ಪ್ರಾಕೃತಿಕ ವಿಕೋಪ ಮತ್ತು ಮನುಕುಲದ ಅವಿವೇಕ
ನಿಸರ್ಗದೊಡನೆ ಸಹಬಾಳ್ವೆ ನಡೆಸುವ ವಿವೇಕವನ್ನೇ ಮಾನವ ಸಮಾಜ ಕಳೆದುಕೊಂಡಿದೆ
ವರ್ತಮಾನ
ನಾ ದಿವಾಕರ
" ಪರಿಸ್ಥಿತಿ ಇಂದಿನಂತೆಯೇ ಮುಂದುವರಿದರೆ, ಇಡೀ ಹಿಮಾಚಲ ಪ್ರದೇಶ ರಾಜ್ಯವು ದೇಶದ ಭೂಪಟದಿಂದ ಕಣ್ಮರೆಯಾಗುವ ದಿನ ದೂರವಿಲ್ಲ" ಎಂದು 2025ರ ಜುಲೈ 28 ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿತ್ತು. ಈ ಎಚ್ಚರಿಕೆಯ ಮಾತುಗಳು ಯಾರ ಕಿವಿಗೆ ಬಿದ್ದಿದೆಯೋ ತಿಳಿದಿಲ್ಲ ಆದರೆ ಕಿವಿಗಳಿಲ್ಲದ ಪ್ರಕೃತಿಗೆ ಇದು ಅಪ್ರಸ್ತುತ. ಏಕೆಂದರೆ ನೈಸರ್ಗಿಕ ಪ್ರಕೋಪಕ್ಕೆ ಪೂರ್ವನಿರ್ಧಾರಿತ ನೀಲನಕ್ಷೆ ಇರುವುದಿಲ್ಲ. ಇದ್ದರೂ ನಮಗೆ ತಿಳಯವುದಿಲ್ಲ ಇಂಜಿನಿಯರಿಂಗ್ ತಂತ್ರಗಳ ಅವಶ್ಯಕತೆಯೂ ಪ್ರಕೃತಿಗೆ ಇರುವುದಿಲ್ಲ. “ ನನ್ನೊಡನೆ ಸಹಬಾಳ್ವೆ ನಡೆಸಿ ನನ್ನನ್ನೂ ರಕ್ಷಿಸಿ ನೀವು ಸುರಕ್ಷಿತವಾಗಿರಿ ” ಎಂಬ ಸೂಕ್ಷ್ಮ ಮಾತುಗಳನ್ನು ಮಾನವ ಸಮಾಜಕ್ಕೆ ಪ್ರಕೃತಿ ಹೇಳುತ್ತಲೇ ಇರುತ್ತದೆ. ಕೊರತೆ ಇರುವುದು ಕೇಳಿಸಿಕೊಂಡು ಅನುಸರಿಸುವ ಮನಸ್ಸುಗಳಿಗೆ.
ಈ ವರ್ಷ 64 ದಿನಗಳ ಮುಂಗಾರು ಮಳೆಯಲ್ಲಿ ಹಿಮಾಚಲ ಪ್ರದೇಶ 259 ಜೀವಗಳನ್ನು ಕಳೆದುಕೊಂಡಿದೆ. 1200 ಕೋಟಿ ರೂ ನಷ್ಟವಾಗಿದೆ. ರಾಜ್ಯಾದ್ಯಂತ 150 ರಸ್ತೆಗಳ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಮತ್ತು ನೀರು ಸರಬರಾಜು ಕೇಂದ್ರಗಳು ನೂರಾರು ಸಂಖ್ಯೆಯಲ್ಲಿ ಸ್ಥಗಿತಗೊಂಡಿವೆ. 460ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಈ ರಸ್ತೆಗಳು ಬಂದ್ ಆಗಿರುವುದು ಭೂ ಕುಸಿತಗಳ ಪರಿಣಾಮವಾಗಿ. ಕುಲು ಕಣಿವೆಯಿಂದ ಪಂಗಿ ಪ್ರದೇಶಕ್ಕೆ ಸಂಪರ್ಕಿಸುವ ಹಾದಿಯಲ್ಲಿ ಭೂ ಕುಸಿತದಿಂದ 13 ಜನರು ಸಾವಿಗೀಡಾಗಿದ್ದಾರೆ. ರಾಜ್ಯಾದ್ಯಂತ 19 ಜಾಗಗಳಲ್ಲಿ ಭೂ ಕುಸಿತ ಸಂಭವಿಸಿದೆ. 2022 ರಲ್ಲಿ 276, 2023ರಲ್ಲಿ 428, 2025ರಲ್ಲಿ 468 ಜನರು ನಿಸರ್ಗದ ವಿಕೋಪಕ್ಕೆ ತುತ್ತಾಗಿದ್ದಾರೆ.
