ವೃತ್ತಿ, ಪ್ರವೃತ್ತಿಗಳನ್ನು ಮೀರಿದ ಮಾಯೆ …,

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ

ವೃತ್ತಿ, ಪ್ರವೃತ್ತಿಗಳನ್ನು ಮೀರಿದ ಮಾಯೆ …,

ವೃತ್ತಿ, ಪ್ರವೃತ್ತಿಗಳನ್ನು ಮೀರಿದ ಮಾಯೆ …,

ಒಂದು ಗಳಿಗೆ

ಕುಚ್ಚಂಗಿ ಪ್ರಸನ್ನ

       “ ನಮ್ಮ ಜಿಲ್ಲೇಲಿ ಐದು ಜನ ಎಂಎಲ್‍ಎಗಳು, ಅವರಲ್ಲಿ ಇಬ್ಬರು ಮಿನಿಸ್ಟರ್ ಗಳು, ಇನ್ನಿಬ್ಬರು ಎಂಎಲ್‍ಸಿಗಳು, ಇಬ್ಬರು ಎಂಪಿಗಳೂ ಇರೋ ಬಿಜೆಪಿಯ ಕ್ಯಾಂಡಿಡೇಟೇ ಗೆಲ್ಲಬೇಕಿತ್ತಲ್ವ, ಯಾಕೆ ಅವರಿಗೆ ಅದು ಸಾಧ್ಯವಾಗಲಿಲ್ಲ? “

    ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳ ಪೈಕಿ ಕೇವಲ ಮೂರರಲ್ಲಿ ಶಾಸಕರನ್ನು ಕಾಂಗ್ರೆಸ್‍ ಹೊಂದಿದೆ, ಆದರೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನ ಪರಿಷತ್‍ ಗೆ ಕಾಂಗ್ರೆಸ್‍ನ ರಾಜೇಂದ್ರ ರಾಜಣ್ಣ ಚುನಾಯಿತರಾದರು, ಈ ಹಿನ್ನೆಲೆಯಲ್ಲಿ  ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರು ಮೊನ್ನೆ ನನ್ನನ್ನು ಕೇಳಿದ ಪ್ರಶ್ನೆಯಿದು.

    ಇಲ್ಲಿ ಈ ಚುನಾವಣೆಯ ರಿಸಲ್ಟ್ ಕುರಿತು ನಾನು ವಿಶ್ಲೇಷಿಸಹೋಗುವುದಿಲ್ಲ, ಇಂಥ ಎಷ್ಟೋ ಅಚ್ಚರಿಯ ಫಲಿತಾಂಶಗಳನ್ನು ಮತದಾರ ಕೊಟ್ಟು ಬಿಡುತ್ತಾನೆ. ಶಾಸಕರಾಗಿ ಬಹುಮತದಿಂದ ಗೆದ್ದ ನಂತರ ಮಂತ್ರಿಯಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರದ ಪ್ರತಿ ಹಳ್ಳಿಗೆ ತಂದು ಸುರಿದರೂ ಮರು ಚುನಾವಣೆಯಲ್ಲಿ ಆತ ಸೋಲು ಕಾಣುತ್ತಾನೆ.

   ಇಡೀ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡದೇ ನಿರಂತರ ಜನ ಸಂಪರ್ಕ ಇರಿಸಿಕೊಂಡಾತ ಒಂದಾದ ಮೇಲೊಂದು ಚುನಾವಣೆಗಳಲ್ಲಿ ಗೆಲ್ಲುತ್ತಲೇ ಇರುತ್ತಾನೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ, ನಾಲ್ಕೂವರೆ ವರ್ಷದ ಹಿಂದೆ ಮುಖ್ಯಮಂತ್ರಿಯಾಗಿ ಸರಿ ಸುಮಾರು ಎರಡು ಲಕ್ಷ ಕೋಟಿ ಮೊತ್ತದ ಐದು ಬಜೆಟ್‍ಗಳನ್ನು ಮಂಡಿಸಿದ  ಸಿದ್ದರಾಮಯ್ಯನವರಿಗೆ ಬರುವ ಏಪ್ರಿಲ್‍ನಲ್ಲಿ ಯಾವ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದೇ ನಿಗದಿಯಾಗದೇ, ಹೈ ಕಮಾಂಡ್ ಸೂಚಿಸಿದ ಕ್ಷೇತ್ರ ಎಂದು ಪಕ್ಷಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸುತ್ತಾರೆ ಎಂದರೆ ಅದು ಇನ್ನೂ ಅಚ್ಚರಿ ಎನಿಸುವುದಿಲ್ಲವೇ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ 2013ರಲ್ಲಿ ಇಡೀ ಪಕ್ಷವನ್ನು ಅಧಿಕಾರಕ್ಕೆ ತಂದ ಡಾ. ಜಿ.ಪರಮೇಶ್ವರ ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಸೋಲು ಕಾಣುತ್ತಾರೆ. 1962ರಲ್ಲೂ ಇಂಥದ್ದೇ ಸನ್ನಿವೇಶ ಮಾಜಿ ಮುಖ್ಯಮಂತ್ರಿ ಎಸ್‍.ನಿಜಲಿಂಗಪ್ಪನವರಿಗೆ ಎದುರಾಗಿತ್ತು ಅಂತ ಕಳೆದ ವಾರದ ಅಂಕಣದಲ್ಲಿ ವಿವರಿಸಿದ್ದೆ. 1999-2004ರಲ್ಲಿ ಐದು ವರ್ಷ ನಿರಾಳವಾಗಿ ಆಡಳಿತ ಮಾಡಿದ ಎಸ್.ಎಂ.ಕೃಷ್ಣ ಕೂಡಾ  ಸ್ವಕ್ಷೇತ್ರದ ಸಮಸ್ಯೆ ಎದುರಿಸಿದ್ದರು.

