ಡಿಯರ್‌ ಕಾಮ್ರೇಡ್ ಕೊಟ್ರೇಶ್ ಕೊಟ್ಟೂರು  

ಡಿಯರ್‌ ಕಾಮ್ರೇಡ್   ಕೊಟ್ರೇಶ್ ಕೊಟ್ಟೂರು   

ಡಿಯರ್‌ ಕಾಮ್ರೇಡ್

ಕೊಟ್ರೇಶ್ ಕೊಟ್ಟೂರು

 

ನನಗೆ ಎಲ್ಲಾದರೂ ಕಾಮ್ರೇಡ್ ಎಂಬ ಪದ ಕಂಡರೆ ಅರ್ಥವಾಗುತ್ತಿರಲಿಲ್ಲ. ಕಾಮ್ರೇಡ್ ಎನ್ನುವ ಪದದ ಅರ್ಥ ಹುಡುಕುವ ಬಗ್ಗೆ ಯಾವುದೇ ರೀತಿಯ ಕುತೂಹಲಗಳನ್ನು ಬೆಳೆಸಿಕೊಳ್ಳುವಷ್ಟು ಸಮಯವನ್ನು ನಾನು ಕೊಡಲೇ ಇಲ್ಲ. ನಂತರ ಕಾಮ್ರೇಡ್ ಎನ್ನುವ ಶಬ್ದದ ಅರ್ಥದ ಬಗ್ಗೆ ಒಬ್ಬರಲ್ಲಿ ಕೇಳಿದಾಗ ಸಾಮಾಜಿಕ ಹೋರಾಟಕ್ಕಾಗಿ ಕೈ ಜೋಡಿಸುವ ಸಂಗಾತಿ ಅಥವಾ ಜೊತೆಗಾರರು ಎಂದು ಎಂದಷ್ಟೇ ಸಂಕ್ಷಿಪ್ತವಾಗಿ ಹೇಳಿದ್ದರು. ಆದರೆ ಕಾಮ್ರೇಡ್ ಎಂದು ಕರೆಸಿಕೊಳ್ಳುವುದರಲ್ಲಿಯೂ ಕೂಡ ಖುಷಿಯಿದೆ ಎಂದು ಕೆಲವರು ಹೇಳಿದಾಗ ನಾನೂ ಕೆಲವೊಬ್ಬರಿಗೆ ಕಾಮ್ರೇಡ್ ಎಂದು ಕರೆಯಲು ಶುರು ಮಾಡಿದೆ. ಅವರೂ ಸಹ ನನ್ನನ್ನು ಕಾಮ್ರೇಡ್ ಎಂತಲೇ ಸಂಬೋಧಿಸಲು ಶುರು ಮಾಡಿದರು. ಬಹಳ ದಿನಗಳ ಹಿಂದೆಯೇ ‘ಡಿಯರ್ ಕಾಮ್ರೇಡ್’ ತೆಲುಗು ಭಾಷೆಯ ಚಿತ್ರವನ್ನು ನೋಡಲೇಬೇಕೆಂದು ಅನ್ನಿಸಿತ್ತು. ಅದಕ್ಕೆ ಕಾರಣ ಚಿತ್ರದ ಶೀರ್ಷಿಕೆ “ಡಿಯರ್ ಕಾಮ್ರೇಡ್”

