ಇವತ್ತು ಲಾಲ್ ಕೃಷ್ಣ ಅಡ್ವಾಣಿಯೂ “ ಭಾರತ ರತ್ನ”  - ಕುಚ್ಚಂಗಿ ಪ್ರಸನ್ನ

1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಕೊಲ್ಲದೇ ಹೋಗಿದ್ದರೆ, ಅವರ ಸಾವಿನ ಅನುಕಂಪದ ತ್ಸುನಾಮಿಯಲ್ಲಿ ಬಿಜೆಪಿ ಕೊಚ್ಚಿ ಹೋಗುತ್ತಿರಲಿಲ್ಲ ಹಾಗೂ 402 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ರಾಜೀವ ಗಾಂಧಿ ಪ್ರಧಾನಿಯೂ ಆಗುತ್ತಿರಲಿಲ್ಲ. 

ಇವತ್ತು ಲಾಲ್ ಕೃಷ್ಣ ಅಡ್ವಾಣಿಯೂ “ ಭಾರತ ರತ್ನ”   - ಕುಚ್ಚಂಗಿ ಪ್ರಸನ್ನ

ಒಂದು ಗಳಿಗೆ 

ಕುಚ್ಚಂಗಿ ಪ್ರಸನ್ನ    ಕಳೆದ ಲೋಕಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದ ನೂರಾರು ಸಂಸತ್ ಸದಸ್ಯರನ್ನು ಅಮಾನತುಪಡಿಸಿ, ನಂತರ ತನಗೆ ಬೇಕಾದ ಎಲ್ಲ ಮಸೂದೆಗಳನ್ನು ಅಂಗೀಕರಿಸಿಕೊಂಡ ಬಿಜೆಪಿಯಿಂದ 40 ವರ್ಷಗಳ ಹಿಂದೆ ಅಂದರೆ 1984ರ ಚುನಾವಣೆಯಲ್ಲಿ ಗೆದ್ದವರು ಕೇವಲ ಇಬ್ಬರು ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. ಬಿಜೆಪಿ ಇರಲಿ, ಬಿಜೆಪಿಯ ಮೂಲ ರಾಜಕೀಯ ಪಕ್ಷ ಭಾರತೀಯ ಜನಸಂಘ 1952ರಲ್ಲಿ ಗೆದ್ದದ್ದು ಕೂಡಾ ಮೂರು ಸ್ಥಾನಗಳನ್ನು ಮಾತ್ರ. 

   

ಡಾ.ಎ.ಕೆ.ಪಟೇಲ್‌   ಚಂದುಪಟ್ಣ ಜಂಗರೆಡ್ಡಿ


    1984ರಲ್ಲಿ ಬಿಜೆಪಿ ದೇಶದ 279 ಕ್ಷೇತ್ರಗಳಲ್ಲಿ ಉಮೇದುವಾರರನ್ನು ಕಣಕ್ಕಿಳಿಸಿದ್ದಾಗ ಗೆದ್ದ ಕೇವಲ ಇಬ್ಬರು ಸಂಸದರು ಯಾರು ಅಂತ ಇವತ್ತಿನ ಆ ಪಕ್ಷದ ಸಕ್ರಿಯ ಕರ‍್ಯಕರ್ತರನ್ನು ಕೇಳಿದರೆ ಟಕ್ಕಂತ ಪ್ರಧಾನಿ ಹುದ್ದೆಗೇರಿದ ಅಟಲ ಬಿಹಾರಿ ವಾಜಪೇಯಿ ಮತ್ತು ಉಪ ಪ್ರಧಾನಿ ಆದ ಲಾಲಕೃಷ್ಣ ಅಡ್ವಾಣಿ ಅಂತ ಹೇಳಿಬಿಟ್ಟಾರು. ಆದರೆ ಆ ಚುನಾವಣೆಯಲ್ಲಿ ಇವರಿಬ್ಬರೂ ಗೆಲ್ಲಲಿಲ್ಲ. ಗೆದ್ದವರರಲ್ಲಿ ಒಬ್ಬರು ಗುಜರಾತಿನ ಮೆಹಸಾನಾ ಕ್ಷೇತ್ರದಿಂದ ಡಾ. ಅಮೃತಲಾಲ್ ಕಾಳಿದಾಸ ಪಟೇಲ್ (ಡಾ.ಎ.ಕೆ.ಪಟೇಲ್) ಹಾಗೂ ಮತ್ತೊಬ್ಬರು ಆಂಧ್ರ ಪ್ರದೇಶದ ಹನುಮಕೊಂಡ ಕ್ಷೇತ್ರದಿಂದ ಚಂದುಪಟ್ಣ ಜಂಗರೆಡ್ಡಿ. 1984ರ ಚುನಾವಣೆಯಲ್ಲಿ ಇದೇ ಜಂಗರೆಡ್ಡಿಯವರು ಸೋಲಿಸಿದ್ದು ಬೇರಾರನ್ನೂ ಅಲ್ಲ, ಮುಂದೊಮ್ಮೆ ಈ ದೇಶದ ಪ್ರಧಾನ ಮಂತ್ರಿ ಆದ ಪಿ.ವಿ.ನರಸಿಂಹರಾವ್ ಅವರನ್ನು ಅಂತ ಗೊತ್ತಾದರೆ ಇನ್ನೂ ಅಚ್ಚರಿ ಪಡುತ್ತೀರಿ. 


