ನಗರದ ಬಳಕೆಗೆ ಬರಬಲ್ಲ ಕಾಡು ಹಣ್ಣು: ನಗರೆ- ಸೋಮಶೇಖರ್-ಬಿ.ಎಸ್

ನಗರದ ಬಳಕೆಗೆ ಬರಬಲ್ಲ ಕಾಡು ಹಣ್ಣು: ನಗರೆ, Bevarahani-article-somashekhar-bs-nagare-kadu-hannu

ನಗರದ ಬಳಕೆಗೆ ಬರಬಲ್ಲ ಕಾಡು ಹಣ್ಣು: ನಗರೆ- ಸೋಮಶೇಖರ್-ಬಿ.ಎಸ್

ನಮ್ಮ ಪರಿಸರ

ಸೋಮಶೇಖರ ಬಿ.ಎಸ್


ನಗರದ ಬಳಕೆಗೆ ಬರಬಲ್ಲ ಕಾಡು ಹಣ್ಣು: ನಗರೆ

“ ಇಲ್ಲೊಂದು ಹಣ್ಣಿನ ಗಿಡ ಐತೆ ಸಾರ್… ನಮ್ಮ ಕಾಡಿನಗೆ ಬಿಟ್ಟರೆ ಬೇರೆ ಎಲ್ಲೂ ಸಿಕ್ಕಕ್ಕಿಲ್ಲ,!...ಹಣ್ಣು ಏನು ರುಚಿ ಸಾರ್,..ಬಲೇ ಚೆಂದಾಕಿರತೈತೆ!, ನೀವು ಪಟ್ಟಣದೋರು ಇದನ್ನು ನೋಡಿರದಂತೂ ಸುಳ್ಳು ಬಿಡಿ..” ಎಂದು ತಮ್ಮದೇ ಶೈಲಿಯ ಖಚಿತ ದನಿಯಲ್ಲಿ ಹೇಳಿದ್ದರು ಆ ಹಿರಿಯರು. ದಶಕದ ಹಿಂದೆ ಮಳೆಗಾಲದ ದಿನಗಳಲ್ಲೊಂದು ದಿನ ತುಮಕೂರು ಜಿಲ್ಲೆಯ ಸಿದ್ಧರಬೆಟ್ಟದ ಕಾಡಿನಲ್ಲಿ ಅಪರೂಪದ ಸಸ್ಯವರ್ಗದ ಸಮೀಕ್ಷೆಯಲ್ಲಿ ತೊಡಗಿದ್ದ ಸಂದರ್ಭವದು. ಕಾಡಿನ ನಡುವಿನ ಕಾಲುದಾರಿಯಲ್ಲಿ ಎದುರು ದಿಕ್ಕಿನಿಂದ ಜೋಡಿ ದನಗಳನ್ನು ಹಿಡಿದುಕೊಂಡು ಬರುತ್ತಾ ಎದುರಾಗಿದ್ದ ಪಕ್ಕದ ಗ್ರಾಮದ ರೈತರು ಅವರು. 


ಸಿದ್ಧರಬೆಟ್ಟದ ಒಣ ಉದುರೆಲೆ ಕಾಡಿನಲ್ಲಿ ಬೆಟ್ಟದ ಬುಡದಿಂದ ಹರಿದುಬಂದಿದ್ದ ಒಂದು ಹಳ್ಳದ ಸಾಲಿನ ಪಕ್ಕದಲ್ಲಿದ್ದ ಪೊದೆಗಳ ಗುಂಪಿನ ಮುಂದೆ ನಿಂತು ಆ ಕಂಟಿಯಲ್ಲಿ ಯಾವುದಾದರೂ ಅಪರೂಪದ ಸಸ್ಯವು ಕಂಡುಬAದೀತೇನೋ ಎಂದು ಹುಡುಕುತ್ತಾ ನಿಂತಿದ್ದ ನಮ್ಮ ಸಮೀಕ್ಷಾ ತಂಡವನ್ನು ಕಂಡು ನಿಂತಿದ್ದರು, ಅವರು. ನಾವೇನು ಮಾಡುತ್ತಿದ್ದೇವೆಂದು ತಿಳಿದ ಮೇಲೆ ಅವರು ಹೇಳಿದ ಉತ್ಸಾಹದ ಮಾತುಗಳು ಮೇಲಿನವು. ನಮ್ಮ ಸಮೀಕ್ಷೆಯ ಉದ್ದೇಶಕ್ಕೆ ಪೂರಕವಾಗಿ ತಮ್ಮ ಹೊಸ ಮಾಹಿತಿಯ ಜೊತೆ, ಅವರು ನಂತರ ನಮ್ಮ ಜೊತೆಗೆ ಬಂದು, ಕಾಡಿನ ಇನ್ನೊಂದು ದಿಕ್ಕಿನಲ್ಲಿ ಅವರಿಗೆ ಗೊತ್ತಿದ್ದ ಅಪರೂಪದ ಗಿಡವನ್ನು ನಮಗೆ ತೋರಿಸಿಕೊಟ್ಟರು. 


