ವ್ಯಕ್ತಿ ಸ್ವಾತಂತ್ರ‍್ಯದ ನೆಲೆಗಳೂ, ಅಸ್ಮಿತೆಯ ರಾಜಕಾರಣವೂ..,  ವರ್ತಮಾನ ನಾ ದಿವಾಕರ

ವ್ಯಕ್ತಿ ಸ್ವಾತಂತ್ರ‍್ಯದ ನೆಲೆಗಳೂ, ಅಸ್ಮಿತೆಯ ರಾಜಕಾರಣವೂ..,  ವರ್ತಮಾನ ನಾ ದಿವಾಕರ, na-divakara-culture-religion-freedom

ವ್ಯಕ್ತಿ ಸ್ವಾತಂತ್ರ‍್ಯದ ನೆಲೆಗಳೂ, ಅಸ್ಮಿತೆಯ ರಾಜಕಾರಣವೂ..,  ವರ್ತಮಾನ ನಾ ದಿವಾಕರ

ವ್ಯಕ್ತಿ ಸ್ವಾತಂತ್ರ‍್ಯದ ನೆಲೆಗಳೂ, ಅಸ್ಮಿತೆಯ ರಾಜಕಾರಣವೂ.., 


ವರ್ತಮಾನ


ನಾ ದಿವಾಕರ


ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರುವುದೇ ವ್ಯಕ್ತಿ ಸ್ವಾತಂತ್ರ‍್ಯದ ಆಧಾರದ ಮೇಲೆ. ಭಾರತದ ಸಂವಿಧಾನ ರೂಪುಗೊಂಡಿರುವುದೂ ಸಹ ಇದೇ ವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆಗಾಗಿ. ಯಾರಿಗಾಗಿ ವ್ಯಕ್ತಿ ಸ್ವಾತಂತ್ರ‍್ಯವನ್ನು ಕಾಪಾಡಬೇಕು ಎನ್ನುವಷ್ಟೇ, ಯಾರಿಂದ ಈ ಸ್ವಾತಂತ್ರ‍್ಯ ಹರಣವಾಗುತ್ತದೆ ಎನ್ನುವುದೂ ಮುಖ್ಯ ಪ್ರಶ್ನೆಯಾಗಿ ನಮ್ಮನ್ನು ಕಾಡಬೇಕಿದೆ. ಇಂದು ದೇಶವನ್ನು ಆವರಿಸುತ್ತಿರುವ ಕೋಮುವಾದಿ ಫ್ಯಾಸಿಸಂ ಶೂನ್ಯದಲ್ಲಿ ಉದ್ಭವಿಸಿರುವುದಲ್ಲ. ಭಾರತದ ಶ್ರೇಣೀಕೃತ ಸಮಾಜದೊಳಗಿನ ಆಂತರಿಕ ತರತಮಗಳನ್ನು ಬಳಸಿಕೊಂಡೇ, ಈ ದೇಶದ ಸಾಂಸ್ಕೃತಿಕ ರಾಜಕಾರಣದ ವಾರಸುದಾರರು ಜನಸಾಮಾನ್ಯರ ಬದುಕಿನಲ್ಲಿ ಮತಾನುಸರಣೆ ಮತ್ತು ಧಾರ್ಮಿಕ ಅಚರಣೆಗಳನ್ನು ನಿರ್ಣಾಯಕ ಸಂಗತಿಗಳನ್ನಾಗಿ ಮಾಡಿಬಿಟ್ಟಿದ್ದಾರೆ.