ಹಿಮಾಲಯದಲ್ಲಿ ಹುಚ್ಚಾಟಗಳು
ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಲೇ ಇರುವ ಈ ದುರಂತಗಳಿಗೆ ಪ್ರಾಕೃತಿಕ ವ್ಯತ್ಯಯಗಳು ಮಾತ್ರ ಕಾರಣವಲ್ಲ. ಜಗತ್ತು-ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಅಭಿವೃದ್ಧಿ ಮಾದರಿಗಳು (Neo liberal Development models) ನಿಸರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬೆಳೆಯುವುದರ ಬದಲು, ಪೈಪೋಟಿ ನಡೆಸುತ್ತಿವೆ. ಹಿಮಾಲಯ ಪರ್ವತವು ಕಣಜಗಳ ಅಥವಾ ಕೋಶಾಗಾರಗಳ (Silos) ಸರಪಳಿ ಅಲ್ಲ. ಆಫ್ಘಾನಿಸ್ತಾನದ ಹಿಂದು ಕುಶ್, ಪಾಕಿಸ್ತಾನ, ಭಾರತ , ನೇಪಾಳ, ಟಿಬೆಟ್-ಚೀನಾ ಹೀಗೆ ಚಾಚಿಕೊಂಡಿರುವ ಈ ಪರ್ವತ ಶ್ರೇಣಿಯನ್ನು ಖ್ಯಾತ ಚಿತ್ರಕಾರ ಗುಲಾಮ್ ಮೊಹಮ್ಮದ್ ಶೇಖರ್ ಒಂದು ಜೀವಂತ ಶಿಲೆ ಎಂದು ಬಣ್ಣಿಸುತ್ತಾರೆ. 1934ರ ನೇಪಾಳ-ಬಿಹಾರ ಭೂಕಂಪ ಮತ್ತು 1950ರ ಅಸ್ಸಾಂ ಭೂಕಂಪಗಳು ಇಲ್ಲಿ ಸಂಭವಿಸುವ ಪ್ರಾಕೃತಿಕ ವ್ಯತಯಗಳಿಗೆ ಚಾರಿತ್ರಿಕ ನಿದರ್ಶನಗಳು.
ಹಿಮಾಚಲ ಪ್ರದೇಶದಲ್ಲಿ 27 ಜಲವಿದ್ಯುತ್ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ನಿರ್ಮಾಣ ಹಂತದಲ್ಲಿವೆ. ಈ ಉದ್ದೇಶಕ್ಕಾಗಿ ನಿರ್ಮಿಸಲಾಗಿರುವ ಹಲವಾರು ಅಣೆಕಟ್ಟುಗಳು ನದಿಯ ನೈಸರ್ಗಿಕ ಹರಿವಿಗೆ ತಡೆಯಾಗುತ್ತದೆ. ಇದು ದುರ್ಬಲವಾಗಿರುವ ಬೆಟ್ಟಗುಡ್ಡಗಳನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಹೆದ್ದಾರಿಗಳಿಗಾಗಿ ನಡೆಯುವ ಬಂಡೆಗಳ ಕೊರೆಯುವಿಕೆ ಮತ್ತು ಇಳಿಜಾರು ಪ್ರದೇಶಗಳಲ್ಲಿ ಸಂಭವಿಸುವ ಸ್ಫೋಟಗಳು ಶಾಶ್ವತವಾದ ಭೂಕುಸಿತ ವಲಯಗಳನ್ನು ಸೃಷ್ಟಿಸುತ್ತವೆ. ಇಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಸ್ಲೇಟ್, ಕಲ್ಲುಗಳು ಹಾಗೂ ಮರಳು ಗಣಿಗಾರಿಕೆ ಭೂ ಪ್ರದೇಶಗಳನ್ನು ಸಡಿಗೊಳಿಸುತ್ತದೆ. ಈ ಮಾರ್ಗದಲ್ಲಿ ಓಡಾಡುವ ಲಕ್ಷಾಂತರ ಪ್ರಯಾಣಿಕರ/ಯಾತ್ರಾರ್ಥಿಗಳ ಉಪಯೋಗಕ್ಕಾಗಿ ನಿರ್ಮಿಸಲಾಗಿರುವ ಬಹುಮಹಡಿ ಕಟ್ಟಡಗಳು, ಹೋಟೆಲ್-ರೆಸಾರ್ಟ್‌ಗಳು ಶಿಮ್ಲಾ, ಕುಲು ಪ್ರದೇಶಗಳನ್ನು ಸಂಭಾವ್ಯ ವಿನಾಶಕ್ಕೆ ಸಿದ್ಧಪಡಿಸಿವೆ.
