ಕುರಂಗರಾಯನ ನಿಜ ಚರಿತ್ರೆಯ ಮರು ಸೃಷ್ಟಿಸುವ ನಿಟ್ಟಿನಲ್ಲಿ
kuranaraya-maru-srushti-dr-ravikumar-neeha-bevarahani-kinnari-ಕುರಂಗರಾಯನ ನಿಜ ಚರಿತ್ರೆಯ ಮರು ಸೃಷ್ಟಿಸುವ ನಿಟ್ಟಿನಲ್ಲಿ
ಈ ನೆಲದ ಮೂಲ ದ್ರವ್ಯ ಸಂಶೋಧಕ ಡಾ.ರವಿಕುಮಾರ ನೀಹ ಅವರ ಅರಸು ಕುರಂಗರಾಯ ಪುಸ್ತಕ ಜುಲೈ ಮೂರರ ಭಾನುವಾರ ಬೆಳಿಗ್ಗೆ ನಗರದ ಕನ್ನಡ ಭವನದಲ್ಲಿ ಬಿಡುಗಡೆಯಾಗುತ್ತಿದೆ. ಲಿಖಿತ ಇತಿಹಾಸವು ದಾಖಲಿಸಲು ಒಲ್ಲದ ಈ ನೆಲದ ನಿಜ ಜನರ ಮೂಲಗಳನ್ನು ಜನಪದದಲ್ಲಿ ಹುಡುಕಿ, ತಡಕಿ ಇವತ್ತಿಗೆ ದಕ್ಕಿಸುವ ದಮ್ಮನ್ನು ರವಿಕುಮಾರ್ ಹೊಂದಿದ್ದಾರೆ. ‘ ಅರಸು ಕುರಂಗರಾಯ’ ಕಳೆದ ರಾತ್ರಿ ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿಬಿಟ್ಟೆ, ನೀವೂ ಅಷ್ಟೆ ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲಾರಿರಿ, ನಿಮ್ಮ ಕಣ್ಣೆದುರೇ ಅರಸು ಕುರಂಗರಾಯ ಜೀವ ತಳೆದು ಬಂದು ಬಿಡುತ್ತಾನೆ. ಈ ಅವರ ಹೊಸ ಪುಸ್ತಕದ ಆಯ್ದ ಒಂದೆರಡು ಕಂಡಿಕೆಗಳನ್ನು ಓದುಗರ ಕುತೂಹಲ ತಣಿಸುವ ಸಲುವಾಗಿ ಇಲ್ಲಿ ಈ ‘ಕಿನ್ನರಿ’ ಪ್ರತಿಫಲಿಸುತ್ತಿದೆ. ಕೊಂಡು , ಓದಿ.., - ಸಂಪಾದಕ
ಕುರಂಗರಾಯನ ನಿಜ ಚರಿತ್ರೆಯ ಮರು ಸೃಷ್ಟಿಸುವ ನಿಟ್ಟಿನಲ್ಲಿ
ಕುರನ್ಗರಾಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಈಗಿನ ಸಿದ್ದರಬೆಟ್ಟದಲ್ಲಿ ಕೋಟೆ ಕಟ್ಟಿಕೊಂಡು ಆಳಿದ ದೊರೆ. ಕುರನ್ಗರಾಯ ಆಳಿದ ನೆಲ ಸಿದ್ದರಬೆಟ್ಟ ಸುತ್ತಿನದು. ಆದರೆ ಕುರನ್ಗರಾಯನ ಚರಿತ್ರೆ ಕಾಣುವುದು ಸಿದ್ದರಬೆಟ್ಟದ ದಕ್ಷಿಣ ದಿಕ್ಕಿನಲ್ಲಿ. ಸಿದ್ದರಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಕೋಟೆ ಕಟ್ಟಿ ಆಳಿದ್ದಾನೆ. ಕುರನ್ಗರಾಯ ಚರಿತ್ರೆಯಲ್ಲಿ ದಾಖಲಾಗದೇ ಇರುವುದಕ್ಕೆ ಈ ದಿಕ್ಕೂ ಕಾರಣವಿರಬಹುದೇನೋ? ಆತ ಯಾಕೆ ಈ ದಿಕ್ಕನ್ನೇ ಆರಿಸಿಕೊಂಡಿದ್ದ ಎಂಬುದು ಮುಖ್ಯವಾದ ಪ್ರಶ್ನೆ. ಇದರೊಂದಿಗೆ ಸೇರಿಸಬಹುದಾದ ಮತ್ತೊಂದು ಅಂಶವೆಂದರೆ ಮೇಲ್ಜಾತಿಯವರು ಯಾರಾದರೂ ಆಳ್ವಿಕೆ ನಡೆಸಿದರೆ ಅವರು ದಕ್ಷಿಣ ದಿಕ್ಕನ್ನು ಆಯ್ದುಕೊಳ್ಳುವುದಿಲ್ಲ. ಕುರನ್ಗರಾಯ ಕೆಳಜಾತಿಯವನಾದ ಕಾರಣದಿಂದ ಈ ದಕ್ಷಿಣ ದಿಕ್ಕನ್ನು ಆರಿಸಿಕೊಂಡನೇ. ದಕ್ಷಿಣ ದಿಕ್ಕು ಕೆಳಜಾತಿಯವರಿಗೆ ಪವಿತ್ರವೆಂದೇ ಭಾವಿಸುತ್ತಾರೆ ಎಂದು ಇಲ್ಲಿನ ಸ್ಥಳೀಕರ ವಿವರಣೆ. ಕುರನ್ಗರಾಯ ಈ ಜಾಗ ಆರಿಸಿಕೊಳ್ಳಲು ಈ ಅಂಶವು ಕಾರಣವಿರಬಹುದೇನೋ?
