಸಿರುವ ಪರಿಣಾಮ ಇಡೀ ತುಮಕೂರು ನಗರ ಎಕ್ಕುಟ್ಟಿ ಹೋಗುತ್ತಿದೆ. ಇರಲಿ.

2
ಕರ್ನಾಟಕ ಸರ್ಕಾರದ ಇತ್ತೀಚಿನ ಕನ್ನಡ ಸಂಸ್ಕೃತಿ ಸಚಿವರಿಗೂ, ಅವರಂತೆಯೇ ಕಳೆದ ತಿಂಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚುನಾಯಿತರಾದವರಿಗೂ ಶುದ್ಧ ಕನ್ನಡದ ಗೀಳು ಹತ್ತಿಬಿಟ್ಟಿದೆ. ಹಾಗಾಗಿ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಗೇಲಿಗೆ ಒಳಗಾಗಿ ಬಿಟ್ಟಿದ್ದಾರೆ.
ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿ ಅವರು ಶೇ.25 ಕನ್ನಡಿಗರಿಗೆ ‘ಹ’ಕಾರ ‘ಅ’ಕಾರದ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳಿದ್ದನ್ನೇ ಹಿಡಿದುಕೊಂಡು ಅವರ ಹೆಸರನ್ನೇ ನಾನಾ ವಿಧವಾಗಿ ಚಿತ್ರ ವಿಚಿತ್ರವಾಗಿ ಉಚ್ಚರಿಸುತ್ತ ಗೇಲಿಯಲ್ಲಿ ತೊಡಗಿದ್ದಾರೆ.  ಅಗ್ರಹಾರದಿಂದ ಹಿಡಿದು ಹಟ್ಟಿಗಳವರೆಗೆ, ಹಳ್ಳಿಗಳಿಂದ ರಾಜಧಾನಿವರೆಗೆ ಪ್ರತಿಯೊಬ್ಬರ ಮಾತುಗಳೂ ಏಕರೂಪವಾಗಿಲ್ಲ, ಇರುವುದಿಲ್ಲ, ಇರಲು ಸಾಧ್ಯವಿಲ್ಲ ಮತ್ತು ಇರುವ ಅಗತ್ಯವೂ ಇಲ್ಲ. ಕನ್ನಡವೊಂದೇ ಅಲ್ಲ ಭೂಮಿಯೆಂಬ ಇಡೀ ಈ ಗ್ರಹದ ಮೇಲೆ ಯಾವ ಭಾಷೆಯೂ ಏಕರೂಪವಾಗಿಲ್ಲ. ಹಂಗಾಗಿಯೇ ನಾವು ಕಾಲೇಜಿನಲ್ಲಿ ಅರಸೀಕೆರೆಯನ್ನು ಹರಸೀಕೆರೆ ಅಂತಲೂ, ಹಾಸನವನ್ನು ಆಸನ ಎಂತಲೂ ತಮಾಶೆ ಮಾಡುತ್ತಿದ್ದೆವು.ಈ ‘ಅ’ಕಾರ, ‘ಹ’ಕಾರಗಳ ಆಹಾ ಖಾರ ಈಗ ಇವರ ನಾಲಿಗೆಗೆ ಹತ್ತಿದೆ.


ಪ್ರತಿ ಹನ್ನೆರಡು ಕಿಲೋಮೀಟರ್‌ಗಳಿಗೂ ಭಾಷಾ ಪ್ರಬೇಧ ಭಿನ್ನವಾಗಿರುತ್ತದೆ ಅಂತ ಡಾ. ತಾರಾನಾಥರು ಮೈಸೂರು ವಿವಿಯಲ್ಲಿ ಭಾಷಾ ಚರಿತ್ರೆ ಕಲಿಸುವಾಗ ಹೇಳುತ್ತಿದ್ದರು. ಜೊತೆಗೆ ಗಡಿ ಪ್ರದೇಶಗಳಲ್ಲಿ ನೆರೆಯ ರಾಜ್ಯದ ಭಾಷೆಯ ಸಮ್ಮಿಶ್ರ ಸ್ವರೂಪನ್ನೂ ಪಡೆದಿರುತ್ತದೆ. ಶ್ರೇಷ್ಟತೆಯ ವ್ಯಸನ ಮತ್ತು ಭಾಷಾ ಶುದ್ಧತೆಗಳೆರಡೂ ಗಂಡಬೇರುAಡ ಪಕ್ಷಿ ಇದ್ದಂತೆ. ಒಂದೇ ದೇಹಕ್ಕೆ ಎರಡು ತಲೆಗಳು.


