ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ - “ ನೋಡಿ ಪ್ರತಿ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿ ಇದೆ ..,” 

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ “ ನೋಡಿ ಪ್ರತಿ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿ ಇದೆ ..,” 

ಒಂದು ಗಳಿಗೆ  - ಕುಚ್ಚಂಗಿ ಪ್ರಸನ್ನ  - “ ನೋಡಿ ಪ್ರತಿ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿ ಇದೆ ..,” 

ಒಂದು ಗಳಿಗೆ


ಕುಚ್ಚಂಗಿ ಪ್ರಸನ್ನ


“ ನೋಡಿ ಪ್ರತಿ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿ ಇದೆ ..,” 


ಸೈಕಲ್ ರಿಮ್ ಅನ್ನು ಬಂಡಿಗಾಲಿ ಮಾಡಿಕೊಂಡು ಶ್ರೀರಾಮನಗರದ ಗಲ್ಲಿಯಲ್ಲಿ ಉರುಳಿಸಿಕೊಂಡು ಓಡಿ ಬರುತ್ತಿದ್ದ ಕೆಂಚು ಜಿರಲೆಯಂತಿದ್ದ ಆ ಮರಾಠಿಗರ ಹುಡುಗ ನನ್ನನ್ನು ಕಂಡೊಡನೆ, ಹಲ್ಲು ಕಿಸಿದು, “ಅಂಕಲ್ ಅಂಕಲ್, ಮನೆ ಹತ್ರ ನಿಮ್ಮ ಫ್ರೆಂಡ್ಸು ಸಖತ್ ಜನಾ ಬಂದವರೆ, ನಿಮ್ಮನ್ನ ಅವಾಗಿಂದ ಕಾಯ್ತಾ ಅವ್ರೆ” ಅಂದ.


ನನ್ನನ್ನು ಹುಡುಕಿಕೊಂಡು ಅಷ್ಟೊಂದು ಜನ ಫ್ರೆಂಡ್‌ಗಳ್ಯಾರು ಬಂದಿರಬಹುದು. ಯಾವ ಬ್ಯಾಂಕಿನಲ್ಲೂ ಸಾಲ ಬಾಕಿ ಇರಲಿಲ್ಲ, ಆಗ ತುಮಕೂರಿನಲ್ಲಿ ನನಗೆ ಪ್ರಿಂಟಿಂಗ್ ಬಿಲ್ ಬಾಕಿ ಕೊಡಬೇಕಾದವರು ಇದ್ದರೇ ಹೊರತು ನಾನು ಯಾರಿಗೂ ಬಾಕಿ ಇರಲಿಲ್ಲ, ಡಿಎಸ್‌ಎಸ್‌ನವರು ಮನೆ ಹತ್ತಿರ ಬರಲ್ಲ, ಅಲ್ಲೇ ಕೋತಿತೋಪಿನಲ್ಲೇ ಸಿಕ್ಕಿಬಿಡುತ್ತಾರೆ, ಇನ್ಯಾರಿರಬಹುದು ಎನ್ನುತ್ತಾ ತಲೆಗೆ ಹುಳು ಬಿಟ್ಟುಕೊಳ್ಳುವಷ್ಟರಲ್ಲಿ ರಾಜಕಾರಣಿ ಸಿ.ಎನ್.ಭಾಸ್ಕರಪ್ಪನವರ ಮನೆಯ ಹತ್ತಿರ ತಲುಪಿದ್ದೆ. ಅವರ ಮನೆ ಹತ್ರ ಎಡಕ್ಕೆ ತಿರುಗಿದರೆ ಅದೇ ದೊಂತಿಯವರ ಹೂವಿನ ತೋಟದ ಮಗ್ಗುಲ ಪುಟ್ಟ ಓಣಿಯಲ್ಲಿ ವಾಸವಿದ್ದೆವು ಆಗ. ಯಾಕೋ ಡೌಟು ಬಂದು, ತುಸು ಅಲ್ಲೇ ನಿಂತು ಕಾಂಪೌಂಡ್ ಮರೆಯಲ್ಲಿ ನಿಂತು ವಾಲಿ ಇಣುಕಿ ನೋಡಿದೆ. ಸುಮಾರು ನೂರಕ್ಕೂ ಹೆಚ್ಚು ಪಡ್ಡೆ ಹುಡುಗರ ಗುಂಪದು. ಅವರನ್ನು ನೋಡಿದ ಕ್ಷಣವೇ ಅರ‍್ಯಾರು ಎನ್ನುವುದು ಫ್ಲಾಷ್ ಆಗಿಬಿಟ್ಟಿತು. 


