‘ಭೂತವನ್ನು ಹೂತು ಹಾಕಿ ವರ್ತಮಾನದಲ್ಲಿ ನಿಂತು ಭವಿಷ್ಯದತ್ತ ಸಾಗೋಣ’

 ‘ಭೂತವನ್ನು ಹೂತು ಹಾಕಿ ವರ್ತಮಾನದಲ್ಲಿ ನಿಂತು ಭವಿಷ್ಯದತ್ತ ಸಾಗೋಣ’

 ‘ಭೂತವನ್ನು ಹೂತು ಹಾಕಿ ವರ್ತಮಾನದಲ್ಲಿ ನಿಂತು ಭವಿಷ್ಯದತ್ತ ಸಾಗೋಣ’


“ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೆ.ದೊರೈರಾಜ್ ಅಧ್ಯಕ್ಷೀಯ ಭಾಷಣ 


ತುಮಕೂರು: ಕರ್ನಾಟಕದ ದಲಿತ ಚಳವಳಿಯಲ್ಲಿ ಅಸಮಾನತೆ ಇದೆ. ತೊಡಕು, ತೊಂದರೆ ಇದೆ ನಿಜ,  ಅಂಬೇಡ್ಕರ್  ಹೇಳಿದಂತೆ ಎಲ್ಲಿ ಅಸಮಾನತೆ ಇದೆಯೋ ಅದರ ನಿವಾರಣೆಗೆ ಹೋರಾಟ ಮಾಡಬೇಕು. ಹೊಲೆಯರು ಮಾದಿಗರ ವಿರುದ್ಧ, ಮಾದಿಗರು ಹೊಲೆಯರ ವಿರುದ್ದ ಹೋರಾಡುವುದು ನಿಲ್ಲಬೇಕು. ವ್ಯವಸ್ಥೆ ವಿರುದ್ದ ನಮ್ಮ ಹೋರಾಟ ರೂಪಿತವಾಗಬೇಕು. ನಮಗಿಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಅಲೆಮಾರಿಗಳು, ಕೆಳಜಾತಿಗಳ ಪರವಾಗಿ ನಿಲ್ಲಬೇಕು. ಸಹಜ ಮಾನವೀಯ ನೆಲೆಯಲ್ಲಿ ಮುನ್ನಡೆಯಬೇಕು. ಭೂತ ನಿವಾರಿಸಿ ವರ್ತಮಾನದತ್ತ ಮುಖ ಮಾಡಿ ಮಾನವೀಯ ಸಮಾಜ ನಿರ್ಮಾಣ ಮಾಡಬೇಕು ಎಂದು ಹಿರಿಯ ದಲಿತ ಮುಖಂಡ ಹಾಗೂ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಕರೆ ನೀಡಿದರು. 


ನಗರದ ಕನ್ನಡ ಭವನದಲ್ಲಿ ಭಾನುವಾರ, ಅವರು ‘ಬೆವರ ಹನಿ’ ಪ್ರಕಾಶನ ಹೊರತಂದಿರುವ ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್ ಅವರ ‘ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಹತ್ವದ ಮಾತುಗಳನ್ನು ಆಡಿದರು. ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ.


ಭೂತಗಳನ್ನು ಹೂತುಹಾಕಿ ನಮ್ಮ ಕಣ್ಣೆದುಗಿರುವ ವರ್ತಮಾನದಲ್ಲಿ ಭವಿಷ್ಯ ಏನಿದೆ ಎಂಬ ಬಗ್ಗೆ ನಮ್ಮ ಮುನ್ನೋಟ ಇರಬೇಕು. ವರ್ತಮಾನ ಎಂಥಾ ಸಾಮಾಜಿಕ, ರಾಜಕೀಯ ಸ್ಥಿತಿಗಳನ್ನು ಮತ್ತು ಶೋಷಣೆಯ ಕ್ರೌರ್ಯವನ್ನು ನಿರ್ಮಾಣ ಮಾಡಬಹುದು ಅನ್ನುವ ಬಗ್ಗೆ ಚರ್ಚೆ ಆಗುತ್ತಿಲ್ಲ. ನಾವು ಅಸ್ಪೃಶ್ಯರು ತಾಯಿ ಸ್ಥಾನದಲ್ಲಿದ್ದು ದೇಶದ ಎಲ್ಲಾ ಜಾತಿ, ವರ್ಗದ ಜನರನ್ನು ಸೇರಿಸಿಕೊಂಡು ಸಮಗ್ರ ಬದಲಾವಣೆಯನ್ನು ತರುವ ಆಶಯಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚೆಗಳಾಗಬೇಕು. ಚಳವಳಿಯನ್ನು ಯಾರೂ ನಗದೀಕರಿಸಿಕೊಳ್ಳಬಾರದು. ಈ ದೃಷ್ಟಿಕೋನ ಹೋಗಬೇಕು. ವಿಶಾಲ ಅನುಭವದ ಹಿನ್ನೆಲೆಯಲ್ಲಿ  ನಮ್ಮ ನಮ್ಮ ಜಾತಿಗಳನ್ನು ಕಳೆದುಕೊಂಡು ಈ ದೇಶದ ಎಲ್ಲಾ ಶೋಷಿತ ಸಮುದಾಯವನ್ನು ಸೇರಿಸಿಕೊಂಡು ಒಂದು ಜಾತ್ಯತೀತ ಸಮಾಜವನ್ನು, ಶೋಷಣೆ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಡೆ ನಮ್ಮ ಆಲೋಚನೆಗಳನ್ನು ನಮ್ಮ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎಂದರು ದೊರೈರಾಜ್.