ಹಾಗೆ ಅಚಾನಕ್ಕಾಗಿ ನಮ್ಮ ಗಮನಕ್ಕೆ ಬಂದ ಆ ಅಪರೂಪದ ಹಣ್ಣಿನಗಿಡದ ಹೆಸರು ನಗರೆ. ಬಯಲು ಸೀಮೆಯ ಉದುರೆಲೆ ಮತ್ತು ಕುರುಚಲು ಕಾಡುಗಳಿಗೆ ಸೀಮಿತಗೊಂಡದ್ದು. ಕಾಡಿನಂಚಿನ ಗ್ರಾಮಗಳ ಕೆಲವರನ್ನು ಹೊರತುಪಡಿಸಿದರೆ ಉಳಿದವರು ಇದನ್ನು ಕಂಡಿರುವುದು ನೂರರಲ್ಲಿ ಒಂದು ಪಾಲು ಮಾತ್ರ ಇದ್ದೀತು. ನೈಸರ್ಗಿಕವಾಗಿಯೂ ಕೂಡ ವಿರಳವಾದ ವ್ಯಾಪನೆ ಇದರದ್ದು. ಜನಸಾಮಾನ್ಯರ ಮಟ್ಟಿಗೂ ಕೂಡ ಕಂಡಿಲ್ಲದ, ಕೇಳಿಲ್ಲದ ಗಿಡವಿದು. ಹೀಗಾಗಿ ಇದು ಅಕ್ಷರಶಃ ಅಪರೂಪದ ಗಿಡ!


ಈ ಅಪರೂಪದ ಹಣ್ಣನ್ನು ಇಲ್ಲಿ ನಿಮಗೆ ಪರಿಚಯ ಮಾಡಲು ಸ್ವಲ್ಪ ಹೆಚ್ಚುವರಿ ತಯಾರಿಯೇ ಬೇಕು. ನಿಮಗೆ ಪ್ಲಮ್ ಹಣ್ಣು, ಕಾರೆ ಹಣ್ಣು, ಎಳೆನೀರು ಗಂಜಿ ನುಂಗು ಅಥವಾ ತಾಟಿನುಂಗು ಪರಿಚಯವಿದ್ದರೆ, ಅವುಗಳನ್ನು ನೆನಪಿಸಿಕೊಂಡರೆ, ಈ ನಗರೆ ಗಿಡವನ್ನು ಪರಿಚಯಿಸುವುದು ಸುಲಭ. ಯಾಕೆಂದರೆ, ಇದರ ಚಹರೆ, ಗುಣಲಕ್ಷಣಗಳೇ ಹಾಗಿವೆ: 


ಈಗ ಊಹಿಸಿಕೊಳ್ಳಿ: ದೊಡ್ಡ ಗಾತ್ರದ ಗಡುಸಾದ ಕಾರೆಕಂಟಿಯಲ್ಲಿ, ಚಿನ್ನದ ಹಳದಿಬಣ್ಣದ ಕಾರೆಹಣ್ಣುಗಳ ಬದಲಿಗೆ ಅಕಸ್ಮಾತ್ತಾಗಿ ಸಣ್ಣಸಣ್ಣಗಾತ್ರದ ಕೆಂಪು ಪ್ಲಮ್ ಹಣ್ಣುಗಳು ಕಂಡುಬAದರೆ ಹೇಗೆ ಕಾಣಬಹುದೋ ಅಂತಹದೇ ರೂಪ ನಗರೆ ಗಿಡದ್ದು ಎಂದು ಹೇಳಬಹುದು. ಇದರಲ್ಲಿ ಉತ್ಪ್ರೇಕ್ಷೆಯಿಲ್ಲ. ಹಣ್ಣುಗಳು ಬಿಟ್ಟಿರುವ ನಗರೆ ಗಿಡವನ್ನು ಮೊದಲ ಸಾರಿ ನೋಡಿದರೆ, ನಿಮಗೆ ಥಟ್ಟನೆ ಹೊಳೆಯುವ ಹೋಲಿಕೆಯೇ ಇದು. ಪ್ಲಮ್ ಹಣ್ಣಿನ ರೂಪ, ಕಾರೆ ಹಣ್ಣಿನ ಮಧುರ ಸಿಹಿರುಚಿ, ಎಳೆನೀರು ಗಂಜಿ ನುಂಗಿನ ಜೆಲ್ಲಿ ಕೆನೆಯಂಥ ರಸಭರಿತ ಖಂಡ- ಈ ಮೂರರ ಗುಣಲಕ್ಷಣಗಳ ಮೇಳೈಕೆಯಂತೆ ಕಾಣುವ ಕಾಡುಹಣ್ಣು ಈ ನಗರೆ. 


