ತುಮಕೂರು ಲೋಕಸಭಾ ಕ್ಷೇತ್ರದ ಅಪ್‌ಡೇಟ್- 99% ಲೋಕಲ್‌ ಕುಚ್ಚಂಗಿ ಪ್ರಸನ್ನ

ತುಮಕೂರು ಲೋಕಸಭಾ ಕ್ಷೇತ್ರದ ಅಪ್‌ಡೇಟ್- 99% ಲೋಕಲ್‌ ಕುಚ್ಚಂಗಿ ಪ್ರಸನ್ನ

99% ಲೋಕಲ್‌

ಕುಚ್ಚಂಗಿ ಪ್ರಸನ್ನ

 

      ಜಿಲ್ಲೆಯ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಏ.24ರ ಬುಧವಾರ ಸಂಜೆ ನಾಲ್ಕು ಗಂಟೆಗೆ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಹಾಜರಾಗಿ ಸೋಮಣ್ಣನವರ ಗೆಲುವಿಗೆ ನೆರವಾಗಬೇಕಿದ್ದ ಬಿಜೆಪಿಯ ʼಚಾಣಕ್ಯʼ ಅಮಿತ್‌ ಶಾ ಯಾವ ಕಾರಣವನ್ನೂ ಕೊಡದೇ ತಮ್ಮ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ಆದರೆ, ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಬಿಜೆಪಿ ಸಮಾವೇಶಕ್ಕೆ ಹಾಕಿದ್ದ ಗುಡಾರವನ್ನು ಕೀಳುವ ವಿಡಿಯೋ ಜೊತೆಗೆ ಕಾಂಗ್ರೆಸ್‌ನ ತೀರಾ ಅಲ್ಪ ಅಭಿರುಚಿಯ ಚೊಂಬಿನ ಜಾಹಿರಾತಿನ ನಂತರ ವೈರಲ್ ಆಗಿರುವ ಹಾಡನ್ನು ಜೋಡಿಸಿ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬದಲಿ ಎಂಬಂತೆ ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಅವರಿಗೇ ಸೋಮಣ್ಣನವರು ತೃಪ್ತಿಪಟ್ಟುಕೊಳ್ಳಬೇಕಿದೆ.

    1994ರಿಂದ ನಾಲ್ಕು ಅವಧಿಗೆ ನಿರಂತರ ಎಂಎಲ್‌ಎ, ಎರಡು ಸಲ ಮಿನಿಸ್ಟರ್‌ ಆಗಿದ್ದ ಸೊಗಡು ಶಿವಣ್ಣನವರು ಈ ಚುನಾವಣೆಯಲ್ಲಿ ಸೋಮಣ್ಣನವರ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್‌ ಅವರೂ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.  ಜ್ಯೋತಿಗಣೇಶ್‌ ಅವರ ತಂದೆ ಹಾಲಿ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿರುವ ಐದು ಸಲ ಎಂಪಿಯಾಗಿ ದಾಖಲೆ ಮಾಡಿರುವ ಜಿ.ಎಸ್.ಬಸವರಾಜ್‌ ಕೂಡಾ ಓಟಿನ ಭೇಟೆಯಲ್ಲಿ ತೊಡಗಿದ್ದರೂ ವಯಸ್ಸಿನ ಜೊತೆಗೆ ಸಂಸದರಾಗಿ ಕಳೆದ ಐದು ವರ್ಷಗಳ ಅವರ ನಿಷ್ಕ್ರಿಯತೆ ಅವರನ್ನು ಹಳ್ಳಿಹಳ್ಳಿಗಳಲ್ಲಿ ಜನರ ಎದುರು ಹೋಗಿ ನಿಲ್ಲದಂತೆ ಮಾಡಿಬಿಟ್ಟಿದೆ. ಜೊತೆಗೆ ಸೋಮಣ್ಣನವರಿಗೂ ಇವರು ತಮ್ಮ ಜೊತೆ ಓಟು ಕೇಳಲು ಬರದಿದ್ದರೆ ಸಾಕು ಎನ್ನುವಂತಾಗಿಬಿಟ್ಟಿದೆಯಂತೆ.