ಜಿಲ್ಲಾ ಪಂಚಾಯಿತಿ ಮೆಂಬರ್ ಅಂತೂರಯ್ಯನ ಮಗ ಮತ್ತವನ ಐದಾರು ಗೆಳೆಯರನ್ನು ಅತ್ಯಾಚಾರ ಆಪಾದನೆ ಮೇಲೆ ಬಂಧಿಸಿ ಸ್ಲೇಟು ಹಿಡಿಸಿದ್ದ ಪೋಟೋಗಳ ಸಮೇತ ಹಾಯ್ ಬೆಂಗಳೂರ್ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ವರದಿಯ ಡೀಪ್ ಎಫೆಕ್ಟ್ ಈ ಗ್ಯಾಂಗು ಅಂತ ಅಂತ ಕನ್‌ರ‍್ಮ್ ಆಗಿ ಬಿಟ್ಟಿತು. ಮನೆಯಲ್ಲಿ ಯಾರೂ ಇರಲಿಲ್ಲ, ಹಾಗಾಗಿ ಬೀಗ ಹಾಕಿದ್ದ ಮನೆಯ ಜಗುಲಿಯ ಮೇಲೆ ಹಾಗೂ ಇಡೀ ಗಲ್ಲಿಯ ತುಂಬ ಹರಡಿ ಗುಜು ಗುಜು ಮಾಡಿಕೊಂಡು ನಿಂತಿದ್ದರು. ಸದ್ದು ಮಾಡದೇ ಅಲ್ಲಿಂದ ಹಂಗೇ ಹಿಂದೆ ಸರಿದುಬಿಟ್ಟೆ. ಅವತ್ತು ಆ ಮರಾಠಿ ಹುಡುಗ ಎದುರು ಬಂದು ಸೂಚನೆ ಕೊಡದೇ ಹೋಗಿದ್ದರೆ ಅಲ್ಲಿದ್ದ ಅಷ್ಟೂ ಹುಡುಗರ ಧರ್ಮದೇಟಿಗೆ ನನ್ನ ದೇಹದ ಸ್ಪೇರ್ ಪಾರ್ಟ್ಗಳೆಲ್ಲ ಏನಾಗಿರುತ್ತಿದ್ದವೋ ಗೊತ್ತಿಲ್ಲ.
ಅದು 1997ನೇ ಇಸವಿ, 1988ರಿಂದ ಎಂಟು ವರ್ಷ ಪ್ರಜಾಪ್ರಗತಿ ದಿನಪತ್ರಿಕೆಯ ಜವಾಬ್ದಾರಿಯುತ ಹುದ್ದೆಯನ್ನು ಸ್ವಇಚ್ಚೆಯಿಂದಲೇ ತೊರೆದು ಚಿಕ್ಕಪೇಟೆಯಲ್ಲಿ ‘ಅಮೂಲ್ಯ ಪ್ರೆಸ್’ ಸ್ಥಾಪಿಸಿದ್ದ ಹಾಗೂ ‘ಸುದ್ದಿ ಅಮೂಲ್ಯ’ ವಾರಪತ್ರಿಕೆಯನ್ನು ಆರು ತಿಂಗಳು 24 ಸಂಚಿಕೆ ಪ್ರಕಟಿಸಿ ನಿಲ್ಲಿಸಿದ್ದ ನಂತರದ ದಿನಗಳವು.


ನನಗೆ ರವಿ ಬೆಳಗೆರೆ ಏನೂ ನೇರ ಪರಿಚಯವಿರಲಿಲ್ಲ, ಆತ ಒಮ್ಮೆ ತುಮಕೂರು ನಗರದ ಮೂಲಕ ಹಾದು ಹೋಗುವಾಗ ಹಳೇ ಎನ್‌ಎಚ್4ನಲ್ಲಿ ಹಿಂದಿನ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪ ಪೆಟ್ಟಿಗೆ ಅಂಗಡಿಯೊAದರ ಮುಂದೆ ಕಾರು ನಿಲ್ಲಿಸಿ ಸಿಗರೇಟ್ ಹಚ್ಚಿದ್ದಾಗ ಆತನನ್ನು ಕಂಡ ನನ್ನ ಇಬ್ಬರು ಗೆಳೆಯರು, ನನ್ನ ಕುರಿತು ಹೇಳಿ, ಸದ್ಯಕ್ಕೆ ಯಾವ ಪತ್ರಿಕೆಯಲ್ಲೂ ಇಲ್ಲ, ನಿಮಗೆ ವರದಿಗಾರ ಬೇಕಿದ್ದರೆ ಹೇಳಿ” ಅಂತ ಹೇಳಿದ್ದು, ಅವರ ಒತ್ತಾಯದ ಮೇರೆಗೆ ಬಹಳ ದಿನ ಬಿಟ್ಟು ರವಿಬೆಳಗೆರೆಯನ್ನ ಅವರ ಕಚೇರಿಗೇ ಹೋಗಿ ಭೇಟಿ ಮಾಡಿ ತುಮಕೂರಿನ ವರದಿಗಳನ್ನು ‘ವರದಿಗಾರ’ ಹೆಸರಿನಲ್ಲಿ ಕಳಿಸುತ್ತಿದ್ದೆ. 


ಒಬ್ಬಾಕೆಯನ್ನ ಅಂತೂರಯ್ಯನ ಮಗ ಮತ್ತು ಆತನ ಗೆಳೆಯರು ಪ್ರೀತಿ ಪ್ರೇಮದ ಹೆಸರಲ್ಲಿ ಲಾಡ್ಜ್ ಒಂದರಲ್ಲಿ ಕೆಡವಿಕೊಂಡು ಜೀವಕ್ಕೆ ಜೀರಿಗೆ ಅರೆದುಬಿಟ್ಟಿದ್ದರು. ಪಾಪ ಜೀವ ಉಳಿಸಿಕೊಂಡ ಆಕೆ ಜಿಲ್ಲಾಸ್ಪತ್ರೆಗೆ ದಾಖಲಾದ ಪರಿಣಾಮ ಪೊಲೀಸ್ ಕೇಸ್ ಆಗಿತ್ತು, ಆಗ ಈಗಿನಂತೆ ಅತ್ಯಾಚಾರಕ್ಕೆ ಒಳಗಾದವರ ಹೆಸರು ಬಹಿರಂಗಪಡಿಸಬಾರದು ಅನ್ನೋ ಕಾನೂನು ಇರಲಿಲ್ಲ. 


