ಸಿಂಹಬಲ ಅಂದು ನೋಡಿದ ಸುಂದರಿ ಯಾರು...?
ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ ಮರೆತು ನಿಂತುಬಿಡುತ್ತಿದ್ದಳು. ಸುದೇಷ್ಣೆ ಯಾರಂತ ನಿಮಗೆ ಗೊತ್ತಲ್ವಾ? ಬಾಣಾಸುರನ ಅಂಶದಿಂದ ಕೇಕಯ ರಾಜ ಮತ್ತು ಮಾಲವಿಯ ಮಗಳು. ಈಗ ವಿರಾಟರಾಜನ ರಾಣಿ.

ದಯಾ ಗಂಗನಗಟ್ಟ
ಅರೆ, ಏನಾಗಿದೆ ಇವತ್ತು ಅಂತಃಪುರದ ಜನರಿಗೆ! ಹೊತ್ತು ಹತ್ತಾದರೂ ನನ್ನ ಎದುರಿಗೇ ಯಾರೂ ಬಂದಿಲ್ಲವಲ್ಲ. ಇವತ್ತಿನಂತೆ ಯಾವತ್ತೂ ಆದದ್ದಿಲ್ಲ. ಇವತ್ತೇನೋ ಅಸಾಧ್ಯ ಮೌನ ಈ ಕೋಣೆಯನ್ನ ಕವಿದಿದೆ. ರಾಣಿಯ ಗಾಂಭೀರ್ಯದ ಮಾತುಗಳಿರಲಿ,ದಾಸಿಯರ ಮಾತುಗಳೂ ಕೇಳುತ್ತಿಲ್ಲವಲ್ಲಾ! ನಾನು ಊಹಿಸಿದಂತೆಯೇ ಆಗಿರಬಹುದಾ? ಇಲ್ಲ ಇಲ್ಲ,ಹಾಗಾಗಿರಲು ಸಾಧ್ಯವಿಲ್ಲ.ಅಥವಾ ಯಾಕಾಗಿರಬಾರದು?. ಅಗೋ, ಅದ್ಯಾರೋ ಇತ್ತಲೇ ಬರುತ್ತಿದ್ದಾರೆ, ಹೋ ದಾಸಿ ಚಾರು, ಕೋಣೆಯ ಕಸವನ್ನೂ, ನನ್ನ ಮೇಲಿನ ಧೂಳನ್ನೂ ದಿನಾ ಒರೆಸುವವಳು. ಒರೆಸುತ್ತಲೇ ಯಾರೂ ಇಲ್ಲದ ಸಮಯ ನೋಡಿ ನನ್ನ ಕಣ್ಣೊಳಗೆ ಇಳಿದು ತುಂಟನಗು ನಗುತ್ತಾ ಹೊರಗಿನ ಸುದ್ಧಿಯನ್ನೆಲ್ಲಾ ಹೇಳುವವಳು. ಸಧ್ಯ ಬಂದಳಲ್ಲ, ನನ್ನ ಕಣ್ಣು ಕಿವಿಗಳೆಲ್ಲಾ ಕತೆ ಕೇಳಲು ತಯಾರಾದ ಮಗುವಿನಂತೆ ಅರಳಿದವು. ತನ್ನ ಗೋಳಿನ ಜೊತೆಗೆ ಇಡೀ ವಿರಾಟ ರಾಜ್ಯದ ಜನರ ದುಃಖವನ್ನೆಲ್ಲಾ ನನ್ನ ಎದೆಗೆ ತಂದು ತುಂಬಿಸುವವಳು ಇವಳೇ. ಆದರೆ ಇವಳೇಕೆ ಇಂದು ಬೇರೆಯೇ ತರ ಇದಾಳಲ್ಲ, ಮೊದಲಾದರೆ ಬಂದವಳೇ ಮೊದಲು ನನ್ನ ಎದುರು ನಿಲ್ಲುತ್ತಿದ್ದಳು, ನಿಂತು ತನ್ನೆದೆಯ ಬೇಗುದಿಯನ್ನೆಲ್ಲಾ ಗಸಿಯೂ ಬಿಡದಂತೆ ಸೋಸಿ ಸೋಸಿ, ಕಣ್ಣೀರು ಸುರಿಸುತ್ತಾ ನನ್ನೆದೆಗೆ ಸುರಿಯುತ್ತಿದ್ದಳು. ಇವತ್ತು ಅವಳ ಮುಖದಲ್ಲಿ ಅದೇನೋ ಖುಷಿಯಿದೆ, ಏನೇ ಅದು ಚಾರು? ನಿಜ ಹೇಳು, ನಿನ್ನ ಆ ಕ್ರೂರಿ ಗಂಡನೇನಾದರೂ ಸತ್ತನೇನೆ? ಇಲ್ಲ ಅದಲ್ಲ ಬಿಡು,ಅವೆನೆಷ್ಟೇ ಕ್ರೂರಿಯಾದರೂ ನೀನು ಅವನನ್ನು ಪ್ರೀತಿಸುತ್ತೀಯ, ನನಗೆ ಗೊತ್ತಿದೆ, ಮತ್ಯಾರು! ಹಾ,, ಓಹೋ,,,ಆ ಸಿಂಹಬಲ ತಾನೇ,,, ಏನಾಯ್ತೇ, ಅವನು ಮತ್ಯಾರಾದರೂ ದಾಸಿಯನ್ನು ಇಲ್ಲಿಂದ ಒತ್ತು ಹೋಯ್ದನೋ ಹೇಗೆ? ಉಹು ಇಲ್ಲ, ಅದಾಗಿದ್ದರೆ ನಿನ್ನಲ್ಲಿ ನೋವೇ ಇರಬೇಕಿತ್ತು,,ಅಂದರೆ,ಅಂದರೆ,,, ಅವನು ಸತ್ತುಹೋದನೇನು? ಅದಕ್ಕೇ ಇಷ್ಟು ಅರಳಿವೆ ನಿನ್ನ ಕಂಗಳು.. ಹೇಳೇ ಯಾರು ಕೊಂದರು ಅವನನ್ನು, ಏನಾಯ್ತು? ನಿಲ್ಲೇ,,ಓಡಬೇಡ ನಿಲ್ಲೇ..... ಚಾರು ಓಡಿ ಹೋಗೇ ಬಿಟ್ಟಳು.