ನ್ಯಾಶನಲ್ ಹೆರಾಲ್ಡ್ –ಐಜೆಎಲ್-ವೈಐಎಲ್ ಕಾಂಗ್ರೆಸ್ ಕುಟುಂಬದ ಸ್ವಯಂಕೃತ ಅಪರಾಧವೇ ?!
ನ್ಯಾಶನಲ್ ಹೆರಾಲ್ಡ್ –ಐಜೆಎಲ್-ವೈಐಎಲ್ ಕಾಂಗ್ರೆಸ್ ಕುಟುಂಬದ ಸ್ವಯಂಕೃತ ಅಪರಾಧವೇ ?!
ನ್ಯಾಶನಲ್ ಹೆರಾಲ್ಡ್ –ಐಜೆಎಲ್-ವೈಐಎಲ್
ಕಾಂಗ್ರೆಸ್ ಕುಟುಂಬದ ಸ್ವಯಂಕೃತ ಅಪರಾಧವೇ ?!
++++++++++++++++++++++++
ಕುಚ್ಚಂಗಿ ಪ್ರಸನ್ನ,
ಸಂಪಾದಕ, ‘ಬೆವರ ಹನಿ’ ದಿನಪತ್ರಿಕೆ
+++++++++++++++++++++++++
ನ್ಯಾಶನಲ್ ಹೆರಾಲ್ಡ್ ಪತ್ರಿಕೆ- ನೆಹರೂ- ಸೋನಿಯಾ ಗಾಂಧಿ- ರಾಹುಲ್ ಗಾಂಧಿ- ಇಡಿ – ಐಟಿ- ಸಾವಿರಾರು ಕೋಟಿ ಆಸ್ತಿ -ಹಣ ವರ್ಗಾವಣೆ ಅಕ್ರಮ - ಕಾಂಗ್ರೆಸ್ ಪ್ರತಿಭಟನೆ- ಬಿಜೆಪಿಗರ ವ್ಯಂಗ್ಯ- ನ್ಯಾಯಾಲಯಗಳ ವಿಚಾರಣೆ- ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಟ್ರಯಲ್- ಈ ಪದಗಳನ್ನು ಚುಕ್ಕಿ ಅಟದಂತೆ ಒಂದಕ್ಕೊಂದು ಸರಿಯಾಗಿ ಕೂಡಿಸಿದಲ್ಲಿ 11 ವರ್ಷಗಳಾದರೂ ಇತ್ಯರ್ಥವಾಗದೇ ಇರುವ ಹಾಗೂ ದೇಶದ ಮಾಧ್ಯಮಗಳ ಸದ್ಯದ ಕೇಂದ್ರ ಬಿಂದುವಾಗಿರುವ ಮತ್ತು ವಾರದಿಂದ ಪಾರ್ಲಿಮೆಂಟ್ ನ ಸುಗಮ ಕಲಾಪಗಳಿಗೆ ಅಡ್ಡಿಯಾಗಿರುವ ಪ್ರಕರಣವೊಂದು ನಿಮಗೆ ಅರ್ಥವಾದೀತು.
ನ್ಯಾಶನಲ್ ಹೆರಾಲ್ಡ್ ಎಂಬುದು ರಾಹುಲ್ ಗಾಂಧಿಯ ಮುತ್ತಜ್ಜ, ಸ್ವಾತಂತ್ರ್ಯ ಹೋರಾಟದ ಪ್ರಭಾವಿ ನಾಯಕ,, ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ದಿವಂಗತ ಜವಹರಲಾಲ್ ನೆಹರು, ದಿನಾಂಕ 9.9.1938ರಂದು ಲಖ್ನೋ ಪಟ್ಟಣದ ನೆಹರೂ ಭವನದಲ್ಲಿ ಆರಂಭಿಸಿದ ಇಂಗ್ಲಿಷ್ ದಿನಪತ್ರಿಕೆ.
ಈ ದಿನಪತ್ರಿಕೆಯ ಜೊತೆಯಲ್ಲೇ ನವಜೀವನ್ ಎಂಬ ಹಿಂದಿ ಹಾಗೂ ಖ್ವಾಮಿ ಆವಾಜ್ ಎಂಬ ಉರ್ದು ದಿನಪತ್ರಿಕೆಯನ್ನೂ ಪ್ರಕಟಿಸಲು ಆರಂಭಿಸುತ್ತಾರೆ. ಈ ಪ್ರಕಟಣೆಗಳು ಸ್ವಾತಂತ್ರ್ಯ ಹೋರಾಟದ ಪರ, ಬ್ರಿಟಿಷ್ ಆಡಳಿತದ ವಿರುದ್ಧ ರಾಷ್ಟ್ರೀಯವಾದಿ ಪತ್ರಿಕೆಗಳಾಗಿ ಜನಮನ್ನಣೆ ಗಳಿಸುತ್ತವೆ.
ನೆಹರೂ ಪ್ರಧಾನ ಮಂತ್ರಿಯಾಗಿ ನೇಮಕಗೊಳ್ಳುವವರೆಗೂ ಈ ಪತ್ರಿಕೆಯ ಸಂಪಾದಕ ಆಗಿದ್ದು, ನಂತರ ಕೆ.ರಾಮರಾವ್ ಸಂಪಾದಕರಾಗಿ ನೇಮಕಗೊಳ್ಳುತ್ತಾರೆ.
1942ರಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಆಂದೋಲನ ಆರಂಭಿಸಿದಾಗ ಬ್ರಿಟಿಷ್ ಆಡಳಿತ ಈ ದಿನಪತ್ರಿಕೆಯನ್ನು ನಿಷೇಧಿಸುತ್ತದೆ, ಪರಿಣಾಮ ಮೂರು ವರ್ಷ ಪತ್ರಿಕೆ ಪ್ರಕಟವಾಗುವುದಿಲ್ಲ. ಸ್ವಾತಂತ್ರ್ಯ ನಂತರ ಈ ನ್ಯಾಶನಲ್ ಹೆರಾಲ್ಡ್ ಆಡಳಿತ ಪಕ್ಷ ಕಾಂಗ್ರೆಸ್‌ನ ಮುಖವಾಣಿಯಾಗಿ ಮಾರ್ಪಡುತ್ತದೆ.
ನೆಹರೂ ಅವರ ಅಳಿಯ (ಇಂದಿರಾ ಗಾಂಧಿ ಪತಿ) ಸಂಸದ ಫಿರೋಜ್ ಗಾಂಧಿ 1946ರಿಂದ 50ರವರೆಗೆ ನ್ಯಾಶನಲ್ ಹೆರಾಲ್ಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಾರೆ.