    ಗುಜರಾತಿನ ಎ.ಕೆ.ಪಟೇಲ್ ಅವರೇನೋ ಮುಂದೆ ಅದೇ ಕ್ಷೇತ್ರದಿಂದ 1999ರವರೆಗೆ ಎಂಪಿಯಾಗಿ ಚುನಾಯಿತರಾಗುತ್ತ ಹೋದರು ಹಾಗೂ ವಾಜಪೇಯಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಆಗಿ ಅಧಿಕಾರ ಅನುಭವಿಸಿದರು. ಆದರೆ ಪಿವಿಎನ್ ಅವರನ್ನು ಸೋಲಿಸಿದ ಜಂಗರೆಡ್ಡಿ ಮಾತ್ರ ಪಕ್ಷ ಮತ್ತು ಸರ್ಕಾರದಲ್ಲಿ ಯಾವ ಹುದ್ದೆಯನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಕಡೇ ಪಕ್ಷ ಒಂದು ರಾಜ್ಯಪಾಲರ ಪದವಿಯಾದರೂ ದಕ್ಕೀತೇ ಎಂಬುದು ಇವರ ಕೊನೆಯಾಸೆ ಆಗಿತ್ತು. ಮೂರು ವರ್ಷದ ಹಿಂದೆ ದಿಲ್ಲಿಗೆ ಬಂದಿದ್ದಾಗ ಪ್ರಧಾನಿ ಮೋದಿ ಮತ್ತು ಅವರ ಬಲಗೈ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಲು ಮಾಡಿದ ಪ್ರಯತ್ನ ಫಲಿಸಲಿಲ್ಲವಂತೆ. ನೋಡಿ ಈ ಅಮಿತ್ ಶಾ ನನ್ನೊಂದಿಗೆ ಮಾತನಾಡಲೂ ತಯಾರಿಲ್ಲ ಅಂತ ಸುದ್ದಿಗಾರರ ಮುಂದೆ ಜಂಗರೆಡ್ಡಿ ಬೇಸರಪಟ್ಟುಕೊಂಡಿದ್ದು ವರದಿಯಾಗಿದೆ. ಈ ಜಂಗರೆಡ್ಡಿ ತೀರಿಕೊಂಡು ನಾಳೆಗೆ ಸರಿಯಾಗಿ ಒಂದು ವರ್ಷ(5.2.2023).


   ಹೀಗೆ ಬೆರಳೆಣಿಕೆಯಾಚೆಗೆ ತೆವಳದೇ ಕೇವಲ ಎರಡು ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದ್ದ ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗ ಭಾರತೀಯ ಜನಸಂಘ ಅಲಿಯಾಸ್ ಭಾರತೀಯ ಜನತಾ ಪಕ್ಷವನ್ನು ಅಧಿಕಾರದ ಗದ್ದುಗೆಯ ಸಮೀಪಕ್ಕೆ ತಂದವರು ಇವತ್ತು ದೇಶದ ಅತ್ಯುನ್ನತ ನಾಗರಿಕ ಗೌರವ ಎನಿಸಿರುವ ಭಾರತ ರತ್ನ ಪ್ರಶಸ್ತಿ ಪಡೆದುಕೊಂಡ ಲಾಲ ಕೃಷ್ಣ ಅಡ್ವಾಣಿ ಅವರು. ಅವರಿಗೀಗ 96 ವರ್ಷ. 