ಕೋಮುವಾದಿ, ಮತಾಂಧ ರಾಜಕಾರಣ ತಂದೊಡ್ಡಿರುವ ಸವಾಲುಗಳಿಗೆ ವೈಚಾರಿಕ ನೆಲೆಯಲ್ಲಿ ನಿಂತು ಉತ್ತರ ಶೋಧಿಸುವ ಬದಲು ಪ್ರಗತಿಪರ ಎನಿಸಿಕೊಳ್ಳುವವರೂ ಸಹ ಯಾವುದೋ ಒಂದು ನಿರ್ದಿಷ್ಟ ಅಸ್ಮಿತೆಯ ನೆಲೆಯಲ್ಲಿ ನಿಂತು ಪರಾಮರ್ಶೆ ನಡೆಸುತ್ತಿರುವುದು ಈ ಕಾಲದ ದುರಂತ. ಸಂಘಪರಿವಾರ ಪೋಷಿಸುತ್ತಿರುವ ಮತ್ತು ಪ್ರಚೋದಿಸುತ್ತಿರುವ ಮತೀಯ ರಾಜಕಾರಣಕ್ಕೆ ಎರಡು ಆಯಾಮಗಳಿವೆ. ಮೊದಲನೆಯದು ಹಿಂದೂ ಎನ್ನಲಾಗುವ ಧಾರ್ಮಿಕ ಆಚರಣೆಗಳನ್ನು ಸಾರ್ವತ್ರೀಕರಿಸುವ ಮೂಲಕ ಅದನ್ನೇ ರಾಷ್ಟ್ರೀಯತೆಯ ಒಂದು ಭಾಗವನ್ನಾಗಿ ಮಾಡುವುದು. ಬಹುಮಟ್ಟಿಗೆ ಈ ಆಚರಣೆಗಳು ವೈದಿಕಶಾಹಿಯ ಲಾಂಛನಗಳನ್ನು ಹೊತ್ತು ಅಥವಾ ಸಂಕೇತಗಳನ್ನು ಲೇಪಿಸಿಕೊಂಡು, ಜನಸಾಮಾನ್ಯರ ನಿತ್ಯ ಬದುಕಿನ ಒಂದು ಭಾಗವಾಗಿರುತ್ತವೆ. ಸಾಮಾಜಿಕ ಬದುಕಿನಲ್ಲಿರುವ ಸಾಂಸ್ಕೃತಿಕ ವೈವಿಧ್ಯತೆಯನ್ನೂ ನುಂಗಿ ಹಾಕುವ ಮತೀಯ ಅಸ್ಮಿತೆ ಹಿಂದೂ ರಾಷ್ಟ್ರದ ಚೌಕಟ್ಟಿನಲ್ಲಿ ಎಲ್ಲ ಸ್ತರಗಳ ಜನರನ್ನೂ ಆಕರ್ಷಿಸುತ್ತದೆ. 

ಎರಡನೆಯದಾಗಿ, ಹಿಂದುತ್ವದ ಚೌಕಟ್ಟಿನಲ್ಲಿ ಬಲಗೊಳ್ಳುತ್ತಿರುವ ಮತೀಯ ರಾಜಕಾರಣ, ಧಾರ್ಮಿಕ ಆಚರಣೆಗಳನ್ನು ಮತ್ತು ಮತಾಚರಣೆಯ ನೆಲೆಗಳನ್ನು ಜನಾಂಗೀಯ ಅಸ್ಮಿತೆಗಳ ನೆಲೆಯಲ್ಲಿ ವಿಸ್ತರಿಸುತ್ತಾ ಸಾಂಸ್ಕೃತಿಕ ವೈರುಧ್ಯಗಳನ್ನು ತನ್ನ ಬತ್ತಳಿಕೆಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದೆ. ಅಸ್ಮಿತೆಯ ರಾಜಕಾರಣದಲ್ಲಿ ಕಾಣಬಹುದಾದ ಬಿರುಕುಗಳನ್ನು ಮತ್ತು ಸೈದ್ಧಾಂತಿಕ ವಿರೋಧಾಭಾಸಗಳನ್ನು ಸಂತೈಸುತ್ತಲೇ ಅಖಂಡ ಭಾರತದ ಕನಸಿಗೆ ಸಾಂಸ್ಕೃತಿಕ ಹೊದಿಕೆಯನ್ನು ಹೊದಿಸಲು ಸಂಘಪರಿವಾರ ಎಲ್ಲ ಸಾಮಾಜಿಕ ನೆಲೆಗಳನ್ನೂ ಬಳಸಿಕೊಳ್ಳುತ್ತಿದೆ. ಈ ಪ್ರಯತ್ನದಲ್ಲಿ ಎದುರಾಗಬಹುದಾದ ಪ್ರತಿರೋಧದ ನೆಲೆಗಳನ್ನು ಧ್ವಂಸ ಮಾಡಲು ಒಂದೆಡೆ ರಾಜಕೀಯ ಪ್ರಭುತ್ವ ನೆರವಾದರೆ ಮತ್ತೊಂದೆಡೆ ಸಾಂಸ್ಕೃತಿಕ ರಾಜಕಾರಣದ ಸಾಂಸ್ಥಿಕ ನೆಲೆಗಳು ನೆರವಾಗುತ್ತವೆ.