ಹೆಸರಂತೂ ತೀರಾ ಅಪರಿಚಿತ, ವಿಚಾರವೂ ಅಪರಿಚಿತ. ಆದರೆ ಇದರಲ್ಲಿ ಹುದುಗಿರುವ ಅಪರೂಪದ ಹಾಗೂ ಉತ್ಕೃಷ್ಟ ಗುಣಗಳನ್ನು ನೋಡಿದಾಗ, ಅರೆರೇ ಇದನ್ನು ಇಷ್ಟು ದಿವಸ ಗಮನಿಸಲು ಆಗಿರಲಿಲ್ಲವಲ್ಲ, ಎಂಬ ಹಳಹಳಿಕೆಯನ್ನು ಉಂಟು ಮಾಡಬಲ್ಲದು. ಅದರಲ್ಲೂ ಇಂದಿನ ಆಧುನಿಕ ಶೈಲಿಯ ನಮ್ಮ ಬದುಕಿನಲ್ಲಿ, ನಾವು ಬಳಸುತ್ತಿರುವ ಆಹಾರಸಾಮಗ್ರಿಯಲ್ಲಿ ವೈವಿಧ್ಯವಿಲ್ಲ, ಪೋಷಕಗಳ ಕೊರತೆಯಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಆಹಾರದ ಬುಟ್ಟಿಯನ್ನು ಖಂಡಿತವಾಗಿ ಸೇರಬಲ್ಲ ಅಪರೂಪದ ಹಣ್ಣು ಇದು.

ಹಾಗಾದರೆ ನೋಡಿ:


ನಗರೆ ಗಿಡವನ್ನು ಸಸ್ಯಶಾಸ್ತ್ರಜ್ಞರು ಗುರುತಿಸುವುದು, ಝೈಮೇನಿಯಾ ಅಮೆರಿಕಾನಾ ಎಂಬ ಹೆಸರಿನಿಂದ. ಉಚ್ಚರಿಸಲು ತಡವರಿಸುವಂಥ ಹೆಸರು. ಇಂಗ್ಲಿಷ್‌ನಲ್ಲಿ ಯೆಲ್ಲೋ ಪ್ಲಮ್ (ಹಳದಿ ಪ್ಲಮ್) ಎಂಬ ಹೆಸರು, ನಗರೆ ಗಿಡಕ್ಕೆ ನಾಗರೀ ಗಿಡ, ನಕ್ಕರಿಗಿಡ, ನಕ್ಕರೀಕಾಯಿ ಗಿಡ ಎಂಬ ಹೆಸರುಗಳೂ ರೂಡಿಯಲ್ಲಿವೆ. ಬಳ್ಳಾರಿ ಪ್ರಾಂತದಲ್ಲಿ ಇದಕ್ಕೆ ಕಂಡನಕ್ಕರೆ ಎಂಬ ಹೆಸರಿದೆ.


“…ಇದ್ಯಾವುದೂ ಸರಿಯಲ್ಲ. ಕಾರೆ ಗಿಡ, ಗಂಡುಗಾರೆ, ಮಗ್ಗಾರೆ, ಹೆಗ್ಗಾರೆ ಎಂಬ ಹೆಸರಿನ ಬೇರೆಬೇರೆ ಗಡಸು ಮುಳ್ಳುಕಂಟಿಗಳು ನಮ್ಮ ಬಯಲು ಸೀಮೆಯಲ್ಲಿ ಇಲ್ಲವೇ, ಅದೇ ಸಾಲಿನಲ್ಲಿ ಅದೇ ಧಾಟಿಯಲ್ಲಿ ಇದರ ಹೆಸರು ಮೊದಲಿಗೆ, “ನಗ್ಗಾರೆ” ಎಂದು ಇದ್ದೀತು, ರೂಢಿಬಳಕೆಯಲ್ಲಿ ಅದೇ ಕ್ರಮೇಣ ನಗರೆ ಆಗಿದೆ, ಎಂದು ನನ್ನ ಅರಣ್ಯಾಧಿಕಾರಿ ಮಿತ್ರರೊಬ್ಬರು ಹೇಳಿದ್ದರು. ಆ ವಿವರಣೆಯೂ ಸರಿಯಿದ್ದೀತು. 