ಶಿವಾಜಿ ಗಣೇಶನ್ ಅವರ ಕೃತಿಯನ್ನು ವಿಶ್ಲೇಷಿಸಿದ ಅವರು, ‘ದಲಿತ ಚಳವಳಿಯ ಹೆಜ್ಜೆಗಳು’ ಶೀರ್ಷಿಕೆ ನೋಡಿದಾಗ ಇದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಆಸಕ್ತಿ ಮೂಡುತ್ತದೆ. ದಲಿತ ಚಳವಳಿ ಹೋರಾಟಗಾರರಿಗೆ ಸ್ಪೂರ್ತಿ, ಕೆಚ್ಚನ್ನು  ನೀಡುತ್ತದೆ. ಚಳವಳಿಗಾರರು ತಾವು ಮಾತನಾಡಿದ್ದು, ನಾಯಕರು ಹೇಳಿದ್ದು, ನಡೆದ ಚರ್ಚೆಯ ಬಗ್ಗೆ ಮೆಲುಕು ಹಾಕುವುದು ಸಹಜ. ಆದರೆ ದಲಿತ ಸಂಘರ್ಷ ಸಮಿತಿಯ ಹಮ್ಮಿಕೊಂಡ ಹೋರಾಟಗಳಲ್ಲಿ ಭಾಗಿಯಾದ ಕಾರ್ಯಕರ್ತರು ಈ ಕೃತಿಯನ್ನು ಓದಿದರೆ, ಈಗಾಗಲೇ ಓದುತ್ತಿದ್ದಾರೆ ಕೂಡ ಚಳವಳಿ ಬಗ್ಗೆ ಪರಿಪೂರ್ಣ ಮಾಹಿತಿಯೇ ಇಲ್ಲವಲ್ಲ ಎಂಬ ನಿರಾಶೆ ಮೂಡುತ್ತದೆ.


ಪ್ರಾದೇಶಿಕವಾಗಿ ಚಳವಳಿಯನ್ನು ಯರ‍್ಯಾರು ಲೀಡ್ ಮಾಡಿದ್ದರು, ಅವರೊಂದಿಗಿನ ಸಂಪರ್ಕ ಇದೆಲ್ಲವೂ ಆಕ್ಟಿವಿಸ್ಟ್ಗಳ ನೆನಪಿಗೆ ಬರುತ್ತದೆ. ಇದೇನು ನಮ್ಮ ಹೆಸರೇ ಇಲ್ಲವಲ್ಲ, ಎಲ್ಲೋ ಮೂರು-ನಾಲ್ಕು ಜನರ ಹೆಸರು ಮಾತ್ರ ಇದೆ ಎಂಬ ಅನುಮಾನಗಳು ಪುಸ್ತಕವನ್ನು ಓದಿದಾಗ ಮೂಡುತ್ತವೆ. ಆಕ್ಟಿವಿಸ್ಟ್ಗಳು, ಮತ್ತು ಸಾಹಿತ್ಯ ಓದುವ ಆಸಕ್ತರ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಚಳವಳಿಯಲ್ಲಿದ್ದವರಿಗೆ ಈ ಕೃತಿಯ ಕಂಟೆAಟ್  ಮತ್ತು ಮಾಹಿತಿ ಬಗ್ಗೆಯೂ ಆಸಕ್ತಿ ಇರುತ್ತದೆ. 