ಈ ಸಂಘರ್ಷದ ನಡುವೆಯೇ ಭಾರತದ ಬಹುಸಂಖ್ಯಾತ ಜನರು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು ಶಿಥಿಲಗೊಳಿಸುತ್ತಾ, ಸಂವಿಧಾನ ಆಶಿಸುವ ಸಾಮಾಜಿಕಾರ್ಥಿಕ ಸಮಾನತೆ ಮತ್ತು ವ್ಯಕ್ತಿ ಸ್ವಾತಂತ್ರ‍್ಯದ ನೆಲೆಗಳನ್ನು ಹಂತಹAತವಾಗಿ ಕೊಲ್ಲುತ್ತಾ ಬರುತ್ತಿರುವ ಹಿಂದುತ್ವ ರಾಜಕಾರಣ ನಿರ್ದಿಷ್ಟ ಕೋಮುಗಳ ಅಥವಾ ಸಮುದಾಯಗಳ ಅಸ್ತಿತ್ವವನ್ನೇ ಪ್ರಶ್ನಿಸುವ ಮೂಲಕ ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುತ್ತಿದೆ. ಅಸ್ಪೃಶ್ಯತೆ, ಜಾತಿ ತಾರತಮ್ಯ , ಜಾತಿ ದೌರ್ಜನ್ಯ ಮತ್ತು ಸ್ತ್ರೀ ದ್ವೇಷದ ತಾತ್ವಿಕ ತಳಹದಿಯನ್ನು ಸಂರಕ್ಷಿಸಿಕೊAಡೇ, ಮತೀಯ ಅಸ್ಮಿತೆಯ ಮೂಲಕ “ಅನ್ಯ”ರನ್ನು ಸೃಷ್ಟಿಸುವ ಮೂಲಕ ಹಿಂದುತ್ವ ತನ್ನೊಳಗಿನ ವೈರುಧ್ಯಗಳನ್ನೇ ಅನ್ಯರ ವಿರುದ್ಧದ ಆಕ್ರೋಶದ ನೆಲೆಗಳನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿಯೇ ಅತೀವ ಶೋಷಣೆ, ದೌರ್ಜನ್ಯಕ್ಕೊಳಗಾಗಿರುವ ಸಮುದಾಯಗಳೂ ಸಹ ಮತೀಯವಾದದ ಕಾಲಾಳುಗಳನ್ನು ಒದಗಿಸುವಂತಾಗುತ್ತವೆ.