ಎಲ್ಲ ವೃತ್ತಿಗಳಂತೆ ಪತ್ರಕರ್ತನ ವೃತ್ತಿಗೂ ಹಲವು ಆಯಾಮಗಳಿವೆ. ಪತ್ರಿಕೋದ್ಯಮದಲ್ಲಿ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿ ಪ್ರಜಾವಾಣಿಯಂಥ ರಾಜ್ಯ ಪತ್ರಿಕೆಗೆ ಸೇರಿ ವರದಿಗಾರನಾದರೆ ಆತ ನಿಜಕ್ಕೂ ವಿವಿಐಪಿ ಪತ್ರಕರ್ತ ಎನ್ನುವ ಕಾಲವದು. ಅವರನ್ನು ಬಿಟ್ಟರೆ, ಸ್ಕೂಲು ಕಾಲೇಜುಗಳಲ್ಲಿ ಓದಿದ್ದು ಏನಾದರೂ ಇರಲಿ, ಯಾವುದೋ ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ವರದಿಗಾರ ಕಂ ಕಂ ಎಲ್ಲ ಕೆಲಸ ಮಾಡತೊಡಗಿದರೆ, ಆತನನ್ನೂ ಪ್ರೆಸ್ ರಿಪೋರ್ಟರ್ ಅಂತ ಕರೆದರೂ, ಆತನಿಗೂ ಸಾರ್ವಜನಿಕ ರ‍್ಯಾದೆಗಳೆಲ್ಲ ದೊರೆತರೂ ರಾಜ್ಯಮಟ್ಟದ ದಿನಪತ್ರಿಕೆಗಳ ವರದಿಗಾರರಿಗೆ ಡಿಸಿ, ಎಸ್ಪಿಗಳೇ ನೇರವಾಗಿ ಫೋನ್ ಮಾಡಿ ಸುದ್ದಿಯ ಮಾಹಿತಿ ಕೊಡುತ್ತಿದ್ದರೆ, ಈ ಜಿಲ್ಲಾ ಪತ್ರಿಕೆಗಳ ವರದಿಗಾರ ಗುಮಾಸ್ತರು, ಪೇದೆಗಳನ್ನು ಕಾಡಿ ಬೇಡಿ ಪಡೆದುಕೊಳ್ಳಬೇಕಿರುತ್ತಿತ್ತು. ಇನ್ನು ವಾರಪತ್ರಿಕೆಗಳ ವರದಿಗಾರ ಲೆಕ್ಕವೇ ಬೇರೆ ಇರುತ್ತಿತ್ತು. ಅವರನ್ನು ಮುಖ್ಯವಾಹಿನಿ ಪತ್ರಕರ್ತರು ಅಂತ ಗುರುತಿಸುತ್ತಲೇ ಇರುತ್ತಿರಲಿಲ್ಲ, ಜೊತೆಗೆ ಆತ ಎಲ್ಲಿಗೆ ಹೋಗುತ್ತಾನೋ ಅಲ್ಲೆಲ್ಲ ಆತನನ್ನು ಗುಮಾನಿಯಿಂದ ನೋಡುವವರೇ ಹೆಚ್ಚು. ಈ ಕಾರಣದಿಂದ ನಾನು ಹಾಯ್ ಬೆಂಗಳೂರು ವರದಿಗಾರ ಅಂತ ಗುರುತಿಸಿಕೊಂಡಿರಲಿಲ್ಲ ಅಂತ ಅನಿಸುತ್ತದೆ. ಆದರೂ ದಿನಪತ್ರಿಕೆಗಳು ಬರೆಯಲಾಗದ ಸುದ್ದಿಗಳನ್ನು ಬರೆದು ಪ್ರಕಟಿಸುವ ಛಾತಿ ಇದ್ದದ್ದು ವಾರಪತ್ರಿಕೆಗಳಿಗೆ ಮಾತ್ರ ಎನ್ನುವುದೂ ಸತ್ಯದ ಸಂಗತಿಯಾಗಿತ್ತು. 


ನಾನು ಕೊಡುವ ಸುದ್ದಿ ಸ್ಕೂಪ್ ಆಗಿರಬೇಕು, ರೋಚಕವಾಗಿರಬೇಕು, ಯಾರಿಗೂ ಗೊತ್ತಿಲ್ಲದೇ ಇರುವ ಸಂಗತಿಯನ್ನೇ ನಾನು ಬರೆಯಬೇಕು ಎನ್ನುವುದೇ ಹೀಗಾಗಿ ಟ್ಯಾಬ್ಲಾಯ್ಡ್ಗಳ ವರದಿಗಾರನೊಬ್ಬ ಇಂಥ ಮಹತ್ವಾಕಾಂಕ್ಷೆ ಹೊಂದಿದ್ದರೆ ಅದು ತಪ್ಪೇನೂ ಅಲ್ಲ. ರೌಡಿಗಳ ಕುರಿತು ವರದಿ ಮಾಡುವಾತ ಅವರ ವಿಶ್ವಾಸವನ್ನು ಗಳಿಸಿಕೊಳ್ಳಲು ಅವರ ಜೊತೆ ಹೆಚ್ಚು ಕಾಲ ಕಳೆಯಬೇಕಾಗುತ್ತದೆ ಎನ್ನುವುದೇನೋ ಸರಿ, ಆದರೆ ಅದೇ ಕಾರಣಕ್ಕೆ ಅವರ ನುಡಿಗಟ್ಟುಗಳೆಲ್ಲ ಈತನ ಬಾಯಲ್ಲಿ ಹರಿದಾಡತೊಡಗಿದರೆ, ಅವರಂತೆಯೇ ಈತನೂ ಯಾರದೋ ಹತ್ಯೆಗೆ ಸ್ಕೆಚ್ ಹಾಕಿ ಸುಪಾರಿ ಕೊಡತೊಡಗಿದರೆ ಕತೆ ಏನು. ಈ ವಿಚಾರದಲ್ಲಿ ರವಿ ಬೆಳಗೆರೆಯನ್ನು ಲಂಕೇಶ್ ಟೀಕಿಸಲು ಸಕಾರಣಗಳಿದ್ದವು. 