ಸಮಾಜದ ಏರಿಳಿತಗಳ ವಿರುದ್ಧವಾಗಿ ಹೋರಾಟ ನಡೆಸುವ ಚಿತ್ರದ ನಾಯಕ. ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿ ನಾಯಕಿ ಅವಳೊಬ್ಬ ಕ್ರಿಕೆಟ್ ಪ್ಲೇಯರ್ ಎಂದು ಅಚಾನಕ್ಕಾಗಿ ನಾಯಕನಿಗೆ ಗೊತ್ತಾಗುತ್ತದೆ. ಹೀಗೆ ಗೆಳೆತನ ಹತ್ತಿರವಾಗಿ ನಾಯಕನ ಮನಸಿನಲ್ಲಿ ಪ್ರೇಮಾಂಕುರವಾಗುತ್ತದೆ. ಅದನ್ನು ನಾಯಕಿಗೆ ಹೇಳಿದಾಗ, ಮನಸಿನಲ್ಲಿ ಪ್ರೀತಿ ಇದ್ದರೂ ಅವಳು ನನಗೆ ನನ್ನದೇಯಾದ ದಾರಿಗಳಿವೆ ಎಂದು ತಾನು ನಾಯಕನ ಕೈಯಿಂದ ನಿರಾಯಾಸವಾಗಿ ತಪ್ಪಿಸಿಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ನಾಯಕಿ ಹೇಳದೇ ಕೇಳದೇ ತನ್ನ ಸಂಬಂಧಿಕರೊಬ್ಬರ ಮದುವೆ ಬಂದ ಕಾರಣ ಮುಗಿದ ತಕ್ಷಣ ನಾಯಕನಿಗೆ ಹೇಳದೇ ತನ್ನೂರು ಬೆಂಗಳೂರಿಗೆ ಹೊರಟು ಬಿಡುತ್ತಾಳೆ. ಅವಳ ಧ್ಯಾನದಲ್ಲಿಯೇ ಇದ್ದ ನಾಯಕ ರಾತ್ರೋ ರಾತ್ರಿ ಬೈಕ್ ನಲ್ಲಿ ನಾಯಕಿಯ ಊರಿಗೆ ಹೋದಾಗ ನಾಯಕಿ ಕ್ರಿಕೆಟ್ ತರಬೇತಿಯಲ್ಲಿರುತ್ತಾಳೆ. ಅವಳ ಮನಸ್ಸಿನಲ್ಲಿಯೂ ತನ್ನ ಬಗ್ಗೆ ಪ್ರೀತಿ ಇದೆ ಎಂದು ನಾಯಕನಿಗೆ ಗೊತ್ತಾಗುತ್ತದೆ.

ಯಾವುದೋ ಒಂದು ಹೋರಾಟದ ಹೊಡೆದಾಟಗಳಲ್ಲಿ ನಾಯಕನಿಗೆ ವಿಪರೀತ ಗಾಯಗಳಾದಾಗ ಅವನು ಆಸ್ಪತ್ರೆಯಲ್ಲಿದ್ದಾಗ ನಾಯಕಿ ಬಂದು ಮತ್ತೆ ಇಂತಹ ಹೋರಾಟಗಳನ್ನು ಬಿಟ್ಟುಬಿಡು ಇಲ್ಲವಾದರೆ ನನ್ನನ್ನು ಬಿಟ್ಟುಬಿಡು ಎಂದಾಗ, ನಾಯಕ ನಾಯಕಿಗೆ ನೀನೆಂದೂ ಸಿಗಲೇಬೇಡ ಎಂದುಬಿಡುತ್ತಾನೆ. ಅವಳೂ ಸಹ ಅವನ ಕಣ್ಣಳತೆಗೆ ಕಾಣದೇ ಹೋಗಿಬಿಡುತ್ತಾಳೆ. ಇವನು ಅವಳನ್ನು ಮರೆಯಲಾಗದೇ, ಪ್ರಯಾಣವನ್ನು ಅರಸುತ್ತಾ ಹೋಗುತ್ತಾನೆ, ಪರಿಸರದ ತಲ್ಲೀನತೆಯಲ್ಲಿ ತಾನು ಎಲ್ಲವನ್ನೂ ಮರೆತುಬಿಡುತ್ತಾನೆ. ಅಚಾನಕ್ಕಾಗಿ ಮತ್ತೆ ನಾಯಕಿಯ ಭೇಟಿಯಾದಾಗ ಗೊತ್ತಾಗುತ್ತದೆ. ಅವಳು ಹಾಸ್ಪಿಟಲೈಜ್ ಆಗಿದ್ದಾಳೆಂದು, ಅವಳನ್ನು ಯಾರಿಗೂ ಗೊತ್ತಾಗದಂತೆ ಅವಳನ್ನೂ ಪರಿಸರದ ಹತ್ತಿರಕ್ಕೆ ಕರೆದುಕೊಂಡು ಬಂದು ಅವಳನ್ನು ಎಲ್ಲ ದೈಹಿಕ ಮಾನಸಿಕ ಖಿನ್ನತೆಗಳಿಂದ ದೂರ ಮಾಡುತ್ತಾನೆ. ಆಗ ನೀನು ಕ್ರಿಕೆಟ್ ಆಡಬೇಕು ಎಂದು ನಾಯಕಿಗೆ ಹೇಳಿದಾಗ, ಇವೆಲ್ಲಾ ಬೇಡ ನೀನು ನನ್ನ ಜೊತೆಗಿದ್ದುಬಿಡು ಸಾಕು ಎಂದು ಹೇಳುತ್ತಾಳೆ. ಕ್ರಿಕೆಟ್ ಆಟದ ಬಗ್ಗೆ ಬಹಳ ದೊಡ್ಡ ಕನಸನ್ನಿಟ್ಟುಕೊಂಡಿದ್ದ ನಾಯಕಿ ಇದ್ದಕ್ಕಿದ್ದಂತೆ ಕ್ರಿಕೆಟ್ ಬೇಡವೆಂದು ಏಕೆ ಹೇಳುತ್ತಾಳೆ ಎನ್ನುವುದು ನಾಯಕನಿಗೆ ಉತ್ತರ ದೊರೆಯಲಾರದ ಪ್ರಶ್ನೆಯಾಗುತ್ತದೆ.