ಐದು ವರ್ಷ ನಿರಂತರ ಇಡೀ ಕುಟುಂಬ ತಿಂದು ಚೆಲ್ಲಾಡುವಷ್ಟು, ಹೆಚ್ಚಾಗಿ ಮಾರಿಕೊಳ್ಳುವಷ್ಟು ಅಕ್ಕಿ ಉಚಿತ ನೀಡಿದ ಅನ್ನ ಭಾಗ್ಯ, ಅಗ್ಗದ ದರಕ್ಕೆ ಊಟ, ತಿಂಡಿ ಕೊಡುತ್ತಿದ್ದ ಇಂದಿರಾ ಕ್ಯಾಂಟೀನ್ ಮಾತ್ರವೇ ಅಲ್ಲದೇ ಮದುವೆಯಾಗಲೂ ಕಾಸು ಕೊಡುವ ಶಾದಿ ಭಾಗ್ಯಗಳನ್ನು ಕೊಟ್ಟರೂ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣಬೇಕಾಗಿ ಬಂತು. ಕನಸಿನಲ್ಲೂ ಸಿಎಂ ಖುರ್ಚಿ ಕಾಣದೇ ಇದ್ದ ಜೆಡಿಎಸ್‍ ನಾಯಕ ಕುಮಾರಸ್ವಾಮಿಗೆ ‘ ಮುಖ್ಯ ಮಂತ್ರಿ ಭಾಗ್ಯ’ ದಕ್ಕಿ ಬಿಟ್ಟಿತು.

ಅಂಥದ್ದೇ ಲೆಕ್ಕಾಚಾರದ ಮೇಲೆ ಕುಮಾರಣ್ಣ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೂರೂ ಪಕ್ಷಗಳ ಆಂತರಿಕ ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಬರುವಂತೆ ಕಾಣುತ್ತಿಲ್ಲವಂತೆ. 2008ರಿಂದಲೂ ಜೇಮ್ಸ್ ಬಾಂಡ್ ಸಿನಿಮಾಗಳ ತರ ‘ಆಪರೇಶನ್ ಲೋಟಸ್’,  ‘ಆಪರೇಶನ್ ಬಾಂಬೇ ಬಾಯ್ಸ್’ ಮಾಡುತ್ತ ಜನಾದೇಶವಿಲ್ಲದೇ ಇದ್ದರೂ ಅಧಿಕಾರ ಹಿಡಿಯುತ್ತ ಬಂದಿರುವ ಬಿಜೆಪಿ ಬರುವ ಚುನಾವಣೆಯಲ್ಲಿ 65-75 ದಾಟಲ್ಲವಂತೆ, ಕಾಂಗ್ರೆಸ್‍ಗೂ 95-100 ದಾಟಲ್ಲ ಅಂತಿದ್ದಾರೆ. ರೆಬೆಲ್-ಬಂಡಾಯ- ಇಂಡಿಪೆಂಡೆಂಟ್, ಪಕ್ಷೇತರ ಇತ್ಯಾದಿಗಳು 10-15 ತಲುಪಬಹುದು.  ಅಕಸ್ಮಾತ್‍ ಮತ್ತೆ ಜೆಡಿಎಸ್‍ ಏನಾದರೂ 25-30 ದಾಟಿಬಿಟ್ಟಿತೂ ಅಂತ ಇಟ್ಕೊಳ್ಳಿ, ಆಗ ನಡೆಯೋ ಮೈತ್ರಿ ಕಾಂಬಿನೇಶನ್‍ನಲ್ಲಿ ಸಿಎಂ ಸೀಟು ನಂಗೇ ತಾನೇ ಅನ್ನೋದು ಇವರ ಕ್ಯಾಲುಕಲೇಶನ್ನು. ಇಂಥಾ ವಿಶಿಷ್ಟ ಲೆಕ್ಕವನ್ನ ನಾವು ನೀವೆಲ್ಲ ಬಳಸೋ ಕ್ಯಾಲುಕಲೇಟರ್ ಮಾಡಕ್ಕಾಗಲ್ಲ ಬಿಡಿ.