ಆದರೆ ಅವಳ ಓಡು ನಡಿಗೆಯಲ್ಲೇ ಖುಷಿಯು ಎದ್ದು ಕಾಣುತ್ತಿತ್ತು. ವ್ಯಕ್ತಿಯೊಬ್ಬ ಸತ್ತಾಗ ಆನಂದ ಪಡುವಷ್ಟು ಕೆಟ್ಟವಳೇನಲ್ಲ ಅವಳು,ಆದರೆ ಆ ಸಿಂಹಬಲ ಅಷ್ಟು ಕಾಡಿಸಿದ್ದ ಅವಳನ್ನ. ಇದು ನನಗಷ್ಟೇ ಗೊತ್ತು.ನನಗೊಂದು ಶಕ್ತಿಯಿತ್ತು. ನನ್ನ ಎದುರಿಗೆ ಯಾರೇ ಬಂದು ನಿಂತರೂ ಅವರ ಮನಸ್ಸನ್ನ ಹಿಡಿದಿಟ್ಟುಕೊಂಡುಬಿಡುತ್ತಿದ್ದೆ,,ಅದೆಷ್ಟೇ ಪ್ರಯತ್ನ ಪಟ್ಟರೂ ಅವರ ಕಣ್ಣುಗಳು ಅವರ ಅನುಮತಿಯಿಲ್ಲದೆಯೇ ನನ್ನೊಳಗೆ ಇಳಿದು ನನಗೆ ನಿಜ ಹೇಳಿಬಿಡುತ್ತಿದ್ದವು. ಇವತ್ತು ತನ್ನ ಬದುಕನ್ನು ಹಾಳುಗೆಡವಿದ ಸಿಂಹಬಲನ ಸಾವು ಆ ದಾಸಿ ಮತ್ತು ಅವಳಂತಹ ಹಲವರಿಗೆ ಉಂಟು ಮಾಡಿರುವ ಸಂತೋಷ ಎಂತಹದೆಂಬುದು ನನಗೆ ತಿಳಿಯುತ್ತಿದೆ.
ಕೋಣೆಯ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ. ಹೌದೂ, ನನ್ನ ಮುದ್ದು ರಾಜಕುಮಾರಿ ಸುದೇಷ್ಣೆ ಎಲ್ಲಿ ಹೋದಳು, ತಮ್ಮನ ಸಾವಿನ ಸುದ್ದಿ ಅವಳಿಗೆ ತಿಳಿಯಿತೋ ಹೇಗೆ! ನನ್ನ ಮುದ್ದಿನ ಗೆಳತಿ ಅವಳು, ಅವಳಿಗಾದರೋ ನನ್ನ ಬಿಟ್ಟು ಬೇರಾರಿದ್ದಾರೆ? ತನ್ನನ್ನು ತಾನು ಮೊದಲು ಅವಳು ಕಂಡದ್ದೇ ನನ್ನ ಕಣ್ಣುಗಳಿಂದ, ಪುಟ್ಟ ಪುಟ್ಟ ಕಣ್ಣರಳಿಸುತ್ತಾ ನನ್ನ ಮುಂದೆ ಜಡೆ ಹೆಣೆಯುತ್ತಲೋ, ಅಮ್ಮನ ಹಳೆ ಸೀರೆ ಉಡುತ್ತಲೋ, ಒಡವೆಗಳನ್ನು ಧರಿಸುತ್ತಲೋ, ಕಣ್ಣಿಗೆ ಕಾಡಿಗೆ ಬಳಿಯುತ್ತಲೋ ಜಗತ್ತನ್ನೇ ಮರೆತು ನಿಂತುಬಿಡುತ್ತಿದ್ದಳು. ಸುದೇಷ್ಣೆ ಯಾರಂತ ನಿಮಗೆ ಗೊತ್ತಲ್ವಾ? ಬಾಣಾಸುರನ ಅಂಶದಿಂದ ಕೇಕಯ ರಾಜ ಮತ್ತು ಮಾಲವಿಯ ಮಗಳು. ಈಗ ವಿರಾಟರಾಜನ ರಾಣಿ. ನನಗಿನ್ನೂ ನೆನಪಿದೆ ಅವಳ ಮದುವೆಯ ದಿನ ಅದೆಷ್ಟು ಚಂದದ ಗೊಂಬೆಯಂತೆ ನನ್ನ ಮುಂದೆಯೇ ಕೂರಿಸಿ ಅಲಂಕರಿಸಿದ್ದರು ಅವಳನ್ನು, ಪೂರಾ ತಯಾರಾಗಿ ನನ್ನ ಮುಂದೆ ನಿಂತವಳ ಕಣ್ಣನ್ನ ನೋಡಿದ್ದೆ ನಾನು, ಅದೆಷ್ಟು ದುಃಖವಿತ್ತು ಅವಳ ಕಣ್ಣಲ್ಲಿ, ನನಗೆ ಆಶ್ಚರ್ಯವಾಗಿತ್ತು, ಮದುವೆಯ ಬಗ್ಗೆ ಸಾಕಷ್ಟು ಆಸೆ ಅವಳಿಗಿದ್ದದ್ದು ನನಗೆ ಗೊತ್ತಿತ್ತು, ಮತ್ತೀ ದುಃಖವೇಕೆ? ಯಾಕೆ ಇವಳು ಖುಷಿಯಾಗಿಲ್ಲ ಎಂಬುದು ನನಗೆ ಆಗ ಅರ್ಥವೇ ಆಗಲಿಲ್ಲ. ಸುದೇಷ್ಣೆ ನನ್ನನ್ನು ಎಷ್ಟು ಹಚ್ಚಿಕೊಂಡಿದ್ದಳೆಂದರೆ ತವರು ಮನೆಯಿಂದ ಏನು ಬೇಕೆಂದು ಕೇಳಿದಾಗ 'ಕನ್ನಡಿ' ಬಿಟ್ಟು ಬೇರೇನೂ ಬೇಡ ಅಂದವಳೇ ನನ್ನನ್ನು ಅಪ್ಪಿಕೊಂಡಿದ್ದಳು. ಹಾಗಾಗಿ ಅವಳ ಜೊತೆಯೇ ವಿರಾಟನಗರಿಗೂ ಬಂದಿದ್ದೆ ನಾನು. ನಮ್ಮ ಜೊತೆ ಅವಳ ತಮ್ಮ 'ಸಿಂಹಬಲ' ನೂ ಬಂದಿದ್ದ. ಈ ಸಿಂಹಬಲನೂ ನನ್ನ ಗೆಳೆಯನೇ. ನನ್ನೆದುರು ಕುಳಿತು ನನ್ನ ದುಃಖ ತೋಡಿಕೊಂಡವನೇ.ಮುಗ್ದ, ಸುಂದರ, ಶಕ್ತಿಶಾಲಿ ವೀರಯೋಧನಾಗಿದ್ದ ಸಿಂಹಬಲ ಅವತ್ತೊಂದು ದಿನ ಅತ್ಯಂತ ಸಂತೋಷದಿಂದ ನನ್ನ ಮುಂದೆ ಬಂದು ಕುಳಿತಿದ್ದ.ಅವತ್ತೇ ಕಡೆಯದಿನ ನಾನು ಅವನನ್ನು ಅಷ್ಟು ಪ್ರಸನ್ನನಾಗಿ ಇರುವುದನ್ನು ಕಂಡದ್ದು.ಜಗತ್ತೇ ಸಿಕ್ಕ ಖುಷಿ ಅವನ ಮುಖದಲ್ಲಿತ್ತು. ನನ್ನೊಡನೆ ಕೊನೆಯ ಬಾರಿಗೆ ಮಾತನಾಡಿದ್ದ. " ನಿನಗೆ ಗೊತ್ತಾ, ಇವತ್ತು ಓರ್ವ ಜಗದೇಕ ಸುಂದರಿಯನ್ನ ನೋಡಿದೆ. ಅಷ್ಟು ಚಂದದ ಹೆಣ್ಣನ್ನ ನೀನೂ ನೋಡಿರಲು ಸಾಧ್ಯವಿಲ್ಲ.ಅವಳ ಹೆಸರು ದ್ರೌಪದಿ ಎಂದಂತೆ. ಅದ್ಯಾವುದೇ ರೀತಿಯಾದರೂ ಸರಿ ನಾನು ಅವಳನ್ನು ಪಡೆದೇ ಪಡೆಯುತ್ತೇನೆ,ನಿನ್ನ ಮುಂದೆ ಕರೆದುಕೊಂಡು ಬರುತ್ತೇನೆ ನೋಡುವೆಯಂತೆ, ನಿನ್ನ ಜನ್ಮವೂ ಸಾರ್ಥಕವಾಗಲಿ. ನಿನಗೆ ಮಾತ್ರ ಹೇಳುತ್ತೇನೆ ಕೇಳು, ಮದುವೆಯಾದರೆ ನಾನು ಅವಳನ್ನೇ ಆಗುವುದು,ಇಲ್ಲವಾದರೆ ಬ್ರಹ್ಮಚಾರಿಯಾಗೇ ಉಳಿದು ಬಿಡುವೆ ತಿಳಿದುಕೋ" ಎಂದು ಹೇಳಿ ಎದ್ದು ಹೋಗಿದ್ದ. ಅವನ ಕಣ್ಣಲ್ಲಿ ನಾನು ಅವತ್ತು ಒಲವು ಎಷ್ಟು ಆಳವಾದದ್ದು ಎಂಬುದನ್ನು ಕಂಡಿದ್ದೆ. ಅದು ಮುಂದೆ ಹುಚ್ಚಾಗಿ ಬದಲಾಗಬಹುದಾದ ತೀವ್ರತೆಯನ್ನೂ ಗುರುತಿಸಿದ್ದೆ. ಅವನನ್ನು ನಾನು ಮತ್ತೆ ಕಾಣಲೇ ಇಲ್ಲ. ಸುದೇಷ್ಣೆ ಯ ದಾಸಿಯರು ಒಂದು ದಿನ ನನ್ನ ಮುಂದೆ ಕುಳಿತು ಮಾತಾಡಿಕೊಳ್ಳುವಾಗ ನನಗೆ ಗೊತ್ತಾದಂತೆ ಅವನೀಗ ಮೊದಲಿನ ಸಿಂಹಬಲನಾಗಿ ಉಳಿದಿಲ್ಲವಂತೆ, ದ್ರೌಪದಿ ಅವನನ್ನು ಮದುವೆಯಾಗಲು ಒಪ್ಪಲಿಲ್ಲವಂತೆ, ಅವಳ ಮುಂದೆ ಪ್ರೇಮನಿವೇದನೆಗೆಂದು ಹೋದಾಗ ದ್ರುಪದ ರಾಜನೂ ದ್ರೌಪದಿಯೂ ಇವನನ್ನು ಅವಮಾನಿಸಿ ಕಳುಹಿಸಿದರಂತೆ, ಅವತ್ತಿನಿಂದ ಅವನು ಎಣ್ಣೆಯ ಕೊಪ್ಪರಿಗೆಯಂತೆ ಕುದಿಯತೊಡಗಿದನಂತೆ. ಹೆಣ್ಣೆಂದರೆ ಸಾಕು ಸಿಡಿದು ಬೀಳತೊಡಗಿದನಂತೆ, ದಾಸಿಯರಿಗಂತೂ ಸಿಂಹಸ್ವಪ್ನವೇ ಆಗಿ ಹೋದನಂತೆ".