3
ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಬೇಯಿಸಿದ ಮೊಟ್ಟೆಯೊಂದನ್ನು ಕೊಡುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಭಾರೀ ವಿರೋಧವನ್ನು ಸೃಷ್ಟಿ ಮಾಡಲಾಗಿದೆ. ಧರ್ಮ, ಸಂಸ್ಕೃತಿಯ ಗುತ್ತಿಗೆ ಹಿಡಿದಂತಿರುವ ಈ ಜನರು ಸರ್ಕಾರದ ಕುತ್ತಿಗೆ ಹಿಸುಕುತ್ತಿದ್ದಾರೆ. ನಮ್ಮ ಕಾಮನ್ ಮ್ಯಾನ್‌ಗೋ ಇಂಥ ಟೈಮ್ ಪಾಸ್ ಮನರಂಜನೆಯೇ ಬೇಕಾಗಿದೆ ಅಂತ ಕಾಣುತ್ತೆ, ಊ ಅನ್ನುತ್ತಿಲ್ಲ, ಊಹೂಂ ಅನ್ನುತ್ತಿಲ್ಲ ಸುಮ್ಮನೇ ಎಂಜಾಯ್ ಮಾಡುತ್ತಿರುವಂತಿದೆ. ಆದರೆ, ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಯವರು ಮಾತ್ರ, ಮೊಟ್ಟೆ ಕೊಡುವುದರಲ್ಲಿ ತಪ್ಪೇನಿದೆ,ಬೇಕಿದ್ದವರು ತಿನ್ನಲಿ, ಉಳಿದವರು ಸುಮ್ಮನಿರಲಿ ಎಂಬ ವಿವೇಕ ಪ್ರಕಟಿಸಿದ್ದಾರೆ. ಇದು ಹೀಗೇ ಮುಂದುವರೆದು, ಮೊಟ್ಟೆ ವಿರೋಧಿಸುವವರು ಅವರ ಮಠಗಳಿಗೆ ಮೊಟ್ಟೆ ತಿನ್ನುವ ಜನರಿಗೆ ಪ್ರವೇಶ ನಿಷೇಧಿಸಲಿ, ಅವರಿಂದ ಕಾಣಿಕೆ ನಿರಾಕರಿಸಲಿ ಎಂಬ ಕುಹಕವೂ ಬಂದಿದೆ ಜನರಿಂದ.


ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕಚೇರಿಯಲ್ಲೂ ಮೊಟ್ಟೆ ಕುರಿತ ಚರ್ಚೆ ಶುರುವಾಯಿತು. ಹಿಂದುಳಿದವರ, ದಲಿತರ ಹಾಸ್ಟೆಲುಗಳಲ್ಲಿ ಬೇಕಿದ್ದರೆ ಕೊಡಲಿ, ಶಾಲೆಗಳಲ್ಲಿ ಬೇಡ ಅಂತ ವಿಶ್ರಾಂತ ಪ್ರಾಚಾರ್ಯರೊಬ್ಬರು ಪಟ್ಟು ಹಿಡಿದು ವಾದ ಮಾಡತೊಡಗಿದರು. 


ನಾನು ಹೇಳಿದೆ, “ ನೋಡಿ ಸರ್, ಲಿಂಗಾಯತ ಧರ್ಮದ ಕಾರಣಕ್ಕೆ ಕರ್ನಾಟಕ ಹಾಗೂ ಜೈನ ಧರ್ಮದ ಕಾರಣಕ್ಕೆ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮಾತ್ರವೇ 20ರಿಂದ 25% ಸಸ್ಯಾಹಾರಿಗಳಿದ್ದಾರೆ. ಉಳಿದಂತೆ ದೇಶದ ಇತರ ರಾಜ್ಯಗಳಲ್ಲೆಲ್ಲ 97ರಿಂದ 97.5% ಮಾಂಸಾಹಾರಿಗಳೇ ಇರುವುದು. ಆದರೆ ದಿನವೂ ಮಾಂಸ ತಿನ್ನುವವರ ಸಂಖ್ಯೆ ಇಡೀ ಇಂಡಿಯಾದಲ್ಲಿ ತೀರಾ ಕಡಿಮೆ. ಅವರವರ ತಟ್ಟೆಯಲ್ಲಿ ಅವರವರು ತಿಂದರೆ ಯಾರಿಗೇನು ತೊಂದರೆ” ಎಂದೆ. 
ಅವರು ಒಪ್ಪಲಿಲ್ಲ, ಮಾತು ಎರಡೂವರೆ ಸಾವಿರ ವರ್ಷದ ಹಿಂದಕ್ಕೆ ಹೊರಟಿತು. “ಆ ಬುದ್ಧ ಅಹಿಂಸೆ ಅಂದ ಅಲ್ವ, ಬೌದ್ಧರಲ್ಲಿ ಮಾಂಸ ತಿನ್ನೋರು ಇಲ್ವಾ” ಅನ್ನೋ ಪ್ರಶ್ನೆ ಬಂತು ಅವರಿಂದ.