ಈ ಕೃತಿ ಪ್ರಾದೇಶಿಕವಾಗಿದೆ ಎಂಬುದೂ ಕೂಡ ಸತ್ಯ. ಇಲ್ಲಿ ಪ್ರಮುಖವಾಗಿ ಬೂಸಾ ಚಳವಳಿಯನ್ನೇ ಪ್ರಧಾನವಾಗಿ ಕೇಂದ್ರೀಕರಿಸಲಾಗಿದೆ. ಬಸವಲಿಂಗಪ್ಪನವರು ಭಾರತ ಕಂಡAತಹ ಅಪರೂಪದ ವಿಚಾರವಾದಿ. ಅವರ ವಿಚಾರಗಳು ಮತ್ತು ಅವರ ಕೆಲಸಗಳು ಎಲ್ಲರಿಗೂ ಗೊತ್ತಿದೆ.


ಬೂಸಾ ಚಳವಳಿ ಕುರಿತು ನಡೆದ ಸಭೆಯಲ್ಲಿ ನಾನು ಕೂಡ ಇದ್ದೆ. ನಾನಾಗ ವಿದ್ಯಾರ್ಥಿಯಾಗಿದ್ದೆ. 1973-74ರಲ್ಲಿ ನಾನು ಫೈನಲ್ ಎಂ.ಎಸ್ಸಿ ಜುವಾಲಜಿ ಓದುವಾಗ ನಾನು ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಕೂತಿದ್ದೆ. ಅದು ಸಾಹಿತಿಗಳ ಸಮಾವೇಶ. ಆದರೆ ಬಸವಲಿಂಗಪ್ಪನವರು ಎದ್ದು ನಿಂತು ಮಾತನಾಡಿದಾಗ ಅವರ ಎದೆಗಾರಿಕೆ ಏನೆಂಬುದು ತಿಳಿಯಿತು.


ದಲಿತ ಚಳವಳಿಯನ್ನು ಪ್ರಾರಂಭ ಮಾಡಿದವರು ಯಾರು? ಹುಟ್ಟಿಗೆ ಮೂಲ ಯಾರು? ಇದರ ಬಗ್ಗೆ ಚರ್ಚೆ ಆಗಲೇ ಇಲ್ಲ. ದಲಿತರ ನೋವು, ಅವಮಾನ, ಶೋಷಣೆ ದಲಿತ ಚಳವಳಿಗಳ ಹುಟ್ಟಿಗೆ ಕಾರಣವಾಯಿತು. ಆದರೆ ಮೈಸೂರಿನಲ್ಲಿ ನಡೆದ ಬೂಸ ಚಳವಳಿಯೇ ದಲಿತ ಚಳವಳಿಗೆ ಕಾರಣ ಅನ್ನೋ ಥರ ಪುಸ್ತಕದಲ್ಲಿ ಬಿಂಬಿಸಿರುವುದು ಚಳವಳಿಗಾರರಲ್ಲಿ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ.


ರಾಜಕೀಯ ಪಕ್ಷಗಳ ವಿರುದ್ಧ ಶೋಷಣೆಯ ವಿರುದ್ಧ ರೂಪುಗೊಂಡ ದಲಿತ ಚಳವಳಿಯನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದು ಮತ್ತು ಬೂಸಾ ಚಳವಳಿಯೇ ದಲಿತ ಚಳವಳಿಗೆ ಕಾರಣ ಎನ್ನುವಂತೆ ಕೃತಿಯಲ್ಲಿ ದಾಖಲಿಸಿರುವುದು ಬೇಸರ ತರಿಸುತ್ತದೆ. ಕೆ.ಎಸ್.ನಾರಾಯಣಸ್ವಾಮಿಯವರನ್ನು ಕುರಿತು ಶಿವಾಜಿ ಬರೆಯುತ್ತಾರೆ. ಅವರು ಸ್ವಯಂಸ್ಪೂರ್ತಿಯಿAದ ಚಳವಳಿಗೆ ಬಂದೆ ಎಂದು ಹೇಳಿಕೊಳ್ಳುತ್ತಾರೆ. ಅಂದರೆ ಚಳವಳಿಗಾರರು ಹಾಗೆ ನೋಡುತ್ತಾರೆ. ಆದರೆ ಮೈಸೂರು, ಬೆಂಗಳೂರು ಭಾಗದಲ್ಲಿ ಇಂತಹ ಬೆಳವಣಿಗೆಗಳು ಆಯ್ತು ಎನ್ನುವ ಮೂಲಕ ಬೂಸಾ ಚಳವಳಿಯೇ ಕಾರಣ ಎನ್ನುವುದು ಸರಿಯಲ್ಲ. ಈ ಕಾರಣಕ್ಕಾಗಿಯೇ ಹಲವರು ಶಿವಾಜಿಗೆ ಪ್ರಶ್ನೆಗಳನ್ನು ಕೇಳುತ್ತಾರೆ.