1968ರಲ್ಲಿ ನ್ಯಾಶನಲ್ ಹೆರಾಲ್ಡ್ ನ ದಿಲ್ಲಿ ಆವೃತ್ತಿ ಆರಂಭಗೊಳ್ಳುತ್ತದೆ. ಹೊಸ ದಿಲ್ಲಿಯ ಬಹಾದೂರ್ ಶಾ ಜಫರ್ ಮಾರ್ಗ(ಫ್ಲೀಟ್ ಸ್ಟ್ರೀಟ್) ದಲ್ಲಿ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದಿಂದ ಲೀಸ್‌ಗೆ ಪಡೆದ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಪತ್ರಿಕೆಯ ಕಾರ್ಯಾಲಯ ಆರಂಭಗೊಳ್ಳುತ್ತದೆ. 70 ವರ್ಷ ಪ್ರಕಟವಾದ ನ್ಯಾಶನಲ್ ಹೆರಾಲ್ಡ್ ನ ಮುದ್ರಣ 01.04.2008ರಂದು ಸ್ಥಗಿತಗೊಳ್ಳುತ್ತದೆ. ಆದರೆ 14.11.2016ರಿಂದ ಈ ಪತ್ರಿಕೆಯ ಡಿಜಿಟಲ್ ಎಡಿಶನ್ ಎಂದರೆ ವೆಬ್ ಸೈಟ್ ಪ್ರಕಟಣೆ ಪ್ರಾರಂಭಗೊಂಡಿದ್ದು ಈ ಮೂಲಕ ನ್ಯಾಶನಲ್ ಹೆರಾಲ್ಡ್ ಕಾಂಗ್ರೆಸ್ ಮುಖವಾಣಿಯಾಗಿ ಮುಂದುವರೆದಿದೆ.
******
‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’
ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯನ್ನು ಮತ್ತದರ ಹಿಂದಿ ಹಾಗೂ ಉರ್ದು ಆವೃತ್ತಿಗಳನ್ನು ಹೊರತರಲು ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ (ಎಜೆಎಲ್)ಎಂಬ ಸಾರ್ವಜನಿಕ ಕಂಪನಿಯನ್ನು 20.11.1937ರಂದು ನೆಹರು ಸ್ಥಾಪಿಸುತ್ತಾರೆ. 5000 ಸ್ವಾತಂತ್ರ್ಯ ಹೋರಾಟಗಾರರು 100 ರೂಗಳ 2000 ಆದ್ಯತಾ ಶೇರು ಹಾಗೂ 10 ರೂ ಮುಖಬೆಲೆಯ 30 ಸಾವಿರ ಶೇರುಗಳ ಮೂಲಕ ರೂ. 5 ಲಕ್ಷವನ್ನು ಈ ಸಂಸ್ಥೆಗೆ ಬಂಡವಾಳ ರೂಪದಲ್ಲಿ ಹೂಡುತ್ತಾರೆ.
ಎಜೆಎಲ್‌ನ ಎಂಓಎನಲ್ಲಿ ನೆಹರೂ ಜೊತೆಗೆ ಅಂದಿನ ಹೆಸರಾಂತ ವ್ಯಕ್ತಿಗಳಾಗಿದ್ದ ಪುರುಷೋತ್ತಮ ದಾಸ್ ಟಂಡನ್, ಆಚಾರ್ಯ ನರೇಂದ್ರದೇವ, ಕೈಲಾಶನಾಥ, ರಫಿ ಅಹಮದ್ ಖಿದ್ವಾಯಿ ಹಾಗೂ ಗೋವಿಂದ ವಲ್ಲಭ ಪಂತ್ ಸಹಿದಾರರಾಗಿದ್ದರು. ಎಜೆಎಲ್ ಆರಂಭದಲ್ಲಿ ಮತ್ತು ಎಂದಿಗೂ ನೆಹರೂ ಅವರ ಸ್ವಂತ ಆಸ್ತಿಯಾಗಿರಲಿಲ್ಲ ಎಂಬುದು ನೆನಪಿನಲ್ಲಿ ಇರಲಿ.
ಪತ್ರಿಕೆಗಳನ್ನು ಪ್ರಕಟಿಸುವ ಹೊರತಾಗಿ ಇನ್ನಿತರ ಯಾವ ವ್ಯವಹಾರವನ್ನೂ ಈ ಎಜೆಎಲ್ ಮಾಡಲಿಲ್ಲ ಹಾಗೂ ಈ ಕಂಪನಿ ಸಲ್ಲಿಸಿದ ದಾಖಲೆಗಳ ಪ್ರಕಾರ 29.9.2010ರಂದು ಒಟ್ಟು 1057 ಶೇರುದಾರರು ಎಜೆಎಲ್‌ನಲ್ಲಿದ್ದರು. ಇವರಲ್ಲಿ ಹಿಂದಿನ ಕಾನೂನು ಸಚಿವ ಶಾಂತಿಭೂಷಣ್ ಮಗ ಹೆಸರಾಂತ ನ್ಯಾಯವಾದಿ ಪ್ರಶಾಂತಿ ಭೂಷಣ್ ಹಾಗೂ ಖಟ್ಜು ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಸಹಾ ಸೇರಿದ್ದಾರೆ. ಎಜೆಎಲ್‌ನಲ್ಲಿ ತಮ್ಮ ಅಪ್ಪಂದಿರು ಹೊಂದಿದ್ದ ಶೇರುಗಳನ್ನು ಯಂಗ್ ಇಂಡಿಯನ್ ಲಿಮಿಟೆಡ್ ಕಂಪನಿಗೆ ವರ್ಗಾಯಿಸುವ ಮುನ್ನ ಕಾನೂನು ಬದ್ಧ ವಾರಸುದಾರರಾದ ನಮಗೆ ನೋಟೀಸ್ ನೀಡಿಲ್ಲ ಎಂದು ಹಲವು ಶೇರುದಾರರು ನ್ಯಾಯಾಲಯ ಪ್ರಕರಣ ಆರಂಭಗೊಂಡ ಬಳಿಕ ದೂರಿದ್ದಾರೆ.
ಕಾಂಗ್ರೆಸ್ ಮುಖಂಡ ಮೋತಿಲಾಲ್ ವೋರಾ 22.03.2002ರಿಂದ ಎಜೆಎಲ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು.
ಇವರು ನಷ್ಟದಲ್ಲಿದ್ದ ಎಜೆಎಲ್‌ನ ಹೋಲ್ಡಿಂಗ್ಸ್ ಗಳನ್ನು ಡಿಸೆಂಬರ್ 2010ರಲ್ಲಿ ಸೋನಿಯಾ ಹಾಗೂ ರಾಹುಲ್ ತಲಾ 38% ಒಟ್ಟು 76 % ಶೇರುಗಳನ್ನು ಹೊಂದಿದ್ದ ಯಂಗ್ ಇಂಡಿಯನ್ ಲಿಮಿಟೆಡ್ ಕಂಪನಿಗೆ ವರ್ಗಾವಣೆ ಮಾಡುತ್ತಾರೆ. ಎಜೆಎಲ್‌ನ ಸ್ಥಿರಾಸ್ತಿಗಳು ಹೊಸ ದಿಲ್ಲಿಯ ಆರು ಮಹಡಿಯ 10,000 ಚದರಡಿಯ ಹೆರಾಲ್ಡ್ ಹೌಸ್ ಮತ್ತು ಹೊಸ ದಿಲ್ಲಿ, ಲಖ್ನೋ, ಭೂಪಾಲ್, ಮುಂಬೈ, ಇಂದೋರ್, ಪಟ್ನಾ ಹಾಗೂ ಪಂಚಕುಳದಲ್ಲಿವೆ.