    ಕೋವಿಡ್‌ ಕಾರಣಕ್ಕೆ ಎರಡು ವರ್ಷ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬರಲಿಲ್ಲ, ಉಳಿದ ಮೂರು ವರ್ಷ ಬಂದ ಮೊತ್ತ ಎಲ್ಲಿ ಯಾವ ಹಳ್ಳಿಗಳಿಗೆ ತಲುಪಿ ಜನೋಪಯೋಗಿ ಆಗಿದೆ ಅಂತ ಮಾಹಿತಿ ಕೊಡಲು ಅವರ ಐದು ವರ್ಷವಿಡೀ ಅವರ ನೆರಳಂತಿದ್ದ ಕುಂದರನಹಳ್ಳಿ ರಮೇಶ್‌ ಸಿದ್ದರಿಲ್ಲ. ದಿಶಾ ಸಮಿತಿ, ರೈಲ್ವೆ ಸಮಿತಿ, ನೀರಾವರಿ ಸಮಿತಿ ಅದೂ ಇದೂ ಅಂತ ಆಕ್ಟಿಂಗ್‌ ಎಂಪಿಯಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರೇ ಈತನ ಎದುರು ಮಂಕಾಗಬೇಕು ಎನ್ನುವಂತೆ ಯೋಜನೆಗಳನ್ನು ತಮ್ಮ ಶಕ್ತಿಪೀಠ ವೆಬ್‌ಸೈಟ್‌ನಲ್ಲಿ ಮಂಡಿಸುತ್ತಿದ್ದ ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಜನರ ಕಣ್ಣಿಗಿರಲಿ ಪತ್ರಕರ್ತರ ಕಣ್ಣಿಗೂ ಬೀಳುತ್ತಿಲ್ಲ. ಹಾಲಿ ಅಭ್ಯರ್ಥಿ ಸೋಮಣ್ಣನವರು ಬಿಡುಗಡೆ ಮಾಡಿರುವ ಪ್ರತ್ಯೇಕ : "ಸಂಕಲ್ಪ ಪತ್ರ”ವನ್ನೂ ಈ ಮನುಷ್ಯನೇ ಡ್ರಾಫ್ಟ್‌ ಮಾಡಿದ್ದು ಅಂತ ಬಿಜೆಪಿ ಕಾರ್ಯಾಲಯದಲ್ಲಿ ಹೇಳಿದಂತಾಯಿತು.  

 

    ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ, ಜೊತೆಗೆ ಮೈತ್ರಿ ಕಾರಣಕ್ಕೆ ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿಗಳ ಜೆಡಿಎಸ್‌ ಶಾಸಕರೂ ಬಿಜೆಪಿಗಾಗಿ ಓಟು ಕೇಳುತ್ತಿದ್ದಾರೆ. ಜೆಡಿಎಸ್-‌ ಬಿಜೆಪಿ ಮೈತ್ರಿ ಆಗದೇ ಹೋಗಿದ್ದರೆ ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಮತ್ತು ಸೋಮಣ್ಣ ನಡುವೆ ನೇರ ಸ್ಪರ್ಧೆ ಬದಲು ಇವರಿಬ್ಬರ ಜೊತೆಗೆ ಜೆಡಿಎಸ್‌ ಅಭ್ಯರ್ಥಿಯೂ ಸೇರಿರುತ್ತಿದ್ದರು. ತ್ರಿಕೋನ ಸ್ಪರ್ಧೆ ಇದ್ದಾಗ ಯಾರು ಯಾರ ಓಟನ್ನು ಹೇಗೆ ಮತ್ತು ಏಕೆ ಕೀಳುತ್ತಾರೆ ಎಂಬುದು ಬಲು ಬೇಗ ಅರ್ಥವಾಗಿಬಿಡುತ್ತಿತ್ತು ಮತ್ತು ಓಟು ಹಾಕಲು ವಾರಕ್ಕೆ ಮೊದಲೇ ಯಾರು ಗೆಲ್ಲುತ್ತಾರೆ ಅಂತಲೂ ಹೇಳಿಬಿಡಬಹುದಿತ್ತು.