ನೇಪಾಳದ ಪ್ರಾಕೃತಿಕ ವಿಕೋಪ

ಈಗಾಗಲೇ 1400ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು, ನೂರಾರು ಗ್ರಾಮಗಳನ್ನು ಅಳಿಸಿಹಾಕಿರುವ ನೇಪಾಳದ ಭೀಕರ ಪ್ರವಾಹ ಮತ್ತು ಭೂ ಕುಸಿತವನ್ನು ಗಮನಿಸುವಾಗ ಈ ಎಲ್ಲ ಮಾನವ ನಿರ್ಮಿತ ಅನಾಹುತಗಳನ್ನೂ ಗಮನಿಸಬೇಕಾಗುತ್ತದೆ. ಭೂಕಂಪಶಾಸ್ತ್ರಜ್ಞರು (Seismologists) ಈಗಾಗಲೇ ಎಚ್ಚರಿಕೆ ನೀಡಿರುವಂತೆ, ಹಿಮಾಲಯ ಶ್ರೇಣಿಯನ್ನು ಆಶ್ರಯಿಸಿರುವ ಇಡೀ ಭೂ ಪ್ರದೇಶಗಳು ಸಂಭಾವ್ಯ ಭೂಕಂಪಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸಾಕಷ್ಟು ಮಂಜಾಗರೂಕತೆಯ ಕ್ರಮಗಳನ್ನು ಕೈಗೊಂಡಿದೆಯಾದರೂ, ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ, ನೇಪಾಳದ ಮೇಲ್ಬಾಗದಲ್ಲಿ ಘಟಿಸಿದ ಈ ದುರಂತವೇನಾದರೂ ಕೆಳಭಾಗದಲ್ಲಿ ಆಗಿದ್ದರೆ ಭಾರತ ಎಂತಹ ಅನಾಹುತ ಎದುರಿಸುತ್ತಿತ್ತು ? ಇದನ್ನು ಎದುರಿಸಲು ಭಾರತ ಸಜ್ಜಾಗಿತ್ತೇ ? ಈ ಪ್ರಶ್ನೆಗಳೂ ಉದ್ಭವಿಸುತ್ತದೆ.
26ರಂದು ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಅಸಾಧಾರಣ ಪ್ರವಾಹದ ಪರಿಣಾಮವಾಗಿ ಸಾವಿರಾರು ಜನರು ಕಾಣೆಯಾಗಿದ್ದಾರೆ. ಇನ್ನೂ ಶೋಧ ಕಾರ್ಯ ನಡೆದಿದೆ. ಈ ಪ್ರವಾಹದ ಮೂಲ ಕಾರಣ ಗುರುತಿಸಲು ವಿಜ್ಞಾನಿಗಳು ಇನ್ನೂ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಷ್ಟರಲ್ಲೇ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಗೆ, ಜ್ಯೋತಿಷಿಗಳಿಗೆ ಏನೋ ಅವಸರ. ಇಲ್ಲದ ದೇವರ ಅವಕೃಪೆ, ಕೊಚ್ಚಿಹೋದ ನೂರಾರು ಮನೆಗಳ ನಡುವೆಯೂ ಒಂದು ಕಟ್ಟಡ ಗಟ್ಟಿಯಾಗಿ ನಿಂತ ಪವಾಡ, 17ನೆ ಶತಮಾನದ ಸತಿ ಶಾಪ ಇವೆಲ್ಲವೂ ಕಂಡುಬಿಟ್ಟಿವೆ. ನೇಪಾಲದಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯವೇ ಈ ಪ್ರವಾಹಕ್ಕೆ ಕಾರಣ ಎಂಬ ಮಹಿಳೆಯ ಹೇಳಿಕೆಯೂ ಸಹ ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಹರಿದಾಡುತ್ತಿದೆ. ಸಾವಿರಾರು ಜನರ ಬದುಕು ಅಳಿಸಿಹಾಕುವ ನೈಸರ್ಗಿಕ ದುರಂತದಲ್ಲಿ ಮೌಢ್ಯ ಬಿತ್ತನೆ ಮಾಡುವುದು, ಪ್ರವಾಹಕ್ಕಿಂತಲೂ ಹೆಚ್ಚು ವಿನಾಶಕಾರಿ.