ಚಳವಳಿಯನ್ನು ಯಾರು ಆರಂಭಿಸಿದರು ಎಂಬ ಕ್ರೆಡಿಟ್ ಹೋಗಬೇಕಾದರೆ ಅದು ಜನರಿಗೆ. ಸಮೂಹಕ್ಕೇನೆ. ಜನರ ಸಂಕಟ ಜಾತಿ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಶೋಷಣೆ ವಿರುದ್ಧ ಆಗಿತ್ತು. ಈ ಜನಚಳವಳಿ ಎಷ್ಟರ ಮಟ್ಟಿಗೆ ಹೋಗಿದೆ ಅಂದರೆ ಅದು ಪ್ರಾದೇಶಿಕ ಮಟ್ಟಕ್ಕೆ, ಜಾತಿ ಕೇಂದ್ರೀಕೃತವಾಗಿ, ರಾಜಕೀಯ ಪಕ್ಷ ಕೇಂದ್ರಿತವಾಗಿ ಈ ಮೂರು ಕಾರಣಗಳಿಗಾಗಿ ದಲಿತ ಚಳವಳಿ ವಿಘಟನೆಗೆ ಕಾರಣವಾಗಿ ಯಾರ್ಯಾರು ಈ ಚಳವಳಿಯ ಬಗ್ಗೆ ಬರೆಯುತ್ತಿದ್ದಾರೆ ಎಲ್ಲಾ ಸಾಹಿತ್ಯವನ್ನು, ಸಾಹಿತಿಗಳನ್ನು ಗಮನಿಸಿದ್ದೇನೆ. ಕರ್ನಾಟಕದಲ್ಲಿ ಇದ್ದಂತಹ ದಲಿತ ಚಳವಳಿ ಅದರ ಅಗತ್ಯ ಇರುವುದೇ ಜನರ ಪಾಲ್ಗೊಳ್ಳುವಿಕೆಯಲ್ಲಿ. ಜಾತಿಯನ್ನು ಮೀರಿದ ಜನರ ಪಾಲ್ಗೊಳ್ಳುವಿಕೆ ಇದೆಯಲ್ಲಾ ಅದು ಇಡೀ ಇಂಡಿಯಾದಲ್ಲಿ ಕರ್ನಾಟಕದಲ್ಲಿ ಕಟ್ಟಿಕೊಂಡAತಹ ಒಂದು ಮಾದರಿ ಚಳವಳಿ. ಬರೀ ಹೊಲೆ-ಮಾದಿಗರ ಜೊತೆಗೆ ದಲಿತೇತರರು ಇದರ ಜೊತೆಯಲ್ಲಿ ಇದಾರಲ್ಲ ಅದರ ಅವಶ್ಯಕತೆ ಇದೆ. ಅವರ ಸಹಕಾರ ಇಲ್ಲದೇ ಇದ್ದರೆ, ದಲಿತ ಸಂಘರ್ಷ ಸಮಿತಿ ಎಷ್ಟರ ಮಟ್ಟಿಗೆ ಈ ನೆಲವನ್ನು ಪ್ರಭಾವಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ.


ಆರಂಭದಲ್ಲಿ ದಲಿತ ಚಳವಳಿಯನ್ನು ನೋಡಿದಾಗ ಇಲ್ಲಿ ಯಾವ ಜಾತಿ, ಪ್ರದೇಶ ಯಾವುದೂ ಪ್ರಮುಖವಾಗಲಿಲ್ಲ. ಆ ಸಂದರ್ಭದಲ್ಲೇ ದಲಿತ ಚಳವಳಿ, ಪ್ರಭಾವ, ಹುಟ್ಟು ಈ ಬಗ್ಗೆ ಬರಹಗಳು ಬಂದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಅದು ಇಡೀ ಭಾರತದಲ್ಲೇ ಅತ್ಯಂತ ಮಾದರಿಯಾದಂತಹ ಒಂದು ಜನಚಳವಳಿಯಾಗಿತ್ತು. ಅಹಿಂಸಾತ್ಮಕವಾದ, ಪ್ರಜಾಪ್ರಭುತ್ವ ಮಾದರಿಯಲ್ಲಿ ರಾಜಕೀಯ ಪ್ರಜ್ಞೆಯಿಂದ, ಶೋಷಣೆ ವಿರುದ್ಧ ವೈಚಾರಿಕವಾಗಿ ಈ ನೆಲದ ಎಲ್ಲಾ ಸಾರವನ್ನು ಹೀರಿಕೊಂಡು ನೆಲದಿಂದಲೇ ಹುಟ್ಟಿಬಂದ ಚಳವಳಿ ಬಗ್ಗೆ ಬರೆದಿದ್ದರೆ ಒಳ್ಳೆಯ ದಾಖಲೆ ಆಗುತ್ತಿತ್ತು. ಆರಂಭದಲ್ಲಿ ತಮಿಳುನಾಡಿನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ನಡೆದ ಚಳವಳಿಗಳು ಬಗ್ಗೆ ಬರೆದಿದ್ದರೆ ಒಳ್ಳೆಯದಿತ್ತು. ಆದರೆ ಆಗ ಯಾರೂ ಇದನ್ನು ಬರೆಯಲಿಲ್ಲ. 1983ರ ನಂತರ ರಾಜಕೀಯ ಪ್ರವೇಶ ಮಾಡಿತೋ, ರಾಜಕೀಯ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂತೋ ಅವಾಗ ಶುರುವಾಯಿತು ಭಿನ್ನಾಭಿಪ್ರಾಯಗಳು, ದ್ವೇಷಗಳು, ಜಾತಿಕೇಂದ್ರಿತ, ರಾಜಕೀಯ ಪಕ್ಷಗಳ ಕೇಂದ್ರಿತ ಸಿದ್ದಾಂತ ಮುನ್ನೆಲೆಗೆ ಬಂತು.