    ಮೇಲೆ ಹೇಳಿದ ಬಿಜೆಪಿಯ ಎರಡು ಪ್ಲಸ್‌ ಜೆಡಿಎಸ್‌ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಒಂದು ಪಕ್ಕದಲ್ಲಿ ಇರಿಸಿಬಿಡಿ, ಉಳಿದ ತಿಪಟೂರು, ಗುಬ್ಬಿ, ಕೊರಟಗೆರೆ ಮತ್ತು ಮಧುಗಿರಿಗಳಲ್ಲಿ ಕಾಂಗ್ರೆಸ್‌ ಶಾಸಕರೇ ಇದ್ದಾರೆ, ಜೊತೆಗೆ ಕೊರಟಗೆರೆ ಹಾಗೂ ಮಧುಗಿರಿಗಳ ಶಾಸಕರಾದ ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಈ ಇಬ್ಬರು  ರಾಜ್ಯ ಸರ್ಕಾರದಲ್ಲಿ ಮಂತ್ರಿಗಳೂ ಆಗಿದ್ದಾರೆ. ಇವರಲ್ಲಿ ಒಬ್ಬರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇವರಿಬ್ಬರೂ ಇಡೀ ತುಮಕೂರು ಲೋಕಸಭಾ ಕ್ಷೇತ್ರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೊತೆಗೆ ಕನೆಕ್ಟ್‌ ಆಗಿರುವ ಕುಣಿಗಲ್‌ ಹಾಗೂ ಚಿತ್ರದುರ್ಗ ಕ್ಷೇತ್ರವನ್ನು ಬೆಸೆದುಕೊಂಡಿರುವ ಶಿರಾ ಹಾಗೂ ಪಾವಗಡಗಳ ಮೇಲೂ ಈ ಇಬ್ಬರು ಸಚಿವರು ಪ್ರಭಾವ ಬೀರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಪಕ್ಕದ ಹಾಸನ ಜಿಲ್ಲೆಯ ಹೊಣೆಯನ್ನೂ ನಿರ್ವಹಿಸಬೇಕಿದೆ. ಹಾಗಾಗಿ ಅವರ ಎಂಎಲ್‌ಸಿ ಪುತ್ರ ರಾಜೇಂದ್ರ ಮಧುಗಿರಿ ಹಾಗೂ ತುಮಕೂರು- ನಗರ ಮತ್ತು ಗ್ರಾಮಾಂತರಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಶಿರಾ ಶಾಸಕ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕುಂಚಿಟಿಗರ ಓಟುಗಳನ್ನು ಪಡೆದುಕೊಳ್ಳಲು ಮುದ್ದಹನುಮೇಗೌಡರಿಗೆ ನೆರವಾಗುತ್ತಿದ್ದಾರೆ. ಡಾ.ಜಿ.ಪರಮೇಶ್ವರ ತಮ್ಮ ಎಂದಿನ ಬದ್ಧತೆಯಿಂದ ಕ್ಷೇತ್ರವನ್ನು ನಿಭಾಯಿಸುತ್ತಿದ್ದಾರೆ.