ವೈಜ್ಞಾನಿಕ ಪರಿಶೋಧನೆಯ ಹಾದಿ
ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಜಾಗತಿಕ ತಾಪಮಾನ ಏರಿಕೆ (Global Warming) ಇಂತಹ ವಿಕೋಪಗಳಿಗೆ ಮೂಲ ಕಾರಣ ಎಂದು ಹೇಳಲಾದರೂ, ನೇಪಾಳದ ದುರಂತದ ನಿರ್ದಿಷ್ಟ ಕಾರಣಗಳನ್ನು ಶೋಧಿಸಲಾಗುತ್ತಿದೆ. ನೇಪಾಳದ ಹವಾಮಾನಶಾಸ್ತ್ರ ಮತ್ತು ಜಲವಿಜ್ಞಾನ ಇಲಾಖೆಯ ವಿಜ್ಞಾನಿಗಳು ಉಪಗ್ರಹದ ಚಿತ್ರಗಳನ್ನು ಆಧರಿಸಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಿಮಪಾತ (Ice Avalanche) ಮತ್ತು ಶಾಶ್ವತ ಹಿಮದ ಚಲನೆಯೊಂದಿಗೆ ನೇಪಾಳ-ಚೀನಾ ಗಡಿ ಪ್ರದೇಶದಲ್ಲಿ ಬಂಡೆಗಳ ಕುಸಿತ ಉಂಟಾಗಿರುವುದು ಮುಖ್ಯ ಕಾರಣ ಎಂದು ಹೇಳಿದ್ದಾರೆ. ನೇಪಾಳದ ಗಡಿಯೊಳಗೆ ಹಿಮಪಾತ ಸಂಭವಿಸಿದರೂ ಗಡಿಯ ಸಮೀಪವೇ ಇದ್ದುದರಿಂದ ಚೀನಾ-ನೇಪಾಳ ಗಡಿಯನ್ನು ದಾಟಿ ಎರಡೂ ಕಡೆ ಅಪಾರ ಅನಾಹುತ ಉಂಟುಮಾಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭೋಟೆಕೇಶಿ ನದಿಯಲ್ಲಿ ಪ್ರವಾಹಗಳು ಹೊಸ ವಿದ್ಯಮಾನವೇನಲ್ಲ. ಕಳೆದ ವರ್ಷ ಮಳೆ ಇಲ್ಲದೆಯೇ ಸಂಭವಿಸಿದ ಪ್ರವಾಹದಲ್ಲಿ ಅಪಾರ ಹಾನಿ ಉಂಟಾಗಿತ್ತು. ಇದಕ್ಕೆ ಹಿಮನದಿ ಸರೋವರದ ಪ್ರಕೋಪ ಪ್ರವಾಹ (Glacial lake outburst flood-GLOF) ಕಾರಣ ಎಂದು ಹೇಳಲಾಗಿತ್ತು. ಪ್ರವಾಹದ ಹರಿವಿನ ಮಾರ್ಗದಲ್ಲಿರುವ ಮೂರು ಜಿಲ್ಲೆಗಳಲ್ಲಿ ಇರುವ ಹಳ್ಳಿಗಳನ್ನು ಕೊಚ್ಚಿಕೊಂಡು ಹೋಗಿರುವ ಈ ಬಾರಿಯ ಪ್ರವಾಹವೂ ಇದೇ ಕಾರಣದಿಂದಲೇ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ರಸುವಾ, ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳು ಅತಿಹೆಚ್ಚು ಹಾನಿಗೊಳಗಾಗಿವೆ. ಈ ಪ್ರವಾಹ ಸೃಷ್ಟಿಸಿದ ಬೃಹತ್ ಹಿಮಪಾತ-ಬಂಡೆಯ ಕುಸಿತವನ್ನು ತ್ರಿಭುವನ್ ವಿಶ್ವವಿದ್ಯಾಲಯದ ಪ್ರೊ. ರಂಜನ್ ಕುಮಾರ್ ದಹಾಲ್ ಸ್ಟರ್ಜ್‌ಸ್ಟ್ರೋಮ್ (Sturzstrom) ಎಂದು ಬಣ್ಣಿಸುತ್ತಾರೆ. “ ಸ್ಟ್ರಜ್‌ಸ್ಟ್ರೋಮ್ ಒಂದು ಬೃಹತ್ ಬಂಡೆಯ ಹಿಮಪಾತವಾಗಿದ್ದು, ಇದರಲ್ಲಿ ಬೃಹತ್ ಗಾತ್ರದ ಬಂಡೆಯು ಹಠಾತ್ತನೆ ಕುಸಿದು ಅತ್ಯಂತ ಹೆಚ್ಚಿನ ವೇಗದಲ್ಲಿ ಬಹು ದೂರದವರೆಗೂ ಚಲಿಸುತ್ತದೆ ” ಎಂದು ರಂಜನ್ ಕುಮಾರ್ ವ್ಯಾಖ್ಯಾನಿಸುತ್ತಾರೆ.