ಭಾರತ ಇಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸಾಂವಿಧಾನಿಕ ಆಶಯಗಳಂತೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಬದಲು, ಏಕ ಸಂಸ್ಕೃತಿಯನ್ನು ಹೇರುವ ಒಂದು ಪ್ರಕ್ರಿಯೆಯನ್ನು ಸಂವಿಧಾನಬದ್ಧ ಪ್ರಭುತ್ವವೇ ಪೋಷಿಸುತ್ತಿದೆ. ಬಹುಸಂಖ್ಯಾತ ಮತೀಯ ನೆಲೆಗಳಲ್ಲಿ ಆಳವಾಗಿ ಬೇರೂರಿರುವ ಎಲ್ಲ ತಾರತಮ್ಯಗಳನ್ನು, ವೈರುಧ್ಯಗಳನ್ನು ಮತ್ತು ಆಂತರಿಕವಾಗಿ ಶೋಷಿತ ಸಮುದಾಯಗಳು ಅನುಭವಿಸುವ ಅತೀವ ಶೋಷಣೆ ಮತ್ತು ದೌರ್ಜನ್ಯಗಳನ್ನು ಮರೆಮಾಚಲು ಹಿಂದೂ ಧರ್ಮದ ಪುನರುತ್ಥಾನದ ದನಿಗಳನ್ನು ಬಲಪಡಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲೇ ಜನಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ “ ಅನ್ಯ” ಮತಗಳ ಅಥವಾ ಸಮುದಾಯಗಳ ಅಸ್ತಿತ್ವವನ್ನೇ ಅಥವಾ ಅವುಗಳ ಅಸ್ಮಿತೆಯ ನೆಲೆಗಳನ್ನೇ ಕಾರಣ ಎಂದು ಬಿಂಬಿಸಲಾಗುತ್ತದೆ. ಕ್ರೈಸ್ತರ ಪ್ರಾರ್ಥನೆ, ಕ್ರಿಸ್ತನ ಬೋಧನೆಯ ಪ್ರಚಾರ, ಮುಸಲ್ಮಾನರ ಅಝಾನ್ ಅಥವಾ ಮುಸ್ಲಿಂ ಮಹಿಳೆಯರು ತೊಡುವ ಬುರ್ಖಾ, ಹಿಜಾಬ್ ಮತ್ತಿತರ ಉಡುಪುಗಳು ಇವೆಲ್ಲೂ ಈ ಅಸ್ಮಿತೆಯ ರೂಪದಲ್ಲೇ ಕಂಡುಬರುವುದರಿAದ, ಇವುಗಳ ಮೇಲೆ ಸಾಂಸ್ಕೃತಿಕ ದಾಳಿ ನಡೆಸುವ ಮೂಲಕವೇ ಹಿಂದೂ ಧಾರ್ಮಿಕ ಅಸ್ಮಿತೆಯನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ. 