   ಗುಬ್ಬಿಯ ಶಾಸಕರಾಗಿರುವ ಎಸ್‌.ಆರ್‌.ಶ್ರೀನಿವಾಸ್‌ ಎಂಟತ್ತು ತಿಂಗಳವರೆಗೂ ಅಂದರೆ ವಿಧಾನ ಸಭೆ ಚುನಾವಣೆವರೆಗೂ ಜೆಡಿಎಸ್‌ನಲ್ಲೇ ಇದ್ದವರು. ಜೊತೆಗೆ ಅಭ್ಯರ್ಥಿ ಮುದ್ದಹನುಮೇಗೌಡರಂತೆಯೇ ಒಕ್ಕಲಿಗರೂ ಹೌದು. ಹಿಂದಿನ ಚುನಾವಣೆಗಳಲ್ಲಿ ಮುದ್ದಹನುಮೇಗೌಡರು ಹಾಗೂ ಶ್ರೀನಿವಾಸ್‌ ಅವರ ನಡುವೆ ಚುನಾವಣಾ ರಾಯಭಾರ ನಡೆದು, ಗೌಡರಿಂದ ಅನುಕೂಲ ಪಡೆದಿರುವುದನ್ನು ಅಲ್ಲಗೆಳೆಯಲಾಗದು. ಹೀಗಾಗಿ ಶ್ರೀನಿವಾಸ್‌  ತಮ್ಮ ನಿಕಟಪೂರ್ವ ಪಕ್ಷದ ಕಾಂಟಾಕ್ಟ್‌ಗಳನ್ನು ಬಳಸಿ  ಗೌಡರಿಗೆ ಲೀಡ್‌ ಕೊಡಿಸಿ ದಾಖಲೆ ಮಾಡಬೇಕಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದು, ಬರುವ ವಿಧಾನ ಸಭಾ ಚುನಾವಣೆಗೆ ಟಿಕೆಟ್‌ ಗಟ್ಟಿ ಅಂತ ಭಾವಿಸಿರುವ 2023ರಲ್ಲಿ ಬಿಜೆಪಿ ಸುರೇಶಗೌಡರ ಎದುರು ಕೇವಲ 4594 ಓಟುಗಳಲ್ಲಿ ವಿಧಾನಸೌಧದ ಮೆಟ್ರೋ ಟ್ರೈನ್‌ ಮಿಸ್‌ ಮಾಡಿಕೊಂಡ  ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದಲ್ಲಿ ಅದೂ ಒಂದು ದಾಖಲೆಯೇ ಆಗಿಬಿಡುತ್ತದೆ. ತುರುವೇಕೆರೆಯಲ್ಲಿ ಮಾಜಿ ಎಂಎಲ್‌ಸಿ ಬೆಮೆಲ್‌ ಕಾಂತರಾಜು ಸಹ ಹೆಚ್ಚಿನ ಓಟುಗಳನ್ನು ಗಳಿಸಿಕೊಟ್ಟರೆ ಮುಂದಿನ ಚುನಾವಣೆಗೆ ಹಾದಿ ಸಲೀಸಾಗಿಬಿಡುತ್ತದೆ. ಆದರೆ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ತುರುವೇಕೆರೆಗಳಲ್ಲಿ ಕಾಂಗ್ರೆಸ್‌ ಲೀಡ್‌ ಬರದೇ ಹೋದಲ್ಲಿ ಈ ಮೂವರೂ ನಾಯಕರು ಅತ್ಯಂತ ಸುಲಭವಾಗಿ ಅವರ ಹಿನ್ನಡೆಯನ್ನು ಜೆಡಿಎಸ್‌ ಹೆವಿ ವೇಯ್ಟ್‌ ಚಾಂಪಿಯನ್‌ ದೇವೇಗೌಡರ ತಲೆಯ ಮೇಲೆ ಹಾಕಲು ಈ ಚುನಾವಣೆ ಅತ್ಯಂತ ಸುಲಭದ ಅವಕಾಶವನ್ನು ನೀಡಿಬಿಟ್ಟಿದೆ.

    ಮೇಲಿನ ಮೂರು ಕ್ಷೇತ್ರಗಳಿಗೆ ಆಪೋಸಿಟ್‌ ಎಂಬಂತ ಸನ್ನಿವೇಶ ತಿಪಟೂರಿನಲ್ಲಿದೆ. ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ‌ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್‌ ಕೊಡಿಸದೇ ಹೋದಲ್ಲಿ ಎಲ್ಲವನ್ನೂ ಬಿಜೆಪಿ ಅಭ್ಯರ್ಥಿಯೂ ಲಿಂಗಾಯತರೇ ಆಗಿರುವುದರಿಂದ ಸ್ವತಃ ಲಿಂಗಾಯತ ಆಗಿರುವ ನಾನು ತಾನೇ ಏನು ಮಾಡಲಿ ಎಂದು ಕೈ ಚೆಲ್ಲಿಬಿಡಲು ದೊಡ್ಡ ಅವಕಾಶವಿದೆ.

     ಗುಬ್ಬಿಯಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಗಾಗಿ ತೀವ್ರ ಪ್ರಯತ್ನ ನಡೆಸಿದ್ದ ಹೈಕೋರ್ಟ್‌ ವಕೀಲ ಜಿ.ಎಸ್.ಪ್ರಸನ್ನ ಕುಮಾರ್‌ ಸ್ಥಾಪಿಸಿರುವ ಸಿದ್ಧರಾಮಸೇನೆಯ ಅಷ್ಟೂ ಸದಸ್ಯರು ಈಗ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಜಾತಿ ಮಹಿಮೆ ಅಂತ ಸುಲಭವಾಗಿ ತಳ್ಳಿಹಾಕಿಬಿಡುತ್ತೀರಿ.‌