ಅದು ಹಾಗಿರಲಿ. ಇದರ ವೈಜ್ಞಾನಿಕ ಹೆಸರಿನಲ್ಲಿ “ಅಮೆರಿಕಾನಾ” ಎಂದು ತೋರಿಸಿದ್ದೀರಿ, ಕೇವಲ ಭಾರತದ ಕಥೆ ಹೇಳುತ್ತೀರಿ, ಅಮೆರಿಕಾದಲ್ಲಿರುವುದು ಬರೀ ಸುಳ್ಳೇ ಎಂಬುದು ನಿಮ್ಮ ಆಕ್ಷೇಪಣೆಯಾದರೆ, ನಿಮಗೆ ಸಮಾಧಾನ ಇಲ್ಲಿದೆ. ಭಾರತದಾಚೆಗೂ ಕೂಡ ನಗರೆಯ ಸ್ವಾಭಾವಿಕ ವ್ಯಾಪನೆ ಕಾಣುತ್ತದೆ. ಆಫ್ರಿಕಾದಲ್ಲಿ ಇದು ಯಥೇಚ್ಛ. ಇದರ ಜೊತೆಗೆ ಶ್ರೀಲಂಕಾ, ಮಯನ್ಮಾರ್, ಥೈಲ್ಯಾಂಡ್, ಮಲೇಶಿಯಾ, ಉತ್ತರ ಆಸ್ಟ್ರೇಲಿಯಾ ಅಲ್ಲದೆ, ಉತ್ತರ ಅಮೆರಿಕಾದ ಫ್ಲಾರಿಡಾ ಪ್ರಾಂತದ ವನ್ಯನೆಲೆಗಳಲ್ಲಿ ನಗರೆಗಿಡದ ಸಂದಣಿಗಳು ಸ್ವಾಭಾವಿಕವಾಗಿ ಕಂಡುಬರುತ್ತವೆ. 


ಓಲಾಕೇಸೀ ಸಸ್ಯಕುಟುಂಬಕ್ಕೆ ಸೇರಿದ ಸಸ್ಯವಿದು, ಎಂದು ಸಸ್ಯಶಾಸ್ತ್ರಜ್ಞರು ಇನ್ನುತ್ತಾ ಹೇಳುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಪರಿಚಿತ ಗಿಡ ಇದರಲ್ಲಿಲ್ಲ. ಹತ್ತಿರದ ಜ್ಞಾತಿಸಸ್ಯ ಎಂದರೆ, ಇಂಗಳದ ಕಾಯಿ. ಇದು ನಮಗೆ ಸ್ವಲ್ಪ ಪರಿಚಿತ. ಒಣ ಉದುರೆಲೆ ಹಾಗೂ ಕುರುಚಲು ಕಾಡುಗಳಲ್ಲಿ ಕಂಡು ಬರುವ ಸಸ್ಯ. ಚಿತ್ರದುರ್ಗ ಜಿಲ್ಲೆಯ ಇಂಗಳದಹಾಳು ಪ್ರಾಂತದಲ್ಲಿ ಸುಲಭವಾಗಿ ಇದನ್ನು ಕಾಣಬಹುದು. ಈ ಇಂಗಳವನ್ನು ನಮ್ಮ ನಗರೆ ಗಿಡದ ದಾಯಾದಿ ಸಸ್ಯ ಎಂದು ಗುರುತಿಸಬಹುದು. 


ಈ ನಗರೆಯ ಸ್ವಾಭಾವಿಕ ಚಹರೆಯನ್ನು ಇನ್ನಷ್ಟು ನೋಡೋಣ.  