ಅವತ್ತು ನಮ್ಮ ಮನೆಯ ಮುಂದೆ ಸೇರಿದ್ದ ಗುಂಪಿನ ಕೈಗೆ ಸಿಗಬಾರದು ಎನ್ನುವುದು ನನ್ನನ್ನು ಹೆದರುಪುಕ್ಕಲ, ಈ ಸಾವರ್ಕರ್ ಥರಾ ಹೇಡಿ ಅಂತೆಲ್ಲ ಭಾವಿಸಬಾರದು. ಮೂರ್ಖರು,ಹೆಡ್ಡರ ಹತ್ರ ಮಾತಿನಲ್ಲಿ ಹೇಳಿ ಅರ್ಥ ಮಾಡಿಸಲು ಸಾಧ್ಯವಿಲ್ಲ ಎಂಬುದು ನನ್ನ ಆ ಕ್ಷಣದ ತಿಳುವಳಿಕೆಯಾಗಿದ್ದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಆದರೆ ನನ್ನೊಳಗೆ ತಲ್ಲಣವನ್ನು ಉಂಟು ಮಾಡಿದ ಆ ಪ್ರಸಂಗ ನನ್ನ ಜೀವನದ ದಿಕ್ಕೇ ಮತ್ತೊಂದು ವಿಲಕ್ಷಣ ತಿರುವು ತೆಗೆದುಕೊಳ್ಳಲೂ ಕಾರಣವಾಯಿತು. ನನಗೆ ಸೂಕ್ತ ರಕ್ಷಣೆ ಕೊಡಿಸುವ ಹೊಣೆಯನ್ನು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾಗಿದ್ದ ರವಿ ಬೆಳಗೆರೆ ಹೊತ್ತುಕೊಳ್ಳಲಿಲ್ಲವಾಗಿ, ಆ ಪತ್ರಿಕೆಯ ಮ್ಯಾನೇಜರ್ ನಿವೇದಿತಾ ಕಳಿಸಿದ ಎರಡು ಸಾವಿರ ಮೊತ್ತದ ಚೆಕ್ ಅನ್ನು ಕಲ್ಪತರು ಗ್ರಾಮೀಣ ಬ್ಯಾಂಕಿನ ನನ್ನ ಖಾತೆಗೆ ಹಾಕಿದ್ದು ಬಿಟ್ಟರೆ ನಾನು ಮತ್ತೆ ಅವರಿಗೆ ವರದಿಗಳನ್ನು ಕಳಿಸಲು ಹೋಗಲಿಲ್ಲ.


ಒಂದಾರು ತಿಂಗಳು ಬಿಟ್ಟು ಸಪ್ನ ಬುಕ್ ಹೌಸ್‌ನಲ್ಲಿ ಸಂಪಾದಕನ ಹುದ್ದೆಗೆ ಸೇರಿದೆ, ಅಲ್ಲೂ ಆರೇಳು ತಿಂಗಳು ಮಾತ್ರ, ಮತ್ತೆ ಮುಖ್ಯವಾಹಿನಿ ಪತ್ರಿಕಾ ವೃತ್ತಿಗೇ ಮರಳಿದೆ. ಐದು ತಿಂಗಳು ಹಾಸನದ ‘ಜನತಾ ಮಾಧ್ಯಮ’ದಲ್ಲಿದ್ದು, ‘ ಜನವಾಹಿನಿ’ ಎಂಬ ರಾಜ್ಯ ಮಟ್ಟದ ದಿನಪತ್ರಿಕೆಯ ಬೆಂಗಳೂರು ಬ್ಯೂರೋ ವರದಿಗಾರನ ಹುದ್ದೆಗೆ ನೇಮಕಗೊಂಡೆ. ಅಲ್ಲಿ ನನಗೆ ಸದಾ ಇಷ್ಟವಾದ ರಾಜಕೀಯ ಆಯ್ಕೆ ಮಾಡಿಕೊಂಡೆ, ಕ್ವೀನ್ಸ್ ರಸ್ತೆಯಲ್ಲಿ ಜನವಾಹಿನಿ ಕಚೇರಿ ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಕುರಿತ ವರದಿ ಮಾಡುವುದನ್ನೇ ಆದ್ಯತೆ ವಿಷಯವಾಗಿ ತೆಗೆದುಕೊಂಡೆ. ಯಾಕಂದ್ರೆ ತುಮಕೂರಿನಿಂದ ರೈಲಿನಲ್ಲಿ ಹೋಗಿಬರುತ್ತಿದ್ದ ನನಗೆ ಬೆಂಗಳೂರಿನಲ್ಲಿ ಸ್ಕೂಟರ್ ಇರಲಿಲ್ಲ ಇತರ ರಾಜಕೀಯ ಪಕ್ಷಗಳ ಕಚೇರಿಗಳು ಬಹಳ ದೂರ ಇದ್ದವು ಎನ್ನುವುದೇ ನಿಜ ಕಾರಣವಾಗಿತ್ತು.


ಬೆಳಿಗ್ಗೆ,ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರು ಹೊತ್ತೂ ಕಾಂಗ್ರೆಸ್ ಕಚೇರಿಗೆ ಹೋಗುತ್ತ ಬರುತ್ತ, ಚುನಾವಣೆ ಸಮಯ ಬೇರೆ ಅಲ್ವಾ, ನಾನೂ ಒಬ್ಬ ಕಾಂಗ್ರೆಸ್ ಕಾರ್ಯಕರ್ತನೋ ಅಥವಾ ಕೆಪಿಸಿಸಿ ಕಚೇರಿ ಸಿಬ್ಬಂದಿಯೋ ಎನ್ನುವಷ್ಟು ಹತ್ತಿರವಾಗಿಬಿಟ್ಟಿದ್ದೆ. ಅದು ಎಲ್ಲಿವರೆಗೆ ಅಂದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಂಥ ಗೌಪ್ಯ ಸಂದರ್ಭದಲ್ಲೂ ಅಲ್ಲಿರುತ್ತಿದ್ದ ಯಾರೂ ನನ್ನನ್ನು ಪತ್ರಕರ್ತ ಅಂತ ಗುರುತಿಸಿ ‘ದಯಮಾಡಿ ಹೊರಗೆ ಹೋಗಿ’ ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಐ ವಿಟ್ನೆಸ್ ರಿಪೋರ್ಟ್ ಫೈಲ್ ಮಾಡಲು ನನಗೆ ಅವಕಾಶವಾಗುತ್ತಿತ್ತು. ಇದು ಹಾಗೇ, ಅಷ್ಟು ಆಳಕ್ಕೆ ಹೋಗದೇ ಹೋದರೆ ಇತರ ವರದಿಗಾರರಿಗಿಂತ ಹೆಚ್ಚು ಸುದ್ದಿ ಹೆಕ್ಕಲು ಸಾಧ್ಯವಿಲ್ಲ. ಹೀಗೇ ವರದಿಗಾರನೊಬ್ಬ ರಾಜಕೀಯ ಪಕ್ಷಗಳು ಮತ್ತು ಇತರ ಸಾಮಾಜಿಕ ಸಂಘಟನೆಗಳ ಆಪ್ತನಾಗುತ್ತ, ಕೆಲವೊಮ್ಮೆ ಅವರ ವಾಹನಗಳಲ್ಲೇ ಸಂಚರಿಸುವುದೂ ಸಹಜವಾಗೇ ಇರುತ್ತದೆ. ಶುಕ್ರವಾರ ಬಂಧನಕ್ಕೊಳಗಾದ ಎರಡು ವರ್ಷದ ನಂತರ ಸುಪ್ರೀಂ ಕೋರ್ಟ್ ಜಾಮೀನು ನೀಡಬೇಕಾಗಿ ಬಂದ ದಿಲ್ಲಿಯ ಸಿದ್ದೀಕ್ ಕಾಪನ್ ಎಂಬ ಪತ್ರಕರ್ತನೂ ಇಂತದ್ದೇ ಪರಿಸ್ಥಿತಿಯಲ್ಲಿ ಅರೆಸ್ಟ್ ಆಗಬೇಕಾಗಿ ಬಂದದ್ದು.