   ಆದರೆ ಸೋಮಣ್ಣನವರು ಈ ಎಲ್ಲವನ್ನು  ಮತ್ತು ಇವರೆಲ್ಲರ ಸಾಂಪ್ರದಾಯಿಕ ಹೇಳಿಕೆ ಹಾಗೂ ಅಂದಾಜುಗಳನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನೂರು ಕೋಟಿ ಆದರೂ ಬಿಡುವುದಿಲ್ಲ ಎನ್ನುವ ಮಾತುಗಳನ್ನು ಆಡುತ್ತಲೇ ತುಮಕೂರು ಗಡಿ ದಾಟಿ ಬಂದಿರುವ ಸೋಮಣ್ಣನವರ ಪರ ಅವರ ಕುಟುಂಬದ ಸದಸ್ಯರು, ಅವರಿಂದ ನೆರವು ಪಡೆದುಕೊಂಡು ಲೈಫ್‌ ಸೆಟ್ಲ್‌ ಮಾಡಿಕೊಂಡಿರುವವರು, ಅವರ ಹಿತೈಷಿಗಳೆಲ್ಲರೂ ಈ ಚುನಾವಣೆಯಲ್ಲಿ ಅವರದೆ ಆದ ರೀತಿಯಲ್ಲಿ ಸಕ್ರಿಯವಾಗಿದ್ದಾರೆ. ಆರಂಭದ ದಿನಗಳಲ್ಲಿ ಸೋಮಣ್ಣನವರನ್ನು ರಾಣಿಜೇನಿಗೆ ಮುತ್ತಿಕೊಂಡಂತೆ ಸುತ್ತುವರೆದಿದ್ದವರೆಲ್ಲ ಅವರ ವ್ಯಾವಹಾರಿಕ ಚಾಕಚಕ್ಯತೆ ಮತ್ತು ಶೈಲಿ ಕಂಡು ಸದ್ದಿಲ್ಲದೆ ದೂರ ಸರಿದಿದ್ದಾರೆ.  ಹೊರಗಿನವರು ಎಂಬ ದೂರನ್ನು ದೂರ ಮಾಡಲು ಮಾರುತಿ ನಗರದಲ್ಲಿ ಮನೆ ಖರೀದಿ ಮಾಡಿದ್ದೇನೆ ಅಂತ ಹೇಳಿದರೂ ರಿಜಿಸ್ಟ್ರೇಶನ್‌ ಏನಿದ್ದರೂ ಜೂನ್‌ ನಾಲ್ಕರ ನಂತರವೇ ಅಂತ ಅವರ ಹತ್ತಿರದವರು ಹೇಳುತ್ತಿದ್ದಾರೆ.

     ಆದರೆ ಇದೇ ಮಾತುಗಳನ್ನು ಕಾಂಗ್ರೆಸ್‌ ಕ್ಯಾಂಪ್‌ನಲ್ಲಿ ಹೇಳಲಾಗದು,  1994ರಿಂದ ನಿರಂತರ ಎರಡು ಅವಧಿಗೆ ಕುಣಿಗಲ್‌ ಶಾಸಕರಾಗಿ, 2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ 24 ಸಾವಿರ ಓಟುಗಳಲ್ಲಿ ಸೋತು, 2014ರಲ್ಲಿ ಕಾಂಗ್ರೆಸ್‌ನಿಂದ 74 ಸಾವಿರ ಓಟುಗಳಿಂದ ಗೆದ್ದು, 2019ರಲ್ಲಿ ಟಿಕೆಟ್‌ ವಂಚಿತರಾಗಿ, ಈಗ ಮತ್ತೆ ಕಾಂಗ್ರೆಸ್‌ನಿಂದ ಚುನಾಯಿತರಾಗಲು ಶ್ರಮಿಸುತ್ತಿರುವ ಮುದ್ದಹನುಮೇಗೌಡರ ಮಾತುಗಳಲ್ಲಿ ಅದೇ ಗಟ್ಟಿತನವಿದ್ದರೂ ದೇಹ ದಣಿದಂತೆ ಕಾಣುತ್ತಿದೆ. ಈ ಮಾಹಿತಿ ಗಮನಿಸಿದರೆ ಗೌಡರಿಗೆ ಲೋಕಸಭಾ ಚುನಾವಣೆಯಾಗಲೀ, ತುಮಕೂರು ಲೋಕಸಭಾ ಕ್ಷೇತ್ರವಾಗಲೀ ತೀರಾ ಹೊಸತಲ್ಲ, ಜೊತೆಗೆ ಕ್ಷೇತ್ರದ ಮತದಾರರಿಗೆ ಮುದ್ದಹನುಮೇಗೌಡರು ಹೆಚ್ಚು ಪರಿಚಿತರು, ಸೋಮಣ್ಣನವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರೂ, ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಅವರ ಸೇವೆಯೆಲ್ಲ ಹೆಚ್ಚಿನ ಪಾಲು ಸಿದ್ಧಗಂಗಾ ಮಠಕ್ಕೆ ಸೀಮಿತ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕೆಲವೊಮ್ಮೆ ಯಾವ ಅಂಶಗಳು ಶಕ್ತಿ ಎನ್ನುವಂತಿರುತ್ತದೋ ಅದೇ ದೌರ್ಬಲ್ಯವೂ ಆಗಿ ಪರಿಣಮಿಸಬಹುದು ಎಂಬುದಕ್ಕೆ ಈ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳೇ ನಿದರ್ಶನವಾಗಿಬಿಡುತ್ತಾರೆ.