“ಎತ್ತರದ ಪರ್ವತ ಪರಿಸರದಲ್ಲಿ ಬೃಹತ್ ಕಲ್ಲು ಬಂಡೆಗಳು ಹಿಮದ ಜರೀಗಿಡಗಳು (Ferns) ಮತ್ತು ಹೆಪ್ಪುಗಟ್ಟಿದ ಮಣ್ಣಿನೊಂದಿಗೆ ಬೆರೆತಾಗ ಅದನ್ನು ಕಲ್ಲು-ಮಂಜುಗಡ್ಡೆ ಹಿಮಪಾತ ಎಂದು ಅರ್ಥೈಸಿಕೊಳ್ಳಬಹುದು. “ ಎಂದು ರಂಜನ್ ಕುಮಾರ್ ವಿವರಿಸುತ್ತಾರೆ. (ಜರೀಗಿಡಗಳು ಎಂದರೆ ಗರಿಗಳಂತಹ ಎಲೆಗಳನ್ನು ಹೊಂದಿರುವ ಹಸಿರು ಸಸ್ಯಗ̧ಳು ಹೂವು ಅಥವಾ ಬೀಜಗಳನ್ನು ಹೊಂದಿರುವುದಿಲ್ಲ, ಅವು ಬೀಜಕಗಳಿಂದ (Spores) ಬೆಳೆಯುತ್ತವೆ- ಅನು) ಈ ವೈಜ್ಞಾನಿಕ ಅನ್ವೇಷಣೆ ಮತ್ತು ವಿಶ್ಲೇಷಣೆಗಳಿಂದಾಚೆ ನೋಡಿದಾಗ ನೇಪಾಳ ದುರಂತಕ್ಕೆ ಮಾನವ ಸಮಾಜದ ಕೊಡುಗೆಯೂ ಇರುವುದನ್ನು ವಿಜ್ಞಾನಿಗಳು, ಪರಿಸರ ತಜ್ಞರು ಗುರುತಿಸುತ್ತಾರೆ. ಪ್ರವಾಹಕ್ಕೆ ತುತ್ತಾದ ರಸುವಾ ಜಿಲ್ಲೆಯ ರಸುವಾಗಂದಿ ಚೆಕ್ ಪಾಯಿಂಟ್ ಮುಖಾಂತರವೇ ನೇಪಾಳ-ಚೀನಾದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೆ.
ಮಾನವ ಸಮಾಜದ ದುಸ್ಸಾಹಸಗಳು
ಪ್ತತಿ ವರ್ಷ ಮೇ ತಿಂಗಳಿಂದ ಸೆಪ್ಟಂಬರ್‌ವರೆಗೆ ಸಾವಿರಾರು ಯಾತ್ರಾರ್ಥಿಗಳು ಟಿಬೆಟ್ ಮೂಲಕ ಕೈಲಾಸ ಮಾನಸ ಸರೋವರ ತಲುಪಲು ಈ ಮಾರ್ಗವನ್ನು ಯಥೇಚ್ಛವಾಗಿ ಬಳಸುತ್ತಾರೆ. ಈ ಯಾತ್ರಾರ್ಥಿಗಳ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದುಹೋಗಿರಬಹುದಾದ ವ್ಯಕ್ತಿಗಳ ಪೂರ್ಣ ಮಾಹಿತಿ ದೊರೆಯಲು ತಿಂಗಳುಗಳೇ ಬೇಕಾಗಬಹುದು ಎಂದು ಪರಿಸರ ತಜ್ಞರು ಹೇಳುತ್ತಾರೆ. ಈಗಿನ ಅಂದಾಜುಗಳ ಪ್ರಕಾರ 93 ಸಾವಿರಕ್ಕೂ ಹೆಚ್ಚು ಜನರು ಬಾಧಿತರಾಗಿರಬಹುದು ಎಂದು ರೆಡ್ ಕ್ರಾಸ್ ಸಂಸ್ಥೆಯ ವಕ್ತಾರರು ಹೇಳುತ್ತಾರೆ. ಪೀಡಿತ ಪ್ರದೇಶಗಳು ದೂರದೂರದಲ್ಲಿರುವುದು ಮತ್ತು ಮೂಲ ಸೌಕರ್ಯಗಳು (Infrastructure) ಹಾನಿಯಾಗಿರುವುದು ಶೋಧ ಕಾರ್ಯಗಳಿಗೆ ದೊಡ್ಡ ತೊಡಕಾಗುತ್ತಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ಹೇಳುತ್ತದೆ.