ಉತ್ತರ ಪ್ರದೇಶದ ಹಾಥರಾಸ್ ಎಂಬಲ್ಲಿ 14.09.2020ರಂದು 19 ವರ್ಷದ ದಲಿತ ಯುವತಿಯನ್ನು ನಾಲ್ವರು ಮೇಲ್ಜಾತಿಯವರು ಗುಂಪು ಅತ್ಯಾಚಾರ ಮಾಡುತ್ತಾರೆ. ನಜ್ಜುಗುಜ್ಜಾದ ದೇಹದೊಂದಿಗೆ ಗೋಣಿನ ಮೂಳೆ ಮುರಿಸಿಕೊಂಡು, ಕೆಲವು ದಿನ ಆಸ್ಪತ್ರೆಯಲ್ಲಿದ್ದು ಮರಣ ಹೊಂದಿದ ಆಕೆಯ ಶವವನ್ನು ಮನೆಯವರಿಗೂ ಕೊಡದಂತೆ 29.09.2020ರ ಮಧ್ಯರಾತ್ರಿ ಜಿಲ್ಲಾಡಳಿತವೇ ಬಲವಂತಾಗಿ ಹಾಗೂ ಅಕ್ರಮವಾಗಿ ಚಿತೆಗೇರಿಸಿ ಸುಟ್ಟ ಘಟನೆಯನ್ನು ವರದಿ ಮಾಡಲು ಈ ಕಾಪನ್ ಹೊಸ ದಿಲ್ಲಿಯಿಂದ ವಾಹನವೊಂದರಲ್ಲಿ ಹೊರಡುತ್ತಾನೆ. 


ಕಾಪನ್ ಕೇರಳ ಮೂಲದ ಪತ್ರಕರ್ತ ಎನ್ನುವುದು ನಿಜವಾದರೂ ಆತ ವಾಸವಿದ್ದು ಕೆಲಸ ಮಾಡುತ್ತಿದ್ದುದು ಹೊಸ ದಿಲ್ಲಿಯಲ್ಲಿ. ದಿಲ್ಲಿಯಿಂದ ಮಲೆಯಾಳಂ ಭಾಷೆಯಲ್ಲಿ ಸುದ್ದಿ ಹಾಗೂ ಲೇಖನಗಳನ್ನು ಪ್ರಕಟಿಸುವ ವೆಬ್ ಪೋರ್ಟಲ್ ಈತನ ವರದಿಗಳನ್ನೂ ಪ್ರಕಟಿಸುತ್ತಿತ್ತು ಎಂದು ಹೇಳಲಾಗಿದೆ. ಅದಕ್ಕೂ ಮೊದಲು ಕಾಪನ್ ಪಿಎಫ್‌ಐ ಎಂದು ಗುರುತಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 2018ರಲ್ಲೇ ಮುದ್ರಣ ಸ್ಥಗಿತಗೊಳಿಸಿರುವ ‘ ತೇಜಸ್’ ಎಂಬ ಮ್ಯಾಗಜೀನ್ ವರದಿಗಾರನಾಗಿದ್ದ ಎನ್ನಲಾಗಿದೆ. ಈ ಪಿಎಫ್‌ಐ ಜೊತೆಗೆ ಸಿಎಫ್‌ಐ ಎಂಬ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೂಡಾ ಮುಸ್ಲಿಮರೇ ಸ್ಥಾಪಿಸಿರುವ ಕಾರಣದಿಂದಾಗಿ ಬಿಜೆಪಿ ಹಾಗೂ ಅದರ ಮಾತೃ ಸಂಘಟನೆ ಮತ್ತು ಸೋದರ ಸಂಘಟನೆಗಳ ಪಾಲಿಗೆ ದೇಶ ದ್ರೋಹಿ ಸಂಘಟನೆ ಅಥವಾ ಪಕ್ಷ ಎಂದು ಗುರುತಿಸಲಾಗಿದೆ ಮತ್ತು ಆಗಾಗ ಇವುಗಳನ್ನು ನಿಷೇಧಿಸಿ ಎಂಬ ಆಗ್ರಹಗಳು ಕೇಳಿ ಬರುತ್ತವೆ.