ಆದರೆ ಶ್ರೇಣಿಕರಣ ವ್ಯವಸ್ಥೆಯಲ್ಲಿ ದಕ್ಷಿಣ ದಿಕ್ಕು ಮೊದಲಿನಿಂದಲೂ ಅವಜ್ಞೆಗೆ ಗುರಿಯಾದ ನೆಲ. ದಕ್ಷಿಣ ದಿಕ್ಕಿನಲ್ಲಿರುವ ಮನೆ, ದಕ್ಷಿಣ ದಿಕ್ಕಿನಲ್ಲಿರುವ ಬಾಗಿಲು ಅಶುಭ. ಈ ಕಾರಣದಿಂದ ಊರಿನ ಕೆಳಜಾತಿಗಳ ವಾಸದ ನೆಲೆಗಳು, ಆ ಊರಿನ ಸ್ಮಶಾನಗಳು ಅಷ್ಟೇ ಏಕೆ ಊರಿನ ಗ್ರಾಮದೇವತೆಗಳು ದಕ್ಷಿಣ ದಿಕ್ಕಿನಲ್ಲಿಯೇ ಇರುತ್ತಿದ್ದುಂಟು. ದಕ್ಷಿಣ ದಿಕ್ಕನ್ನು ದುಷ್ಟ ಶಕ್ತಿಗಳ ಆವಾಸ ಸ್ಥಾನವೆಂದೇ ಬಗೆಯಲಾಗಿದೆ. ವೈದಿಕ ದೃಷ್ಟಿಕೋನದಲ್ಲಿ ದಕ್ಷಿಣ ದಿಕ್ಕು ಕೇಡಿನ ಸಾವಿನ ಸಂಕೇತ. ‘ದಕ್ಷಿಣವೆಂಬುದು ಆರ್ಯರಿಗೆ ಶಿಕ್ಷೆಯ ತಾಣ. ವಿಶ್ವಾಮಿತ್ರನೊಂದಿಗೆ ಸ್ಪರ್ದೆಯಲ್ಲಿ ಸೋತರೆ ತಾನು ಮದ್ಯ ಕುಡಿಯುತ್ತ, ಕತ್ತೆಯ ಮೇಲೆ ಕುಳಿತು ದಕ್ಷಿಣಾಭಿಮುಖವಾಗಿ ಹೋಗುತ್ತೇನೆಂದು ವಶಿಷ್ಟ ಪ್ರತಿಜ್ಞೆ ಮಾಡುತ್ತಾನೆ. ರಾಮಾಯಣದ ಚಾರಿತ್ರಿಕ ವಿಶ್ಲೇಷಣೆ ಮಾಡುವವರು ಹೇಳುವಂತೆ, ದಕ್ಷಿಣಭಾರತವನ್ನೂ ಅನಾರ್ಯರನ್ನೂ ಗೆಲ್ಲುವ ಆರ್ಯರ ಕನಸಿನ ಸಂಕೇತವಾಗಿ ರಾಮ ದಕ್ಷಿಣಕ್ಕೆ ಬಂದ ಮಿತ್ ಹುಟ್ಟಿದೆ. ಎಂಬುದನ್ನು ರಹಮತ್ ತರೀಕೆರೆ ಚರ್ಚಿಸುತ್ತಾರೆ.1 ಹಾಗೆ ನೋಡಿದರೆ ದಕ್ಷಿಣ ಭಾಗಕ್ಕೆ ಸಂಬಂಧಿಸಿದವು ಮಾನ್ಯತೆಯಿಲ್ಲದ, ಕ್ಷುದ್ರ ಜಗತ್ತಿನವು ಎಂದು ತುಚ್ಚೀಕರಿಸಿರುವ ಹುನ್ನಾರವನ್ನು ನೋಡಬಹುದು.