ಹೊಟ್ಟೆ ಪಾಡಿಗೆ ಮಾಡುವ ಕೆಲಸಗಳಿಗೆ, ನೌಕರಿಗಳಿಗೆ, ಉದ್ಯೋಗಳಿಗೆ ವೃತ್ತಿ ಎನ್ನುತ್ತಾರೆ, ಜೊತೆ ಜೊತೆಗೇ ಕಲೆ, ಸಂಗೀತಗಳಲ್ಲಿ ತೊಡಗಿಸಿಕೊಂಡರೆ ಅಂತದ್ದನ್ನೆಲ್ಲ ಪ್ರವೃತ್ತಿ ಅಂತಾರೆ, ಈ ರಾಜಕಾರಣ ವೃತ್ತಿ ಮತ್ತು ಪ್ರವೃತ್ತಿಗಳನ್ನು ಮೀರಿದ್ದು, ಒಂಥರಾ ಮಾಯೆ ಇದ್ದಂತೆ,

ಅಲ್ಲಮನ ‘

ಹೊನ್ನುಮಾಯೆಯೆಂಬರುಹೊನ್ನುಮಾಯೆಯಲ್ಲ.

ಹೆಣ್ಣುಮಾಯೆಯೆಂಬರುಹೆಣ್ಣುಮಾಯೆಯಲ್ಲ.

ಮಣ್ಣುಮಾಯೆಯೆಂಬರುಮಣ್ಣುಮಾಯೆಯಲ್ಲ.

ಮನದಮುಂದಣಆಶಯೇಮಾಯೆಕಾಣಾಗುಹೇಶ್ವರ!

ಎಂಬ ಈ ವಚನವನ್ನ ತುಸು ಬದಲಿಸಿ ‘ರಾಜಕೀಯವೇ ಮಾಯೆ’ ಕಾಣಾ ಎಂದರೂ ಸರಿಯಾದೀತು.

ಒಂದು ಸಲ ರಾಜಕಾರಣಕ್ಕೆ ಅದರಲ್ಲೂ ಚುನಾವಣೆಗಳಲ್ಲಿ ಸ್ಪರ್ಧಿಸತೊಡಗಿದ ನಂತರ ಈ ರಂಗದಿಂದ ನಿವೃತ್ತಿ ಎಂಬುದೇ ಇಲ್ಲ ಎನಿಸತೊಡಗಿಬಿಡುತ್ತದೆ.

ಒಂದು ಸಲ ವಿಧಾನ ಸಭೆಗೋ, ಲೋಕಸಭೆಗೋ ಸ್ಪರ್ಧಿಸಿದ ಬಳಿಕ, ನಂತರದ ಚುನಾವಣೆಗಳು ಸಮೀಪಿಸತೊಡಗಿದಂತೆ ಚಡಪಡಿಕೆ ಶುರುವಾಗಿಬಿಡುತ್ತದೆ. ಬೇರೆಲ್ಲ ಒತ್ತಡಕ್ಕಿಂತ ಹೆಚ್ಚು ಮಾನಸಿಕ ಒತ್ತಡವನ್ನು ಚುನಾವಣೆಗಳು ತಂದುಬಿಡುತ್ತವೆ.

ಈಗ ನೋಡಿ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದಾರೆ. ತಿಪಟೂರಿನಲ್ಲಿ ಹೆಚ್‍.ಸಿ.ನಾಗೇಶ್ ಶಿಕ್ಷಣ ಮಂತ್ರಿಯಾಗಿ ಅತ್ಯಂತ ಹೆಚ್ಚು ವಿವಾದಕ್ಕೆ ಒಳಗಾಗಿದ್ದಾರೆ. 2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಇವರು ಮಾಡಿರಬಹುದಾದ ಯಾವ ಸಾಧನೆಗಳೂ ಇವರನ್ನು ಗೆಲುವಿನ ಹತ್ತಿರ ಒಯ್ಯಲಾರದಷ್ಟು ಅನಪೇಕ್ಷಿತ, ಅನವಶ್ಯಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ಹೋದಲ್ಲಿ, ಜೆಡಿಎಸ್‍ ಒಳ ಒಪ್ಪಂದ ಮಾಡಿಕೊಳ್ಳದೇ ಹೋದಲ್ಲಿ ಮಾತ್ರವೇ ನಾಗೇಶ್ ಗೆಲ್ಲಲು ಸಾಧ್ಯ.