1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ಕಾರಣವೂ ಇದೇ ಆಗಿದೆ. ಅದೊಂದು ಚಾರಿತ್ರಿಕ ಸ್ಮಾರಕ ಎನ್ನುವುದಕ್ಕಿಂತಲೂ, ಭಾರತದ ಮುಸಲ್ಮಾನರ ಸ್ಥಾವರರೂಪಿ ಅಸ್ಮಿತೆಯಾಗಿ ಬಾಬ್ರಿ ಮಸೀದಿಯನ್ನು ಕೆಡವಿಹಾಕಲು ಹಿಂದುತ್ವ ರಾಜಕಾರಣ ಮುಂದಾಗಿತ್ತು. ತಮ್ಮ ನಿತ್ಯ ಬದುಕಿನಲ್ಲಿ ಭಾರತದ ಮುಸಲ್ಮಾನರಿಗೆ ನಿರುದ್ಯೋಗ, ಬಡತನ, ದಾರಿದ್ರ‍್ಯ, ಅನಕ್ಷರತೆ, ಸ್ತ್ರೀ ಶೋಷಣೆ ಮುಂತಾದ ಜ್ವಲಂತ ಸಮಸ್ಯೆಗಳೇ ಪ್ರಧಾನವಾಗಿದ್ದರೂ ಸಹ, ಇಡೀ ಸಮುದಾಯದ ಅಸ್ತಿತ್ವವನ್ನು ಧಾರ್ಮಿಕ ಆಚರಣೆಗಳು ಮತ್ತು ಸಂಕೇತಗಳ ಮೂಲಕ ಅಸ್ಮಿತೆಯ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡಲಾಗುತ್ತದೆ. ಈ ಅಸ್ಮಿತೆಯ ಚಿಹ್ನೆಗಳನ್ನು ಪದೇ ಪದೇ ದಾಳಿಗೊಳಪಡಿಸುವ ಮೂಲಕ, ಮುಸ್ಲಿಂ ಸಮುದಾಯದ ಅಸ್ತಿತ್ವವನ್ನೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಲಾಗುತ್ತದೆ. “ಹಿಜಾಬ್ ಬೇಕಾದವರು ಪಾಕಿಸ್ತಾನಕ್ಕೆ ಹೋಗಿ” ಎನ್ನುವ ಒಬ್ಬ ಅಪ್ರಬುದ್ಧ ನಾಯಕನ ಹೇಳಿಕೆ ಕ್ಷುಲ್ಲಕ ಎನಿಸಿದರೂ, ಈ ಹೇಳಿಕೆಯ ಹಿಂದೆ ಧಾರ್ಮಿಕ ಅಸ್ಮಿತೆಯನ್ನು ಮುಸ್ಲಿಮರ ಪೌರತ್ವ ಮತ್ತು ಅಸ್ತಿತ್ವದೊಡನೆ ಸಮೀಕರಿಸುವ ಮತೀಯವಾದದ ಧೋರಣೆಯನ್ನು ಗುರುತಿಸುವುದು ಮುಖ್ಯ.


ಹಿಜಾಬ್ ವಿವಾದದಲ್ಲೂ ಈ ಸೂಕ್ಷ್ಮತೆಯನ್ನು ಗಮನಿಸಬಹುದು. ಇಲ್ಲಿ ದಾಳಿಗೊಳಗಾಗುತ್ತಿರುವುದು ಮಹಿಳಾ ವ್ಯಕ್ತಿ ಸ್ವಾತಂತ್ರ‍್ಯ, ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಶಿಕ್ಷಣದ ಹಕ್ಕು. ಎಲ್ಲ ಸಾಂಪ್ರದಾಯಿಕ ಸಮಾಜಗಳಲ್ಲೂ, ಕಾಲಾನುಕಾಲದಿಂದಲೂ ಮಹಿಳೆಯರ ಶಿಕ್ಷಣ ದಾಳಿಗೊಳಗಾಗಿದೆ. ಭಾರತದಲ್ಲೇ ವಿದ್ಯಾಸಾಗರರ ಕಾಲದಿಂದ, ಸಾವಿತ್ರಿ ಬಾಯಿ ಫುಲೆ ಕಾಲದಿಂದ ಇಂದಿನವರೆಗೂ ಮಹಿಳೆಯನ್ನು ಶಿಕ್ಷಣವಂಚಿತರನ್ನಾಗಿ ಮಾಡುವ ಸಾಂಪ್ರದಾಯಿಕ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡೇ ಬಂದಿವೆ. ಹಿಂದೂ ಹೆಣ್ಣು ಮಕ್ಕಳನ್ನೂ ಉನ್ನತ ಶಿಕ್ಷಣದಿಂದ ಹೊರಗಿರಿಸುವ ಪ್ರಯತ್ನಗಳು ಸೂಕ್ಷ್ಮ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆಯಡಿ ಭಾರತ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಯತ್ನಿಸುತ್ತಿದ್ದರೂ, ಶೈಕ್ಷಣಿಕ ವಲಯದಲ್ಲಿನ ತಾರತಮ್ಯ ಧೋರಣೆಗಳು ಮತ್ತು ಪುರುಷಾಧಿಪತ್ಯದ ನೆಲೆಗಳು ಮಹಿಳೆಯರನ್ನು ಶಿಕ್ಷಣವಂಚಿತರನ್ನಾಗಿ ಮಾಡುತ್ತವೆ.


ಹಿಜಾಬ್ ವಿರೋಧಿಸುವ ಮತಾಂಧರ ತಾತ್ವಿಕ ನೆಲೆಗಳನ್ನು ಇಲ್ಲಿ ಗುರುತಿಸಬೇಕಾಗುತ್ತದೆ. “ಹೆಣ್ಣು ಮಕ್ಕಳ ಉಡುಪುಗಳೇ ಪುರುಷರಲ್ಲಿ ಉದ್ರೇಕ ಉಂಟುಮಾಡುತ್ತದೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರೆ, ಅಲ್ಲಿ ಈ ತಾತ್ವಿಕ ನೆಲೆಗಳು ಹೇಗೆ ಸಾಂಸ್ಥೀಕರಣಗೊAಡು ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸುವ ವೈದಿಕಶಾಹಿಯನ್ನು ಪೋಷಿಸುತ್ತದೆ ಎನ್ನುವ ಧೋರಣೆಯೇ ಪ್ರಧಾನವಾಗಿರುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಲು ಪುರುಷಾಧಿಪತ್ಯವನ್ನು ಪೋಷಿಸುವ ಸಮಾಜಕ್ಕೆ ಇದು ಬುನಾದಿಯಾಗುತ್ತದೆ. ಈ ಸಮಾಜವೇ ಮುಸ್ಲಿಂ ಮಹಿಳೆ ಧರಿಸುವ ಹಿಜಾಬ್ ಅಥವಾ ಬುರ್ಖಾವನ್ನು ಒಂದು ಪ್ರತಿರೋಧದ ಚಿಹ್ನೆಯಾಗಿಯೂ ಕಾಣುತ್ತದೆ. ಈ ಪ್ರತಿರೋಧಗಳನ್ನು ತೊಡೆದುಹಾಕುವ ಮೂಲಕ, ಹಿಂದೂ ಹೆಣ್ಣು ಮಕ್ಕಳ ವಸ್ತ್ರ ಸ್ವಾತಂತ್ರ‍್ಯದ ಮೇಲೆಯೂ ಹಲ್ಲೆ ನಡೆಸಲಾರಂಭಿಸುತ್ತಾರೆ. 
“ ಮೈ ಮುಚ್ಚುವಂತೆ ” ಉಡುಪು ಧರಿಸುವುದು ಸಾಂಪ್ರದಾಯಿಕ ಸಮಾಜದ ಅಘೋಷಿತ ಕಟ್ಟಳೆಯಾಗಿ ರೂಪುಗೊಳ್ಳುವುದೇ ಹೀಗೆ. ಹಿಂದುತ್ವವಾದಿಗಳೂ ಸಹ ಇಂದು ಮಹಿಳೆಯರು ಧರಿಸುವ ಜೀನ್ಸ್ ಮುಂತಾದ ಆಧುನಿಕ ಉಡುಪುಗಳನ್ನು ವಿರೋಧಿಸುತ್ತಾ ಸೀರೆಯನ್ನು ಹಿಂದೂ ಧಾರ್ಮಿಕ ಅಸ್ಮಿತೆಯ ಒಂದು ಭಾಗವನ್ನಾಗಿ ಮಾಡಿದ್ದಾರೆ. ಮುಸ್ಲಿಂ ಸಮಾಜದಲ್ಲೂ ಸಹ ಬುರ್ಖಾ, ಹಿಜಾಬ್ ಮುಂತಾದ ಉಡುಪುಗಳು ಇದೇ ನೆಲೆಯಲ್ಲೇ ಸಾಮಾಜಿಕ ಕಟ್ಟಳೆಯಾಗಿ ರೂಪುಗೊಂಡಿವೆ. ಆಧುನಿಕತೆಗೆ ತೆರೆದುಕೊಂಡಿರುವ ಒಂದು ಸಮಾಜದಲ್ಲಿ ಮಹಿಳೆ ಮಾತ್ರ ಈ ರೀತಿಯ ವಸ್ತ್ರ ಕೇಂದ್ರಿತ ಕಟ್ಟಳೆಗಳಿಗೆ ಒಳಗಾಗುವುದನ್ನು ವೈಚಾರಿಕತೆಯ ನೆಲೆಯಲ್ಲಿ ವಿಶ್ಲೇಷಿಸುವುದು ಅತ್ಯವಶ್ಯವಾಗಿದೆ. ತನಗೆ ಬೇಕಾದಂತೆ ಉಡುಪು ಧರಿಸುವ ಮಹಿಳೆಯ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯ ಹೀಗೆ ಅಸ್ಮಿತೆಯ ಚೌಕಟ್ಟಿನಲ್ಲಿ ಸಿಲುಕಿ ಹಲ್ಲೆಗೊಳಗಾಗುತ್ತಲೇ ಇರುತ್ತದೆ. 