ಕುರನ್ಗರಾಯನ ಬಹುಪಾಲು ಆಡಳಿತದ ದಿಕ್ಕೇ ದಕ್ಷಿಣದ್ದು. ಬೆಟ್ಟದ ಮೇಲಿರುವ ಕಲ್ಲಿನ ಕೋಟೆ, ಗಲ್ಲೆಬಾನಿ, ಶಿವನ ದೇವಸ್ಥಾನ, ಮತ್ತು ದಕ್ಷಿಣದ ತಪ್ಪಲ್ಲಿನಲ್ಲಿರುವ ದೊಡ್ಡಕಾಯಪ್ಪ ದೇವಸ್ಥಾನ, ಮಣ್ಣಿನಿಂದ ರಚನೆಯಾದ ಕೋಟೆ, ವಾಸದ ನೆಲೆಗಳೆಲ್ಲ ದಕ್ಷಿಣ ದಕ್ಕಿನಲ್ಲಿಯೇ ಇವೆ. ಕುರನ್ಗರಾಯನ ಬಗೆಗಿನ ಐತಿಹ್ಯಗಳು, ಸ್ಮಾರಕಗಳು ಹೆಚ್ಚು ಕಂಡುಬರುವುದು ದಕ್ಷಿಣ ದಿಕ್ಕಿನ ಪ್ರದೇಶಗಳಲ್ಲಿ. ಉತ್ತರ ಭಾಗದಲ್ಲಿ ಸ್ಮಾರಕಗಳು ಕಡಿಮೆ. ಈಗಲೂ ಸಿದ್ದರಬೆಟ್ಟಕ್ಕೆ ಜನ ಉತ್ತರಭಾಗದಿಂದಲೇ ಹತ್ತುತ್ತಾರೆ. ಉತ್ತರ ಭಾಗದಲ್ಲಿ ಇತ್ತೀಚೆಗೆ ಮಠಗಳು ತಲೆಯೆತ್ತಿವೆ. ಅಂಗಡಿ ಮತ್ತಿತ್ತರ ವ್ಯಾಪಾರ ಕೇಂದ್ರಗಳು ನಿರ್ಮಾಣವಾಗಿವೆ. ಈ ಉತ್ತರ ಭಾಗಕ್ಕೆ ಬಳಸಿಕೊಂಡು ಹೋಗಬೇಕು. ಆದರೂ ಹೆಚ್ಚಿನ ವಹಿವಾಟು ಜನಸಂಪರ್ಕ ಉತ್ತರ ಭಾಗದಲ್ಲಿಯೇ ಇದೆ. ದಕ್ಷಿಣ ದಿಕ್ಕು ಕೊರಟಗೆರೆಗೆ ಹತ್ತಿರದಲ್ಲಿದೆ. ಮುಖ್ಯರಸ್ತೆಗೆ ಹತ್ತಿರವೇ ಇದ್ದರೂ ಜನಬಳಕೆ ಕಡಿಮೆಯಿದೆ. ಪರಂಪರೆಯಿAದ ಯಾರೂ ಆ ದಿಕ್ಕಿನಲ್ಲಿ ಓಡಾಟವಿಟ್ಟುಕೊಂಡಿದ್ದರೋ ಅವರೇ ದಕ್ಷಿಣ ದಿಕ್ಕನ್ನು ಮುಖ್ಯವೆಂದು ಬಳಸುತ್ತಿದ್ದಾರೆ.
ಕುರನ್ಗರಾಯ ಹುಟ್ಟಿನಿಂದ ಮಾದಿಗ ಜಾತಿಯವನು. ಅವನು ಆಳಿದ ಪ್ರದೇಶ ದಕ್ಷಿಣ ದಿಕ್ಕು. ಅವನು ಕಟ್ಟಿರುವ ಕೋಟೆ, ದೇವಸ್ಥಾನ ದಕ್ಷಿಣ ದಕ್ಕಿನಲ್ಲಿಯೇ ಇದೆ. ಆ ಕಾರಣದಿಂದಲೂ ಕುರನ್ಗರಾಯ ಚರಿತ್ರೆಕಾರರಿಗೆ ಸಹ್ಯವಾಗಿಲ್ಲವೆನಿಸುತ್ತದೆ.
ಕೂಡಿಕೊಂಡಿರುವುದರಿAದ ಜೊತೆಗೆ ಅಲ್ಲಿ ತಗ್ಗಿರುವುದರಿಂದ ನೀರು ನಿಲ್ಲಲು ಪ್ರಕೃತಿಯೇ ಮಾಡಿಸಿದಂತಿದೆ. ಅದರಿಂದ ಮೇಲೆ ಕೋಟೆಯನ್ನು ರಕ್ಷಿಸಲು ರಕ್ಷಣಾ ಪಡೆಗೆ ಜನವಸತಿ ಮಾಡಿಕೊಟ್ಟಿರುವಂತೆ ಕಾಣುತ್ತದೆ.
********
ಇನ್ನು ಕೋಟೆಯ ನೈರುತ್ಯ ದಿಕ್ಕಿನಲ್ಲಿ ಶಿವನ ದೇವಸ್ಥಾನದ ಪಕ್ಕಕ್ಕೆ ಸರಿಸುಮಾರು ನೂರು-ನೂರೈವತ್ತು ಗಜ ದೂರದಲ್ಲಿ ಗಲ್ಲೆಬಾನಿ ಇದೆ. ಅದನ್ನು ಕೋಳಿಮೊಟ್ಟೆ ಬಾವಿಯೆಂತಲೂ ಕರೆಯುತ್ತಾರೆ. ಕುರನ್ಗರಾಯನ ಮುಖ್ಯ ಕಸುಬು ಮತ್ತು ಅವನ ಕಾಲದ ಆರ್ಥಿಕತೆ ನಿಂತಿದ್ದುದೆ ಈ ಗಲ್ಲೆಬಾನಿಯ ಮೇಲೆ. ಆ ಕಾಲದಲ್ಲಿ ಕುರನ್ಗರಾಯ ಚರ್ಮವನ್ನೇ ಮುಖ್ಯವಾದ ಕಸುಬನ್ನಾಗಿ ಮಾಡಿ ಆ ಸುತ್ತಲಿನ ಜನರಿಗೆ ಮತ್ತು ರಾಜ್ಯಕ್ಕೆ ಪ್ರಮುಖ ಆದಾಯ ಮೂಲವನ್ನಾಗಿಸಿದ. ಅದಕ್ಕಾಗಿ ಆ ಕಾಲದ ಪ್ರಮುಖ ಕುಶಲಕರ್ಮಿ ಪರಿಣಿತರನ್ನು ಕರೆಸಿ ಅವರಿಗೆ ತರಬೇತಿಯನ್ನು ನೀಡಿ ಚರ್ಮದಿಂದ ನಿತ್ಯೋಪಯೋಗಿ ಪರಿಕರಗಳನ್ನು ಮಾಡಲು