ಇದ್ದಕ್ಕಿದ್ದಂತೆ ನಾಯಕಿಯ ಕ್ರಿಕೆಟ್ ಸ್ನೇಹಿತೆಯ ಅನುಮಾನಾಸ್ಪದ ನಡೆಯನ್ನು ಕಂಡು ನಾಯಕನಿಗೆ ಅನುಮಾನ ಬಂದು ಕೇಳಿದಾಗ, ಕ್ರಿಕೆಟ್ ಆಯ್ಕೆ ಸಮಿತಿಯಲ್ಲಿ ನಾಯಕಿಗೆ ಆದಂತಹ ಲೈಂಗಿಕ ಶೋಷಣೆಯನ್ನು ಹೇಳುತ್ತಾಳೆ. ಅದಕ್ಕಾಗಿ ಹೋರಾಡಲೇಬೇಕೆಂದು ನಾಯಕಿಯ ಹೆಸರಿನ ಮೇಲೆ ನಾಯಕ ದೂರು ದಾಖಲಿಸುತ್ತಾನೆ. ಆದರೆ ಇದಕ್ಕೆ ನಾಯಕಿಯ, ನಾಯಕಿಯ ಮನೆಯವರ ಒಪ್ಪಿಗೆ ಇರುವುದಿಲ್ಲ ಇದಾವುದನ್ನೂ ಲೆಕ್ಕಿಸದೇ ನಾಯಕ ನಾಯಕಿಗೆ “ನಾನು ನಿನ್ನ ಜೊತೆಗಿರುತ್ತೇನೆ ಕೊನೆಯವರೆಗೂ ಯಾರಿಗೂ ಹೆದರದೇ ದೂರು ಕೊಡು” ಎಂದು ಹೇಳಿದರೂ ನಾಯಕಿ ಕೇಳುವುದಿಲ್ಲ. ಅವಳು “ನೀ ಮಾತ್ರ ಜೊತೆಗಿದ್ದುಬಿಡು ಸಾಕು” ಎಂದು ಹೇಳುತ್ತಾಳೆ. ಅದನ್ನು ಕೇಳಿಸಿಕೊಳ್ಳುವ ಜರೂರತ್ತು ನಾಯಕನಿಗೆ ಇರುವುದಿಲ್ಲ. ಅವನಿಗೆ ಅವಳೊಬ್ಬ ಕ್ರಿಕೆಟರ್ ಆಗಿಯೇ ನೋಡಬೇಕು ಮತ್ತು ಅಲ್ಲಿ ಅವಳಿಗಾದ ದೌರ್ಜನ್ಯಕ್ಕೆ ಅವಳು ಸಿಡಿದೇಳಲೇಬೇಕು ಎನ್ನುವ ಆಶಯವಿರುತ್ತದೆ.