2020ರ ಅಕ್ಟೋಬರ್ ಐದರಂದು ವಾಹನವೊಂದರಲ್ಲಿ ಉತ್ತರ ಪ್ರದೇಶದ ಹಾಥರಾಸ್‌ಗೆ ಹೊರಟಿದ್ದ ಪತ್ರಕರ್ತ ಕಾಪನ್ ಮತ್ತು ಚಾಲಕನೂ ಸೇರಿದಂತೆ ಆ ವಾಹನದಲ್ಲಿದ್ದ ಮೂವರನ್ನು ಪೊಲೀಸರು ಬೆಳಿಗ್ಗೆ 10.25ರಲ್ಲಿ ಬಂಧಿಸುತ್ತಾರೆ, ಆದರೆ ಈ ನಾಲ್ವರನ್ನು ಆ ದಿನ ಸಂಜೆ 4.50ಕ್ಕೆ ಬಂಧಿಸಲಾಗಿದೆ ಎಂದು ಎಲ್ಲ ಪೊಲೀಸರಂತೆಯೇ ಅವರೂ ಸಹ ಸಮಯ ವಿಸ್ತರಿಸಿ ಹೇಳುತ್ತಾರೆ.


ಕಾಪನ್(41) ಜೊತೆ ಇದ್ದು ಬಂಧಿತರಾದ ಇತರ ಮೂವರೆಂದರೆ, ಮುಜಾಫರ್ ನಗರದ ವಿದ್ಯಾರ್ಥಿ ಅತೀಕ್ ಉರ್ ರೆಹಮಾನ್(28) ಹಾಗೂ ರಾಮಪುರದ ವಿದ್ಯಾರ್ಥಿ ಮಸೂರ್ ಅಹಮದ್(28) ಹಾಗೂ ವಾಹನ ಚಾಲಕನ ಹೆಸರು ಮಹಮದ್ ಆಲಂ(37) ಈತನೂ ರಾಮಪುರದವನೇ. 


ಪೊಲೀಸರು ಯಾರನ್ನಾದರೂ ಯಾವುದೇ ಆರೋಪದ ಮೇಲೆ ಬಂಧಿಸಿದರೂ, ಆ ಬಂಧನದ ಮಾಹಿತಿ ಸಾರ್ವಜನಿಕಗೊಳಿಸಬೇಕು, ಬಂಧಿಸಿದ 24 ಗಂಟೆಯೊಳಗಾಗಿ ಎಫ್‌ಐಆರ್‌ನೊಂದಿಗೆ ನ್ಯಾಯಾಲಯ ಅಥವಾ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಬೇಕು ಹಾಗೂ ಬಂಧಿತನಿಗೆ ವಕೀಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಆದರೆ ಬಹುಪಾಲು ಪ್ರಕರಣಗಳಲ್ಲಿ ಈ ಪ್ರೊಸೀಜರ್‌ನ್ನು ಪಾಲಿಸುವುದಿಲ್ಲ ಮತ್ತು ಹಲವು ಕಾರಣಗಳಿಂದಾಗಿ ಪಾಲಿಸಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಈ ಕಾಪನ್ ಪೊಲೀಸ್ ಬಂಧನದಿಂದ ನ್ಯಾಯಾಂಗ ವಶಕ್ಕೆ ಹೋಗಿ ಸರಿಸುಮಾರು ಒಂದೂವರೆ ತಿಂಗಳು ಅಂದರೆ 43 ದಿನಗಳಾದರೂ ವಕೀಲರನ್ನು ಭೇಟಿ ಮಾಡಲು ಅವಕಾಶವನ್ನೇ ಉತ್ತರ ಪ್ರದೇಶ ಪೊಲೀಸರು ಕೊಡುವುದಿಲ್ಲ. 


ಬಂಧಿತ ಪತ್ರಕರ್ತ ಸಿದ್ಧೀಕ್ ಕಾಪನ್ ದಿಲ್ಲಿಯಲ್ಲಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಈ ಕೆಯುಡಬ್ಲುö್ಯಜೆ ವಕೀಲರೂ ಆಗಿರುವ ವಿಲ್ಸ್ ಮ್ಯಾಥ್ಯೂಸ್ ಹಾಗೂ ಸಂಘವು ನಿರಂತರ 43 ದಿನ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಮಾಡಿದ ಪ್ರಯತ್ನದಿಂದಾಗಿ, ಹಲವು ಸಂಘಟನೆಗಳ ಸಾರ್ವಜನಿಕ ಪ್ರತಿಭಟನೆಗಳ ಒತ್ತಡದಿಂದಾಗಿ ಬಂಧಿತ ಕಾಪನ್‌ನನ್ನು ಭೇಟಿ ಮಾಡಲು ಅಲ್ಲ, ಕೇವಲ ಐದು ನಿಮಿಷದ ಅವಧಿಗೆ ದೂರವಾಣಿಯಲ್ಲಿ ಮಾತನಾಡಲು ಅವಕಾಶ ದೊರಕುತ್ತದೆ, ಅದೂ ಈ ಪ್ರಜಾಪ್ರಭುತ್ವೀಯ ಆಡಳಿತವಿರುವ ಇಂಡಿಯಾದಲ್ಲಿ. 


ಕೇರಳದ ಮಲ್ಲಪುರಂ ಮೂಲದ ಸಿದ್ದೀಕ್ ಕಾಪನ್‌ಗೆ ಮದುವೆ ಆಗಿ ಎರಡು ಗಂಡು ಹಾಗೂ ಒಂದು ಹೆಣ್ಣು ಒಟ್ಟು ಮೂರು ಮಕ್ಕಳಿದ್ದಾರೆ. ಈತನ ಮಗಳೇ ಕಳೆದ ತಿಂಗಳ ಹದಿನೈದರಂದು ಆಕೆಯ ಶಾಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವದಂದು ವಿಚಾರಣೆಯೂ ಇಲ್ಲದೇ ಜಾಮೀನು ಇಲ್ಲದೇ ಎರಡು ವರ್ಷಗಳಿಂದ ಜೈಲಿನಲ್ಲಿರುವ ಪತ್ರಕರ್ತನ ನತದೃಷ್ಟ ಮಗಳು ನಾನು ಎಂದು ಮನಮಿಡಿಯುವ ಭಾಷಣ ಮಾಡಿದ್ದು.