ಪಕ್ಕದ ಚಿಕ್ಕನಾಯಕಹಳ್ಳಿಯಲ್ಲಿ ಬಿಜೆಪಿ ಸರ್ಕಾರದ ಮತ್ತೊಬ್ಬ ಮಂತ್ರಿಯಾಗಿರುವ  ಜೆ.ಸಿ.ಮಾಧುಸ್ವಾಮಿಯವರು ಕಾನೂನು, ಸಂಸದೀಯ ವ್ಯವಹಾರಗಳ ಜೊತೆಗೆ ಸಣ‍್ಣ ನೀರಾವರಿ ಖಾತೆಯನ್ನೂ ಹೊಂದಿದ್ದಾರೆ.  ಸಣ್ಣ ನೀರಾವರಿ ಖಾತೆಯನ್ನು ಚಿಕ್ಕನಾಯಕನಹಳ್ಳಿಗೆ ಮಾತ್ರವೇ ಕೊಟ್ಟಿದ್ದಾರೇನೋ ಎಂಬಂತೆ ಸಾವಿರಾರು ಕೋಟಿ ಮೊತ್ತದ ಅನುದಾನ ತಂದು ಕೊಟ್ಟಿದ್ದಾರೆ. ಶಿರಾದಲ್ಲೂ  ಅಷ್ಟೇ ಟಿ.ಬಿ.ಜಯಚಂದ್ರ 2013-18ರಲ್ಲಿ ಸಣ್ಣ ನೀರಾವರಿ ಮಂತ್ರಿಯಾಗಿ ಇಡೀ ತಾಲೂಕಿನಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದೇನೆ ಎಂದು ಬಣ್ಣ ಬಣ್ಣದ ಕೈಪಿಡಿಗಳನ್ನು ಮುದ್ರಿಸಿ ಹಂಚಿದರೂ ಆ ಸಲ ಮತ್ತು ಆನಂತರದ ಉಪ ಚುನಾವಣೆಯಲ್ಲೂ ಸೋಲು ಕಂಡರು.

ಮಾಧುಸ್ವಾಮಿಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಲ್ಲದೇ ಹೋಗಿದ್ದರೆ ಜಿಲ್ಲೆಗೆ ನಿಗದಿ ಪಡಿಸಿದಷ್ಟು ಪ್ರಮಾಣದ ಹೇಮಾವತಿ ನೀರು ಹಾಸನದಿಂದ ಹರಿದು ಬರುತ್ತಿರಲಿಲ್ಲ ಎನ್ನುವುದು ನಿಜ ಎನ್ನುವ ಜನರೇ ಬೇಕಿದ್ದರೆ ಏಪ್ರಿಲ್‍ನಲ್ಲಿ ಅವರ ಕೈ ಹಿಡಿಯದೇ ಹೋಗಬಹುದು. ಜೊತೆಗೆ ಅವರ ಪಕ್ಷದವರೇ ಆದ ಮಾಜಿ ಶಾಸಕ ಕಿರಣಕುಮಾರ್ ಜೆಸಿಎಂ ವಿರುದ್ಧ ಕಣಕ್ಕಿಳಿಯುವುದು ಖಂಡಿತಾ ಎನ್ನುತ್ತಿದ್ದಾರೆ.

ಪಾವಗಡದಲ್ಲಿ ಮೈತ್ರಿ ಸರ್ಕಾರದಲ್ಲಿ ವರ್ಷದ ಅವಧಿಗೆ ಮಂತ್ರಿಯಾಗಿದ್ದ ಕಾಂಗ್ರೆಸ್‍ನ ವೆಂಕಟರವಣಪ್ಪನವರು ಈ ಸಲ ನನ್ನಮಗ ಹೆಚ್.ವಿ.ವೆಂಕಟೇಶ್‍ಗೆ ಟಿಕೆಟ್ ಕೊಡಿ ಎಂದು ಯಲಹಂಕದ ರೆಸಾರ್ಟ್‍ನಲ್ಲಿ ಕರೆದಿದ್ದ ಸಭೆಯಲ್ಲಿ ಕೇಳಿದರಂತೆ.

ಎದುರಿಗೆ ನಾಯಕರ ಸಾಲಿನಲ್ಲಿ ಕೂತಿದ್ದ ಸುರ್ಜೇವಾಲ “ ಲೇದು, ಲೇದು, ನೂವುಕ್  ಕಾವಲ್ಲಂಟೆ ಓಕೇ, ಬಿಡ್ಡಂಗೆ ಯಾಕೇ” ಅಂತ ಕ್ವೊಯಿರಿ ಹಾಕಿದರಂತೆ.