“ಹೌದು, ಬುದ್ಧನ ಕಾಲವನ್ನು ಒಂಚೂರು ನಿಮ್ಮ ಕಣ್ಣಮುಂದೆ ತಂದುಕೊಳ್ಳಿ, ಬುದ್ಧನ ವಿಚಾರಗಳನ್ನು ಒಪ್ಪಿ ಆತನ ಸಂಘಕ್ಕೆ ಬರುವವರು ಕುಟುಂಬ ಮತ್ತು ಆಸ್ತಿ, ಅಂತಸ್ತುಗಳನ್ನು ತೊರೆದು ದೈನಂದಿನ ಆಹಾರವನ್ನು ಮನೆ ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡಿ ತಂದು ತಿನ್ನಬೇಕಿತ್ತು. ಭಿಕ್ಷೆ ನೀಡಿದವರು ಮಾಂಸಾಹಾರನ್ನು ಕೊಟ್ಟರೂ ಅನಿವಾರ್ಯವಾಗಿ ತಿನ್ನಬೇಕಿತ್ತು.ಹಳಸಿದ ಅನ್ನವನ್ನು ನೀಡಿದರೂ ತಿನ್ನಬೇಕಿತ್ತು” ಎಂದೆ.


“ಅದೇ ರೀತಿ ಚುಂದನೆAಬ ಪೌರಕಾರ್ಮಿಕನೊಬ್ಬನ ಮನೆಗೆ ಭಿಕ್ಷೆಗೆ ಬರಲು ಬುದ್ಧ ಒಪ್ಪಿಕೊಳ್ಳುತ್ತಾನೆ, ಆತ ಎಂದೋ ಸತ್ತಿದ್ದ ಹಂದಿ ಬೇಯಿಸಿಕೊಡುತ್ತಾನೆ, ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎಂದು ಪ್ರಿಯ ಭಿಕ್ಕುಗಳು ಎಚ್ಚರಿಸಿದರೂ ಬುದ್ಧ ಕೇಳದೆ ಹೋಗಿ ಚುಂದನಲ್ಲಿ ಆಹಾರ ಸ್ವೀಕರಿಸುತ್ತಾನೆ, ಅದೇ ಕಡೇ, ಅತಿಸಾರವಾಗಿ ದೇಹ ನಿರ್ಜಲೀಕರಣಗೊಂಡು ಬುದ್ಧ ಅಂತ್ಯಕಾಣುತ್ತಾನೆ” ಅಂತAದೆ.


ಅಲ್ಲಿಗೆ ವಾದ ತಣ್ಣಗಾಗತೊಡಗಿ,” ಹೌದು, ನಮ್ಮ ಕಡೆ ಮದುವೆಗಳಲ್ಲಿ ಊಟ ಬಡಿಸುವಾಗ ಅನ್ನವನ್ನು ಭಿಕ್ಷೆ, ಭಿಕ್ಷೆ ಅಂತ ಅನ್ನುತ್ತಾರೆ ಅಂದರು ಆ ಅಧ್ಯಾಪಕರು, ರಾಜಿಯಾಗುವ ಹಂತ ತಲುಪಿತ್ತು. ಬುದ್ಧ ಗುರುವಿನ ವಿಚಾರವನ್ನು ಎರಡು ಸಾವಿರ ವರ್ಷಗಳ ಹಿಂದೆ ವಿಸ್ತರಿಸಿದ ಆಚಾರ್ಯ ನಾಗಾರ್ಜುನನ ‘ಶೂನ್ಯ’ ಮತ್ತು ಎಂಟುನೂರು ವರ್ಷಗಳ ಹಿಂದಿನ ಅಲ್ಲಮನ ‘ಬಯಲು’ ಎರಡೂ ಒಂದೇ, ಬುದ್ಧ ಗುರುವಿಗೆ ಶರಣಾದವರೇ ಬಸವಣ್ಣನ ಕಾಲದ ಶರಣರು” ಎನ್ನತೊಡಗುವಲ್ಲಿಗೆ ಎಲ್ಲವೂ ತಣ್ಣಗಾಯಿತು.