ಉತ್ತೇಜಿಸಿದ್ದ. ಅದಕ್ಕಾಗಿ ಕಲ್ಲಿನಲ್ಲಿಯೇ ಚರ್ಮವನ್ನು ನೆನೆಹಾಕಲು, ಒಣಗಿಸಲು, ಅದನ್ನು ವಿವಿಧ ಪರಿಕರಗಳನ್ನಾಗಿ ಮಾಡಲು ಆ ವಿಶಾಲ ಬಂಡೆಯನ್ನೇ ಪ್ರಮುಖ ಹಾಸುಗಲ್ಲನ್ನಾಗಿ ಮಾಡಿಕೊಂಡಿದ್ದಾನೆ. ಆ ಬಂಡೆಯಲ್ಲಿ ಚರ್ಮ ನೆನೆಹಾಕಲು ಬಂಡೆಯನ್ನೇ ವಿಶಿಷ್ಟವಾಗಿ, ಕಲಾತ್ಮಕವಾಗಿ ಕೊರೆಯಲಾಗಿದೆ. ಅದರಲ್ಲಿ ಸದಾ ನೀರು ನಿಲ್ಲುವಂತೆ ಬಂಡೆಯಿAದ ಹರಿದು ಆ ಗಲ್ಲೆಬಾನಿಗೆ ಸೇರಲು ಕೊರಕಲು ರೂಪದ ಕಾಲುವೆ ಕೊರೆಯಲಾಗಿದೆ. ಈಗಲೂ ನೀರು ಇದ್ದು ಕಪ್ಪಾಗಿ ಕಾಣುತ್ತದೆ. ಆದರೆ ಆ ನೀರನ್ನು ಕೈಯಲ್ಲಿ ಎತ್ತಿ ನೋಡಿದರೆ ನೀರು ತುಂಬಾ ಶುದ್ಧವಾಗಿಯೇ ಇದೆ. ಆ ಗಲ್ಲೆಬಾನಿ ಕಪ್ಪುಕಪ್ಪಾಗಿ ಹೊರನೋಟಕ್ಕೆ ಕಾಣುತ್ತದೆ. ಚರ್ಮವನ್ನು ನೆನೆಹಾಕಿದ್ದರಿಂದ ಅದು ಕಪ್ಪಾಗಿರಬಹುದು. ಅದನ್ನು ಸ್ಥಳೀಯವಾಗಿ ‘ಗಲ್ಲೆಬಾನಿ’ ಎಂದು ಕರೆಯಲಾಗುತ್ತಿದೆ. ಚರ್ಮ ಕಸುಬನ್ನು ಮಾಡುವ ಸಮುದಾಯಗಳ ಮನೆಯ ಮುಂದೆ ಈಗಲೂ ‘ಗಲ್ಲೆಬಾನಿ’ ಇರುವುದನ್ನು ಗಮನಿಸಬಹುದು. ಈ ಗಲ್ಲೆಬಾನಿಯಲ್ಲಿ ಚರ್ಮವನ್ನು ನಿರ್ದಿಷ್ಟ ದಿನಗಳವರೆಗೆ ನೆನಹಾಕಿ ಅದರಿಂದ ದಿನಬಳಕೆಯ ಎಲ್ಲ ಪರಿಕರಗಳನ್ನು ಮಾಡುವುದು ಆ ಕಾಲದ ಆದಾಯದ ಮೂಲವಾಗಿತ್ತು. ಕುರನ್ಗರಾಯನ ಕಾಲಕ್ಕೆ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಇಲ್ಲದಿರುವುದರಿಂದ ಚರ್ಮ ಮತ್ತು ಮಣ್ಣೇ ಪ್ರಧಾನವಾದ ವಸ್ತು ಬಳಕೆಯ ಮೂಲಗಳಾಗಿದ್ದವು. ಅಡಿಗೆ ಇತ್ಯಾದಿಗಳಿಗೆ ಮಣ್ಣಿನ ಉತ್ಪನ್ನಗಳು ಬಳಕೆಯಾಗುತ್ತಿತ್ತು. ರಕ್ಷಣೆ, ಸಾಗಾಣಿಕೆ ಮತ್ತಿತ್ತರ ಉಪಯೋಗಕ್ಕೆ ಚರ್ಮವನ್ನು ಪ್ರಮುಖವಾಗಿ ಬಳಸಲು ಕುರನ್ಗರಾಯ ಆಯೋಜಿಸಿದ್ದ. ಇದಷ್ಟೇ ಅಲ್ಲದೇ ಇಲ್ಲಿನ ಜನರ ಮಾಹಿತಿ ಪ್ರಕಾರ ಕುರನ್ಗರಾಯ ಚರ್ಮದಿಂದ ಕೇವಲ ನಿತ್ಯೋಪಯೋಗಿ ಪರಿಕರಗಳನ್ನಷ್ಟನ್ನೇ ಮಾಡುತ್ತಿರಲಿಲ್ಲ. ಅದರ ಜೊತೆಗೆ ಅವನು ಹೊಸದಾಗಿ ಜಾರಿಗೆ ತಂದ ‘ತೊಗಲ ಕಾಸು’ ಹೆಚ್ಚು ಜನಪ್ರಿಯವಾಗಿದೆ. ಹೊರ ಪ್ರಾಂತ್ಯದಿAದ ಕುರನ್ಗರಾಯನ ಪ್ರಾಂತ್ಯಕ್ಕೆ ಬರುವವರು ‘ಉಕ್ಕುಡ ದಿನ್ನೆ’ ಹತ್ತಿರ ಅವರ ನಾಣ್ಯಗಳನ್ನು ಇವರಿಗೆ ಕೊಟ್ಟು ಇವರ ‘ತೊಗಲಕಾಸ’ನ್ನು ಪಡೆದುಕೊಂಡು ಒಳಬರಬೇಕಿತ್ತು. ಮತ್ತು ಕುರನ್ಗರಾಯನ ಪ್ರಾಂತ್ಯದೊಳಗೆ ‘ತೊಗಲಕಾಸಿ’ನಲ್ಲಿಯೇ ವ್ಯವಹಾರ ಮಾಡಬೇಕಿತ್ತು. ಹೀಗೆ ಮಾಡುವುದರಿಂದ ಹೊರಗೆ ಚಲಾವಣೆಯಲ್ಲಿದ್ದ ಇತರ ಲೋಹಗಳ ನಾಣ್ಯಗಳು ಇವರಲ್ಲಿ ಸಂಗ್ರಹಗೊಳ್ಳುತ್ತಿದ್ದವು. ಚರ್ಮ ಬೇರೆ ಕಡೆಯಲ್ಲಿ ಬಳಕೆಗೆ ಬರುವಂತೆ ಮಾಡುತ್ತಿದ್ದ.