ದಲಿತ ಸಂಘರ್ಷ ಸಮಿತಿಯ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಬಹಳಷ್ಟು ಸಭೆಗಳು ತುಮಕೂರಿನಲ್ಲಿ ನಡೆದವು. 1983ರಲ್ಲಿ ತೆಗೆದುಕೊಂಡ ರಾಜಕೀಯ ತೀರ್ಮಾನಗಳು ನಮ್ಮಲ್ಲಿನ ಜಾತೀಯತೆಯನ್ನು ಅನಾವರಣ ಮಾಡಿದವು. ಆಗ ನಮ್ಮ ಹಸಿವು, ಜಾತಿ, ನೋವು, ಸಂಕಟ ಮತ್ತು ಶೋಷಣೆ ಎಲ್ಲವೂ ಮರೆಗೆ ಸರಿದವು. ಮರೆತು ಹೋದವು.


ಈಗ ಬರುತ್ತಿರುವ ದಲಿತ ಚಳವಳಿಯ ಕುರಿತ ಸಾಹಿತ್ಯ ವ್ಯಕ್ತಿ, ಜಾತಿ, ಪ್ರಾದೇಶಿಕ ಮತ್ತು ರಾಜಕೀಯ ಕೇಂದ್ರಿತವಾಗಿವೆ. ಹೀಗಾಗಿ ದಲಿತ ಚಳವಳಿ, ದಲಿತ ಸಾಹಿತ್ಯದ ಬಗ್ಗೆ ಬರೆಯುವವರ ಬಗ್ಗೆ ಅನುಮಾನಗಳು ಇವೆ. ಇಷ್ಟೆಲ್ಲಾ ಆದಾಗ್ಯು ಕೂಡ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಪರ ಒಲವು ತೋರಿ ಹೋದರು ಅಂತ ಹೇಳಿ ಈ ಕೃತಿಯಲ್ಲಿ ದಾಖಲಾಗಿದೆ. ದಲಿತ ಸಂಘರ್ಷ ಸಮಿತಿಯ ವಿಘಟನೆಗೆ ಮಾದಿಗ ದಂಡೋರ ಮತ್ತು ರಾಜಕೀಯ ಪ್ರವೇಶ ಕಾರಣ ಎಂದು ಹೇಳಿದ್ದಾರೆ. ಬಹುಶಃ ಅದನ್ನು ಅರ್ಥೈಸಿಕೊಳ್ಳುವುದರಲ್ಲಿ ಯಾಕೆ ವಿಫಲವಾಗಿದ್ದಾರೆ. ಒಬ್ಬ ಅಂಬೇಡ್ಕರ್ ವಾದಿಯಾಗಿ ಅಂಬೇಡ್ಕರ್ ವಿಚಾರವನ್ನು ಗ್ರಹಿಕೆ ಮಾಡಿಕೊಂಡು ಒಂದು ಚಳವಳಿಯನ್ನು ಒಂದು ಜನಸಮೂಹದ ಅಭಿಪ್ರಾಯವನ್ನು ಲೇಖಕರಿಗೆ ಗ್ರಹಿಸಲು ಆಗಿಲ್ಲ. ಒಂದೇ ವಾಕ್ಯದಲ್ಲಿ ಕೃಷ್ಣಪ್ಪ ಅವರನ್ನು ಒಂದು ಸಂಘಟನೆಯನ್ನು ಕುರಿತು ಈ ರೀತಿಯ ತೀರ್ಮಾನಕ್ಕೆ ಯಾಕೆ ಬಂದರು ಗೊತ್ತಿಲ್ಲ. ಕೃಷ್ಣಪ್ಪನವರು ಬಹುಜನ ಪಕ್ಷದ ಪರ ಇದ್ದ ಕಾರಣ ಚಳವಳಿಯಿಂದ ಬಿಟ್ಟು ಹೋದರು ಎಂದು ಬರೆದಿದ್ದಾರೆ. ನನಗೂ ಸೇರಿ ಎಲ್ಲರಿಗೂ ಗೊತ್ತು ಕೃಷ್ಣಪ್ಪ ಅವರನ್ನು ಹೊರಗೆ ಹಾಕಿದರು. ಉತ್ತರ ಪ್ರದೇಶದಲ್ಲಿ ಬಿಎಸ್.