    1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಕೊಲ್ಲದೇ ಹೋಗಿದ್ದರೆ, ಅವರ ಸಾವಿನ ಅನುಕಂಪದ ತ್ಸುನಾಮಿಯಲ್ಲಿ ಬಿಜೆಪಿ ಕೊಚ್ಚಿ ಹೋಗುತ್ತಿರಲಿಲ್ಲ ಹಾಗೂ 402 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ರಾಜೀವ ಗಾಂಧಿ ಪ್ರಧಾನಿಯೂ ಆಗುತ್ತಿರಲಿಲ್ಲ. 


    ಇದೇ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1975ರ ಜೂನ್ 25ರಂದು ದೇಶದಲ್ಲಿ ಅಂತರಿಕ ತುರ್ತು ಪರಿಸ್ಥಿತಿಯನ್ನು ಹೇರಿದಾಗ, ಬೀದಿಗಿಳಿದು ವಿರೋಧಿಸಿದ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಲ್ಲಿ ಭಾರತೀಯ ಜನಸಂಘವೂ ಮುಂಚೂಣಿಯಲ್ಲಿತ್ತು. ಎರಡು ವರ್ಷಗಳ ನಂತರ ತುರ್ತು ಪರಿಸ್ಥಿತಿ ರದ್ದಾದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಜನತಾ ರಂಗದಲ್ಲಿ ಈ ಭಾರತೀಯ ಜನಸಂಘವೂ ವಿಲೀನಗೊಂಡುಬಿಟ್ಟಿತ್ತು ಹಾಗೂ ಈ ಪಕ್ಷದ ಪ್ರತಿನಿಧಿಗಳಾಗಿ ಅಟಲಬಿಹಾರಿ ವಾಜಪೇಯಿ ವಿದೇಶಾಂಗ ಖಾತೆ ಸಚಿವರಾಗಿ ಹಾಗೂ ಈ ಲಾಲಕೃಷ್ಣ ಅಡ್ವಾಣಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಧಿಕಾರದ ರುಚಿ ನೋಡಿದರು. ಮುರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದ ಈ ಜನತಾ ರಂಗ ಸರ್ಕಾರ ಎರಡು ವರ್ಷ ಪೂರೈಸಲಿಲ್ಲ. 1980ರ ಜನವರಿಯಲ್ಲಿ ಮತ್ತೆ ಚುನಾವಣೆ ನಡೆಯಿತು. ವಿಲೀನಗೊಂಡಿದ್ದ ಜನತಾ ಪಕ್ಷದ ಗುರುತಿನಿಂದಲೇ ಹೊಸ ದಿಲ್ಲಿ ಕ್ಷೇತ್ರದಿಂದ ವಾಜಪೇಯಿ ಸೇರಿದಂತೆ ಒಟ್ಟು ನಾಲ್ವರು ಲೋಕಸಭೆಗೆ ಚುನಾಯಿತರಾದರು. ನಂತರ ಅದೇ 1980ರ ಏಪ್ರಿಲ್ 6ರಂದು ತಾವು ವಿಲೀನಗೊಂಡಿದ್ದ ‘ಜನತಾ’ ಪದವನ್ನು ಉಳಿಸಿಕೊಂಡು ಭಾರತೀಯ ‘ ಜನತಾ’ ಪಕ್ಷ(ಭಾಜಪ-ಬಜಪಾ-ಬಿಜೆಪಿ) ವನ್ನು ವಾಜಪೇಯಿ ಮತ್ತು ಅಡ್ವಾಣಿ ಘೋಷಿಸಿದರು. ಭಾರತೀಯ ಜನ ಸಂಘದ ಉರಿವ ‘ದೀಪ’ದ ಗುರುತಿನಿಂದ ಭಾರತೀಯ ಜನತಾ ಪಕ್ಷ ಅರಳಿದ ‘ಕಮಲ’ವನ್ನು ತನ್ನ ಚುನಾವಣಾ ಗುರುತಾಗಿ ಆಯ್ಕೆ ಮಾಡಿಕೊಂಡಿತು. 