*********
ಬೆಟ್ಟದ ಕೆಳಗಿನ ಮಣ್ಣಗೋಟೆಯಲ್ಲಿ ಕಂಚುಗಾರ, ಸಿಪಾಯಿಗಳ, ಯೋಧರ, ಕುಂಬಾರರ, ಮಡಿವಾಳ, ಈಡಿಗ, ಕುರುಬ, ಆಚಾರ ಇತ್ಯಾದಿ ಸಮುದಾಯಗಳಿಗೆ ನೆಲೆ ಒದಗಿಸಲಾಗಿದೆ. ಪಾತಪ್ಪನ ಗುಂಡಿನ ಪಕ್ಕದಲ್ಲಿ ಕೊಲುಮೆಗುಂಡು ಎಂದು ಹೆಸರಾಗಿರುವ ಗುಂಡಿನ ನಡುವೆ ಕೋಣೆ ಆಕಾರದಲ್ಲಿ ಜಾಗವಿದ್ದು ಅಲ್ಲಿ ಲೋಹಗಳನ್ನು ತಮ್ಮ ಆಕಾರಕ್ಕೆ ಬಗ್ಗಿಸಿರುವ, ಯುದ್ಧದ ಪರಿಕರಗಳನ್ನು ತಯಾರಿಸುವ ಕುಲುಮೆ ಜಾಗವನ್ನಾಗಿ ಮಾಡಿಕೊಂಡಿರುವುದನ್ನು ಕಾಣಬಹುದು. ಇಲ್ಲಿ ಲೋಹಗಳನ್ನು ಕಾಯಿಸಿರುವ ಬೂದಿ, ಕಿಟ್ಟಕಟ್ಟಿರುವ ಕಲ್ಲುಬಂಡೆಗಳು, ಒಂದಷ್ಟು ರೇಖೆಗಳು, ಮಾದರಿಗಳ ಚಿತ್ರಗಳನ್ನು ನೋಡಬಹುದು. ಹಾಗೆಯೇ ಪಾತಪ್ಪನ ಗುಂಡಿನ ಪಕ್ಕದಲ್ಲಿ ರಕ್ಷಕರಿಗಾಗಿ ಗುಂಡಿನ ನಡುವೆಯೇ ಮಣ್ಣಿನಿಂದ ಕಟ್ಟಿರುವ ಚಿಕ್ಕ ಚಿಕ್ಕ ಕೋಣೆಗಳು, ಅದರ ಪಕ್ಕದಲ್ಲಿ ಪ್ರಕೃತಿ ಸಹಜವಾಗಿರುವ ಕಲ್ಲುಬಂಡೆಗಳ ಮೇಲೆ ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಅಲ್ಲೆಲ್ಲ ಒಂದಷ್ಟು ಅಸ್ಪಷ್ಟ ಅಕ್ಷರಗಳು ಕಾಣಸಿಗುತ್ತವೆ.