4
ಎಷ್ಟೋ ಮನೆಗಳ ಮುಂದೆ ಮನೆ ಬಾಡಿಗೆಗೆ ಇದೆ ಅಂತ ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಪುಟ್ಟದೊಂದು ಬೋರ್ಡು ತಗುಲಿಸಿ, ಬ್ರಾಕೆಟ್‌ನಲ್ಲಿ ವೆಜ್ ಓನ್ಲಿ-ಸಸ್ಯಾಹಾರಿಗಳಿಗೆ ಮಾತ್ರ ಅಂತ ಒಗ್ಗರಣೆ ಹಾಕಿರುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ತುಮಕೂರಿನಂತ ಊರಿನಲ್ಲಿ ನೀವು ಯಾವ ಜನ ಅಂತ ಕೇಳಲಾಗದೇ ಇದ್ದವರು ನೀವು ಯಾರ ಪೈಕಿ ಎನ್ನುತ್ತಾರೆ. ಇನ್ನೂ ನೇರವಾಗಿ ಹೇಳುವವರು, ತಿನ್ನುಣ್ಣೋರಿಗೆ ಕೊಡಲ್ಲ ಅಂದು ಬಿಡುತ್ತಾರೆ. ಅಂತವರ ಮುಂದೆ ನಿಂತ ನಾನು ಎರಡೂ ಮನೆಗಳಿಗೆ ಸೇರಿ ಒಂದೇ ಅಡಿಗೆ ಮನೇನಾ ಅಂಥ ಕಿಡಿಗೇಡಿತನದ ಪ್ರಶ್ನೆ ಕೇಳಿದ್ದೇನೆ. ಅದೆಲ್ಲ ಹಂಗಲ್ಲ, ಕೊಡಲ್ಲ ಅಂದ್ರೆ ಕೊಡಲ್ಲ ಅಷ್ಟೇ ಎನ್ನುತ್ತಾರೆ ಮನೆ ಮಾಲಿಕರು.