ಆಧುನಿಕ ಮಾರುಕಟ್ಟೆ ಆರ್ಥಿಕತೆ ಬಲಗೊಂಡಂತೆಲ್ಲಾ , ಬಂಡವಾಳಶಾಹಿ ಆರ್ಥಿಕತೆ ತನ್ನ ಬಾಹುಗಳನ್ನು ವಿಸ್ತರಿಸಿದಂತೆಲ್ಲಾ, ಈ ಸಾಂಪ್ರದಾಯಿಕ ಕಟ್ಟುಪಾಡುಗಳು ಶಿಥಿಲವಾಗುತ್ತಲೇ ಹೋಗುವುದು ಸಹಜ. ಉನ್ನತ ಶಿಕ್ಷಣದ ಹಂತವನ್ನು ದಾಟಿ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳುವ ಮಹಿಳೆಯರು, ತಮ್ಮ ಧಾರ್ಮಿಕ ಅಸ್ಮಿತೆಗಳನ್ನೂ ದಾಟಿ, ಆಧುನಿಕತೆಗೆ ಹೊಂದಿಕೊಳ್ಳುವುದು ಕೆಲವೊಮ್ಮೆ ಅನಿವಾರ್ಯವೂ ಆಗುತ್ತದೆ. ಮಹಿಳಾ ಸಬಲೀಕರಣದ ಒಂದು ಭಾಗವಾಗಿ ಈ ಮುನ್ನಡೆಯ ಹಾದಿಗಳು ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಮಹಿಳೆಯರಿಗೆ ಒಂದು ಅಸ್ಮಿತೆಯನ್ನು ಒದಗಿಸುತ್ತದೆ. ಹಾಗಾಗಿಯೇ ಮಹಿಳೆಯನ್ನು ಬಾಲ್ಯಾವಸ್ಥೆಯಿಂದಲೇ ವಸ್ತ್ರ ಸಂಹಿತೆಗಳ ಮೂಲಕ ನಿರ್ಬಂಧಕ್ಕೊಳಪಡಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. 