ಆ ಕೋಟೆಯ ಮುಖ್ಯವಾದ ಹೆಬ್ಬಾಗಿಲ ಪಕ್ಕದಲ್ಲಿ ಮಾರಮ್ಮನ ಗುಡಿ. ಆ ನೆಲಗೋಟೆಗೆ ನೀರು ಹರಿಯಲು, ಹಾಗೇ ಉಪಯೋಗಿಸಲು ಬಜೆಹಳ್ಳದ ಒಂದು ಕಾಲುವೆ. ಈ ಬಜೆಹಳ್ಳ ಮಳೆಗಾಲದಲ್ಲಿ ಹರಿಯದೆ ಮಳೆಗಾಲದ ನಂತರದಲ್ಲಿ ಹರಿಯುವ ಹಳ್ಳವಾಗಿದೆ. ಮಳೆಗಾಲದಲ್ಲಿ ಬಿದ್ದ ನೀರು ಬೆಟ್ಟದ ಮೇಲೆ ಲದ್ದಿಕಟ್ಟೆಯಲ್ಲಿ ಇಂಗಿ ಮೂರು ತಿಂಗಳ ನಂತರ ಹರಿಯುತ್ತದೆ. ಅದು ಸಿದ್ದರಬೆಟ್ಟದ ಗಿಡಮೂಲಿಕೆಗಳ ನಡುವೆ ಹರಿದುಬರುವುದರಿಂದ ಆ ನೀರು ಔಷಧಿಯ ಗುಣವನ್ನು ಪಡೆದಿದೆ. ಇಲ್ಲಿ ಹರಿಯುವ ಪ್ರತಿ ಹಳ್ಳಗಳಿಗೂ ಈ ರೀತಿಯ ಗುಣವಿದೆ. ಇದರ ಜೊತೆಗೆ ಕೆಳಕೋಟೆಗೆ ನೀರು ಒದಗಿಸುವ ಜವಾಬ್ದಾರಿಯನ್ನು ಪಾತಪ್ಪನಗುಂಡಿನ ಪಕ್ಕದಲ್ಲಿನ ಜಲಧಾರೆ ವಹಿಸುತ್ತಿತ್ತೆನಿಸುತ್ತದೆ. ಬಜೆಹಳ್ಳ ಸರಿಸುಮಾರು ಮರ‍್ನಾಲ್ಕು ತಿಂಗಳು ಎಡೆಬಿಡದೆ ಅಲ್ಲಿನ ಜನವಸತಿಗೆ ನೀರುಣಿಸುತ್ತಿತ್ತು. ಬೆಟ್ಟದ ಮೇಲಿನಿಂದ ಹರಿಯುತ್ತ ಮಾರಮ್ಮನ ಗುಡಿ ಪಕ್ಕದಿಂದ ಮಣ್ಣಕೋಟೆಯೊಳಗಿನ ಊರಿಗೆ ಸರಾಗವಾಗಿ ಹರಿಯುವಂತೆ ದಾರಿಮಾಡಿಕೊಂಡಿರುವ ಕಾಲುವೆಗಳು ಇಲ್ಲಿ ಕಾಣಸಿಗುತ್ತವೆ. ಮಣ್ಣಿನಕೋಟೆ ಆವರಿಸಿರುವ ಸುತ್ತಳತೆಯಲ್ಲಿ ನೀರು ಎಲ್ಲೂ ಪೋಲಾಗದಂತೆ ನಿಗಾವಹಿಸಿ ಬಳಕೆಯಾಗಿ ಉಳಿದ ನೀರಿಗೆ ಎಲ್ಲೂ ತಡೆಯನ್ನೂ ನೀಡದೆ ಮುಂದಕ್ಕೆ ಕಾಲುವೆಯನ್ನು ಮಾಡಲಾಗಿದೆ. ಆ ನೀರು ಮಣುವಿನಕುರಿಕೆ ಕೆರೆಗೆ ಸೇರುತ್ತದೆ ಎಂದು ಅಲ್ಲಿನ ಜನರು ನೀರಿನ ದಾರಿಯಿಡಿದು ತೋರಿಸುತ್ತಾರೆ. ಆ ಮಣ್ಣಿನಕೋಟೆಯೊಳಗೆ ಅಲ್ಲಲ್ಲಿ ನೀರಿನ ತಾಣಗಳು, ನೀರನ್ನು ಬಳಸಿ ಬುರ್ಜಿಗಳು, ಜನಬಳಕೆ, ರಕ್ಷಣೆ ಇತ್ಯಾದಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಹಾಗಾಗಿ ಆ ಕೋಟೆಯೊಳಗೆ ಸಣ್ಣ ಸಣ್ಣ ಹಳ್ಳಗಳು ನಿರ್ಮಾಣವಾಗಿ ಈಗಲೂ ಅದರಲ್ಲಿ ನೀರು ಹರಿಯುತ್ತದೆ. ಕುರನ್ಗರಾಯನ ಕಾಲಾನಂತರ ಆ ಮಣ್ಣಿನಕೋಟೆಯ ಜಾಗ ವ್ಯವಸಾಯದ ಜಾಗವಾಗಿ ಬದಲಾಗಿದೆ. ಇದರಿಂದ ನೀರಹರಿವು ಅವರಿಗೆ ಉಪಯೋಗ ಯೋಗ್ಯವೇ ಆಗಿದೆ. ನೆಲಗೋಟೆ ಈಗ ಫಲವತ್ತಾದ ಮಣ್ಣಾಗಿ ಕಾಣುತ್ತಿದ್ದರಿಂದ ಸಾಕಷ್ಟು ರೈತರು ಆ ಕೋಟೆಯನ್ನು ಒಡೆದು ವರ್ಷಕ್ಕೊಮ್ಮೆ ತಮ್ಮ ಹೊಲಕ್ಕೆ ಫಲವತ್ತಾದ ಮಣ್ಣನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹಿಂದೆ ಸಿಪಾಯಿಪಾಳ್ಯ, ಕಂಚುಗರ ಪಾಳ್ಯ ಎಂದು ಹೆಸರಾಗಿದ್ದ ಪಾಳ್ಯಗಳೆಲ್ಲ ಈಗ ವ್ಯವಸಾಯದ ಭೂಮಿಗಳಾಗಿವೆ. ಇದರ ಪರಿಣಾಮ ಕೋಟೆಯ ಏರಿಯ ಮಣ್ಣು ಹಂತಹAತವಾಗಿ ಹೊಲದ ಗರ್ಭದಲ್ಲಿ ಜೀರ್ಣವಾಗುತ್ತಿದೆ. ಕೋಟೆ ಜೀರ್ಣವಾಗುತ್ತಿದ್ದರೂ ಆ ಊರನ್ನು ಕಟ್ಟಿದ ಕಾರಣಕ್ಕೆ ‘ಕುರಂಕೋಟೆ’ ಊರು ಈಗಲೂ ಜೀವಂತವಾಗಿದೆ. ಆ ಊರಿನ ಹೆಸರು ಜೀವಂತವಾಗಿದ್ದು ಆ ಊರು ಆಧುನಿಕಗೊಳ್ಳಲು ಮೊದಲು ಇದ್ದ ಜಾಗವನ್ನು ಬಿಟ್ಟು ಮುಂದಕ್ಕೆ ಬೆಳೆದುಬಂದಿದೆ. ಹಿಂದೆ ಇದ್ದ ಕೋಟೆಯ, ಕೇರಿಗಳೆಲ್ಲ ಆ ಊರಿನವರ ಹೊಲಮಾಳವಾಗಿ ಬದಲಾಗಿವೆ. ಕುರಂಕೋಟೆ ಊರು ಬೆಟ್ಟದ ತಪ್ಪಲಿನಿಂದ ಸ್ವಲ್ಪ ಮುಂದಕ್ಕೆ ಬಂದಿದೆ. ಆದರೆ ಕುರಂಕೋಟೆ ಹೆಸರನ್ನು ಮಾತ್ರ ಹಾಗೇ ಉಳಿಸಿಕೊಂಡು ಬಂದಿದೆ.
ಡಾ.ರವಿಕುಮಾರ್ ನೀಹ
ಒಂದು ಪುಟ್ಟ ಪರಿಚಯ
ಕನ್ನಡದ ಬಹು ವಿಸ್ತಾರದ ವಿರ‍್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನ ಸೆಳೆದಿರುವ ಡಾ.ರವಿಕುಮಾರ್ ನೀಹ ಅವರು ಹಳ್ಲಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ ಎನ್ ಸಿ ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ. ಚಿಕ್ಕಮಗಳೂರು, ಬೆಂಗಳೂರು , ಹಂಪಿಯಲ್ಲಿ ವಿದ್ಯಾಭ್ಯಾಸ. ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಹಮತ್ ತರೀಕೆರೆ ಮಾಗದಶನದಲ್ಲಿ ʼಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿರ‍್ಶೆಯ ಸ್ವರೂಪʼ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ.
ಬರಹದ ಪಯಣದಲ್ಲಿ ಎರಡು ದಶಕಕ್ಕಿಂತಲೂ ಹೆಚ್ಚು ಅಧ್ಯಾಪನ , ಅಧ್ಯಯನ ನಿರತರು. ವಿರ‍್ಶೆ, ಕತೆ, ಕವಿತೆ ಖಂಡಕಾವ್ಯಗಳ ಕಡೆಯೂ ಹೊರಳಿದವರು. ಹನ್ನೆರಡಕ್ಕೂ ಮೀರಿ ಕೃತಿಗಳ ರಚನೆಕಾರರು. ʼಸೂಲು, ಪುಸ್ತಕಾ ವಿರ‍್ಶಾ ಕಥನಗಳು, ಕಂಡದಾರಿ, ರ‍್ಮರಾಜಕಾರಣ, ನೆಲನಿಲ್ಲದ ಭೂಮಿ, ಪುಸ್ತಕ ವಿರ‍್ಶೆ: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ, ನೆರಳಿಲ್ಲದ ಕಾಯ, ಬಯಲ ಬನಿ, ದಲಿತ ಸಾಹಿತ್ಯ ಮೀಮಾಂಸೆ, ನೆಲತಬ್ಬಿದ ಕಣ್ಣು, ಜಲಜಂಬೂ ಕನ್ನೆ(ಖಂಡಕಾವ್ಯ), ಕ್ರಿಯಾಪದ (ಸಂಪಾದನೆ), ಸುರ‍್ಣಮುಖಿ (ಸಂಪಾದನೆ), ಕೇಬಿ ಕಾವ್ಯ: ಕಣ್ಣು ಧರಿಸಿ ಕಾಣಿರೋ ಇವರ ಪಕಟಿತ ಕೃತಿಗಳು. ʼಬಯಲ ಬನಿʼ ವಿರ‍್ಶಾ ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಈ ಕೃತಿಯ ನಂತರ ವಿರ‍್ಶೆ ಮತ್ತು ಸಂಶೋಧನೆಯನ್ನು ಜೊತೆಜೊತೆಯಾಗಿ ಕೊಂಡೊಯ್ಯವುದು ಇವರ ಆಸಕ್ತಿ. ಈ ದಾರಿಯಲ್ಲಿ ʼದಲಿತ ಸಾಹಿತ್ಯ ಮೀಮಾಂಸೆʼ ʼಕೇಬಿ ಕಾವ್ಯ : ಕಣ್ಣು ಧರಿಸಿ ಕಾಣಿರೋʼ ಹೆಚ್ಚು ರ‍್ಚಿತ ಕೃತಿಗಳಾಗಿವೆ.