ನೇಪಾಳದ ದುರಂತಕ್ಕೆ ಹವಾಮಾನ ಬದಲಾವಣೆಯ ಕಾರಣವನ್ನೂ ವಿಜ್ಞಾನಿಗಳು ಅಲ್ಲಗಳೆಯುವುದಿಲ್ಲ. ಹೆಚ್ಚುತ್ತಿರುವ ತಾಪಮಾನದ ಪರಿಣಾಮವಾಗಿ ಹಿಮಾಲಯ ಬೆಚ್ಚಗಾಗುತ್ತಿದ್ದು ಹಿಮನದಿಗಳು ವೇಗವಾಗಿ ಕರಗಲಾರಂಭಿಸಿವೆ ಎಂದು ದೃಢೀಕರಿಸುವ ವಿಜ್ಞಾನಿಗಳು, ಪ್ರಸ್ತುತ ಅನಾಹುತಕ್ಕೆ ಇದನ್ನು ನೇರವಾಗಿ ದೂಷಿಸುವುದಿಲ್ಲ. ನೇಪಾಳದಲ್ಲಿ ಈವರೆಗೂ ಇಂತಹ Sturzstrom ಸಂಭವಿಸಿರಲಿಲ್ಲವಾದರೂ, 2021ರಲ್ಲಿ ಭಾರತದ ಉತ್ತರಖಾಂಡದ ಚಮೋಲಿ ದುರಂತದಲ್ಲಿ ಗುರುತಿಸಬಹುದು ಎಂದು ಹೇಳುವ ವಿಜ್ಞಾನಿಗಳು ಚಮೋಲಿ ದುರಂತದಲ್ಲಿ “ ಹಿಮನದಿಯ ಕೆಳಭಾಗದಲ್ಲಿರುವ ಶಿಲಾಪಾಕ ವಿಫಲವಾದ ಕಾರಣ ಶಿಲಾ ಮಂಜುಗಡ್ಡೆಯ ಹಿಮಪಾತಕ್ಕೆ ಕಾರಣವಾಯಿತು, ಅದು ಶಿಲಾಖಂಡರಾಶಿಗಳ ಹರಿವು ಮತ್ತು ಪ್ರವಾಹವಾಗಿ ರೂಪಾಂತರಗೊಂಡಿತು ” ಎಂದು ವ್ಯಾಖ್ಯಾನಿಸುತ್ತಾರೆ.
ಕಲಿಯದ-ಕಲಿಯಬೇಕಾದ ಪಾಠಗಳು
ಈ ಅನಾಹುತ ಮತ್ತು ವಿನಾಶಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ ಕೆಲವು ಪ್ರಮುಖ ಪಾಠಗಳನ್ನು ಕಲಿಯಬೇಕಿದೆ ಎನ್ನುತ್ತಾರೆ ಶ್ರೀಯುತ ಗೋಪಾಲ ಕೃಷ್ಣ ಗಾಂಧಿ . ಮೊದಲನೆಯದಾಗಿ ಪಾರಂಪರಿಕವಾಗಿ ಪವಿತ್ರ ಎಂದು ಪರಿಗಣಿಸಲ್ಪಟ್ಟಿರುವ ಹಿಮಾಲಯ ಗರ್ಭಾವಸ್ಥೆಯ ಖಚಿತ ಅಪಾಯವನ್ನು ಎದುರಿಸುತ್ತಿದೆ. ಎರಡನೆಯದಾಗಿ ಈ ಅಪಾಯಗಳನ್ನು ಸೆಮಿನಾರ್‌ಗಳು, ತಾಂತ್ರಿಕ ಪ್ರಬಂಧಗಳು ಹೊರಗೆಡಹುವಂತೆ ಅಪೇಕ್ಷಿಸುವುದು ಉಚಿತವಲ್ಲ. ಮೂರನೆಯದಾಗಿ ಮುಂದಿನ ಅನಾಹುತಗಳ ಸಂಭಾವ್ಯ ಸಂತ್ರಸ್ತರಾದ ನಮಗೆ, ಅಂದರೆ ಭಾರತದ ಜನರಿಗೆ ಈ ಮಾಹಿತಿಯನ್ನು ತಿಳಿಯಪಡಿಸಬೇಕಿದೆ. ನಾಲ್ಕನೆಯಾಗಿ ಈ ಮಾಹಿತಿ ಕೇವಲ ಅರಿವು ಮೂಡಿಸುವ ಉದ್ದೇಶ ಮಾತ್ರ ಹೊಂದಿರದೆ ಜನರನ್ನು ಸಹ ರಕ್ಷಣೆಯ ಒಂದು ಭಾಗವಾಗಿ ಪರಿಗಣಿಸಬೇಕಿದೆ.