    ಅವಿಭಜಿತ ಇಂಡಿಯಾ ಭೂಖಂಡದ ಕರಾಚಿಯಲ್ಲಿ ಸಿಂಧಿ ಸಮುದಾಯದಲ್ಲಿ 8 ನವೆಂಬರ್ 1927ರಲ್ಲಿ ಜನಿಸಿದ ಲಾಲ ಕೃಷ್ಣ ಅಡ್ವಾಣಿ ಅವರ ಕುಟುಂಬ ವಿಭಜನೆಯ ಸಂದರ್ಭದಲ್ಲಿ ಬಾಂಬೆ ನಗರಕ್ಕೆ ಬಂದು ನೆಲೆಸಿತು ಎಂದು ಹೇಳಲಾಗುತ್ತದೆ. ಅಲ್ಲದೇ ಅಡ್ವಾಣಿ ತಮ್ಮ 14ನೇ ವಯಸ್ಸಿಗೇ ಅಂದರೆ 1941-42ರಲ್ಲಿ ಅಂದರೆ ದೇಶದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿದ್ದ ಕಾಲದಲ್ಲಿ ಆರ್‌ಎಸ್‌ಎಸ್ ಸೇರುತ್ತಾರಂತೆ. ಮಕ್ಕಳು, ಯುವಕರು, ವೃದ್ಧರೆನ್ನದೇ ಇಡೀ ಈ ನೆಲದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೀವವನ್ನೂ ಲೆಕ್ಕಿಸದೇ ಹೋರಾಡುತ್ತಿದ್ದಾಗ ಈ ಯುವ ಅಡ್ವಾಣಿಗೆ ಆರ್‌ಎಸ್‌ಎಸ್ ಸೇರುವಂತ ಮನಸ್ಸು ಹೇಗೆ ಬಂತು ಅಂತ ಅಚ್ಚರಿಯಾಗುವುದಿಲ್ಲವೇ. ಇರಲಿ, ಬಾಂಬೆಯಲ್ಲಿ ಹೈಸ್ಕೂಲ್ ನಂತರದ ಶಿಕ್ಷಣ ಮುಂದುವರೆಸಿ ಕಾನೂನು ಪದವಿಯನ್ನೂ ಪಡೆಯುವ ಅಡ್ವಾಣಿ ರಾಜಸ್ಥಾನದಲ್ಲಿ ಆರ್‌ಎಸ್‌ಎಸ್ ಪ್ರಚಾರಕ್ ಆಗಿ ಕಾರ್ಯನಿರ್ವಹಿಸುತ್ತಾರಂತೆ.


    1951ರಲ್ಲಿ ತಮ್ಮ 24ನೇ ವಯಸ್ಸಿಗೆ ಭಾರತೀಯ ಜನ ಸಂಘವನ್ನು ಅಡ್ವಾಣಿ ಸೇರುತ್ತಾರೆ. ದಿಲ್ಲಿ ಘಟಕದ ಅಧ್ಯಕ್ಷರೂ ಆಗುತ್ತಾರೆ. 1967ರಲ್ಲಿ ದಿಲ್ಲಿ ಮೆಟ್ರೋ ಕೌನ್ಸಿಲ್ ಸದಸ್ಯರಾಗಿ ಚುನಾಯಿತರಾಗುತ್ತಾರೆ. ನಂತರ ಮೂರೇ ವರ್ಷದಲ್ಲಿ 1970ರಲ್ಲಿ ತಮ್ಮ 43ನೇ ವಯಸ್ಸಿಗೆ ರಾಜ್ಯಸಭಾ ಸದಸ್ಯರಾಗಿ ಸಂಸತ್ ಪ್ರವೇಶಿಸುತ್ತಾರೆ ಅಡ್ವಾಣಿ. ಅಲ್ಲಿಂದ ನಾಲ್ಕು ಅವಧಿಗೆ ಗುಜರಾತ್, ಮಧ್ಯಪ್ರದೇಶ ಹೀಗೆ ವಿವಿಧ ರಾಜ್ಯಗಳಿಂದ 1989ರವರೆಗೆ ರಾಜ್ಯಸಭೆಯಲ್ಲಿರುತ್ತಾರೆ ಅಡ್ವಾಣಿ. 1980ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರೂ ಆಗಿ ಹೊರಹೊಮ್ಮುತ್ತಾರೆ ಅಡ್ವಾಣಿ.