ಸೊಗಡು ಅಂಡ್‌ ಗ್ಯಾಂಗ್‌ ಘರ್‌ವಾಪ್ಸಿ!!

     ಹತ್ತು ತಿಂಗಳ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗಲಿಲ್ಲ ಅಂತ ಸಿಟ್ಟಿನಿಂದ ಸ್ವತಂತ್ರರಾಗಿ ಕಣಕ್ಕಿಳಿದು 8954 ಓಟು ಗಳಿಸಿದರೂ ಪಕ್ಷದ ಆಸರೆ ಇಲ್ಲವಾಗಿ ನೀರಿನಿಂದ ಹೊರಬಿದ್ದ ಮೀನಿನಂತಾಗಿಬಿಟ್ಟಿದ್ದ ಸೊಗಡು ಶಿವಣ್ಣನವರ ಮೊಗದಲ್ಲಿ ಮತ್ತೆ ಕಳೆ ಮೂಡಿದೆಯಂತೆ, ಮತ್ತೆ ಮೀಸೆ ಹುರಿ ಮಾಡುತ್ತ, ಚಿಕ್ಕಪೇಟೆ ಸರ್ಕಲ್‌ನಲ್ಲಿ ಕೂತು ಗಾಂಧಿನಗರದತ್ತ ವಾರೆ ನೋಟ ಬೀರುತ್ತಿದ್ದಾರಂತೆ. ಸೊಗಡು ಶಿವಣ್ಣನವರ ಜೊತೆಯಲ್ಲೇ ಇದ್ದುಕೊಂಡೇ ಅವರನ್ನು ಅಜಾತಶತ್ರು ಅಂತ ಕರೆಯುವ ಕರಸೇವಕರಿಗೂ ಘರ್‌ವಾಪ್ಸಿ ತುಸು ನಿರಾಳ ತಂದಿದ್ದರೂ ಮತ್ತೆ ವಕ್ತಾರನಾಗುವುದು ಸದ್ಯಕ್ಕೆ ಕನಸಿನ ಮಾತು. ಸೊಗಡು ಶಿವಣ್ಣನವರು ಮತ್ತೆ ಬಿಜೆಪಿಗೆ ಮರಳಲು ಕಾರಣವಾಗಿರುವುದು ಲೋಕಸಭಾ ಚುನಾವಣೆ ಹಾಗೂ ಈ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಪಡೆದು ಬಂದ ಮಾಜಿ ಸಚಿವ ವಿ.ಸೋಮಣ್ಣನವರು. ಅವರಲ್ಲದೇ ಜಿಲ್ಲೆಯ ಯಾರಾದರೂ ಬಿಜೆಪಿ ಅಭ್ಯರ್ಥಿಯಾಗಿದ್ದರೆ ಇಷ್ಟು ಸುಲಭವಾಗಿ ಶಿವಣ್ಣನವರನ್ನು ವಾಪಸ್‌ ಕರೆದುಕೊಂಡು ಆಗುತ್ತಿರಲಿಲ್ಲ ಅನ್ನೋ ಮಾತನ್ನ ಅವರ ಜೊತೆ ಇರುವವರೇ ಒಪ್ಪಿಕೊಳ್ಳುತ್ತಾರೆ. ತ್ಯಾಂಕ್ಸ್‌ ಟು ಸೋಮಣ್ಣ.