ಕರ್ನಾಟಕದ ಬಯಲುಸೀಮೆಯ ಪೂರ್ವದಿಕ್ಕಿನ ಒಣ ಉದುರೆಲೆ ಮತ್ತು ಕುರುಚಲು ಕಾಡುಗಳಲ್ಲಿ, ನಗರೆಗಿಡದ ಸಂದಣಿ ಸ್ವಾಭಾವಿಕವಾಗಿ ವ್ಯಾಪಿಸಿದೆ. ಅದರಲ್ಲೂ ಬಳ್ಳಾರಿ, ಸಂಡೂರು, ಚಿತ್ರದುರ್ಗ, ತುಮಕೂರು ಜಿಲ್ಲೆಯ ಕೊರಟಗೆರೆ, ಪಾವಗಡ, ಮಧುಗಿರಿ, ಕನಕಪುರ, ರಾಮನಗರ, ಮೈಸೂರು, ಚಾಮರಾಜನಗರ, ಹೆಗ್ಗಡದೇವನಕೋಟೆಯ ತೆರೆದ ಗುಡ್ಡಗಾಡು ಸೀಮೆಯಲ್ಲಿ, ಬೆಟ್ಟಗಳ ತಪ್ಪಲಿನಲ್ಲಿ ನಗರೆಯ ಸಂದಣಿಗಳು ಕಂಡುಬರುತ್ತವೆ. ಇಲ್ಲಿಯ ಗುಡ್ಡಗಳ ಇಳಿಜಾರು ಮತ್ತು ತಳಬೆಟ್ಟದಿಂದ ಹೊರಬಂದ ಹಳ್ಳತೊರೆಗಳ

ಮಗ್ಗುಲಿಗೆ ಅದರಲ್ಲೂ ನೊರಜುಗಲ್ಲಿನ ತೆರೆದ ಜಾಗಗಳಲ್ಲಿ ನಗರೆ ಪೊದೆಗಳು ಕಂಡುಬರುತ್ತವೆ. 
ದೊಡ್ಡದಾದ ಪೊದೆ ಅಥವಾ ಚಿಕ್ಕ ಮರ ಎನ್ನುವಂಥ ನಿಲುವು. ಕಾರೆಹಣ್ಣಿನ ಪೊದೆಯನ್ನು ಭೂತಗನ್ನಡಿಯ ಮೂಲಕ ನೋಡಿದರೆ ಕಾಣುವಂಥ ದೊಡ್ಡ ಗಾತ್ರ. ಒಂದು ನಿರ್ದಿಷ್ಟವಾದ ಮಟ್ಟಸವಾದ ಆಕಾರ ಕಾಣುವುದು ಅಪರೂಪ. ಅರಣ್ಯ ಇಲಾಖೆಯ ಕೆಲವು ಮುಂಚೂಣಿ ಕ್ಷೇತ್ರ ಸಿಬ್ಬಂದಿ ಹೇಳುವ ಹಾಗೆ, ಒಂದು ದಿಕಕಿನಿಂದ ನೋಡಿದರೆ, ನಗರೆ ಗಿಡ ನಿಜವಾಗಲೂ ಕಾರೆ ಪೊದೆ ಮತ್ತು ದಿಂಡಲು ಮರದ ಮಿಶ್ರಣದ ಹಾಗೆ ಕಾಣುತ್ತದೆ.


ಚೆನ್ನಾಗಿ ಬೆಳೆದ ನಗರೆ ಗಿಡಕ್ಕೆ ಗಡುಸಾದ ಕಾಂಡ, ಅದರ ಮೇಲೆ ಒತ್ತೊತ್ತಾಗಿ ಬೆಳೆದು ಎಲ್ಲ ದಿಕ್ಕಿನಲ್ಲೂ ಹರಡಿಕೊಂಡ ಮುಳ್ಳು ಕವಲುಗಳು, ಕೆಲವೊಮ್ಮೆ ಕಾಂಡದ ಬುಡದಿಂದಲೇ ಹೆಚ್ಚುವರಿ ಕವಲುಗಳು ಹೊರಬಂದಿರುತ್ತವೆ. ಗಡಸು ಕೊಂಬೆಗಳ ಮೇಲೆ ದಟ್ಟವಾದ ಬಿಡಿಬಿಡಿಯಾದ ಎಲೆಗಳು. ಚಮಚದ ನಾಲಿಗೆಯಷ್ಟು ದೊಡ್ಡವು, ಎಲೆಗಳ ಅಂಚು ಒಳಮುಖವಾಗಿ ಮಡಿಚಿಕೊಂಡಿರುತ್ತದೆ. ಇದು ನಗರೆ ಗಿಡದ ಸ್ಥೂಲಚಹರೆ.