ವ್ಯಕ್ತಿಗತ-ಕೌಟುಂಬಿಕ ನೆಲೆಯಲ್ಲಿ ನಿರಾಕರಿಸಲ್ಪಡುವ ವ್ಯಕ್ತಿ ಸ್ವಾತಂತ್ರ‍್ಯವನ್ನು ಸಾಮಾಜಿಕ ನೆಲೆಯಲ್ಲಿ ಪಡೆದುಕೊಳ್ಳುವ ತವಕ ಒಂದು ಪ್ರಮುಖ ವಿರೋಧಾಭಾಸವಾಗಿ ಕಾಣುತ್ತದೆ. ಸಾಮಾಜಿಕ ಸೌಹಾರ್ದತೆ ಮತ್ತು ಭ್ರಾತೃತ್ವದ ನೆಲೆಗಳನ್ನು ವಿಸ್ತರಿಸಿಕೊಳ್ಳುವ ಹಾದಿಯಲ್ಲಿ ವೈಚಾರಿಕತೆಯನ್ನು ಉಳಿಸಿಕೊಂಡು ಹೋಗುವುದರ ಮೂಲಕ ಒಂದು ವೈಜ್ಞಾನಿಕ ನೆಲೆಗಟ್ಟಿನ ಆಧುನಿಕ ನಾಗರಿಕತೆಯನ್ನು ನಿರ್ಮಿಸಲು ಸಾಧ್ಯ ಅಲ್ಲವೇ ? ಈ ರೀತಿ ಕಟ್ಟಲಾಗುವ ಒಂದು ಸಮಾಜವೇ ಭಾರತದ ಬಹುತ್ವ ಸಂಸ್ಕೃತಿಯನ್ನು ಸಂರಕ್ಷಿಸಲೂ ಸಾಧ್ಯ. 


ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪೋಷಿಸುವ ಮೂಲಕ ಒಂದು ಸ್ವಸ್ಥ ಸಮಾನತೆಯ ಸಮಾಜವನ್ನು ರೂಪಿಸಲು ಬಯಸುವ ಎಲ್ಲ ವಿಚಾರವಾದಿಗಳೂ, ಪ್ರಗತಿಪರ ಎನಿಸಿಕೊಳ್ಳುವ ಪ್ರಾಜ್ಞರೂ ಎಲ್ಲ ರೀತಿಯ ಅವೈಜ್ಞಾನಿಕ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ಚಿಹ್ನೆಗಳಿಂದ ದೂರವೇ ಉಳಿಯಬೇಕಾಗುತ್ತದೆ. ಶಾಲೆ, ಕಾಲೇಜು, ಕಚೇರಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ವಿರೋಧಿಸುವ ಮೂಲಕವೇ ವೈಚಾರಿಕ ಮನಸುಗಳನ್ನು ಪೋಷಿಸುವುದು ಸಾಧ್ಯ. ಈ ನಿಟ್ಟಿನಲ್ಲಿ ಪ್ರಗತಿಪರ ಚಳುವಳಿಗಳೂ ವಿಫಲವಾಗಿರುವುದರಿಂದಲೇ ಇಂದು ಶಾಲಾ ಕಾಲೇಜುಗಳಲ್ಲೂ ಧಾರ್ಮಿಕ ಅಸ್ಮಿತೆಗಳು ತಾಂಡವಾಡುತ್ತಿವೆ. ಭಾರತದ ಸಂವಿಧಾನವೇ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಅವಲಂಬಿಸಿದೆ. ಸಂವಿಧಾನ ಆಶಿಸುವ ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರಿಕಲ್ಪನೆಗಳನ್ನು ಸಾಕಾರಗೊಳಿಸಬೇಕೆಂದರೆ, ವೈಚಾರಿಕತೆಯನ್ನು ಬೆಳೆಸುವುದು ಅತ್ಯವಶ್ಯವಾಗುತ್ತದೆ. ತನ್ಮೂಲಕ ಮತ, ಧರ್ಮ ಮತ್ತು ಧಾರ್ಮಿಕ ಅಸ್ಮಿತೆಗಳಿಂದಾಚೆಗೆ ವಿಶ್ವಮಾನವತೆಯನ್ನು ಕಾಣುವುದು ಸಾಧ್ಯವಾದಾಗ ಮಾತ್ರ ಅಸ್ಮಿತೆಯಾಧಾರಿತ ಸಾಂಸ್ಕೃತಿಕ ರಾಜಕಾರಣವನ್ನು ಭಂಜಿಸಿ, ಬಹುತ್ವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸಾಧ್ಯವಾದೀತು. 
-0-0-0-0-0-