ಮಾಂಸಾಹಾರಿಗಳ ಮನೆಗಳಲ್ಲೂ ಎಷ್ಟೋ ಜನ ಮಾಂಸ ತಿನ್ನದೇ ಇರುವವರೂ ಇರುತ್ತಾರೆ, ಕೆಲ ಸಸ್ಯಾಹಾರಿಗಳು ಹೊರಗೆ ಹೊಟೆಲುಗಳಲ್ಲಿ ಮಾಂಸ ತಿನ್ನುತ್ತಾರೆ ಮತ್ತು ಅಂಥ ಸಲುವಾಗಿಯೇ ಕೆಳಜಾತಿಯ ಗೆಳೆಯರ ಸಂಗ ಬೆಳೆಸುತ್ತಾರೆ. ಜೀವ ವಿಕಾಸ ಥಿಯರಿಯ ಒಂದು ಭಾಗವಾಗಿ ಮಾಂಸಾಹಾರಿ ಪ್ರಾಣಿಗಳು ಮತ್ತು ಸಸ್ಯಾಹಾರಿ ಪ್ರಾಣಿಗಳನ್ನು ವಿಂಗಡಿಸಲಾಗಿದೆ. ಅವುಗಳಲ್ಲಿ ಹುಲ್ಲು ಮೇಯುವ ಜಿಂಕೆ.ಮೇಕೆ, ಕುರಿ, ದನ, ಕುದುರೆ, ಒಂಟೆ, ಆನೆಗಳಿಗೆಲ್ಲ ಅವು ತಲೆ ಬಗ್ಗಿಸಿ ಹುಲ್ಲು ಮೇಯುತ್ತಿರುವಾಗ ಆ ಕಡೆ ಈ ಕಡೆಯಿಂದ ದಾಳಿ ಮಾಡುವ ತೋಳ, ಕಿರುಬ, ಚಿರತೆ, ಹುಲಿಗಳನ್ನು ಗಮನಿಸಲೆಂದೇ ಅವುಗಳ ಕಣ್ಣುಗಳು ಮುಖದ ಎರಡು ವಿರುದ್ಧ ಪಾಶ್ವಗಳಲ್ಲಿ ಇವೆ. ಅದೇ ತರ, ಬೇಟೆಯಾಡಿ ಕೊಂದು ತಿನ್ನುವ ಸಿಂಹ, ಹುಲಿ, ಚಿರತೆಗಳ ಮುಖಗಳಲ್ಲಿ ಬೇಟೆ ಮಾಡುವ ಪ್ರಾಣಿಗಳನ್ನು ಅರಸುವ ಸಲುವಾಗಿ  ಎರಡೂ ಕಣ್ಣುಗಳು ಬೈನಾಕ್ಯುಲರ್ ವಿಷನ್ ಅಂದರೆ ಅಕ್ಕಪಕ್ಕದಲ್ಲೇ ಇರುತ್ತವೆ. ಮನುಷ್ಯನ ಕಣ್ಣುಗಳೂ ಹಾಗೇ ಇರುವುದರಿಂದ ಮನುಷ್ಯ ಆರಂಭದಿAದಲೂ ಮಾಂಸಾಹಾರಿಯೇ ಆಗಿದ್ದು, ಬೇಟೆಯಾಡಿ ಬದುಕುತ್ತಿದ್ದ, ನಾಗರಿಕತೆ ವಿಕಾಸಗೊಂಡAತೆ ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕುತ್ತಿದ್ದ. ಹೀಗೇ ಎರಡೂವರೆ ಸಾವಿರ ವರ್ಷದ ಹಿಂದೆ ಇಲ್ಲದೇ ಯಜ್ಞ ಯಾಗಗಳ ಹೆಸರಿನಲ್ಲಿ ವಿವೇಚನೆಯೇ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದುದನ್ನು ಮಹಾವೀರ ಮತ್ತು ಗೌತಮ ಬುದ್ಧ ವಿರೋಧಿಸಿ, ಹೊಸ ಜೀವನ ಧರ್ಮಗಳನ್ನು ರೂಪಿಸಿಕೊಟ್ಟರು. ಈ ಧರ್ಮಗಳು ಹೆಚ್ಚು ಜನಪ್ರಿಯಗೊಂಡAತೆ ಮಾಂಸಾಹಾರಿಗಳೂ ತಮ್ಮ ಆಹಾರ ಪದ್ಧತಿಯನ್ನು ಮಾರ್ಪಡಿಸಿಕೊಂಡು ಅದನ್ನೇ ತಮ್ಮ ಶ್ರೇಷ್ಟತೆಯ ವ್ಯಸನವನ್ನಾಗಿ ಮಾಡಿಕೊಂಡಿದ್ದಾರೆ.ಈ ಮಾತನ್ನು ಬಹಳ ಜನ ಹೇಳಿದ್ದಾರೆ, ಆದರೂ ಮತ್ತೆ ಹೇಳುವಂತ ಸನ್ನಿವೇಶಗಳನ್ನು ಈ ಮೊಟ್ಟೆ ವಿರೋಧಿಸಿ ಹೊಟ್ಟೆ ಹೊರೆದುಕೊಳ್ಳುವವರು ಸೃಷ್ಟಿಸಿದ್ದಾರೆ.ಮೊಟ್ಟೆ, ಮಾಂಸಾಹಾರವನ್ನು ವಿರೋಧಿಸುವವರೂ ಭಾಷಾ ಶುದ್ಧತೆಯನ್ನು ಪ್ರತಿಪಾದಿಸುವವರೂ ಇಬ್ಬರೂ ಒಂದೇ ವೃಂದಕ್ಕೆ ಸೇರಿದವರಾಗಿದ್ದು ಅವರು ಕಡಿಮೆ ಸಂಖ್ಯೆಯಲ್ಲಿದ್ದರೂ ದೊಡ್ಡ ಪ್ರಮಾಣದಲ್ಲಿ ಗದ್ದಲು ಎಬ್ಬಿಸಬಲ್ಲವರಾಗಿದ್ದಾರೆ. 


ವಿ.ಸೂ: ನನ್ನ ಮೇಲಿನ ಟಿಪ್ಪಣಿ (1) ಮತ್ತು (2)ರಲ್ಲಿ ವಿವರಿಸಿದ ಆಸಾಮಿ ಒಬ್ಬರೇ ಎನ್ನುವುದು ನಿಮ್ಮ ಗಮನದಲ್ಲಿರಲಿ.