ಹೀಗಿರುವ ನಗರೆ ಗಿಡದಲ್ಲಿ ಮಳೆಗಾಲದ ಆರಂಭದಲ್ಲಿ ಗಡಸುಕೊಂಬೆಗಳ ಮೇಲೆ ಹಿಂದಿನ ವರ್ಷದಲ್ಲಿ ಬೆಳೆದ ಕವಲಿನ ತುದಿಯಲ್ಲಿ ಸಣ್ಣದಾದ ಹೂಗಳ ಗೊಂಚಲು ಮೂಡುತ್ತದೆ. ಒಂದೊಂದರಲ್ಲೂ ಸಾಮಾನ್ಯವಾಗಿ 5-8 ಹೂಗಳು ಒಂದೇ ಕಡೆ ಚಿಗಿಯುತ್ತವೆ. ಅಷ್ಟೇನೂ ಸುಗಂಧವಿಲ್ಲದ ಅನಾಕರ್ಷಕ ಹೂಗಳು ಹೀಗಾಗಿ ಯಾರ ಗಮನಕ್ಕೂ ಬಾರವು. ಹೂಗಳಲ್ಲಿ ದುಂಬಿಗಳಿಂದ ಪರಾಗಣ ಜರುಗುತ್ತದೆ. ಆದರೆ ಹೆಚ್ಚಿನ ಹೂಗಳು ಉದುರಿಹೋಗಿ, ಒಂದೊAದು ಹೂಬುಡದಲ್ಲಿ ಸಾಮಾನ್ಯವಾಗಿ ಒಂದೊಂದು ಕಾಯಿ ಕಟ್ಟುತ್ತದೆ. ಮುಂದಿನ ಮೂರು-ನಾಲ್ಕು ವಾರಗಳಲ್ಲಿ ಹಸುರು ಬಣ್ಣದ ಗುಂಡಗಿನ ಕಾಯಿಗಳು ಎದ್ದು ಕಾಣುತ್ತವೆ. 


ಈ ಮೊದಲೇ ಹೇಳಿದಂತೆ ಬಲಿತ ಹಣ್ಣುಗಳು ಸಣ್ಣ ಗಾತ್ರದ ಪ್ಲಮ್ ಹಣ್ಣನ್ನು ಹೋಲುತ್ತವೆ. ಮಾಗಿದ ಹಣ್ಣುಗಳಿಗೆ ಆಕರ್ಷಕ ಹವಳಗೆಂಪು ಬಣ್ಣ, ಬೆಳಗಿನ ಎಳೆ ಬಿಸಿಲಿನಲ್ಲಿ ಹೊಳೆಯುತ್ತಿರುತ್ತವೆ. ಅರ್ಧ ಇಂಚಿನಷ್ಟು ಚಿಕ್ಕದಾದ ತೊಟ್ಟು, ಮಂದವಾದ ಸಿಪ್ಪೆ. ಸಿಪ್ಪೆಯನ್ನು ಸುಲಿದರೆ, ಒಳಗೆ ಎಳೆನೀರು ನುಂಗಿನಂತಹ ಜೆಲ್ಲಿ ಕೆನೆ, ಅದರ ನಡುವೆ ಒಂದು ಗಡಸು ಬೀಜ. 
ಸರಿಯಾಗಿ ಮಾಗಿರುವ ಹಣ್ಣಿಗೆ ಮಧುರವಾದ ಸಿಹಿ ರುಚಿ, ವಿಶಿಷ್ಟವಾದ ಕಂಪು. ಸಿಪ್ಪೆ ಸುಲಿದ ಹಣ್ಣನ್ನು ಇಡಿಇಡಿಯಾಗಿ ಬಾಯಿಗೆ ಹಾಕಿಕೊಂಡು ಸವಿಯಬೇಕು, ಅಗಿಯ ಕೂಡದು, ನುಂಗಕೂಡದು. ಇಡೀ ಹಣ್ಣನ್ನು ಬಾಯಿಯಲ್ಲೇ ಇರಿಸಿಕೊಂಡು, ನಾಲಿಗೆಯ ಸಹಾಯದಿಂದ ಉರುಳಾಡಿಸಿಕೊಂಡು, ಬೀಜವನ್ನು ನುಂಗದ ಹಾಗೆ ಜಾಗ್ರತೆಯಿಂದ ಖಂಡದ ರಸಹೀರುತ್ತಾ, ಹಣ್ಣನ್ನು ಸವಿಯಬೇಕು. ನಗರೆ ಹಣ್ಣನ್ನು ಆಸ್ವಾದಿಸುವುದು ಇಲ್ಲಿ ವಿವರಿಸಿರುವಷ್ಟು ತ್ರಾಸದಾಯಕವೇನಲ್ಲ. ಒಂದರ್ಥದಲ್ಲಿ ಪ್ಲಮ್-ಕಾರೆ ಹಣ್ಣು-ಎಳೆನೀರು ನುಂಗು ಅಥವಾ ತಾಟಿನುಂಗಿನ ಸಮಗ್ರ ಸ್ವಾದವನ್ನು ಒಮ್ಮೆಲೇ ಸವಿಯುವಂಥ ಮಧುರವಾದ ಅನುಭವ. ಇನ್ನೂ ಸರಳವಾಗಿ ಹೇಳಬಹುದಾದರೆ, ಇವೆಲ್ಲ ಸ್ವಾದಭರಿತ ಸಾಮಗ್ರಿಯನ್ನು ಬೆರೆಸಿದ ಐಸ್‌ಕ್ರೀಮ್ ಅನ್ನು ಚಪ್ಪರಿಸಿದ ಹಾಗೆ. 