   1989ರಲ್ಲಿ ಲೋಕಸಭೆಗೆ ಅಡ್ವಾಣಿ ಅವರ ಪ್ರವೇಶ ಆಗುತ್ತದೆ. 2014ರವರೆಗೆ ಒಟ್ಟು ಏಳು ಅವಧಿಗೆ ಅಡ್ವಾಣಿ ಲೋಕಸಭಾ ಸದಸ್ಯರಾಗಿ ಚುನಾಯಿತರಾಗುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. 1998-2004ರವರೆಗೆ ಗೃಹ ಸಚಿವರಾಗಿ ಕರ‍್ಯನಿರ್ವಹಿಸಿ ಅತ್ಯಧಿಕ ಅವಧಿಯ ಗೃಹ ಸಚಿವ ಎನಿಸಿಕೊಳ್ಳುತ್ತಾರೆ. 2002-2004ರವರೆಗೆ ಉಪ ಪ್ರಧಾನ ಮಂತ್ರಿಯೂ ಆಗುತ್ತಾರೆ. ಇವರನ್ನು ಪಕ್ಷ 2009ರ ಮಹಾಚುನಾವಣೆಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಿರುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ ಆ ಚುನಾವಣೆಯಲ್ಲಿ 116 ಸ್ಥಾನಗಳಿಗೆ ಸೀಮಿತಗೊಂಡದ್ದರಿಂದ ವಿರೋಧ ಪಕ್ಷದಲ್ಲಿ ಕೂರಬೇಕಾಗುತ್ತದೆ. 2009ರ ನಂತರದ 2014ರ ಚುನಾವಣೆ ಹೊತ್ತಿಗಾಗಲೇ ಅವರೇ ಗುರುತಿಸಿ ಬೆಳೆಸಿ, ಬೆಂಬಲಿಸಿದ, 2002ರ ಗೋಧ್ರಾ ನರಮೇಧದಲ್ಲಿ ಪ್ರಧಾನಿ ವಾಜಪೇಯಿ ಅವರ ‘ ರಾಜಧರ್ಮ’ ಪಾಲಿಸು ಎಂಬ ಆಜ್ಞೆಯ ಹೊರತಾಗಿಯೂ ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಿದ ಅವರ ಕಣ್ಮಣಿ ನರೇಂದ್ರ ಮೋದಿಯ ಪ್ರಭಾವ ವಿಸ್ತಾರಗೊಂಡು, ಅಡ್ವಾಣಿ ಪಕ್ಷದೊಳಗೇ ನಿರ್ಲಕ್ಷ್ಯಕ್ಕೆ ಒಳಗಾಗಿ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡಿ, ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುವ ಪರಿಸ್ಥಿತಿ ಸೃಷ್ಟಿಯಾಗಿಬಿಟ್ಟಿರುತ್ತದೆ. ಆಗ ಅಡ್ವಾಣಿ ಅವರಿಗೆ ಭರ್ತಿ 86 ವರ್ಷಗಳು. 


ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಧಾನ ಭೂಮಿಕೆ ವಹಿಸಿದರೂ ಹಿರಿಯ ನಾಯಕರಾಗಿ ಪಕ್ಷದೊಳಗಿನ ವ್ಯವಹಾರಗಳು ಮತ್ತು ನಡವಳಿಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕ ವೇದಿಕೆಗಳಲ್ಲೂ ನಿರ್ಲಕ್ಷ್ಯ ಮತ್ತು ಮುಜುಗರಕ್ಕೊಳಗಾದ, ಅವರ ಮಹತ್ವಾಕಾಂಕ್ಷೆಯ ರಾಮಮಂದಿರದ ಪ್ರಾಣ ಪ್ರತಿಷ್ಟಾಪನಾ ಸಮಾರಂಭಕ್ಕೂ ಎಂಟ್ರಿ ಪಡೆಯದೇ ಹೋದ ಅಡ್ವಾಣಿಯವರಿಗೆ ಇವತ್ತು ಭಾರತ ರತ್ನ ಘೋಷಿಸಿರುವುದು 2024ರ ರಾಜಕೀಯ ಅಚ್ಚರಿಗಳಲ್ಲಿ ಒಂದು ಎನ್ನಬಹುದು. ಬಿಹಾರದ ಹಿಂದುಳಿದ ವರ್ಗಗಳ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ್ದನ್ನು ಚುನಾವಣೆಯಲ್ಲಿ ಓಟು ಗಳಿಸುವ ದೃಷ್ಟಿಯಿಂದ ಎಂಬ ಟೀಕೆಗಳು ಬರುತ್ತಿರುವಾಗಲೇ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ʼಶ್ರೇಷ್ಟ ಆಡಳಿತಗಾರʼ ಎಂಬ ಹೆಸರಿನಲ್ಲಿ ʼಭಾರತ ರತ್ನʼ ಬಿರುದನ್ನು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಘೋಷಿಸಿರುವುದು ಗಮನಿಸಬೇಕಾದ ಸಂಗತಿಯೇ ಆಗಿದೆ.


1980ರಲ್ಲಿ ಪಕ್ಷ ಸ್ಥಾಪಿಸಿದಾಗ ತನ್ನ ಪ್ರಣಾಳಿಕೆಯಲ್ಲಿ ಗಾಂಧೀ ಪ್ರಣೀತ ಸಮಾಜವಾದವೇ ತನ್ನ ಬುನಾದಿ ಎಂದು ಹೇಳಿಕೊಂಡಿದ್ದ ಬಿಜೆಪಿಯನ್ನು ಕೆಲವೇ ವರ್ಷಗಳಲ್ಲಿ ಹಿಂದುತ್ವವಾದದ ಕುಲುಮೆಯನ್ನಾಗಿ ಮಾಡಿದ್ದು ಇದೇ ಅಡ್ವಾಣಿ ಅವರೇ. ಅಷ್ಟು ಮಾತ್ರವಲ್ಲ ವಿಶ್ವ ಹಿಂದು ಪರಿಷದ್ ಎಂಬ ಆರ್‌ಎಸ್‌ಎಸ್‌ನ ಮತ್ತೊಂದು ವಿಭಾಗವು ಕೈಗೆತ್ತಿಕೊಂಡಿದ್ದ ಬಾಬರಿ ಮಸೀದಿ- ರಾಮ ಜನ್ಮ ಭೂಮಿ ವಿಚಾರವನ್ನು ತನ್ನ ಪ್ರಧಾನ ರಾಜಕೀಯ- ಚುನಾವಣಾ ಸಂಗತಿಯನ್ನಾಗಿ ಮಾಡಿಕೊಂಡದ್ದೂ ಇದೇ ಅಡ್ವಾಣಿಯವರೇ. ಹಿಂದುತ್ವ-ರಾಷ್ಟ್ರೀಯವಾದವನ್ನು ಮುಸ್ಲಿಂ ದ್ವೇಷವನ್ನಾಗಿ ರೂಪಿಸುವಲ್ಲಿ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಯಶಸ್ಸು ಕಂಡರು. 