ಹಾಗಾಗಿಯೇ ಸಿಂಹಬಲನೂ ನಮ್ಮ ಜೊತೆ ಬರುವುದು ಸುಧೇಷ್ಣೆಗೆ ಸುತರಾಂ ಇಷ್ಟವಿರಲಿಲ್ಲ. ತಮ್ಮನೆಂದರೆ ಪಂಚಪ್ರಾಣ ಇಟ್ಟಿದ್ದ ಅವಳು ಈಗ ಅವನೆಂದರೆ ದ್ವೇಷಿಸತೊಡಗಿದ್ದಳು.ಇದಕ್ಕೆ ಇನ್ನೂ ಒಂದು ಕಾರಣವಿದೆ. ಆ ಒಂದು ದಿನ ಸಿಂಹಬಲ ಹಾಗೆ ನಡೆದುಕೊಳ್ಳಬಾರದಿತ್ತು. ಮಳೆಗಾಲದ ಆ ದಿನ ಸಂಜೆ ಸುದೇಷ್ಣೆ ಮತ್ತು ಅವಳ ಗೆಳತಿ ಇಳಾ ನನ್ನ ಮುಂದೆ ಮಾತಾಡುತ್ತಾ ಕುಳಿತಿದ್ದರು. ಆಗ ಸಿಂಹಬಲನೂ ಬಂದ, ಒಳಗೆ ಬಂದವನೇ ಸಿಟ್ಟಿನಿಂದ ಏನೇನೋ ಬಡಬಡಿಸತೊಡಗಿದ. ಹೆಣ್ಣು ಜಾತಿಯನ್ನೇ ಹೀನಾಯವಾಗಿ ಬೈಯ್ಯತೊಡಗಿದ.ಅದು ತಪ್ಪು ಎಂದು ಹೇಳಲು ಹೋದ ಸುದೇಷ್ಣೆಯ ಏಕೈಕ ಗೆಳತಿ ಇಳಾಳನ್ನು ಹೊಡೆದುಬಿಟ್ಟ,ಅಷ್ಟು ಅಸಭ್ಯವಾಗಿ ಅವನು ನಡೆದುಕೊಂಡದ್ದನ್ನು ನಾನು ನೋಡೇ ಇರಲಿಲ್ಲ.ಪರಸ್ಪರ ಮಾತಿಗೆ ಮಾತು ನಡೆದು ಇವನು ತಳ್ಳಿದ ರಭಸಕ್ಕೆ ಇಳಾ ಮಹಡಿಯ ಮೇಲಿಂದ ಬಿದ್ದು ಸತ್ತು ಹೋದಳು. ತಮ್ಮನ ಈ ಅನಿರೀಕ್ಷಿತ ಅವತಾರವನ್ನು ಕಂಡ ಸುದೇಷ್ಣೆ ಗರಬಡಿದವಳಂತೆ ಆದಳು, ಅವತ್ತಿನಿಂದ ತಮ್ಮನೆಂದರೆ ಹೆದರತೊಡಗಿದಳು. ಹೀಗಾಗಿಯೇ ತಮ್ಮ ಸಿಂಹಬಲನೂ ತನ್ನ ಜೊತೆ ಗಂಡನ ಮನೆಗೇ ಬರುವುದು, ಅಲ್ಲೇ ಸೇನಾಧಿಪತಿಯಾಗಿ ಉಳಿದು ಬಿಡುವುದು ಸುದೇಷ್ಣೆಗೆ ಅಗಿಯಲಾರದ ನುಂಗಲಾರದ ತುತ್ತಾಗಿತ್ತು. ಹೋಗಲಿ ಇಲ್ಲಿಗೆ ಬಂದ ಮೇಲೆ ಅವನಾದರೂ ಬದಲಾದನೇ,ಇಲ್ಲವೇ ಇಲ್ಲ.ಅಧಿಕಾರದ ಮದವೂ ಜೊತೆಗೆ ಸೇರಿ ಅವನ ಆಟೋಪಗಳು ಮತ್ತೂ ಹೆಚ್ಚಾಗಿದ್ದವು. ದಾಸಿಯರು ತಮ್ಮನ ಮೇಲೆ ಹೇಳುವ ದೂರು ನೋವುಗಳನ್ನು ಕೇಳೀ ಕೇಳೀ ಸುದೇಷ್ಣೆ ರೋಸಿ ಹೋಗಿದ್ದಳು.ರಾಣಿಯೇ ಆದರೂ ತಮ್ಮನನ್ನು ಶಿಕ್ಷಿಸುವ ಯಾವ ಅಧಿಕಾರವೂ ಇಲ್ಲದ ಅಬಲೆಯಂತೆ ನನ್ನ ಮುಂದೆ ಹಲವು ದಿನ ಸ್ವಗತವಾಡಿದ್ದಾಳೆ.