ಚೆನ್ನಾಗಿ ಮಾಗಿದ ಹಣ್ಣುಗಳನ್ನು ಘಾಸಿಯಾಗದ ಹಾಗೆ ತೊಟ್ಟಿನ ಸಮೇತ ಬಿಡಿಸಿಕೊಂಡು, ಬಿಸಿಲಿನಲ್ಲಿ ಒಣಗಿಸಿದರೆ, ಹಣ್ಣುಗಳು ಸುಕ್ಕುಗಟ್ಟುತ್ತವೆ. ಇದನ್ನು “ಒಣನಗರೆಹಣ್ಣು” ಎನ್ನಬಹುದು. ಹೀಗೆ ಶೇಖರಿಸಿಕೊಂಡ ಹಣ್ಣುಗಳನ್ನು ನಾಳೆಯ ಬಳಕೆಗೆಂದು ಗಾಜಿನ ಬಾಟಲಿಗಳಲ್ಲಿ ಎತ್ತಿಟ್ಟುಕೊಂಡು, ಒಣಖರ್ಜೂರದ ರೀತಿಯಲ್ಲೇ ಬಳಸಲು ಸಾಧ್ಯ. 
ಹಣ್ಣು, ತೊಗಟೆ, ಎಲೆ ಮತ್ತು ಬೀಜಕ್ಕೆ ಹೆಚ್ಚುವರಿ ಔಷಧೀಯ ಗುಣಗಳಿವೆ. ಅದರಲ್ಲೂ ಬೀಜದ ಎಣ್ಣೆಗೆ ಉತ್ಕ್ರಷ್ಟವಾದ ಸೌಂದರ್ಯವರ್ಧಕ ಗುಣಗಳಿವೆ, ಗುಡ್ಡಗಾಡು ಪ್ರದೇಶದ ಕೆಲವು ದೇಶಿ ಬುಡಕಟ್ಟುಗಳು ಇದರ ಸಮರ್ಪಕ ಬಳಕೆಯನ್ನು ಕೇಶಪೋಷಣೆಗೆ, ಆರೋಗ್ಯವರ್ಧನೆಗೆ ರೂಢಿಸಿಕೊಂಡಿವೆ. ಅತ್ಯಂತ ಉಪಯುಕ್ತ ಎನ್ನಿಸಿರುವುದು ಇದೇ. ಎಲೆಗಳಿಂದ ತಯಾರಿಸಿದ ಮುಲಾಮು ಗಾಯದ ಕಲೆಗಳನ್ನು ಕಳೆಯಲು ಬಳಕೆಯಾಗುತ್ತದೆ. ಚರ್ಮದ ಹೊಳಪು ಹೆಚ್ಚಿಸಲು, ಅನಗತ್ಯ ಬಿಳಿಗೆರೆಗಳನ್ನು ನಿವಾರಿಸಲು ಬೀಜದ ಎಣ್ಣೆಯ ಬಳಕೆ ಆಗುತ್ತದೆ. ಇದಕ್ಕಿಂತಲೂ ಹೆಚ್ಚಿನ ಉಪಯೋಗ ಮತ್ತೊಂದಿದೆ: ಕಾಲಿನ ಗಂಟುನರಗಳನ್ನು (ವೆರಿಕೋಸ್ ವೆಯ್ನ್) ನಿವಾರಿಸಲು ಈ ಎಣ್ಣೆಯನ್ನು ಹಚ್ಚುವುದು ಇಂಥ ಯಶಸ್ವಿ ಉಪಯೋಗ. ಅಂಗಸೌAದರ್ಯಕ್ಕೆ ಭಂಗ ಎಂದು ಭಾವಿಸಿರುವ ಗಂಟುನರಗಳ ನಿವಾರಣೆಗೆ ಇದಕ್ಕಿಂತ ಮತ್ತೊಂದು ಪರಿಣಾಮಕಾರಿ ಔಷಧ ಇದ್ದಂತಿಲ್ಲ. 