1989-90ರಲ್ಲಿ ಆಡಳಿತ ನಡೆಸಿದ ವಿ.ಪಿ.ಸಿಂಗ್ ಅವರ ಬಹುಮತವಿಲ್ಲದ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ಕೊಟ್ಟಿತ್ತು. ಯಾವಾಗ ವಿಶ್ವನಾಥ ಪ್ರತಾಪ್ ಸಿಂಗ್ ಅವರು ದೇಶದ ಹಿಂದುಳಿದ ಜಾತಿ, ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯನ್ನು ಅನುಷ್ಟಾನಕ್ಕೆ ತರುವುದಾಗಿ ಘೋಷಿಸಿದರೋ, ಮೂಲತಃ ಮೀಸಲಾತಿ ವಿರೋಧಿಯಾಗಿರುವ ಆರ್‌ಎಸ್‌ಎಸ್ ತನ್ಮೂಲಕ ಬಿಜೆಪಿಗೆ ಸುಮ್ಮನಿರಲಾಗಲಿಲ್ಲ, ಮಂಡಲ್ ವರದಿ ಅನುಷ್ಟಾನದ ವಿರುದ್ಧ ಪ್ರತಿಭಟನೆ, ಹಿಂಸಾಚಾರಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಲೇ, ಅಡ್ವಾಣಿ ರಾಮ ರಥ ಯಾತ್ರೆಯನ್ನು ಆರಂಭಿಸಿ, ಆ ಯಾತ್ರೆಯನ್ನು ವಿಪಿ ಸಿಂಗ್ ಸರ್ಕಾರ ತಡೆಯಿತು ಎನ್ನುವ ನೆಪವೊಡ್ಡಿ ಬಿಜೆಪಿಯ ಬೆಂಬಲವನ್ನು ವಾಪಸ್ ಪಡೆಯುತ್ತಾರೆ. ಹೀಗಾಗಿ ವಿಪಿ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದ ನ್ಯಾಶನಲ್ ಫ್ರಂಟ್ ಸರ್ಕಾರ ಕೇವಲ 343 ದಿನಗಳಿಗೇ ಕುಸಿಯುತ್ತದೆ. 1990ರ ಸೆಪ್ಟೆಂಬರ್ 20ರಂದು ಗುಜರಾತಿನ ಸೋಮನಾಥದಿಂದ ಆರಂಭಿಸಿದ ರಾಮರಥಯಾತ್ರೆಯಿಂದ ಹಿಡಿದು ಒಟ್ಟು ಆರು ರಥಯಾತ್ರೆಗಳನ್ನು ಅಡ್ವಾಣಿ ನಡೆಸುತ್ತಾರೆ. ಈ ನಡುವೆ ಬಾಬರಿ ಮಸೀದಿಯನ್ನೂ ಕೆಡವಿ, ಆ ಕೇಸ್‌ನ ಪ್ರಮುಖ ಆರೋಪಿಯೂ ಆಗುತ್ತಾರೆ. ಸಾವಿರಾರು ಸಾವುನೋವುಗಳಿಗೆ ಮೂಲ ಕಾರಣರಾಗುತ್ತಾರೆ. 


1991ರ ಚುನಾವಣೆಯಲ್ಲಿ ಮಂಡಲ್(ಆಯೋಗದ ವರದಿ) –(ರಾಮ)ಮಂದಿರ್‌ಗಳೇ ಪ್ರಧಾನ ಸಂಗತಿಗಳಾಗಿದ್ದಾಗ್ಯೂ , ಚುನಾವಣೆಯ ದಿನಗಳಲ್ಲೇ ನಡೆದ ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿಯವರ ಹತ್ಯೆ ಬಿಜೆಪಿಯನ್ನು 120 ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲಲು ಅವಕಾಶ ನೀಡುವುದಿಲ್ಲ. ಹೀಗಾಗಿ ನರಸಿಂಹರಾವ್ ಕಾಂಗ್ರೆಸ್ ಪ್ರಧಾನಿಯಾಗಿ ಹೊರಹೊಮ್ಮುತ್ತಾರೆ. ಮತ್ತೆ ಅಡ್ವಾಣಿ ವಿರೋಧ ಪಕ್ಷದ ನಾಯಕರಾಗಿ ಉಳಿಯುತ್ತಾರೆ. ಆದಾಗ್ಯೂ ಆರು ದಶಕಗಳ ಕಾಲ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದ ಅಡ್ವಾಣಿ ಅವರ ಪಾಕಿಸ್ತಾನ ಯಾತ್ರೆ ಅವರ ಜನಪ್ರಿಯತೆಗೆ ಧಕ್ಕೆ ತಂದಿತೆಂದೇ ಹೇಳಬೇಕು. 