ಪ್ರಸ್ತುತ ʼಅರಸು ಕುರನ್ಗರಾಯʼ ಭಿನ್ನವಾಗಿ ಹೊರಳಿಕೊಂಡ ಕೃತಿಯಾಗಿ ನಿಮ್ಮ ಮುಂದಿದೆ.
ಕುರನ್ಗರಾಯ ಈಗಿನ ಸಿದ್ದರಬೆಟ್ಟವನ್ನು ಕೇಂದ್ರವಾಗಿಸಿಕೊಂಡು ಸುಮಾರು ಇಪ್ಪತ್ತೈದರಿಂದ ಮೂವತ್ತು ಹಳ್ಳಿಗಳನ್ನು ಆಡಳಿತ ಮಾಡಿ ಚರಿತ್ರೆಯಲ್ಲಿ ಅವಜ್ಞೆಗೆ ಗುರಿಯಾದ ಅರಸು. ʼತೊಗಲ ಕಾಸುʼ ʼಉಡದ ರಥʼ, ʼಗಲ್ಲೆಬಾನಿʼ ಇವೆಲ್ಲ ಪ್ಯಾಂಟಸಿಯ ರೀತಿಯಲ್ಲಿ ಈ ಭಾಗದಲ್ಲಿ ಬಳಕೆಯಲ್ಲಿವೆ. ಕುರನ್ಗರಾಯ ಕಟ್ಟಿದ ಶಿವ ದೇವಸ್ಥಾನ, ಬೆಟ್ಟದ ಮೇಲೆ ಹತ್ತು ಎಕರೆಯಷ್ಟು ಅಗಲದ ಕಲ್ಲಿನ ಕೋಟೆ, ಪಕ್ಕದಲ್ಲಿ ಗಲ್ಲೆಬಾನಿ, ಸಿದ್ದರಬೆಟ್ಟದ ದಕ್ಷಿಣ ದಿಕ್ಕಿನ ತಪ್ಪಲಲ್ಲಿ ನೂರೈವತ್ತು ಏಕರೆಗೂ ಹೆಚ್ಚು ವಿಸ್ತಾರವಾದ ಮಣ್ಣಿನಕೋಟೆ, ದೊಡ್ಡಕಾಯಪ್ಪ, ದೊಡ್ಡ್ಮಮ್ಮಳ ದೇವಸ್ಥಾನ ಸ್ಥಾಪಿಸಿ ತನ್ನ ಪ್ರಜೆಗಳನ್ನು ಕಾಪಾಡುತ್ತಿದ್ದ.
ಯಾವುದೇ ಯುದ್ಧ ಮಾಡದೆ, ಈ ಸಿದ್ದರಬೆಟ್ಟದ ಸುತ್ತಲಿನಲ್ಲಿ ಹೆಚ್ಚು ಜನಸಂಖ್ಯೆಯಲ್ಲಿದ್ದ ನಾಯಕ, ಗೊಲ್ಲ, ಮಾದಿಗ ಸಮುದಾಯದವರನ್ನು ರಕ್ಷಿಸಲು ಈ ಸಂಸ್ಥಾನವನ್ನು ಕಟ್ಟಿಕೊಂಡಿದ್ದನೆಂದು ತೋರುತ್ತದೆ. ಈ ಸಮುದಾಯಗಳಲ್ಲಿ ಕುರನ್ಗರಾಯನ ಬಗೆಗೆ ಈಗಲೂ ಕತೆಗಳು ಚಾಲ್ತಿಯಲ್ಲಿವೆ. ಸಿದ್ದಪ್ಪ, ಗುಪ್ಪಟ್ಣದಮ್ಮ, ಕಾವಲಮ್ಮಂದಿರು, ದೊಡ್ಡಕಾಯಪ್ಪ ಇತ್ಯಾದಿ ಆರಾಧನೆಯ ಈ ದೈವಗಳಿಗೂ ಕುರನ್ಗರಾಯನ ಚರಿತ್ರೆಗೂ ಸಾಂಸ್ಕೃತಿಕವಾಗಿ ಕೊಂಡಿಯಿದೆ. ಅಂಥ ಎಳೆಯನ್ನಿಟ್ಟುಕೊಂಡು ಏಕಕಾಲದಲ್ಲಿ ಸಂಸ್ಕೃತಿ ಆಯಾಮಗಳನ್ನು, ಮಾನವಶಾಸ್ತ್ರೀಯ ಅಧ್ಯಯನ ಕ್ರಮಗಳನ್ನು, ಚಾರಿತ್ರಿಕ ದೃಷ್ಟಿಕೋನಗಳನ್ನು, ಜಾನಪದೀಯ ನೋಟಕ್ರಮಗಳನ್ನು ಇಟ್ಟುಕೊಂಡು ಈ ಅಧ್ಯಯನ ಸಾಗಿದೆ. ಜಾನಪದದಲ್ಲಿ ಅಡಗಿ ಕೂತಿರುವ ಕುರನ್ಗರಾಯನನ್ನು ಹೆಕ್ಕಿ ತೆಗೆದು ಅವನ ಚಾರಿತ್ರಿಕ ಘನತೆಯನ್ನು ಆಚರಣೆ, ನಂಬಿಕೆ, ಐತಿಹ್ಯ ಇತ್ಯಾದಿಗಳ ಮೂಲಕ ಕಟ್ಟಿಕೊಳ್ಳಲು ಪ್ರಯತ್ನಿಸಲಾಗಿದೆ.