ಅವಳು ಅವನನ್ನು ತಮ್ಮ ಎಂಬ ಪ್ರೀತಿ, ವಿಶ್ವಾಸಗಳಿಂದ ಕಾಣುವುದನ್ನು ಬಿಟ್ಟಿದ್ದಳು, ಆದರೆ ಅವನ ಭಯದಿಂದ ಎಲ್ಲವನ್ನೂ ಸಹಿಸಿಕೊಂಡಿದ್ದಳು. ವಿರಾಟನೂ ಅವನ ಬಲದ ಮುಂದೆ ಶರಣಾಗಿಬಿಟ್ಟಿದ್ದನು. ಅವನು ಬಲಾಢ್ಯನಲ್ಲದಿದ್ದರೆ ಮತ್ಸ್ಯದೇಶದಲ್ಲಿ ಅವನಿಗೆಲ್ಲಿ ಜಾಗವಿತ್ತು? ಹಾಗಾಗಿ ಸುದೇಷ್ಣೆ ಆರ್ತಳಾಗಿದ್ದಳು; ಅಸಹಾಯಳಾಗಿದ್ದಳು. ಏನು ಮಾಡಲಿ, ನಾನೂ ಅದೇ ಆಗಿದ್ದೆ.ಅವಳು ಅವತ್ತಿನಿಂದ ಮೌನಿಯಾದಳು.ಎಲ್ಲ ಮೌನವೂ ಸಹ್ಯವಲ್ಲ, ಸಾಧುವೂ ಅಲ್ಲವಲ್ಲ! ‘ಅನ್ಯಾಯವನ್ನು ಸಹಿಸುವುದು ಇನ್ನೊಂದು ಅನ್ಯಾಯವೆಸಗಿದಂತೆಯೇ.ಎಂಬ ನೋವು ಅವಳನ್ನು ಕಾಡತೊಡಗಿತು. ನಾನು ಇದನ್ನೆಲ್ಲಾ ಅವಳ ಕಣ್ಣುಗಳಲ್ಲಿ ಓದುತ್ತಿದ್ದೆ,ಆದರೆ ಏನೂ ಮಾಡದಾಗಿದ್ದೆ.
ಅವನು ಬಂದನೆಂದರೆ ಸಾಕು ದಾಸಿಯರೆಲ್ಲ ಗಡಗಡ ನಡುಗುತ್ತಿದ್ದರು. ಅವನಿಗೆ ಚಂದ ಕಂಡರೆ ಹರೆಯದವಳೋ, ಮುದುಕಿಯೋ ಎಂದು ಕೂಡ ನೋಡುತ್ತಿರಲಿಲ್ಲ. “ಇವತ್ತು ರಾತ್ರಿ ಮಂದಿರಕ್ಕೆ ಬಂದುಬಿಡು” ಎಂದು ಆಜ್ಞಾಪಿಸಿಬಿಡುತ್ತಿದ್ದ. ಅಸಹಾಯಕವಾದ ದಾಸೀವೃಂದ ಮೌನವಾಗಿ ಸಹಿಸಿಕೊಳ್ಳುತ್ತಿತ್ತು. ಸಹಿಸದೆ ಮತ್ತೇನು ತಾನೇ ಮಾಡುವುದು? ಮಹಾರಾಜರಲ್ಲಿ ದೂರುವುದಕ್ಕೆ ಧೈರ್ಯ ಸಾಲದು. ದೂರಿ ಪ್ರಯೋಜನವೂ ಇಲ್ಲ. ನನ್ನ ಸುದೇಷ್ಣೆಗೆ ಸೆರಗಿನ ಕೆಂಡವಾದ ಸಿಂಹಬಲ ನಿದಾನವಾಗಿ ಕೀಚಕನಾಗಿ ಬದಲಾಗುತ್ತಾ ಹೋದ.
ಕೀಚಕನೆಂಬ ಈ ವಿಷವೃಕ್ಷ ಬೆಳೆಯುತ್ತಿದ್ದಂತೆಯೇ ಸುದೇಷ್ಣೆಯು ಕುಗ್ಗತೊಡಗಿದಳು.
ಹೀಗಿರುವಾಗ ಒಂದು ದಿನ ಅವಳು ಬಂದಿದ್ದಳು. ನನಗೇಕೋ ಅವತ್ತು ಬೆಳಕೊಂದು ಕತ್ತಲೆಯ ನೆರಳನ್ನು ಹೊತ್ತು ನನ್ನ ಕೋಣೆಯನ್ನು ಹೊಕ್ಕಂತೆ ಅನಿಸಿತ್ತು. ಸುದೇಷ್ಣೆಯ ಮುಂದೆ ನಿಂತ ಅವಳು "ಅಮ್ಮಾ, ನಾನು ಸೈರಂಧ್ರಿ. ರಾಣೀವಾಸದ ಸ್ತ್ರೀಯರ ಕೇಶಾಲಂಕಾರವನ್ನು ಚೆನ್ನಾಗಿ ಮಾಡುತ್ತೇನೆ.ಏನೋ ಜೀವನದಲ್ಲಿ ಒದಗಿದ ಸಂಕಷ್ಟದಿಂದಾಗಿ ಗಂಧರ್ವರಾದ ನನ್ನ ಐವರು ಗಂಡಂದಿರಿಂದ ದೂರವಿರಬೇಕಾಗಿ ಬಂದಿದೆ. ಒಂದು ವರ್ಷ ನಿಮ್ಮಲ್ಲಿ ಸೇವೆ ಮಾಡಿಕೊಂಡಿರುವ ಅವಕಾಶ ನೀಡಿದರೆ ಕೃತಜ್ಞಳಾಗಿರುತ್ತೇನೆ.” ಎಂದು ದೀನಳಾಗಿ ಯಾಚಿಸಿದಳು. ಹೀಗೆ ನನ್ನ ಎದುರು ನಿಂತ ಅವಳನ್ನು ನಾನು ಒಮ್ಮೆ ನಖಶಿಖಾಂತ ದಿಟ್ಟಿಸಿ ನೋಡಿದೆ.