ಎಜೆಎಲ್ ಕೂಡಾ ಅಸ್ತಿತ್ವ ಉಳಿಸಿಕೊಂಡಿದ್ದು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಪವನ ಕುಮಾರ್ ಬನ್ಸಾಲ್(23.02.2021ರಿಂದ), ಸುಮನ್ ದುಬೆ( 21.12.2010), ಅರವಿಂದ ಮಾಯಾರಾಂ(20.5.2022), ಸ್ಯಾಮ್ ಪಿತ್ರೋಡಾ (21.12.2021), ಮಲ್ಲಿಕಾರ್ಜುನ ಖರ್ಗೆ ( 23.02.2021) ನಿರ್ದೇಶಕರಾಗಿ ಹಾಗೂ ಪ್ರಶಾಂತೋ ಚಂದ್ರಸೇನ್(20.05.2022) ಹೆಚ್ಚುವರಿ ನಿರ್ದೇಶಕರಾಗಿ ಇರುವುದಾಗಿಯೂ 10.09.2021ರಂದು ವಾರ್ಷಿಕ ಮಹಾ ಸಭೆ ನಡೆದಿರುವುದಾಗಿಯೂ ಮಾಹಿತಿ ಇದೆ.
******
‘ಯಂಗ್ ಇಂಡಿಯನ್ ಕಂಪನಿ ಲಿ’
ಯಂಗ್ ಇಂಡಿಯನ್, ಮೇಲೆ ವಿವರಿಸಿದ ಎಜೆಎಲ್‌ನ ಕಚೇರಿ ವಿಳಾಸದಲ್ಲೇ 23.11.2010ರಂದು ಸ್ಥಾಪಿತವಾದ ಖಾಸಗಿ ಕಂಪನಿ. 13.12.2010ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹಾಗೂ 22.01.2011ರಂದು ಸೋನಿಯಾ ಗಾಂಧಿ ಅವರನ್ನು ಈ ಕಂಪನಿಯ ನಿರ್ದೇಶಕರನ್ನಾಗಿ ಉಳಿದವರ ಶೇರುಗಳನ್ನು ಈ ಇಬ್ಬರಿಗೆ ಮಾರಾಟ ಮಾಡಿ ಸೇರ್ಪಡೆ ಮಾಡಲಾಗುತ್ತದೆ. ಈ ಇಬ್ಬರ ಒಟ್ಟು ಶೇರು 76 % ಆದರೆ ಉಳಿದ 24% ಶೇರು ನಿರ್ದೇಶಕರಾದ ಕಾಂಗ್ರೆಸ್ ಮುಖಂಡರೂ ಆದ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫರ್ನಾಂಡಿಸ್ ಅವರದಾಗಿತ್ತು. (ಮೋತಿಲಾಲ್ ವೋರಾ ಕೋವಿಡ್‌ನಿಂದಾಗಿ 22.12.2020ರಂದು ನಿಧನರಾದರು ಹಾಗೂ ಆಸ್ಕರ್ ಫರ್ನಾಂಡಿಸ್ ದೀರ್ಘ ಕಾಲಿಕ ಅನಾರೋಗ್ಯದಿಂದಾಗಿ 23.09.2021ರಂದು ನಿಧನರಾದರು)
ಇದು ಲಾಭ ಮಾಡುವ ಉದ್ದೇಶವಿಲ್ಲದ, ಕಂಪನಿ ಕಾಯ್ದೆಯ ಸೆಕ್ಷನ್ 25ರಡಿ ನೊಂದಾಯಿಸಲಾದ ಈ ಕಂಪನಿಯ ಯಾವ ನಿರ್ದೇಶಕರೂ ಲಾಭಾಂಶವನ್ನು ಪಡೆಯಲಾಗದೇ ಇರುವ ರೀತಿಯ ಸಂಸ್ಥೆಯಾಗಿದೆ ಎಂದು ಪದೇ ಪದೇ ಹೇಳಲಾಗುತ್ತಿದೆ.
ಉದ್ಯಮಿ ಸತ್ಯನ್ ಗಂಗಾರಾಮ್ ಪಿತ್ರೋಡಾ (ಸ್ಯಾಮ್ ಪಿತ್ರೋಡಾ) ಹಾಗೂ ಪತ್ರಕರ್ತ ಸುಮನ್ ದುಬೆ ಸ್ಥಾಪಿತ ದಿನಾಂಕದಿಂದ ಹಾಗೂ ಪವನ ಕುಮಾರ್ ಬನ್ಸಾಲ್ 27.01.2021ರಿಂದ ನಿರ್ದೇಶಕರಾಗಿ ಹಾಗೂ 01.12.2021ರಿಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಚ್ಚುವರಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಪ್ರವೇಶ
ಯಾರ ಅರಿವಿಗೂ ಬಾರದೇ ಜರುಗಿ ಹೋಗುತ್ತಿದ್ದ ಹಗರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಇಂಡಿಯಾದ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುವ ರಾಜಕಾರಣಿ, ಮಾಜಿ ಮಂತ್ರಿ, ಮಾಜಿ ಸಂಸದ, ಅಂಕಿ ಅಂಶ ತಜ್ಞ ಹಾಗೂ ಗಣಿತದ ಪ್ರೊಫೆಸರ್ ಸುಬ್ರಮಣಿಯನ್ ಸ್ವಾಮಿಯವರಿಂದಾಗಿ ಆದಾಯ ತೆರಿಗೆ ಹಾಗೂ ಇದೀಗ ಜಾರಿ ನಿರ್ದೇಶನಾಲಯಗಳು ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಾಲಿನ ವಿಲನ್ ಗಳಾಗಿ ಪರಿಣಮಿಸಿವೆ.
2008ರಲ್ಲಿ ಎಜೆಎಲ್‌ನ ಈಕ್ವಿಟಿ ಶೇರುಗಳನ್ನು ಯಂಗ್ ಇಂಡಿಯನ್ ಕಂಪನಿಗೆ ವರ್ಗಾವಣೆ ಮಾಡಿದ ನಾಲ್ಕು ವರ್ಷಗಳ ನಂತರ, ಸುಬ್ರಮಣಿಯನ್ ಸ್ವಾಮಿ 1.11.2012ರಂದು ಈ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಸುಮಾರು 2000 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಸುವ ಉದ್ದೇಶದಿಂದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಜೆಎಲ್‌ನ ಆಸ್ತಿಗಳನ್ನು 23.11.2010ರಂದು ನೊಂದಾಯಿಸಲಾದ ತಮ್ಮ ಸ್ವಂತದ ಖಾಸಗಿ ಕಂಪನಿ ಯಂಗ್ ಇಂಡಿಯನ್ ಕಂಪನಿ ಲಿ . ಹೆಸರಿಗೆ ವಂಚನೆ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸುತ್ತಾರೆ. ನ್ಯಾಯಾಲಯ ಈ ಪ್ರಕರಣದಲ್ಲಿ ಸಾರ್ವಜನಿಕ ಹಣ ಒಳಗೊಂಡಿರುವ ಕಾರಣ ಸ್ವಾಮಿ ಅರ್ಜಿ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟು ಪ್ರಕರಣದ ವಿಚಾರಣೆ ಆರಂಭಿಸುತ್ತದೆ.