ಐದನೆಯದಾಗಿ ಚೀನಾ ಭಾರತದ ಗಡಿಗೆ ಹೊಂದಿಕೊಂಡಂತಿರುವ ಮೆಡಾಗ್‌ನಲ್ಲಿ , ಬ್ರಹ್ಮಪುತ್ರ ನದಿಯ ತಿರುವಿನಲ್ಲಿ ನಿರ್ಮಿಸುತ್ತಿರುವ ಜಲವಿದ್ಯುತ್ ಯೋಜನೆ ಪೈಝನ್ ಫಾಲ್ಟ್‌ಗೆ (Paizen Fault) ಸಮೀಪದಲ್ಲಿದ್ದು, ಇಲ್ಲಿ ಸಂಭವಿಸಬಹುದಾದ ಭೂಕಂಪದಿಂದ ಪ್ರವಾಹದ ನೀರು ಮತ್ತು ಭಗ್ನಾವಶೇಷಗಳು (Debris), ಅಪಾರ ಪ್ರಮಾಣದಲ್ಲಿ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸುತ್ತದೆ. ಈ ಅಪಾಯದ ಬಗ್ಗೆ ಭಾರತ ಚೀನಾದೊಡನೆ ನೇರವಾದ ಸಮಾಲೋಚನೆ ನಡೆಸಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಆರನೆಯದಾಗಿ ಎತ್ತರದ ಅಪಾಯಕಾರಿ ವಲಯಗಳಲ್ಲಿ ಭಾರತವೇ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟುಗಳು ಮತ್ತು ರಿಯಾಕ್ಟರ್‌ಗಳ ಬಗ್ಗೆ ಮರುವಿಮರ್ಶೆ ಮಾಡಬೇಕಿದೆ. ಹಾಗೆಯೇ ಅನಗತ್ಯ ನಿರ್ಮಾಣಗಳನ್ನು ಧ್ವಂಸಗೊಳಿಸಬೇಕಿದೆ. ಇದನ್ನು ಹೆಚ್ಚು ಮುಂದೂಡುವುದರಲ್ಲಿ ಅರ್ಥವಿಲ್ಲ. ಏಳನೆಯದಾಗಿ ಸುಲಭವಲ್ಲವಾದರೂ ಅಸಾಧ್ಯವೇನೂ ಅಲ್ಲದ ಕ್ರಮ ಎಂದರೆ, ಅತಿ ಹೆಚ್ಚಿನ ಅಪಾಯ ಇರುವ ವಲಯಗಳಲ್ಲಿ ಮಾನವ ವಸತಿ-ಚಟುವಟಿಕೆಗಳನ್ನು ನಿಯಂತ್ರಿಸಿ ಜನದಟ್ಟಣೆಯನ್ನು ಇಲ್ಲವಾಗಿಸಬೇಕಿದೆ.
“ ಭಾರತವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬ್ರಿಟೀಷ್ ಪರಿಸರ ತಜ್ಞೆ ಮಾರ್ಜೊರಿ ಸೈಕ್ಸ್ ಅವರು ಹೇಳಿದ ಹಾಗೆ “ ಅಣೆಕಟ್ಟುಗಳು ಶಾಪಗಳಂತೆ ” (Dams are Damnations). ಎಲ್ಲ ಅಣೆಕಟ್ಟುಗಳೂ ಶಾಪಗಳಾಗುವುದಿಲ್ಲವಾದರೂ ನಿರ್ಮಿಸಲಾದ ಪ್ರದೇಶಗಳನ್ನು ಅವಲಂಬಿಸುತ್ತವೆ ಎಂದು ಸೈಕ್ಸ್ ಹೇಳುತ್ತಾರೆ. ಅದೇ ರೀತಿ ರಿಯಾಕ್ಟರ್‌ಗಳೂ ಸಹ ರಾಕ್ಷಸರಂತಾಗುತ್ತವೆ. ಕೆಲವು ವಾಣಿಜ್ಯ ದೈತ್ಯರು ಪರಭಕ್ಷಕರೂ ಆಗಿ ಪರಿಣಮಿಸುತ್ತಾರೆ. ಒಂದು ದೊಡ್ಡ ದೇಶವಾಗಿ ಭಾರತ ಸಣ್ಣ ನೆರೆ ರಾಷ್ಟ್ರ ನೇಪಾಳದ ದುರಂತದಿಂದ ಪಾಠ ಕಲಿಯಬೇಕಿದೆ ಅದರಲ್ಲೂ ಎರಡೂ ದೇಶಗಳು ಮುಂದೊಂದು ದಿನ ಸಾಮೂಹಿಕ ಮಸಣವಾಗುವ ಅಪಾಯ ಹೊತ್ತಿರುವ ಜೀವಂತ ಶಿಲೆಯ ಮೇಲೆ ನಿಂತಿರುವುದರಿಂದ ಈ ಮುನ್ನೆಚ್ಚರಿಕೆಯ ಪಾಠಗಳನ್ನು ಕಲಿಯಲೇಬೇಕಿದೆ ” ಎಂದು ಗೋಪಾಲಕೃಷ್ಣ ಗಾಂಧಿ ಹೇಳುತ್ತಾರೆ .