2005ರ ಜೂನ್‌ನಲ್ಲಿ ಆರು ದಿನಗಳ ಕಾಲ ತಮ್ಮ ಹುಟ್ಟೂರು ಕರಾಚಿ ಇರುವ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಅಡ್ವಾಣಿ ಪಾಕಿಸ್ತಾನದ ಪಿತಾಮಹ ಎಂದು ಆ ದೇಶ ಪರಿಗಣಿಸಿರುವ ಮಹಮದ್ ಆಲಿ ಜಿನ್ನಾ ಅವರ ಸಮಾಧಿಯ ಮುಂದೆ ನಿಂತು ಜಿನ್ನಾ “ ಸೆಕ್ಯುಲರ್” ಹಾಗೂ “ ಹಿಂದೂ -ಮುಸ್ಲಿಂ ಐಕ್ಯತೆಯ ರಾಯಭಾರಿ” ಎಂದು ಬಣ್ಣಿಸುತ್ತಾರೆ. ಹೀಗೆ ಬಣ್ಣಿಸಿದ ಮರುಕ್ಷಣವೇ ಅವರ ಅಖಂಡ ಭಾರತ ಘೋಷಣೆ ಮಹತ್ವ ಕಳೆದುಕೊಂಡು, ಪಕ್ಷ ಹಾಗೂ ಸಂಘದೊಳಗಿನ ಉಗ್ರ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಪಕ್ಷದೊಳಗಿನ ಅಧಿಕಾರ ಕಳೆದುಕೊಳ್ಳತೊಡಗುತ್ತಾರೆ. ಅಲ್ಲಿವರೆಗೂ ಪಕ್ಷದ ಎಲ್ಲ ಪೋಸ್ಟರ್ ಮತ್ತು ಫ್ಲೆಕ್ಸ್ಗಳ ಪ್ರಧಾನ ಮುಖವಾಗಿದ್ದ ಅಡ್ವಾಣಿ ಕ್ರಮೇಣ ನಾಪತ್ತೆಯಾಗಿಬಿಡುತ್ತಾರೆ. 2014ರ ಚುನಾವಣೆಯ ನಂತರ ನರೇಂದ್ರ ಮೋದಿಯವರು ಅಡ್ವಾಣಿಯವರ ಈ ಸ್ಥಾನವನ್ನು ತುಂಬಿದ್ದಾರೆ. 


ಇಂಡಿಯಾ ಸ್ವಾತಂತ್ರö್ಯ ಗಳಿಸುವ ಬಿಕ್ಕಟ್ಟಿನ ಸಂದಿಗ್ದ ಸನ್ನಿವೇಶದಲ್ಲಿ ರಾಜಕೀಯವಾಗಿ ಚುನಾವಣೆಗಳನ್ನು ಎದುರಿಸಿ ಗೆಲ್ಲಲಾಗದೇ ಧರ್ಮವನ್ನು ಮುಂದಿಟ್ಟುಕೊಂಡು ಇಂಡಿಯಾ ಉಪಖಂಡವನ್ನು ವಿಭಜಿಸಲು ಹೇಗೆ ಮಹಮ್ಮದ್ ಆಲಿ ಜಿನ್ನಾ ಕಾರಣರೋ, ಅದೇ ರೀತಿ ಸ್ವತಂತ್ರ ಇಂಡಿಯಾದಲ್ಲಿ, ಕೇವಲ ರಾಜಕೀಯ ಸಂಗತಿಗಳನ್ನೇ ಮತದಾರರ ಮುಂದಿರಿಸಿ ಗೆದ್ದು ಅಧಿಕಾರಕ್ಕೆ ಬರಲಾಗುವುದಿಲ್ಲವೆಂದು ಮನಗಂಡು, ಹಿಂದುತ್ವ ಆಧಾರಿತ ರಾಷ್ಟಿçÃಯತೆ ಮತ್ತು ಅದರ ಮತ್ತೊಂದು ಮುಖವಾಗಿ ಮುಸ್ಲಿಂ ದ್ವೇಷವನ್ನು ಬಂಡವಾಳ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರ ಕೇಂದ್ರದಲ್ಲಿ ನೆಲೆಸುವಂತೆ ಮಾಡಿದ ಬಹು ಸಂಸ್ಕೃತಿ, ಸಹಿಷ್ಣು ಭಾರತವನ್ನು ಮಾನಸಿಕವಾಗಿ ವಿಭಜಿಸಿದ 96ರ ಇಳಿಹರೆಯದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ “ಭಾರತ ರತ್ನ” ಪ್ರದಾನ ಮಾಡಲಾಗುತ್ತಿದೆ. ಎಲ್ಲಿ ಎಲ್ರೂ ಒಂದ್ಸಲ “ಭಾರತ್ ಮಾತಾ ಕೀ ಜೈ” ಎನ್ನಿ.