ಮಧುಗಿರಿಯಲ್ಲಿಕೆಎಎಸ್ ಅಧಿಕಾರಿ ಸೋದರ ಪಾತಣ್ಣನ ಕರೆಸಿಕೊಂಡು ಉಪ್ಪುಪ್ಪು ಕಡ್ಡಿ ಆಡುವ ವೀರಭದ್ರಯ್ಯನವರೇ ಮತ್ತೆ ನಿಂತರೆ ತೊಂದರೆ ಇಲ್ಲ, ಬಿಜೆಪಿ ಲೆಕ್ಕಕ್ಕಿಲ್ಲ ಎನ್ನುವಂತಿದೆ. ಮಣ್ಣಿನ ಮಕ್ಕಳು ಆಗಾಗ ಬಂದು ಧೂಳೆರೆಚುವುದು ಇದ್ದೇ ಇರುತ್ತೆ, ಆದರೆ, ಒಂದು ಕುಟುಂಬಕ್ಕೆ ಒಬ್ಬರಿಗೇ ಟಿಕೆಟ್ ಅಂತ ಮೊನ್ನೆ ಡಿಕೆ ಬೇರೆ ಖಡಾಖಂಡಿತವಾಗಿ ಖಡಕ್ಕಾಗಿ ಹೇಳಿರುವ ಸಂಗತಿ ಕಿವಿಗೆ ಬಿದ್ದ ಮೇಲೆ ಮಧುಗಿರಿಯಲ್ಲಿ ಈ ಸಲ 100% ಗೆಲ್ಲುವ ನಂಬಿಕೆ ಹೊಂದಿರುವ ಕೆ.ಎನ್.ರಾಜಣ್ಣನವರೂ ಅವರ ಮಗ ರಾಜೇಂದ್ರ ಎಂಎಲ್‍ಸಿಯಾಗಿರುವ ಹಿನ್ನೆಲೆಯನ್ನು ಪರಿಗಣನೆಗೆ ಪಕ್ಷ ಗಂಭೀರವಾಗಿ ತಗಂಡು ಬಿಟ್ಟರೆ ಟಿಕೆಟ್ ಕತೆ ಹೆಂಗೆ ಅಂತ ಒಂಚೂರು ತಣ್ಣಗೆ ಯೋಚಿಸಬೇಕಾಗಿ ಬಂದು ಬಿಟ್ಟಿದೆ.

ಕೊರಟಗೆರೆಯಲ್ಲಿ ಈ ಸಲ ಹಾಲಿ ಕಾಂಗ್ರೆಸ್‍ನ  ಶಾಸಕರಾಗಿರುವ ಡಾ.ಜಿ.ಪರಮೇಶ್ವರ ಅವರಿಗೆ ಪಕ್ಷದೊಳಗೇ ಟಿಕೆಟ್ ಆಕಾಂಕ್ಷಿಗಳಾರೂ ಇಲ್ಲದೇ ಹೋದರೂ, ಬಿಜೆಪಿಯಿಂದ ಇತ್ತೀಚೆಗೆ ತಾನೇ ನಿವೃತ್ತರಾಗಿರುವ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್‍ ಅವರಿಗೇನಾದರೂ ಟಿಕೆಟ್ ಕೊಟ್ಟುಬಿಟ್ಟರೆ ಚುನಾವಣೆ ಹೆಚ್ಚು ಶ್ರಮವನ್ನು ಬೇಡಲಿದೆ. ಜಿಲ್ಲಾ ಕೇಂದ್ರಕ್ಕೆ ತೀರಾ ಕೈ ಚಾಚುವಷ್ಟು ಸಮೀಪದಲ್ಲಿರುವ ಕಾರಣಕ್ಕೋ ಏನೋ ಇಲ್ಲಿ ಬಿಜೆಪಿ ಟಿಕೆಟ್ ಕೌಂಟರ್‍ ನಲ್ಲಿ ಉದ್ದದ ಸಾಲು ಬೇರೆ ಇದೆ. ಅನಿಲ್ ಕುಮಾರ್‍ ಅವರನ್ನು ಬೆಂಗಳೂರಿನ ಮನೆಯಿಂದ ಕೊರಟಗೆರೆಯಷ್ಟು ದೂರ ಪ್ರಯಾಣ ಮಾಡುವುದು ಬೇಡ, ಅಲ್ಲೇ ಹತ್ತಿರದ ನೆಲಮಂಗಲದಲ್ಲಿ ನಿಂತು ಬಿಡಿ ಅಂತ ಹೈಕಮಾಂಡ್ ಹೇಳಿ ಬಿಟ್ಟರೆ, ಡಾ.ಲಕ್ಷ್ಮೀಕಾಂತ್, ಮುನಿಯಪ್ಪ ಇತ್ಯಾದಿಗಳ ಲೈನ್ ಕ್ಲಿಯರ್ ಆಗಿಬಿಡುತ್ತದೆ.ಜೊತೆಗೆ ಸರದಿಯ ಚಾನ್ಸ್ ಕಾಯುತ್ತಿರುವ ಪರಮೇಶ್ವರ ಅವರ ಒಂದು ಕಾಲದ ಕಣ್ಮಣಿ ಸುಧಾಕರ ಲಾಲ್ ಬೇರೆ ತೆನೆ ಹಿಡಿದ ಮಹಿಳೆಯ ಸೆರಗಿನ ಮರೆಯಲ್ಲಿ ಸೈಲೆಂಟಾಗಿ ಕಾಯುತ್ತಿದ್ದಾರೆ.