ಅಭಿವೃದ್ಧಿ ಮತ್ತು ವಿವೇಕದ ಮೈತ್ರಿ
ಭಾರತದಲ್ಲಿ ಪಕ್ಷಾತೀತವಾಗಿ ಸರ್ಕಾರಗಳ ಒಂದು ಸಮಾನ ಲಕ್ಷಣ ಎಂದರೆ ಪರಿಸರ ತಜ್ಞರ, ಭೂ ವಿಜ್ಞಾನಿಗಳ, ಹವಾಮಾನ ವಿಜ್ಞಾನಿಗಳ ಹಾಗೂ ಭೂಕಂಪಶಾಸ್ತ್ರಜ್ಞರ ವೈಜ್ಞಾನಿಕ ವ್ಯಾಖ್ಯಾನ, ಅಭಿಪ್ರಾಯಗಳನ್ನು ಕಡೆಗಣಿಸುವುದು. ಇದು ವಾಸ್ತವದಲ್ಲಿ ಅಲ್ಲಗಳೆದಂತೆಯೇ ಆಗುತ್ತದೆ. ಇತ್ತೀಚೆಗೆ ಉತ್ತರಪ್ರದೇಶದ ಲಕ್ನೋದಲ್ಲಿರುವ ಜಿಲ್ಲಾ ಗಂಗಾ ಸಮಿತಿಯಿಂದ ಪರಿಸರ ವಿಜ್ಞಾನಿ ಪ್ರೊ. ವೆಂಕಟೇಶ್ ದತ್ತಾ ರಾಜೀನಾಮೆ ನೀಡಿದ್ದಾರೆ. ಉತ್ತರಪ್ರದೇಶ ಸರ್ಕಾರ ಗೋಮ್ತಿ ನದಿ ತಟದಲ್ಲಿ ವಿವೇಕವಿಲ್ಲದೆ ನಿರ್ಮಿಸುತ್ತಿರುವ ಕಟ್ಟಡಗಳು ಹಾಗೂ ಪರಿಸರ ಸೂಕ್ಷ್ಮ ವಲಯಗಳಲ್ಲಿ (Eco sensitive Zones) ನಿರ್ಮಿಸುತ್ತಿರುವ ಹೆದ್ದಾರಿಗಳು ಗೋಮ್ತಿ ನದಿಯನ್ನು ಶುದ್ಧೀಕರಿಸುವ ಯೋಜನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ವೈಜ್ಞಾನಿಕ ವರದಿಗೆ ಈ ಸಮಿತಿ ಮಾನ್ಯತೆಯನ್ನೇ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಪ್ರೊ. ವೆಂಕಟೇಶ್ ದತ್ತಾ ಹೊರಬಂದಿದ್ದಾರೆ. (The Wire 31 Aug 2026)̤
ಹಿಮಾಲಯ ತಪ್ಪಲಿನ ಚಾರ್‌ಧಾಮ್ ಮಾರ್ಗದಲ್ಲಿ ಕೈಗೊಳ್ಳುತ್ತಿರುವ ಸೇತುವೆಗಳು, ಸುರಂಗಗಳು, ಜಲವಿದ್ಯುತ್ ಘಟಕಗಳು , ಹೆದ್ದಾರಿಗಳು ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ಕಾಡುಗಳು ಇಡೀ ವಲಯವನ್ನು ಸಂಭಾವ್ಯ ಅಪಾಯದ ತೂಗುಗತ್ತಿಯಲ್ಲಿರಿಸಿದೆ. ಜೋಷಿಮಠ ಎದುರಿಸುತ್ತಿರುವ ಅಪಾಯದ ಬಗ್ಗೆ ಐವತ್ತು ವರ್ಷಗಳ ಹಿಂದೆಯೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅದರೆ ನಮ್ಮ ಸರ್ಕಾರಗಳು ಈ ಅಭಿಪ್ರಾಯಗಳನ್ನು ಕಡೆಗಣಿಸುತ್ತಲೇ ಬಂದಿವೆ. ಹಿಮಾಲಯ ಭಾರತದ ರಕ್ಷಣಾ ಗೋಡೆ ಅಥವಾ ಸುಂದರ ಪ್ರವಾಸಿ ತಾಣ ಮಾತ್ರವೇ ಅಲ್ಲ, ಅದು ಇಡೀ ಭರತಖಂಡವನ್ನು ಹೊತ್ತು ನಿಂತಿರುವ ಒಂದು ಸೂಕ್ಷ್ಮ ಶಿಲೆ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ನೇಪಾಳದ ದುರಂತ ಇದನ್ನು ಪುನಃ ನೆನಪಿಸಿದೆ.
(ಈ ಲೇಖನದ ಆಕರ : Nepalʼs agony̧ the Himalayn warning to India – ಗೋಪಾಲಕೃಷ್ಣ ಗಾಂಧಿ – ದ ಹಿಂದೂ -4 ಸೆಪ್ಟಂಬರ್ 2026 ಹಾಗೂ A Himalayan Tragedy – ಸಂಜೀವ್ ಸತ್‌ಗೈನ್ಯ – ದ ಹಿಂದೂ 30 ಆಗಸ್ಟ್ 2026)
-೦-೦-೦-೦-೦
bevarahani1