ಪಿ ಪಕ್ಷದ ಜೊತೆ ಕೃಷ್ಣಪ್ಪ ಅವರು ಆಸೆ ಪಟ್ಟು ಹೋಗಿದ್ದಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿ ಬಹಳಷ್ಟು ಜನರ ಬಿಎಸ್.ಪಿ ಬೆಂಬಲಿಗರು ಇದ್ದರು ಎಂದು ಶಿವಾಜಿ ಅವರು ಬರೆಯುತ್ತಾರೆ,  ಕೃಷ್ಣಪ್ಪನವರನ್ನು ಬಲವಂತವಾಗಿ ರಾಜಕೀಯಕ್ಕೆ ಇಳಿಯವಂತೆ ಒತ್ತಡ ಹೇರಲಾಗುತ್ತದೆ. 1983ರಲ್ಲಿ ಚುನಾವಣೆಯನ್ನು ಬಹಿಷ್ಕಾರ ಮಾಡಿದಾಗ ಅಲ್ಲಿ ವರೆಗೆ ಕೃಷ್ಣಪ್ಪನವರು ನಮಗೆ ರಾಜಕೀಯವೇ ಬೇಡ ಅಂದರು. ಎಚ್. ಕ್ರಾಸ್‌ನಲ್ಲಿ ಒಬ್ಬ ಕಾರ್ಯಕರ್ತ ಕೃಷ್ಣಪ್ಪನವರನ್ನು ಪ್ರಶ್ನಿಸಿ ಅಲ್ಲಾ ಸರ್, ದಲಿತ ಸಂಘಟನೆ ರಾಜಕೀಯ ಪ್ರವೇಶ ಪಡೆಯುವುದನ್ನು ಹೋಲಿಸಿ ವೇಶ್ಯೆ ಮನೆಗೆ ಗೊತ್ತಿದ್ದೂ ಹೋಗುವುದೇ ಎಂದು  ಸರಿಯಲ್ಲ ಎಂದು ಹೇಳುತ್ತಿದ್ದರು. ಅಷ್ಟು ತೀವ್ರವಾಗಿ ವಿರೋಧಿಸುತ್ತಿದ್ದ ಕೃಷ್ಣಪ್ಪ ಅವರನ್ನು ರಾಜಕೀಯಕ್ಕೆ ಹೋಗುವಂತೆ ಮಾಡಿದ್ದು ಯಾರು? ಚಳವಳಿಗಾರರ ಮನಸ್ಸಿನಲ್ಲಿದ್ದ ಕೃಷ್ಣಪ್ಪನವರು ರಾಜಕೀಯವೇ ಬೇಡ ಅಂತಿದ್ದವರು, ಅಧಿಕಾರವೇ ಬೇಡ ಅಂದುಕೊಂಡಿದ್ದ ಕೃಷ್ಣಪ್ಪನವರ ಮೇಲೆ ಅಧಿಕಾರ  ಲಾಲಸೆಯಿಂದ ರಾಜಕೀಯಕ್ಕೆ ಹೋದರು ಎಂದು ಆರೋಪಿಸುವುದು ಎಷ್ಟು ಸರಿ? ಚುನಾವಣೆಯನ್ನು ಬಹಿಷ್ಕರಿಸಿದ್ದಕ್ಕೆ ನನ್ನ ವಿರುದ್ಧ 23 ತೀವ್ರತರ ಕೇಸುಗಳನ್ನು ದಾಖಲಿಸಿದರು. ಸಾಕಷ್ಟು ನೋವು, ಹಿಂಸೆಯನ್ನು ಅನುಭವಿಸಿದೆ. ಅದನ್ನು ದಾಖಲಿಸಿದ್ದರೆ ದೊಡ್ಡ ಕಾವ್ಯಗಳೇ ಹೊರಬರುತ್ತಿದ್ದವು.