ಅಬ್ಬಬ್ಬಾ..ಅದೇನು ರೂಪ ಲಾವಣ್ಯ ಅವಳದ್ದು.ಅದೆಷ್ಟೋ ಚಲುವಾದ ಹೆಣ್ಣುಗಳನ್ನ ಕಂಡ ನಾನೇ ದಂಗಾಗಿ ಹೋಗಿದ್ದೆ.ಹಿಂದೆಂದೂ ಕಂಡಿರದ ಸೌಂದರ್ಯದ ಖನಿ ಅವಳು,ಸಾಧಾರಣ ನಾರಿನ ಉಡುಗೆ ಉಟ್ಟಿದ್ದರೂ ಅವಳ ಚಲುವು ಎದ್ದು ಕಾಣುತ್ತಿತ್ತು. ಎಂತಹ ಆಕರ್ಷಣೆ! ಕೃಷ್ಣವರ್ಣೆ. ಆದರೆ ಕಪ್ಪೂ ಕೂಡ ಹೀಗೆ ಕಣ್ಮನಗಳನ್ನು ಸೆಳೆಯುತ್ತದೆಂದು ಅವತ್ತು ನನಗೆ ಅರ್ಥವಾಗಿತ್ತು. ನನಗೇಕೋ ಅನಿಸಿತು ಇವಳು ಸಾಮಾನ್ಯ ಹೆಣ್ಣಲ್ಲ. ಅವಳ ಸುಕೋಮಲ ಕೈಗಳು, ಸುಖವಾಗಿ ಬೆಳೆದ ದೇಹ,ಅವಳ ಕಣ್ಣಲ್ಲಿದ್ದ ಅರಿವು,ನಡಿಗೆಯಲ್ಲಿದ್ದ ಗತ್ತು ನಿಚ್ಚಳವಾಗಿ ನನಗೆ ಹೇಳುತ್ತಿದ್ದವು ಇವಳೊಬ್ಬಳು ಸನ್ನಿವೇಶಕ್ಕೆ ಸಿಕ್ಕು ದಾಸಿಯ ವೇಷದಲ್ಲಿ ಬಂದಿರುವ ರಾಜಕುಮಾರಿ ಎಂದು.ಇವಳ ಚೆಲುವನ್ನು ಕಂಡ ದಾಸಿಯರು ಪಿಸುಗುಡುತ್ತಿದ್ದುದು ನನ್ನ ಗಮನಕ್ಕೆ ಬಾರದಿರಲಿಲ್ಲ. ಅವರು ಪಿಸುಗುಡುವುದೇನು ಅಂತ ನನಗರ್ಥವಾಗಿತ್ತು. ಆದ್ದರಿಂದಲೇ ನನಗೆ ಆತಂಕವಾದದ್ದು. ಎಲ್ಲರ ದುಗುಡದ ಕೇಂದ್ರಬಿಂದುವಾಗಿದ್ದವನು ಸಿಂಹಬಲ. ಸುದೇಷ್ಣೆಯಂತೂ ಈಗ ನಡುಗಿಹೋದಳು.ಸೈರಂದ್ರಿಯನ್ನು ದಾಸಿಯಾಗಿ ಅನಿವಾರ್ಯವಾಗಿ ಇಟ್ಟುಕೊಂಡಳಾದರೂ ಅವತ್ತಿನಿಂದ ಅವಳನ್ನು ಸಿಂಹಬಲನ ಕಣ್ಣಿಗೆ ಬೀಳದಂತೆ ನೋಡಿಕೊಳ್ಳುವ ಕೆಲಸದಲ್ಲೇ ಮುಳುಗಿಹೋದಳು.ಪ್ರೇಮ,ಅಸಹಾಯಕತೆ ವಿಪರೀತಕ್ಕೆ ಹೋದರೆ ಹೀಗೇ ಆಗುತ್ತದೇನೋ. ಸ್ವತಃ ವ್ಯಕ್ತಿಗೆ ಇದು ತೊಂದರೆ ಆಗದಿದ್ದರೂ ಅವನನ್ನು ಅವಲಂಬಿಸಿದವರಿಗೆ ಸಂಕಟ ತಪ್ಪಿದ್ದಲ್ಲ. ತಪ್ಪಿರಲಿ, ಇಲ್ಲದಿರಲಿ ಶಿಕ್ಷೆಯನ್ನಂತೂ ಅವರು ಅನುಭವಿಸಲೇಬೇಕು. ಸುದೇಷ್ಣೆ ಇಂತಹ ಸಂಕಟಕ್ಕೆ ಬಿದ್ದದ್ದನ್ನು ನಾನು ಅಂದು ಕಂಡಿದ್ದೆ. ಮುಂದೊಂದು ದಿನ ನನಗೂ ಸುದೇಷ್ಣೆಗೂ ಆ ಕಷ್ಟದ ದಿನ ಬಂದೇ ಬಿಟ್ಟಿತು,ಸೈರಂದ್ರಿಯು ಕೀಚಕನ ಕಣ್ಣಿಗೆ ಬಿದ್ದುಬಿಟ್ಟಳು, ಅವನು " ಅಕ್ಕಾ ಇವಳು ತೇಟ್ ನನ್ನ ಪ್ರೇಯಸಿ ದ್ರೌಪದಿಯಂತೇ ಇದ್ದಾಳೆ ಕಣೇ" ಎಂದನಂತೆ. ನನಗೆ ಆ ಮಾತುಗಳಲ್ಲಿ ಅವನ ಸಾವೇ ಧ್ವನಿಸಿತ್ತು.ದೈವಿಕ ಲಾವಣ್ಯದಿಂದ ಕಂಗೊಳಿಸುತ್ತಿದ್ದ ಆ ಹೆಣ್ಣನ್ನು, ದ್ರೌಪದಿಯೆಂದೇ ಮತ್ತೆ ಒ್ರೇಮಿಸತೊಡಗಿದ ಕೀಚಕ.