ಅಲ್ಲದೇ 26.02.2011ರಂದು ಇದೇ ಎಜೆಎಲ್ ಕಾಂಗ್ರೆಸ್‌ನಿಂದ ರೂ. 90 ಕೋಟಿಯಷ್ಟು ಪಡೆದಿದ್ದ ಬೃಹತ್ ಮೊತ್ತದ ಬಡ್ಡಿ ರಹಿತ ಹಾಗೂ ಖಾತರಿಯಿಲ್ಲದ ಸಾಲವನ್ನು ರೂ. 10ರ ಮುಖಬೆಲೆಯ ಶೇರುಗಳ ರೂಪದಲ್ಲಿ ಯಂಗ್ ಇಂಡಿಯನ್‌ಗೆ ವರ್ಗಾಯಿಸಲು ಅನುಮೋದನೆ ನೀಡಿದೆ.ಇದು ಅಕ್ರಮ ಅಲ್ಲದೇ ಯಾವುದೇ ರಾಜಕೀಯ ಪಕ್ಷವು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಟಿ ಮತ್ತು 13 ಎ ಗಳ ಉಲ್ಲಂಘನೆ ಆಗುತ್ತದೆ, ಇದು ಕಾನೂನು ಬಾಹಿರ ಎಂದು ವಾದಿಸುತ್ತಾರೆ ಸ್ವಾಮಿ.
ಇಲ್ಲ ಇದು ಪತ್ರಿಕೆ ಪ್ರಕಟಿಸಲು ಮಾತ್ರ ಅನ್ಯ ಉದ್ದೇಶಕ್ಕಲ್ಲ ಎಂದು ಕಾಂಗ್ರೆಸ್ ಸ್ಪಷ್ಟ ಪಡಿಸುತ್ತದೆ.
ಜನ ಪ್ರತಿನಿಧಿ ಕಾಯ್ದೆ 29 ಬಿ/ಸಿ ಅನ್ವಯ ಯಾವುದೇ ರಾಜಕೀಯ ಪಕ್ಷ ತನ್ನ ನಿಧಿಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶವಿದೆ ಎಂದು ಚುನಾವಣಾ ಆಯೋಗ ಸ್ವಾಮಿಯ ಅರ್ಜಿಯನ್ನು ವಜಾ ಮಾಡಿದೆ.
26.06.2014ರಂದು ಮೆಟ್ರೊಪಾಲಿಟನ್ ನ್ಯಾಯಾಧೀಶೆ ಗೋಮತಿ ಮನೋಚಾ ಯಂಗ್ ಇಂಡಿಯನ್ ಲಿಮಿಟೆಡ್(ವೈಐಎಲ್) ನ ನಿರ್ದೇಶಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ ಹಾಗೂ ಸ್ಯಾಮ್ ಪಿತ್ರೋಡಾ ಅವರನ್ನು 7.08.2014ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿ, ಈವರೆಗಿನ ಸಾಕ್ಷ್ಯಾಧಾರಗಳ ಪ್ರಕಾರ ರೂ.2000 ಕೋಟಿ ಮೌಲ್ಯದ ಐಜೆಎಲ್ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಸಲುವಾಗಿಯೇ ವೈಐಎಲ್ ನೊಂದಾಯಿಸಲಾಗಿದೆ ಎನ್ನುತ್ತಾರೆ.
ಪ್ರತಿವಾದಿಗಳು ದಿಲ್ಲಿ ನ್ಯಾಯಾಲಯದ ಸಮನ್ಸ್ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
7.12.2015ರಂದು ದಿಲ್ಲಿ ಹೈಕೋರ್ಟ್ ಇವರ ಅಪೀಲ್‌ಗಳನ್ನು ವಜಾ ಮಾಡಿ ದಿಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಎರಡು ದಿನಗಳ ಅವಕಾಶ ನೀಡುತ್ತದೆ.
ಎಜೆಎಲ್‌ಗೆ ರೂ.90 ಕೋಟಿ ಸಾಲ ನೀಡಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾನ್ಯತೆ ರದ್ದುಗೊಳಿಸಬೇಕೆಂದು ಸ್ವಾಮಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ, ಚುನಾವಣಾ ಆಯೋಗವು ಈ ಕುರಿತು 17.11.2012ರಂದು ವಿಚಾರಣೆಗೆ ಆದೇಶಿಸುತ್ತದೆ.
ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ತಾನು ನೇರವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲವಾದ್ದರಿಂದ ದಿಲ್ಲಿ ಹೈಕೋಟ್ ನಲ್ಲಿ ವೇಗ ವಿಚಾರಣೆ ಮುಂದುವರೆಸಿ ಎಂದು 27.01.2015ರಂದು ಆದೇಶಿಸುತ್ತದೆ. ಹಾಗೂ 12.02.2016ರಂದು ತೀರ್ಪು ನೀಡಿ ಈ ಐವರೂ ಅಪಾದಿತರ ಖುದ್ದು ಹಾಜರಿಗೆ ವಿನಾಯಿತಿ ನೀಡುತ್ತದೆ.
ಸ್ವಾಮಿಯ ಅರ್ಜಿ ಮೇರೆಗೆ ಕಾಂಗ್ರೆಸ್ ಹಾಗೂ ಯಂಗ್ ಇಂಡಿಯನ್‌ನ 2010ರಿಂದ 13ರವರೆಗಿನ ಬ್ಯಾಲೆನ್ಸ್ ಶೀಟ್‌ಗಳನ್ನು ಪರಿಶೀಲಿಸಬೇಕು ಎಂದು ದಿಲ್ಲಿ ಮೆಟ್ರೋಪಾಲಿಟನ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ದಿಲ್ಲಿ ಹೈಕೋರ್ಟ್ 12.06.2016ರಂದು ರದ್ದುಮಾಡಿ, ವಿಚಾರಣೆಯ ಮುಂದಿನ ದಿನಾಂಕವನ್ನು ನಿಗದಿಪಡಿಸುತ್ತದೆ. ಪ್ರಕರಣ ಸದ್ಯ ಅಲ್ಲಿ ಬಾಕಿ ಇದೆ.
******
ಇತ್ತ ಇಡಿ ಎಂದೇ ಹೆಚ್ಚು ಗುರುತಾಗಿರುವ ಆರ್ಥಿಕ ಅವ್ಯವಹಾರಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ 01.08.2014ರಂದು ಈ ವಹಿವಾಟಿನಲ್ಲಿ ಹಣದ ಅಕ್ರಮ ವರ್ಗಾವಣೆ ಆಗಿರುವ ಕುರಿತು ತನಿಖೆ ಆರಂಭಿಸುತ್ತದೆ. ಮತ್ತು 18.09.2015ರಂದು ತನಿಖೆ ಮರು ಆರಂಭಿಸಿರುವುದಾಗಿ ಇಡಿ ಘೋಷಿಸುತ್ತದೆ.