ಕಾಂಡದ ತೊಗಟೆ ಮತ್ತು ಎಲೆಗಳಲ್ಲಿ, ಎಪಿಕ್ಯಾಟೆಚಿನ್ ಮತ್ತು ಕ್ವೆರ್ಸೆಟಿನ್ ರಸಾಯನಿಕಗಳು ಯಥೇಚ್ಚವಾಗಿರುವುದನ್ನು ಬ್ರೆಝಿಲ್ ದೇಶದ ಸಂಶೋಧಕರು ಪತ್ತೆ ಮಾಡಿದ್ದಾರೆ. ಇವೆರಡೂ ರಸಾಯನಿಕಗಳಿಗೆ ಹೇರಳವಾದ ವಯೋಸ್ಥಾಪಕ ಗುಣಗಳಿವೆ. ಜೀವಕೋಶಗಳ ಕಿಪ್ರಸವೆತವನ್ನು ಇವು ನಿಧಾನಿಸಬಲ್ಲವು. ಹೀಗಾಗಿ ಆಧುನಿಕ ಜೇವನಶೈಲಿಯ ಮಟ್ಟಿಗೆ ಅದರಲ್ಲೂ ನಡುವಯಸ್ಕರ ಹಾಗೂ ವಯೋವೃದ್ಧರ ಆರೋಗ್ಯಪಾಲನೆಯ ವಿಚಾರದಲ್ಲಿ ಇದು ಜಾಗತಿಕವಾಗಿ ಮಹತ್ವದ ವಿಚಾರ. ಇವೆರಡೂ ರಸಾಯನಿಕಗಳನ್ನು ಆರೋಗ್ಯಪಾಲನೆಯ ಇಂಥ ದ್ರವ್ಯಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. 


ಆಫ್ರಿಕಾ ದೇಶಗಳಲ್ಲಿ ನಗರೆ ಬಹು ಬಳಕೆಯ ಬಹು ಬೇಡಿಕೆಯ ಹಣ್ಣು. ಇದನ್ನು ಸಂಸ್ಕರಿಸಿ, ಸ್ಕ್ವ್ಯಾಷ್, ತಂಪು ಪಾನೀಯ, ಹಣ್ಣಿನ ಒಣಹುಡಿ ಮೊದಲಾದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಗಳು ಅಲ್ಲಿವೆ. ಆದರೆ ನಮ್ಮಲ್ಲಿ ಮಾತ್ರ ಇದಿನ್ನೂ ಯಾರಿಗೂ ಬೇಡವಾದ ಕಾಡುಹಣ್ಣಿನ ರೂಪದಲ್ಲೇ ಉಳಿದಿದೆ. 


ನಮ್ಮ ಇಂದಿನ ಆಹಾರದ ಒಟ್ಟು ವೈವಿಧ್ಯವು ಗಾಬರಿಯಾಗುವಷ್ಟು ಕ್ಷೀಣಿಸಿದೆ, ಏಕತಾನತೆಯಿದೆ, ಮನುಷ್ಯನ ಆರೋಗ್ಯಕ್ಕೆ ಇದು ಮಾರಕ ಎಂಬ ಕೂಗು ಎಲ್ಲೆಡೆಯೂ ಕೇಳಿಬರುತ್ತಿರುವ ಈ ದಿನಗಳಲ್ಲಿ, ನಗರೆಯಂಥ ಕಾಡುಹಣ್ಣುಗಳು ಆ ಕೊರತೆಯನ್ನು ನೀಗಿಸಬಲ್ಲವು. ಗೌರಿಹಬ್ಬದ ಹಿಂದಿನ ದಿನಗಳಲ್ಲಿ ಬಯಲುಸೀಮೆಯ ಕಾಡಿನಂಚಿನ ಗ್ರಾಮಗಳ ದನಗಾಹಿಗಳನ್ನು ವಿಚಾರಿಸಿದರೆ, ನಗರೆ ಪೊದೆಯ ಬಳಿ ಅವರು ನಿಮ್ಮನ್ನು ಕರೆದೊಯ್ಯಬಲ್ಲರು. 


ಕಾಡಿನ ನಗರೆಹಣ್ಣು ನಮ್ಮ ನಗರಗಳ ಬಳಕೆಗೆ ಸುಲಭವಾಗಿ ಬರಬಲ್ಲದು. ನಮ್ಮ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತ ಕಣ್ಣು ಹರಿಸಬೇಕು. 


ಲೇಖಕರು: ಪರಿಸರ ವಿಜ್ಞಾನಿ, ವಿಜ್ಞಾನ ಲೇಖಕ 
ದೂ: 7259284410