"ಅಕ್ಕಾ, ಆ ಸೈರಂಧ್ರಿಯ ಸಂಗವನ್ನೊಮ್ಮೆ ಒದಗಿಸಿಕೊಡು. ಅವಳಿಂದಾಗಿ ನಾನು ನಿತ್ಯ ಸಾಯುತ್ತಿದ್ದೇನೆ. ನನಗೆ ಬೇರೇನೂ ಬೇಡ” ಎಂದು ಸುದೇಷ್ಣೆಯನ್ನು ಪೀಡಿಸತೊಡಗಿದ. ಇವಳು ಅವನನ್ನು ತಿದ್ದಲು ಯತ್ನಿಸಿದಳು. ಅಂಗಲಾಚಿದಳು, ಉಹೂಂ. ಏನು ಹೇಳಿದರೂ ಅವನು ಬದಲಾಗಲಿಲ್ಲ.ಅವಳಿಗೆ ಪರಾಕ್ರಮಶಾಲಿಗಳಾದ ಐವರು ಗಂಧರ್ವ ಪತಿಯರಿದ್ದಾರೆ ಎಂದಾಗ ಅದಿನ್ನೂ ಒಳ್ಳೆಯದೇ ಆಯಿತು. ನಾನೊಬ್ಬ ಹೆಚ್ಚಾಗಲಿಕ್ಕಿಲ್ಲ,ಅವಳನ್ನು ಕಳಿಸಿಕೊಡು.” ಎಂದುಬಿಟ್ಟ.
ನಾನೂ ಸುದೇಷ್ಣೆಯಷ್ಟೇ ಅಸಹಾಯಕತೆಯಿಂದ ಅವಳತ್ತ ದಿಟ್ಟಿಸಿದೆ. " ಅರೆರೆ,, ಏನಾಶ್ಚರ್ಯ, ಸುದೇಷ್ಣೆಯ ಮುಖದಲ್ಲಿ ತಣ್ಣನೆಯ ನೆಮ್ಮದಿಯಿತ್ತು.
ಅವಳೇನೋ ನಿರ್ಧರಿಸಿದವಳಂತೆ ಕೀಚಕನಿಗೆ ಯಾವತ್ತೂ ಇಲ್ಲದ ಪ್ರೀತಿಯಿಂದ ತಲೆ ಸವರಿ ಆಗಲಿ ಹೋಗು ಎಂದು ಹೇಳಿ ಎದ್ದು ಹೋಗಿದ್ದಳು!!
ಈಗ ಕೀಚಕನ ಸಾವಿನ ನಂತರ ತೆರೆದುಕೊಳ್ಳುವ ಅವನಕ್ಕ ನನ್ನ ಸುದೇಷ್ಣಾಳ ಒಳಗನ್ನ ನಾನು ನಿಮಗೆ ಹೇಳಬೇಕಿದೆ. ಇಗೋ..ಅವಳೇ ಬಂದಳು. ಅಯ್ಯೋ ಅಳುತ್ತಿದ್ದಾಳೆ. ಇಲ್ಲ ಇಲ್ಲ ಇದು ನಿಜವಾದ ಅಳುವಲ್ಲ. ಇವಳ ಕಣ್ಣಲ್ಲೂ ಸಂತೋಷವಿದೆ. ತನ್ನ ಅಂತಃಪುರದ ಪರಿಚಾರಿಕೆಯರಿಗಿನ್ನು ನೆಮ್ಮದಿಯಾಯ್ತು ಎಂಬ ಭಾವವಿದೆ. ಅದೆಷ್ಟೋ ಹೆಣ್ಣುಮಕ್ಕಳನ್ನು ನಿತ್ಯ ಕಾಡುತ್ತಿದ್ದ ದುಃಸ್ವಪ್ನ ದೂರವಾಯಿತಲ್ಲ ಅಂದುಕೊಳ್ಳುತ್ತಿದ್ದಾಳೆ. ಅವಳ ಮುಖದ ಮೇಲೆ ಹಿಂದೆಂದೂ ಇರದ ನಿರ್ಲಿಪ್ತ ಸ್ಥಿತಿ ಇದೆ. ಯಾವ ವಿಕಾರವೂ ಇಲ್ಲದ ಶಾಂತಮುದ್ರೆಯಲ್ಲಿದ್ದಾಳೆ. ಅವಳಿಗೆ ಏನೋ ಹೇಳಬೇಕಾಗಿದೆ.ಅವಳ ಸ್ವಗತ ನನಗಷ್ಟೇ ಕೇಳುತ್ತಿದೆ.