ಇಡಿಯನ್ನು ಕೈಗೊಂಬೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸುವ ಸಲುವಾಗಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ನಾಯಕತ್ವದ ಕೇಂದ್ರ ಸರ್ಕಾರದ ವಿರುದ್ಧ ದೂರುತ್ತಲೇ ನಿರಂತರ ಸಾರ್ವಜನಿಕ ಪ್ರತಿಭಟನೆಗಳನ್ನು ನಡೆಸುತ್ತಿರುವಾಗಲೇ, ಇಡಿ ರಾಹುಲ್ ಹಾಗೂ ಪ್ರಿಯಾಂಕ ಅವರ ವಿಚಾರಣೆ ಮುಗಿಸಿದ್ದು ಇದೀಗ ಶನಿವಾರ ಸೋನಿಯಾ ಗಾಂಧಿ ಅವರ ಪ್ರಾಥಮಿಕ ಪ್ರಶ್ನೋತ್ತರಗಳನ್ನೂ ಮಾಡಿ ಮುಂದಿನ ದಿನಾಂಕ ನಿಗದಿ ಪಡಿಸಿದೆ.
ಕಾಂಗ್ರೆಸ್ ಐಜೆಎಲ್‌ಗೆ ಪಾವತಿಸಿರುವ ಬಡ್ಡಿ ರಹಿತ ಹಾಗೂ ಖಾತರಿ ರಹಿತ ರೂ. 90ಕೋಟಿ 21 ಲಕ್ಷ ರೂಪಾಯಿ ಕೈ ಸಾಲವೇ ಇಡಿ ತನಿಖೆಯ ಕೇಂದ್ರ ಗಮನ ಎನ್ನಲಾಗಿದೆ.
ಇಷ್ಟು ದೊಡ್ಡ ಮೊತ್ತವನ್ನು ಕಾಂಗ್ರೆಸ್ ಐಜೆಎಲ್‌ಗೆ ಒಂದೇ ಕಂತಿನಲ್ಲಿ ಪಾವತಿ ಮಾಡಿಲ್ಲ, 7.4.2002ರಿಂದ ಆರಂಭಿಸಿ, ಸಿಬ್ಬಂದಿ ವೇತನ, ಭತ್ಯೆ, ನಿವೃತ್ತಿ ಸೌಲಭ್ಯ ಇತ್ಯಾದಿ ಪಾವತಿಗೆಂದು ರೂ 2 ಲಕ್ಷ, 5 ಲಕ್ಷದಿಂದ ಆರಂಭಿಸಿ ಸಣ್ಣ ದೊಡ್ಡ ಕಂತುಗಳಲ್ಲಿ ಒಟ್ಟು 90 ಕೋಟಿ 21 ಲಕ್ಷ ರೂ ಪಾವತಿ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.
ಇಲ್ಲ ಇದೆಲ್ಲ ದಾಖಲೆಗಳಲ್ಲಿ ಮಾತ್ರ ಎಂಬ ಆರೋಪ ಇಡಿಯದು ಎನ್ನಲಾಗಿದೆ. ಆದರೆ ಈ ಬೃಹತ್ ಮೊತ್ತವನ್ನು ಕಾಂಗ್ರೆಸ್‌ಗೆ ಐಜೆಎಲ್ ಹಿಂದಿರುಗಿಸಬೇಡವೇ ಎಂಬ ಪ್ರಶ್ನೆಗೆ, ಇಲ್ಲ ಇಲ್ಲ ಈ ಸಾಲವು ರೂ. 10ರ ಈಕ್ವಿಟಿ ಶೇರುಗಳ ರೂಪದಲ್ಲಿ ಐವೈಎಲ್‌ಗೆ ವರ್ಗಾವಣೆ ಆಗಿಬಿಟ್ಟಿದೆಯಲ್ಲ ಎನ್ನುತ್ತದೆ ಕಾಂಗ್ರೆಸ್ . ಹೀಗೆ ಐಜೆಎಲ್ ಆಸ್ತಿ ವರ್ಗಾವಣೆ ಮಾಡಿಕೊಳ್ಳಲೆಂದೇ ಸಾಲ ನೀಡಿದ ದಾಖಲೆಗಳನ್ನು ಸೃಜಿಸಲಾಗಿದೆ ಎನ್ನುತ್ತದೆಯಂತೆ ಇಡಿ.
ನವೆಂಬರ್ 2010ರಲ್ಲಿ ಯಂಗ್ ಇಂಡಿಯನ್ ಕಂಪನಿ ಸ್ಥಾಪನೆ ಆಗುತ್ತದೆ. ನೊಂದಣಿಯಾದ ಒಂದೇ ತಿಂಗಳಲ್ಲಿ ಕೇವಲ ರೂ. 50 ಲಕ್ಷವನ್ನು ಐಜೆಎಲ್‌ಗೆ ಪಾವತಿ ಮಾಡಿ, ಕಾಂಗ್ರೆಸ್ ಕೊಟ್ಟಿದ್ದ ರೂ. 90 ಕೋಟಿ ಕೈಸಾಲವನ್ನು ತನ್ನದಾಗಿಸಿಕೊಳ್ಳುತ್ತದೆ. ಹಾಗೂ ಐಜೆಎಲ್ ಈ ಬೃಹತ್ ಮೊತ್ತವನ್ನು ರೂ. 10 ಮುಖಬೆಲೆಯ ಶೇರುಗಳ ರೂಪದಲ್ಲಿ ವೈಐಎಲ್‌ಗೆ ವರ್ಗಾಯಿಸುತ್ತದೆ.
ಆದರೆ, ಐಜೆಎಲ್ ನ್ಯಾಶನಲ್ ಹೆರಾಲ್ಡ್ ನ ಪ್ರಕಾಶನದ ಹಕ್ಕುಗಳನ್ನು ಹಾಗೂ ಎಲ್ಲ ಆಸ್ತಿಗಳನ್ನು ತನ್ನ ಬಳಿಯೇ ಇರಿಸಿಕೊಂಡಿರುವುದಾಗಿಯೂ ಹೇಳುತ್ತಿದೆ. ಕೇವಲ ಕಾಂಗ್ರೆಸ್ ಕೊಟ್ಟಿದ್ದ ಸಾಲವನ್ನು ತನ್ನದಾಗಿಸಿಕೊಳ್ಳಲು ಮಾತ್ರವೇ ವೈಐಎಲ್ ಮುಂದಾಗಿದ್ದೇಕೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ.
1937-38ರಲ್ಲಿ ಎಜೆಎಲ್ ಕಂಪನಿ ಆರಂಭಿಸಿ, ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆಯನ್ನು ಆರಂಭಿಸುವ ಹೊತ್ತಿನಲ್ಲಿ ಜವಹರಲಾಲ್ ನೆಹರೂ ಅವರಿಗೆ ತಮ್ಮ ಮುಮ್ಮಕ್ಕಳು ಹೀಗೆ ಅದೇ ಸಂಸ್ಥೆಗೆ ಸಂಬಂಧಿಸಿದಂತೆ ಸ್ವಜನ ಪಕ್ಷಪಾತ, ಅಕ್ರಮ ಹಣ ವರ್ಗಾವಣೆ, ವಂಚನೆ ಆರೋಪದಡಿ ತನಿಖೆಗೆ ಒಳಪಡುತ್ತಾರೆ ಎಂದು ಊಹಿಸಲೂ ಸಾಧ್ಯವಿರಲಿಲ್ಲ ಅಲ್ವಾ.