ಕೃಷ್ಣಪ್ಪನವರು ರಾಜಕೀಯ ಪ್ರವೇಶವನ್ನು ಲಾಲಸೆ ಎಂದು ಬರೆದಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಕೃಷ್ಣಪ್ಪ ಅವರಾಗಿ ಅವರು ಬಿಟ್ಟು ಹೋಗಲಿಲ್ಲ. ಯಾವಾಗ ಉತ್ತರ ಪ್ರದೇಶದಲ್ಲಿ ಬಿಎಸ್.ಪಿ ಬಿಜೆಪಿ ಜೊತೆ ಸೇರಿಕೊಂಡಿತೋ ಆಗ ಮೈಸೂರಿನಿಂದ ಮರುದಿನ ಬೆಳಗ್ಗೆಯೇ ಬಿಎಸ್.ಪಿ ಬಿಜೆಪಿ ಜೊತೆ ಸೇರಿದ್ದರಿಂದ ತಾವು ಅದರಿಂದ ಹೊರಬಂದು ಪ್ರತ್ಯೇಕ ಬಣಮಾಡಿಕೊಂಡ ಹೇಳಿಕೆ ಹೊರ ಬಂತು. ಜನಚಳವಳಿಯನ್ನು ಕಟ್ಟಿ ಅಷ್ಟೊಂದು ನೋವನ್ನು ಅನುಭವಿಸಿ ಬೆಳಕಾಗುವುದರೊಳಗೆ ಕೃಷ್ಣಪ್ಪ ಅವರನ್ನು ಬೇಡ ಅನ್ನೋದಾದ್ರೆ ಹೇಗೆ? ಇದೇ ದಲಿತ ಚಳವಳಿಯ ವಿಘಟನೆಗೆ ಹಿನ್ನಡೆಗೆ ಕಾರಣವಾಗಿದೆ. ಇದರಿಂದ ವ್ಯಕ್ತಿ ಬಣ, ಜಾತಿ ಬಣಗಳಾಗಿವೆ.


ನಾವು ಇತ್ತೀಚೆಗೆ ಅಸ್ಪೃಶ್ಯರು, ಬೇರೆ ಜಾತಿಯವರನ್ನು ಸೇರಿಸಿ ಮತ್ತೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಲು ಪ್ರಯತ್ನ ನಡೆಯುತ್ತಿದೆ. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಜಾತಿಯ ವಿರಾಟ್ ಸ್ವರೂಪವನ್ನು ನೋಡಿದಾಗ ಶಿವಾಜಿಯವರು ಬರೆದಿರುವ ಸಾಲುಗಳೇ ನೆನಪಿಗೆ ಬರುತ್ತವೆ. ಹಸಿವು, ಅವಮಾನ, ಸಂಕಟ, ಶೋಷಣೆ ವಿರುದ್ಧ ಮೂಡಿಬಂದಿರುವ ದಲಿತ ಚಳವಳಿ ಕೊನೆಗೆ ಜಾತಿಯಿಂದಲೇ ಈ ಸ್ಥಿತಿ ತಲುಪಿತು ಎಂದು ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ. ಇದನ್ನು ನೋಡಿದಾಗ ಅಂಬೇಡ್ಕರ್ ಹೇಳುವ ಜಾತಿ ವಿನಾಶ. ಈ ಜಾತಿ ವಿನಾಶ ಮಾಡುವ ನಾವು ಜಾತಿಯೊಳಗೆ ಒಳ ಒಪ್ಪಂದ ಮಾಡಿಕೊಂಡು ತಿರುಗು ಬಾಣವಾಗುವಂತಹ ಸ್ಥಿತಿಯನ್ನು ತಂದುಕೊಂಡೆವಲ್ಲಾ ನಾವು. ಜನಚವಳಿಯ ಉದ್ದೇಶ, ಆಶಯವನ್ನು ಮೌಲ್ಯಮಾಪನ ಮಾಡದೆ ಹೋದರಲ್ಲ? ಇದು ಯಾಕೆ ಗೊಂದಲಗಳನ್ನು ಹುಟ್ಟುಹಾಕುತ್ತಿದೆ ಎಂಬ ಕಾರಣಕ್ಕೆ ಇಷ್ಟೆಲ್ಲಾ ಹೇಳಬೇಕಾಗಿ ಬಂತು.


ದAಡೋರ ಒಳಮೀಸಲಾತಿಯ ಕುರಿತು ಪ್ರಸ್ತಾಪ ಮಾಡಿತು. ಆದರೆ ನಾನು ಸೇರಿದಂತೆ ಹಲವರು ದೇಶದ ನಾಲ್ಕೈದು ರಾಜ್ಯಗಳಿಗೆ ಹೋಗಿ ವರದಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿ ಒಳಮೀಸಲಾತಿಯ ಅಗತ್ಯವನ್ನು ಪ್ರಸ್ತಾಪಿಸಿ ಹೋರಾಟ ನಡೆಸಬೇಕಾಯಿತು.