ಇಡೀ ದೇಶದಲ್ಲೇ ಅತ್ಯಂತ ಪ್ರಗತಿಪರ ಎಂದು ನಾವು ನೀವೆಲ್ಲ ಭಾವಿಸಿರುವ ಕೇರಳದ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಕಾಪನ್ ಪತ್ನಿ ಕಷ್ಟ ಹೇಳಿಕೊಂಡು ತನ್ನ ಪತಿಯ ಬಿಡುಗಡೆಗೆ ನೆರವು ನೀಡುವಂತೆ ಕೋರಿದಾಗ, ನೋಡಿ ನನ್ನ ಕಳಕಳಿ ವ್ಯಕ್ತಪಡಿಸಬಲ್ಲೆ ಆದರೆ ಆತನ ವಿರುದ್ಧ ಹೂಡಿರುವ ಮೊಕದ್ದಮೆಯ ಕಾರಣದಿಂದಾಗಿ ನಾನು ನೆರವಿಗೆ ಬರಲಾರೆ ಎಂದು ತಾರಮ್ಮಯ್ಯ ಆಡಿಸಿದ್ದರಂತೆ.


ಅತ್ಯಾಚಾರ ಘಟನೆಯೊಂದನ್ನು ವರದಿ ಮಾಡಲು ಹೋಗುತ್ತಿದ್ದ ಪತ್ರಕರ್ತನ ಮೇಲೆ ಜಾಮೀನು ವಿಚಾರಣೆಗೂ ಅವಕಾಶವಿರದ ಅದೆಂಥ ತೀವ್ರ ರೀತಿಯ ಆಪಾದನೆಗಳನ್ನು ಮಾಡಬಹುದು. ಅದೂ 5000 ಪುಟಗಳ ದೋಷಾರೋಪಣಾ ಪಟ್ಟಿ ಸಹಿತ ಎಂದರೆ ಗಾಬರಿ ಆಗಬಹುದೇನೋ ನೀವು. ಅದಾದ ಮೇಲೂ ಈ ಆದಿತ್ಯನಾಥನ ಸರಕಾರ ಮೊನ್ನೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ನೀಡಬಾರದೆಂದು ಕೋರಿ 395 ಪುಟಗಳ ಆಕ್ಷೇಪಣೆ ಸಲ್ಲಿಸಿತ್ತು ಮತ್ತು ಚಾರ್ಜ್ ಶೀಟ್ ಸಲ್ಲಿಸಿದ ನಂತರವೂ ತನಿಖೆ ಮುಂದುವರೆದಿದೆ ಎಂದು ಕಾಗಕ್ಕ ಗುಬ್ಬಕ್ಕನ ಕತೆಯನ್ನು ನ್ಯಾಯಾಲಯದ ಮುಂದೆ ಹೇಳುತ್ತಲೇ ಇತ್ತು.


ಕಾಪನ್ ಮತ್ತು ಜೊತೆಗಿದ್ದ ಮೂವರ ಮೇಲೆ ಐಪಿಸಿ ಸೆಕ್ಷನ್ 125ಎ ರನ್ವಯ ದೇಶದ್ರೋಹ, 153ಎ ರಡಿ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ವೈರತ್ವ ಸೃಷ್ಟಿಸುವ ಆರೋಪ, ಮತ್ತು ಸೆಕ್ಷನ್ 295ಎ ರಡಿ ಯಾವುದೇ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳನ್ನು ಕೆರಳಿಸಲು ಉದ್ದೇಶಪೂರ್ವಕ ಕೃತ್ಯಗಳನ್ನು ಎಸಗುವ ಆಪಾದನೆಗಳನ್ನು ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್ ಎಂಬ ಕರಾಳ ಕಾಯ್ದೆಯನ್ನು ಇವರ ಮೇಲೆ ಆಪಾದಿಸಿ ಮೊಕದ್ದಮೆ ದಾಖಲಿಸಲಾಗಿತ್ತು.


ಇವರಿದ್ದ ಕಾರಿನಲ್ಲಿ ಈ ಆಪಾದನೆಗಳನ್ನು ಸಮರ್ಥಿಸುವ ಕರಪತ್ರ ಹಾಗೂ ಮುದ್ರಿತ ದಾಖಲೆಗಳು ದೊರಕಿದವು. ಅಲ್ಲದೇ ವಿದೇಶಿ ಮೂಲಗಳಿಂದ ದೊಡ್ಡ ಮೊತ್ತದ ಹಣದ ವರ್ಗಾವಣೆ ನಡೆದಿದೆ ಎಂದೂ ಆಪಾದಿಸಲಾಗಿತ್ತು. ಕಾಪನ್ ಬ್ಯಾಂಕ್ ಖಾತೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರೂ. 25,000 ಹಣ ಇತ್ತು . ಈ ಮೊತ್ತವನ್ನು ಊರಲ್ಲಿ ಮನೆ ಕಟ್ಟಲೆಂದು ಇರಿಸಿದ್ದು ಹಾಗೂ ಅಕ್ಟೋಬರ್ ತಿಂಗಳಲ್ಲಿ ಗೆಳೆಯರಿಂದ 20,000 ರೂ ಸಾಲ ಪಡೆದಿದ್ದು ಆನಂತರ ಆ ಮೊತ್ತವನ್ನೂ ಹಿಂದಿರುಗಿಸಿದ ನಮೂದುಗಳಿದ್ದವು. ಇದನ್ನೇ ಅತಿ ದೊಡ್ಡ ಮೊತ್ತದ ಮನಿ ಲಾಂಡರಿAಗ್ ಎಂದಿದ್ದರು ಉತ್ತರ ಪ್ರದೇಶದ ಪೊಲೀಸರು. ಅವರಿಗೆ ಹಾಥರಾಸ್ ಅತ್ಯಾಚಾರ ಮತ್ತು ಅಕ್ರಮ ಅಂತ್ಯಕ್ರಿಯೆ ಸುದ್ದಿ ದೇಶದೆಲ್ಲೆಡೆ ಹರಡುವುದು ಬೇಕಿರಲಿಲ್ಲ ಮತ್ತು ಕಾಪನ್ ಮತ್ತು ಜೊತೆ ಇದ್ದವರು ಮುಸ್ಲಿಮರಾಗಿದ್ದುದು ಸಾಕು ಬೇಕಾಗುವಷ್ಟಾಗಿತ್ತು.