ನಷ್ಟದಿಂದಾಗಿ ಪತ್ರಿಕೆಯ ಪ್ರಕಟಣೆಯನ್ನೂ ಸ್ಥಗಿತಗೊಳಿಸಿದ್ದ ಕಾಂಗ್ರೆಸ್‌ನಿಂದ ರೂ. 90 ಕೋಟಿ ಸಾಲ ಪಡೆದಿದ್ದ ಎಜೆಎಲ್ ಅನ್ನು ಹೊಸದಾಗಿ ಮತ್ತೊಂದು ಕಂಪನಿ ಐವೈಎಲ್ ಸೃಷ್ಟಿಸಿ ಶೇರು ಸ್ವರೂಪದಲ್ಲಿ ಹಸ್ತಾಂತರ ಮಾಡಿಕೊಳ್ಳುವ ಅಗತ್ಯ ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ಇತ್ತಾ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.
ಇನ್ನೇನು ಮಾಡುವುದು ಐಜೆಎಲ್‌ಗೆ 90 ಕೋಟಿ ರೂ ವಾಪಸ್ ಕೊಡಲು ಆಗುತ್ತಿರಲಿಲ್ಲ, ಅದಕ್ಕೇ 50 ಲಕ್ಷ ರೂ ಕೊಟ್ಟ ನಮ್ಮ ಹೊಸ ಯಂಗ್ ಇಂಡಿಯನ್ ಕಂಪನಿಗೆ ಆ ಸಾಲವನ್ನು ವರ್ಗಾವಣೆ ಮಾಡಿಕೊಂಡೆವಲ್ಲ ಎನ್ನುತ್ತಾರೆ.
ಅದು ಸರಿ, ಆದರೆ ಸಾಲ ಕೊಟ್ಟ ಕಾಂಗ್ರೆಸ್‌ಗೆ ಆ ಹಣ ತಾನು ಸಾಲವಾಗಿ ಕೊಟ್ಟ ಸ್ವರೂಪದಲ್ಲೇ ವಾಪಸ್ ಬೇಕು ಅಂತ ಅನ್ನಿಸಿಲ್ವಾ ಅಂತಲೂ ಕೇಳಬೇಕಲ್ವಾ.
ಇಲ್ಲಾ ಯಂಗ್ ಇಂಡಿಯನ್ ಕಂಪನಿಯ ಧ್ಯೇಯ ಉದ್ದೇಶಗಳು ಎಐಸಿಸಿಗೆ ಸಮ್ಮತಿ ಎನಿಸಿದ್ದರಿಂದ ಕಾಂಗ್ರೆಸ್ ಸುಮ್ಮನಿದೆ ಎಂದಿದ್ದಾರೆ ಅವರ ವಕೀಲರು. ನೋಡಿ ಎಷ್ಟು ಉದಾರಿ ಈ ನಮ್ಮ ಕಾಂಗ್ರೆಸ್.
ಅಲ್ಲಾ ಸೆಕ್ಷನ್ 25ರಡಿ ನೊಂದಾಯಿಸಿದ ಕಂಪನಿ, ಅದರ ನಿರ್ದೇಶಕರು ಯಾವುದೇ ಲಾಭಾಂಶ ಪಡೆಯುವಂತಿಲ್ಲ ಎನ್ನುತ್ತೀರಿ,ಮತ್ಯಾಕೆ ಇಷ್ಟು ದೊಡ್ಡ ಮೊತ್ತದ ಸಾಲ ವಹಿಸಿಕೊಂಡಿರಿ ಎನ್ನುವ ಪ್ರಶ್ನೆಗೂ ಸರಿ ಉತ್ತರ ಕೊಡಲು ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಹೀಗೆ ಗುಮಾನಿ, ಸಂಶಯ, ಅನುಮಾನ, ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟ ಕಾರಣವಾಗಿಯೇ ಹಾಗಾಗಿಯೇ ಸ್ವಾಮಿಯವರು, ಐಟಿ, ಇಡಿಗಳು ( ಹಾಗೂ ಬಿಜೆಪಿ ಸರಕಾರ ಮತ್ತು ಅಂತಿಮವಾಗಿ ಸಂಘ ಪರಿವಾರ) ನಕ್ಷತ್ರಿಕರಂತೆ ಕಾಂಗ್ರೆಸ್ ಕುಟುಂಬವನ್ನು ಕಾಡುತ್ತಿರುವುದು ಎನ್ನಿಸುವುದಿಲ್ಲವೇ.
ವೈಐಎಲ್ ಮತ್ತು ಐಟಿ ಹಣಾಹಣಿ
ಒಂದು ಹಂತದಲ್ಲಿ ಆದಾಯ ತೆರಿಗೆ ಇಲಾಖೆ ಪ್ರವೇಶಿಸುತ್ತದೆ. ಕೇವಲ ರೂ. 5 ಲಕ್ಷ ಬಂಡವಾಳದಲ್ಲಿ ಸ್ಥಾಪಿಸಲಾದ ವೈಐಎಲ್ ಕಂಪನಿ ಐಜೆಎಲ್‌ನ ಶೇರುಗಳನ್ನು ಪಡೆದುಕೊಳ್ಳಲು ರೂ. 50 ಲಕ್ಷ ಮೊತ್ತವನ್ನು ಪಾವತಿ ಮಾಡಿತಲ್ಲ, ಆ 50 ಲಕ್ಷ ಬಂದದ್ದು ಎಲ್ಲಿಂದ ಎಂದು ಕೇಳುತ್ತದೆ ಐಟಿ, ಆಗ ತಾನು ಈ ಮೊತ್ತವನ್ನು ಡೊಟೆಕ್ಸ್ ಎಂಬ ಕಲ್ಕತ್ತ ಮೂಲದ ಕಂಪನಿಯಿಂದ ಒಂದು ಕೋಟಿ ರೂ. ಸಾಲ ಪಡೆದು ಆ ಮೊತ್ತದಲ್ಲಿ ರೂ. 50 ಲಕ್ಷ ಕೊಟ್ಟೆ ಎನ್ನುತ್ತದೆ ವೈಐಎಲ್. ಈ ಡೊಟೆಕ್ಸ್ ಎಂಬುದು ಕೇವಲ ನಗದು ಸ್ವೀಕರಿಸಿ ಚೆಕ್ಕುಗಳನ್ನು ಕೊಡುವ ವಹಿವಾಟು ನಡೆಸುವ ಕಂಪನಿ ಮಾತ್ರ ಎಂದು ಆದಾಯ ತೆರಿಗೆ ಹೇಳುವ ಮೂಲಕ ಇದೊಂದು ಹವಾಲ ಕಂಪನಿ ಎನ್ನುತ್ತದೆ.