ಶಿರಾದಲ್ಲಿ ವಿಜಯೇಂದ್ರ ಹರಿಸಿದ ಹಣದ ಹೊಳೆಯಲ್ಲಿ ತೇಲಿ ದಡ ಸೇರಿದ ಡಾ.ರಾಜೇಶ್‍ಗೌಡರು ಮತ್ತೆ ಶಾಸಕರಾಗುವುದು ಕಷ್ಟ ಎಂಬ ಮಾತು ಕೇಳತೊಡಗಿದೆ. ಜೊತೆಗೆ ಜೆಡಿಎಸ್‍ನಲ್ಲಿ ಆಕಾಂಕ್ಷಿಗಳ ಸಂಖ್ಯೆಯೇ ಬಹಳವಾಗಿದೆ. ಕಾಂಗ್ರೆಸ್‍ನ ಮಾಜಿ ಸಚಿವ ಜಯಚಂದ್ರ ಅವರಿಗೆ ಯಲಹಂಕ ರೆಸಾರ್ಟ್ ಸಭೆಯಲ್ಲಿ ಹರ್ಯಾಣದ ಮೀಡಿಯಂ ಕಮಾಂಡ್ ಸುರ್ಜೆವಾಲ, ಹಲ್ವ ಹೆಚ್ಚು ತಿಂದರೆ ಏನಾಗುತ್ತದೆ ಎಂದು ಹೇಳಿ, ಶುಗರ್ ಜಾಸ್ತಿ ಆಗಿ ಬಿಟ್ಟಾತು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. 2018ರಲ್ಲಿ ಚಿಕ್ಕನಾಯಕನಹಳ್ಳಿಗೆ ಮಗ ಸಂತೋಷ್‍ಗೆ ಕೊಟ್ಟಿದ್ದ ಟಿಕೆಟ್‍ನ್ನು ಈ ಸಲ ಅಪ್ಪನಿಗೇಕೆ ಕೊಡಬಾರದು, ನಾನು ಶಿರಾದಲ್ಲಿ ಈಗಾಗಲೇ ಮನೆ ಕಟ್ಟಲು ಪಾಯ ಹಾಕಿಸಿದ್ದೇನಲ್ಲ ಎಂದು ಸಾಸಲು ಸತೀಶ್ ಬೇರೆ ಕೇಳುತ್ತಿದ್ದಾರಲ್ಲ.

ಕುಣಿಗಲ್‍ನಲ್ಲಿ ಕಾಂಗ್ರೆಸ್‍ನಲ್ಲಿ ಪಾರ್ಟಿ ಪಾಲಿಸಿ ಲೆಕ್ಕದಲ್ಲಿ ಹಾಲಿ ಶಾಸಕ ಡಾ.ರಂಗನಾಥರಿಗೇ ಟಿಕೆಟ್ ಕೊಟ್ಟರೂ ಬಿಜೆಪಿ ಲೆಕ್ಕದಲ್ಲಿ ಎಕ್ಸ್ ಎಂಪಿ ಮುದ್ದಹನುಮೇಗೌಡರೋ, ಮೂರು ಸಲ ಸೋತಿರುವ ಕೃಷ್ಣ ಕುಮಾರರೋ ಎಂಬುದು ಇತ್ಯರ್ಥವಾಗಿಲ್ಲ, ಜೆಡಿಎಸ್‍ನಿಂದ ಮಾಜಿ ಸಚಿವ ಡಿ.ನಾಗರಾಜಯ್ಯನವರ ಪರ ಇಡೀ ಕುಟುಂಬ ಒಂದು ಗೂಡಿ ನಿಂತು ಬಿಟ್ಟರೆ, ಕಮಲ ಅರಳುವುದನ್ನು ಕೋಡಿ ಬಿದ್ದು  ನಿಂತಿರುವ ಕುಣಿಗಲ್ ಕೆರೆಯಲ್ಲಿ ಕಾಣಬೇಕಾಗುತ್ತದೆ.

ತುರುವೇಕೆರೆಯಲ್ಲಿ ಬಿಜೆಪಿಯ ಹಾಲಿ ಶಾಸಕರಾದ ಮಸಾಲಾ ಜಯರಾಂ ಎದುರು ಮತ್ತೆ ಜೆಡಿಎಸ್‍ನಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಣಾಹಣಿಗೆ ಇಳಿಯುವುದು ಖಂಡಿತ, ಜೊತೆಗೆ ಕಾಂಗ್ರೆಸ್‍ಗೆ ಪಕ್ಕದ ಗುಬ್ಬಿಯ ವಾಸಣ್ಣನವರ ನೆರವಿನೊಂದಿಗೆ ಮಾಜಿ ಎಂಎಲ್‍ಸಿ ಬೆಮೆಲ್ ಕಾಂತರಾಜು ಕಣಕ್ಕಿಳಿಯಲಿದ್ದಾರೆ, ಗುಬ್ಬಿಯಲ್ಲಿ ನಡೆಯುತ್ತಿರುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಅಧಿಕೃತವಾಗಿ ವಿರೋಧಿಸುತ್ತಿಲ್ಲವಾದರೂ ಗುಪ್ತಗಾಮಿನಿಯಂತಿರುವುದನ್ನು ನಿರಾಕರಿಸಲಾಗದು.