"ಇದೆಲ್ಲ ನನ್ನ ಯೋಜನೆಯೇ,ಅವನ ಸಾವಿಗೆ ನಾನೇ ಕಾರಣ, ಕೀಚಕನಿಂದ ಮುಕ್ತಿ ಪಡೆಯುವುದಕ್ಕೆ ನಾನೇ ಹುಡುಕಿಕೊಂಡ ದಾರಿಯಿದು. ಸೈರಂಧ್ರಿಯ ಮೇಲೆ ಕೀಚಕನ ದೃಷ್ಟಿ ಬಿದ್ದಾಗಲೇ ನನ್ನ ಮನಸ್ಸಿನಲ್ಲಿ ಯೋಜನೆಯೊಂದನ್ನು ಸಿದ್ಧಗೊಳಿಸಿದ್ದೆ.ತನ್ನನ್ನು ಕೆಣಕಿದವರನ್ನು ತನ್ನ ಗಂಧರ್ವ ಪತಿಗಳು ನಾಶಮಾಡುತ್ತಾರೆಂದು ಸೈರಂದ್ರಿ ಹೆಮ್ಮೆ ಹೊಂದಿದ್ದಳಲ್ಲ ಅದನ್ನೇ ಅಸ್ತ್ರವಾಗಿಸಿಕೊಂಡೆ.ನನಗಿದ್ದ ದಾರಿ ಅದೊಂದೇ ಆಗಿತ್ತು. ಅವಳನ್ನು ಕೀಚಕ ಬಲಾತ್ಕರಿಸುವ ಯತ್ನಕ್ಕೆ ಅನುಕೂಲ ಕಲ್ಪಿಸಿದೆ. ಸಹಜವಾಗಿಯೇ ಎಲ್ಲವೂ ನಾನೆಣಿಸಿದಂತೆ ನಡೆಯಿತು. ಜೀವನದಲ್ಲಿ ಈಗ ಉಂಟಾದ ನಿರಾಳತೆಯನ್ನು ಇಲ್ಲಿಯವರೆಗೆ ಅನುಭವಿಸಿರಲಿಲ್ಲ ನಾನು.ಅಕ್ಕನಾಗಿ ಸ್ವಂತ ತಮ್ಮನನ್ನೇ ಕೊಲ್ಲಿಸುವಷ್ಟು ಕಠಿಣ ಹೃದಯದವಳಾದೆ,ಇದರಲ್ಲಿ ನನ್ನ ತಪ್ಪಿದೆಯಾ?ಈ ತರದ್ದೊಂದು ನಿರ್ಧಾರವನ್ನು ಮಾಡದೇ ಇದ್ದರೆ ನನ್ನ ಇದುವರೆಗಿನ ಮೌನಕ್ಕೆ ಅರ್ಥವೇ ಇರುತ್ತಿರಲಿಲ್ಲ. ಇದಕ್ಕಿಂತ ಮುಖ್ಯವಾದ ವಿಷಯ ಇನ್ನೊಂದಿದೆ ಕೇಳು. ಒಬ್ಬ ತಾಯಿಯಾಗಿಯೂ ನಾನು ಈ ಹೆಜ್ಜೆಯನ್ನ ಇಡಲೇ ಬೇಕಾಯ್ತು,ನನ್ನ ಮಗ ಉತ್ತರಕುಮಾರ ತನ್ನ ಸೋದರಮಾವನ ದೆಸೆಯಿಂದ ಭೀರುವಾಗಿ, ಬಡಾಯಿಕೋರನಾಗಿ ಹಾಸ್ಯದ ವಸ್ತುವಾಗಿ ಬದಲಾಗುತ್ತಿದ್ದ, ಅವನ ಮುಂದೆ ಸರಿಯಾಗಿ ನಡೆದುಕೋ ಎಂದು ಅದೆಷ್ಟೇ ತಿಳಿಹೇಳಿದರೂ ಇವನ ದಪ್ಪ ಚರ್ಮಕ್ಕೆ ಹತ್ತುತ್ತಲೇ ಇರಲಿಲ್ಲ. ನನಗೇಕೋ ನನ್ನ ಮಗನೂ ಮುಂದೆ ತಿದ್ದಲಾಗದಷ್ಟು ಬದಲಾದರೆ ಎಂದು ಭಯವಾಯ್ತು, ಇಷ್ಟೆಲ್ಲಾ ಮಾಡಿಬಿಟ್ಟೆ. ಕಣ್ಣೀರಿನಿಂದ ತುಂಬಿದ ನಗುವ ಕಣ್ಣುಗಳೊಂದಿಗೆ ನನ್ನ ಸುದೇಷ್ಣೆ ಆಡಿದ ಕೊನೆಯ ಮಾತು ಇವು. ನಾನಾದರೂ ಏನು ಹೇಳಬಲ್ಲೆ. ಎಲ್ಲದಕ್ಕೂ ಅಂತ್ಯವಿದೆ .
ಸಿಂಹಬಲ ನ ಅಂತ್ಯ ಕೀಚಕನಾಗಿಯೇ ಆಗದೇ ಇದ್ದಿದ್ದರೆ ಅದೆಷ್ಟು ಚಂದವಿತ್ತು ಎಂದುಕೊಂಡೆ. ನನ್ನ ಸುದೇಷ್ಣೆ ಹಲವು ವರ್ಷಗಳ ನಂತರ ಇವತ್ತು ನೆಮ್ಮದಿಯ ನಿದ್ದೆಗೆ ಜಾರಿದಳು.
bevarahani1