ಇಲ್ಲ ಇಲ್ಲ, ಡೊಟೆಕ್ಸ್ ಮೊದಲು ಆರ್‌ಪಿಜಿ ಕಂಪನಿ ಎಂದಾಗಿತ್ತು, ಅದು ಸಿಯಟ್ ಟೈರುಗಳನ್ನು ಉತ್ಪಾದನೆ ಮಾಡುತ್ತಿತ್ತು ಎನ್ನುತ್ತಾರೆ ಗಾಂಧಿಗಳು.
ಅದೂ ಸರಿ, ಸುಮ್ಮ ಸುಮ್ಮನೇ ಈ ಡೊಟೆಕ್ಸ್ ಕಂಪನಿ ನಿಮಗೇಕೆ ಒಂದು ಕೋಟಿ ರೂ. ಸಾಲ ಕೊಡುತ್ತದೆ ಎನ್ನುತ್ತದೆ ಇಡಿ, ಇಲ್ಲ ಇಲ್ಲ, ಅದು ಬಡ್ಡಿ ಸಾಲ, ಟಿಡಿಎಸ್ ಕೂಡಾ ಮುರಿದುಕೊಳ್ಳಲಾಗಿದೆ, ರೆಗ್ಯುಲರ್ ಆಗಿ ಬಡ್ಡಿ, ಕಂತು ಪಾವತಿ ಮಾಡುತ್ತಿದ್ದೇವೆ ಎನ್ನುತ್ತಾರೆ. ಈ ಸಬೂಬುಗಳು ಐಟಿ ಟ್ರಿಬ್ಯುನಲ್‌ಗೆ ಸಮಾಧಾನ ಕೊಟ್ಟಿಲ್ಲ. ಸೋ, ಇಲ್ಲೂ ವ್ಯವಹಾರ ಸ್ವಚ್ಚವಾಗಿಲ್ಲ ಎಂದೆನಿಸುವುದಿಲ್ಲವೇ.
90 ಕೋಟಿ ಕೈ ಸಾಲ ಕುರಿತಂತೆ ತನಿಖೆ ನಡೆಸುತ್ತಿರುವ ಐಟಿ, ಇಡಿಗಳು ಕಾಂಗ್ರೆಸ್ ಐಜೆಎಲ್‌ಗೆ ನಿಜವಾಗಿಯೂ ಅಷ್ಟು ದೊಡ್ಡ ಮೊತ್ತವನ್ನು ನೀಡಿರುವ ಕುರಿತು ಗಾಂಧಿಗಳ ಸಮಜಾಯಿಷಿಯನ್ನು ನಂಬಲು ಮತ್ತು ಒಪ್ಪಲು ತಯಾರಿಲ್ಲ. ಈ ಸಾಲವೆಲ್ಲ ಕೇವಲ ಕಾಗದದ ಮೇಲೆ ಮಾತ್ರ ಎಂದೇ ಪ್ರತಿಪಾದಿಸುತ್ತಿದೆ. ಮತ್ತು ಡೊಟೆಕ್ಸ್ ನೀಡಿರುವ ಕೋಟಿ ರೂ. ಸಾಲ ಕೂಡಾ ಪುಸ್ತಕದಲ್ಲಿನ ನಮೂದು ಮಾತ್ರವೇ ಎನ್ನುತ್ತಿವೆ. ಇಲ್ಲ ಈ ಎಲ್ಲ ವಹಿವಾಟು ಚೆಕ್ ಮೂಲಕವೇ ನಡೆದಿದೆ ಎನ್ನುತ್ತಾರೆ ದಾಖಲೆ ಮುಂದಿಡುವ ಕಾಂಗ್ರೆಸ್ ಹಾಗೂ ವೈಐಎಲ್‌ನ ವಕೀಲರು.
ಐಜೆಎಲ್‌ನಿಂದ ರೂ. 413 ಕೋಟಿ ಮೌಲ್ಯದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಕ್ಕಾಗಿ 249 ಕೋಟಿ ರೂ. ತೆರಿಗೆ ಪಾವತಿ ಮಾಡಿ ಎಂದು ಆದಾಯ ತೆರಿಗೆ ಇಲಾಖೆ ಯಂಗ್ ಇಂಡಿಯನ್ ಲಿಮಿಟೆಡ್‌ಗೆ ಹೇಳುತ್ತಿದೆ. ಗಾಂಧಿಗಳು ಈ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯುನಲ್‌ಗೆ ಮನವಿ ಸಲ್ಲಿಸಿದರು, ಆದರೆ ಅವರ ಮನವಿಯನ್ನು ಟ್ರಿಬ್ಯುನಲ್ ಮನ್ನಿಸಿಲ್ಲ. ಗಾಂಧಿಗಳ ಅರ್ಜಿಯನ್ನು 31.03.2022ರಂದು ಟ್ರಿಬ್ಯುನಲ್ ವಜಾ ಮಾಡಿದೆ. ಅದರ ಅರ್ಥ ವೈಐಎಲ್ 249 ಕೋಟಿ ರೂ. ತೆರಿಗೆ ಪಾವತಿ ಮಾಡಲೇಬೇಕಾಗಿದೆ. ಐಟಿ ಅಪಲೇಟ್ ಟ್ರಿಬ್ಯುನಲ್ ತೀರ್ಪಿನ ಗಾತ್ರ 570 ಪುಟಗಳು ಮಾತ್ರ.
*******
ನ್ಯಾಶನಲ್ ಹೆರಾಲ್ಡ್ ಕಟ್ಟಡ
ವಿವಾದ
ನ್ಯಾಶನಲ್ ಹೆರಾಲ್ಡ್ ದಿನಪತ್ರಿಕೆ ಕಚೇರಿ ಸ್ಥಾಪಿಸಲೆಂದು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) 1967ರಲ್ಲಿ ಹೊಸ ದಿಲ್ಲಿಯ ಬಹಾದೂರ್ ಶಾ ಜಫರ್ ಮಾರ್ಗ ರಸ್ತೆಯಲ್ಲಿ ಸುಮಾರು 13 ಗುಂಟೆ (0.3 ಎಕರೆ) ನಿವೇಶನವನ್ನು ಎಜೆಎಲ್‌ಗೆ ಲೀಸ್ ಆಧಾರದ ಮೇಲೆ ಮಂಜೂರು ಮಾಡಿದೆ. 2008ರಿಂದಲೂ ನ್ಯಾಶನಲ್ ಹೆರಾಲ್ಡ್ ಪ್ರಕಟವಾಗುತ್ತಿಲ್ಲ, ಆದ್ದರಿಂದ ಲೀಸ್ ಕರಾರು ಮುರಿದಂತಾಗಿದೆ. ನಿವೇಶನ ತೆರವು ಮಾಡಿ ಎಂದು ಡಿಡಿಎ ಸೆಪ್ಟೆಂಬರ್ , ಅಕ್ಟೋಬರ್ 2016ರಲ್ಲಿ ಎಜೆಎಲ್‌ಗೆ ನೋಟೀಸ್ ನೀಡುತ್ತದೆ. ಈ ನೋಟೀಸ್ ವಿರುದ್ಧ ಎಜೆಎಲ್ ನ್ಯಾಯಾಲಯದ ಮೊರೆ ಹೋಗಿದ್ದು, ತಾನು ನಷ್ಟದಲ್ಲಿದ್ದರೂ ಪತ್ರಿಕೆ ನಿಲ್ಲಿಸಿದ್ದರೂ ಮತ್ತೆ ಆರಂಭಿಸುತ್ತೇನೆ, ನೋಡಿ ಎಲ್ಲ ದಿನಪತ್ರಿಕೆಗಳೂ ಹೀಗೇ ಮಾಡುತ್ತಿಲ್ಲವೇ ಎಂದು ನಿದರ್ಶನಗಳನ್ನು ನೀಡಿ, ಮನವಿ ಮಾಡಿಕೊಳ್ಳುತ್ತದೆ.