ಶಾಲೆಯ ಕಟ್ಟಡವೊಂದನ್ನು ಜೈಲಾಗಿ ಪರಿವರ್ತಿಸಿದ ಕಟ್ಟಡದಲ್ಲಿ ಕಾಪನ್ ಅನ್ನು ಇರಿಸಲಾಗಿತ್ತು. ಅಲ್ಲಿದ್ದ ಯಾವ ಖೈದಿಗಳಿಗೂ ಮಾಸ್ಕ್ ಅನ್ನೂ ಕೊಟ್ಟಿರಲಿಲ್ಲ. ಹೀಗಾಗಿ ಎರಡು ಸಲ ಕೋವಿಡ್ -19ರ ಸೋಂಕಿಗೆ ಒಳಗಾಗಿದ್ದ ಈತ. 700 ದಿನಗಳ ಕಾಲ ಜೈಲಿನಲ್ಲಿದ್ದ ಕಾಪನ್‌ಗೆ ಮರಣಶಯ್ಯೆಯಲ್ಲಿದ್ದ ತಾಯಿ ಖದೀಜಾ ಕುಟ್ಟಿಯನ್ನು ಭೇಟಿ ಮಾಡಲು 2021ರ ಫೆಬ್ರವರಿಯಲ್ಲಿ ಐದು ದಿನಗಳ ಅವಧಿಗೆ ಹೊರಗೆ ಕಳಿಸಿದ್ದೇ ಗ್ರೇಟ್ ಎನಿಸಿತು. ಪಾಪ ಅದೇ ಜೂನ್ ತಿಂಗಳಲ್ಲಿ ಆತನ ತಾಯಿ ಸತ್ತೇ ಹೋದರು, ಕೊನೆಯುಸಿರು ಎಳೆಯುವಾಗ ಎದುರು ಇರಲಿಲ್ಲ ಎಂದು ಕೊರಗಿ ಕಾಪನ್ ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಪತ್ನಿ ರೈಹನಾತ್ ಹೇಳುತ್ತಾರೆ. 


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಶುಕ್ರವಾರ ಸೆ.9ರಂದು ಸಿದ್ದೀಕ್ ಕಾಪನ್‌ಗೆ ಜಾಮೀನು ಮಂಜೂರು ಮಾಡುವ ಮೂಲಕ ನ್ಯಾಯಸಮ್ಮತ ಎನ್ನುವ ನುಡಿಗೆ ಅರ್ಥವನ್ನು ಒದಗಿಸಿದ್ದಾರೆ. 


ಕಾಪನ್ ಜಾಮೀನು ಕೋರಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಪರ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ , ನ್ಯಾಯಮೂರ್ತಿಗಳ ಮುಂದೆ ಕಾಪನ್‌ನಿಂದ ವಶಪಡಿಸಿಕೊಂಡದ್ದೆನ್ನಲಾದ ಒಂದು ಗುರುತಿನ ಪತ್ರ ಹಾಗೂ ಕೆಲವು ಪಿಎಫ್‌ಐ ಕರಪತ್ರಗಳನ್ನು ಹಾಜರುಪಡಿಸಿ, ಇವೇ ಆತನ ಹಿಂಸಾಚಾರ ಸೃಷ್ಟಿಸುವ ಟೂಲ್ ಕಿಟ್ ಎನ್ನುತ್ತಾರೆ.” ಹಾಥರಾಸ್ ಸಂತ್ರಸ್ತೆಗೆ ನ್ಯಾಯ ಒದಗಿಸಿ’ ಎಂಬ ಶೀರ್ಷಿಕೆಯ ಕರಪತ್ರಗಳು ಅದು ಹೇಗೆ ಹಿಂಸೆಗೆ ಪ್ರಚೋದನೆ ನೀಡುತ್ತವೆ ಎಂದು ಕಾಪನ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಾಲಯದ ಗಮನವನ್ನು ಸೆಳೆಯುತ್ತಾರೆ. 


ಉತ್ತರ ಪ್ರದೇಶ ಸರ್ಕಾರದ ಆಧಾರ ರಹಿತ ವಾದವನ್ನು ಒಪ್ಪದೇ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು, “ ನೋಡಿ, ಪ್ರತಿ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿ ಇದೆ, ಆದ್ದರಿಂದ ಸಂತ್ರಸ್ತರಿಗೆ ನ್ಯಾಯದ ಅವಶ್ಯಕತೆ ಎಂದು ಪರಿಗಣಿಸಿ ವಿಚಾರ ಮಂಡಿಸುತ್ತಾರೆ. ಹಾಗೂ ದನಿ ಎತ್ತಲು ಹೊರಡುತ್ತಾರೆ. ಇದು ಕಾನೂನಿನ ಕಣ್ಣಲ್ಲಿ ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿ ಕಾಪನ್‌ಗೆ ಜಾಮೀನು ಮಂಜೂರು ಮಾಡುತ್ತಾರೆ. ಇಂಥ ತೀರ್ಪುಗಳು ಈ ದೇಶದಲ್ಲಿ ಹಬ್ಬುತ್ತಿರುವ ಕರಾಳ ಕಗ್ಗತ್ತಲಲ್ಲಿ ಎಲ್ಲೋ ದೂರದಲ್ಲಿ ಬೆಳಕಿದೆ ಎನ್ನುವ ಆಸೆಯನ್ನು ಹುಟ್ಟಿಸುತ್ತವೆ. 


ಚಿತ್ರಕೃಪೆ: ಲೈವ್ ಲಾ . ಇನ್