ಅಂತಿಮವಾಗಿ ಲೈಂಗಿಕ ಕಿರುಕುಳ ಕೊಟ್ಟವನ ಮೇಲೆ ಕೇಸು ದಾಖಲಾಗಿ, ವಿಚಾರಣಾ ಸಂದರ್ಭದಲ್ಲಿ ನಾಯಕನ ತೊಳಲಾಟಗಳನ್ನು ನೋಡಲಾಗದೇ ನಾಯಕಿ ತನಗಾದ ಲೈಂಗಿಕ ಶೋಷಣೆಯನ್ನು ಪ್ರಪಂಚಕ್ಕೆ ಪರಿಚಯ ಮಾಡಿಸುತ್ತಾಳೆ ಬೇರೆ ಬೇರೆ ದಾರಿಗಳು ಎಂದುಕೊಂಡ ನಾಯಕ ಮತ್ತು ನಾಯಕಿಯ ಮನಸ್ಸುಗಳ ದಾರಿ ಒಂದೇ ಎಂದು ಅಂತಿಮವಾಗಿ ಹೇಳಿಸುವುದರಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ.

ಬಹಳ ದಿನಗಳ ನಂತರ ಸಿನಿಮಾ ನೋಡಿದೆ. ಹೆಚ್ಚು ಕಡಿಮೆ ಮೂರು ಗಂಟೆಯ ಸಿನಿಮಾ, ಅವಳನ್ನು ಜೊತೆಗೆ ಪ್ರವಾಸ ಕರೆದುಕೊಂಡು ಹೋಗುವ ಕೆಲವೊಂದು ಸನ್ನಿವೇಶಗಳನ್ನು ನೋಡಿದರೆ ವೈಯಕ್ತಿಕವಾಗಿ ನನಗೆ ಬೇಸರವಾಗ್ತದೆ ಆದರೆ, ಗೆಳತಿ ಗೆಳಯ ಕುಳಿತುಕೊಂಡು ನೋಡಬಹುದಾದ ಅತ್ಯುತ್ತಮ ಸಿನಿಮಾ “ಡಿಯರ್ ಕಾಮ್ರೇಡ್” ಎಂದು ಹೇಳಲು ನನಗೆ ಯಾವುದೇ ಸಂಶಯಗಳೂ ಉಳಿದಿಲ್ಲ.

ಕಾಮ್ರೇಡ್ ಎಂದರೆ ಮತ್ತೇನೂ ಅಲ್ಲ, ಹೋರಾಟದಲ್ಲಿ ಕೊನೆಯವರೆಗೂ ಜೊತೆಗೇ ಇರುವವ... ಸಮಾಜದ ಏರಿಳಿತಗಳಿಗೆ ರೆಸ್ಪಾಂಡ್ ಆಗುವವ ಎನ್ನುವುದನ್ನು ಸಿನಿಮಾ ಸಾರುತ್ತದೆ. ಕೊನೆಯದಾಗಿ ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ, ನಾಯಕನಾಗಿ ವಿಜಯ್ ದೇವರಕೊಂಡ ನಾಯಕನಾಗಿ ತಮ್ಮ ತಮ್ಮ ಪಾತ್ರಗಳಿಗೆ ನಿಜಕ್ಕೂ ನ್ಯಾಯ ಒದಗಿಸುವಂತೆ ನಟಿಸಿದ್ದಾರೆ. ಈ ಸಿನಿಮಾದ ನಿರ್ದೇಶಕರಾದ ಭರತ್ ಕಮ್ಮ ಅವರಿಗೆ ಇಂತಹದೊಂದು ಚಿತ್ರವನ್ನು ಕೊಟ್ಟಿದ್ದಕ್ಕೆ ಮತ್ತು ಸಿನಿಮಾದ ಒಳಹೊರಗೂ ಕೆಲಸ ಮಾಡಿರುವ ಎಲ್ಲ ಕೈಗಳನ್ನು ನಾನು ಅಭಿನಂದಿಸುತ್ತೇನೆ...

ಲಾಲ್ ಸಲಾಂ

ಡಿಯರ್ ಕಾಮ್ರೇಡ್...