ಅಂತಿಮವಾಗಿ ಸುಪ್ರೀಂ ಕೋರ್ಟ್ 2019ರಲ್ಲಿ ಡಿಡಿಎಗೆ ನೋಟೀಸ್ ನೀಡಿ, ಡಿಡಿಎ ನ ಎವಿಕ್ಷನ್ ನೋಟೀಸ್‌ಗೆ 5.04.2019ರಂದು ತಡೆಯಾಜ್ಞೆ ನೀಡಿದೆ. ನಂತರ ಜೂನ್‌ನಲ್ಲಿ ಒಂದು ಸಲ ವಿಚಾರಣೆ ನಡೆದಿದೆ. ಇದು ನಿವೇಶನಕ್ಕೆ ಸಂಬಂಧಿಸಿದ ಹಂತ.
ಆದರೆ ಈ ನಿವೇಶನದಲ್ಲಿ ನಿರ್ಮಿಸಿರುವ 10,000 ಚದರಡಿ ವಿಸ್ತೀರ್ಣದ ಆರು ಮಹಡಿಯ ಕಟ್ಟಡದಲ್ಲಿ ಕೇವಲ ಎಜೆಎಲ್ ಕಂಪನಿಯ ರಿಜಿಸ್ಟರ್ಡ್ ಕಚೇರಿ ಹಾಗೂ ನ್ಯಾಶನಲ್ ಹೆರಾಲ್ಡ್ ಪತ್ರಿಕಾ ಕಚೇರಿಗಳು ನಾಲ್ಕನೇ ಮಹಡಿಯಲ್ಲಿ ಮಾತ್ರವೇ ಇದ್ದು, ಉಳಿದ ಭಾಗವನ್ನೆಲ್ಲ ಬಾಡಿಗೆಗೆ ನೀಡಿದ್ದು ಈ ಹಣವನ್ನು ಅಕ್ರಮವಾಗಿ ಐಜೆಎಲ್ ಬಳಸಿಕೊಳ್ಳುತ್ತಿದೆ ಎಂಬುದು ಡಿಡಿಎ ಆರೋಪ.
ಅದು ನಿಜ, ಧೂಳು ಅಡರಿದ ಮಾಸಲು ಬಿಳಿ ಕಟ್ಟಡದ ನೆಲ ಹಾಗೂ ಮೊದಲ ಮಹಡಿಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಬಾಡಿಗೆ ಆಧಾರದ ಮೇಲೆ ಎಜೆಎಲ್ ಕೊಟ್ಟಿದೆ, ಜೊತೆಗೆ ಒಂದು ಫೋಟೋ ಕಾಪಿಯರ್ ಮಳಿಗೆ ಮತ್ತು ಆಕಾಶ್ ಗಿಫ್ಟ್ ಶಾಪ್ ಅಲ್ಲಿದೆ. ಎರಡು ಮತ್ತು ಮೂರನೇ ಮಹಡಿಗಳನ್ನು ಟಾಟಾ ಕನ್ಸಲ್ಟೆನ್ಸಿಗೆ ಬಾಡಿಗೆಗೆ ನೀಡಲಾಗಿದೆ. ಅಲ್ಲಿ ಗೇಟು ಕಾಯುವ ಸೆಕ್ಯೂರಿಟಿ ಗೆ ಅಲ್ಲೊಂದು ಪತ್ರಿಕೆ ಪ್ರಕಟವಾಗುತ್ತಿದೆ ಎಂಬ ಮಾಹಿತಿಯೂ ಇಲ್ಲವಂತೆ. ತಮಾಶೆ ಎಂದರೆ ಇದನ್ನೆಲ್ಲ ತನಿಖೆ ಮಾಡುತ್ತಿರುವ ಆದಾಯ ತೆರಿಗೆ ಇಲಾಖೆ ಕಟ್ಟಡವೂ ಇಲ್ಲಿಗೆ ಕಲ್ಲೆಸೆತದ ಸಮೀಪದಲ್ಲಿದೆ.
ನೋಡಿ ತುಮಕೂರಿನಲ್ಲೂ ಹೀಗೇ ಅಲ್ವಾ, ಎಷ್ಟೊಂದು ಸಂಘ ಸಂಸ್ಥೆಗಳು, ಚಾರಿಟೆಬಲ್ ಟ್ರಸ್ಟ್ ಗಳು ಶಾಲೆ, ಕಾಲೇಜು ಮಾಡುತ್ತೇವೆ, ತಮ್ಮ ಜಾತಿಯ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಡೆಸುತ್ತೇವೆ, ಧರ್ಮ ಚತ್ರ ನಡೆಸುತ್ತೇವೆ ಎಂದು ಎಕರೆಗಟ್ಟಲೆ ಸಾರ್ವಜನಿಕ ಭೂಮಿಯನ್ನು ನಾಮಕಾವಸ್ತೆ ದರದಲ್ಲಿ ಪಡೆದು ಸಮುದಾಯ ಭವನಗಳನ್ನು ನಿರ್ಮಿಸಿ , ಷಾಪಿಂಗ್ ಕಾಂಪ್ಲೆ ಕ್ಸ್ ಗಳನ್ನು ನಿರ್ಮಿಸಿ ಒಂದು ಕಡೆ ಅಪಾರ ಮೊತ್ತದ ಬಾಡಿಗೆ ಪಡೆಯುತ್ತಲೂ, ಮತ್ತೊಂದು ಕಡೆ ಆ ನಿವೇಶನ ಪಡೆದ ಮೂಲ ಉದ್ದೇಶವನ್ನು ಇಡಿಯಾಗಿ ಮರೆತು ಅಥವಾ ನಾಮಕವಾಸ್ತೆಗೆ ಹಾಸ್ಟೆಲ್‌ಗಳನ್ನು ನಡೆಸುತ್ತ ಕೋಟ್ಯಂತರ ಮೊತ್ತದ ಹಣವನ್ನು ಟ್ರಸ್ಟಿಗಳು ಲೆಕ್ಕದ ಬುಕ್ಕಿನಲ್ಲಿ ಅದೂ ಇದು ಖರ್ಚು ತೋರಿಸುತ್ತ ನುಂಗಿ ನೊಣೆಯುತ್ತಿಲ್ಲವೇ. ನೀವೇ ಹೇಳಿ.
(ಅಪೂರ್ಣ)
*****