ನಮ್ಮ ನಡುವೆ ದ್ವೇಷ ಹೆಚ್ಚಾಗುತ್ತಿದೆ. ದ್ವೇಷವನ್ನು ಬಿಟ್ಟು ಪ್ರೀತಿ ಬೆಳೆಸಿಕೊಳ್ಳಬೇಕು. ಚಳವಳಿಯಲ್ಲಿ ದ್ವೇಷ ಇದ್ದರೆ ಏನು ಮಾಡಲು ಸಾಧ್ಯ. ಜಾತಿ, ಅಧಿಕಾರದ ದ್ವೇಷ ಇದ್ದರೆ ಏನು ಪ್ರಯೋಜನ. ಸ್ಪರ್ಧೆ ಇರಲಿ. ಮಾದಿಗರ ಹಟ್ಟಿಗೆ ಹೊಲೆಯರು ಹೋಗುವುದಿಲ್ಲ. ಹೊಲೆಯರ ಕೇರಿಗೆ ಮಾದಿಗರು ಹೋಗುವುದಿಲ್ಲ. ಇಂತಹ ಪರಿಸ್ಥಿತಿ ಇದೆ ಎಂದಾಗ ಆಘಾತವಾಯಿತು. ಅದನ್ನು ನೆನಪಿಸಿಕೊಂಡು ಇಂದಿಗೂ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ. ಸಂಕಟವಾಗುತ್ತಿದೆ. ನಾವು 50 ವರ್ಷ ಜೀವನ ಹಾಳು ಮಾಡಿಕೊಂಡೆವಲ್ಲ. ಇದೇನಾ  ದಲಿತ ಚಳವಳಿ. ಈಗಲಾದರೂ ಕೂಡ ಅವರವರ ಕೇರಿಗಳಿಗೆ ಹೋಗಿ ಜೊತೆಯಲ್ಲಿ ಊಟ ಮಾಡಿ, ಸಂಬಂಧ ಬೆಳೆಸುವುದಾದರೆ ಒಳ್ಳೆಯ ಕಾಲ ಬರುತ್ತದೆ. ಆದರೆ ನಾವು ಏನು ಮಾಡುತ್ತಿದ್ದೇವೆ. ಏನ್ ಚಳವಳಿ ಮಾಡುತ್ತಿದ್ದೇವೆ. ಏನ್ ಚಿಂತನೆ ಮಾಡುತ್ತಿದ್ದೇವೆ 50 ವರ್ಷ ಚಳವಳಿ ಮಾಡಿದ್ದಕ್ಕೆ ಇದೇನಾ ನಮ್ಮ ಕೊಡುಗೆ. ನೆನಪಿಸಿಕೊಂಡರೆ ಬಹಳ ದುಃಖವಾಗುತ್ತದೆ. ಆದ್ದರಿಂದ ಈ ಪುಸ್ತಕ ಚಳವಳಿಯ ದಿಕ್ಸೂಚಿಯಂತೆ ಕಂಡುಬರುತ್ತಿಲ್ಲ. ಚಳವಳಿಯಿಂದ ಬಂದವರಿಗೆ ವಾಸ್ತವ ಕಾಣುವಂತೆ ಅಗಬೇಕು. ಕೆಲವು ವಿಷಯಗಳನ್ನು ರೂಪಿಸುವುದು ಹೇಗೆ ಎಂದು ನೋಡಬೇಕು. ಮನುಷ್ಯನಲ್ಲಿ ವಿಕಾರವನ್ನು ಸೃಷ್ಟಿಸುವಂತಹ ದ್ವೇಷ ಮೂಡಿಸುವಂತಹ ಸಾಹಿತ್ಯ ಕೃತಿಗಳು ಇರಬಾರದು ಎಂದು. ವಿಕಾರವನ್ನ ಇಲ್ಲದಂತೆ ಮಾಡಬೇಕು. ದಲಿತ ಚಳುವಳಿಯಲ್ಲಿರುವ ನಮ್ಮೊಳಗಿನ ಜಾತೀಯತೆ, ಈರ್ಷ್ಯೆ, ಪ್ರಾದೇಶಿಕತೆ ಇವೆಲ್ಲವೂ ಹೋಗಿ ಕನಿಷ್ಟ ಸೈದ್ಧಾಂತಿಕ ನಿಲುವು ಇಟ್ಟುಕೊಂಡು ನಮ್ಮ ಬಿಡುಗಡೆಗೆ ವಿಷಯವೇ ನಮ್ಮ ನಾಯಕ ಆಗಬೇಕು. ವ್ಯಕ್ತಿ, ಜಾತಿ, ಪ್ರದೇಶ ಮುಖ್ಯವಾಗಬಾರದು ಎಂದರು ದೊರೈರಾಜ್.