ಜಿಲ್ಲೆಯ ಇತರ ಕ್ಷೇತ್ರಗಳಿಗಿಂತ ಅತ್ಯಂತ ರಂಗೇರಬಹುದಾದ ಕಣಗಳೆಂದೆರೆ ತುಮಕೂರು, ಗ್ರಾಮಾಂತರ ಮತ್ತು ಗುಬ್ಬಿ ಮಾತ್ರ.

ಗುಬ್ಬಿಯಲ್ಲಿ ಹಾಲಿ ಶಾಸಕರೂ ಮಾಜಿ ಸಚಿವರೂ ಆಗಿರುವ ಎಸ್.ಆರ್.ಶ್ರೀನಿವಾಸ್ ಜೆಡಿಎಸ್‍ ಗೆ ಮರಳುವ ಚಾನ್ಸ್ ಇಲ್ಲ, ಕಾಂಗ್ರೆಸ್ ಸೇರುವುದು ಖಚಿತವಾಗಿದೆಯಾದರೂ, ಕಾಂಗ್ರೆಸ್‍ನೊಳಗಿನ ಸ್ಥಳೀಯ ವಿರೋಧ ಅವರಿಗೆ ತಲೆ ನೋವಿನ ಸಂಗತಿಯೇನೂ ಆಗಿಲ್ಲ. ಕ್ಷೇತ್ರದಲ್ಲಿ‘ವಾಸಣ್ಣ’ ಎಂದು ಕರೆಸಿಕೊಳ್ಳುತ್ತಿರುವಾಗ, ಮೊದಮೊದಲು ಆತ್ಮೀಯವಾಗಿ ‘ಸೀನಣ್ಣ’ ಎಂದು ಕರೆಯುತ್ತಿದ್ದು ಇದೀಗ ಬದ್ಧ ದ್ವೇಷಿಯಂತಾಗಿರುವ ಕುಮಾರಣ್ಣ ಪಂಚ ರತ್ನ ಯಾತ್ರೆ ಮುಗಿಸಿ ಹೋಗಲಿ ಎಂದು ಕಾಯುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಗೆಲ್ಲುವ ಹೊಸ ಹೊಸ ವಿಧಾನಗಳನ್ನು ಅನುಸರಿಸುವುದು ಇವರಿಗೆ ಕಡ್ಡಾಯವಾಗಿದೆ. ಬಿಜೆಪಿ ಎರಡು ಸಲ ಸೋತಿರುವ ಬೆಟ್ಟಸ್ವಾಮಿಯನ್ನು ಪಕ್ಕಕ್ಕೆ ಸರಿಸಿ, ಗ್ಯಾಸ್ ಬಾಬು ಮತ್ತು ದಿಲೀಪ್ ಎಂಬ ಇಬ್ಬರು ಮಹತ್ವಾಕಾಂಕ್ಷಿಗಳನ್ನು ಬದಿಗಿರಿಸಿ ವಿನಯ್ ಬಿದರೆಯನ್ನೋ ಮತ್ತಾರನ್ನೋ ಆದರಿಸಿದರೆ ಏನಾಗಬಹುದು ಕಾದು ನೋಡಿ.

ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ರಾಜಕೀಯ ಮಾತುಗಳ ವಿರೋಧದ ಮಟ್ಟದಲ್ಲಿ ಮಾತ್ರವೇ ಇದೆಯಾದರೂ ತುಮಕೂರು ಗ್ರಾಮಾಂತರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಈಗಾಗಲೇ ಸುಪಾರಿ, ಕಂಪ್ಲೇಟ್- ಕೌಂಟರ್ ಕಂಪ್ಲೇಂಟ್‍, ಎಫ್‍ಐಆರ್‍ ಗಳ ಲೆವೆಲ್ ದಾಟಿಬಿಟ್ಟಿದೆ. ಬೆಂಗಳೂರು ವಿವಿಯ ವಿಸ್ತರಣೆಯೋ ಎಂಬಂತೆ ಆಡುತ್ತಿರುವ ಎರಡು ಅವಧಿಗೆ ಶಾಸಕರಾಗಿದ್ದ ಸುರೇಶ್ ಗೌಡರು  ನಡುವೆ ಜೆಡಿಎಸ್- ಕಾಂಗ್ರೆಸ್- ಕೆಜೆಪಿ-ಜೆಡಿಎಸ್-ಕಾಂಗ್ರೆಸ್ ಸುತ್ತುಗಳನ್ನು ಮುಗಿಸಿರುವ ಕುಣಿಗಲ್‍ ಮಾಜಿ ಶಾಸಕ ಹೆಚ್. ನಿಂಗಪ್ಪನವರ ಸ್ಪರ್ಧೆ  ಹಾಗೂ ಮುದ್ದಹನುಮೇಗೌಡರ ನೆರವಿನಿಂದ ದಿವಂಗತ ಚನ್ನಿಗಪ್ಪನವರ ಮಗ ಗೌರಿಶಂಕರ ಸ್ವಾಮಿಯವರನ್ನು ಚಿತ್ ಮಾಡುವ ಹಂಬಲದಲ್ಲಿದ್ದಾರೆ.

35 ವಾರ್ಡುಗಳ ತುಮಕೂರು ಮಹಾನಗರ ಪಾಲಿಕೆಗೆ ಮೇಯರ್ ಅಂತ ಒಂದು ಹುದ್ದೆ ಇದ್ದಾಗಲೂ, ಅಸೆಂಬ್ಲಿಗೆ ಒಬ್ಬರು ಬೇಡವೇ ಎಂಬ ಕಾರಣಕ್ಕೇ ಸೃಜಿಸಲಾಗಿದೆಯೇನೋ ಎಂಬಂತಿರುವ ತುಮಕೂರು ನಗರ ಕ್ಷೇತ್ರದಲ್ಲಿ  ಸ್ಮಾರ್ಟ್ ಸಿಟಿ ಕಂಪನಿಯ ಹಾಲಿ ಶೇರ್ ಹೋಲ್ಡರ್‍ ಮತ್ತೆ ಗೆಲ್ಲುವರೇ ಎಂಬುದು ಅವರು ಕಮಲದ ಬದಲಿಗೆ ಕೈ ಹಿಡಿಯುವರೇ ಎಂಬ ಭವಿಷ್ಯವನ್ನು ಆಧರಿಸಿದೆ. ಜೆಡಿಎಸ್‍ನಲ್ಲಿ ಎರಡು ಸಲ ಸೋತು, ಕಳೆದ ಸಲ ರನ್ನರ್ ಅಪ್ ಆಗಿರುವ ಗೋವಿಂದರಾಜುಗೆ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬು ಎಂಟ್ರಿ ನಿದ್ದೆಗೆಡಿಸಿದೆ. ಇಲ್ಲಿ ಕಾಂಗ್ರೆಸ್‍ನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಸೋಲಿಸಲು ಬಿಜೆಪಿಯೇ ಸಾಕು. ನಾಲ್ಕು ಸಲ ಗೆದ್ದು ಐದನೇ ಗೆಲುವಿಗೆ ಕಾತರಿಸುತ್ತಿರುವ ಸೊಗಡು ಶಿವಣ‍್ಣನವರಿಗೆ ಆರ್ ಎಸ್ ಎಸ್ ಟಿಕೆಟ್ ಕೊಡಿಸಿದರೇ ಸರಿ, ಇಲ್ಲವಾದರೇ ರೆಬೆಲ್ ಸ್ಟಾರ್ ತರ ನಾಮಿನೇಶನ್ ಹಾಕಿ ಮತ್ತೊಮ್ಮೆ ಕೆಜೆಪಿ-ಬಿಜೆಪಿ ಹಣಾಹಣಿಯ ರಿಸಲ್ಟ್ ಬರುವಂತಾದರೇ ಏನು ಮಾಡಲಾಗುವುದಿಲ್ಲ.

ದಯವಿಟ್ಟು, ಬೇಜಾರು ಮಾಡಿಕೊಳ್ಳಬೇಡಿ, ರಾಜಕೀಯವೆನ್ನುವುದು ವೃತ್ತಿಯೂ ಅಲ್ಲ ಪ್ರವೃತ್ತಿ ಮೊದಲೇ ಅಲ್ಲ, ಕಡೇ ಉಸಿರಿರುವರೆಗೂ ಸುಮ್ಮನಿರಲು ಬಿಡದೇ ಕುಣಿಸುವ ಮಾಯೆ ಅಂತ ಹೇಳಲು ಇಷ್ಟೆಲ್ಲ ವಿವರಿಸಬೇಕಾಯಿತು. ಇದೆಲ್ಲ ಈಗ ಓಡುತ್ತಿರುವ ಹಳೇ ಸಿನಿಮಾಗಳ ವಿಮರ್ಶೆ ಮಾತ್ರ, ಕೆಜಿಎಫ್, ಕಾಂತಾರ ತರ ಹೊಸ ಹೀರೋಗಳ ಹೊಸ ಹೊಸ ಟ್ರೈಲರ್, ಟೀಸರ್ ಗಳು ಅಪ್ ಲೋಡ್ ಆಗಲು ರೆಡಿಯಾಗಿವೆ. ಜಸ್ಟ್ ವೇಯ್ಟ್, 2023ರ ಮಾರ್ಚಿ 13ರಂದು ವಿಧಾನ ಸಭಾ ಚುನಾವಣೆಗೆ ಕೋಡ್ ಆಫ್ ಕಂಡಕ್ಟ್ ಇಶ್ಯೂ ಆಗಲಿದೆ.